Thursday, November 6, 2025
Home Blog Page 50

ವಿಜಯಪುರ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

ವಿಜಯಪುರ,ಅ.13-ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಇಬ್ಬರು ಯುವಕರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮೀಣ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಯುವಕರನ್ನು ತಾಲ್ಲೂಕಿನ ಕನ್ನೂರು ಗ್ರಾಮದ ಸಾಗರ್‌ ಬೆಳುಂಡಗಿ (26) ಮತ್ತು ಇಸಾಕ್‌ ಖುರೇಶಿ (24) ಎಂದು ಗುರುತಿಸಲಾಗಿದೆ.

ರಾತ್ರಿ 10.30 ರ ಸುಮಾರಿನಲ್ಲಿ ಇವರಿಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಇಬ್ಬರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಜೋಡಿ ಕೊಲೆಯ ತನಿಖೆ ಕೈಗೊಂಡಿರುವ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ದೃಶ್ಯಾವಳಿಗಳನ್ನು ಆಧರಿಸಿ, ಹಂತಕರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

ಈ ಜೋಡಿ ಕೊಲೆಯಿಂದ ಕನ್ನೂರು ಗ್ರಾಮದ ಜನತೆ ಆತಂಕಗೊಂಡಿದ್ದಾರೆ.
ಎರಡು ವರ್ಷದ ಹಿಂದೆ ಗ್ರಾಮದ ಈರಣ್ಣಗೌಡ ಎಂಬುವವರ ಮೇಲೆ ಈ ಇಬ್ಬರು ಹಲ್ಲೆ ನಡೆಸಿದ್ದರು, ಕೆಲ ದಿನಗಳ ಹಿಂದೆ ಚಿಕಿತ್ಸೆ ಲಿಸದೇ ಈರಣ್ಣಗೌಡ ಮೃತಪಟ್ಟಿದ್ದಾರೆ. ಇದೇ ದ್ವೇಷಕ್ಕೆ ಈ ಇಬ್ಬರನ್ನು ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.

ಚಳಿಗಾಲದಲ್ಲಿ ಭಾರತದೊಳಗೆ ನುಸುಳಲು ಕಾದು ಕುಳಿತ ಉಗ್ರರು, ಗಡಿಯಲ್ಲಿ ಸೇನೆ ಹೈಅಲರ್ಟ್

ಶ್ರೀನಗರ, ಅ.13- ಚಳಿಗಾಲದ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ತಡೆಯುವ ಸಲುವಾಗಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಎಲ್‌ಒಸಿಯಲ್ಲಿ ( ಗಡಿ ನಿಯಂತ್ರಣ ರೇಖೆ) ಉಗ್ರ ಲಾಂಚ್‌ಪ್ಯಾಡ್‌ಗಳು ಸಕ್ರಿಯಗೊಂಡಿರುವ ಹಿನ್ನೆಲೆ ಗಡಿಯುದ್ದಕ್ಕೂ (ಗಡಿ ಭದ್ರತಾ ಪಡೆ) ಕಟ್ಟೆಚ್ಚರ ವಹಿಸಿದೆ.ಹೌದು. ಗುಪ್ತಚರ ವರದಿಗಳ ಪ್ರಕಾರ, ಎಲ್‌ಒಸಿ ಗಡಿಯುದ್ಧಕ್ಕೂ ಹಲವಾರು ಲಾಂಚ್‌ ಪ್ಯಾಡ್‌ಗಳಲ್ಲಿ ಭಯೋತ್ಪಾದಕರು ಕಣಿವೆಯೊಳಗೆ ನುಸುಳಲು ಕಾಯುತ್ತಿದ್ದಾರೆ.

ಚಳಿಗಾಲದ ಸಂದರ್ಭದಲ್ಲಿ ಇದು ನಡೆಯುತ್ತಿರುತ್ತದೆ. ಹಾಗಾಗಿ ಚಳಿಗಾಲಕ್ಕೂ ಮುನ್ನವೇ ಕಟ್ಟೆಚ್ಚರ ವಹಿಸಲಾಗಿದೆ ಎಂದು ಬಿಎಸ್‌‍ಎಫ್‌ ಮೂಲಗಳು ತಿಳಿಸಿವೆ.ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದ ವುಲರ್‌ 2.0 ಮ್ಯಾರಥಾನ್‌ ವೇಳೆ ಈ ಕುರಿತು ಬಿಎಸ್‌‍ಎಫ್‌‍ ಹೆಚ್ಚುವರಿ ಮಹಾನಿರ್ದೇಶಕ ಸತೀಶ್‌ ಎಸ್‌‍. ಖಂಡ್ರೆ ಮಾತನಾಡಿದರು.

ಚಳಿಗಾಲ ಶುರುವಾಗುತ್ತಿದ್ದಂತೆ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಹಾಗಾಗಿ ಗಡಿಯಲ್ಲಿ ಕಣ್ಗಾವಲು ಬಲಪಡಿಸಿದ್ದೇವೆ. ನಮ್ಮ ಸೈನಿಕರು, ಅಧಿಕಾರಿಗಳನ್ನ ಅಲರ್ಟ್‌ ಮಾಡಿದ್ದೇವೆ. ಗುಪ್ತಚರ ಮಾಹಿತಿಯ ಪ್ರಕಾರ, ಈಗಾಗಲೇ ಗಡಿಯಲ್ಲಿ ಹಲವಾರು ಭಯೋತ್ಪಾದಕ ಲಾಂಚ್‌ ಪ್ಯಾಡ್‌ಗಳನ್ನ ಸಕ್ರಿಯಗೊಳಿಸಿದೆ. ಅಲ್ಲಿಂದ ಭಯೋತ್ಪಾದಕರು ಒಳನುಸುಳಲು ತಯಾರಿ ನಡೆಸುತ್ತಿದ್ದಾರೆ.

ಸದ್ಯಕ್ಕೆ ಎಷ್ಟು ಉಗ್ರರು ಇದ್ದಾರೆ ಅನ್ನೋದು ಅಂದಾಜು ಮಾಡುವುದು ಕಷ್ಟ. ಆದ್ರೆ ಕೆಲ ಚಟುವಟಿಕೆಗಳು ಸಕ್ರಿಯಗೊಂಡಿರುವ ಬಗ್ಗೆ ವರದಿ ಬಂದಿದೆ. ಹಾಗಾಗಿ ನಾವು ಗಡಿಯ ಎಲ್ಲಾ ಭಾಗದಲ್ಲು ಸಕ್ರಿಯವಾಗಿದ್ದೇವೆ ಎಂದು ತಿಳಿಸಿದ್ದಾರೆ.

ಗುಪ್ತಚರ ವರದಿ ಬೆನ್ನಲ್ಲೇ ಗಡಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಬಿಎಸ್‌‍ಎಫ್‌ ಹಾಗೂ ಭಾರತೀಯ ಸೇನೆ ಸಂಪೂರ್ಣ ಸಿದ್ಧವಾಗಿದ್ದು, ಜಂಟಿಯಾಗಿ ಕಣ್ಗಾವಲು ನಿಯೋಜಿಸಲಾಗಿದೆ. ನಮ್ಮ ಸೈನಿಕರ ಕಣ್ತಪ್ಪಿಸಿ ಬರಲು ಯಾರಿಂದಲೂ ಸಾಧ್ಯವಿಲ್ಲ ಎಂದಿದೆ ಬಿಎಸ್‌‍ಎಪ್‌‍.

ಚಳಿಗಾಲದಲ್ಲಿ ಏಕೆ ನುಸುಳುವಿಕೆ ಹೆಚ್ಚಳ?ಚಳಿಗಾಲದಲ್ಲಿ ಹಿಮಪಾತದಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಅನೇಕ ಮಾರ್ಗಗಳು ಮುಚ್ಚಿಕೊಳ್ಳುತ್ತವೆ. ಇದರ ಉಪಯೋಗ ಪಡೆದುಕೊಳ್ಳುವ ಭಯೋತ್ಪಾದಕರು ಒಳಗೆ ನುಸುಳಲು ಯತ್ನಿಸುತ್ತಾರೆ. ಹೀಗಾಗಿ ಬಿಎಸ್‌‍ಎಫ್‌ ಹಗಲು ಮತ್ತು ರಾತ್ರಿ ಕಣ್ಗಾವಲು ಇರಿಸಿದೆ. ಡ್ರೋನ್‌ಗಳನ್ನು ಸಹ ನಿಯೋಜನೆ ಮಾಡಲಾಗಿದೆ.

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅತ್ಯಾಚಾರಿ ವಿರುದ್ಧ NSA ಕಾಯ್ದೆ ಪ್ರಯೋಗ

ಭದೋಹಿ, ಅ. 13 (ಪಿಟಿಐ) ಉತ್ತರ ಪ್ರದೇಶದಲ್ಲಿ ಎಂಟು ವರ್ಷದ ಬುಡಕಟ್ಟು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯ ವಿರುದ್ಧ ಇಲ್ಲಿನ ಸ್ಥಳೀಯ ಆಡಳಿತವು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌‍ಎ) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಆರೋಪಿಗಳ ಮೇಲೆ ಎನ್‌ಎಸ್‌‍ಎಯ ಕಾಯ್ದೆಯಡಿ ಪ್ರಕರಣ ದಾಖಲಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಶೈಲೇಶ್‌ ಕುಮಾರ್‌ ಅನುಮೋದನೆ ನೀಡಿದ್ದಾರೆ ಎಂದು ಭದೋಹಿ ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್‌‍ಪಿ) ಅಭಿಮನ್ಯು ಮಾಂಗ್ಲಿಕ್‌ ತಿಳಿಸಿದ್ದಾರೆ.

ಭಾರತದ ರಕ್ಷಣೆಗೆ ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸುವುದನ್ನು ತಡೆಯಲು ವ್ಯಕ್ತಿಗಳನ್ನು ಬಂಧಿಸಲು ಎನ್‌ಎಸ್‌‍ಎ ಕೇಂದ್ರ ಮತ್ತು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ. ಗರಿಷ್ಠ ಬಂಧನ ಅವಧಿ 12 ತಿಂಗಳುಗಳು, ಆದರೂ ಇದನ್ನು ಮೊದಲೇ ರದ್ದುಗೊಳಿಸಬಹುದು.

ಇದು ತಡೆಗಟ್ಟುವ ಬಂಧನವಾಗಿದೆಯೇ ಹೊರತು ಬಂಧನವಲ್ಲದ ಕಾರಣ, ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಯಾವುದೇ ಕಾನೂನು ಬಾಧ್ಯತೆಯಿಲ್ಲ.ಸೂರಿಯಾವಾನ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಬುಡಕಟ್ಟು ಹಳ್ಳಿಯಲ್ಲಿ ಜುಲೈ 11 ರ ರಾತ್ರಿ ಬಾಲಕಿ ತನ್ನ ಅಜ್ಜಿಯರೊಂದಿಗೆ ಮಲಗಿದ್ದಾಗ ಆರೋಪಿಯು ಬಾಲಕಿಯನ್ನು ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ ಎಂದು ಎಸ್‌‍ಪಿ ಹೇಳಿದರು.

ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಮರುದಿನ ಬೆಳಿಗ್ಗೆ ಭದೋಹಿ-ಜೌನ್‌ಪುರ ಗಡಿಯಲ್ಲಿರುವ ಕುಸಾ ನದಿಯ ಬಳಿಯ ಮರದ ಕೆಳಗೆ ಬಾಲಕಿ ಬೆತ್ತಲೆಯಾಗಿ ಬಿದ್ದಿರುವುದು ಕಂಡುಬಂದಿದೆ ಎಂದು ಅಧಿಕಾರಿ ಹೇಳಿದರು. ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಜುಲೈ 12 ರಂದು, ಶಂಕಿತನನ್ನು ಕುಸಾ ನದಿಯ ಸೇತುವೆಯ ಬಳಿ ತಡೆಹಿಡಿಯಲಾಯಿತು ಮತ್ತು ಮೂಲೆಗುಂಪಾದ ನಂತರ ಪೊಲೀಸರ ಮೇಲೆ ಗುಂಡು ಹಾರಿಸಿದನು. ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ, ಬಂಧಿಸುವ ಮೊದಲು ಒಂದು ಗುಂಡು ಅವನ ಕಾಲಿಗೆ ತಗುಲಿತು ಎಂದು ಮಾಂಗ್ಲಿಕ್‌ ಹೇಳಿದರು.ವಿಚಾರಣೆಯ ಸಮಯದಲ್ಲಿ, ನೆರೆಯ ಜೌನ್‌ಪುರ ಜಿಲ್ಲೆಯ 25 ವರ್ಷದ ಆರೋಪಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಎಸ್‌‍ಪಿ ಹೇಳಿದರು.

ಕಿಲ್ಲರ್ ಕಫ್ ಸಿರಪ್ ಪ್ರಕರಣದ ಬೆನ್ನು ಬಿದ್ದ ಇಡಿ

ಚೆನ್ನೈ, ಅ. 13 (ಪಿಟಿಐ) ಮಧ್ಯಪ್ರದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ ತಯಾರಕರಾದ ಶ್ರೀ ಸ್ರಿಸನ್‌ ಫಾರ್ಮಾಸ್ಯುಟಿಕಲ್ಸ್ ಮತ್ತು ತಮಿಳುನಾಡಿನ ಎಫ್‌ಡಿಎಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಇಂದು ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಚೆನ್ನೈನಲ್ಲಿ ಕನಿಷ್ಠ ಏಳು ಸ್ಥಳಗಳನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಒಳಗೊಳ್ಳುತ್ತದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ರಿಸನ್‌ ಫಾರ್ಮಾಸ್ಯುಟಿಕಲ್‌್ಸ ವಿರುದ್ಧ ದಾಖಲಾಗಿರುವ ಪೊಲೀಸ್‌‍ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಫೆಡರಲ್‌ ತನಿಖಾ ಸಂಸ್ಥೆ ಹಣ ವರ್ಗಾವಣೆ ವಿರೋಧಿ ಕಾನೂನಿನಡಿಯಲ್ಲಿ ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಮಧ್ಯಪ್ರದೇಶದಲ್ಲಿ ಐದು ವರ್ಷದೊಳಗಿನ ಕನಿಷ್ಠ 22 ಮಕ್ಕಳು ಕೋಲ್ಡ್ರಿಫ್‌ ನೀಡಿದ ನಂತರ ಸಾವನ್ನಪ್ಪಿದ್ದಾರೆ.2011 ರಲ್ಲಿ ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ (ಟಿಎನ್‌ಎಫ್‌ಡಿಎ) ಪರವಾನಗಿ ಪಡೆದ ಕಾಂಚೀಪುರಂ ಮೂಲದ
ಸ್ರಿಸನ್‌ ಫಾರ್ಮಾಸ್ಯುಟಿಕಲ್ಸ್ , ಅದರ ಕಳಪೆ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಔಷಧ ಸುರಕ್ಷತಾ ನಿಯಮಗಳ ಬಹು ಉಲ್ಲಂಘನೆಗಳ ಹೊರತಾಗಿಯೂ ಒಂದು ದಶಕಕ್ಕೂ ಹೆಚ್ಚು ಕಾಲ ಅನಿಯಂತ್ರಿತವಾಗಿ ಕಾರ್ಯಾಚರಣೆಗಳನ್ನು ಮುಂದುವರೆಸಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌‍ಸಿಒ) ತಿಳಿಸಿದೆ.

ಕೆಮ್ಮಿನ ಸಿರಪ್‌ನಲ್ಲಿ ಡೈಥಿಲೀನ್‌ ಗ್ಲೈಕಾಲ್‌ ಎಂಬ ವಿಷಕಾರಿ ವಸ್ತುವನ್ನು ಅಪಾಯಕಾರಿಯಾಗಿ ಕಲಬೆರಕೆ ಮಾಡಿರುವುದು ಕಂಡುಬಂದಿದೆ.ಸ್ರೇಸನ್‌ ಫಾರ್ಮಾಸ್ಯುಟಿಕಲ್‌್ಸನ ಮಾಲೀಕ ಜಿ ರಂಗನಾಥನ್‌ ಅವರನ್ನು ಅಕ್ಟೋಬರ್‌ 9 ರಂದು ಮಧ್ಯಪ್ರದೇಶ ಪೊಲೀಸರು ಬಂಧಿಸಿದರು.ಮಕ್ಕಳ ಸಾವಿನ ನಂತರ, ಮಧ್ಯಪ್ರದೇಶ ಸರ್ಕಾರ ಇಬ್ಬರು ಡ್ರಗ್‌ ಇನ್ಸ್ ಪೆಕ್ಟರ್‌ಗಳು ಮತ್ತು ಯ ಉಪ ನಿರ್ದೇಶಕರನ್ನು ಅಮಾನತುಗೊಳಿಸಿತು.

ರಾಜ್ಯದ ಡ್ರಗ್‌ ಕಂಟ್ರೋಲರ್‌ ಅನ್ನು ವರ್ಗಾಯಿಸಿ, ಸಾವಿನ ಬಗ್ಗೆ ತನಿಖೆಗೆ ಆದೇಶಿಸಿತು, ಆದರೆ ಪೊಲೀಸರು ನಿರ್ಲಕ್ಷ್ಯದ ಆರೋಪದ ಮೇಲೆ ಚಿಂದ್ವಾರ ಜಿಲ್ಲೆಯ ವೈದ್ಯರನ್ನು ಬಂಧಿಸಿದರು.ತಮಿಳುನಾಡು ಸರ್ಕಾರವು ಇಬ್ಬರು ಹಿರಿಯ ರಾಜ್ಯ ಡ್ರಗ್‌ ಇನ್‌್ಸಪೆಕ್ಟರ್‌ಗಳನ್ನು ಅಮಾನತುಗೊಳಿಸಿದೆ ಮತ್ತು ಸ್ರೇಸನ್‌ ಫಾರ್ಮಾಸ್ಯುಟಿಕಲ್‌್ಸ ಅನ್ನು ಮುಚ್ಚಲು ಆದೇಶಿಸಿದೆ

ಇಂದಿನ ಅಪಂಚಾಂಗ ಮತ್ತು ರಾಶಿಭವಿಷ್ಯ (13-10-2025)

ನಿತ್ಯ ನೀತಿ : ಸಾಧಿಸುವ ತನಕ ಕಿವುಡನಾಗು.. ಸಾಧಿಸಿದ ಬಳಿಕ ಮೂಕನಾಗು..

ಪಂಚಾಂಗ : ಸೋಮವಾರ, 13-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಅರ್ದ್ರಾ / ಯೋಗ: ಪರಿಘ / ಕರಣ: ಬಾಲವ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.02
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ಯಾವುದೇ ಗೊಂದಲಗಳು ಸೃಷ್ಟಿಯಾಗಬಹುದು.
ವೃಷಭ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ತಮ್ಮ ಹಣ ಕಳೆದುಕೊಳ್ಳಬಹುದು.
ಮಿಥುನ: ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದ ರಿಂದ ನಿಮ್ಮ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ.

ಕಟಕ: ದೈಹಿಕ ಒತ್ತಡ ಕಡಿಮೆಯಾಗುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಮಾತುಗಳು ನಿಮ್ಮ ಆಪ್ತರಿಗೆ ಅರ್ಥ ವಾಗುವುದಿಲ್ಲವಾದ್ದರಿಂದ ತೊಂದರೆಗೆ ಸಿಲುಕುವಿರಿ
ಕನ್ಯಾ: ವ್ಯವಹಾರದ ವಿಷಯದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ.

ತುಲಾ: ಹಳೆಯ ಸ್ನೇಹಿತರ ಭೇಟಿಯಿಂದ ಗೊಂದಲಗಳಿಗೆ ಪರಿಹಾರ ದೊರೆಯಲಿವೆ.
ವೃಶ್ಚಿಕ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ.
ಧನುಸ್ಸು: ಖರ್ಚು ಕಡಿತ ಮಾಡುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.

ಮಕರ: ಪ್ರೇಮ ಸಂಬಂಧಗಳು ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕುಂಭ: ತಾಯಿ-ತಂದೆ ಮತ್ತು ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮೀನ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ.

ನಮ್ಮ ಮೆಟ್ರೋಗೆ ನಾಡಪ್ರಭು ಕೆಂಪೇಗೌಡರ ಹೆಸರಿಡುವಂತೆ ನಂಜಾವಧೂತ ಸ್ವಾಮೀಜಿ ಆಗ್ರಹ

ಬೆಂಗಳೂರು: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಮ್ಮ ಮೆಟ್ರೋ ರೈಲಿಗೆ ನಾಮಕರಣ ಮಾಡುವಂತೆ ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಂಜಾವಧೂತ ಸ್ವಾಮೀಜಿ ಅವರು ಆಗ್ರಹಿಸಿದರು.

ರಾಜ್ಯ ಒಕ್ಕಲಿಗರ ಸಂಘವು ಕೃಷ್ಣಪ್ಪ ರಂಗಮ್ಮ ಎಜ್ಯುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎಸ್.ಎಸ್. ಎಲ್.ಸಿ.ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು. ಕೆಂಪೇಗೌಡರು ಬೆಂಗಳೂರನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಹೆಸರನ್ನು ನಮ್ಮ ಮೆಟ್ರೋ ರೈಲಿಗೆ ನಾಮಕರಣ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಭಕ್ತಿ ಭಂಡಾರಿ ಬಸವಣ್ಣ ಅವರ ಹೆಸರನ್ನು ದೊಡ್ಡ ಯೋಜನೆಗೆ ನೀಡಲಿ. ಕೆಂಪೇಗೌಡರ ಹೆಸರನ್ನು ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಾಮಕರಣ ಮಾಡಿ ಎಂದು ನಾವು ಕೇಳುತ್ತಿಲ್ಲ ಎಂದರು. ರಾಜ್ಯ ಒಕ್ಕಲಿಗರ ಸಂಘವು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಸರಿನಲ್ಲಿ ಮತ್ತೊಂದು ಮೆಡಿಕಲ್ ಕಾಲೇಜಿನ ಸ್ಥಾಪಿಸಬೇಕು. ಹಾಗೆಯೇ ಎಂಜಿನಿಯರಿಂಗ್ ಕಾಲೇಜನ್ನೂ ಸ್ಥಾಪನೆ ಮಾಡಬೇಕು. ಸಾಧ್ಯವಾದರೆ ಒಕ್ಕಲಿಗ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡೂ ಕಾಲೇಜಿನಲ್ಲಿ ತಲಾ 10 ಸೀಟುಗಳನ್ನು ಉಚಿತವಾಗಿ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ಮಾಡಿದರು.

ದೇವೇಗೌಡರು ಮಾದರಿ ಆಡಳಿತವನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿ ಕಾಲೇಜು ಸ್ಥಾಪಿಸಿದರೆ ಎಲ್ಲರೂ ಒಪ್ಪುತ್ತಾರೆ ಎಂದು ಅಭಿಪ್ರಾಯಪಟ್ಟರು.
ಪ್ರತಿಭಾವಂತ ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ವಿಶೇಷ ಸನ್ಮಾನ ಮಾಡುವಂತಹ ಸಾಧನೆ ಮಾಡಬಹುದು ತಂದೆ ತಾಯಿಗಳ ಕಷ್ಟ-ಕಾರ್ಪಣ್ಯ ಪ್ರೀತಿ ತ್ಯಾಗವನ್ನು ಮಕ್ಕಳು ಮರೆಯಬಾರದು. ಸಮಾಜದಲ್ಲಿ ತಮ್ಮ ತಂದೆ ತಾಯಿ ತಲೆಯೆತ್ತಿ ನಡೆಯುವಂತೆ ಕೀರ್ತಿವಂತರಾಗಿ ಸಮಾಜಕ್ಕೆ ಆಸ್ತಿಯಾಗಿ ದೊಡ್ಡ ದೊಡ್ಡ ಕೊಡುಗೆಯನ್ನು ನೀಡಬೇಕು. ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೆ, ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕೆಂದು ಕಿವಿಮಾತು ಹೇಳಿದರು‌.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು ಮಾತನಾಡಿ ಒಕ್ಕಲಿಗ ಜನಾಂಗದ ಮಕ್ಕಳಿಗೆ ಶಿಕ್ಷಣ ಕೊಡುವುದು ಬಹಳ ಮುಖ್ಯ. ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಗಮನಹರಿಸುವುದರ ಜೊತೆಗೆ ಹೊಸ ಹೊಸ ಆವಿಷ್ಕಾರಗಳು, ಸಂಶೋಧನೆ, ಸಾಧನೆ ಮಾಡಲು ಮುಂದಾಗಬೇಕು. ಒಕ್ಕಲಿಗರ ಸಂಘವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಒಟ್ಟು 2592ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಸದ್ಯದಲ್ಲೇ ಸರ್ವ ಸದಸ್ಯರ ಸಭೆ ನಡೆಸಲಾಗುವುದು ಎಂದರು.

ಚಲನಚಿತ್ರ ನಟ ಶ್ರೀನಗರ ಕಿಟ್ಟಿ, ರೋಲ್ಸ್ ರಾಯ್ಸ್ ನ ರೋಬೋಟೆಕ್ಸ್ ಇಂಜಿನಿಯರ್ ರಿತುಪರ್ಣ ಕೆ. ಎಸ್., ಸೇವಾ ನಿರತ ಯೋಧ ಬಿ.ಎಸ್. ಭೀಮೇಗೌಡ, ರೈತರತ್ನ ಪ್ರಶಸ್ತಿ ಪುರಸ್ಕೃತ ಸಿ. ಪುಟ್ಟಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮಾಗಡಿ ಆರ್. ಗುರುದೇವ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಜಯಪ್ರಕಾಶ್ ಗೌಡರು, ಒಕ್ಕಲಿಗರ ಸಂಘದ ಗೌರವ ಅಧ್ಯಕ್ಷ ಡಿ. ಹನುಮಂತಯ್ಯ ಪ್ರಧಾನ ಕಾರ್ಯದರ್ಶಿ ಟಿ. ಕೋನಪ್ಪರೆಡ್ಡಿ ಸಹಾಯಕ ಕಾರ್ಯದರ್ಶಿ ಆರ್. ಹನುಮಂತರಾಯಪ್ಪ, ಖಜಾಂಚಿ ಎನ್.ಬಾಲಕೃಷ್ಣ, ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಅಶೋಕ ಎಚ್.ಎನ್., ಎಂ. ಪುಟ್ಟಸ್ವಾಮಿ, ಡಾ. ಟಿ.ಎಚ್. ಆಂಜಿನಪ್ಪ, ಕೃಷ್ಣಪ್ಪ ರಂಗಮ್ಮ ಕೃಷ್ಣ ಟ್ರಸ್ಟ್ ನಿರ್ದೇಶಕರಾದ ಅಶ್ವಿನಿ ನಾಗೇಂದ್ರ ಮೊದಲಾದ ಗಣ್ಯರು ಭಾಗವಹಿಸಿದ್ದರು.

‘ಉದ್ಯಾನವನ ನಡಿಗೆ’ ಕಾರ್ಯಕ್ರಮ : ಸಂವಾದದ ವೇಳೆ ಡಿಕೆಶಿ-ಮುನಿರತ್ನ ನಡುವೆ ವಾಗ್ವಾದ, ಹೈಡ್ರಾಮಾ

ಬೆಂಗಳೂರು, ಅ.12- ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಉದ್ಯಾನವನ ನಡಿಗೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಮುನಿರತ್ನ ಪ್ರತಿಭಟನೆ ನಡೆಸಿ, ಗದ್ದಲ ಎಬ್ಬಿಸಿದ್ದರಿಂದಾಗಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ತಮ ಮೇಲೆ ಹಲ್ಲೆಯಾಗಿದೆ ಎಂದು ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕರ ಅಹವಾಲುಗಳನ್ನು ಖುದ್ದು ಆಲಿಸಿ ಬಗೆಹರಿಸುವ ಮೂಲಕ ಬ್ರ್ಯಾಂಡ್‌ ಬೆಂಗಳೂರು ಕಲ್ಪನೆಯನ್ನು ಸಾಕಾರಗೊಳಿಸಲು ಡಿ.ಕೆ.ಶಿವಕುಮಾರ್‌ ಬೆಂಗಳೂರು ನಡಿಗೆ ಆರಂಭಿಸಿದ್ದಾರೆ. ನಿನ್ನೆ ಲಾಲ್‌ಬಾಗ್‌ನಲ್ಲಿ ಕಾರ್ಯಕ್ರಮ ನಡೆಸಿದರು. ಇಂದು ಮತ್ತಿಕೆರೆಯ ಜೆ.ಪಿ. ಪಾರ್ಕ್‌ನಲ್ಲಿ ವಾಯುವಿಹಾರಿಗಳೊಂದಿಗೆ ನಡಿಗೆ, ನಾಗರಿಕರೊಂದಿಗೆ ಸ್ಪಂದನೆ ಹಾಗೂ ವಿವಿಧ ಸ್ಥಳಗಳ ಪರಿಶೀಲನೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಆರಂಭವಾದಾಗ ಶಾಸಕ ಮುನಿರತ್ನ ವೇದಿಕೆಯ ಮುಂದೆ ಸಾರ್ವಜನಿಕರೊಂದಿಗೆ ಆರ್‌ಎಸ್‌‍ಎಸ್‌‍ನ ಸಮವಸ್ತ್ರವಾಗಿರುವ ಬಿಳಿ ಅಂಗಿ, ಖಾಕಿ ಪ್ಯಾಂಟ್‌, ಕರಿಟೋಪಿ ಧರಿಸಿ ಕುಳಿತಿದ್ದರು. ಕಾರ್ಯಕ್ರಮ ಚಾಲನೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ಅವರು, ಮುನಿರತ್ನ ಅವರನ್ನು ಎಂಎಲ್‌ಎ ಮೇಲೆ ಬನ್ನಿ ಎಂದು ಕರೆದರು. ಈ ಸಂದರ್ಭದಲ್ಲಿ ನೀರು ಕುಡಿದು ಸಾವರಿಸಿಕೊಳ್ಳುತ್ತಿದ್ದ ಮುನಿರತ್ನ ಡಿ.ಕೆ.ಶಿವಕುಮಾರ್‌ ಕರೆಗೆ ಸ್ಪಂದಿಸಲಿಲ್ಲ, ಕರಿ ಟೋಪಿ ಎಂಎಲ್‌ಎ ಬನ್ನಿ ಎಂದು ಉಪಮುಖ್ಯಮಂತ್ರಿ ಮತ್ತೆ ಕರೆದರು. ಈ ಸಂದರ್ಭದಲ್ಲಿ ವೇದಿಕೆ ಬಳಿ ಹೋದ ಮುನಿರತ್ನ ಉಪಮುಖ್ಯಮಂತ್ರಿ ಅವರಿಂದಲೇ ಮೈಕ್‌ ಪಡೆದು, ಇದು ಸರ್ಕಾರದ ಕಾರ್ಯಕ್ರಮವಾಗಿದ್ದರೂ, ಶಾಸಕನಾದ ನನಗೆ ಆಹ್ವಾನವಿಲ್ಲ, ಸಂಸದರಿಗೂ ಆಹ್ವಾನವಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಫೋಟೋ ಹಾಕಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಹೀಗಾಗಿ ನಾನು ವೇದಿಕೆ ಮೇಲಿರುವುದಿಲ್ಲ. ಬೆಂಗಳೂರಿನ ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಜನರ ನಡುವೆಯೇ ಕುಳಿತಿರುತ್ತೇನೆ ಎಂದು ಹೇಳಿ ವಾಪಸ್‌‍ ಹೋದರು.

ಕಾರ್ಯಕ್ರಮ ಆರಂಭದ ಸಲುವಾಗಿ ಸ್ವಾಗತ ಕೋರುವ ವೇಳೆ ನಿರೂಪಕಿ ಶಾಸಕ ಮುನಿರತ್ನ ಅವರು ವೇದಿಕೆಗೆ ಬರಬೇಕೆಂದು ಮನವಿ ಮಾಡಿದರು. ಈ ವೇಳೆ ಮತ್ತೆ ಎದ್ದು ಬಂದ ಮುನಿರತ್ನ ನಿರೂಪಕಿಯಿಂದ ಮೈಕ್‌ ಕಸಿದುಕೊಂಡು, ಇದು ಸರ್ಕಾರದ ಕಾರ್ಯಕ್ರಮ. ನನಗೆ ಆಹ್ವಾನವಿಲ್ಲ. ಜಿಬಿಎ ಮುಖ್ಯ ಆಯುಕ್ತರೇ ಇದು ನಿಮ ಗಮನಕ್ಕೆ ಇರಲಿ. ಇಲ್ಲಿ ರಾಜಕೀಯ ಬೇಡ, ಶಾಸಕರು, ಸಂಸದರಿಗೆ ಆಹ್ವಾನ ಇಲ್ಲ. ಇದು ಸಾರ್ವಜನಿಕರ ಕುಂದುಕೊರತೆ ಕಾರ್ಯಕ್ರಮವಲ್ಲ, ಕಾಂಗ್ರೆಸ್‌‍ ಕಾರ್ಯಕ್ರಮ ಎಂದು ರೋಷಾವೇಶದ ಮಾತುಗಳನ್ನಾಡಿದರು.

ಈ ವೇಳೆ ಸಿಟ್ಟಾದ ಕಾಂಗ್ರೆಸ್‌‍ ಕಾರ್ಯಕರ್ತರು ಮುನಿರತ್ನ ಅವರನ್ನು ಸುತ್ತುವರೆದು ಪ್ರತಿರೋಧ ವ್ಯಕ್ತಪಡಿಸಿದರು. ಇಲ್ಲಿ ಗೂಂಡಾಗಿರಿ ಮಾಡಲು ಬಂದಿದ್ದೀಯ? ವೇದಿಕೆಯಿಂದ ಕೆಳಗೆ ಇಳಿ, ಇಲ್ಲಿಂದ ಹೊರಡು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇನ್ನೂ ಕೆಲವರು ರೇಪಿಸ್ಟ್‌ ಎಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕಾವೇರಿದ ವಾತಾವರಣ ನಿರ್ಮಾಣವಾದಾಗ ಪೊಲೀಸರು ಮಧ್ಯ ಪ್ರವೇಶಿಸಿ, ಮುನಿರತ್ನ ಅವರನ್ನು ಸುತ್ತುವರೆದು ರಕ್ಷಣೆ ನೀಡಲಾರಂಭಿಸಿದರು. ಈ ಹಂತದಲ್ಲಿ ಮುನಿರತ್ನ ವೇದಿಕೆ ಬಳಿಯೇ ಕುಳಿತು ಧರಣಿ ಆರಂಭಿಸಿದರು. ಅವರನ್ನು ಕರೆದೊಯ್ಯಲು ಬಂದ ಪೊಲೀಸರಿಗೆ ಎಚ್ಚರಿಕೆ ನೀಡಿ, ನನ್ನದು ಮೌನ ಪ್ರತಿಭಟನೆ. ಮುಟ್ಟಿದರೆ ಸುಮನಿರುವುದಿಲ್ಲ. ನಾನೊಬ್ಬ ಶಾಸಕ, ದೌರ್ಜನ್ಯ, ದಬ್ಬಾಳಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಮುನಿರತ್ನ ಅವರ ಗದ್ದಲದಿಂದಾಗಿ ಗೊಂದಲ ನಿರ್ಮಾಣವಾಗಿ ಕಾರ್ಯಕ್ರಮ ಅಸ್ತವ್ಯಸ್ತವಾಗಿತ್ತು. ಡಿ.ಕೆ.ಶಿವಕುಮಾರ್‌ ಮುನಿರತ್ನ ಅವರ ಗದ್ದಲವನ್ನು ಮೌನವಾಗಿ ನೋಡುತ್ತಾ ಕುಳಿತಿದ್ದರು. ಒಂದು ಹಂತದಲ್ಲಿ ಮುನಿರತ್ನ ಅವರ ಬಳಿ ಹೋಗಿ, ಸರ್ಕಾರಿ ಕಾರ್ಯಕ್ರಮವನ್ನು ಕಾಂಗ್ರೆಸ್‌‍ ಕಾರ್ಯಕ್ರಮ ಮಾಡಿದ್ದೀರ ಎಂದು ಕಿಡಿ ಕಾರಿದಾಗ, ಮೈಕ್‌ ಕಿತ್ತುಕೊಂಡು ಅವರನ್ನು ಕಳುಹಿಸಿ ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು.

ಪೊಲೀಸರು ಶಾಸಕರನ್ನು ವೇದಿಕೆ ಬಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋದರು. ಈ ಹಂತದಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ. ಹಿಂದಿನಿಂದ ಒದ್ದಿದ್ದಾರೆ. ಕನಕಪುರದಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡಿದವರು ಬೆಂಗಳೂರಿನಲ್ಲೂ ಅದನ್ನೇ ಮುಂದುವರಿಸಲು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌‍ಎಸ್‌‍ನ 100ನೇ ವರ್ಷಾಚರಣೆ ಮುಗಿಸಿಕೊಂಡು ನಾನು ಇಲ್ಲಿಗೆ ಬಂದಿದ್ದೇನೆ. ಕನಿಷ್ಠ ಮರ್ಯಾದೆ ಕೊಟ್ಟಿಲ್ಲ, ಕರಿ ಟೋಪಿ ಎಂದು ಕರೆಯುತ್ತಾರೆ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಈಗಲೂ ಹೊಡೆಯಲು ಬರುತ್ತಿದ್ದಾರೆ. ನನ್ನ ಆರ್‌ಎಸ್‌‍ಎಸ್‌‍ ಟೋಪಿಯನ್ನು ಕಿತ್ತುಕೊಂಡು, ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ನನ್ನನ್ನು ಹೊಡೆಯಲು ಚೆನ್ನಪಟ್ಟಣ, ರಾಮನಗರ, ಕನಕಪುರದಿಂದ ಪುಡಿರೌಡಿಗಳನ್ನು ಕರೆಸಿದ್ದಾರೆ. ನಮ ಪಕ್ಷಕ್ಕೆ ದ್ರೋಹ ಮಾಡಿ ಉಪಮುಖ್ಯಮಂತ್ರಿ ಅವರ ಸಹೋದರ ಡಿ.ಕೆ. ಸುರೇಶ್‌ನನ್ನು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿದ್ದರೆ, ನಾನು ಒಳ್ಳೆಯವನಾಗಿರುತ್ತಿದ್ದೆ. ಅವರ ಸೋಲಿಗೆ ನಾನು ಕಾರಣ ಎಂಬ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನಗೆ 15 ವರ್ಷದ ಮೊಮಗ ಇದ್ದಾನೆ. ಈಗ ರೇಪ್‌ ಕೇಸ್‌‍ ಹಾಕಿಸಿದ್ದಾರೆ. ಪಾಲಿಕೆ ಸದಸ್ಯರಾಗುವ ಆಕಾಂಕ್ಷಿಗಳಿಂದ ದೂರಿನ ಮೇಲೆ ದೂರು ಕೊಡಿಸುತ್ತಿದ್ದಾರೆ. 7 ವರ್ಷಗಳಿಂದಲೂ ಒಳ್ಳೆಯವನಾಗಿದ್ದ ಮುನಿರತ್ನ ಅವರನ್ನು ಬಿಟ್ಟು ಬಂದ ಮೇಲೆ ರೇಪಿಸ್ಟ್‌ ಆಗಿದ್ದಾನೆ. ದಲಿತ ದೌರ್ಜನ್ಯದ ಪ್ರಕರಣ ದಾಖಲಾಗಿದೆ. ಇವರ ದ್ವೇಷಕ್ಕೆ ಜಾರಕಿಹೊಳಿ, ಕೆ.ಎನ್‌. ರಾಜಣ್ಣ, ಎಚ್‌ಡಿ ರೇವಣ್ಣ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಕಿಡಿಕಾರಿದರು.

ಜಿಬಿಎನ 5 ಪಾಲಿಕೆಗಳನ್ನು ಗೆಲ್ಲಬೇಕು ಎಂಬ ಕಾರಣಕ್ಕೆ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ. 400 ಎಕರೆ ಜಾಗ ಇರುವ ಲಾಲ್‌ಬಾಗ್‌, 200 ಎಕರೆಯಿರುವ ಕಬ್ಬನ್‌ ಪಾರ್ಕ್‌ನಲ್ಲಿ ತಲಾ ಒಂದು ಕಾರ್ಯಕ್ರಮ ಮಾಡಿದ್ದಾರೆ. ನನ್ನ ಕ್ಷೇತ್ರದ ಜೆ.ಪಿ. ಪಾರ್ಕ್‌ನಲ್ಲಿ ಎರಡು ಕಾರ್ಯಕ್ರಮ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿರುವವರನ್ನು ಸುತ್ತಲೂ ನಿಲ್ಲಿಸಿಕೊಂಡಿದ್ದಾರೆ.ನನಗೆ ಯಾವುದೇ ಆಹ್ವಾನ ಬಂದಿಲ್ಲ, ಒಂದು ವೇಳೆ ಆಹ್ವಾನ ಬಂದಿದ್ದರೆ ರಾಜಕೀಯ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಪೊಲೀಸರು ಮುನಿರತ್ನ ಅವರಿಗೆ ನೀರು ಕುಡಿಸಿ ಸಮಾಧಾನ ಪಡಿಸುವ ಮೂಲಕ ಅಲ್ಲಿಂದ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಮಣಿಯದ ಮುನಿರತ್ನ ಧರಣಿ ಆರಂಭಿಸಿದರು. ಪರಿಸ್ಥಿತಿ ನಿಯಂತ್ರಸಿಲು ಪೊಲೀಸರು ಮುನಿರತ್ನ ಅವರನ್ನು ಬಲವಂತವಾಗಿ ಕರೆದೊಯ್ದರು.

ಬೆಂಗಳೂರಲ್ಲಿ ಸಾರ್ವಜನಿಕರ ಜೊತೆ ಡಿಸಿಎಂ ಡಿಕೆಶಿ ಸಂವಾದ

ಬೆಂಗಳೂರು, ಅ.12- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎರಡನೇ ದಿನವೂ ತಮ್ಮ ಉದ್ಯಾನ ನಡಿಗೆಯನ್ನು ಮುಂದುವರೆಸಿದ್ದು, ಬೆಂಗಳೂರು ಉತ್ತರ ಪಾಲಿಕೆಯ ಮತ್ತಿಕೆರೆಯಲ್ಲಿರುವ ಜೆ.ಪಿ. ಪಾರ್ಕ್‌ನಲ್ಲಿ ಸಾರ್ವಜನಿಕರ ಜೊತೆ ಸಂವಾದ ನಡೆಸಿದರು. ಬಿ.ಕೆ.ನಗರದ ಫಾತಿಮಾ ಅವರು, ವಿದ್ಯುತ್‌ ಸಮಸ್ಯೆ ಬಗ್ಗೆ ದೂರು ಹೇಳಿದರು. ಉಚಿತ ವಿದ್ಯುತ್‌ ನೀಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದಾಗ, ವಿದ್ಯುತ್ತೇ ಇಲ್ಲ ಉಚಿತ ತೆಗೆದುಕೊಂಡು ಏನು ಮಾಡೋಣ ಎಂದು ಪ್ರತಿಕ್ರಿಯಿಸಿದರು.

ಸಂಜೆ 7.30ರ ಮೇಲೆ ಉದ್ಯಾನವನದೊಳಗೆ ಬಿಡುತ್ತಿಲ್ಲ, ವಾಕಿಂಗ್‌ ಮಾಡಲು ಸಮಸ್ಯೆಯಾಗುತ್ತಿದೆ. ಸ್ವಚ್ಛತೆಯಿಲ್ಲ ಎಂದು ನಾಗರಿಕರು ದೂರಿದರು.
ಇದು ರಾಜಕೀಯಕ್ಕಾಗಿ ಮಾಡುತ್ತಿರುವ ಸಂವಾದ ಅಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕು, ಬೆಂಗಳೂರಿಗೆ ಹೊಸ ಸ್ವರೂಪ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ವೇದಿಕೆಯಲ್ಲಿ ಹೇಳಿದರು.

ಪ್ರತಿ ಶನಿವಾರ, ಭಾನುವಾರ ಉದ್ಯಾನವನಗಳಿಗೆ ಹೋಗಿ ಜನರನ್ನು ಭೇಟಿ ಮಾಡುತ್ತೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕವಾಗಿ ಮುಕ್ತ ಆಹ್ವಾನ ನೀಡಿದ್ದೇವೆ.
ಇಲ್ಲಿನ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ ಮನಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಹೇಳಿದರು.

ಇಂತಹ ಪ್ರತಿನಿಧಿಯನ್ನು ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ ಎಂದು ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸಾರ್ವಜನಿಕರ ದೂರುಗಳನ್ನು ಆಲಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮ.

ನಿನ್ನೆ ಲಾಲ್‌ಬಾಗ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕ ರಿಜ್ವಾನ್‌ ಅರ್ಷದ್‌ ಬಂದಿದ್ದರು, ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ನೀಡಿದರು. ಮುನಿರತ್ನ ಕೂಡ ಅದೇ ರೀತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆಹ್ವಾನ ನೀಡಲು ಇದು ಶಿಲಾನ್ಯಾಸ ಕಾರ್ಯಕ್ರಮವಲ್ಲ, ಆಗಮಿಸಿದ ಜನ ಪ್ರತಿನಿಧಿಗಳಿಗೆ ಸೂಕ್ತ ಗೌರವ ನೀಡುವುದು ನಮಗೆ ಗೊತ್ತಿದೆ ಎಂದರು.

ವಿಧಾನಸಭೆ ಹಾಗೂ ನಿನ್ನೆ ನಡೆದಂತಹ ಜಿಬಿಎ ಸಭೆಯಲ್ಲಿ ಶಾಸಕರಿಗೆ ಮಾತನಾಡಲು ಅವಕಾಶ ಇತ್ತು. ಇಲ್ಲಿ ಬಂದು ಗದ್ದಲ ಮಾಡುವುದು ಸರಿಯಲ್ಲ, ನಾನು ಜನರ ಅಹವಾಲು ಸ್ವೀಕರಿಸುವ ಕಾರ್ಯಕ್ರಮವನ್ನು ಕಳೆದ ವರ್ಷವೂ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ನಡೆಸಿದ್ದೇನೆ. ಇದು ಹೊಸದಲ್ಲ ಎಂದರು.

ತಮ ಮೇಲೆ ಹಲ್ಲೆ ನಡೆಸಲು ರೌಡಿಗಳನ್ನು ಕರೆಸಲಾಗಿತ್ತು. ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮುನಿರತ್ನ ಅವರ ಮನಸ್ಸಿನಲ್ಲಿದ್ದರೆ, ಅದಕ್ಕೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದರು.ಮುನಿರತ್ನ ಅವರನ್ನು ಇಲ್ಲಿ ನಾಗರಿಕರೇ ಹೊಡೆದು, ಓಡಿಸುತ್ತಿದ್ದರು. ನಾವ್ಯಾರೂ ಮುಟ್ಟುತ್ತಿರಲಿಲ್ಲ. ಜನರಿಗೆ ಅಷ್ಟರ ಮಟ್ಟಿನ ಆಕ್ರೋಶ ಇದೆ. ಕಮೀಷನ್‌ ಕೊಟ್ಟಿಲ್ಲ ಎಂದು 10 ವರ್ಷದಿಂದ ಶಾಸಕರು ಬಿಲ್‌ ಪಾವತಿಸಲು ಬಿಟ್ಟಿಲ್ಲ ಎಂದು ಗುತ್ತಿಗೆದಾರರು ದೂರು ಹೇಳಿಕೊಂಡಿದ್ದಾರೆ. ಅದರ ತನಿಖೆ ನಡೆಸಲಾಗುವುದು ಎಂದರು.

ಮುನಿರತ್ನ ಆರ್‌ಎಸ್‌‍ಎಸ್‌‍ನ ಸಮವಸ್ತ್ರ ಧರಿಸಿ, ಇಲ್ಲಿಗೆ ಬಂದು ಗಲಾಟೆ ಮಾಡುವ ಮೂಲಕ ಆ ಸಂಸ್ಥೆಗೆ ಅವಮಾನ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೂ, ಆರ್‌ಎಸ್‌‍ಎಸ್‌‍ಗೂ ಏನು ಸಂಬಂಧ? ಅವರಿಗೆ ರಾಜಕಾರಣ ಮಾಡಬೇಕು ಎಂಬ ಉದ್ದೇಶ ಇದೆ. ಮಾಧ್ಯಮಗಳು ಪ್ರಚಾರ ನೀಡುತ್ತವೆ. ಅದಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇಂತಹವರಿಂದ ಆರ್‌ಎಸ್‌‍ಎಸ್‌‍ಗೂ ಅಗೌರವ ಎಂದು ತಿರುಗೇಟು ನೀಡಿದರು.

ಬೆಂಗಳೂರಿನ 5 ಪಾಲಿಕೆಗಳಲ್ಲೂ ಜನರ ಸಮಸ್ಯೆಯನ್ನು ಆಲಿಸಲು ಉದ್ಯಾನವನ ನಡಿಗೆ ಆರಂಭಿಸಲಾಗಿದೆ. ಜನರ ಸಮಸ್ಯೆಗಳನ್ನು ಕೇಳಿ ಅವರ ಫೋನ್‌ ನಂಬರ್‌ಗಳನ್ನು ಪಡೆದು ಸ್ಪಂದಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇನ್ನೂ ಸಮಸ್ಯೆಗಳಿದ್ದರೆ 1533 ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಜೆ.ಪಿ.ಪಾರ್ಕ್‌ನಲ್ಲಿ ಹಲವಾರು ಸಮಸ್ಯೆಗಳಿರುವುದನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ. ಈಜುಕೊಳ ಸ್ಥಗಿತಗೊಂಡಿದೆ, ಮಕ್ಕಳ ಆಟದ ಸ್ಥಳ, ಯೋಗ ಕೇಂದ್ರ, ಶೌಚಾಲಯ, ಮಕ್ಕಳ ರೈಲು ಎಲ್ಲವೂ ಅರ್ಧಕ್ಕೆ ನಿಂತಿವೆ. ಈ ಅವ್ಯವಸ್ಥೆಗಳನ್ನು ಹಾಗೂ ಮಳೆ ನೀರಿನ ಸಮಸ್ಯೆ ಮತ್ತು ರಸ್ತೆ ಗುಂಡಿಗಳನ್ನು ಸರಿಪಡಿಸುವುದಾಗಿ ಹೇಳಿದರು.

ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪಿನಿಂದಾಗಿ ಇಂದಿರಾ ಗಾಂಧಿ ಬಲಿಯಾದರು ; ಪಿ.ಚಿದಂಬರಂ

ನವದೆಹಲಿ, ಅ.12- ಕಳೆದ 1984 ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಭಯೋತ್ಪಾದಕರನ್ನು ಹೊರದಬ್ಬಲು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಸೂಚನೆಯ ಮೇರೆಗೆ ನಡೆಸಲಾದ ಆಪರೇಷನ್‌ ಬ್ಲೂ ಸ್ಟಾರ್‌ ತಪ್ಪು ಮಾರ್ಗವಾಗಿತ್ತು ಮತ್ತು ಆ ತಪ್ಪಿಗಾಗಿ ಇಂದಿರಾಜಿ ತಮ್ಮ ಪ್ರಾಣವನ್ನೇ ತೆತ್ತರು ಎಂದು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಆದಾಗ್ಯೂ, ಈ ಕಾರ್ಯಾಚರಣೆಯು ಸೇನೆ, ಪೊಲೀಸ್‌‍, ಗುಪ್ತಚರ ಮತ್ತು ನಾಗರಿಕ ಸೇವೆಯ ಸಂಚಿತ ನಿರ್ಧಾರ ಎಂದು ಅವರು ಹೇಳಿದರು, ಇದಕ್ಕೆ ಗಾಂಧಿಯವರನ್ನು ಮಾತ್ರ ದೂಷಿಸಲಾಗುವುದಿಲ್ಲ ಎಂದು ಹೇಳಿದರು.

ಹಿಮಾಚಲ ಪ್ರದೇಶದ ಕಸೌಲಿಯಲ್ಲಿ ನಡೆದ ಖುಷ್ವಂತ್‌ ಸಿಂಗ್‌ ಸಾಹಿತ್ಯ ಉತ್ಸವದಲ್ಲಿ ಪತ್ರಕರ್ತ ಹರಿಂದರ್‌ ಬವೇಜಾ ಅವರ ದೆ ವಿಲ್‌ ಶೂಟ್‌ ಯು, ಮೇಡಂ ಪುಸ್ತಕದ ಕುರಿತು ಚರ್ಚೆಯನ್ನು ನಡೆಸುವಾಗ ಮಾಜಿ ಗೃಹ ಮತ್ತು ಹಣಕಾಸು ಸಚಿವರು ಈ ಹೇಳಿಕೆಗಳನ್ನು ನೀಡಿದರು.

ಇಲ್ಲಿ ಹಾಜರಿದ್ದ ಯಾವುದೇ ಸೇವಾ ಅಧಿಕಾರಿಗಳಿಗೆ ಅಗೌರವವಿಲ್ಲ ಆದರೆ ಸ್ವರ್ಣ ಮಂದಿರವನ್ನು ಹಿಂಪಡೆಯಲು ಅದು ತಪ್ಪು ಮಾರ್ಗವಾಗಿತ್ತು. ಮೂರ್ನಾಲ್ಕು ವರ್ಷಗಳ ನಂತರ, ಸೈನ್ಯವನ್ನು ಹೊರಗಿಡುವ ಮೂಲಕ ಸುವರ್ಣ ಮಂದಿರವನ್ನು ಹಿಂಪಡೆಯಲು ನಾವು ಸರಿಯಾದ ಮಾರ್ಗವನ್ನು ತೋರಿಸಿದ್ದೇವೆ ಎಂದು ಹಿರಿಯ ಕಾಂಗ್ರೆಸ್‌‍ ನಾಯಕರು ಹೇಳಿದರು.

ಎಲ್ಲಾ ಉಗ್ರಗಾಮಿಗಳನ್ನು ಮರಳಿ ಸೆರೆಹಿಡಿಯಲು ಒಂದು ಮಾರ್ಗವಿತ್ತು. ಬ್ಲೂ ಸ್ಟಾರ್‌ ತಪ್ಪು ಮಾರ್ಗವಾಗಿತ್ತು. ಆ ತಪ್ಪಿಗೆ ಗಾಂಧಿ ತಮ್ಮ ಜೀವವನ್ನೇ ತೆತ್ತರು ಎಂದು ನಾನು ಒಪ್ಪಿಕೊಂಡೆ ಆದರೆ ಆ ತಪ್ಪು ಸೇನೆ, ಪೊಲೀಸ್‌‍, ಗುಪ್ತಚರ ಮತ್ತು ನಾಗರಿಕ ಸೇವೆಯ ಒಟ್ಟು ನಿರ್ಧಾರವಾಗಿತ್ತು.
ನಾವು ಗಾಂಧಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.1984 ರಲ್ಲಿ ಜೂನ್‌ 1 ಮತ್ತು ಜೂನ್‌ 8 ರ ನಡುವೆ ಇಂದಿರಾ ಗಾಂಧಿ ಸರ್ಕಾರ ಪಂಜಾಬ್‌ನಲ್ಲಿ ಮೂಲಭೂತವಾದಿ ಪ್ರಚಾರಕ ಜರ್ನೈಲ್‌ ಸಿಂಗ್‌ ಭಿಂದ್ರನ್‌ವಾಲೆ ನೇತೃತ್ವದ ಪ್ರತ್ಯೇಕತಾವಾದಿ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿದಾಗ ಆಪರೇಷನ್‌ ಬ್ಲೂ ಸ್ಟಾರ್‌ ಅನ್ನು ನಡೆಸಲಾಯಿತು.
ಸಿಖ್‌ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾದ ಆವರಣಕ್ಕೆ ಭಾರತೀಯ ಸೇನೆ ನುಗ್ಗಿದ ನಂತರ ಸ್ವರ್ಣ ದೇವಾಲಯದೊಳಗೆ ಅಡಗಿಕೊಂಡಿದ್ದ ಭಿಂದ್ರನ್‌ವಾಲೆ ಕೊಲ್ಲಲ್ಪಟ್ಟರು. ಅಕಾಲ್‌ ತಖ್‌್ತ ಅನ್ನು ಶಿಥಿಲಗೊಳಿಸಿದ ಸೇನಾ ಕಾರ್ಯಾಚರಣೆಯು ಸಿಖ್‌ ಸಮುದಾಯದಲ್ಲಿ ಭಾರಿ ಅಸಮಾಧಾನವನ್ನು ಹುಟ್ಟುಹಾಕಿತು.ತಿಂಗಳುಗಳ ನಂತರ, ಗಾಂಧಿಯನ್ನು ಅವರ ಸಿಖ್‌ ಅಂಗರಕ್ಷಕರು ಗುಂಡಿಕ್ಕಿ ಕೊಂದರು. ಅವರ ಹತ್ಯೆಯ ನಂತರ ಸಮುದಾಯದ ವಿರುದ್ಧ ವ್ಯಾಪಕ ಹಿಂಸಾಚಾರ ನಡೆಯಿತು. ಈ ಹಿಂಸಾಚಾರಕ್ಕೆ ಹಲವಾರು ಕಾಂಗ್ರೆಸ್‌‍ ನಾಯಕರು ಕಾರಣರೆಂದು ಶಂಕಿಸಲಾಗಿದೆ.

ಕನಕಪುರ : ರಾಜಿ ಮಾಡುವ ನೆಪದಲ್ಲಿ ಕರೆಸಿಕೊಂಡು ಕಲ್ಲು ಎತ್ತಿಹಾಕಿ ಯುವಕನ ಕೊಲೆ

ಕನಕಪುರ, ಅ.12– ರಾಜಿ ಮಾಡುವ ನೆಪದಲ್ಲಿ ಕರೆಸಿಕೊಂಡು ಯುವಕನ ಎದೆ ಮೇಲೆ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ಗ್ರಾಮಾಂತರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗೆಂಡಿಗೆರೆಯಲ್ಲಿ ನಡೆದಿದೆ.

ಯಡವನಗೇಟ್‌ ಸಮೀಪದ ನಿವಾಸಿ ಸುನೀಲ್‌ (30) ಮೃತಪಟ್ಟಿದ್ದು, ಆತನ ಸಹೋದರ ಕಿರಣ್‌ ಸೇರಿದಂತೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನಕಪುರದ ನುಗುಲು ಗ್ರಾಮದಲ್ಲಿ ಮುನಿರಾಜು ಮತ್ತು ಜಯಲಕ್ಷ್ಮಿ ಎಂಬ ದಂಪತಿ ವಾಸವಾಗಿದ್ದು, ಅವರಿಗೆ ಸುನಿಲ್‌ ಮತ್ತು ಕಿರಣ್‌ ಎಂಬ ಮಕ್ಕಳಿದ್ದಾರೆ. ಇವರಿಗೆ ಒಂದೂವರೆ ಎಕರೆ ಕೃಷಿ ಜಮೀನಿದೆ.

ಈ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡು ಜಯಲಕ್ಷ್ಮಿ ಮತ್ತು ಮಕ್ಕಳು ಮುನಿರಾಜುನನ್ನು ಬಿಟ್ಟು ಯಡವನಗೇಟ್‌ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದರು.
ಮುನಿರಾಜು ಇತ್ತೀಚೆಗೆ ತನ್ನ ಒಂದೂವರೆ ಎಕರೆ ಜಮೀನನ್ನು ಪಾರ್ಥ ಎಂಬುವವರಿಗೆ ಮಾರಾಟ ಮಾಡಿದ್ದ. ಇದು ಜಯಲಕ್ಷ್ಮಿ ಮತ್ತು ಅವರ ಮಕ್ಕಳಿಗೆ ತಿಳಿದು ನಿನ್ನೆ ಇವರು ಪಾರ್ಥನ ಮನೆ ಬಳಿ ಬಂದು ನಮಗೆ ತಿಳಿಯದೆ ಮತ್ತು ನಮ ಸಹಿ ಪಡೆಯದೆ ನೀವು ಜಮೀನು ಕೊಂಡಿದ್ದೀರಿ ಮತ್ತು ನೋಂದಣಿ ಕೂಡ ಮಾಡಿಸಿಕೊಂಡಿದ್ದೀರಿ.

ಇದು ಹೇಗೆ ಎಂದು ಕೇಳಿದ್ದಾರೆ. ಸ್ಥಳೀಯರು ಇವರನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ.ನಂತರ ರಾತ್ರಿ ಪಾರ್ಥ ಕುಳಿತು ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳೋಣ ಬನ್ನಿ ಎಂದು ಕರೆದಿದ್ದಾರೆ. ಎಲ್ಲರೂ ಇವರ ಮಾತನ್ನು ನಂಬಿ ಸುನಿಲ್‌, ಕಿರಣ್‌ ಮತ್ತಿತರರು ಅಲ್ಲಿಗೆ ಹೋಗಿದ್ದಾರೆ.

ಈ ಸಂದರ್ಭದಲ್ಲಿ ಗುಂಪು ಕಟ್ಟಿಕೊಂಡು ಬಂದಿದ್ದ ಪಾರ್ಥ ಏಕಾಏಕಿ ಕಿರಣ್‌ ಮತ್ತು ಸುನಿಲ್‌ ಮೇಲೆ ಎರಗಿದ್ದಾರೆ. ಸುನೀಲ್‌ ಮೇಲೆ ಕಲ್ಲು ಎತ್ತಿ ಹಾಕಿದರೆ, ಕಿರಣ್‌ಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಗಲಾಟೆ ನಡೆಯುತ್ತಿದ್ದನ್ನು ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿದ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನಿಲ್‌ ಮತ್ತು ಕಿರಣ್‌ನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುನಿಲ್‌ ಮೃತಪಟ್ಟಿದ್ದಾರೆ. ಕನಕಪುರ ಗ್ರಾಮಾಂತರ ಠಾಣೆ ಪೊಲೀಸರು ಪಾರ್ಥ ಹಾಗೂ ಆತನ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.