Friday, November 7, 2025
Home Blog Page 49

ಭಾರಿ ವಿವಾದದ ಹುಟ್ಟುಹಾಕಿದ ಆರ್‌ಎಸ್‌‍ಎಸ್‌‍ಗೆ ಕಡಿವಾಣ ಹಾಕುವ ಕುರಿತ ಸಚಿವ ಪ್ರಿಯಾಂಕ ಖರ್ಗೆ ಪತ್ರ

ಬೆಂಗಳೂರು,ಅ.13– ಸರ್ಕಾರಿ ಜಾಗ ಹಾಗೂ ಶಾಲಾ ಆವರಣ ಸೇರಿದಂತೆ ಮತ್ತಿತರ ಕಡೆ ಆರ್‌ಎಸ್‌‍ಎಸ್‌‍ ಬೆಂಬಲಿತ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ವಿವಾದದ ಬಿರುಗಾಳಿ ಎಬ್ಬಿಸಿದೆ.

ವಾಸ್ತವವಾಗಿ ಯಾವುದೇ ಒಂದು ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ, ಇಲ್ಲವೇ ನಿರ್ಬಂಧ ಹಾಗೂ ನಿಷೇಧ ಹೇರಬೇಕೆಂದರೆ ಆ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳು ನಡೆಸಿರುವುದು, ದೇಶದ ಆಂತರಿಕ ಭದ್ರತೆಗೆ ಸಮಸ್ಯೆ ತರುವುದು, ಇಲ್ಲವೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಮಾತ್ರ ನಿರ್ಬಂಧಿಸಲು ಇಲ್ಲವೇ ಶಾಶ್ವತವಾಗಿ ಕಡಿವಾಣ ಹಾಕಲು ಕಾನೂನಿನಲ್ಲಿ ಅವಕಾಶವಿದೆ.

ಈ ಹಿಂದೆ ಸ್ಟೂಡೆಂಟ್‌್ಸ ಇಸ್ಲಾಮಿಕ್‌ ಮೊಮೆಂಟ್ಸ್ ಆಫ್‌ ಇಂಡಿಯಾ ( ಸಿಮಿ) ಹಾಗೂ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ( ಪಿಎಪ್‌ ಐ ) ಸಂಘಟನೆಗಳ ಚಟುವಟಿಕೆಯನ್ನು ನಿಯಂತ್ರಿಸಿ ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು. ಈ ಎರಡು ಸಂಘಟನೆಗಳ ಉದ್ದೇಶವೇ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಎಂದು ಹೇಳಿಕೊಂಡಿದ್ದರು ಭಯೋತ್ಪಾದಕ ಸಂಘಟನೆಗಳ ಜೊತೆ ಕೈಜೋಡಿಸಿರುವುದು ಹಲವಾರು ಪ್ರಕರಣಗಳಲ್ಲಿ ರುಜುವತಾಗಿತ್ತು. ಹೀಗಾಗಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಸಿಮಿಯನ್ನು ನಿಷೇಧಿಸಿದರೆ ಹಾಲಿ ಪ್ರಧಾನಿ ನರೇಂದ್ರ ಮೋದಿಯವರು ಪಿ ಪಿ ಎಫ್‌ ಐ ಯನ್ನು ನಿಷೇಧ ಮಾಡಿದ್ದರು.

ಕೇಂದ್ರೀಯ ತನಿಖಾ ಸಂಸ್ಥೆಗಳು ನಡೆಸಿದ ತನಿಖೆಯ ವೇಳೆ ಈ ಎರಡು ಸಂಘಟನೆಗಳು ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆಗಳು ಹಾಗೂ ಭಯೋತ್ಪಾದಕ ಜೊತಗೆ ಜೊತೆ ಕೈಜೋಡಿಸಿದ್ದು ತನಿಖೆಯಲ್ಲಿ ಕಂಡುಬಂದಿದ್ದರಿಂದ ಕೇಂದ್ರ ಸರ್ಕಾರ ಇಂತಹ ದಿಟ್ಟ ಕ್ರಮವನ್ನು ತೆಗೆದುಕೊಂಡಿತ್ತು ಎಂಬುದನ್ನು ಸರಿಸಬಹುದು.

ಈಗ ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ವಿವಾದಕ್ಕೆ ನಾಂದಿ ಹಾಡಿದ್ದು, ಇದರ ವಿರುದ್ಧ ಕೇಸರಿ ಪಡೆ ಕೆಂಡಾಮಂಡಲವಾಗಿದೆ. ಧಮು ತಾಕತ್ತು ಇದ್ದರೆ ನಿಷೇಧ ಮಾಡಿ ನೋಡಿ ಎಂದು ಬಹಿರಂಗ ಸವಾಲು ಹಾಕಿದೆ. ಆರ್‌ ಎಸ್‌‍ ಎಸ್‌‍ ಹಿನ್ನೆಲೆಯನ್ನು ಅವಲೋಕಿಸಿದಾಗ ಶಾಖೆಗಳ ಮೂಲಕ ನಡೆಸುತ್ತಿರುವ ಚಟುವಟಿಕೆಗಳು ಕಾನೂನು ಬಹಿರವಾಗಿ ನಡೆದಿಲ್ಲ ಎಂಬುದಕ್ಕೆ ಹಲವಾರು ನಿದರ್ಶನಗಳನ್ನು ಕೊಡಬಹುದು.

ಯಾವುದೇ ಮೂಲಭೂತ ಸಂಘಟನೆಗಳ ಜೊತೆ ಈವರೆಗೂ ಕೈ ಜೋಡಿಸಿಲ್ಲ. ದೇಶದ ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿದೆ ಎಂಬುದಕ್ಕೆ ಪುರಾವೆಗಳು ಇಲ್ಲ. ರಾಷ್ಟ್ರೀಯತೆ, ಸನಾತನ ಧರ್ಮ ರಕ್ಷಣೆ, ಭಾರತೀಯರೆಲ್ಲರೂ ಒಂದೇ ಸಂಸ್ಕೃತಿ , ಆಚಾರವಿಚಾರದಂತಹ ವಿಷಯಗಳಿಗೆ ಆದ್ಯತೆ ನೀಡಿಯೇ ಇಂದು ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಘಟನೆಯಾಗಿ ಬೆಳೆದಿದೆ ಹೊರೆತು, ದೇಶದ್ರೋಹಿ ಚಟುವಟಿಕೆಗಳಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲ.

ಗುಜರಾತ್‌ನ ಕಚ್‌, ಮಹಾರಾಷ್ಟ್ರದ ಲಾತೂರ್‌ನಲ್ಲಿ ಸಂಭವಿಸಿದ ಭೂಕಂಪ, ದೇಶದ ನಾನಾ ಭಾಗಗಳಲ್ಲಿ ಉಂಟಾದ ನೆರೆಹಾವಳಿ ಸಂತ್ರಸ್ಥರಿಗೆ ನೆರವು, ಕೋವಿಡ್‌ ವೇಳೆ ರಕ್ಷಣೆ ಸೇರಿದಂತೆ ಹತ್ತಾರು ಚಟುವಟಿಕೆಗಳಲ್ಲಿ ಸಂಘವು ಮಾನವೀಯ ಕೆಲಸಗಳನ್ನು ಮಾಡಿದೆ ಎಂಬುದನ್ನು ಸೈದ್ದಾಂತಿಕವಾಗಿ ವಿರೋಧಿಸುವವರೂ ಕೂಡ ಒಪ್ಪಿಕೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡಿದೆ.

