Friday, November 7, 2025
Home Blog Page 5

ಬೀದರ್‌ : ಕಾರು-ಕೊರಿಯರ್‌ ವಾಹನದ ನಡುವೆ ಭೀಕರ ಅಪಘಾತ, ನಾಲ್ವರ ದುರ್ಮರಣ

ಬೀದರ್‌,ನ.5-ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ದತ್ತಾತ್ರೇಯ ಭಕ್ತರು ಮೃತಪಟ್ಟಿರುವ ಘಟನೆ ಧನ್ನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ತೆಲಂಗಾಣ ಮೂಲದ ರಾಚಪ್ಪ, ನವೀನ್‌, ಕಾಶಿನಾಥ್‌ ಮತ್ತು ನಾಗರಾಜ್‌ ಎಂದು ಗುರುತಿಸಲಾಗಿದೆ.

ಶಿಫ್‌್ಟ ಕಾರಿನಲ್ಲಿ ಐದು ಮಂದಿ ತೆಲಂಗಾಣದಿಂದ ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇಗುಲಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿಕೊಂಡು ವಾಪಸ್‌‍ ತೆಲಂಗಾಣಕ್ಕೆ ತೆರಳುತ್ತಿದ್ದರು. ಇಂದು ಬೆಳಗ್ಗೆ 7.20 ರ ಸುಮಾರಿನಲ್ಲಿ ಇವರ ಕಾರು ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನೀಲಮನಳ್ಳಿ ತಾಂಡಾ ಬಳಿ ಹೋಗುತ್ತಿದ್ದಾಗ ಎದುರಿನಿಂದ ಅತೀ ವೇಗವಾಗಿ ಬಂದ ಕೊರಿಯರ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡು ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿವೆ.

ಸುದ್ದಿ ತಿಳಿದು ಧನ್ನೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕಾರಿನೊಳಗೆ ಸಿಕ್ಕಿಕೊಂಡಿದ್ದ ನಾಲ್ವರ ಮೃತದೇಹಗಳನ್ನು ಸ್ಥಳೀಯರ ನೆರವಿನಿಂದ ಹೊರಗೆ ತೆಗೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರನ್ನು ಬಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತಪಟ್ಟವರ ಪೈಕಿ ನಾಗರಾಜ್‌ ಎಂಬುವವರು ನಾರಾಯಣ ಖೇಡ್‌ನ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಧನ್ನೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-11-2025)

ನಿತ್ಯ ನೀತಿ : ಮಾತು, ಮನಸ್ಸು ಮತ್ತು ನಡೆಗಳು ಮನುಷ್ಯನನ್ನು ಸಜ್ಜನನ್ನಾಗಿಸುತ್ತವೆ. ದಾರಿ ತಪ್ಪಿದರೆ ಅಧಮನನ್ನಾಗಿಸುತ್ತವೆ.

ಪಂಚಾಂಗ : 05-11-2025, ಬುಧವಾರ
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ಅಶ್ವಿನಿ / ಯೋಗ: ಸಿದ್ಧಿ / ಕರಣ: ಬಾಲವ
ಸೂರ್ಯೋದಯ – ಬೆ.06.15
ಸೂರ್ಯಾಸ್ತ – 5.52
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಸಮೀಪ ವರ್ತಿಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಎಚ್ಚರ ವಹಿಸಿ.
ವೃಷಭ: ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅ ಕ ಲಾಭ ಗಳಿಸುವರು.
ಮಿಥುನ: ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ಆರೋಗ್ಯ ಸಮಸ್ಯೆ ಕಾಡುವುದು.

ಕಟಕ: ಸಹೋದರರ ಆಗಮನದಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಸಿಂಹ: ರಫ್ತು, ಆಮದು ವ್ಯವಹಾರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ: ನೀವು ಮಾಡುವ ಕೆಲಸ -ಕಾರ್ಯಗಳಿಂದ ಗೌರವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ.

ತುಲಾ: ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಗಳಾಗಲಿವೆ.
ಧನುಸ್ಸು: ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡು ವವರಿಗೆ ಉತ್ತಮ ಯಶಸ್ಸು ಸಿಗಲಿದೆ.

ಮಕರ: ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡ ಬೇಕಾಗಬಹುದು. ಪಾಲುದಾರಿಕೆಯಲ್ಲಿ ನಷ್ಟ.
ಕುಂಭ: ಶುಭ ಸಮಾರಂಭಗಳು ನಡೆಯುವುದರಿಂದ ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಮೀನ: ನಿಮ್ಮ ನೆಚ್ಚಿನ ಕಾರ್ಯಯೋಜನೆಗಳು ಕೈಗೂಡಲಿವೆ. ಸಂಭ್ರಮದ ದಿನ.

ಸರ್ಕಾರ ಸ್ವತ್ತುಗಳಲ್ಲಿ ಸಂಘ ಚಟುವಟಿಕೆಗೆ ನಿರ್ಬಂಧ : ಮೇಲ್ಮನವಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬೆಂಗಳೂರು. ನ.4- ಸರ್ಕಾರ ಸ್ವತ್ತುಗಳಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆಯ ಕುರಿತು ಸಲ್ಲಿಸಲಾಗಿರುವ ಮೇಲನವಿಯ ತೀರ್ಪನ್ನು ಕಾಯ್ದಿರಿಸಲಾಗಿದೆ. ಹೈಕೋರ್ಟ್‌ನ ಧಾರವಾಡದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎಸ್‌‍.ಜಿ. ಪಂಡಿತ್‌ ಮತ್ತು ಕೆ.ಬಿ.ಗೀತಾ ಅವರನ್ನೊಳಗೊಂಡ ವಿಭಾಗೀಯ ಪೀಠ ರಾಜ್ಯ ಸರ್ಕಾರದ ಮೇಲನವಿಯನ್ನು ವಿಚಾರಣೆ ನಡೆಸಿದೆ.ಸರ್ಕಾರದ ಪರವಾಗಿ ಅಡ್ವೋಕೆಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದರೆ, ಅರ್ಜಿ ದಾರರಾದ ಪುನರ್‌ಚೇತನ ಸೇವಾ ಸಂಸ್ಥೆಯ ಪರವಾಗಿ ಹಿರಿಯ ವಕೀಲ ಅಶೋಕ್‌ ಹಾರ್ನಳ್ಳಿ ವಾದ ಮಂಡಿಸಿದ್ದಾರೆ.

ಸರ್ಕಾರದ ಪರವಾಗಿ ವಾದಿಸಿರುವ ಶಶಿಕಿರಣ್‌ ಶೆಟ್ಟಿ ಅವರು ಸರ್ಕಾರದ ಆಸ್ತಿಗಳನ್ನು ಅತಿಕ್ರಮಿಸುವುದು ಬಿಎನ್‌ಎಸ್‌‍ ಕಾಯ್ದೆ ಪ್ರಕಾರ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸಮರ್ಥನೀಯ ಎಂದರು.

