ಬೆಂಗಳೂರು, ಅ.16- ಸಂಘ ಪರಿವಾರದ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಗೂ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯುವ ಸಚಿವಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಗಳಾಗುವ ಸಾಧ್ಯತೆ ಇದೆ. ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ಧವಾಗಿ ನಡೆಸಲು ಅನುಮತಿಸುವ ಬಗ್ಗೆ ಚರ್ಚಿಸಲಾಗಿದೆ.
ಆರ್ಎಸ್ಎಸ್ ಹಾಗೂ ಇತರ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು.
ಈ ಕುರಿತು ಹೆಚ್ಚುವರಿ ಕಾರ್ಯಸೂಚಿಯಲ್ಲಿ ವಿಷಯ ಸೇರ್ಪಡೆ ಮಾಡಲಾಗಿದ್ದು, ಸಂಘಪರಿವಾರದ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲು ಸರ್ಕಾರ ಮುಂದಾಗಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಕ್ತಾಯಗೊಳ್ಳಲು ಎರಡು ದಿನಗಳು ಮಾತ್ರ ಬಾಕಿಯಿದೆ. ಈವರೆಗೂ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಸಮೀಕ್ಷೆಗಳಾಗಿಲ್ಲ, ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಲೇ ಇವೆ. ನಿರೀಕ್ಷೆಯಂತೆ ಅ. 18ರ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನವಾಗಿದೆೆ.
ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಧಿಯನ್ನು ವಿಸ್ತರಿಸಬೇಕೇ? ಅಥವಾ ನಡೆದಿರುವ ಸಮೀಕ್ಷೆಯನ್ನೇ ಪರಿಗಣಿಸಿ, ಅಂತಿಮ ವರದಿ ನೀಡಲು ಆಯೋಗಕ್ಕೆ ಸೂಚನೆ ನೀಡಬೇಕೇ? ಎಂಬ ಗೊಂದಲ ಸರ್ಕಾರದಲ್ಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರ ಅಭಿಪ್ರಾಯಗಳನ್ನು ಕೇಳುವ ಸಾಧ್ಯತೆಯಿದೆ.
ಮತ್ತಷ್ಟು ದಿನ ದಸರಾ ರಜೆಯನ್ನು ವಿಸ್ತರಿಸಿ, ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಂಡರೆ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂಬ ಆಕ್ಷೇಪಗಳಿವೆ. ಸರ್ಕಾರಿ ಶಿಕ್ಷಕರ ಜೊತೆಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಶಿಕ್ಷಕರನ್ನು ಆಯೋಗದ ಕರ್ತವ್ಯದಿಂದ ಬಿಡುಗಡೆ ಮಾಡಿ, ಬಾಕಿ ಮನೆಗಳ ಸಮೀಕ್ಷೆಗೆ ಬೇರೆ ಇಲಾಖೆಗಳ ಸಿಬ್ಬಂದಿಗಳನ್ನು ಬಳಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.
ಬಹಳಷ್ಟು ಮಂದಿ ಸಾರ್ವಜನಿಕರು ತಾವು ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೂ ಕೆಲವರು ಪ್ರಮಾಣ ಪತ್ರದ ಮೂಲಕವೇ ಸಮೀಕ್ಷೆಯನ್ನು ನಿರಾಕರಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮದ ಬಗ್ಗೆಯೂ ಸಂಪುಟದಲ್ಲಿಂದು ಚರ್ಚೆಗಳಾಗುವ ಸಾಧ್ಯತೆಗಳಿವೆ.
ಬೆಂಗಳೂರು ನಗರದಲ್ಲಿ ಸಮೀಕ್ಷೆ ದಿನೇದಿನೇ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ. ಬಹುತೇಕ ದುಡಿಯುವ ವರ್ಗ ಇರುವುದರಿಂದಾಗಿ ಕಚೇರಿ ಸಮಯದ ಅವಧಿಯಲ್ಲಿ ಸಮೀಕ್ಷೆಗೆ ಕುಟುಂಬದವರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೂ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ಆದರೂ ಸಮೀಕ್ಷೆ ಪೂರ್ಣಗೊಳ್ಳದೇ ಇದ್ದರೆ ಅನುಸರಿಸಬೇಕಾಗಿರುವ ಕಾರ್ಯವಿಧಾನಗಳ ಕುರಿತು ಚರ್ಚೆಗಳಾಗಿವೆ.