ಮೂರು ಬಾರಿ ನಿಷೇಧ :
ಆರ್‌ಎಸ್‌‍ಎಸ್‌‍ ಈ ಹಿಂದೆ ಬೇರೆ ಬೇರೆ ಕಾರಣಗಳಿಂದ ಮೂರು ಬಾರಿ ನಿಷೇಧಕ್ಕೆ ಒಳಪಟ್ಟಿತ್ತು. ಹೀಗೆ ಮೂರು ಬಾರಿ ನಿಷೇಧ ಮಾಡಿದ್ದು, ಕಾಂಗ್ರೆಸ್‌‍ ಪಕ್ಷ! ಅಂದಹಾಗೆ ಈ ಮೂರು ನಿಷೇಧಗಳನ್ನು ಹಿಂಪಡೆದಿದ್ದು ಕೂಡಾ ಕಾಂಗ್ರೆಸ್‌‍ ಎಂಬುದು ಐತಿಹಾಸಿಕ ಸತ್ಯ. ಮಹಾತ ಗಾಂಧಿಯವರನ್ನು ನಾಥೂರಾಂ ಗೋಡ್ಸೆ ಕೊಂದ ಕೆಲವು ದಿನಗಳ ನಂತರ, ಫೆಬ್ರವರಿ 4, 1948ರಂದು ಆರೆಸ್‌‍ಎಸ್‌‍ ಅನ್ನು ನಿಷೇಧಿಸಲಾಯಿತು. ದೇಶದಲ್ಲಿ ಅಶಾಂತಿ, ದ್ವೇಷ ಹರಡಿದ್ದು, ಹಿಂಸಾಚಾರಕ್ಕೆ ಕುಮಕ್ಕು ನೀಡುವ ಶಕ್ತಿಗಳನ್ನು ಬೇರುಸಹಿತ ಕಿತ್ತೆಸೆಯಲು ಆರೆಸ್‌‍ಎಸ್‌‍ ಮೇಲೆ ನಿಷೇಧವನ್ನು ಹೇರಲಾಗುತ್ತಿದೆ ಎಂದು ಸರ್ಕಾರ ಆ ಸಂದರ್ಭದಲ್ಲಿ ಹೇಳಿತ್ತು.

1948ರಲ್ಲಿ ಆರ್‌ಎಸ್‌‍ಎಸ್‌‍ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆಯಲು ಹಲವಾರು ಮನವಿಗಳು ಕೇಳಿ ಬಂದಿದ್ದವು. ಆಗಿನ ಸರಸಂಘಚಾಲಕ್‌ ಎಂಎಸ್‌‍ ಗೋಲ್ವಾಲ್ಕರ್‌ ಅವರು ಗೃಹಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರನ್ನು ಭೇಟಿ ಮಾಡಿದರು ಮತ್ತು ಪಟೇಲ್‌ ಮತ್ತು ಪ್ರಧಾನಿ ಜವಾಹರಲಾಲ್‌ ನೆಹರು ಇಬ್ಬರಿಗೂ ಪತ್ರ ಬರೆದಿದ್ದರು. ಸರ್ಕಾರದೊಂದಿಗಿನ ಮಾತುಕತೆ ವಿಫಲವಾದ ನಂತರ, ಸ್ವಯಂಸೇವಕರು ಡಿಸೆಂಬರ್‌ 9, 1948ರಂದು ಸಂಘದ ಮೇಲಿನ ನಿಷೇಧವನ್ನು ತೆಗೆದುಹಾಕಲು ಒತ್ತಾಯಿಸಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದರು. ಈ ಎಲ್ಲಾ ಹೋರಾಟಗಳ ಒಂದು ವರ್ಷದ ನಂತರ, ಜುಲೈ 11, 1949ರಂದು ನಿಷೇಧವನ್ನು ತೆಗೆದುಹಾಕಲಾಯಿತು.

ತುರ್ತು ಪರಿಸ್ಥಿತಿಯಲ್ಲಿ ನಿಷೇಧ:
ಇಂದಿರಾಗಾಂಧಿ ಅವರು ದೇಶದ ಪ್ರಧಾನಿಯಾಗಿದ್ದ ಈ ವೇಳೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು. ಈ ಸಂದರ್ಭದಲ್ಲಿ ಆರೆಎಸ್‌‍ಎಸ್‌‍ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ನೇತೃತ್ವದ ಸರ್ಕಾರ ದಿಟ್ಟ ಹೆಜ್ಜೆ ಇರಿಸಿತ್ತು ಇದೇ ಉದ್ದೇಶದಿಂದ ಹಾಗೂ ಆರೆಎಸ್‌‍ಎಸ್‌‍ ಕಾರ್ಯ ಚಟುವಟಿಕೆಗಳ ಮೊಟಕುಗೊಳಿಸುವ ಉದ್ದೇಶದಿಂದ 1975ರಲ್ಲಿ ಈ ಸಂಘಟನೆಯನ್ನು ನಿಷೇಧ ಮಾಡಲಾಗಿತ್ತು. ಜೂನ್‌ 25, 1975ರಲ್ಲಿ ಇಂದಿರಾಗಾಂಧಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಹೇರಿದ ನಂತರ, ಜುಲೈ 4 ರಂದು ನಿಷೇಧಿಸಲಾಗಿತ್ತು.
ಇಂದಿರಾ ಗಾಂಧಿಗೆ ಪತ್ರ ಬರೆದ ಬಾಳಾಸಾಹೇಬ್‌ ನಿಷೇಧ ಆದೇಶವು ನಿಷೇಧಕ್ಕೆ ನಿರ್ದಿಷ್ಟ ಕಾರಣನೀಡುವುದಿಲ್ಲ.

ದೇಶದ ಆಂತರಿಕ ಭದ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಏನನ್ನೂ ಆರೆಸ್‌‍ಎಸ್‌‍ ಎಂದಿಗೂ ಮಾಡಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವುದು ಮತ್ತು ಅದನ್ನು ಏಕರೂಪ ಮತ್ತು ಸ್ವಾಭಿಮಾನಿಯನ್ನಾಗಿ ಮಾಡುವುದು ಸಂಘದ ಉದ್ದೇಶವಾಗಿದೆ. ಸಂಘವು ಎಂದಿಗೂ ಹಿಂಸಾಚಾರದಲ್ಲಿ ತೊಡಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಅವಶ್ಯಕ. ಹಿಂಸೆಯನ್ನು ಎಂದೂ ಕಲಿಸಿಲ್ಲ. ಸಂಘವು ಅಂತಹ ವಿಷಯಗಳನ್ನು ನಂಬುವುದಿಲ್ಲ ಎಂದು ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದರು. ಹಲವಾರು ಸುತ್ತಿನ ಮಾತುಕತೆಗಳ ನಂತರ, ತುರ್ತು ಪರಿಸ್ಥಿತಿ ಕೊನೆಗೊಂಡಾಗ ಮಾರ್ಚ್‌ 22, 1977 ರಂದು ಆರೆಸ್ಸೆಸ್‌‍ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಲಾಯಿತು.

ಬಾಬರಿ ಮಸೀದಿ ಧ್ವಂಸ
ಇದೆಲ್ಲ ಮುಗಿದ ಬಳಿಕ 1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಸಂಭವಿಸಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.ಈ ವೇಳೆ ಪಿವಿ ನರಸಿಂಹ ರಾವ್‌ ಅವರು ದೇಶದ ಪ್ರಧಾನಿಯಾಗಿದ್ದರು. ಶಂಕರರಾವ್‌ ಬಲವಂತರಾವ್‌ ಚವಾಣ್‌ ಅವರು ಅಂದಿನ ಗೃಹ ಸಚಿವರಾಗಿದ್ದರು. ಈ ವೇಳೆ ಆರೆಸ್‌‍ಎಸ್‌‍ ಅನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು.ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಡಿಸೆಂಬರ್‌ 6, 1992 ರಂದು ಕೆಡವಲಾಯಿತು.ನ್ಯಾಯಮೂರ್ತಿ ಬಹ್ರಿ ಆಯೋಗವು ಅನ್ಯಾಯ ಎಂದು ಹೇಳಿದ ನಂತರ ಜೂನ್‌ 4, 1993 ರಂದು ಮೂರನೇ ನಿಷೇಧವನ್ನು ತಿಂಗಳೊಳಗೆ ತೆಗೆದುಹಾಕಿತು.

ಡ್ರಾಪ್‌ ನೆಪದಲ್ಲಿ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರ ಬಂಧನ

ಬೆಂಗಳೂರು, ಅ.13-ಡ್ರಾಪ್‌ ಕೊಡುವ ನೆಪದಲ್ಲಿ ಯುವತಿಯನ್ನು ಪುಸಲಾಯಿಸಿ ಬೈಕ್‌ನಲ್ಲಿ ಹತ್ತಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಇಬ್ಬರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಮೆಕ್ಯಾನಿಕ್‌ ಸಿಕಂದರ್‌ಬಾಬಾ (30) ಮತ್ತು ಗುಜರಿ ವ್ಯಾಪಾರಿ ಜನಾರ್ಧನಾಚಾರಿ (31) ಬಂಧಿತ ಆರೋಪಿಗಳು.