ಇದಕ್ಕೆ ಮರು ಪ್ರಶ್ನೆ ಹಾಕಿರುವ ಹೈಕೋರ್ಟ್‌ ಪೀಠ ಹತ್ತು ಜನ ಒಂದೆಡೆ ಸೇರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿದೆ. ಜನ ಜೊತೆಯಲ್ಲಿ ನಡೆಯಲು ಅನುಮತಿ ಪಡೆಯಬೇಕೇ? ಈ ಆದೇಶದ ಮೂಲಕ ಯಾವುದನ್ನೂ ನಿರ್ಬಂಧಿಸಲು ಯತ್ನಿಸಲಾಗುತ್ತಿದೆ ಎಂದು ವಿವರಿಸುವಂತೆ ಸೂಚಿಸಿದರು.

ರ್ಯಾಲಿ, ಸಮಾವೇಶಕ್ಕೆ ಜನ ಸೇರುವ ಮುನ್ನ ಪೂರ್ವಾನುಮತಿ ಪಡೆಯಬೇಕೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಪಾರ್ಕ್‌ನಲ್ಲಿ ನಡೆಯಲು, ಮೈದಾನದಲ್ಲಿ ಆಟವಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ವಿವರಿಸಿದ್ದಾರೆ.

ಹೈಕೋರ್ಟ್‌ನ ಮಧ್ಯಂತರ ಆದೇಶ ತೆರವು ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಸರ್ಕಾರವು ತನ್ನ ಆದೇಶ ರಕ್ಷಣೆಗೆ ಮುಂದಾಗಿದೆ. ಏಕಸದಸ್ಯ ಪೀಠವು ಸರ್ಕಾರದ ಆದೇಶಕ್ಕೆ ತಡೆ ನೀಡುವ ಬದಲು ಮಧ್ಯಂತರ ಪರಿಹಾರ ನೀಡಬಹುದಿತ್ತು ಎಂದು ಹೇಳಿದ್ದಾರೆ. ಸರ್ಕಾರದ ಆಸ್ತಿಯನ್ನು ಖಾಸಗಿ ಸಂಸ್ಥೆಗಳು ಬಳಕೆ ಮಾಡಬಾರದು ಎಂಬುದು ಸರ್ಕಾರದ ವಾದವೇ? ಎಂದು ಪೀಠ ಪ್ರಶ್ನಿಸಿದಾಗ, ಅನುಮತಿ ಪಡೆದು ಚಟುವಟಿಕೆ ಮಾಡಬಹುದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಶಶಿಕಿರಣ್‌ ಶೆಟ್ಟಿ ಹೇಳಿದರು.

ಹತ್ತಕ್ಕೂ ಹೆಚ್ಚು ಜನ ಸೇರಿದರೆ ಅದು ನಿಮ ಪ್ರಕಾರ ರ್ಯಾಲಿ ಅಥವಾ ಸಮಾವೇಶವೇ? ಹತ್ತಕ್ಕೂ ಹೆಚ್ಚು ಜನರು ಪಾರ್ಕ್‌ನಲ್ಲಿ ಸೇರಿದರೆ ಏನು? ಈ ವಿಚಾರದಲ್ಲಿ ಏಕಸದಸ್ಯ ಪೀಠದ ಮುಂದೆ ಮಧ್ಯಂತರ ಆದೇಶದಲ್ಲಿ ಸ್ಪಷ್ಟನೆ ಕೇಳಬಹುದಿತ್ತಲ್ಲ ಎಂದು ಪೀಠ ಹೇಳಿದಾಗ ಈ ಬಗ್ಗೆಯೇ ಮೇಲನವಿ ಸಲ್ಲಿಕೆ ಮಾಡಲಾಗಿದೆ. ಪೀಠವು ಪಾರ್ಕ್‌ಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬಹುದು.

ಜನರು ಪಾರ್ಕ್‌ನಲ್ಲಿ ಓಡಾಡುವುದರ ಬಗ್ಗೆ ನಮ ಆಕ್ಷೇಪ ಇಲ್ಲ. ಅರ್ಜಿದಾರರು ಪಾರ್ಕ್‌ನಲ್ಲಿ ಓಡಾಡಬೇಕು ಎಂದು ಕೇಳುತ್ತಿಲ್ಲ. ಬದಲಾಗಿ ಪಾರ್ಕ್‌ನಲ್ಲಿ ಬೋಧನೆ ಮಾಡಬೇಕು ಎಂದು ಕೇಳುತ್ತಿದ್ದಾರೆ. ಅರ್ಜಿದಾರರ ಕೋರಿಕೆ ಏನು ಎಂದು ನ್ಯಾಯಾಲಯ ಪರಿಶೀಲಿಸಬೇಕು. ವಾಯು ವಿಹಾರ ಮತ್ತಿತರ ಚಟುವಟಿಕೆಗಳಿಗಾಗಿಯೇ ಪಾರ್ಕ್‌ ನಿರ್ಮಿಸಲಾಗಿದೆ. ಅಲ್ಲಿ ವಿಚಾರ ಸಂಕಿರಣ ನಡೆಸಲಾಗದು.

ಅರ್ಜಿದಾರರು ಅದಕ್ಕೆ ಸಭಾಂಗಣವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಅಶೋಕ ಹಾರನಹಳ್ಳಿ ವಾದ ಮಂಡಿಸಿ ರಾಜ್ಯ ಸರ್ಕಾರವು ಎಲ್ಲಾ ಆಸ್ತಿಯು ತನ್ನದು ಎಂದು ಪರಿಗಣಿಸಿದೆ. ಸರ್ಕಾರವು ಮೇಲನವಿ ಸಲ್ಲಿಸುವ ಬದಲು ಮಧ್ಯಂತರ ತೆರವು ಕೋರಿ ಏಕಸದಸ್ಯ ಪೀಠದ ಮುಂದೆ ಮೆಮೊ ಸಲ್ಲಿಸಬೇಕಿತ್ತು. ಹೀಗಾಗಿ, ಸರ್ಕಾರದ ಮೇಲನವಿಯನ್ನು ಪರಿಗಣಿಸಬಾರದು ಎಂದರು. ವಾದ-ಪ್ರತಿ ವಾದ ಆಲಿಸಿದ ನ್ಯಾಯಾಲಯವು ಏಕಸದಸ್ಯ ಪೀಠವು ನೀಡಿರುವ ಮಧ್ಯಂತರ ಆದೇಶದ ಕುರಿತ ತೀರ್ಪನ್ನು ಕಾಯ್ದಿರಿಸಿದೆ.


ಕ್ರೀಡಾಪಟುಗಳ ಉತ್ತೇಜನಕ್ಕೆ ಒಲಿಂಪಿಕ್‌ ಪದಕ ಯೋಜನೆ ಆರಂಭ

ಬೆಂಗಳೂರು,ನ.4– ಮುಂಬರುವ ಲಾಸ್‌‍ ಏಂಜಲೀಸ್‌‍ ಒಲಿಂಪಿಕ್ಸ್ 2028 ಅನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರವು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಲಿಂಪಿಕ್‌ ಮೆಡ್‌ಲ್‌ ಸ್ಕೀಮ್‌ (ಒಲಂಪಿಕ್‌ ಪದಕ ಯೋಜನೆ) ಯೋಜನೆಯನ್ನು ಪ್ರಾರಂಭಿಸಿದೆ.

