Thursday, November 6, 2025
Home Blog Page 48

ಕುಡಿದು ಬಂದು ಹಲ್ಲೆ ಮಾಡಿದ ಪತಿಯನ್ನು ಇಟ್ಟಿಗೆಯಿಂದ ಬಡಿದು ಕೊಂದ ಪತ್ನಿ

ಹೈದರಾಬಾದ್‌,ಅ.13- ಮನೆಗೆ ಕುಡಿದು ಬಂದು ಮೇಲೆ ಹಲ್ಲೆ ನಡೆಸುತ್ತಿದ್ದ ಕಾರಣ ಪತ್ನಿಯೇ ಮಗನ ಎದುರೇ ಗಂಡನನ್ನು ಇಟ್ಟಿಕೆಗೆಯಿಂದ ತಲೆಗೆ ಬಡಿದು ಕೊಲೆ ಮಾಡಿರುವ ಘಟನೆ ಕೇಶಂಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪು ಕುಮಾರ್‌(35) ಕೊಲೆಯಾದ ಕುಡುಕ ಪತಿ. ಕೆ. ಮಾಧವಿ ಕೊಲೆ ಮಾಡಿರುವ ಪತ್ನಿ. ಈ ಹಿಂದೆಯೂ ಸಹ, ಕುಮಾರ್‌ ಆಗಾಗ್ಗೆ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿಗಳ ನಡುವೆ ಜಗಳವಾಗುತ್ತಿತ್ತು.ಕೊಪ್ಪುಕುಮಾರ್‌ ಮತ್ತೆ ಕುಡಿದು ಮನೆಗೆ ಬಂದಿದ್ದರಿಂದ ಕೋಪಗೊಂಡ ಮಾಧವಿ ಇಟ್ಟಿಗೆ ಎತ್ತಿಕೊಂಡು ಅವನ ತಲೆಗೆ ಪದೇ ಪದೇ ಬಡಿದಿದ್ದಾಳೆ.

ಸ್ಥಳದಲ್ಲೇ ಸಾವನ್ನಪ್ಪಿದ ಕುಮಾರ್‌ನ ಶವವನ್ನು ತನ್ನ ಮನೆಯ ಮುಂದೆ ಇರುವ ಸಂಪ್‌ನಲ್ಲಿ ಎಸೆದಿದ್ದಾಳೆ. ಮನೆಯಿಂದ ಹೊರಡುವ ಮೊದಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಳು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಧವಿಗಾಗಿ ಶೋಧ ನಡೆಸುತ್ತಿದ್ದಾರೆ.

ಪಾರಿವಾಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಅಧಿಕಾರಿ

ಥಾಣೆ,ಅ.13- ವಿದ್ಯುತ್‌ ತಂತಿಗೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಹೋದ ಫೈರ್‌ ಗ್ರೇಡ್‌ನ ಅಧಿಕಾರಿ ತಮ ಪ್ರಾಣ ಕಳೆದುಕೊಂಡಿದ್ದು, ಸಹಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಖಾರಿಗಾನ್‌ನ ಸುಧಾಮ ರೆಸಿಡೆನ್ಸಿಯ ಡಿವಾ-ಶಿಲ್‌ ರಸ್ತೆಯಲ್ಲಿ ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ದತಿವಾಲಿ ನಿವಾಸಿ ಉತ್ಸವ ಪಾಟೀಲ್‌(28) ಮೃತಪಟ್ಟಿರುವ ಅಧಿಕಾರಿ. ಪಾಲ್ಘರ್‌ನ ವಾಡಾ ನಿವಾಸಿ ಆಜಾದ್‌ ಪಾಟೀಲ್‌ (29) ಗಂಭೀರ ಗಾಯಗೊಂಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಅಗ್ನಿಶಾಮಕ ದಳದೊಂದಿಗೆ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು.

ಘಟನೆ ವಿವರ : ಟೊರೆಂಟ್‌ ಪವರ್‌ ಕಂಪನಿಗೆ ಸೇರಿದ ಓವರ್‌ಹೆಡ್‌ ವೈರ್‌ಗಳಲ್ಲಿ ಪಾರಿವಾಳ ಸಿಲುಕಿರುವ ಬಗ್ಗೆ ಥಾಣೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ದಿವಾ ಬೀಟ್‌ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ದಳದವರು ರಕ್ಷಣಾ ವಾಹನದೊಂದಿಗೆ ಸ್ಥಳಕ್ಕೆ ಬಂದಿದ್ದರು.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಅಗ್ನಿಶಾಮಕ ದಳದವರು ಆಕಸಿಕವಾಗಿ ಹೈಟೆನ್ಷನ್‌ ವಿದ್ಯುತ್‌ ಕೇಬಲ್‌ ಸಂಪರ್ಕಕ್ಕೆ ಬಂದು ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದರು. ಅವರನ್ನು ತಕ್ಷಣ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಸ್ತುತ ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅಗ್ನಿಶಾಮಕ ಅಧಿಕಾರಿ ಗಿರೀಶ್‌ ಝಲಕೆ ತಿಳಿಸಿದ್ದಾರೆ.

ವಿಚ್ಛೇದನಕ್ಕೆ ಮುಂದಾದ ಪತ್ನಿಯನ್ನು ಇರಿದು ಕೊಂದ ಪತಿ

ಚಿಕ್ಕಮಗಳೂರು,ಅ.13 – ಕಳೆದ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿ ಕೌಟುಂಬಿಕ ಕಲಹದಿಂದ ತವರು ಸೇರಿದ್ದು, ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ನೇತ್ರಾವತಿ (32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಸಕಲೇಶಪುರದ ನವೀನ್‌ ಎಂಬುವವರ ಜೊತೆ ಕಳೆದ ಐದು ತಿಂಗಳ ಹಿಂದೆಯಷ್ಟೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲ ದಿನಗಳಲ್ಲೇ ಕೌಟುಂಬಿಕ ಕಲಹದಿಂದ ನೇತ್ರಾವತಿ ತನ್ನ ತವರು ಮನೆ ಸೇರಿದ್ದಳು.ರಾಜಿ ಪಂಚಾಯ್ತಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ವಿಚ್ಚೇದನ ನೀಡಲು ಸಿದ್ದತೆ ನಡೆಸಿ ಈ ಸಂಬಂಧ ಪತಿ ವಿರುದ್ಧ ನೇತ್ರಾವತಿ ಠಾಣೆಗೆ ದೂರು ಕೂಡ ನೀಡಿದ್ದರು.

ಈ ವಿಷಯ ತಿಳಿದ ನವೀನ್‌ ಬೇಸರಗೊಂಡು ನೇತ್ರಾವತಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇತ್ರಾಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಲ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾವಿಗೆ ಬಿದ್ದ ಮಹಿಳೆ ರಕ್ಷಣೆಗೆ ಹೋಗಿ ಪ್ರಾಣ ಬಿಟ್ಟ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ

ಕೊಲ್ಲಂ, ಅ. 13 (ಪಿಟಿಐ)– ಪ್ರಾಣ ಕಳೆದುಕೊಳ್ಳಲು ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಇಲ್ಲಿಗೆ ಸಮೀಪದ ನೆಡುವತೂರಿನಲ್ಲಿ ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ನೆಡುವತೂರಿನ ಅರ್ಚನಾ, ಆಕೆಯ ಸ್ನೇಹಿತ ಶಿವಕೃಷ್ಣನ್‌ ಮತ್ತು ಕೊಟ್ಟಾರಕ್ಕರ ಠಾಣೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿ ಸೋನಿ ಎಸ್‌‍ ಕುಮಾರ್‌ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ, ನೆಡುವತೂರಿನಲ್ಲಿ ಮಹಿಳೆಯೊಬ್ಬರು 80 ಅಡಿ ಆಳದ ಬಾವಿಗೆ ಹಾರಿದ್ದಾರೆ ಎಂದು ವರದಿಯಾದ ದುರಂತದ ಕರೆಯನ್ನು ಕೊಟ್ಟಾರಕ್ಕರ ಅಗ್ನಿಶಾಮಕ ಠಾಣೆಗೆ ಸ್ವೀಕರಿಸಲಾಯಿತು.ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಲು ಪ್ರಯತ್ನಗಳನ್ನು ಪ್ರಾರಂಭಿಸಿತು.ಕುಮಾರ್‌ ಸುರಕ್ಷತಾ ಸಾಧನಗಳನ್ನು ಧರಿಸಿ ಬಾವಿಗೆ ಇಳಿಯುತ್ತಿದ್ದಂತೆ, ಬಾವಿಯ ಪ್ಯಾರಪೆಟ್‌ ಕುಸಿದು ಅವರ ಮತ್ತು ಅರ್ಚನಾ ಮೇಲೆ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತಿರದಲ್ಲಿ ನಿಂತಿದ್ದ ಶಿವಕೃಷ್ಣನ್‌ ಕೂಡ ಬಾವಿಗೆ ಬಿದ್ದಿದ್ದರಿಂದ ರಚನೆ ಸಡಿಲಗೊಂಡಾಗ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಗ್ನಿಶಾಮಕ ದಳದವರು ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಗಂಭೀರ ಗಾಯಗೊಂಡ ಮೂವರನ್ನು ಬಾವಿಯಿಂದ ಹೊರತೆಗೆಯಲಾಯಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೊತ್ತಿ ಉರಿದ ಇವಿ ಸ್ಕೂಟರ್‌

ಬೆಂಗಳೂರು, ಅ.13– ಚಾರ್ಜ್‌ಗೆ ಹಾಕಿದ್ದ ಇವಿ ಸ್ಕೂಟರ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಬಸವೇಶ್ವರ ನಗರದಲ್ಲಿ ರಾತ್ರಿ ನಡೆದಿದೆ. ಶಿವನಹಳ್ಳಿಯ 1ನೇ ಕ್ರಾಸ್‌‍ನ ನಿವಾಸಿ ಮುಕೇಶ್‌ ಎಂಬುವವರು ಮನೆಯ ನೆಲ ಮಳಿಗೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರನ್ನು ಚಾರ್ಜ್‌ಗೆ ಹಾಕಿದ್ದರು.

ರಾತ್ರಿ 11 ಗಂಟೆ ಸುಮಾರಿನಲ್ಲಿ ಈ ಸ್ಕೂಟರ್‌ ಸ್ಟೋಟಗೊಂಡು ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿದೆ.ತಕ್ಷಣ ಮನೆಯವರು ಗಮನಿಸಿ ಮಹಡಿಯಿಂದ ಕೆಳಗೆ ಇಳಿದು ಬಂದು ನೋಡಿದಾಗ ಸ್ಕೂಟರ್‌ಗೆ ಹೊತ್ತಿಕೊಂಡಿದ್ದ ಬೆಂಕಿ ಪಕ್ಕದಲ್ಲೇ ನಿಲ್ಲಿಸಿದ್ದ ಸೈಕಲ್‌ಗೂ ಆವರಿಸಿರುವುದು ಕಂಡು ಬಂದಿದೆ.

ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಸೈಕಲ್‌ ಸಂಪೂರ್ಣ ಸುಟ್ಟು ಕರಕಲಾಗಿವೆೆ. ಇವಿ ಸ್ಕೂಟರ್‌ ಸ್ಪೋಟಕ್ಕೆ ನಿಖರ ಕಾರಣ ಸಧ್ಯಕ್ಕೆ ತಿಳಿದು ಬಂದಿಲ್ಲ.

ನಗರದಲ್ಲಿ ಆಗಾಗ್ಗೆ ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ವಾಹನಗಳ ಸವಾರರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ಯಲಚೇನಹಳ್ಳಿಯ ಕಮರ್ಷಿಯಲ್‌ ಕಟ್ಟಡವೊಂದರ ಬೇಸೆಂಟ್‌ನಲ್ಲಿ ಚಾರ್ಜ್‌ಗೆ ಹಾಕಿದ್ದ ಇವಿ ಬೈಕ್‌ ಓವರ್‌ ಹೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು.

ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಸಹ ಪ್ರಯಾಣಿಕನಿಂದ ಕಿರುಕುಳ

ಬೆಂಗಳೂರು,ಅ.13- ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಕಿರುಕುಳ ನೀಡಿದ ಸಹಪ್ರಯಾಣಿಕನನ್ನು ಹಿಡಿದು ಸಂಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ದೊಡ್ಡಬಳ್ಳಾಪುರದಿಂದ ಕೆಎಸ್‌‍ಆರ್‌ಟಿಸಿ ಬಸ್‌‍ನಲ್ಲಿ ವೈದ್ಯೆಯೊಬ್ಬರು ಬೆಂಗಳೂರಿಗೆ ಬರುತ್ತಿದ್ದರು. ಫಿರೋಝ್‌ ಖಾನ್‌ ಎಂಬಾತ ಇವರ ಪಕ್ಕ ಕುಳಿತುಕೊಂಡಿದ್ದಾನೆ.