ಸಂತ್ರಸ್ತ ಯುವತಿ ಕೆಲಸ ಹುಡುಕಿಕೊಂಡು ಮಂಜೇನಹಳ್ಳಿಯಿಂದ ಚಿಕ್ಕಬಳ್ಳಾಪುರ ನಗರಕ್ಕೆ ಬಂದಿದ್ದಳು. ಬಳಿಕ ವಾಪಸ್‌‍ ನಡೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಬೈಕ್‌ ಸವಾರ ಸಿಕಂದರ್‌ ಎದುರಾಗಿದ್ದಾನೆ.ಯುವತಿಯನ್ನು ಪುಸಲಾಯಿಸಿ ಡ್ರಾಪ್‌ಕೊಡುವುದಾಗಿ ಹೇಳಿ ಆಕೆಯನ್ನು ಬೈಕ್‌ನಲ್ಲಿ ಹತ್ತಿಸಿಕೊಂಡ ಆತ ಮಾರ್ಗಮಧ್ಯೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದಾನೆ.

ಬಳಿಕ ಆತ ಚಿಕ್ಕಬಳ್ಳಾಪುರಕ್ಕೆ ಹೋಗಿ ಸ್ನೇಹಿತ ಜನಾರ್ಧನ್‌ನನ್ನು ಕರೆದುಕೊಂಡು ನಿರ್ಜನ ಪ್ರದೇಶಕ್ಕೆ ಬಂದು ಇಬ್ಬರು ಸೇರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆೆ. ನಂತರ ಆಕೆಯ ಬಂಗಾರದ ಓಲೆ ಕಸಿದುಕೊಂಡು ನಿರ್ಜನ ಪ್ರದೇಶದಿಂದ ಆಕೆಯನ್ನು ಸಮೀಪದಲ್ಲಿದ್ದ ಪೆಟ್ರೋಲ್‌ ಬಂಕ್‌ ಬಳಿ ಬಿಟ್ಟು ಹೋಗಿದ್ದಾರೆ.

ಯುವತಿಗೆ ದಿಕ್ಕುತೋಚದಂತಾಗಿ ಯುವತಿ ಅಲ್ಲೇ ಕುಳಿತಿದ್ದಾಳೆ. ಯುವತಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ನಂತರ ಮಹಿಳಾ ಪೊಲೀಸ್‌‍ ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳಾ ಠಾಣೆ ಪೊಲೀಸರು ಆಕೆಯನ್ನು ವಿಚಾರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಆರ್‌ಎಸ್‌‍ಎಸ್‌‍ನ ನೋದಣಿ ದಾಖಲೆಪತ್ರಗಳನ್ನು ಬಹಿರಂಗ ಪಡಿಸುವಂತೆ ಪ್ರಿಯಾಂಕ್‌ ಖರ್ಗೆ ಸವಾಲು

ಬೆಂಗಳೂರು, ಅ.13- ಆರ್‌ಎಸ್‌‍ಎಸ್‌‍ ದೊಣ್ಣೆ ಹಿಡಿದು ಪಥಸಂಚಲನ ನಡೆಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ಖರ್ಗೆ ಆರ್‌ಎಸ್‌‍ಎಸ್‌‍ನ ನೋದಣಿ ದಾಖಲೆಪತ್ರಗಳನ್ನು ಬಹಿರಂಗ ಪಡಿಸುವಂತೆ ಸವಾಲು ಹಾಕಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌‍ಎಸ್‌‍ ಸ್ವಯಂಸೇವಕ ಸಂಘವಾಗಿದ್ದರೆ, ಅದರ ನೋಂದಣಿ ಪತ್ರವನ್ನು ತೋರಿಸಲಿ, ಅವರಿಗೆ ಯಾವ ಮೂಲದಿಂದ ಹಣ ಬರುತ್ತದೆ. 300, 400 ಕೋಟಿ ರೂ. ಗಳಷ್ಟು ಆಸ್ತಿಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಆರ್‌ ಎಸ್‌‍ ಎಸ್‌‍ ಸರ್ಕಾರಿ ಜಾಗದಲ್ಲಿ ಆರ್‌ಎಸ್‌‍ಎಸ್‌‍ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಬರೆದಿರುವ ಪತ್ರವನ್ನು ಸಮರ್ಥಿಸಿಕೊಂಡ ಅವರು, ನಾನು ಆರ್‌ಎಸ್‌‍ಎಸ್‌‍ ಅನ್ನು ನಿಷೇಧಿಸಬೇಕೆಂದು ಹೇಳಿಲ್ಲ. ನನ್ನ ಪಕ್ಷವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿ ಎಂದರು.

ಮೋಸ್ಟ್‌ ಸೀಕ್ರೇಟ್‌ ಆರ್ಗನೈಸೇಷನ್‌ ಆರ್‌ ಎಸ್‌‍ ಎಸ್‌‍ ಆಗಿದ್ದು, ಬಿಜೆಪಿ ಆರ್‌ ಎಸ್‌‍ ಎಸ್‌‍ನ ಕೈಗೊಂಬೆಯಾಗಿದೆ. ಆರ್‌ಎಸ್‌‍ಎಸ್‌‍ ಇಲ್ಲದೆ ಬಿಜೆಪಿ ಶೂನ್ಯ. ಧರ್ಮ ಇಲ್ಲದೆ ಆರ್‌ ಎಸ್‌‍ ಎಸ್‌‍ ಶೂನ್ಯ. ನಾನು ಒಬ್ಬ ಹಿಂದು. ಹಿಂದೂ ಧರ್ಮದ ವಿರೋಧಿ ಅಲ್ಲ. ಆದರೆ ಆರ್‌ ಎಸ್‌‍ ಎಸ್‌‍ ನ ವಿರೋಧಿ. ಕರಾವಳಿ, ಮಲೆನಾಡಿನಲ್ಲಿ ಯಾರು ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಪರಿಶೀಲಿಸಿದರೆ ವಾಸ್ತವಾಂಶ ತಿಳಿಯಲಿದೆ ಎಂದರು.

ಚುನಾವಣೆ ಬಂದಾಗ ಗಣವೇಶ ಹಾಕುತ್ತಾರೆ. ನಿನ್ನೆ ಮುನಿರತ್ನ ಅವರು ಗಣವೇಶ ಹಾಕಿದ್ದರು. ಗಾಂಧೀಜಿಯವರ ಫೋಟೋ ಹಿಡಿದಿದ್ದರು. ಅವರಿಗೆ ಇತಿಹಾಸವೇ ಗೊತ್ತಿಲ್ಲ, ಗಾಂಧಿಜೀ ಕೊಂದವರು ಅವರ ಫೋಟೋ ಹಿಡಿದಿದ್ದಾರೆ. ನಮಲ್ಲಿ ಒಡಕು ಸೃಷ್ಠಿಮಾಡುವುದು ಅವರ ಉದ್ದೇಶ ಎಂದು ಆಕ್ಷೇಪಿಸಿದರು.

ಬೇರೆ ಸಂಘಟನೆಗಳು ದೊಣ್ಣೆ ಹಿಡಿದು ಓಡಾಡಿದರೆ ಒಪ್ಪುತ್ತಾರೆಯೇ? ದಲಿತ, ಹಿಂದುಳಿದ ಸಂಘಟನೆಗಳು ದುಣ್ಣೆ ಹಿಡಿದರೆ ಹಿಂಸೆಗೆ ಪ್ರಚೋದನೆ ಎಂದು ಗೂಗಾಡುತ್ತಾರೆ. ಅವರು ಮಾತ್ರ ದೊಣ್ಣೆ ಹಿಡಿದು ಪಥಸಂಚಲನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು. ಶಾಲೆಗಳಲ್ಲಿ ಆರ್‌ಎಸ್‌‍ಎಸ್‌‍ನವರಿಂದ ಬ್ರೈನ್‌ ವಾಷಿಂಗ್‌ ನಿಲ್ಲಬೇಕು. ಸರ್ದಾರ್‌ ಪಟೇಲ್‌ ಆರ್‌ಎಸ್‌‍ಎಸ್‌‍ ನಿಷೇಧ ಮಾಡಿದ್ದರು. ಇತಿಹಾಸದ ಪುಟವನ್ನ ತಿರುಗಿಸಿ ಆರ್‌ಎಸ್‌‍ಎಸ್‌‍ ಓದಲಿ, ಸಂಘದವರು ಬಂದು ಪಟೇಲರ ಕೈ ಕಾಲಿಗೆ ಬಿದ್ದಿದ್ದರು. ನಾವು ಕೇಂದ್ರದ ನಿಯಮಗಳನ್ನು ಪಾಲಿಸುತ್ತೇವೆ. ನಮ ನಿಯತ್ತು ರಾಷ್ಟ್ರ ಧ್ವಜಕ್ಕೆ ಇರುತ್ತದೆ ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದರಿಂದ ನಿಷೇಧ ವಾಪಸ್‌‍ ಆಗಿದೆ ಎಂದರು.