ಈ ಯೋಜನೆಯಡಿ 60 ಕ್ರೀಡಾಪಟುಗಳನ್ನು ಗುರುತಿಸಿ ಪ್ರತಿಯೊಬ್ಬರಿಗೂ ಮೂರು ವರ್ಷಗಳವರೆಗೆ ಪ್ರತಿ ವರ್ಷ 10 ಲಕ್ಷ ಹಣವನ್ನು ಯುವಜನ ಕ್ರೀಡಾ ಇಲಾಖೆಯಿಂದ ನೀಡಲಾಗುತ್ತದೆ. ಈ ಯೋಜನೆಗೆ ಒಟ್ಟು 6 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಕ್ರೀಡಾಪಟು ಗಳು ಸೇವಾ ಸಿಂಧು- ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆಯು ಮುಂದಿನ ವಾರ ಅರ್ಜಿ ಆಹ್ವಾನಿಸಲಿದೆ ಎಂದು ತಿಳಿದುಬಂದಿದೆ.ಅದರಂತೆ ಇಲಾಖೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತದೆ.

ವಿಶ್ವ ಅಥವಾ ಏಷ್ಯನ್‌ ಚಾಂಪಿಯನ್‌ಶಿಪ್‌ಗಳು, ಏಷ್ಯನ್‌ ಆಟಗಳು ಮತ್ತು ಕಾಮನ್‌ವೆಲ್ತ್‌ ಗೇಮ್‌ಗಳಲ್ಲಿ ಭಾಗವಹಿಸಿದವರು ಅರ್ಜಿ ಸಲ್ಲಿಸಬಹುದು. ಸೀನಿಯರ್‌ ಮತ್ತು ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದವರು ಅರ್ಜಿ ಸಲ್ಲಿಸಬಹುದು.
ಗುಂಪು ಆಟದ ವಿಭಾಗದಡಿ ರಾಷ್ಟ್ರೀಯ ಶಿಬಿರಗಳಲ್ಲಿ ಭಾಗವಹಿಸಿದ ಅಥವಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತ ಮೂರು ವರ್ಷಗಳ ಕಾಲ ಕರ್ನಾಟಕವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಲಾಖೆ ಸಮಿತಿಗಳನ್ನು ರಚಿಸಿದೆ.

ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅರ್ಹ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಕ್ರೀಡಾಪಟುಗಳ ಕಾರ್ಯಕ್ಷಮತೆಯ ಆಧಾರದ ಮೇಲೆ, ಎರಡನೇ ಮತ್ತು ಮೂರನೇ ವರ್ಷಕ್ಕೆ ಅವರಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಹಣವನ್ನು ತರಬೇತಿ, ಉಪಕರಣಗಳು ಮತ್ತು ಪೌಷ್ಠಿಕಾಂಶ ಪೂರಕಗಳನ್ನು ಖರೀದಿಸಲು ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಬಳಸಬಹುದಾಗಿದೆ ಎಂದು ತಿಳಿಸಲಾಗಿದೆ.

ಗೋರಿ, ರಾಷ್ಟ್ರೀಯ ಶಿಬಿರಗಳಲ್ಲಿ ಭಾಗವಹಿಸಿದ ಅಥವಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಸತತ ಮೂರು ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಅರ್ಹರಾಗಿರುತ್ತಾರೆ. ಇಲಾಖೆಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಮಿಟಿಗಳನ್ನು ರಚಿಸಿದೆ. ಮೊದಲ ಬಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.

ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಆಧರಿಸಿ, ಅವರಿಗೆ ಎರಡನೇ ಮತ್ತು ಮೂರನೇ ವರ್ಷಕ್ಕೆ ಆರ್ಥಿಕ ನೆರವು ನೀಡಲಾಗುವುದು. ಹಣವನ್ನು ತರಬೇತಿ, ಉಪಕರಣಗಳು ಮತ್ತು ಪೌಷ್ಠಿಕಾಂಶದ ಪೂರಕಗಳನ್ನು ಖರೀದಿಸಲು ಮತ್ತು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಗಳಲ್ಲಿ ಭಾಗವಹಿಸಲು ಬಳಸಬಹುದು.

ಇಲಾಖೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತದೆ. ವಿಶ್ವ ಅಥವಾ ಏಷ್ಯನ್‌ ಚಾಂಪಿಯನ್‌ಶಿಪ್‌ಗಳು, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಭಾಗವಹಿಸಿದವರು ಅರ್ಜಿ ಸಲ್ಲಿಸಬಹುದು. ಸೀನಿಯರ್‌ ಮತ್ತು ಜೂನಿಯರ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಪದಕಗಳನ್ನು ಗೆದ್ದವರು ಸಹ ಅರ್ಜಿ ಸಲ್ಲಿಸಬಹುದು.

ಬಜೆಟ್‌ನಲ್ಲಿ ಘೋಷಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಘೋಷಿಸಿರುವ ಬಜೆಟ್‌ ಯುವಜನ ಮತ್ತು ಕ್ರೀಡಾ ವಲಯಕ್ಕೆ ಅನೇಕ ಕೊಡುಗೆಗಳನ್ನು ಘೋಷಿಸಿತ್ತು. ಕ್ರೀಡಾಪಟುಗಳ ಹಾಜರಾತಿ ಸಮಸ್ಯೆ ಮತ್ತು ಕೃಪಾಂಕದ ಬೇಡಿಕೆಯನ್ನು ಮನ್ನಿಸಿತ್ತು. . ಗ್ರಾಮಾಂತರ ವಲಯದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ 12 ತಾಲೂಕುಗಳಲ್ಲಿ ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣ, ಜೊತೆಗೆ ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ಹಮಿಕೊಂಡಿತ್ತು.

ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿಗಳಿಗೆ ಇದುವರೆಗೂ ಹಾಜರಾತಿಯ ಸಮಸ್ಯೆ ಎದುರಾಗುತ್ತಿತ್ತು. ಬಜೆಟ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶೇಕಡಾ 15 ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಶೇ.25ರವರೆಗೂ ಹಾಜರಾತಿ ನೀಡಲಾಗುವುದರ ಜೊತೆಗೆ ಇನ್ನು ಪದವಿ, ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣಗಳಿಗೆ ಪ್ರವೇಶ ಬಯಸುವ ಕ್ರೀಡಾಪಟುಗಳಿಗೆ ಶೇಕಡಾ 5ರಷ್ಟು ಕೃಪಾಂಕವನ್ನು ಘೋಷಿಸಲಾಗಿತ್ತು.

ಒಲಿಂಪಿಕ್‌, ಪ್ಯಾರಾ ಒಲಿಂಪಿಕ್‌ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದವರಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಎ ಗುಂಪಿನ ಹುದ್ದೆಗಳ ಜೊತೆಗೆ ಇತರೆ ಹುದ್ದೆಗಳನ್ನೂ ಮೀಸಲಿಡಲಾಗಿದೆ. ಡಿವೈಎಸ್ಪಿ ಸೇರಿ ಇತರೆ ಪೊಲೀಸ್‌‍ ಹುದ್ದೆಗಳಲ್ಲೂ ಶೇ 2ರಷ್ಟಿದ್ದ ಹುದ್ದೆ ಮೀಸಲಾತಿಯನ್ನು ಶೇ 3ಕ್ಕೆ ಹೆಚ್ಚಳ ಜೊತೆಗೆ ಒಲಿಂಪಿಕ್ನಲ್ಲಿ ಪದಕ ತಂದು ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸುವವರಿಗೆ 5 ಕೋಟಿ ರೂ. ಬಹುಮಾನ, ಒಲಿಂಪಿಕ್ಗೆ ತರಬೇತಿ ಪಡೆಯಲು 10 ಲಕ್ಷ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.

ಬೆಂಗಳೂರಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಪರಿಹಾರೋಪಾಯ ರೂಪಿಸುವಂತೆ ಆಯುಕ್ತರ ಸೂಚನೆ

ಬೆಂಗಳೂರು, ನ.4- ಸಂಚಾರ ದಟ್ಟಣೆ ನಿವಾರಣೆಗೆ ಪಾಲಿಕೆ, ಮೆಟ್ರೋ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಸಮನ್ವಯದಿಂದ ಪರಿಹಾರೋಪಾಯಗಳನ್ನು ರೂಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದರು.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿ ರಸ್ತೆಯ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಪ್ರದೇಶಗಳಲ್ಲಿ ಇರುವ ಭಗ್ನಾವಶೇಷಗಳು ಮತ್ತು ಅನುಪಯುಕ್ತ ಕಬ್ಬಿಣ ವಸ್ತುಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಮೆಟ್ರೋ ಅಧಿಕಾರಿಗಳಿಗೆ ಸೂಚಿಸಿದರು.

ಹೆಬ್ಬಾಳ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ: ಹೆಬ್ಬಾಳ ಮೇಲ್ಸೇತುವೆಯ ಮೇಲ್ಭಾಗ ಹಾಳಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣವೇ ಸಂಪೂರ್ಣ ಮೇಲ್ಸೇತುವೆಗೆ ಡಾಂಬರೀಕರಣ ಮಾಡಿ ವಾಹನ ಸಂಚಾರ ಸುಗಮಗೊಳಿಸಲು ಆದೇಶಿದರು.

ರಸ್ತೆ ಮಧ್ಯಭಾಗದ ಸ್ಲ್ಯಾಬ್‌ ಸರಿಪಡಿಸಿ:ಹೆಬ್ಬಾಳ ದಿಂದ ಕೊಡಿಗೆಹಳ್ಳಿ ಕಡೆಗೆ ಸಂಪರ್ಕ ನೀಡುವ ಹಯಾತ್‌ ಸೆಂಟರ್‌ ಮುಂಭಾಗದ ರಸ್ತೆಯ ಮಧ್ಯಭಾಗದಲ್ಲಿರುವ ಸ್ಲ್ಯಾಬ್‌ ಸರಿಯಾಗಿ ಅಳವಡಿಸದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅದನ್ನು ತಕ್ಷಣ ಸರಿಪಡಿಸಲು ಸೂಚಿಸಲಾಯಿತು.ಕೊಡಿಗೆಹಳ್ಳಿ ಸಿಗ್ನಲ್‌ನ ನಂತರ ಕ್ರಾಸ್‌‍ ಕಲ್ವರ್ಟ್‌ ಬಳಿ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತದೆ. ಕಲ್ವರ್ಟ್‌ನ ಹೂಳನ್ನು ತೆಗೆದು, ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಿದರು.

ಸರ್ವೀಸ್‌‍ ರಸ್ತೆಯಿಂದ ಮುಖ್ಯ ರಸ್ತೆಗೆ ಸಂಪರ್ಕ ನೀಡಿ:ಬಳ್ಳಾರಿ ರಸ್ತೆಯ ಸಂಚಾರ ದಟ್ಟಣೆ ನಿವಾರಣೆಗೆ ಸರ್ವೀಸ್‌‍ ರಸ್ತೆಯಿಂದ ಮುಖ್ಯ ರಸ್ತೆಗೆ ಒಳಹೊಕ್ಕು-ಹೊರಹೊಮ್ಮುವ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಬ್ಯಾಟರಾಯನಪುರದಲ್ಲಿ ಅನುಷ್ಠಾನಗೊಂಡಿದೆ. ಇದೇ ಮಾದರಿಯಲ್ಲಿ ಅಗತ್ಯವಿರುವ ಕಡೆಗಳಲ್ಲಿಯೂ ಇದೇ ರೀತಿಯ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಸೂಚಿಸಿದರು.
ಸೈನೇಜ್‌ ಬೋರ್ಡ್‌ಗಳನ್ನು ಅಳವಡಿಸಿ:ಸರ್ವೀಸ್‌‍ ರಸ್ತೆ ಮತ್ತು ಮುಖ್ಯ ರಸ್ತೆ ಸಂಪರ್ಕ ಬಿಂದುಗಳಲ್ಲಿಯೂ ನಾಗರಿಕರ ಸೌಲಭ್ಯಕ್ಕಾಗಿ ಸೂಚನಾ ಫಲಕಗಳನ್ನು (ಸೈನೇಜ್‌
ಬೋರ್ಡ್‌ಗಳು) ಅಳವಡಿಸಲು ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಕೈವಾಕ್‌ ನಿರ್ಮಾಣ ಸಾಧ್ಯತೆ ಪರಿಶೀಲಿಸಿ:ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಸರ್ವೀಸ್‌‍ ರಸ್ತೆ ಮತ್ತು ಮುಖ್ಯ ರಸ್ತೆ ನಡುವೆ ಬ್ಯಾರಿಕೇಡ್‌ ಇರುವುದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ಅಲ್ಲಿ ಸ್ಕೈವಾಕ್‌ ನಿರ್ಮಿಸಲು ಸಾಧ್ಯತೆಯನ್ನು ಪರಿಶೀಲಿಸಲು ಸೂಚಿಸಿದರು.

ಮುಖ್ಯ ರಸ್ತೆ ಮತ್ತು ಸರ್ವೀಸ್‌‍ ರಸ್ತೆಯ ಮಧ್ಯದಲ್ಲಿರುವ ಚರಂಡಿಯ ಬಹುತೇಕ ಭಾಗದಲ್ಲಿ ಸ್ಲ್ಯಾಬ್‌ಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿ, ಚರಂಡಿಯಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆರವುಗೊಳಿಸಲು ಸೂಚಿಸಿದರು.

ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ:ಯಲಹಂಕ ರೈಲ್ವೆ ಸೇತುವೆ ಬಳಿ ಸೈಡ್‌ ಡ್ರೈನ್‌ ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಮಳೆಯ ಸಮಯದಲ್ಲಿ ನೀರು ರಸ್ತೆಯಲ್ಲಿ ನಿಂತುಕೊಳ್ಳುತ್ತದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆಯ ವೇಳೆ ಯಲಹಂಕ ರೈತರ ಸಂತೆ ಬಳಿ ಸೈಡ್‌ ಡ್ರೈನ್‌ ನಿರ್ಮಿಸಲು, ಬಾಗಲೂರು ಕ್ರಾಸ್‌‍ನಲ್ಲಿ ಜಲಾವೃತ, ರಸ್ತೆ ದುರಸ್ತಿ ಹಾಗೂ ಡ್ರೈನ್‌ ಸ್ವಚ್ಛತೆಗೆ, ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು, ಅಲ್ಲಾಳಸಂದ್ರ ಗೇಟ್‌ ಬಳಿ ಎನ್‌ಎಚ್‌ಎಐ ಮೇಲ್ಸೇತುವೆ ಕೆಳಭಾಗದ ಖಾಲಿ ಜಾಗವನ್ನು ಸುಂದರೀಕರಣಗೊಳಿಸಲು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ 19 ರಂದು ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಅಕ್ಕ ಕಾರ್ಯಪಡೆಗೆ ಚಾಲನೆ

ಬೆಂಗಳೂರು. ನ.4- ಬಾಲ್ಯವಿವಾಹ ತಡೆಗಟ್ಟುವ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ರಚಿಸಲಾಗಿರುವ ಅಕ್ಕ ಪಡೆಗೆ ಇದೇ 19 ರಂದು ಚಾಲನೆ ನೀಡಲಾಗುತ್ತಿದ್ದು, ಪೂರ್ವಭಾವಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸದಾಶಿವನಗರದಲ್ಲಿರುವ ಡಾ.ಜಿ.ಪರಮೇಶ್ವರ್‌ ಅವರ ಮನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಕ್ಕ ಕಾರ್ಯಪಡೆಯ ಬಗ್ಗೆ ಚರ್ಚೆಗಳಾಗಿವೆ.

ತಾಲ್ಲೂಕು ಮಟ್ಟದಲ್ಲಿ ಈ ಕಾರ್ಯ ಪಡೆಗಳನ್ನು ರಚಿಸಲಾಗುತ್ತಿದ್ದು, ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಕಿರುಕುಳವನ್ನು ಹತ್ತಿಕ್ಕುವ ಗುರಿ ಹೊಂದಿದೆ.
ಮಹಿಳೆಯರು ಮತ್ತು ಮಕ್ಕಳು ದೌರ್ಜನ್ಯಕ್ಕೆ ತುತ್ತಾದ ಸಂದರ್ಭದಲ್ಲಿ ತತ್‌ಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ

ಈ ಪಡೆಗಳನ್ನು ರೂಪಿಸಲಾಗಿದೆ. ಮಹಿಳಾ ಪೊಲೀಸ್‌‍ ಅಧಿಕಾರಿಯ ನೇತೃತ್ವದಲ್ಲಿ ಎನ್‌.ಸಿ.ಸಿ.ಯ ಕೆಡೆಟ್‌ಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಕಾರ್ಯ ಪಡೆಯಲ್ಲಿರಲ್ಲಿದ್ದಾರೆ.ಪೊಲೀಸ್‌‍ ಇಲಾಖೆಯ ಮಾದರಿಯಲ್ಲಿ ಪ್ರತ್ಯೇಕ ಗಸ್ತು ವಾಹನಗಳನ್ನು ಈ ಪಡೆಗಾಗಿ ನಿಯೋಜಿಸಲಾಗಿದೆ. ಬಸ್‌‍ ನಿಲ್ದಾಣ, ಶಾಲಾ ಕಾಲೇಜು, ಮಾರುಕಟ್ಟೆ ಹಾಗೂ ಇತರ ಜನ ಸಂದಣಿ ಪ್ರದೇಶಗಳಲ್ಲಿ ಗಸ್ತು ವಾಹನಗಳನ್ನು ನಿಯೋಜಿಸಲಾಗುತ್ತದೆ.

ಬಾಲ್ಯ ವಿವಾಹ ತಡೆ ಹಾಗೂ ಫೋಕ್ಸೊ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾಯ್ದೆಯ ಈ ಪಡೆಯ ಮೂಲ ಉದ್ದೇಶವಾಗಿದೆ.2023ರಲ್ಲಿ ಬೀದರ್‌ನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಕೆಲಸ ನಿರ್ವಹಿಸಿತ್ತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಬಳಿಕ ಮತ್ತಷ್ಟು ವಿಚಾರಣೆ ಮಾಡಲು ನಿರ್ಧರಿಸಲಾಗಿತ್ತು. ಇದೇ ವರ್ಷದ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೈಸೂರು, ಬೆಳಗಾವಿ, ಮಂಗಳೂರು ಜಿಲ್ಲೆಗಳಲ್ಲಿ 2ನೇ ಹಂತದ ಪ್ರಾಯೋಗಿಕ ಪಡೆಗಳನ್ನು ಆರಂಭಿಸಲಾಗಿತ್ತು.


ಇತ್ತೀಚೆಗೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಕಾರ್ಯ ಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನಿರ್ಣಯ ಕೈಗೊಂಡಿದ್ದರು. ಅದರಂತೆ ನವೆಂಬರ್‌ 19 ರಂದು ಅಕ್ಕ ಕಾರ್ಯಪಡೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಪೂರ್ವ ಭಾವಿಯಾಗಿ ಪೊಲೀಸ್‌‍ ಇಲಾಖೆಯ ಸಹಕಾರ ಪಡೆಯಲು ಮತ್ತು ಕಾರ್ಯಪಡೆಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಸಚಿವದ್ವಯರು ಇಂದು ಚರ್ಚೆ ನಡೆಸಿದ್ದಾರೆ.

ಇನ್ಫೋಸಿಸ್‌‍ ಉದ್ಯೋಗಿ ಕೊಲೆ ಪ್ರಕರಣದಲ್ಲಿ ಇಬ್ಬರು ಅಪರಾಧಿಗಳಿಗೆ ಅಜೀವ ಕಾರಾಗೃಹ ಶಿಕ್ಷೆ

ಬೆಂಗಳೂರು, ನ.4- ಇನ್ಫೋಸಿಸ್‌‍ ಉದ್ಯೋಗಿಯನ್ನು ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ ಸಿಸಿಎಚ್‌59 ನ್ಯಾಯಾಲಯ ಅಜೀವ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.

ಕಳೆದ 2018 ಜೂನ್‌ 26ರಂದು ಬಿಹಾರದ ಪಾಟ್ನಾ ಮೂಲದ ಸಾಫ್‌್ಟವೇರ್‌ ಇಂಜಿನಿಯರ್‌ ಸಿದ್ಧಾರ್ಥ(26) ಎಂಬುವವರನ್ನು ಸೆಂಟ್ರಿಂಗ್‌ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದ ಮಹೇಶ್‌ ಹಾಗೂ ಗಿರೀಶ ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ.

ಜೆಪಿ ನಗರದಲ್ಲಿ ವಾಸವಾಗಿದ್ದ ಸಿದ್ದಾರ್ಥ ಅವರು ತಮ ಸ್ನೇಹಿತ ರೊಂದಿಗೆ ಊಟ ಮುಗಿಸಿಕೊಂಡು ಮನೆಗೆ ವಾಪಸ್ಸಾಗು ವಾಗ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಮಹೇಶ್‌ಮತ್ತು ಗಿರೀಶ ಅವರ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಹತ್ತಿರದಲ್ಲಿ ಮನೆ ಕಟ್ಟುತ್ತಿದ್ದ ಸ್ಥಳದಲ್ಲಿದ್ದ ಸೆಂಟ್ರಿಂಗ್‌ ರಾಡ್‌ನಿಂದ ಸಿದ್ಧಾರ್ಥನ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

ಮೈಕೋ ಲೇಔಟ್‌ ಪೊಲೀಸ್‌‍ ಠಾಣೆಯ ಅಂದಿನ ಇನ್‌್ಸಪೆಕ್ಟರ್‌ ಆರ.ಎಂ. ಅಜಯ್‌ ಅವರು ಪ್ರಕರಣ ದಾಖಲಿಸಿ, ಮಹೇಶ್‌ ಮತ್ತು ಗಿರೀಶ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟಿಸ್ಟ ಸಲ್ಲಿಸಿದ್ದರು.

ಸಿಸಿ ಎಚ್‌ 59 ನ್ಯಾಯಾಲಯ ದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾ ಲಯ ಇಬ್ಬರು ಆರೋಪಿಗಳನ್ನು ಅಪರಾಧಿಗಳೆಂದು ಆದೇಶಿಸಿ, ಅಜೀವ ಕಾರಾಗೃಹ ಶಿಕ್ಷೆ ಜತೆಗೆ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕರಿಗೆ ಮಹಾಲಿಂಗಪ್ಪ ಅವರು ವಾದ ಮಂಡಿಸಿದ್ದಾರೆ.

ಕಬ್ಬು ಬೆಳೆಗಾರರ ಪ್ರತಿಭಟನೆಗೆ ಗೃಹ ಸಚಿವ ಪರಮೇಶ್ವರ್ ಆತಂಕ

ಬೆಂಗಳೂರು. ನ.4- ಕಬ್ಬು ಬೆಳೆಗಾರರ ಸಮಸ್ಯೆ ಬಗೆ ಹರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಅವರಿಗೆ ಸಲಹೆ ನೀಡಲಾಗಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಪೊಲೀಸ್‌‍ ಇಲಾಖೆಗೆ ಸವಾಲಿನ ಪರಿಸ್ಥಿತಿ ಎದುರಾಗಬಹುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಶಿವಾನಂದ ಪಾಟೀಲ್‌ ಅವರ ಜೊತೆ ನಿನ್ನೆ ಕೂಡ ತಾವು ಚರ್ಚೆ ನಡೆಸಿದ್ದು, ಆದಷ್ಟು ಶೀಘ್ರ ಸಮಸ್ಯೆ ಬಗೆ ಹರಸಿ ಎಂದು ಸಲಹೆ ನೀಡಿದ್ದೇನೆ. ಕಬ್ಬು ಬೆಲೆ ನಿಯಂತ್ರಣ ಅಥವಾ ದರ ನಿಗದಿಗೆ ಸಂಬಂಧಪಟ್ಟಂತೆ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ರೈತರ ಪ್ರತಿಭಟನೆ ಮುಂದುವರೆದರೆ ನಿಯಂತ್ರಿಸಲು ಪೊಲೀಸ್‌‍ ಇಲಾಖೆಗೆ ಕಷ್ಟವಾಗುತ್ತದೆ ಎಂದಿದ್ದಾರೆ.

ಸಚಿವರಾದ ಸತೀಶ್‌ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್‌ ಅವರೊಂದಿಗೆ ಸೇರಿ ಸಕ್ಕರೆ ಕಾರ್ಖಾನೆಗಳ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ಸಚಿವ ಶಿವಾನಂದ ಪಾಟೀಲ್‌ ಭರವಸೆ ನೀಡಿದ್ದಾರೆ. ನಿನ್ನೆ ಕಬ್ಬು ಬೆಳೆಗಾರರೊಬ್ಬರು ವಿಷ ಕುಡಿಯಲು ಪ್ರಯತ್ನಿಸಿದರು. ಪೊಲೀಸರು ತಕ್ಷಣವೇ ಮಧ್ಯ ಪ್ರವೇಶಿಸಿ ರಕ್ಷಿಸಿದ್ದಾರೆ. ಮುಂದೆೆ ಈ ರೀತಿ ಘಟನೆಗಳಾಗುವುದು ಸವಾಲಿನ ಪರಿಸ್ಥಿತಿಯನ್ನು ನಿರ್ಮಿಸಲಿದೆ ಎಂದರು.

ಬಿಜೆಪಿಯವರು ಇಂತಹ ಪರಿಸ್ಥಿತಿಗಾಗಿಯೇ ಕಾಯುತ್ತಿರುತ್ತಾರೆ. ಹೀಗಾಗಿ ಅವರು ರಾಜಕಾರಣ ಮಾಡುವುದು ಸಹಜ. ಆದರೆ ಅವರು ಅಧಿಕಾರದಲ್ಲಿದ್ದಾಗ ಯಾವ ಪರಿಸ್ಥಿತಿ ಇತ್ತು ಎಂಬುದನ್ನು ಸರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ವರ್ತೂರು ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮನೆಗೆಲಸದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಮ ಗಮನಕ್ಕೆ ಬಂದಿದೆ. ನಿಖರವಾದ ವರದಿ ನೀಡುವಂತೆ ಪೊಲೀಸ್‌‍ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥ ಪೊಲೀಸ್‌‍ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಸೇರಿದಂತೆ ಯಾವುದೇ ಬೆಳವಣಿಗೆಗಳಾದರೂ ಹೈಕಮಾಂಡ್‌ ತೀರ್ಮಾನವೇ ಅಂತಿಮ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಗಳನ್ನು ನಾವು ಅನುಸರಿಸುತ್ತೇವೆ. ಒಂದು ವೇಳೆ ಧಿಕ್ಕರಿಸಿದರೆ ಅಂಥವರ ವಿರುದ್ಧ ಕ್ರಮಗಳಾದ ಉದಾಹರಣೆಗಳಿವೆ ಎಂದರು.

ಕಾಂಗ್ರೆಸ್‌‍ ಹೈಕಮಾಂಡ್‌ ಸಂಸ್ಕೃತಿಯ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಈಗ ಅವರಲ್ಲೂ ಕೂಡ ಹೈಕಮಾಂಡ್‌ ಸಂಸ್ಕೃತಿ ತೀವ್ರವಾಗಿದೆ. ಹೈ ಕಮಾಂಡ್‌ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಸಮರ್ಥನೀಯ ಎಂದರು.
ಮಾಜಿ ಸಚಿವ ಕೆ.ಎನ್‌. ರಾಜಣ್ಣ ಅವರ ಮನೆಯಲ್ಲಿ ಮುಖ್ಯಮಂತ್ರಿ ಅವರು ಊಟಕ್ಕೆ ಸೇರುವುದರಲ್ಲಿ ವಿಶೇಷವೇನಿಲ್ಲ. ಮುಖ್ಯಮಂತ್ರಿ ಅವರು ತುಮಕೂರಿಗೆ ಬಂದಾಗ ರಾಜಣ್ಣ ಅವರ ಮನೆಯಲ್ಲಿ ಊಟ ಮಾಡುವುದು ಮೊದಲಿನಿಂದಲೂ ಸಂಪ್ರದಾಯವಾಗಿದೆ. ನಾವು ಕೂಡ ಊಟಕ್ಕೆ ಹೋಗುತ್ತೇವೆ ಎಂದರು.

ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಲು ಯಾರು ದೆಹಲಿಗೆ ಹೋಗುತ್ತಾರೋ ಗೊತ್ತಿಲ್ಲ. ನಾನಂತೂ ದೆಹಲಿಗೆ ಹೋಗುವುದಿಲ್ಲ ಎಂದರು.ಬೇಡಿಕೆಗಳನ್ನು ಆಧರಿಸಿ ಎಲ್ಲಾ ಇಲಾಖೆಗಳಲ್ಲೂ ಸಾಮೂಹಿಕ ವರ್ಗಾವಣೆಯಾಗುತ್ತದೆ. ಪೊಲೀಸ್‌‍ ಇಲಾಖೆಯಲ್ಲಿ ಮಾತ್ರ ವರ್ಗಾವಣೆಗೆ ಕಾಲಮಿತಿಯಿಲ್ಲ. ಯಾವಾಗ ಅಗತ್ಯವಿದೆಯೋ ಆಗ ವರ್ಗಾವಣೆಗಳಾಗುತ್ತಿರುತ್ತವೆ. ವರ್ಷದ 365 ದಿನವೂ ಅಧಿಕಾರಿಗಳ ಬದಲಾವಣೆ ಸಹಜ. ಅಧಿಕಾರಿಗಳ ವರ್ಗಾವಣೆಯನ್ನು ಸಚಿವರ ಬದಲಾವಣೆಗೆ ಮುನ್ಸೂಚನೆ ಎಂದು ಪರಿಗಣಿಸಲಾಗುವುದಿಲ್ಲ ಎಂದರು.

ಸಂಪುಟ ಪುನರ್‌ರಚನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳುತ್ತಿರುವುದರಿಂದ ಈ ವಿಚಾರವಾಗಿ ನಾವು ಹೇಳಿಕೆ ನೀಡುವುದು ಸರಿಯಲ್ಲ. ಹೊಸಬರಿಗೆ ಅವಕಾಶ ನೀಡುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದರು.

ನಾಯಕತ್ವ ಬದಲಾವಣೆಯಾದರೆ ಪರಮೇಶ್ವರ್‌ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿ, ಮಿನಿಮಂತ್ರಿಗೆ ಸಂಬಂಧಪಟ್ಟ ವಿಚಾರಗಳನ್ನು ಬಿಟ್ಟು ಬೇರೆ ಪ್ರಶ್ನೆಗಳಿದ್ದರೆ ಕೇಳಿ ಎಂದು ಮಾಧ್ಯಮಗಳಿಗೆ ಸೂಚನೆ ನೀಡಿದರು.
ಆರ್‌ಎಸ್‌‍ಎಸ್‌‍ ಕುರಿತು ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಇಲಾಖೆಯ ಕುರಿತು ಚರ್ಚಿಸಲು ಭೇಟಿ ಮಾಡಿದ್ದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

0% ಬಡ್ಡಿ ಚಿನ್ನದ ಸಾಲ ಹೆಸರಲ್ಲಿ ವಂಚಿಸಿದ್ದ ಇಬ್ಬರ ಬಂಧನ, 1.80 ಕೋಟಿ ಮೌಲ್ಯದ ಆಭರಣ ವಶ

ಬೆಂಗಳೂರು,ನ.4- ಸಾರ್ವಜನಿಕರಿಗೆ 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ವಂಚಿಸಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1.80 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ಚಿನ್ನದ ಅಂಗಡಿಯೊಂದನ್ನು ತೆರೆದಿರುವ ಆರೋಪಿ ಮತ್ತೊಬ್ಬನೊಂದಿಗೆ ಸೇರಿಕೊಂಡು 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ಸಾರ್ವಜನಿ ಕರನ್ನು ಆಕರ್ಷಿಸಿ ಅವರುಗಳಿಂದ ಚಿನ್ನ ಅಡಮಾನವಿಟ್ಟಿಸಿಕೊಂಡು ನಂತರ ಆ ಆಭರಣಗಳನ್ನು ಕರಗಿಸುತ್ತಿದ್ದುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಈತ ಆಮಿಷ ಒಡ್ಡುತ್ತಿದ್ದ ಜಾಹಿರಾತು ಪ್ರಚಾರವನ್ನು ನಂಬಿದ ಅನೇಕರು ತಮ ಚಿನ್ನವನ್ನು ಅಡಮಾನವಿಡಲು ಮುಂದೆ ಬಂದು ಸಾಲ ಪಡೆದರು. ಆದರೆ ಅವರಿಗೆ ಚಿನ್ನದ ನಿಜವಾದ ಮೌಲ್ಯದ ಕೇವಲ ಶೇ.50-60 ರಷ್ಟು ಮೊತ್ತ ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು ಮತ್ತು ಕನಿಷ್ಠ 11 ತಿಂಗಳುಗಳ ಅವಧಿಯ ವರೆಗೆ ಚಿನ್ನವನ್ನು ಬಿಡಿಸಿಕೊಳ್ಳಬಾರದೆಂದು ಷರತ್‌ನ್ನು ಆರೋಪಿ ವಿಧಿಸಿದ್ದನು.

ತದ ನಂತರದಲ್ಲಿಆರೋಪಿ ಅಡಮಾನವಿಟ್ಟುಕೊಂಡಿದ್ದ ಚಿನ್ನವನ್ನು ಅಕ್ರಮವಾಗಿ ಎಚ್‌ಆರ್‌ಬಿಆರ್‌ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ, ಸುಮಾರು ಶೇ.40ರಿಂದ 50 ರಷ್ಟು ಲಾಭ ಗಳಿಸುತ್ತಿದ್ದನು. ಒಟ್ಟಾರೆಯಾಗಿ ಈ ಯೋಜನೆಯಡಿ ಸುಮಾರು 4 ಕೆ.ಜಿ. ಚಿನ್ನ ವಂಚಿಸಲ್ಪಟ್ಟಿದೆ. 11 ತಿಂಗಳ ಬಳಿಕ ಆರೋಪಿಯು ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದು, ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಚಿನ್ನ ಅಡವಿಟ್ಟವರು ಮೋಸ ಹೋಗಿರುವುದು ಅರಿತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಪೀಣ್ಯಾದಲ್ಲಿ ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ನಂತರ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿ ಎಚ್‌ಆರ್‌ಬಿಆರ್‌ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದ 1 ಕೆ.ಜಿ 478 ಗ್ರಾಂ ಚಿನ್ನಾಭರಣ ಮತ್ತು 5 ಕೆ.ಜಿ ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ತನಿಖೆ ಮುಂದುವರೆಸಿದ ಪೊಲೀಸರು ಈತನಿಗೆ ಸಹಕರಿಸಿದ ಮತ್ತೊಬ್ಬನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಮಂಗಳೂರು ಹಾಗೂ ಕೇರಳ ರಾಜ್ಯದಲ್ಲಿಯೂ ಇದೇ ರೀತಿಯ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಸಾರ್ವಜನಿಕ ಮನವಿ:ಚಿನ್ನವನ್ನು ಅಡಮಾನವಿಡುವ ಮೊದಲು ಸಂಸ್ಥೆಯ ಪರವಾನಗಿ ಮತ್ತು ನೈಜತೆಯನ್ನು ಸಾರ್ವಜನಿಕರು ಪರಿಶೀಲಿಸಬೇಕು. 0% ಬಡ್ಡಿ ಎಂಬಂತಹ ಅಸಾಧ್ಯ ಯೋಜನೆಗಳಿಗೆ ಬಲಿಯಾಗಬೇಡಿ. ಅನುಮಾನಾಸ್ಪದ ಯೋಜನೆಗಳು ಕಂಡುಬಂದರೆ ಸಮೀಪದ ಪೊಲೀಸ್‌‍ ಠಾಣೆ ಅಥವಾ ಸಿಸಿಬಿ ವಿಭಾಗಕ್ಕೆ ತಕ್ಷಣ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.

ಈ ಕಾರ್ಯಾಚರಣೆಯನ್ನು ಸಿಸಿಬಿ ಅಪರಾಧ ವಿಭಾಗದ ಸಂಯುಕ್ತ ಪೊಲೀಸ್‌‍ ಆಯುಕ್ತ ಅಜಯ್‌ ಹಿಲೋರಿ ಮತ್ತು ಉಪ ಪೊಲೀಸ್‌‍ ಆಯುಕ್ತರಾಜಾ ಇಮಾಮ್‌ ಕಾಸಿಂ ಅವರ ಮಾರ್ಗದರ್ಶನದಲ್ಲಿ, ಎಸಿಪಿ ನಾಗರಾಜ್‌ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಕಿಲ್ಲರ್ ಕೆಮ್ಮು ಸಿರಪ್‌ ಪ್ರಕರಣದಲ್ಲಿ ಮತ್ತೊಬ್ಬನ ಬಂಧನ

ಚಿಂದ್ವಾರ, ನ. 4 (ಪಿಟಿಐ)- ಮಧ್ಯಪ್ರದೇಶದಲ್ಲಿ 24 ಮಕ್ಕಳ ಪ್ರಾಣವನ್ನು ಬಲಿ ಪಡೆದ ಕೆಮ್ಮಿನ ಸಿರಪ್‌ ದುರಂತದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಾ. ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಅಸ್ವಸ್ಥ ಮಕ್ಕಳಿಗೆ ಕಲುಷಿತ ಕೆಮ್ಮಿನ ಸಿರಪ್‌ ಕೋಲ್ಡ್ರಿಫ್‌ ಅನ್ನು ಶಿಫಾರಸು ಮಾಡಿದ್ದ ಚಿಂದ್ವಾರ ಮೂಲದ ಡಾ. ಸೋನಿ ಅವರನ್ನು ಮೂತ್ರಪಿಂಡ ವೈಫಲ್ಯದಿಂದಾಗಿ ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲಾಗಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ ಅವರ ಪತ್ನಿ ಜ್ಯೋತಿ ಸೋನಿ ಅವರನ್ನು ತಡರಾತ್ರಿ ಚಿಂದ್ವಾರ ಜಿಲ್ಲೆಯ ಪರಾಸಿಯಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸ್‌‍ ಉಪ ವಿಭಾಗೀಯ ಕಚೇರಿ ಮತ್ತು ವಿಶೇಷ ತನಿಖಾ ತಂಡದ (ಎಸ್‌‍ಐಟಿ) ಉಸ್ತುವಾರಿ ಜಿತೇಂದ್ರ ಜಾಟ್‌ ತಿಳಿಸಿದ್ದಾರೆ.

ಅವರು ಹಲವಾರು ಬಲಿಪಶುಗಳಿಗೆ ಕೆಮ್ಮಿನ ಸಿರಪ್‌ ಮಾರಾಟ ಮಾಡಿದ ವೈದ್ಯಕೀಯ ಅಂಗಡಿಯ ಮಾಲೀಕರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಕೆಮ್ಮು ಸಿರಪ್‌ ದುರಂತಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮಕ್ಕಳ ಸಾವಿನ ನಂತರ, ತಮಿಳುನಾಡು ಸರ್ಕಾರವು ಕೆಮ್ಮಿನ ಸಿರಪ್‌ ತಯಾರಿಕಾ ಕಂಪನಿಯಾದ ಸ್ರೇಸನ್‌ ಫಾರ್ಮಾದ ಪರವಾನಗಿಯನ್ನು ರದ್ದುಗೊಳಿಸಿತು.ಬಂಧಿತರಲ್ಲಿ ಶ್ರೀಸನ್‌ ಫಾರ್ಮಾದ ಮಾಲೀಕ ಜಿ ರಂಗನಾಥನ್‌‍, ವೈದ್ಯಕೀಯ ಪ್ರತಿನಿಧಿ ಸತೀಶ್‌ ವರ್ಮಾ, ರಸಾಯನಶಾಸ್ತ್ರಜ್ಞ ಕೆ ಮಹೇಶ್ವರಿ, ಸಗಟು ವ್ಯಾಪಾರಿ ರಾಜೇಶ್‌ ಸೋನಿ ಮತ್ತು ವೈದ್ಯಕೀಯ ಅಂಗಡಿಯ ಔಷಧಿಕಾರ ಸೌರಭ್‌ ಜೈನ್‌ ಸೇರಿದ್ದಾರೆ.

ಮಧ್ಯಪ್ರದೇಶದ 24 ಮಕ್ಕಳು, ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ ನೀಡಿದ ನಂತರ ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ.
ನೆರೆಯ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ ನಂತರ ಕನಿಷ್ಠ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ದುರಂತವು ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಗುರುತಿಸಲಾದ ಮೂರು ಗುಣಮಟ್ಟದ ಮೌಖಿಕ ಕೆಮ್ಮಿನ ಸಿರಪ್‌ಗಳಾದ ಕೋಲ್ಡ್ರಿಫ್‌‍, ರೆಸ್ಪಿಫ್ರೆಶ್‌ ಟಿಆರ್‌ ಮತ್ತು ರೀಲೈಫ್‌ ವಿರುದ್ಧ ಎಚ್ಚರಿಕೆ ನೀಡಲು ಕಾರಣವಾಗಿದೆ.