ಕೆಲ ಸಮಯದ ಬಳಿಕ ವೈದ್ಯೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ವೈದ್ಯೆ ಮುಜುಗರ ಪಟ್ಟುಕೊಂಡು ಆತನಿಂದ ಪಕ್ಕಕ್ಕೆ ಸರಿದು ಅಂತರ ಕಾಯ್ದುಕೊಂಡರಾದರೂ ಆತ ಪದೇ ಪದೇ ಕಾಟ ಕೊಟ್ಟಿದ್ದಾನೆ.ವೈದ್ಯೆ ಆತನ ವರ್ತನೆಯಿಂದ ಬೇಸತ್ತು ಬಸ್‌‍ಚಾಲಕರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೇ ತನ್ನ ಸಹೋದರನಿಗೂ ಮೊಬೈಲ್‌ ಕರೆ ಮಾಡಿ ಹೇಳಿದ್ದಾರೆ.

ತನ್ನ ಬಗ್ಗೆ ವೈದ್ಯೆ ಚಾಲಕನಿಗೆ ಹೇಳಿದ್ದಾರೆಂದು ವಿಷಯ ತಿಳಿದು ಆತ ಬಸ್‌‍ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ತಕ್ಷಣ ಬಸ್‌‍ ಪ್ರಯಾಣಿಕರು ಹಾಗೂ ಬಸ್‌‍ ಚಾಲಕ ಸೇರಿಕೊಂಡು ಆತನನ್ನು ಹಿಡಿದು ಸಂಜಯನಗರ ಪೊಲೀಸ್‌‍ ಠಾಣೆಗೆ ಒಪ್ಪಿಸಿದ್ದು, ಆತನ ವಿರುದ್ಧ ವೈದ್ಯೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಂಡು ಮತ್ತೆ ವಿಚಾರಣೆಗೆ ಬರುವಂತೆ ಹೇಳಿ ನೋಟೀಸ್‌‍ಕೊಟ್ಟು ಕಳುಹಿಸಿದ್ದಾರೆ.

ಧಾರವಾಡ : ಮರಕ್ಕೆ ಕ್ರೂಸರ್‌ ವಾಹನ ಡಿಕ್ಕಿಯಾಗಿ ಇಬ್ಬರು ಸಾವು

ಧಾರವಾಡ,ಅ.13– ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್‌ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಎಂಟು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಅಪಘಾತದಲ್ಲಿ ಗದಗ ಹುಡ್ಕೋ ಕಾಲೋನಿಯ ಮಹಾಂತಮ ಬಸವಣೆಪ್ಪ ತುಪ್ಪದ (85) ಮತ್ತು ಸುರೇಶ ಬಸವಣೆಪ್ಪ ತುಪ್ಪದ (52)ಮೃತಪಟ್ಟಿದ್ದಾರೆ.ಗದಗ ಮೂಲದ ಕುಟುಂಬವು ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದ್ದು, ಅವರೆಲ್ಲರೂ ದೇವಿ ದರ್ಶನ ಪಡೆದು ತಮ ಊರಿಗೆ ಕ್ರೂಸರ್‌ ವಾಹನದಲ್ಲಿ ಹಿಂದಿರುಗುತ್ತಿದ್ದರು.

ಇಂದು ಮುಂಜಾನೆ 5.30 ರ ಸುಮಾರಿನಲ್ಲಿ ಈ ಕ್ರೂಸರ್‌ ವಾಹನ ಧಾರವಾಡ ತಾಲ್ಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮುಲ್ಲಾ ಡಾಬಾ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ.ಅಪಘಾತದ ರಭಸಕ್ಕೆ ಕ್ರೂಸರ್‌ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ವಾಹನದೊಳಗಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಗಾಯಗೊಂಡಿದ್ದ ಎಂಟು ಮಂದಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಊಟಕ್ಕೆ ಸೇರುವುದು ಅಪರಾಧವೇ..? : ಸಿಎಂ ಸಿದ್ದು ಸಿಡಿಮಿಡಿ

ಬೆಂಗಳೂರು, ಅ.13- ಸಚಿವರು ಊಟಕ್ಕೆ ಸೇರುವುದೇ ಅಪರಾಧವೇ? ಅದರ ಬಗ್ಗೆ ಪದೇಪದೇ ಏಕೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ವಿಧಾನಸೌಧದ ಮುಂಭಾಗ ಕಿತ್ತೂರು ಉತ್ಸವ ಜ್ಯೋತಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವರು ನಾವು ಪದೇಪದೇ ಊಟಕ್ಕೆ ಒಟ್ಟಾಗಿ ಸೇರುತ್ತಿರುತ್ತೇವೆ, ಅದರಲ್ಲಿ ತಪ್ಪೇನೆಂದು ಪ್ರಶ್ನಿಸಿದರು.

ಸಚಿವರು ಊಟಕ್ಕೆ ಸೇರಬಾರದು ಎಂಬಂತೆ ಬಿಜೆಪಿಯವರು ಹೇಳುತ್ತಿದ್ದಾರೆ. ಅದೇನು ಅಪರಾಧವೇ? ಈ ವಿಚಾರ ಪದೇಪದೇ ಚರ್ಚೆಯಾಗುತ್ತಿರುವುದೇಕೆ? ಎಂದು ತಿರುಗೇಟು ನೀಡಿದರು.

ಬಿಜೆಪಿಯವರ ನಿಲುವೇ ನನಗೆ ಅರ್ಥವಾಗುತ್ತಿಲ್ಲ ಎಂದು ಸಿಡಿಮಿಡಿ ವ್ಯಕ್ತ ಪಡಿಸಿದ ಸಿದ್ದರಾಮಯ್ಯ ಅವರು, ಸಚಿವರ ಔತಣಕೂಟವನ್ನು ಬಲವಾಗಿ ಸಮರ್ಥಿಸಿಕೊಂಡರು. ಶಾಲಾ, ಕಾಲೇಜು, ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿರುವ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದರು.

ಆರ್‌ಎಸ್‌‍ಎಸ್‌‍ ವಿರೋಧಿಸಿದ ಕಾಂಗ್ರೆಸ್ಸಿಗರಿಗೆ ಸಿ.ಟಿ.ರವಿ ಓಪನ್ ಚಾಲೆಂಜ್

ಬೆಂಗಳೂರು,ಅ.13- ನಾವು ಆರ್‌ಎಸ್‌‍ಎಸ್‌‍ ಅಜೆಂಡಾ ಇಟ್ಟುಕೊಂಡೇ ಜನರ ಬಳಿ ಹೋಗುತ್ತೇವೆ. ಒಂದು ವೇಳೆ ಕಾಂಗ್ರೆಸ್‌‍ನವರು ಇದನ್ನು ವಿರೋಧಿಸುವುದಾದರೆ ವಿಧಾನಸಭೆ ವಿಸರ್ಜಿಸಿ ಜನರ ಬಳಿ ಬನ್ನಿ ನೋಡೋಣ. ಯಾರು ಗೆಲ್ಲುತ್ತಾರೆ ನೋಡಿಯೇ ಬಿಡೋಣ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಬಹಿರಂಗ ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಆರ್‌ಎಸ್‌‍ಎಸ್‌‍ ಬೆಂಬಲಿತ ಚಟುವಟಿಕೆಗಳನ್ನು ಸರ್ಕಾರಿ ಜಾಗದಲ್ಲಿ ನಿರ್ಬಂಧ ಹಾಕಬೇಕೆಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾವು ಸಂಘ ಪರಿವಾರದ ಅಜೆಂಡಾಗಳನ್ನೇ ಮುಂದಿಟ್ಟುಕೊಂಡು ಬರುತ್ತೇವೆ.

ನೀವು ವಿರೋಧಿಸುವುದಾದರೆ ವಿಧಾನಸಭೆ ವಿಸರ್ಜಿಸಿ ಜನತಾ ನ್ಯಾಯಾಲಯಕ್ಕೆ ಬನ್ನಿ. ಜನಾದೇಶ ಯಾರಿಗೆ ಸಿಗುತ್ತದೆ ನೋಡೋಣ ಎಂದು ಸವಾಲು ಎಸೆದರು.ಕರ್ನಾಟಕದಲ್ಲಿ ಇನ್ನೆಂದಿಗೂ ಕಾಂಗ್ರೆಸ್‌‍ ಅಧಿಕಾರಕ್ಕೆ ಬರುವುದಿಲ್ಲ. ಜನ ನಿಮನ್ನು ಗೆಲ್ಲಿಸಿ ಪರಿತಪಿಸುತ್ತಿದ್ದಾರೆ. ನಿಮ ಗೆಲುವು ಕೂಡ ಇದೇ ಕೊನೆ. ಸಾಮನ್ಯ ಕಾರ್ಯಕರ್ತರನ್ನು ಕಬಳಿಸಿ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದೀರಿ ಎಂದು ಕಿಡಿಕಾರಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದುಸಂಘದ ಚಟುವಟಿಕೆ ನಿರ್ಬಂಧ ಹಾಕಬೇಕೆಂದು ಕೋರಿದ್ದಾರೆ. ನಾನು ಅವರನ್ನು ಸಾರ್ವಜನಿಕ ಚರ್ಚೆಗೆ ಆಹ್ವಾನಿಸುತ್ತೇನೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.

ಆರ್‌ಎಸ್‌‍ಎಸ್‌‍ ನೂರು ವರ್ಷದ ಇತಿಹಾಸದಲ್ಲಿ ಭಯೋತ್ಪಾದನೆ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಆದರೆ ಪ್ರಕೋಪ, ವಿಕೋಪ ಸಮಸ್ಯೆಗಳ ಸಂದರ್ಭದಲ್ಲಿ ನೆರವಿಗೆ ಧಾವಿಸಿದ ನೂರಾರು ಉದಾಹರಣೆಗಳಿವೆ. ಆರ್‌ಎಸ್‌‍ಎಸ್‌‍ ಪ್ರೇರಣೆ ಪಡೆದು ಹತ್ತಾರು ಸಂಘಟನೆಗಳು ಹುಟ್ಟಿಕೊಂಡಿವೆ ಎಂದು ಸಮರ್ಥಿಸಿಕೊಂಡರು.

ಸಮಾಜಕ್ಕೆ ತನ್ನದೇ ಆದ ಸಕಾರಾತಕ ಕೊಡುಗೆಯನ್ನು ಆರ್‌ಎಸ್‌‍ಎಸ್‌‍ ಕೊಟ್ಟಿದೆ. ಇಂಥ ಸಂಘವನ್ನು ನಕಾರಾತಕವಾಗಿ ಬಿಂಬಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ಪ್ರಿಯಾಂಕ್‌ ಖರ್ಗೆಗೆ ರಾಜಕೀಯ ವಾರಸುದಾರಿಕೆ ಸುಲಭವಾಗಿ ಸಿಕ್ಕಿದೆ. ಅದರ ಅಹಂನಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌‍ ಭ್ರಷ್ಟಾಚಾರದ ಪಕ್ಷ, ಭ್ರಷ್ಟಾಚಾರದ ಪಿತಾಮಹರೇ ಕಾಂಗ್ರೆಸ್‌‍ನಲ್ಲಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಟ್ಟ, ಭಯೋತ್ಪಾದಕರನ್ನು ಬೆಳೆಸಿದ ಪಕ್ಷ ಕಾಂಗ್ರೆಸ್‌‍. ಅಂಥ ಕಾಂಗ್ರೆಸ್‌‍ ನಲ್ಲಿರುವ ನೀವು ಸಂಘದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಪಾಕ್‌ ಪರ ಘೋಷಣೆ, ಗೋಹತ್ಯೆ, ಗೋಭಕ್ಷಣೆಗೆ ಕುಮಕ್ಕು ಕೊಡುವವರನ್ನು ಬೆಂಬಲಿಸುವ ನೀಚತನ ನಿಮ ಪಕ್ಷಕ್ಕಿದೆ. ಗಾಂಧಿಯವರ ಹತ್ಯೆಗೂ ಸಂಘಕ್ಕೂ ಸಂಬಂಧ ಇಲ್ಲ ಎಂದು ದೇಶದ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರೂ ಅವರೇನೇಮಿಸಿದ ಸಮಿತಿಗಳೇ ಹೇಳಿವೆ. ಆದರೂ ಮತ್ತೆ ಮತ್ತೆ ಗಾಂಧಿ ಹತ್ಯೆ ಮಾಡಿದ್ದು ಆರ್‌ಎಸ್‌‍ಎಸ್‌‍ ಎಂದು ಸುಳ್ಳು ಹೇಳುತ್ತಿದ್ದೀರಿ. ಸರ್ವಾಧಿಕಾರಿ ಮನಸ್ಥಿತಿ ಅಂದಿದ್ದೀರಿ, ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ನಿಮ ಪಕ್ಷಕ್ಕಿದೆ. ಸರ್ವಾಧಿಕಾರಿ ಎನ್ನುವುದು ನಿಮ ಪಕ್ಷಕ್ಕೆ ಅನ್ವಯ ಎಂದು ಗುಡುಗಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಚಿವರಿಗೆ ಔತಣಕೂಟ ಏರ್ಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಜನರು ಸಂಕಷ್ಟದಲ್ಲಿದ್ದಾಗ ಸಚಿವರ ಔತಣಕೂಟ ಇಟ್ಟುಕೊಳ್ಳುವುದಿಲ್ಲ. ಸಂವೇದನೆ ಇರುವವರು ಇಂತಹ ಔತಣಕೂಟ ನಡೆಸುವುದಿಲ್ಲ. ಸಿಎಂಗೆ ಸಂವೇದನೆ ಇದೆಯಾ? ಎಂದು ಪ್ರಶ್ನಿಸಿದರು.

ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಹೆಲಿಕಾಪ್ಟರ್‌ ಸಮೀಕ್ಷೆ ಮಾಡಿ ಸಿಎಂ, ಕೆಳಗಿಳಿದು ರೈತರ ಕಷ್ಟ ಕೇಳಲಿಲ್ಲ. ಮೇಲಷ್ಟೇ ಹಾರಾಟ ಮಾಡಿದರು ಎಂದು ದೂರಿದರು.

ವಿಧಾನಪರಿಷತ್‌ ಸದಸ್ಯಬಿ.ಕೆ.ಹರಿಪ್ರಸಾದ್‌ ಅವರು ಆರೆಎಸ್‌‍ಎಸ್‌‍ ನೋಂದಣಿ ಆಗಿಲ್ಲ ಎಂಬ ವಿಚಾರಕ್ಕೆ, ಹೀಗೆಲ್ಲ ಮಾತಾಡಿದರೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ಮಾತಾಡಿರಬಹುದು. ಅಧಿಕಾರ ಪಡೆದುಕೊಳ್ಳಲು ಹರಿಪ್ರಸಾದ್‌ ಹೀಗೆ ಮಾತಾಡಿದ್ದಾರೆ ಎಂದು ಟೀಕಿಸಿದರು.

ಆಸ್ಪತ್ರೆಯಿಂದ ಮಾಜಿ ಪ್ರಧಾನಿ ದೇವೇಗೌಡರು ಡಿಸ್ಚಾರ್ಜ್‌

ಬೆಂಗಳೂರು, ಅ.13- ಒಂದು ವಾರದ ಚಿಕಿತ್ಸೆಯ ನಂತರ ಮಾಜಿ ಪ್ರಧಾನಿಗಳಾದ ಹೆಚ್‌.ಡಿ.ದೇವೇಗೌಡರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ.ಜ್ವರ ಹಾಗೂ ಮೂತ್ರದ ಸೋಂಕಿನ ಸಮಸ್ಯೆಯಿಂದ ಬಳಲುತ್ತಿದ್ದುದರಿಂದ ಆಸ್ಪತ್ರೆಗೆ ದಾಖಲಾಗಿದ್ದ ದೇವೇಗೌಡರು, ಈಗ ಸಂಪೂರ್ಣವಾಗಿ ಚೇತರಿಕೆ ಕಂಡು ವೈದ್ಯರ ಸೂಚನೆ ಮೇರೆಗೆ ಡಿಸ್ಚಾರ್ಜ್‌ ಆಗಿ ಮನೆಗೆ ತೆರಳಿದ್ದಾರೆ.

ಕೆಲ ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಧೂಳಿರುವ ವಾತಾವರಣಕ್ಕೆ ಹೋಗಬಾರದು ಮತ್ತೇ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ದೇವೇಗೌಡರಿಗೆ ಸಲಹೆ ನೀಡಿದ್ದಾರೆ.