Friday, November 7, 2025
Home Blog Page 41

ರಾಜ್ಯದಲ್ಲಿ ಕುಡಿತ ಹೆಚ್ಚಿಸಲು ಬಾರ್‌ ಮಾಲೀಕರಿಗೆ ಟಾರ್ಗೆಟ್‌ ನೀಡಿದ ಅಬಕಾರಿ ಇಲಾಖೆ ..!

ಬೆಂಗಳೂರು,ಅ.16- ತೆರಿಗೆ ಏರಿಸಿ ಮದ್ಯ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದ ಅಬಕಾರಿ ಇಲಾಖೆ ಈಗ ಮತ್ತೊಂದು ನಾಟಕ ಶುರುಮಾಡಿದೆ…! ಆದಾಯ ಹೆಚ್ಚಳ ಮಾಡಿ ಕೊಳ್ಳಲು ಹೆಚ್ಚು ಮದ್ಯ ಕುಡಿಸಿ ಎಂದು ಬಾರ್‌ನವರಿಗೆ ಟಾರ್ಗೆಟ್‌ ಫಿಕ್ಸ್ ಮಾಡಲು ಮುಂದಾಗಿ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದೆ.

ಕೇಂದ್ರಸರ್ಕಾರ ಜಿಎಸ್‌‍ಟಿ ಪರಿಷ್ಕರಣೆಯಿಂದ ಜನಸಾಮಾನ್ಯರಿಗೆ ಲಾಭ ನೀಡಿದರೆ ಇತ್ತ ನಷ್ಟವನ್ನು ಸರಿದೂಗಿಸಲು ಸರ್ಕಾರ ಈಗ ಅಬಕಾರಿ ಇಲಾಖೆಗೆ ಕಠಿಣ ಸೂಚನೆ ನೀಡಿದ್ದು ಇದರಿಂದ ಬಾರ್‌ ಮಾಲೀಕರಿಗೆ ಅಬಕಾರಿ ಸಿಬ್ಬಂದಿ ಮಾರಾಟ ಹೆಚ್ಚಳ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಒಂದು ಲೀಟರ್‌ ಮದ್ಯ ಮಾರಾಟ ಮಾಡುವಲ್ಲಿ 10 ಲೀಟರ್‌ ಮಾರಾಟ ಮಾಡಿ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಬಾರ್‌ ಲೈಸೆನ್ಸ್ ಹೊಂದಿರುವವರಿಗೆ ಕಟ್ಟಪ್ಪಣೆ ಮಾಡಿದ್ದಾರೆ.

ಕುಡಿಯದೆ ಇರುವವರನ್ನು ನಾವು ಹೇಗೆ ಕರೆತಂದು ವ್ಯಾಪಾರ ಮಾಡುವುದು? ವರ್ಷದಿಂದ ವರ್ಷಕ್ಕೆ ಸೇಲ್ಸ್ 10 ಪಟ್ಟು ಹೆಚ್ಚು ಮಾಡಿ ಅಂದರೆ ಹೇಗೆ ಸಾಧ್ಯ? ಎಂದು ಬಾರ್‌ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.

ನಶೆ ಮಕ್ತ , ತಂಬಾಕು ಮುಕ್ತ ,ಮದ್ಯಮುಕ್ತದ ಬಗ್ಗೆ ಮಾತನಾಡುವವರು ಈಗ ಹಣದ ಆಸೆಗಾಗಿ ಹಿಂಬಾಗಿಲಿನಿಂದ ಬೆಂಬಲಿಸಿ ದ್ವಂದ್ವ ನೀತಿ ಪ್ರದರ್ಶಿಸುತ್ತಿದ್ದಾರೆ ಎಂದು ಕೆಲವರು ವ್ಯಂಗ್ಯವಾಡಿದ್ದಾರೆ. ಎಲ್ಲದಕ್ಕೂ ಇತಿ ಮಿತಿ ಇರಬೇಕು,ಬೆಲೆ ಹೆಚ್ಚಳದಿಂದ ಮದ್ಯ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಹಚ್ಚು ಕುಡಿಸಲು ನಾವು ಯಾವ ರೀತಿ ಮುಂದಾಬೇಕು ಎಂದು ಪ್ರಶ್ನಿಸಿದ್ದಾರೆ.

ಕುಡಿತ ಬಿಟ್ಟು ಆರೋಗ್ಯದ ಬಗ್ಗೆ ಚಿಂತಿಸುವವರಿಗೆ ಮದ್ಯ ಸೇವಿಸಲು ಆಮಿಷ ನೀಡಬೇಕಾ ಎಂದು ಪ್ರಶ್ನೆ ಎದ್ದಿದೆ.ನೆರೆಯ ರಾಜ್ಯಗಳಲ್ಲಿ ಮದ್ಯ ದರ ಕಡಿಮೆ ಮಾಡಿರುವ ಕಾರಣ ಕರ್ನಾಟಕದ ಗಡಿ ಭಾಗದಲ್ಲಿ ಮದ್ಯ ಮಾರಾಟ ಕಮಿಯಾಗಿದೆ.ಇದಲ್ಲದೆ ವಿವಿಧ ವಲಯದಿಂದ ಸಗಟು ಮದ್ಯ ಮಾರಾಟದಿಂದ ರಾಜ್ಯದ ಬಾರ್‌ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಾರ್‌ಲೈಸನ್ಸ್ ಕೂಡ ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ ಈಗ ಮುಂದಿನ ಡಿಸೆಂಬರ್‌ನಲ್ಲಿ 2ನೇ ಕಂತು ಕಟ್ಟಬೇಕು,ಆದಾಯ ಹೆಚ್ಚಿಸಿಕೊಳ್ಳಲು ಕೇವಲ ನಮನ್ನೇ ಟಾರ್ಗೇಟ್‌ ಮಾಡಲಾಗುತ್ತಿದೆ.ನಮಗೆ ನೀಡುವ ಕಿರುಕುಳ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಡೆಸಬೇಕಾಗುತ್ತದೆ ಎಂದು ಬಾರ್‌ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಗುರುಸ್ವಾಮಿ ತಿಳಿಸಿದ್ದಾರೆ.

ಬಿಜೆಪಿ ಸೇರದಿದ್ದರೆ ಜೈಲಿಗೆ ಕಳಿಸುತ್ತೇವೆಂದು ಡಿಕೆಶಿಗೆ ಬೆದರಿಕೆ ಹಾಕಿದ್ದು ಯಾರೆಂಬುದನ್ನು ಬಹಿರಂಗಪಡಿಸಿ : ಅಶೋಕ್‌ ಸವಾಲ್‌

ಬೆಂಗಳೂರು,ಅ.16– ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಬಿಜೆಪಿ ಸೇರದಿದ್ದರೆ ಜೈಲಿಗೆ ಹಾಕುವುದಾಗಿ ಯಾರು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮಾಧ್ಯಮಗಳಲ್ಲಿ ಶಿವಕುಮಾರ್‌ ಹೇಳಿರುವ ಮಾತು ಕೇಳಿ ಆಶ್ಚರ್ಯವಾಯಿತು. ಅವರಿಗೆ ಯಾವ ಅಧಿಕಾರಿ ದೂರವಾಣಿ ಕರೆ ಮಾಡಿ ಬಿಜೆಪಿ ಸೇರ್ಪಡೆಯಾಗಬೇಕೆಂದು ಒತ್ತಡ ಹಾಕಿದ್ದರು. ಅದನ್ನು ಅಂದು ಏಕೆ ಬಹಿರಂಗಪಡಿಸಲಿಲ್ಲ. ಈಗ ಏಕಾಏಕಿ ಈ ವಿಷಯವನ್ನು ಮುನ್ನಲೆಗೆ ತಂದಿರುವ ಉದ್ದೇಶವಾದರೂ ಏನು ಎಂದು ಪ್ರಶ್ನೆ ಮಾಡಿದರು.