ನಿಮ ಮನೆಯಲ್ಲಿ ಧರ್ಮ ಆಚರಣೆ ಮಾಡಿ ಯಾರು ಬೇಡ ಎನ್ನುವುದಿಲ್ಲ, ಬಡವರ ಮಕ್ಕಳ ಬದುಕನ್ನು ಹಾಳುಮಾಡಬೇಡಿ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮಕ್ಕಳು ಗಣವೇಶ ಹಾಕಲಿ, ಅವರ ಮಕ್ಕಳಿಗೆ ಒಂದು ನಿಯಮ, ಬಡವರ ಮಕ್ಕಳಿಗೆ ಒಂದು ನಿಯಮ ಯಾಕೆ? ಎಂದು ಪ್ರಶ್ನಿಸಿದರು.

ಜೋಶಿ, ಅಶೋಕ, ಠಾಕೂರ್‌ ಅವರ ಮಕ್ಕಳಿಗೆ ಗಣವೇಶ ಹಾಕಿಸಲಿ, ದೆಹಲಿಯ ಸಂಪುಟ ಸಚಿವರ ಮಕ್ಕಳು ಏನು ಮಾಡುತ್ತಿದ್ದಾರೆ? ಇವರ ಮಕ್ಕಳೆಲ್ಲ ಏಕೆ ಗಣವೇಶ ಹಾಕುವುದಿಲ್ಲ. ಇವರ ಮಕ್ಕಳಿಗೆಲ್ಲ ಏಕೆ ಗೋಮೂತ್ರ ಕುಡಿಸುವುದಿಲ್ಲ. ಇವರ ಮಕ್ಕಳು ಏಕೆ ಗಂಗೆಯಲ್ಲಿ ಮುಳಗೇಳುವುದಿಲ್ಲ. ಇವರ ಮಕ್ಕಳು ಏಕೆ ಗೋ ರಕ್ಷಣೆಗೆ ಹೋಗಲ್ಲ ಎಂಬುದಕ್ಕೆ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.

ಕರೂರು ಕಾಲ್ತುಳಿತ ಪ್ರಕರಣದ ಕುರಿತು ಸಿಬಿಐ ತನಿಖೆ ಮೇಲುಸ್ತುವಾರಿಗೆ ಸಮಿತಿ ನೇಮಕ ಮಾಡಿದ ಸುಪ್ರೀಂ

ನವದೆಹಲಿ, ಅ.13– ತಮಿಳುನಾಡಿನ ಸೂಪರ್‌ ಸ್ಟಾರ್‌ ವಿಜಯ್‌ ಭಾಷಣದ ವೇಳೆ ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 41 ಅಮಾಯಕರು ಪ್ರಾಣ ಕಳೆದುಕೊಂಡ ಘಟನೆ ಸತ್ಯಾಸತ್ಯತೆ ಆರಿಯಲು ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿದೆ.

ನ್ಯಾಯಾಧೀಶರಾದ ಜೆ ಕೆ ಮಹೇಶ್ವರಿ ಮತ್ತು ಎನ್‌ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು ಸಿಬಿಐ ತನಿಖೆಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಅಜಯ್‌ ರಸ್ತೋಗಿ ಅವರನ್ನು ನೇಮಿಸಿದೆ.
ತಮಿಳು ನಟ ವಿಜಯ್‌ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ ಮತ್ತು ಇತರರು ಸಲ್ಲಿಸಿದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್‌ ಅಕ್ಟೋಬರ್‌ 10 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು.

ಸೆಪ್ಟೆಂಬರ್‌ 27 ರ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ನಿರಾಕರಿಸಿದ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಬಿಜೆಪಿ ನಾಯಕಿ ಉಮಾ ಆನಂದನ್‌ ಸಲ್ಲಿಸಿದ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಸಿಜೆಐ ನೇತೃತ್ವದ ಪೀಠ ಒಪ್ಪಿಕೊಂಡಿತು.

ತಮಿಳುನಾಡಿನ ಬಿಜೆಪಿ ನಾಯಕ ಜಿ ಎಸ್‌‍ ಮಣಿ ಕೂಡ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.ಟಿವಿಕೆ ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆಯನ್ನು ಕೋರಿದೆ, ತಮಿಳುನಾಡು ಪೊಲೀಸ್‌‍ ಅಧಿಕಾರಿಗಳು ಮಾತ್ರ ನಡೆಸಿದರೆ ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ವಾದಿಸಿದೆ.

ತಮಿಳುನಾಡು ಪೊಲೀಸ್‌‍ ಅಧಿಕಾರಿಗಳನ್ನು ಮಾತ್ರ ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌‍ಐಟಿ) ರಚಿಸುವಂತೆ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಟಿವಿಕೆ ತನ್ನ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು.

ಕೆಲವು ದುಷ್ಕರ್ಮಿಗಳು ಪೂರ್ವ ಯೋಜಿತ ಪಿತೂರಿಯಿಂದ ಕಾಲ್ತುಳಿತಕ್ಕೆ ಕಾರಣರಾಗಿದ್ದಾರೆ ಎಂದು ಅದು ಆರೋಪಿಸಿದೆ.ಘಟನೆಯ ನಂತರ ಪಕ್ಷ ಮತ್ತು ನಟ-ರಾಜಕಾರಣಿ ಸ್ಥಳದಿಂದ ಹೊರಟು ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ ಎಂಬ ಹೈಕೋರ್ಟ್‌ನ ಕಟುವಾದ ಹೇಳಿಕೆಯನ್ನು ಸಹ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಈ ಹಿಂದೆ, ರ್ಯಾಲಿಯಲ್ಲಿ 27,000 ಜನರು ಭಾಗವಹಿಸಿದ್ದರು, ಇದು ನಿರೀಕ್ಷಿತ 10,000 ಭಾಗವಹಿಸುವವರ ಸಂಖ್ಯೆಗಿಂತ ಸುಮಾರು ಮೂರು ಪಟ್ಟು ಹೆಚ್ಚು, ಮತ್ತು ದುರಂತಕ್ಕೆ ವಿಜಯ್‌ ಸ್ಥಳವನ್ನು ತಲುಪುವಲ್ಲಿ ಏಳು ಗಂಟೆಗಳ ವಿಳಂಬವೂ ಕಾರಣವಾಗಿತ್ತು ಎಂದು ಪೊಲೀಸರು ದೂಷಿಸಿದ್ದರು.

ಕರ್ನಾಟಕ ಅಧೋಗತಿಗೆ ತಲುಪಿದೆ ಎಂಬುದಕ್ಕೆ ದೇಶಪಾಂಡೆ ಅವರ ಹೇಳಿಕೆಯೇ ಸಾಕ್ಷಿ : ಆರ್‌ ಅಶೋಕ್‌

ಬೆಂಗಳೂರು,ಅ.13- ಗ್ಯಾರೆಂಟಿಗಳಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಕಾಂಗ್ರೆಸ್‌‍ ಹಿರಿಯ ನಾಯಕ ಆರ್‌.ವಿ.ದೇಶಪಾಂಡೆ ಹೇಳಿರುವುದು ರಾಜ್ಯ ಸರ್ಕಾರದ ಅವೈಜ್ಞಾನಿಕ ನೀತಿಗಳು ರಾಜ್ಯವನ್ನು ಹೇಗೆ ಅಧೋಗತಿಗೆ ತಳ್ಳಿದೆ ಎನ್ನುವುದಕ್ಕೆ ಮತ್ತೊಮೆ ಕನ್ನಡಿ ಹಿಡಿದಿದಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಸರ್ಕಾರದ ವಿರುದ್ದ ಸಾಲು ಸಾಲು ಪೋಸ್ಟ್‌ ಮಾಡಿ ಆಕ್ರೋಶ ಹೊರಹಾಕಿರುವ ಅವರು, ಇನ್ನೆಷ್ಟು ದಿನ ಈ ಭಂಡ ಬಾಳು ಸಿ.ಎಂ ಸಿದ್ದರಾಮಯ್ಯನವರೇ? ಸಾಕು ನಿಮ ದುರಾಡಳಿತ. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಟೀಕಾ ಪ್ರಹಾರ ನಡೆಸಿದ್ದಾರೆ.

ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವ ಹಪಹಪಿಯಿಂದ ಬೇಕಾಬಿಟ್ಟಿ ಗ್ಯಾರೆಂಟಿ ಯೋಜನೆಗಳನ್ನು ಮಾಡಿದ ಕಾಂಗ್ರೆಸ್‌‍ ಪಕ್ಷಕ್ಕೆ ಈಗ ಗ್ಯಾರೆಂಟಿಗಳು ಬಿಸಿ ತುಪ್ಪವಾಗಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸರ್ಕಾರ ಪಾಪರ್‌ ಆಗಿದೆ ಎನ್ನುವ ಕೂಗು ಕಾಂಗ್ರೆಸ್‌‍ ಪಕ್ಷದಲ್ಲೇ ಏಳುತ್ತಿದ್ದು ಈ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಸರ್ಕಾರದ ಬಳಿ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ಒಪ್ಪಿಕೊಂಡಿದ್ದರು. ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ರಸ್ತೆ ಬೇಕು ಅಂದರೆ ಗ್ಯಾರೆಂಟಿ ಸ್ಕೀಮ್‌ ಬಂದ್‌ ಮಾಡಬೇಕಾಗುತ್ತದೆ ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಟ್ಟಿದ್ದಾರೆ.

ಈಗ ಕಾಂಗ್ರೆಸ್‌‍ ಪಕ್ಷದ ಅತ್ಯಂತ ಹಿರಿಯ ಶಾಸಕರು, ಮಾಜಿ ಸಚಿವರಾದ ಆರ್‌.ವಿ.ದೇಶ್‌ಪಾಂಡೆ ಅವರು ನಾನು ಮುಖ್ಯಮಂತ್ರಿ ಆಗಿದ್ದರೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡುತ್ತಿರಲಿಲ್ಲ ಎಂದು ಹೇಳಿರುವುದು ಸಿಎಂ ಅವರು ಎಷ್ಟು ಅಸಮರ್ಥ ಮುಖ್ಯಮಂತ್ರಿ ಎನ್ನುವುದನ್ನ ಮತ್ತೊಮೆ ಸಾಬೀತು ಮಾಡಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕಾಂಗ್ರೆಸ್‌‍ ಸರ್ಕಾರದ ರಾಜಕೀಯ ತೆವಲಿಗೆ ಇಡೀ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದ್ದು, ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ ದಿನನಿತ್ಯದ ಕೆಲಸಗಳಿಗಾಗಿ ಪಡದಾಡುವ ಎದುರಾಗಿದೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಶಾಲೆಗಳಲ್ಲಿ ಶಿಕ್ಷಕರಿಲ್ಲ, ಬೆಸ್ಕಾಂ, ಬಿಡಬ್ಲುಎಸ್‌‍ ಎಸ್‌‍ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ.ಆರ್‌ ಟಿಒ ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲ. ಸಿಎಂ ಸಿದ್ದರಾಮಯ್ಯ ನವರೇ, ತಮ ಕುರ್ಚಿ ಉಳಿಸಿಕೊಳ್ಳುವ ನಾಟಕಕ್ಕೆ ಕನ್ನಡಿಗರು ಶಿಕ್ಷೆ ಅನುಭವಿಸುತ್ತಿದ್ದಾರೆ. ಡಿನ್ನರ್‌ ಮೀಟಿಂಗ್‌ ಮಾಡುವ ಬದಲು ಒಮೆ ಬೀದಿಗಿಳಿದು ಜನರ ಅಭಿಪ್ರಾಯ ಕೇಳಿ. ಜನ ತಮ ಕಾಂಗ್ರೆಸ್‌‍ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೊಂದು ಪೋ ಸ್ಟ್‌ನಲ್ಲಿ ಮತ್ತೊಮೆ ಸಾರಿಗೆ ಮುಷ್ಕರದ ಬರೆ!ಕಾಂಗ್ರೆಸ್‌‍ ಸರ್ಕಾರದಿಂದ ಕನ್ನಡಿಗರಿಗೆ ದೀಪಾವಳಿ ಉಡುಗೊರೆ!ಈ ಬಾರಿ ದೀಪಾವಳಿ ಹಬ್ಬಕ್ಕೆ ಜನಸಾಮಾನ್ಯರು ಊರಿಗೆ ಹೋಗಲು ಬಸ್ಸಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಎಂದು ಎಚ್ಚರಿಸಿದ್ದಾರೆ.

ತಮ ಬೇಡಿಕೆ ಈಡೇರಿಸದಿದ್ದರೆ ಮತ್ತೊಮೆ ಅಕ್ಟೋಬರ್‌ 15ರಿಂದ ಮುಷ್ಕರ ನಡೆಸುವುದಾಗಿ ಸಾರಿಗೆ ನಿಗಮಗಳ ನೌಕರರು ಎಚ್ಚರಿಕೆ ನೀಡಿದ್ದು, ಕಾಂಗ್ರೆಸ್‌‍ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ಬಸ್ಸುಗಳ ನಿರ್ವಹಣೆಗೂ ದುಡ್ಡಿಲ್ಲ. ಸಾರಿಗೆ ನೌಕರರ ಸಂಬಳ, ಹಿಂಬಾಕಿ ಪಾವತಿಗೂ ದುಡ್ಡಿಲ್ಲ. ಬಸ್‌‍ ನಿಲ್ದಾಣಗಳ ನಿರ್ವಹಣೆಗೂ ದುಡ್ಡಿಲ್ಲ. ಒಟ್ಟಿನಲ್ಲಿ ಪಾಪರ್‌ ಕಾಂಗ್ರೆಸ್‌‍ ಸರ್ಕಾರದ ದುರಾಡಳಿತದಿಂದ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಯಾವುದಕ್ಕೂ ದುಡ್ಡಿಲ್ಲ ಎನ್ನುವ ದುಸ್ಥಿತಿ ಎದುರಾಗಿದೆ ಎಂದು ಆರೋಪ ಮಾಡಿದ್ದಾರೆ.

ಖಾಸಗಿ ಶಾಲೆಯ ಮಕ್ಕಳು ದಸರಾ ರಜೆ ನಂತರ ಶಾಲೆಗೆ ಮರಳಿ ಪಾಠ, ಕಲಿಕೆಯಲ್ಲಿ ತೊಡಗಿದ್ದರೆ ಸರ್ಕಾರಿ ಶಾಲೆಯ ಮಕ್ಕಳು ಪಾಠವಿಲ್ಲದೆ ಸೊರಗುತ್ತಿದ್ದಾರೆ. ಸಿದ್ದರಾಮಯ್ಯ ನವರೇ, ತಮ ರಾಜಕೀಯ ತೆವಲಿಗೆ ಪಾಪ ಸರ್ಕಾರಿ ಶಾಲೆಯ ಬಡ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ. ಎಸೆಸೆಲ್ಸಿಯಂತಹ ನಿರ್ಣಾಯಕ ಘಟ್ಟದಲ್ಲಿರುವ ವಿದ್ಯಾರ್ಥಿಗಳು ಒಂದು ತಿಂಗಳು ಶಾಲೆಯಿಂದ ಹೊರಗೆ ಉಳಿದರೆ ಅವರ ಕಲಿಕಾ ಮಟ್ಟದ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ? ಇದು ಅವರ ಫಲಿತಾಂಶದ ಮೇಲೆ ಪರಿಣಾಮ ಬೀರಿದರೆ ಅವರ ಭವಿಷ್ಯಕ್ಕೆ ಪೆಟ್ಟು ಬೀಳುವುದಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಿಮ ರಾಜಕೀಯ ತೆವಲಿಗೆ ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ಎಸೆಸೆಲ್ಸಿ ಶಿಕ್ಷಕರಿಗೆ ಸಮೀಕ್ಷೆಯಿಂದ ವಿನಾಯಿತಿ ನೀಡಿ ಈ ಕೂಡಲೇ ಶಾಲೆ ಪುನರಾರಂಭಿಸಿ. ನಿಮ ಕುರ್ಚಿ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಪೂರ್ವಸಿದ್ಧತೆ ಇಲ್ಲದ ತರಾತುರಿಯ ಕುರ್ಚಿ ಬಚಾವೋ ಜಾತಿಗಣತಿ ಸಮೀಕ್ಷೆಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಿ ಒಂದು ತಿಂಗಳು ಸರ್ಕಾರಿ ಶಾಲೆಗಳಿಗೆ ಬೀಗ ಜಡಿದು ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದಾಯ್ತು, ಈಗ ಅಂಗನವಾಡಿ ಕಾರ್ಯಕತೆಯರನ್ನೂ ಸಮೀಕ್ಷೆ ಕಾರ್ಯಕ್ಕೆ ನಿಯೋಜನೆ ಮಾಡಿ ಹಳ್ಳಿಗಾಡಿನ ಬಡ ಮಕ್ಕಳ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದೆ/ಈ ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರ.