ವೃಷಭಾವತಿ ಸಂಸ್ಕರಣಾ ಘಟಕದ ಮರು ಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ ಏತ ನೀರಾವರಿಯ ಮೂಲಕ ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ 650 ಕೋಟಿ ರೂ.ಗಳ ಯೋಜನೆ ಬಗ್ಗೆ ಚರ್ಚೆಯಾಗಿದೆ.
ಬೆಂಗಳೂರಿನ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವಾಸ್ಕ್ಯುಲರ್ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು 26 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದು. 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು, ಕಲಬುರಗಿ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್್ಸ ಮಾದರಿಯ ಸಂಸ್ಥೆಗಳ ಸ್ಥಾಪನೆ, ವಿಜಯಪುರ ಜಿಲ್ಲೆಯ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಚರ್ಚಿಸಲಾಗಿದೆ.
ಮುಂಗಾರು ಮಳೆಯ ಪ್ರವಾಹದಿಂದಾಗಿ 12.82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಎನ್ಡಿಆರ್ಎಫ್ ಮಾರ್ಗಸೂಚಿಗಿಂತಲೂ ಹೆಚ್ಚುವರಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಇಂದಿನ ಸಂಪುಟ ಸಭೆಯಲ್ಲಿ ಆ ಕುರಿತು ಅಧಿಕೃತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ನಿರ್ಮಿಸಲಾಗಿರುವ ಹೊಸ ಕಟ್ಟಡಗಳಿಗೆ ವಿದ್ಯುತ್, ನೀರು ಸೇರಿದಂತೆ ಇತರ ಮೂಲಭೂತ ಸಂಪರ್ಕಗಳಿಗೆ ತೊಡಕಾಗಿರುವ ಓಸಿ ಪ್ರಮಾಣ ಪತ್ರ ವಿನಾಯಿತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಸ್ವಾಧೀನಾನುಭವ ಪ್ರಮಾಣಪತ್ರ(ಓಸಿ) ಹಾಗೂ ಪೂರ್ಣಗೊಂಡಿರುವ ಪ್ರಮಾಣ ಪತ್ರ (ಸಿಸಿ) ಇಲ್ಲದೆ ಮೂಲಭೂತ ಸೌಕರ್ಯ ಕಲ್ಪಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಇದರಿಂದ ನಾಗರಿಕರು ತೀವ್ರ ತೊಂದರೆಗೊಳಗಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 8 ಬಾರಿ ಸಭೆ ನಡೆಸಿದ್ದರು. ಒಟ್ಟು ಚರ್ಚೆಯಲ್ಲಿ 1200 ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿರುವ ನೆಲ ಮತ್ತು ಎರಡು ಅಂತಸ್ತುಗಳವರೆಗಿನ ವಾಸದ ಕಟ್ಟಡಗಳಿಗೆ ಓಸಿ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವ ಬಗ್ಗೆ ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮಹಾನಗರ ಪಾಲಿಕೆಗಳ ಕಾಯ್ದೆ ಹಾಗೂ ಪೌರಾಡಳಿತ ಅಧಿನಿಯಮಗಳಿಗೆ ತಿದ್ದು ಪಡಿ ತರಲು ಚರ್ಚಿಸಲಾಗಿದೆ.ಆನೇಕಲ್ ತಾಲ್ಲೂಕು ಸೂರ್ಯನಗರ ಇಂಡ್ಲವಾಡಿಯಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ 75 ಎಕರೆ ವಿಸ್ತೀರ್ಣದ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತಕ ಅನುಮೋದನೆ ನೀಡಲು ಚರ್ಚಿಸಲಾಗಿದೆ.