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಒಪ್ಪಂದದಂತೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ನಾನು ಕಾಂಗ್ರೆಸ್‌‍ ಬಿಡುತ್ತೇನೆ ಎಂಬ ಬೆದರಿಕೆ ಹಾಕಿರಬಹುದು. ನವೆಂಬರ್‌ ಕ್ರಾಂತಿ ವಿಚಾರ ಚರ್ಚೆಯಲ್ಲಿರುವಾಗ ಈ ಮಾತು ಹೇಳಿದ್ದಾರೆಂದರೆ ಏನರ್ಥ? ಎಂದು ಮರುಪ್ರಶ್ನೆ ಮಾಡಿದರು. ಇದು ಧಮಕಿ ಹಾಕುವ ಮಾತು. ಅವರ ಸ್ಟೈಲ್‌ನಲ್ಲೇ ಕಾಂಗ್ರೆಸ್‌‍ ನಾಯಕತ್ವಕ್ಕೆ ಸವಾಲು ಹಾಕಿದ್ದಾರೆ. ಅಧಿಕಾರ ಹಸ್ತಾಂತರದ ಸಮಯ ಬಂದಿದೆ. ನನಗೆ ಮುಖ್ಯಮಂತ್ರಿ ಕುರ್ಚಿ ಬಿಡದಿದ್ದರೆ ಅಷ್ಟೇ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ಮತ್ತೊಂದು ವಿಷಯಾಂತರ ಮಾಡುವ ಹುನ್ನಾರವಷ್ಟೇ ಎಂದು ಆರೋಪಿಸಿದರು.

ಯಾರು ಯಾರಿಗೆ ಪೋನ್‌ ಮಾಡಿದ್ದರು ಎಂಬುದನ್ನು ಬಹಿರಂಗವಾಗಿ ಹೇಳಲಿ. ಇವರ ಹೇಳಿಕೆ ನೋಡಿದರೆ ನಾನು ಓರಿಜಿನಲ್‌ ಪಾರ್ಟಿ, ಸಿಎಂ ಸಿದ್ದರಾಮಯ್ಯ ಡೂಪ್ಲಿಕೇಟ್‌ ಎಂಬ ಸಂದೇಶ ಕೊಟ್ಟಂತಿದೆ. ಮಳೆ ಬೀಳುವ ಮೊದಲು ಹಬೆ ಹೆಚ್ಚಾಗಿರುತ್ತದೆ. ಆದಂತೆ ಈಗ ಕ್ರಾಂತಿಗೂ ಮೊದಲ ಲಕ್ಷಣ ಇದು ನವೆಂಬರ್‌ ಕ್ರಾಂತಿ ಮುನ್ಸೂಚನೆ ಎಂದು ಎಚ್ಚರಿಕೆ ಕೊಟ್ಟರು.

ಹಾಸನಾಂಬೆ ದರ್ಶನ ಪಡೆಯುವಾಗ ಡಿಕೆಶಿ ಅವರಿಗೆ ಎರಡು ಹೂ ಪ್ರಸಾದ ಸಿಕ್ಕಿದೆ. ಒಂದು ಕೆಂಪು ಹೂವು. ಅದು ಸಿದ್ದರಾಮಯ್ಯ ನಿರ್ಗಮನ ಮತ್ತೊಂದು ಹಳದಿ ಹೂವು ಅದು ಸಿಎಂ ಖುರ್ಚಿ ಕಡೆ ಹೋಗುವುದಕ್ಕೆ ಸಿಕ್ಕ ಸೂಚನೆಯಾಗಿದೆ. ಆದರೆ ಮುಖ್ಯಮಂತ್ರಿ ಅಲ್ಲಿಗೆ ಹೋದಾಗ ಸೊನ್ನೆ ಸಿಕ್ಕದೆ. ದೇವರಿಗೇ ಇವರಿಬ್ಬರು ಪರೀಕ್ಷೆವೊಡ್ಡಿದ್ದಾರೆ. ಇಬ್ಬರಿಗೂ ಶಹಬ್ಬಾಸ್‌‍ಗಿರಿ ಕೊಡಬೇಕು ಎಂದು ಹೇಳಿದರು.

ಡಿಕೆಶಿ ಬಿಜೆಪಿಗೆ ಬಂದರೆ ಕರೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶೋಕ್‌, ಬಸ್‌‍ ಹತ್ತಿದ ಮೇಲೆ ಟಿಕೆಟ್‌ ಕೊಡುವುದು ಕಂಡೆಕ್ಟರ್‌ ಕೆಲಸ. ಹತ್ತಿಸಿಕೊಳ್ಳುವುದು ಡ್ರೈವರ್‌ ಕೆಲಸ. ಅವರು ಮೊದಲು ಬಸ್‌‍ ಹತ್ತಲಿ. ಯಾವ ಬಸ್‌‍ ಹತ್ತುತ್ತಾರೋ ಕಾದು ನೋಡೋಣ. ಆಮೇಲೆ ಎಲ್ಲಿಗೆ, ಯಾವ ಟಿಕೆಟ್‌ ಕೊಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಲೋನ್‌ ಅಪ್ಲೈ ಮಾಡಿದವರಿಗೆ ಮಾತ್ರ ಲೋನ್‌ ಸಿಗೋದು,ಅಂದರೆ ಟ್ರಾಕ್‌ನಲ್ಲಿ ಇದ್ದವರಿಗೆ ಅವಕಾಶ ಸಿಗತ್ತದೆ. ಡಿಕೆ ಮಾನವಾಗಿದ್ದಾರೆ ಎಂದರೆ ಅದರ ಹಿಂದೆ ಬೇರೆ ಇದೆ ಎಂದು ಮಾರ್ಮಿಕವಾಗಿ ನುಡಿದರು.

ಬೆಂಗಳೂರಿನಲ್ಲಿ ಪ್ರತಿವರ್ಷ ವ್ಯರ್ಥವಾಗುತ್ತಿದೆ 943 ಟನ್‌ ಆಹಾರ

ಬೆಂಗಳೂರು, ಅ.16– ಮಹಾನಗರ ಬೆಂಗಳೂರು ಒಂದರಲ್ಲೇ ಪ್ರತೀ ವರ್ಷ 943 ಟನ್‌ ಆಹಾರ ವ್ಯರ್ಥವಾಗುತ್ತಿದೆ. ಹೆಚ್ಚೂ ಕಡಿಮೆ 360 ಕೋಟಿ ರೂ. ಮೌಲ್ಯದ ಆಹಾರ ವ್ಯರ್ಥಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತ ಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ ನಲ್ಲಿ ಆಯೋಜಿಸಿದ್ದ ವಿಶ್ವ ಆಹಾರ ದಿನ ಉದ್ಘಾಟಿಸಿ ಮಾತನಾಡಿದ ಅವರು, ಗೊತ್ತಿದ್ದೂ ಗೊತ್ತಿದ್ದೂ ಆಹಾರ ವ್ಯರ್ಥ ಮಾಡುವುದು ಅನ್ನಕ್ಕೆ ತೋರಿಸುವ ಅಹಂಕಾರ ಎಂದು ಜಿಕೆವಿಕೆ ಅಧ್ಯಯನವನ್ನು ಉಲ್ಲೇಖಿಸಿ ಹೇಳಿದರು.

ಅನ್ನ ವ್ಯರ್ಥ ಮಾಡುವುದು ಪಾಪದ ಕೆಲಸ ಎಂದು ಮಹಾತ ಗಾಂಧಿ ಹೇಳಿದ್ದಾರೆ. ಹಸಿವಿನ ಸಂಕಟ, ಅನ್ನದ ಮೌಲ್ಯ ನನಗೆ ಗೊತ್ತು. ಅದಕ್ಕೇ ಅನ್ನಭಾಗ್ಯ ಜಾರಿ ಗೊಳಿಸಿದ್ದಾಗಿ ತಿಳಿಸಿದರು.
ಕವಿ ಬೇಂದ್ರೆಯವರು ರೈತರನ್ನು ಅನ್ನಬ್ರಹ ಎಂದು ಕರೆದಿದ್ದಾರೆ. ಆದ್ದರಿಂದ ಅನ್ನ ವ್ಯರ್ಥ ಮಾಡುವುದು, ಬಿಸಾಡುವುದು ಅನ್ನಬ್ರಹನಿಗೆ ಮಾಡುವ ಅವಮಾನ ಎಂದರು.

ನಾವು ಒಂದು ಕಾಲದಲ್ಲಿ ಅನ್ನಕ್ಕಾಗಿ ಅಮೆರಿಕದ ಮೇಲೆ ಅವಲಂಬಿತರಾಗಿದ್ದೆವು. ಈಗ ವಿದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ. ಇದರ ಜೊತೆಗೆ ಊಟ ವ್ಯರ್ಥ ಮಾಡುವ ಪ್ರಮಾಣವೂ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದರು.

ಯಾರೂ ಹಸಿವಿನಿಂದ ಮಲಗಬಾರದು ಎನ್ನುವುದು ಕಾಂಗ್ರೆಸ್‌‍ ಬದ್ದತೆ. ಹೀಗಾಗಿ ಬಡವರ ಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌‍. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್‌‍ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌. ಆಹಾರ ಭದ್ರತೆ ಕಾಯ್ದೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು ಎಂದು ಹೇಳಿದರು.

ಬಡವರ ವಿರೋಧಿ ನೀತಿ ಬಿಜೆಪಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಆ ಕಡೆ ಬಿಜೆಪಿಗೂ ಚಪ್ಪಾಳೆ ತಟ್ಟೋದು, ಈ ಕಡೆ ಬಡವರ ಪರ ಕಾರ್ಯಕ್ರಮ ಕೊಟ್ಟ ಕಾಂಗ್ರೆಸ್ಸಿಗೂ ಚಪ್ಪಾಳೆ ತಟ್ಟೋದು ಮಾಡಬೇಡಿ. ಅನ್ನದ ಪರವಾಗಿ ಇರುವ ಕಾಂಗ್ರೆಸ್‌‍ ಬದ್ಧತೆ ಅರ್ಥ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಕಾಳ ಸಂತೆ ಮಾರಾಟ, ಕಠಿಣ ಕ್ರಮ:
ಅನ್ನಭಾಗ್ಯದ ಅಕ್ಕಿಯನ್ನು ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಳಸಂತೆ ಮಾರಾಟ ತಪ್ಪಿಸಲು 5 ಕೆಜಿ ಅಕ್ಕಿ ಕೊಟ್ಟು ಉಳಿದ ಐದು ಕೆಜಿ ಕಾಳು, ಬೇಳೆ ವಿತರಿಸಲು ತೀರ್ಮಾನಿಸಿದ್ದೇವೆ ಎಂದರು. ಆಹಾರದ ಬಗ್ಗೆ ಜಾಗ್ರತೆ, ಸಣ್ಣ ರೈತರ ರಕ್ಷಣೆ ಮಾಡುವುದು ನಮ ನಿಮ ಮತ್ತು ನಾಗರಿಕ ಸಮಾಜದ ಜವಾಬ್ದಾರಿ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕಾರಿನ ಏರ್‌ಬ್ಯಾಗ್‌ ಸ್ಫೋಟಗೊಂಡು ಬಾಲಕ ಸಾವು

ಚೆನ್ನೈ,ಅ.16- ಕುಟುಂಬ ಸಮೇತ ಬಾಡಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತೊಂದು ವಾಹನಕ್ಕೆ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನ ಏರ್‌ಬ್ಯಾಗ್‌ ಮುಖಕ್ಕೆ ಬಡಿದಿದ್ದರಿಂದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ತಿರುಪೋರೂರು ಬಳಿಯ ಹಳೆಯ ಮಹಾ ಬಲಿಪುರಂ ರಸ್ತೆಯಲ್ಲಿ ನಡೆದಿದೆ.

ಕೆವಿನ್‌(7) ಎಂದು ಮೃತಪಟ್ಟ ದುರ್ದೈವಿ. ಪೊಲೀಸ್‌‍ ವರದಿಗಳ ಪ್ರಕಾರ, ಚೆಂಗಲ್ಪಟ್ಟು ಜಿಲ್ಲೆಯ ಪುದುಪಟ್ಟಣಂ ಗ್ರಾಮದ ನಿವಾಸಿ ವೀರಮುತ್ತು ತನ್ನ ಪತ್ನಿ, ಅವರ ಏಳು ವರ್ಷದ ಮಗ ಕವಿನ್‌ ಮತ್ತು ಇತರ ಇಬ್ಬರೊಂದಿಗೆ ಬಾಡಿಗೆ ಕಾರಿನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದರು. ವಾಹನವನ್ನು ವಿಘ್ನೇಶ್‌ ಎಂಬ ವ್ಯಕ್ತಿ ಚಲಾಯಿಸುತ್ತಿದ್ದರು.

ಅವರ ಮುಂದೆ ಪ್ರಯಾಣಿಸುತ್ತಿದ್ದ ಸುರೇಶ್‌ ಚಲಾಯಿಸುತ್ತಿದ್ದ ಕಾರು ಇದ್ದಕ್ಕಿದ್ದಂತೆ ಎಡಕ್ಕೆ ತಿರುಗಿದಾಗ ಬಾಡಿಗೆ ಕಾರಿನಲ್ಲಿದ್ದ ಏರ್‌ಬ್ಯಾಗ್‌ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಈ ವೇಳೆ ಅಲ್ಲಿದ್ದವರು ಮತ್ತು ದಾರಿಹೋಕರು ಸಹಾಯಕ್ಕೆ ಧಾವಿಸಿದ್ದು, ಗಾಯಗೊಂಡ ಬಾಲಕನನ್ನು ರಕ್ಷಿಸಿ 108 ಆಂಬ್ಯುಲೆನ್‌್ಸನಲ್ಲಿ ತಿರುಪೋರೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಬಾಲಕ ಮೃತಪಟ್ಟಿದ್ದ.

ದುರಂತವೆಂದರೆ ಮಕ್ಕಳ ನಿಯಂತ್ರಣ ವ್ಯವಸ್ಥೆಯಲ್ಲಿ ಕುಳಿತುಕೊಳ್ಳದೆ, ಮುಂಭಾಗದ ಸೀಟಿನಲ್ಲಿ ತನ್ನ ತಂದೆಯ ಮಡಿಲಲ್ಲಿ ಕುಳಿತಿದ್ದ ಬಾಲಕ ಕವಿನ್‌, ನಿಯೋಜಿಸಲಾದ ಏರ್‌ಬ್ಯಾಗ್‌ನ ಸಂಪೂರ್ಣ ಬಲವನ್ನು ನೇರವಾಗಿ ತನ್ನ ಮುಖಕ್ಕೆ ತೆಗೆದುಕೊಂಡನು. ಅವನು ತಕ್ಷಣ ಪ್ರಜ್ಞೆ ತಪ್ಪಿದನು.ಆಸ್ಪತ್ರೆಗೆ ತಲುಪಿದ ಕೂಡಲೇ ಮಗು ಮೃತಪಟ್ಟಿದೆ ಎಂದು ಘೋಷಿಸಲಾಯಿತು.

ಬಾಲಕ ಕಾರಿನ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ತನ್ನ ತಂದೆಯ ಮಡಿಲಲ್ಲಿ ಕುಳಿತಿದ್ದ. ಈ ಸಂರ್ದದಲ್ಲಿ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಏರ್‌ಬ್ಯಾಗ್‌ ನಿಯೋಜನೆಯ ಬಲವು ಬಾಲಕನಿಗೆ ಮಾರಕ ಗಾಯಗಳನ್ನು ಉಂಟು ಮಾಡಿವೆ. ಇದು ಕಾರಿನ ಸುರಕ್ಷತಾ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿರ್ಬಂಧ ಹೆರುವ ಕುರಿತು ಸಂಪುಟದಲ್ಲಿ ಚರ್ಚೆ

ಬೆಂಗಳೂರು, ಅ.16- ಸಂಘ ಪರಿವಾರದ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಗೂ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯುವ ಸಚಿವಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆಗಳಾಗುವ ಸಾಧ್ಯತೆ ಇದೆ. ಖಾಸಗಿ ಸಂಘ ಸಂಸ್ಥೆಗಳು, ಸಂಘಟನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ಧವಾಗಿ ನಡೆಸಲು ಅನುಮತಿಸುವ ಬಗ್ಗೆ ಚರ್ಚಿಸಲಾಗಿದೆ.

ಆರ್‌ಎಸ್‌‍ಎಸ್‌‍ ಹಾಗೂ ಇತರ ಸಂಘ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸುವುದನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು.

ಈ ಕುರಿತು ಹೆಚ್ಚುವರಿ ಕಾರ್ಯಸೂಚಿಯಲ್ಲಿ ವಿಷಯ ಸೇರ್ಪಡೆ ಮಾಡಲಾಗಿದ್ದು, ಸಂಘಪರಿವಾರದ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಲು ಸರ್ಕಾರ ಮುಂದಾಗಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮುಕ್ತಾಯಗೊಳ್ಳಲು ಎರಡು ದಿನಗಳು ಮಾತ್ರ ಬಾಕಿಯಿದೆ. ಈವರೆಗೂ ಬೆಂಗಳೂರು ನಗರದಲ್ಲಿ ಪೂರ್ಣ ಪ್ರಮಾಣದ ಸಮೀಕ್ಷೆಗಳಾಗಿಲ್ಲ, ತಾಂತ್ರಿಕ ಸಮಸ್ಯೆಗಳು ಕಂಡು ಬರುತ್ತಲೇ ಇವೆ. ನಿರೀಕ್ಷೆಯಂತೆ ಅ. 18ರ ಒಳಗಾಗಿ ಸಮೀಕ್ಷೆ ಪೂರ್ಣಗೊಳ್ಳುವುದು ಅನುಮಾನವಾಗಿದೆೆ.

ಈ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಧಿಯನ್ನು ವಿಸ್ತರಿಸಬೇಕೇ? ಅಥವಾ ನಡೆದಿರುವ ಸಮೀಕ್ಷೆಯನ್ನೇ ಪರಿಗಣಿಸಿ, ಅಂತಿಮ ವರದಿ ನೀಡಲು ಆಯೋಗಕ್ಕೆ ಸೂಚನೆ ನೀಡಬೇಕೇ? ಎಂಬ ಗೊಂದಲ ಸರ್ಕಾರದಲ್ಲಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಚಿವರ ಅಭಿಪ್ರಾಯಗಳನ್ನು ಕೇಳುವ ಸಾಧ್ಯತೆಯಿದೆ.

ಮತ್ತಷ್ಟು ದಿನ ದಸರಾ ರಜೆಯನ್ನು ವಿಸ್ತರಿಸಿ, ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಂಡರೆ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂಬ ಆಕ್ಷೇಪಗಳಿವೆ. ಸರ್ಕಾರಿ ಶಿಕ್ಷಕರ ಜೊತೆಗೆ ಸರ್ಕಾರದ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಶಿಕ್ಷಕರನ್ನು ಆಯೋಗದ ಕರ್ತವ್ಯದಿಂದ ಬಿಡುಗಡೆ ಮಾಡಿ, ಬಾಕಿ ಮನೆಗಳ ಸಮೀಕ್ಷೆಗೆ ಬೇರೆ ಇಲಾಖೆಗಳ ಸಿಬ್ಬಂದಿಗಳನ್ನು ಬಳಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.

ಬಹಳಷ್ಟು ಮಂದಿ ಸಾರ್ವಜನಿಕರು ತಾವು ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೂ ಕೆಲವರು ಪ್ರಮಾಣ ಪತ್ರದ ಮೂಲಕವೇ ಸಮೀಕ್ಷೆಯನ್ನು ನಿರಾಕರಿಸಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮದ ಬಗ್ಗೆಯೂ ಸಂಪುಟದಲ್ಲಿಂದು ಚರ್ಚೆಗಳಾಗುವ ಸಾಧ್ಯತೆಗಳಿವೆ.

ಬೆಂಗಳೂರು ನಗರದಲ್ಲಿ ಸಮೀಕ್ಷೆ ದಿನೇದಿನೇ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ. ಬಹುತೇಕ ದುಡಿಯುವ ವರ್ಗ ಇರುವುದರಿಂದಾಗಿ ಕಚೇರಿ ಸಮಯದ ಅವಧಿಯಲ್ಲಿ ಸಮೀಕ್ಷೆಗೆ ಕುಟುಂಬದವರು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೂ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ಆದರೂ ಸಮೀಕ್ಷೆ ಪೂರ್ಣಗೊಳ್ಳದೇ ಇದ್ದರೆ ಅನುಸರಿಸಬೇಕಾಗಿರುವ ಕಾರ್ಯವಿಧಾನಗಳ ಕುರಿತು ಚರ್ಚೆಗಳಾಗಿವೆ.

ವೃಷಭಾವತಿ ಸಂಸ್ಕರಣಾ ಘಟಕದ ಮರು ಬಳಕೆ ನೀರನ್ನು ಗೋಪಾಲಪುರ ಕೆರೆಯಿಂದ ಏತ ನೀರಾವರಿಯ ಮೂಲಕ ಎರಡನೇ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ 650 ಕೋಟಿ ರೂ.ಗಳ ಯೋಜನೆ ಬಗ್ಗೆ ಚರ್ಚೆಯಾಗಿದೆ.

ಬೆಂಗಳೂರಿನ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ನೂತನ ವಾಸ್ಕ್ಯುಲರ್‌ ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಅವಶ್ಯವಿರುವ ಉಪಕರಣಗಳನ್ನು 26 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದು. 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು, ಕಲಬುರಗಿ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್‌್ಸ ಮಾದರಿಯ ಸಂಸ್ಥೆಗಳ ಸ್ಥಾಪನೆ, ವಿಜಯಪುರ ಜಿಲ್ಲೆಯ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತು ಚರ್ಚಿಸಲಾಗಿದೆ.

ಮುಂಗಾರು ಮಳೆಯ ಪ್ರವಾಹದಿಂದಾಗಿ 12.82 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಿಂತಲೂ ಹೆಚ್ಚುವರಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಿಸಿದ್ದಾರೆ. ಇಂದಿನ ಸಂಪುಟ ಸಭೆಯಲ್ಲಿ ಆ ಕುರಿತು ಅಧಿಕೃತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗಳಲ್ಲಿ ನಿರ್ಮಿಸಲಾಗಿರುವ ಹೊಸ ಕಟ್ಟಡಗಳಿಗೆ ವಿದ್ಯುತ್‌, ನೀರು ಸೇರಿದಂತೆ ಇತರ ಮೂಲಭೂತ ಸಂಪರ್ಕಗಳಿಗೆ ತೊಡಕಾಗಿರುವ ಓಸಿ ಪ್ರಮಾಣ ಪತ್ರ ವಿನಾಯಿತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಸ್ವಾಧೀನಾನುಭವ ಪ್ರಮಾಣಪತ್ರ(ಓಸಿ) ಹಾಗೂ ಪೂರ್ಣಗೊಂಡಿರುವ ಪ್ರಮಾಣ ಪತ್ರ (ಸಿಸಿ) ಇಲ್ಲದೆ ಮೂಲಭೂತ ಸೌಕರ್ಯ ಕಲ್ಪಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆದರೆ ಇದರಿಂದ ನಾಗರಿಕರು ತೀವ್ರ ತೊಂದರೆಗೊಳಗಾಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು 8 ಬಾರಿ ಸಭೆ ನಡೆಸಿದ್ದರು. ಒಟ್ಟು ಚರ್ಚೆಯಲ್ಲಿ 1200 ಚದರ ಅಡಿ ವಿಸ್ತೀರ್ಣದ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿರುವ ನೆಲ ಮತ್ತು ಎರಡು ಅಂತಸ್ತುಗಳವರೆಗಿನ ವಾಸದ ಕಟ್ಟಡಗಳಿಗೆ ಓಸಿ ಪ್ರಮಾಣ ಪತ್ರದಿಂದ ವಿನಾಯಿತಿ ನೀಡುವ ಬಗ್ಗೆ ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ಮಹಾನಗರ ಪಾಲಿಕೆಗಳ ಕಾಯ್ದೆ ಹಾಗೂ ಪೌರಾಡಳಿತ ಅಧಿನಿಯಮಗಳಿಗೆ ತಿದ್ದು ಪಡಿ ತರಲು ಚರ್ಚಿಸಲಾಗಿದೆ.ಆನೇಕಲ್‌ ತಾಲ್ಲೂಕು ಸೂರ್ಯನಗರ ಇಂಡ್ಲವಾಡಿಯಲ್ಲಿ 2350 ಕೋಟಿ ರೂ. ವೆಚ್ಚದಲ್ಲಿ 75 ಎಕರೆ ವಿಸ್ತೀರ್ಣದ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾತಕ ಅನುಮೋದನೆ ನೀಡಲು ಚರ್ಚಿಸಲಾಗಿದೆ.

ಬೆಂಗಳೂರು ಸಮೀಕ್ಷೆ ಪ್ರಗತಿ ಹಿನ್ನಡೆ, ಸಂಜೆ 6ರಿಂದ ರಾತ್ರಿ 9ವರೆಗೆ ಸಮೀಕ್ಷೆ

ಬೆಂಗಳೂರು,ಅ.16 -ನಗರದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಇಂದು ರಾತ್ರಿಯೂ ಸಮೀಕ್ಷೆ ನಡೆಸಲು ಗ್ರೀಟರ್‌ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.

ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಇಂದು ವಿಶೇಷ ಅಭಿಯಾನದ ಮೂಲಕ ಬೆಂಗಳೂರಲ್ಲಿ ಸಮೀಕ್ಷೆ ನಡೆಸಿ ಸಮೀಕ್ಷೆಯ ವೇಗ ಹೆಚ್ಚಿಸುವಂತೆ ಜಿಬಿಎಗೆ ಮುಖ್ಯಕಾರ್ಯದರ್ಶಿ ಸೂಚಿಸಿದ್ದಾರೆ.
ಇದೀಗ ಸಿಎಸ್‌‍ ಪತ್ರದ ಬೆನ್ನಲ್ಲೇ ಎಚ್ಚೆತ್ತ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ಅವರು ಸಂಜೆ ವಿಶೇಷ ಅಭಿಯಾನದ ಮೂಲಕ ಸಮೀಕ್ಷೆಗೆ ವೇಗ ನೀಡಲು ತೀರ್ಮಾನಿಸಿದ್ದಾರೆ. ಹಗಲಿನಲ್ಲಿ ಸಮಯದಲ್ಲಿ ಲಭ್ಯವಿಲ್ಲದವರ ಸಮೀಕ್ಷೆ ಪೂರ್ಣಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹಗಲಿನಲ್ಲಿ ಸಮೀಕ್ಷೆಗೆ ಹೋದಾಗ ಕೆಲವು ಮನೆಗಳು ಬೀಗ ಹಾಕಿದ್ದರಿಂದ ಸಮೀಕ್ಷದಾರರಿಗೆ ತೊಂದರೆಯಾಗಿದೆ. ಇದರಿಂದ ಸಮೀಕ್ಷೆ ಪ್ರಗತಿಗೆ ಹಿನ್ನಡೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಜೆ 6 ರಿಂದ 9 ಗಂಟೆವರೆಗೂ ಸಮೀಕ್ಷೆ ಮಾಡೋದಕ್ಕೆ ನಿರ್ಧಾರ ಮಾಡಿದ್ದೇವೆ
ಎಂದು ಜಿಬಿಎ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಇನ್ನೂ ಮೂರ್ನಾಲ್ಕು ದಿನ ರಾತ್ರಿ ವೇಳೆ ಸಮೀಕ್ಷೆ ಮಾಡಲಾಗುವುದು ಮಹಿಳಾ ಸಮೀಕ್ಷಾದಾರರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ರಾತ್ರಿ ವೇಳೆ ಎಲ್ಲರೂ ಮನೆಯಲ್ಲಿರುತ್ತಾರೆ. ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಜನ ಸಮೀಕ್ಷೆಗೆ ಸಿಗುತ್ತಾರೋ ಎಂಬುವುದನ್ನು ಕಾದು ನೋಡಬೇಕಾಗಿದೆ. ಬಹಳಷ್ಟು ಜನ ಸಮೀಕ್ಷೆಗೆ ನಿರಾಕರಣೆ ಮಾಡಿದ್ದಾರೆ. ಇಷ್ಟು ಅಂತಾ ಗೊತ್ತಿಲ್ಲ ಅದರ ಲೆಕ್ಕ ತೆಗೆದುಕೊಳ್ತಾ ಇದ್ದೇವೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ಇನ್ನೂ ಸಮೀಕ್ಷೆ ಕಡಿಮೆ ಪ್ರಮಾಣದಲ್ಲಿ ಅಗಿದ್ದು, ಇದೇ ತಿಂಗಳ 24 ರವರೆಗೆ ಸಮೀಕ್ಷೆ ಗಡುವಿಗೆ ನೀಡಲಾಗಿದೆ. ಇಲ್ಲಿಯವರೆಗೂ ಶೇ.34 ರಷ್ಟು ಸಮೀಕ್ಷೆ ಅಗಿದೆ.ಸಮೀಕ್ಷೆ ಹಿನ್ನಡೆ ಹಿನ್ನೆಲೆಯಲ್ಲಿ ಇನ್ನೂ ಮೂರು ದಿನ ಅವಧಿ ವಿಸ್ತರಣೆಗೆೆ ಚಿಂತನೆ. ಇದೆ ತಿಂಗಳ 27 ರವರೆಗೆ ಅವಧಿ ವಿಸ್ತರಣೆ ಮಾಡಲು ಜಿಬಿಎ ಅಯುಕ್ತರು ಚಿಂತನೆ ನಡೆಸಿದ್ದಾರೆಂದು ಜಿಬಿಎ ಮೂಲಗಳಿಂದ ತಿಳಿದು ಬಂದಿದೆ.

ಸೆಪ್ಟೆಂಬರ್‌ನಲ್ಲಿ 1.8 ಶತಕೋಟಿ ಡಾಲರ್‌ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ರಫ್ತು ಮಾಡಿದ ಭಾರತ

ಬೆಂಗಳೂರು,ಅ.16– ಭಾರತವು ಸೆಪ್ಟೆಂಬರ್‌ 2025ರಲ್ಲಿ 1.8 ಶತಕೋಟಿ ಡಾಲರ್‌ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ರಫ್ತು ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇ.95ರ ಪ್ರಮಾಣದ ಬೆಳವಣಿಗೆಯಾಗಿದೆ ಎಂದು ಇಂಡಿಯಾ ಸೆಲ್ಯುಲರ್‌ ಆ್ಯಂಡ್‌ ಎಲೆಕ್ಟ್ರಾನಿಕ್‌್ಸ ಅಸೋಸಿ ಯೇಷನ್‌(ಐಸಿಇಎ) ಅಂದಾಜಿಸಿದೆ.

2025ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ರವರೆಗೆ 13.5 ಶತಕೋಟಿ ಡಾಲರ್‌ಗಳಷ್ಟು ಮೌಲ್ಯ ಮೊಬೈಲ್‌ ಫೋನ್‌ಗಳು ರಫ್ತಾಗಿದ್ದವು. ಇದು ಕಳೆದ ವರ್ಷ 8.5 ಶತಕೋಟಿ ಅಮೆರಿಕನ್‌ ಡಾಲರ್‌ಗಳಷ್ಟಿದ್ದು ಶೇ.60ಕ್ಕೂ ಅಧಿಕ ವಾರ್ಷಿಕ ಬೆಳವಣಿಗೆ ದಾಖಲಿಸಿದೆ ಎಂದು ಕೈಗಾರಿಕಾ ಸಂಸ್ಥೆ ತಿಳಿಸಿದೆ.

ಯುನೈಟೆಡ್‌ ಸ್ಟೇಟ್‌್ಸ(ಅಮೆರಿಕ) ಯುಎಇ, ಆಸ್ಟ್ರೀಯ, ನೆದರ್ಲೆಂಡ್ಸ್ ಮತ್ತು ಯುನೈಟೆಡ್‌ ಕಿಂಗ್‌ಡಮ್‌ಗೆ ಅತಿಹೆಚ್ಚು ಮೊಬೈಲ್‌ ಫೋನ್‌ಗಳು ರಫ್ತಾಗಿವೆ. 2024ರ ಏಪ್ರಿಲ್‌-ಸೆಪ್ಟೆಂಬರ್‌ನಡುವೆ ಅಮೆರಿಕಕ್ಕೆ ಮಾಡಲಾದ ರಫ್ತು 3-1 ಶತಕೋಟಿ ಡಾಲರ್‌ಗಳಿಗೇರಿತು ಈ ವರ್ಷ ಇದೇ ಅವಧಿಯಲ್ಲಿ ಇದು 9.4 ಶತಕೋಟಿ ಡಾಲರ್‌ಗಳಿ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿತ್ತು.ಇಲ್ಲಿ ಶೇ. 200ರಷ್ಟು ವೃದ್ಧಿ ಸಾಧಿತವಾಗಿದೆ.

ಅಮೆರಿಕವು ಭಾರತದಿಂದ ರಫ್ತಾಗುವ ಮೊಬೈಲ್‌ ಫೋನ್‌ಗಳ ಪೈಕಿ ಶೇ.70ರಷ್ಟು ಪಾಲು ಹೊಂದಿದೆ. ಹಿಂದಿನ ವರ್ಷ ಇದು ಶೇ.37ರಷ್ಟಿತ್ತು.2025-26ರ ಹಣಕಾಸು ವರ್ಷದಲ್ಲಿ ಭಾರತದ ಮೊಬೈಲ್‌ ಫೋನ್‌ಗಳು ರಫ್ತು 35 ಶತಕೋಟಿ ಡಾಲರ್‌ ಮೌಲ್ಯ ತಲುಪಲಿದೆ ಎಂದು ಐಸಿಇಎ ಬಿಂಬಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 24.1 ಶತಕೋಟಿ ಡಾಲರ್‌ಗಳಷ್ಟಿತ್ತು.

ಮೆಡಿಕಲ್ ಎಮರ್ಜೆನ್ಸಿ: ಬೆಂಗಳೂರಿನಲ್ಲಿ ಡ್ರೋನ್ ಸೇವೆ ಆರಂಭ

ಬೆಂಗಳೂರು, ವೈದ್ಯಕೀಯ ಅಗತ್ಯ ವಸ್ತುಗಳು, ಔಷಧ , ಪರಿಕರಗಳನ್ನು ಡ್ರೋನ್‌ ಮೂಲಕ ವಿತರಣೆ ಮಾಡುವ ವಿಶೇಷ “ಪೈಲೆಟ್‌ ಪ್ರಾಜೆಕ್ಟ್‌”ಗೆ ಏರ್‌ಬೌಂಡ್‌ ಸಂಸೈಯು ನಾರಾಯಣ ಹೆಲ್ತ್‌ನೊಂದಿಗೆ ಪಾಲುದಾರಿಗೆ ಘೋಷಿಸಿದೆ. ಏರ್‌ಬೌಂಡ್‌ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಏರ್‌ಬೌಂಡ್‌ನ ಸಂಸ್ಥಾಪಕ ಮತ್ತು ಸಿಇಒ ನಮನ್ ಪುಷ್ಪ್, ವೈದ್ಯಕೀಯ ಅಗತ್ಯ ವಸ್ತುಗಳನ್ನು ಪೂರೈಸುವ ಸಮಯ ಅತಿ ಪ್ರಾಮುಖ್ಯವಾದದ್ದು. ಈ ಸಂಚಾರ ದಟ್ಟಣೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಅಗತ್ಯವಸ್ತುಗಳನ್ನು ತಲುಪಿಸುವುದು ಕಷ್ಟಕರ. ಹೀಗಾಗಿ ಡ್ರೋನ್‌ ಡೆಲಿವರಿ ಯೋಜನೆಯನ್ನು ಚಾಲ್ತಿಗೆ ತರಲು ಹೆಜ್ಜೆ ಇಟ್ಟಿದ್ದೇವೆ. ಸಾಂಪ್ರದಾಯಿಕ ವಿಧಾನಗಳಿಗೆ ಹೋಲಿಸಿದರೆ ವಿತರಣಾ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಮಾನವರಹಿತ ವೈಮಾನಿಕ ವಾಹನ ಡ್ರೋನ್‌ ಬಳಸಿಕೊಂಡು ವೈದ್ಯಕೀಯ ಅಗತ್ಯಗಳಾದ ರಕ್ತದ ಮಾದರಿಗಳು, ಪರೀಕ್ಷಾ ಕಿಟ್‌ಗಳು ಮತ್ತು ಅಗತ್ಯ ಸರಬರಾಜುಗಳನ್ನು ಒಳಗೊಂಡಂತೆ ದಿನಕ್ಕೆ 10 ದೈನಂದಿನ ವೈದ್ಯಕೀಯ ವಿತರಣೆಗಳನ್ನು ಪೂರ್ಣಗೊಳಿಸಲು ನಾರಾಯಣ ಹೆಲ್ತ್‌ನೊಂದಿಗೆ ಮೂರು ತಿಂಗಳ ಪ್ರಾಯೋಗಿಕ ಯೋಜನೆಯ ಒಪ್ಪಂದ ಮಾಡಿಕೊಳ್ಳಲಾಗಿದೆಈ ಪ್ರಕ್ರಿಯೆಯು ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸುವುದಲ್ಲದೇ ವಿತರಣಾ ಸಮಯವನ್ನು ಕಡಿಮೆ ಮಾಡುತ್ತದೆ, ಜೊತೆಗೆ, ವೇಗದ, ಹೆಚ್ಚು ಅನುಕೂಲಕರ ಮತ್ತು ಪರಿಸರ ಸ್ನೇಹಿ ವಿತರಣೆಗೆ ಅವಕಾಶ ನೀಡುತ್ತದೆ.

ಡ್ರೋನ್‌ ಕಾರ್ಯಾಚರಣೆ ಹೇಗೆ?:
ಕೇವಲ ೨.೫ ಕೆ.ಜಿ. ತೂಕ ಹೊಂದಿರುವ ಈಡ್ರೋನ್‌ ೧ ಕೆ.ಜಿ ತೂಕದ ವಸ್ತುಗಳನ್ನು ಡೆಲಿವರಿ ಮಾಡಲು ಶಕ್ತವಾಗಿದೆ. ಗಂಟೆಗೆ ೬೦ ಕಿ.ಮೀ. ವೇಗದಲ್ಲಿ ಸಾಗುವ ಈ ಡ್ರೋನ್‌ ೪೦ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಜೊತೆಗೆ, ೪೦೦ ಮೀಟರ್‌ ಎತ್ತರದ ವರೆಗೂ ಈ ಡ್ರೋನ್‌ ಹಾರಾಟ ನಡೆಸಲಿದ್ದು, ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುವನ್ನು ತಲುಪಿಸಲಿದೆ. ಈ ಡ್ರೋನ್‌ನ ಮತ್ತೊಂದು ವಿಶೇಷವೆಂದರೆ, ಇದಕ್ಕೆ ವಿಶೇಷ ಸಾಫ್ಟ್‌ವೇರ್‌ ಅಳವಡಿಸಿದ್ದು, ಅದಕ್ಕೆ ರುದ್ರ ಎಂದು ನಾಮಕರಣ ಮಾಡಲಾಗಿದೆ. ಈ ರುದ್ರ ಸಾಫ್ಟ್‌ವೇರ್‌, ಯಾವುದೇ ಡೆಲಿವರಿ ವಸ್ತುವನ್ನು ಸುರಕ್ಷಿತವಾಗಿ ತನ್ನೊಳಗೆ ಇಟ್ಟುಕೊಳ್ಳಲಿದ್ದು, ಅಷ್ಟೆ ಸುರಕ್ಷಿತವಾಗಿ ಡೆಲಿವರಿ ಮಾಡಲಿದೆ. ಪ್ರಸ್ತುತ, ನಾರಾಯಣ ಹೆಲ್ತ್‌ ನೊಂದಿಗೆ ಪ್ರಾಯೋಗಿಕ ಯೋಜನೆಯಲ್ಲಿದ್ದು, ರಕ್ತದ ಮಾದರಿ ಸೇರಿದಂತೆ ವೈದ್ಯಕೀಯ ಅಗತ್ಯ ವಸ್ತುಗಳನ್ನು ಪೂರೈಸಲಿದೆ.
ಸಂಚಾರ ದಟ್ಟಣೆ, ಸೀಮಿತ ರಸ್ತೆ ಪ್ರವೇಶ ಸೇರಿದಂತೆ ಹಲವು ಕಾರಣಗಳಿಂದ ವೈದ್ಯಕೀಯ ಅಗತ್ಯತೆಗಳನ್ನು ಸೂಕ್ತ ಸಮಯಕ್ಕೆ ಪರಿಹರಿಸಲು ಸಾಧ್ಯವಾಗದೇ ಇರುವೆಡೆಡ್ರೋನ್‌ ಅತಿ ವೇಗವಾಗಿ ಹಾಗೂ ಸುಕ್ಷಿತವಾಗಿ ಡೆಲಿವರಿ ಮಾಡಲಿದೆ.

ನಿಧಿ ಸಂಗ್ರಹ:
ಡ್ರೋನ್‌ ಮೂಲಕ ಡೆಲಿವರಿ ಮಾಡುವ ಈ ವಿನೂತನ ಯೋಜನೆಗೆ ಈಗಾಗಲೇ ನಿಧಿ ಸಂಗ್ರಹ ಉತ್ತಮ ರೀತಿಯಲ್ಲಿ ನಡೆದಿದೆ. ಪ್ರಮುಖವಾಗಿ ಹುಂಬಾ ವೆಂಚರ್ಸ್‌, ಲೈಟ್‌ಸ್ಪೀಡ್‌ನ, ಟೆಸ್ಲಾ, ಅಂಡುರಿಲ್ ಮತ್ತು ಅಥರ್ ಎನರ್ಜಿಯಂತಹ ಸಂಸ್ಥೆಗಳುಹೂಡಿಕೆ ಮಾಡಿದ್ದು, ಇದುವರೆಗೂ 8.65 ಮಿಲಿಯನ್ಡಾಲರ್‌ ನಿಧಿ ಸಂಗ್ರಹವಾಗಿದ್ದು, ಏರ್‌ಬೌಂಡ್ ಒಟ್ಟು $10 ಮಿಲಿಯನ್‌ ಡಾಲಕರ್‌ಗಿಂತಲೂ ಅಧಿಕ ಹಣ ಸಂಗ್ರಹತ್ತ ದಾಪುಗಾಲು ಇಟ್ಟಿದೆ. ಕಂಪನಿಯು ಉತ್ಪಾದನೆಯನ್ನು ಹೆಚ್ಚಿಸಲು, ವೈದ್ಯಕೀಯ ವಿತರಣೆಯನ್ನು ಮೀರಿ ಕಾರ್ಯಾಚರಣೆಗಳನ್ನು ವಿಸ್ತರಿಸಲು, ಅದರ ತಂತ್ರಜ್ಞಾನವನ್ನು ಪರಿಷ್ಕರಿಸಲು ಸಹ ಯೋಜಿಸಿದ್ದು, 2026 ರಲ್ಲಿ ವ್ಯಾಪಕ ಮಾರುಕಟ್ಟೆ ಅಳವಡಿಕೆಗೆ ಸಿದ್ಧಗೊಳಿಸಲು ಬಂಡವಾಳವನ್ನು ಬಳಸಲು ಯೋಜಿಸಿದೆ. ನಾರಾಯಣ ಹೆಲ್ತ್ ಪೈಲಟ್‌ನಿಂದ ಪ್ರಸ್ತುತ ಕರ್ನಾಟಕದ ಒಳನೋಟ ಅನ್ವೇಷಿಸಿ, ಇತರೆ ಕ್ಷೇತ್ರದಲ್ಲೂ ಡ್ರೋನ್‌ ಡೆಲಿವರಿಯನ್ನು ಕಡಿಮೆ ದರದಲ್ಲಿ ಈ ವ್ಯವಸ್ಥೆ ಸಿಗುವಂತೆ ಮಾಡುವುದು ನಮ್ಮ ಧೈಯವಾಗಿದೆ ಎಂದು ಹೇಳಿದರು.

ನಾರಾಯಣ ಹೆಲ್ತ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಡಾ. ದೇವಿ ಶೆಟ್ಟಿ, “ನಾರಾಯಣ ಹೆಲ್ತ್‌ನಲ್ಲಿ, ರೋಗಿಗಳ ಆರೈಕೆ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸಲು ನಿರಂತರವಾಗಿ ನವೀನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುತ್ತಲೇ ಇದ್ದೇವೆ, ಇದೀಗ ಏರ್‌ಬೌಂಡ್‌ನೊಂದಿಗೆ ಡ್ರೋನ್‌ ವಿತರಣೆಯ ಪಾಲುದಾರಿಕೆಯೂ ವೈದ್ಯಕೀಯ ವಿತರಣೆಗಳ ವೇಗ ಮತ್ತು ವಿಶ್ವಾಸಾರ್ಹತೆಯನ್ನು ಗಮನಾರ್ಹವಾಗಿ ಸುಧಾರಿಸುವ ಭರವಸೆಯ ನೀಡಿದೆ. ಈ ಉಪಕ್ರಮವು ರೋಗಿಗಳಿಗೆ ಉತ್ತಮವಾಗಿ ಸೇವೆ ಸಲ್ಲಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ವಿಶೇಷವಾಗಿ ನಿರ್ಣಾಯಕ ರೋಗನಿರ್ಣಯ ಮತ್ತು ಸರಬರಾಜುಗಳಿಗೆ ಸಕಾಲಿಕ ಪ್ರವೇಶವು ಜೀವ ಉಳಿಸುವ ವ್ಯತ್ಯಾಸವನ್ನುಂಟುಮಾಡುವ ಪ್ರದೇಶಗಳಲ್ಲಿ ಹೆಚ್ಚು ಉಪಯುಕ್ತ ಎಂದು ಹೇಳಿದರು.

ಉರುಗ್ವೆ ದೇಶದಲ್ಲಿ ದಯಾಮರಣಕ್ಕೆ ಅವಕಾಶ ನೀಡುವ ಕಾನೂನು ಅಂಗೀಕಾರ

ಮಾಂಟೆವಿಡಿಯೊ(ಉರುಗ್ವೆ), ಅ.16– ಆನಾರೋಗ್ಯದಿಂದ ಬಳಲಿ ಬದುಕಲು ಸಾದ್ಯವಲ್ಲ ಎಂಬ ಸಂದರ್ಭದಲ್ಲಿ ಜೀವ ಬಿಡಲು (ದಯಾಮರಣ) ಅವಕಾಶ ನೀಡುವ ಕಾನೂನನ್ನುಉರುಗ್ವೆಯ ಸೆನೆಟ್‌ ಅಂಗೀಕರಿಸಿದೆ. ಉರುಗ್ವೆಯ ಸೆನೆಟ್‌ ದಯಾಮರಣವನ್ನು ಅಪರಾಧ ಮುಕ್ತಗೊಳಿಸುವ ಕಾನೂನನ್ನು ಅಂಗೀಕರಿಸಿದೆ.

ಈ ಕ್ರಮವು ಉರುಗ್ವೆಯನ್ನು ಕ್ಯಾಥೋಲಿಕ್‌ ಪ್ರಧಾನವಾಗಿ ಲ್ಯಾಟಿನ್‌ ಅಮೆರಿಕಾದಲ್ಲಿ ಶಾಸನದ ಮೂಲಕ ದಯಾಮರಣವನ್ನು ಅನುಮತಿಸುವ ಮೊದಲ ದೇಶವನ್ನಾಗಿ ಎನಿಸಿಕೊಂಡಿದೆ.
ಈಗಾಗಲೆ ಕೊಲಂಬಿಯಾ ಮತ್ತು ಈಕ್ವೆಡಾರ್‌ ಸುಪ್ರೀಂ ಕೋರ್ಟ್‌ ತೀರ್ಪುಗಳ ಮೂಲಕ ಈ ಪದ್ಧತಿಯನ್ನು ಅಪರಾಧ ಮುಕ್ತಗೊಳಿಸಿವೆ.

ಚಿಲಿಯಲ್ಲಿ, ಎಡಪಂಥೀಯ ಅಧ್ಯಕ್ಷ ಗೇಬ್ರಿಯಲ್‌ ಬೋರಿಕ್‌ ಇತ್ತೀಚೆಗೆ ಸೆನೆಟ್‌ನಲ್ಲಿ ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ದಯಾಮರಣ ಮಸೂದೆಯ ಅನುಮೋದನೆಗಾಗಿ ಒತ್ತಾಯಿಸುವಿಕೆಯನ್ನು ಪುನರುಜ್ಜೀವನಗೊಳಿಸಿದರು.ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿಯ ಸುತ್ತ ತೀವ್ರ ಚರ್ಚೆಗಳು ಮತ್ತು ಉತ್ಸಾಹಭರಿತ ಕ್ರಿಯಾಶೀಲತೆ ಈ ಪ್ರದೇಶವನ್ನು ಆವರಿಸಿದೆ.

ಸಾರ್ವಜನಿಕ ಅಭಿಪ್ರಾಯವು ಇದನ್ನು ಕೈಗೆತ್ತಿಕೊಳ್ಳಲು ನಮನ್ನು ಕೇಳುತ್ತಿದೆ ಎಂದು ಉರುಗ್ವೆಯ ಆಡಳಿತ ಎಡಪಂಥೀಯ ಒಕ್ಕೂಟದ ಸೆನ್‌ ಪೆಟ್ರೀಷಿಯಾ ಕ್ರೇಮರ್‌ ದೇಶದ ರಾಜಧಾನಿ ಮಾಂಟೆವಿಡಿಯೊದಲ್ಲಿ ತಮ ಸಂಸದರಿಗೆ ತಿಳಿಸಿದ್ದರು ಅದರಂತೆ 31 ಸೆನೆಟರ್‌ಗಳಲ್ಲಿ 20 ಜನರು ಪರವಾಗಿ ಮತ ಚಲಾಯಿಸಿ ಕಾನೂನು ಜಾರಿಗೆ ಅವಕಾಶ ನೀಡಿದರು.

ಕೆಳಮನೆಯಲ್ಲಿ ಈಗಾಗಲೆ ಮಸೂದೆಯನ್ನು ಹೆಚ್ಚಿನ ಬಹುಮತದೊಂದಿಗೆ ಅಂಗೀಕರಿಸಿತು ಈಗ ಸರ್ಕಾರವು ನಿಯಮಗಳನ್ನು ಜಾರಿಗೆ ತರುವುದು ಮಾತ್ರ ಉಳಿದಿದೆ.ಉರುಗ್ವೆಯಲ್ಲಿ ದಯಾಮರಣಕ್ಕೆ ಹೆಚ್ಚಿನ ವಿರೋಧವು ಕ್ಯಾಥೋಲಿಕ್‌ ಚರ್ಚ್‌ನಿಂದ ಬಂದಿತು. ಆದರೆ 3.5 ಮಿಲಿಯನ್‌ ಜನರಿರುವ ಈ ದೇಶದಲ್ಲಿ ಜಾತ್ಯತೀತೀಕರಣವು ಈ ಪದ್ಧತಿಗೆ ಪ್ರತಿರೋಧವನ್ನು ಕಡಿಮೆ ಮಾಡಿದೆ.

ದಯಾಮರಣವನ್ನು ಬಯಸುವವರು ಮಾನಸಿಕವಾಗಿ ಸಮರ್ಥರಾಗಿರಬೇಕು ಎಂದು ಉರುಗ್ವೆ ಬಯಸುತ್ತದೆ.ಖಿನ್ನತೆಯಂತಹ ಮಾನಸಿಕ ಸ್ಥಿತಿಗಳನ್ನು ಹೊಂದಿರುವವರಿಗೆ ದಯಾಮರಣವನ್ನು ಕಾನೂನು ಸಂಪೂರ್ಣವಾಗಿ ನಿಷೇಧಿಸದಿದ್ದರೂ, ರೋಗಿಗಳು ನಿರ್ಧಾರ ತೆಗೆದುಕೊಳ್ಳಲು ಅವರು ಮಾನಸಿಕವಾಗಿ ಸಾಕಷ್ಟು ಸದೃಢರಾಗಿದ್ದಾರೆ ಎಂದು ತೀರ್ಪು ನೀಡಲು ಇಬ್ಬರು ವೈದ್ಯರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಎಟಿಎಂನಿಂದ 6.18 ಲಕ್ಷ ರೂ. ಹಣ ಮಾಯ

ಥಾಣೆ, ಅ.16– ಎಟಿಎಂ ಹಣ ಸಂಗ್ರಹವನ್ನು ನಿರ್ವಹಿಸುವಾಗ 6.18 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನಗದು ನಿರ್ವಹಣಾ ಕಂಪನಿಯ ನಾಲ್ವರು ಉದ್ಯೋಗಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಒಬ್ಬ ಕ್ಯಾಷಿಯರ್‌ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಚಾಲಕನಾಗಿರುವ ಆರೋಪಿಗಳಿಗೆ ವಿವಿಧ ಬ್ಯಾಂಕ್‌ನ ಎಟಿಎಂಗಳಿಂದ ಉಳಿದ ಹಣವನ್ನು ಸಂಗ್ರಹಿಸಿ ಕಂಪನಿಯ ಕಪಾಟಿನಲ್ಲಿ ಠೇವಣಿ ಇಡುವ ಕೆಲಸವನ್ನು ವಹಿಸಲಾಗಿತ್ತು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳದ ಅ.13 ರಂದು, ಅವರು ವಿವಿಧ ಎಟಿಎಂಗಳಿಂದ 70,54,100 ರೂ.ಗಳನ್ನು ಸಂಗ್ರಹಿಸಿದರು ಆದರೆ ಕೇವಲ 64,35,200 ರೂ.ಗಳನ್ನು ಠೇವಣಿ ಇಟ್ಟರು. ಕಂಪನಿಯ ಲೆಕ್ಕಪರಿಶೋಧನೆಯಲ್ಲಿ 6,18,900 ರೂ.ಗಳ ಕೊರತೆ ಕಂಡುಬಂದಿದೆ, ನಂತರ ನಗದು ನಿರ್ವಹಣಾ ಸಂಸ್ಥೆಯ ಹಿರಿಯ ಪ್ರತಿನಿಧಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಕೊಲ್ಸೆವಾಡಿ ಪೊಲೀಸ್‌‍ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ಲೆಕ್ಕವಿಲ್ಲದ ಹಣವನ್ನು ವೈಯಕ್ತಿಕ ಬಳಕೆಗಾಗಿ ತಿರುಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆಯ ಭಾಗವಾಗಿ, ಪೊಲೀಸರು ಎಟಿಎಂ ಸಂಗ್ರಹ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ವಾಹನ ಚಲನೆಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂಬಿಕೆ ದ್ರೋಹದ ಆರೋಪದ ಬಗ್ಗೆ ನಾವು ತನಿಖೆ ಆರಂಭಿಸಿದ್ದೇವೆ ಮತ್ತು ಕಾಣೆಯಾದ ಮೊತ್ತವನ್ನು ಪತ್ತೆಹಚ್ಚಲು ಮತ್ತು ಆರೋಪಿಗಳ ವೈಯಕ್ತಿಕ ಪಾತ್ರಗಳನ್ನು ಪರಿಶೀಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ಹೇಳಿದರು