ಸಿದ್ದರಾಮಯ್ಯ ನವರೇ, ನಿಮ ಜಾತಿಗಣತಿ ನಾಟಕದಿಂದ ಸಾರ್ವಜನಿಕರಿಗೆ ಎಷ್ಟು ತಿಂದರೆ ಆಗುತ್ತಿದೆ ಎನ್ನುವ ಬಗ್ಗೆ ನಿಮಗೆ ಅರಿವೇ ಇಲ್ಲ. ನಿಮಗೆ ಕುರ್ಚಿ ಉಳಿಸಿಕೊಳ್ಳುವ ಹಠ, ಕನ್ನಡಿಗರಿಗೆ ಪರದಾಟ. ನಿಮ ನಾಲಾಯಕ್‌ ಸರ್ಕಾರ ಯಾವಾಗ ತೊಲಗುತ್ತೋ ಎಂದು ಕನ್ನಡಿಗರು ಎದುರು ನೋಡುತ್ತಿದ್ದಾರೆ ಎಂದು ಅಶೋಕ್‌ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಲಾಲೂ ಕುಟುಂಬಕ್ಕೆ ಮತ್ತೆ ಕಂಟಕ

ನವದೆಹಲಿ, ಅ.13- ಬಿಹಾರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಲಾಲೂ ಕುಟುಂಬಕ್ಕೆ ಮತ್ತೆ ಕಂಟಕ ಎದುರಾಗಿದೆ.ಐಆರ್‌ಸಿಟಿಸಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಕುಟುಂಬದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ದೆಹಲಿ ನ್ಯಾಯಲಯ ಇಂದು ಆದೇಶ ಹೊರಡಿಸಿದೆ.

ಲಾಲೂ ಅವರ ಪತ್ನಿ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಪುತ್ರ ತೇಜಸ್ವಿ ಯಾದವ್‌ ವಿರುದ್ಧ ಆರೋಪಗಳನ್ನು ರೂಪಿಸಲು ದೆಹಲಿ ನ್ಯಾಯಾಲಯ ಆದೇಶಿಸಿದೆ.

ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಸಾರ್ವಜನಿಕ ಸೇವಕನ ಕ್ರಿಮಿನಲ್‌ ದುರ್ನಡತೆ ಮತ್ತು ವಂಚನೆಗೆ ಕ್ರಿಮಿನಲ್‌ ಪಿತೂರಿ ಆರೋಪ ಹೊರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ, ಆದರೆ ರಾಬ್ಡಿ ದೇವಿ ಮತ್ತು ತೇಜಸ್ವಿ ಯಾದವ್‌ ವಿರುದ್ಧ ವಂಚನೆ ಮತ್ತು ವಂಚನೆಗೆ ಪಿತೂರಿ ಆರೋಪಗಳನ್ನು ಎದುರಿಸಬೇಕಾಗುತ್ತದೆ.

ಭಾರೀ ಕುತೂಹಲ ಕೆರಳಿಸಿದೆ ಸಿಎಂ ಸಿದ್ದರಾಮಯ್ಯ ಆಯೋಜಿಸಿರುವ ಸಚಿವರ ಔತಣಕೂಟ

ಬೆಂಗಳೂರು, ಸ.13- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವುದು, ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆ ಹಾಗೂ ಸಚಿವ ಸಂಪುಟ ಪುನರ್‌ರಚನೆಯ ಕಾರಣಕ್ಕಾಗಿ ಇಂದು ಸಂಜೆ ನಡೆಯಲಿರುವ ಸಚಿವರ ಔತಣಕೂಟ ಭಾರೀ ಕುತೂಹಲ ಕೆರಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಎಲ್ಲಾ ಸಚಿವರಿಗೂ ತಪ್ಪದೇ ಔತಣಕೂಟದಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಯವರು ಇಂದು ಧಾರವಾಡ, ಬಾಗಲಕೋಟೆ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಸಂಜೆ ನಗರಕ್ಕೆ ವಾಪಸ್‌‍ ಆಗಲಿದ್ದಾರೆ.

ಈಗಾಗಲೇ ನಿಗದಿತ ಕಾರ್ಯಸೂಚಿಗಳು ಸಿದ್ಧವಾಗಿದ್ದು, ಅದರಂತೆ ಊಟದ ಜೊತೆ ಚರ್ಚೆಗಳು ನಡೆಯಲಿವೆ. ಪ್ರಮುಖವಾಗಿ ರಾಜ್ಯದಲ್ಲಿ ಕೋಮು ಸೌರ್ಹಾಧತೆಯನ್ನು ಹದಗೆಡಿಸಲು ವಿರೋಧ ಪಕ್ಷಗಳು ನಡೆಸುತಿರುವ ನಿರಂತರವಾದ ಸಂಚನ್ನು ಹತ್ತಿಕ್ಕುವುದು, ಇತ್ತೀಚಿನ ದಿನಗಳಲ್ಲಿ ಕೆಲವು ಇಲಾಖೆಗಳಲ್ಲಿನ ಕಾಮಗಾರಿ ಬಿಲ್‌ಗಳನ್ನು ಪಾವತಿಸಲು ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಆರೋಪಗಳು ತೀವ್ರವಾಗಿ ಕೇಳಿ ಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಅವರು ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಗ್ರೀಟರ್‌ ಬೆಂಗಳೂರಿನ 5 ಮಹಾನಗರ ಪಾಲಿಕೆಗಳು, ವಿವಿಧ ನಗರ ಸಭೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೈಕಿ ಜಿಲ್ಲಾ ಪಂಚಾಯತ್‌, ತಾಲ್ಲೂಕು ಪಂಚಾಯತ್‌ ಚುನಾವಣೆಗಳು ರಾಜ್ಯ ಸರ್ಕಾರಕ್ಕೆ ಸವಾಲಿನ ಸನ್ನಿವೇಶ ಸೃಷ್ಟಿಸಿವೆ.

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಚಿವರಿಗೂ ನಿರ್ಧಿಷ್ಟ ಜವಾಬ್ದಾರಿಗಳನ್ನು ಹಂಚಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸ್ಥಳೀಯ ಸಂಸ್ಥೆಗಳು ಪಕ್ಷದ ತಳಪಾಯವಾಗಿದ್ದು, ಕೆಳ ಹಂತದ ನಾಯಕತ್ವವನ್ನು ಬೆಳೆಸಲು ಹೆಚ್ಚು ಮಹತ್ವ ಪಡೆದುಕೊಂಡಿದೆ. ಹೀಗಾಗಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ತೆಗೆದುಕೊಂಡು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಚಿವರ ವಿಶ್ವಾಸದೊಂದಿಗೆ ಚುನಾವಣಾ ರಣತಂತ್ರವನ್ನು ರೂಪಿಸಬೇಕು. ಅಭ್ಯರ್ಥಿಗಳ ಅಯ್ಕೆ ಸಂದರ್ಭದಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಬಣ ನಾಯಕತ್ವ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಮಾಡುತ್ತಿದ್ದು ಕೆಲ ಸಚಿವರು ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತಿವೆ. ಯಾವುದೇ ಹಂತದಲ್ಲೂ ಸಚಿವರು ಅಧಿಕಾರ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಬಾರದು. ಅಭಿವೃದ್ಧಿ ಕಾರ್ಯಗಳತ್ತ ಮಾತ್ರ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಲಿದ್ದಾರೆ.

ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ನವೆಂಬರ್‌ ಬಳಿಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಹೈಕಮಾಂಡ್‌ ಸೂಚಿಸಿದರೆ ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ವ್ಯತಿರಿಕ್ತ ರಾಜಕೀಯ ಮಾಡಬಾರದು. ಈವರೆಗೂ ಅಧಿಕಾರ ಅನುಭವಿಸಿದವರೂ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜಕೀಯಕ್ಕಿಂತ ಸಿನಿಮಾರಂಗವೇ ಬೆಸ್ಟ್‌ ; ಕೇಂದ್ರ ಸಚಿವ ಸುರೇಶ್‌ ಗೋಪಿ

ಕಣ್ಣೂರು, ಅ.13- ರಾಜಕಾರಣಕ್ಕೆ ಗುಡ್‌ಬೈ ಹೇಳಿ ಮತ್ತೆ ಸಿನಿಮಾರಂಗಕ್ಕೆ ವಾಪಸ್‌‍ ಹೋಗುವುದಾಗಿ ಕೇಂದ್ರ ಸಚಿವ ಸುರೇಶ್‌ ಗೋಪಿ ಹೇಳಿಕೊಂಡಿದ್ದಾರೆ.ಆರ್ಥಿಕ ಸಂಕಷ್ಟವನ್ನು ಉಲ್ಲೇಖಿಸಿ, ಕೇಂದ್ರ ಸಚಿವ ಸುರೇಶ್‌ ಗೋಪಿ ರಾಜಕೀಯದಿಂದ ದೂರ ಸರಿದು ತಮ್ಮ ನಟನಾ ವೃತ್ತಿಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಕೇರಳದ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸಚಿವ ಸ್ಥಾನವನ್ನು ವಹಿಸಿಕೊಂಡಾಗಿನಿಂದ ತಮ್ಮ ಆದಾಯ ಗಮನಾರ್ಹವಾಗಿ ಕುಸಿದಿದೆ ಎಂದು ಹೇಳಿದರು ಎಂದು ವರದಿಯಾಗಿದೆ.

ನಾನು ನಿಜವಾಗಿಯೂ ನಟನೆಯನ್ನು ಮುಂದುವರಿಸಲು ಬಯಸುತ್ತೇನೆ. ನಾನು ಹೆಚ್ಚು ಗಳಿಸಬೇಕಾಗಿದೆ; ನನ್ನ ಆದಾಯವು ಈಗ ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಅವರು ಹೇಳಿದರು. ಗೋಪಿ ರಾಜ್ಯಸಭಾ ಸಂಸದ ಸದಾನಂದನ್‌ ಮಾಸ್ಟರ್‌ ಅವರ ಹೆಸರನ್ನು ಕೇಂದ್ರ ಸಚಿವರಾಗಿ ನೇಮಿಸುವಂತೆ ಪ್ರಸ್ತಾಪಿಸಿದರು ಮತ್ತು ಅವರು ತಮ್ಮ ಪಕ್ಷದ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ ಎಂದು ಹೇಳಿದರು.

ನಾನು ಅಕ್ಟೋಬರ್‌ 2008 ರಲ್ಲಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡೆ .ಜನರು ಆಯ್ಕೆ ಮಾಡಿದ ಮೊದಲ ಸಂಸದರು ಅವರು ಮತ್ತು ಪಕ್ಷವು ನನ್ನನ್ನು ಸಚಿವರನ್ನಾಗಿ ಮಾಡಬೇಕೆಂದು ಭಾವಿಸಿತು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರು ಮತ್ತು ಪ್ರವಾಸೋದ್ಯಮ ಸಚಿವರು ಹೇಳಿದರು.

ಗೋಪಿ ಕೇರಳದಿಂದ ಬಿಜೆಪಿಯ ಮೊದಲ ಲೋಕಸಭಾ ಸಂಸದ ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ದೀರ್ಘಕಾಲದ ನಟ. ರಾಜ್ಯಸಭಾ ಸಂಸದ ಸಿ ಸದಾನಂದನ್‌ ಮಾಸ್ಟರ್‌ ಅವರ ಸಂಸದೀಯ ಕಚೇರಿಯನ್ನು ಉದ್ಘಾಟಿಸಿದ ನಂತರ ಅವರು ಈ ಹೇಳಿಕೆಗಳನ್ನು ನೀಡಿದರು.

ಈ ಹಿಂದೆಯೂ ಗೋಪಿ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ತಮ್ಮ ಸಚಿವ ಸ್ಥಾನದಿಂದ (ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ) ಕೆಳಗಿಳಿಯಲು ಬಯಸುವುದಾಗಿ ಹೇಳಿದ್ದರು, ನಟನೆಯತ್ತ ಅವರ ಒಲವು ಮತ್ತು ವಿವಿಧ ಚಲನಚಿತ್ರ ಯೋಜನೆಗಳಿಗೆ ಹಿಂದಿನ ಬದ್ಧತೆಗಳನ್ನು ಉಲ್ಲೇಖಿಸಿದ್ದರು. ನಟ-ರಾಜಕಾರಣಿಯಾದ ಅವರು 2016 ರಲ್ಲಿ ಬಿಜೆಪಿ ಸೇರಿದರು ಮತ್ತು ಕಲೆಗಳಿಗೆ ನೀಡಿದ ಕೊಡುಗೆಗಾಗಿ ಅದೇ ವರ್ಷ ರಾಜ್ಯಸಭೆಗೆ ನಾಮನಿರ್ದೇಶನಗೊಂಡರು.

2019 ಮತ್ತು 2021 ರಲ್ಲಿ, ಅವರು ಕೇರಳದಲ್ಲಿ ಕ್ರಮವಾಗಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದರು, ಆದರೆ ಎರಡೂ ಸ್ಪರ್ಧೆಗಳಲ್ಲಿ ಸೋತರು. 2024 ರ ಲೋಕಸಭಾ ಚುನಾವಣೆಯಲ್ಲಿ, ಅವರು ತ್ರಿಶೂರ್‌ ಸಂಸದೀಯ ಸ್ಥಾನದಲ್ಲಿ ಸಿಪಿಐನ ವಿ.ಎಸ್‌‍. ಸುನಿಲ್‌ ಕುಮಾರ್‌ ಅವರನ್ನು 74,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಜಯಗಳಿಸಿದರು.ಈ ವರ್ಷದ ಆರಂಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಣ್ಣೂರಿನ ಬಿಜೆಪಿ ಹಿರಿಯ ನಾಯಕ ಸದಾನಂದನ್‌ ಮಾಸ್ಟರ್‌ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರು.

ಹಾಸನಾಂಬೆ ದರ್ಶನ : 4ನೇ ದಿನವೂ ಹರಿದುಬಂದ ಭಕ್ತಸಾಗರ

ಹಾಸನ,ಅ.13- ಹಾಸನಾಂಬ ದರ್ಶದ 4ನೇ ದಿನವಾದ ಇಂದು ಕೂಡ ಭಕ್ತ ಸಾಗರವೇ ಹರಿದುಬಂದಿದ್ದು, ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಭಕ್ತರಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಮದ್ಯರಾತ್ರಿಯಿಂದಲೇ ಸಂತೇಪೇಟೆ ಸರ್ಕಲ್‌ ರಸ್ತೆ ಉದ್ದಕ್ಕೂ ಸಾಲುಗಟ್ಟಿ ಸಹಸ್ರಾರು ಭಕ್ತರು ಸಾಲಿನಲ್ಲಿ ನಿಂತಿದ್ದರು. ಬಳಿಕ ಬೆಳಿಗ್ಗೆ 8ರ ವೇಳೆಗೆ ಸರಾಗವಾಗಿ ಸಾಲು ಕಡಿಮೆಯಾಗಿ ನಂತರವಾಗಿ ಸುಗಮವಾಗಿ ದರ್ಶನ ಸಾಗಿತು.

1 ಸಾವಿರ ರೂ ಹಾಗೂ 300 ರೂ ಪಾಸ್‌‍ ಗಳ ಖರೀದಿ ಸಿ ಆಗಮಿಸುವವರ ಸಂಖ್ಯೆಯೂ ಹೆಚ್ಚಿದ್ದು. ಭಾನುವಾರ ಬೆಳಿಗ್ಗೆ 8 ರ ವೇಳೆಗೆ ಪಾಸ್‌‍ ಹಾಗೂ ಲಾಡೂ ಮಾರಾಟದಿಂದ ದಾಖಲೆಯ 2.24 ಕೋಟಿ ಹಣ ಸಂಗ್ರಹವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿ ಹೇಮಲತಾ ತಿಳಿಸಿದ್ದಾರೆ.

ಹಾಸನಾಂಬ ದರ್ಶನೋತ್ಸವದ ಹಿನ್ನಲೆಯಲ್ಲಿ ಪ್ರತಿವರ್ಷ ಸ್ಕೌಟ್ಸ್ ಗೈಡ್ಸ್ ಮತ್ತು ಎನ್‌ಸಿಸಿ ಶಿಬಿರಾರ್ಥಿಗಳು ಸಕ್ರಿಯವಾಗಿ ಬಾಗವಹಿಸುತ್ತಿದ್ದಾರೆ.ದರ್ಶನಕ್ಕೆ ಆಗಮಿಸೋ ಸಹಸ್ರಾರು ಮಂದಿ ಭಕ್ತರಿಗೆ ಕುಡಿಯಲು ನೀರು ,ಮಜ್ಜಿಗೆ ಒದಗಿಸುವುದು ಮತ್ತು ವೃದ್ದರು ಮತ್ತು ಅಂಗವಿಕಲರು ದೇವಿಯ ದರ್ಶನ ಪಡೆಯಲು ಸಹಾಯ ಹಸ್ತ ಚಾಚುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಗರ ಸೇರಿದಂತೆ ಜಾತ್ರಾ ಮಹೋತ್ಸವ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಗರಪಾ ಲಿಕೆಯ ಪೌರಕಾರ್ಮಿಕರ ಪಾತ್ರವೂ ಹೆಚ್ಚಿದೆ. ಪ್ರತಿ ವರ್ಷದಂತೆ ಈ ಬಾರಿಯೂ ದೇವಾಲಯದ ಸುತ್ತಮುತ್ತ ಹಾಗೂ ಸಾವಿರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಸಾಗುವ ಕಡೆಗಳಲ್ಲಿ ಸ್ವಚ್ಛತೆ ಅತಿ ಮುಖ್ಯವಾಗಿದ್ದು ತಮದೇ ಆದ ಸೇವೆಯನ್ನು ಪ್ರಾಮಾಣಿಕವಾಗಿ ಒದಗಿಸುತ್ತಿದ್ದಾರೆ.

ಹಾಸನಾಂಬ ದೇವಾಲಯದ ಎಡ ಭಾಗದಲ್ಲಿ ನಿಯಂತ್ರಣ ಕೊಠಡಿ ತೆರೆಯಲಾಗಿದ್ದು ಇಲ್ಲಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಅಳವಡಿಸಿರುವ 280 ಸಿಸಿ ಕ್ಯಾಮೆರಾಗಳ ಕಣ್ಗಾವಲು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಭಕ್ತರು,ಅದಿಕಾರಿ, ಸಿಬ್ಬಂಂದಿ ಸೇರಿದಂತೆ ಎಲ್ಲರ ಚಲನವಲನವನ್ನು ಗಮನಿಸಲಾಗುತ್ತಿದೆ ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಕಂದಾಯ ಇಲಾಖೆಯ ಮಾಹಿತಿಯಂತೆ ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ದೇವಾಲಯಕ್ಕೆ ಹರಿದುಬಂದಿರುವ ಒಟ್ಟು ಆದಾಯ 2,24,57,400 ಆಗಿದೆ.

ಕೇವಲ ಮೂರು ದಿನಗಳಲ್ಲಿ ಒಟ್ಟು 2 ಕೋಟಿ 24 ಲಕ್ಷದ 57 ಸಾವಿರದ 400 ರೂಪಾಯಿ ಆದಾಯ ಸಂಗ್ರಹವಾಗಿರುವುದು ದೇವಾಲಯದ ಇತಿಹಾಸದಲ್ಲಿ ಭಾರಿ ದಾಖಲೆಯಾಗಿದೆ. ಭಕ್ತರ ಅಪಾರ ದರ್ಶನದಿಂದ ಜಾತ್ರೆಯು ಯಶಸ್ಸಿನತ್ತ ಸಾಗಿದೆ.ಈ ಬಾರಿ ಅಚ್ಚುಕಟ್ಟಾಗಿ ದರ್ಶನ ನಡೆಯುತ್ತಿದ್ದು, ಯಾರ ಶಿಫಾರಸ್ಸು ನಡೆಯುತ್ತಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಸಹ ಶಿಷ್ಟಾಚಾರ ಪಾಲನೆ ಮಾಡುತ್ತಿದ್ದು, ಟಿಕೆಟ್‌ ಪಡೆದೇ ದರ್ಶನ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ ಮಾಜಿ ಸಚಿವ ರೇವಣ್ಣ ಅವರು ಕುಟುಂಬ ಸಮೇತ ಆಗಮಿಸಿ 1 ಸಾವಿರ ರೂ.ಗಳ ಟಿಕೆಟ್‌ ಪಡೆದು ಸಾಮಾನ್ಯರಂತೆ ದರ್ಶನ ಪಡೆದರು. ಮಾಜಿ ಶಾಸಕ ವೈ.ಎಸ್‌‍.ವಿ.ದತ್ತ ಅವರು ಕೂಡ ದೇವಾಲಯಕ್ಕೆ ಆಗಮಿಸಿ ಟಿಕೆಟ್‌ ಪಡೆದು ದೇವಿ ದರ್ಶನ ಮಾಡಿದರು. ಒಟ್ಟಿನಲ್ಲಿ ಈ ಬಾರಿ ವ್ಯವಸ್ಥಿತವಾಗಿ ಹಾಸನಾಂಬ ದೇವಿ ದರ್ಶನ ನಡೆಯುತ್ತಿದ್ದು, ಭಕ್ತರು ನಿರಾಸದಾಯಕವಾಗಿ ದೇವಿಯ ದರ್ಶನ ಪಡೆದು ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ; ಟ್ರಂಪ್‌

ವಾಷಿಂಗ್ಟನ್‌. ಅ13. ಗಾಜಾದಲ್ಲಿ ಯುದ್ಧ ಅಂತ್ಯಗೊಂಡಿದ್ದು ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ್ದಾರೆ. ಸದ್ಯ ಹಮಾಸ್‌‍ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಪಶ್ಚಿಮ ಏಷ್ಯಾಕ್ಕೆ ಟ್ರಂಪ್‌ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್‌ ಫೋರ್ಸ್‌ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇಸ್ರೇಲ್‌ ಮತ್ತು ಹಮಾಸ್‌‍ ನಡುವಿನ ಸಂಘರ್ಷ ಮುಗಿದಿದೆ ಅನ್ನೊ ವಿಶ್ವಾಸ ನಿಮಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಹೌದು ಯುದ್ಧ ಮುಗಿದಿದೆ ಎಂದು ಉತ್ತರಿಸಿದ್ದಾರೆ.

ಭಾರತ-ಪಾಕ್‌ ಕದನ ವಿರಾಮ ಬಗ್ಗೆ ಮತ್ತೆ ಬೆನ್ನುತಟ್ಟಿಕೊಂಡ ಟ್ರಂಪ್‌ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ.

ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಮುಂದುವರಿದು.. ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್‌ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್ ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ ಹಲವು ಸಘರ್ಷಗಳನ್ನು ಪರಿಹರಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದಾಗಿ ಟ್ರಂಪ್‌ ಮತ್ತೊಮ್ಮೆ ತಮಗೆ ತಾವೇ ಬೆನ್ನುತಟ್ಟಿಕೊಂಡಿದ್ದಾರೆ. ಜೊತೆಗೆ ಇದನ್ನೆಲ್ಲ ನೊಬೆಲ್‌ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ.

ಕೆಲ ಯುದ್ಧಗಳು 31, 32, 37 ವರ್ಷಗಳ ಕಾಲ ನಡೆದವು. ಲಕ್ಷಾಂತರ ಜನರು ಸಾವನ್ನಪ್ಪಿದ್ರು. ಆದ್ರೆ ನಾನು ಒಂದು ದಿನದ ಬಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದಂತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು, ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದ್ರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಬೀಗಿದ್ದಾರೆ.

ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ನಿಪುಣ. ಇಸ್ರೇಲ್‌-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಹಿಂದಿರುಗುವಾಗ ಅದನ್ನೂ ಪರಿಹರಿಸುತ್ತೇನೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ನೊಬೆಲ್‌ ಶಾಂತಿ ಪ್ರಶಸ್ತಿ ಗೆಲ್ಲುವುದು ತನ್ನ ಗುರಿಯಲ್ಲ. ಆದ್ರೆ ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. 2025 ರಲ್ಲಿ ಇನ್ನೂ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ.