Friday, November 7, 2025
Home Blog Page 58

ಇದೆ ಮೊದಲ ಬಾರಿಗೆ ಭಾರತಕ್ಕೆ ಬಂದ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ

ನವದೆಹಲಿ, ಅ.9– ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಇಂದು ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್‌ ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್‌ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ. 2022 ರಲ್ಲಿ ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್‌ ನೇತೃತ್ವದ ತಂಡ ಕಾಬೂಲ್‌ನಲ್ಲಿ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿತ್ತು.

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್‌‍ ಅಧಿಕಾರಿ ಜೆ.ಪಿ. ಸಿಂಗ್‌ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್‌ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ.

ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ, ದುಬೈನಲ್ಲಿ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಕೋವಿಡ್‌ ಸಮಯದಲ್ಲಿ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.

ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನು ತಾಲಿಬಾನ್‌ ಖಂಡಿಸಿದ್ದಕ್ಕಾಗಿ ಜೈಶಂಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್‌ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.

ದಳಪತಿ ವಿಜಯ್‌ ಮನೆಗೆ ಬಾಂಬ್‌ ಬೆದರಿಕೆ

ಚೆನ್ನೈ, ಅ.9- ತಮಿಳುನಾಡಿನ ಖ್ಯಾತ ನಟ ಕಮ್‌ ರಾಜಕಾರಣಿ ದಳಪತಿ ವಿಜಯ್‌ ನಿವಾಸಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಕರೂರು ಕಾಲ್ತುಳಿತ ಸಂಭವಿಸಿದ ಕೆಲ ದಿನಗಳ ಬಳಿಕ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್‌ ಅವರ ಚೆನ್ನೈ ನಿವಾಸಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ.

ಕರೂರ್‌ ಜಿಲ್ಲೆಯಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡ ನಂತರ ವಿಜಯ್‌ ವಿರುದ್ಧ ಟೀಕೆಗಳು ಕೇಳಿಬರುತ್ತಿರುವ ನಡುವೆಯೇ ಈ ಕರೆ ಬಂದಿರುವುದು ವಿಶೇಷವಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ವಿಜಯ್‌ ಅವರ ನೀಲಂಕರೈ ನಿವಾಸದ ಸುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ, ಮತ್ತು ಅಧಿಕಾರಿಗಳು ಕರೆ ಸುಳ್ಳು ಎಂದು ದೃಢಪಡಿಸಿದ್ದಾರೆ.ಈ ಕರೆಯ ಮೂಲವನ್ನು ಪತ್ತೆಹಚ್ಚಲು ಮತ್ತು ವ್ಯಕ್ತಿ ಅಥವಾ ಗುಂಪನ್ನು ಗುರುತಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ವಿಜಯ್‌ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂದಿರುವ ಬಾಂಬ್‌ ಬೆದರಿಕೆಗೂ ಮೊದಲು ಕಳೆದ ಎರಡು ವಾರಗಳಿಂದ ಪ್ರಮುಖ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ವ್ಯಾಪಕ ಬೆದರಿಕೆಗಳು ಬಂದಿವೆ. ಒಂದು ವಾರದ ಹಿಂದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಬಾಂಬ್‌ ಬೆದರಿಕೆ ಬಂದಿರುವುದಾಗಿ ವರದಿಯಾಗಿತ್ತು.

ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ, ಡಿಎಂಕೆ ಸಂಸದೆ ಕನಿಮೋಳಿ, ನಟಿ ತ್ರಿಶಾ, ಹಾಸ್ಯನಟ ಮತ್ತು ನಟ ಎಸ್‌‍.ವಿ. ಶೇಖರ್‌, ಹಿಂದೂ ಪತ್ರಿಕಾಲಯ ಹಾಗೆಯೇ ಕಮಲಾಲಯದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಧಾನ ಕಚೇರಿಗಳಿಗೂ ಹುಸಿ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದವು.

ಮಡಿಕೇರಿ : ವಸತಿ ಶಾಲೆಯಲ್ಲಿ ಅಗ್ನಿ ಅವಘಡ, ವಿದ್ಯಾರ್ಥಿ ಸಜೀವ ದಹನ

ಮಡಿಕೇರಿ,ಅ.9-ಇಲ್ಲಿನ ವಸತಿ ಶಾಲೆಯಲ್ಲಿ ಸಂಭವಿಸಿದ ಅಗ್ನಿಅವಘಡದಲ್ಲಿ 2ನೇ ತರಗತಿ ವಿದ್ಯಾರ್ಥಿ ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಚೆಟ್ಟಿಮಾನಿ ಗ್ರಾಮದ ನಿವಾಸಿ ಪುಷ್ಪಕ್‌(7) ಮೃತ ವಿದ್ಯಾರ್ಥಿ.

ತಾಲೂಕಿನ ಕಾಟಗೇರಿ ಗ್ರಾಮದಲ್ಲಿರುವ ಹರ್‌ ಮಂದಿರ್‌ ವಸತಿ ಶಾಲೆಯಲ್ಲಿ ಪುಷ್ಪಕ್‌ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ ಎಂದಿನಂತೆ ಊಟ ಮಾಡಿ ವಸತಿ ಶಾಲೆಯ ಮಕ್ಕಳು ಮಲಗಿದ್ದಾರೆ. ಇಂದು ಮುಂಜಾನೆ 4.30ರ ವೇಳೆಯಲ್ಲಿ ಯಮನಂತೆ ಬೆಂಕಿ ಆವರಿಸಿಕೊಂಡಿದೆ. ದೊಡ್ಡ ಕೊಣೆಯಲ್ಲಿ ಸಾಲು ಸಾಲು ಬೆಡ್‌ನಲ್ಲಿ ಸುಮಾರು 29 ಮಕ್ಕಳು ಮಲಗಿದ್ದರು.

ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಎಚ್ಚೆತ್ತ ಶಾಲೆಯ ಸಿಬ್ಬಂಧಿ ಮಕ್ಕಳನ್ನುಎಬ್ಬಿಸಿ ಹೊರಗೆ ಕರೆ ತಂದು ಅಗ್ನಿ ಶಾಮಕ ದಳಕ್ಕೆ ತಿಳಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾದರೂ ಈ ವೇಳೆ ಪುಷ್ಪಕ್‌ ಭಾರಿ ಹೊಗೆಯಿಂದ ಹೊರಬರಲಾಗದೆ ಮೃತಪಟ್ಟಿದ್ದಾನೆ .

ಅಗ್ನಿ ಅವಘಡಕ್ಕೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸ್‌‍ ಠಾಣೆ ಸರ್ಕಲ್‌ ಇನ್‌್ಸಪೆಕ್ಟರ್‌ ಚಂದ್ರಶೇಖರ್‌, ಆಗ್ನಿ ಶಾಮಕ ಅಧಿಕಾರಿ ನಾಗರಾಜ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಷಯ ತಿಳಿಯುತ್ತಿದಂತೆ ಮಕ್ಕಳ ಪೋಷಕರು ಸಹ ಶಾಲೆಯತ್ತ ದೌಡಾಯಿಸಿದ್ದಾರೆ. ತಮ ಮಗ ಪುಷ್ಪಕ್‌ನನ್ನು ಕಳೆದುಕೊಂಡ ಪೋಷಕರು ಹಾಗೂ ಸಂಬಂಧಿಕರ ರೋಧನ ಹೇಳತೀರದಾಗಿತ್ತು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಕಾರಣದಿಂದ ಬೆಂಕಿ ಹೊತ್ತಿಕೊಂಡಿದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಲಬೆರಿಕೆ ಕೆಮ್ಮಿನ ಸಿರಪ್‌ ತಯಾರಿಸಿದ್ದ ಫಾರ್ಮಾ ಮಾಲೀಕನ ಬಂಧನ

ಚೆನ್ನೈ, ಅ.9- ಕಲಬೆರಕೆ ಕೆಮಿನ ಸಿರಪ್‌ ಸೇವಿಸಿ 20 ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಸ್ರೇಸನ್‌ ಫಾರ್ಮಾದ ಮಾಲೀಕರನ್ನು ಇಂದು ಮುಂಜಾನೆ ಮಧ್ಯಪ್ರದೇಶ ಪೊಲೀಸರು ಚೆನ್ನೈ ಪೊಲೀಸರ ಸಹಾಯದಿಂದ ಬಂಧಿಸಿದ್ದಾರೆ. ಮಧ್ಯಪ್ರದೇಶ ಪೊಲೀಸರು ಮತ್ತು ಚೆನ್ನೈ ಪೊಲೀಸರ ತಂಡಗಳು ಫಾರ್ಮಾ ಮಾಲೀಕ ರಂಗನಾಥನ್‌ ಅವರನ್ನು ಪತ್ತೆಹಚ್ಚಲು ಕಳೆದ ಹುಡುಕಾಟ ಆರಂಭಿಸಿತ್ತು.

ಅವರ ಕಂಪನಿಯು ತಯಾರಿಸಿದ ಕೋಲ್ಡ್ರಿಫ್‌ ಕೆಮಿನ ಸಿರಪ್‌ ದೇಶದ ಅನೇಕ ರಾಜ್ಯಗಳಲ್ಲಿ 20 ಮಕ್ಕಳ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.ಮಧ್ಯರಾತ್ರಿಯ ಕಾರ್ಯಾಚರಣೆಯ ನಂತರ ಅವರನ್ನು ನಗರದಲ್ಲಿ ಬಂಧಿಸಿ ವಿಚಾರಣೆಗಾಗಿ ಸುಂಗುವರ್ಚತ್ರಂ ಪೊಲೀಸ್‌‍ ಠಾಣೆಗೆ ಕರೆದೊಯ್ಯಲಾಯಿತು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯದ ಕಾನೂನು ಪ್ರಕ್ರಿಯೆ ನಂತರ ಮಧ್ಯಪ್ರದೇಶ ಪೊಲೀಸರು ಆರೋಪಿಯನ್ನು ವಿವರವಾದ ತನಿಖೆಗಾಗಿ ಅವರ ರಾಜ್ಯಕ್ಕೆ ಕರೆದೊಯ್ಯುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಕ್ರಮಕ್ಕೆ ಮುಂದಾಗಿದೆ.

ಕನಕಪುರ : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಯ ಭೀಕರ ಕೊಲೆ

ಕನಕಪುರ,ಅ.9- ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕನಕಪುರ ಗ್ರಾಮಾಂತರ ಪೋಲಿಸ್‌‍ ಠಾಣಾ ವ್ಯಾಪ್ತಿಯ ಭದ್ರೇಗೌಡನದೊಡ್ಡಿ ನಡೆದಿದೆ. ಬೆಂಗಳುರು ಕೆಂಗೇರಿ ಬಳಿಯ ಹೆಮಿಗೆಪುರ ಗ್ರಾಮದ ಚಿರಂಜೀವಿ (25) ಕೊಲೆಯಾದ ರೌಡಿಶೀಟರ್‌.

ಈತ ಕಳೆದ ಒಂದು ವರ್ಷದ ಹಿಂದೆ ತಲಘಟ್ಟಪುರ ಪೋಲಿಸ್‌‍ ಠಾಣಾ ವ್ಯಾಪ್ತಿ ಕೊಲೆ ಪ್ರಕರಣದಲ್ಲಿ ಜೈಲವಾಸ ಅನುಭವಿಸಿ ಕಳೆದ 2 ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ತಾನು ವಾಸವಿದ್ದ ಸ್ಥಳದಲ್ಲಿ ಜೀವ ಭಯವಿದೆ ಎಂದು ಹೆದರಿ ತನ್ನ ಪತ್ನಿಯ ಸ್ವಗ್ರಾಮ ಹಾರೋಹಳ್ಳಿ ತಾಲೂಕು ಪಿಚ್ಚನಕೆರೆ ಗ್ರಾಮದಲ್ಲಿ ವಾಸವಿದ್ದನು. ಕಳೆದ ವಾರ ತನ್ನ ಅಜ್ಜಿಯವ ಊರು ಭದ್ರೇಗೌಡನದೊಡ್ಡಿಗೆ ತೆರಳಿದ್ದಾಗ ಹೆಬ್ಬಿದರಮೆಟ್ಟಿಲು ಹಾಗೂ ಸಮೀಪದ ಚಿಕ್ಕಕಲ್‌ಬಾಳು ಗ್ರಾಮದ ಯುವಕರೊಂದಿಗೆ ಕಿರಿಕ್‌ ಮಾಡಿ ಗಲಾಟೆ ಮಾಡಿಕೊಂಡಿದ್ದಾನೆ. ರಾತ್ರಿ ನಾಲ್ವರು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಶ್ರೀನಿವಾಸ್‌‍ಗೌಡ, ಸಹಾಯಕ ವರಿಷ್ಠಾಧಿಕಾರಿಗಳಾದ ರಾಮಚಂದ್ರಪ್ಪ, ಸುರೇಶ್‌, ಡಿ.ವೈ.ಎಸ್‌‍.ಪಿ ಗಿರಿ, ಸರ್ಕಲ್‌ ಇನ್‌್ಸಪೆಕ್ಟರ್‌ ವಿಕಾಸ್‌‍, ಗ್ರಾಮಾಂತರ ಠಾಣಾಧಿಕಾರಿ ಆಕಾಶ್‌, ಪರಿಶೀಲನೆ ನಡೆಸಿದ್ದಾರೆ.

ಸಹೋದರ ನಂದೀಶ್‌ ನೀಡಿದ ದೂರು ನೀಡಿದ್ದು, ಚಿಕ್ಕಕಲ್‌ಬಾಳು ಪ್ರಜ್ವಲ್‌, ಪವನ್‌ ಹಾಗೂ ಬೆಂಗಳೂರಿನ ಮೋಹನ್‌ ಮತ್ತು ಚೇತನ್‌ ಎಂಬುವವರು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇರೆಗೆ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

6 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ 25 ವರ್ಷ ಶಿಕ್ಷೆ

ಬಲಿಯಾ, ಅ. 9 (ಪಿಟಿಐ) ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಉತ್ತರ ಪ್ರದೇಶದ ನ್ಯಾಯಲಯ 25 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಕಳೆದ 2021ರಲ್ಲಿ 6 ವರ್ಷದ ಬಾಲಕಿಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದ ಮೊಹಮದ್‌ ರಾಜಾನಿಗೆ ಶಿಕ್ಷೆ ವಿಧಿಸುವುದರ ಜೊತೆಗೆ 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.

ವಿಶೇಷ ನ್ಯಾಯಾಧೀಶ (ಪೋಕ್ಸೊ ಕಾಯ್ದೆ) ಪ್ರಥಮ್‌ ಕಾಂತ್‌ ಅವರು ಅಪರಾಧಿ ಮೊಹಮ್ಮದ್‌ ರಾಜಾಗೆ 25,000 ರೂ. ದಂಡ ವಿಧಿಸಿದ್ದಾರೆ.ಮಧುಬನಿ ಗ್ರಾಮದ ನಿವಾಸಿ ರಾಜಾ, ಹತ್ತಿರದ ಹಳ್ಳಿಯಿಂದ ಅಪ್ರಾಪ್ತ ವಯಸ್ಕಳನ್ನು ಆಮಿಷವೊಡ್ಡಿ ಟೆಂಪೋದಲ್ಲಿ ಕರೆದೊಯ್ದು, ಅಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಆರೋಪಕ್ಕೆ ಗುರಿಯಾಗಿದ್ದ.

ಹುಡುಗಿಯ ತಂದೆ ನೀಡಿದ ದೂರಿನ ನಂತರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ರಾಜಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.ವಿಶೇಷ ಸಾರ್ವಜನಿಕ ಅಭಿಯೋಜಕ ವಿಮಲ್‌ ಕುಮಾರ್‌ ರೈ ಅವರು ವಾದ ವಿವಾದ ಪೂರ್ಣಗೋಳಿಸಿದ ನ್ಯಾಯಲಯ ಈ ಮಹತ್ವದ ತೀರ್ಪು ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

ಗಾಜಾ ಕುರಿತ ಟ್ರಂಪ್‌ ಶಾಂತಿ ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ, ಅ. 9 (ಪಿಟಿಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪಶ್ಚಿಮ ಏಷ್ಯಾದ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿವೆ.ಈ ಒಪ್ಪಂದವು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವಾಗಿದೆ ಎಂದು ಮೋದಿ ಹೇಳಿದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರಧಾನಿ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವೂ ಆಗಿದೆ ಎಂದು ಮೋದಿ ಎಕ್ಸ್ ಮಾಡಿದ್ದಾರೆ.

ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ವರ್ಧಿತ ಮಾನವೀಯ ನೆರವು ಅವರಿಗೆ ವಿಶ್ರಾಂತಿ ತರುತ್ತದೆ ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಟ್ರಂಪ್‌ ಆಡಳಿತವು ಮಂಡಿಸಿದ ಒಪ್ಪಂದದಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ಮತ್ತು ಕನಿಷ್ಠ ಕೆಲವು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ.ಈ ಒಪ್ಪಂದವು ಎರಡು ವರ್ಷಗಳಷ್ಟು ಹಳೆಯದಾದ ವಿನಾಶಕಾರಿ ಯುದ್ಧದಲ್ಲಿ ತಿಂಗಳುಗಳಲ್ಲಿ ಅತಿದೊಡ್ಡ ಪ್ರಗತಿಯನ್ನು ಸೂಚಿಸುತ್ತದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2025)

ನಿತ್ಯ ನೀತಿ : ದೇಹ ದುಡಿದರೆ ಕಾರ್ಮಿಕ, ಬುದ್ಧಿ ದುಡಿದರೆ ಮಾಲೀಕ,

ಪಂಚಾಂಗ : ಗುರುವಾರ, 09-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಭರಣಿ / ಯೋಗ: ವಜ್ರ / ಕರಣ: ವಣಿಜ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.04
ರಾಹುಕಾಲ – 01.30-3.00
ಯಮಗಂಡ ಕಾಲ – 9.00-10.30
ಗುಳಿಕ ಕಾಲ -6.00-7.30

ರಾಶಿಭವಿಷ್ಯ :
ಮೇಷ
: ಕುಟುಂಬದವರೊಂದಿಗೆ ಮಾತನಾಡು ವಾಗ ಬುದ್ಧಿವಂತಿಕೆಯಿಂದ ಪದ ಬಳಸಬೇಕು.
ವೃಷಭ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಿಥುನ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಕಟಕ: ಅತಿಥಿಗಳ ಆಗಮನ ದಿಂದಾಗಿ ಖರ್ಚು- ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಸಿಂಹ: ಕುಟುಂಬ ಸದಸ್ಯರೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿ.
ಕನ್ಯಾ: ಹಣ ಕಳೆದುಕೊಳ್ಳುವ ಸಂಭವವಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ತುಲಾ: ಕೆಲವರಿಗೆ ಪ್ರೇಮ ಸಂಬಂಧದಲ್ಲಿ ತೊಂದರೆಗಳು ಎದುರಾಗಬಹುದು.
ವೃಶ್ಚಿಕ: ದೈನಂದಿನ ಜೀವನ ದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಧನುಸ್ಸು: ಹಳೆ ಮಿತ್ರರನ್ನು ಭೇಟಿ ಮಾಡುವಿರಿ.

ಮಕರ: ಪ್ರೀತಿಪಾತ್ರರೊಂದಿಗೆ ಯಾವುದೇ ವಿವಾದದಲ್ಲಿ ಭಾಗಿಯಾಗದಿರುವುದು ಒಳಿತು.
ಕುಂಭ: ಆಸ್ತಿ, ಅಪಾರ್ಟ್‌ಮೆಂಟ್‌ ಖರೀದಿಯಲ್ಲಿ ಅ ಕ ಹಣ ಹೂಡಿಕೆ ಮಾಡುವಿರಿ.
ಮೀನ: ಹಣದ ವಿಷಯದಲ್ಲಿ ಸ್ವಲ್ಪ ಜಾಗರೂಕರಾ ಗಿರಿ. ಪೋಷಕರ ಆರೋಗ್ಯದ ಬಗ್ಗೆ ಗಮನ ಹರಿಸಿ.

ಭಾರತದ ಮೊದಲ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೆಚ್ಡಿಕೆ ಮತ್ತು ಗಡ್ಕರಿ

ಸೋನಿಪತ್ (ಹರಿಯಾಣ), ಅ.8, 2025: ಭಾರತದ ಸ್ವಚ್ಛ ಚಲನಶೀಲತೆಯ ಪರಿವರ್ತನೆಗೆ ಒಂದು ಮೈಲಿಗಲ್ಲಾಗಿ, ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಶನಿವಾರದಂದು ಹರಿಯಾಣದ ಸೋನಿಪತ್‌ನಲ್ಲಿರುವ ಅಂತಾರಾಷ್ಟ್ರೀಯ ಸರಕು ಟರ್ಮಿನಲ್ (ಡಿಐಸಿಟಿ) ನಲ್ಲಿ ದೇಶದ ಮೊದಲ ಸರಕು ಸಾಗಣೆ ವಾಹನಗಳ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.

ಇದು ವಿನಿಮಯ ಮಾಡಬಹುದಾದ ಬ್ಯಾಟರಿ ವಿದ್ಯುತ್ ಹೆವಿ-ಡ್ಯೂಟಿ ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ವಾಣಿಜ್ಯ ವಾಹನಗಳಿಗಾಗಿ ಬಹುಕ್ರಿಯಾತ್ಮಕ ಸ್ವಾಪ್-ಕಮ್-ಚಾರ್ಜಿಂಗ್ ಸ್ಟೇಷನ್ ಆಗಿದ್ದು, ಇಬ್ಬರೂ ಹಿರಿಯ ಸಚಿವರು ಚಾಲನೆ ನೀಡಿದರು.

ಎನರ್ಜಿ ಇನ್ ಮೋಷನ್ ಪ್ರೈವೇಟ್ ಲಿಮಿಟೆಡ್‌ನಿಂದ ಸ್ಥಾಪಿಸಲ್ಪಟ್ಟಿರುವ ಈ ಸೌಲಭ್ಯವು, ಎರಡು ಗಂಟೆಗಳಿಗಿಂತ ಹೆಚ್ಚಿನ ಸಾಂಪ್ರದಾಯಿಕ ಚಾರ್ಜಿಂಗ್ ಸಮಯಕ್ಕೆ ಹೋಲಿಸಿದರೆ ಏಳು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರೀ ಟ್ರಕ್ ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಭಾರತದ CCS-2 ಮಾನದಂಡಕ್ಕೆ ಹೊಂದಿಕೆಯಾಗುವ ಹೆವಿ-ಡ್ಯೂಟಿ DC ಚಾರ್ಜರ್‌ಗಳನ್ನು ಸಹ ಹೊಂದಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; “ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2047ರ ವೇಳೆಗೆ ಇಂಧನ ಸ್ವಾತಂತ್ರ್ಯ ಮತ್ತು 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆಯ ನಿವ್ವಳ ಶೂನ್ಯದತ್ತ ಭಾರತದ ನಡೆಸುತ್ತಿರುವ ಪ್ರಯಾಣದಲ್ಲಿ ಈ ಅಭಿವೃದ್ಧಿಯು ಹೆಮ್ಮೆಯ ಮೈಲಿಗಲ್ಲು” ಎಂದು ಬಣ್ಣಿಸಿದರು.

ಭಾರೀ ವಾಣಿಜ್ಯ ವಾಹನಗಳನ್ನು ಇಂಗಾಲ ಮುಕ್ತಗೊಳಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು. ಇವು ವಾಹನ ಜನಸಂಖ್ಯೆಯ 5%ಕ್ಕಿಂತ ಕಡಿಮೆ ಇದ್ದರೂ, ಸಾರಿಗೆ ಸಂಬಂಧಿತ ಹೊರಸೂಸುವಿಕೆಯಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿವೆ. “ನಮ್ಮ ಸಾಗಾಣೆ ಕ್ಷೇತ್ರದ ಈ ಬೆನ್ನೆಲುಬನ್ನು ಬಲಿಷ್ಠವಾಗಿ ಪರಿವರ್ತಿಸುವುದು ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಗೆ ಅತ್ಯಗತ್ಯ” ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ಪೂರ್ವಭಾವಿ ಕ್ರಮಗಳನ್ನು, ಅದರಲ್ಲೂ ವಿಶೇಷವಾಗಿ ಮಧ್ಯಮ ಮತ್ತು ಹೆವಿಡ್ಯೂಟಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಮೊದಲ ಬಾರಿಗೆ ರಾಷ್ಟ್ರೀಯ ಪ್ರೋತ್ಸಾಹಕ ಚೌಕಟ್ಟಿನ ಅಡಿಯಲ್ಲಿ ತರುವ PM e-DRIVE ಯೋಜನೆಯ ಬಗ್ಗೆ ಇದೇ ಸಂದರ್ಭದಲ್ಲಿ ಸಚಿವರು ಒತ್ತಿ ಹೇಳಿದರು. ಇ-ಟ್ರಕ್‌ಗಳಿಗೆ ₹500 ಕೋಟಿ ಮತ್ತು ಮೂಲಸೌಕರ್ಯವನ್ನು ಚಾರ್ಜ್ ಮಾಡಲು ಮತ್ತು ವಿನಿಮಯ ಮಾಡಲು ₹2,000 ಕೋಟಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ಬ್ಯಾಟರಿ ವಿನಿಮಯವು ಮುಂಗಡ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ತಂತ್ರಜ್ಞಾನದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ವಾಹನಗಳ ಸ್ಥಗಿತದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ 90% ಸಣ್ಣ ಫ್ಲೀಟ್ ಆಪರೇಟರ್ ಬೇಸ್‌ಗೆ ಹಣಕಾಸು ಕಾರ್ಯಸಾಧ್ಯತೆಯ ಪ್ರಯೋಜನಗಳನ್ನು ಹೇಗೆ ಸಕ್ರಿಯಗೊಳಿಸುತ್ತದೆ ಎಂಬುದನ್ನು ಕುಮಾರಸ್ವಾಮಿ ಅವರು ವಿಸ್ತಾರವಾಗಿ ವಿವರಿಸಿದರು.

“ಈ ಉಪಕ್ರಮವು ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ, ಜಾಗತಿಕ ಸ್ವಚ್ಛ ಸಾರಿಗೆ ಆಂದೋಲನವನ್ನು ಮುನ್ನಡೆಸುವ ಭಾರತದ ಸಂಕಲ್ಪದ ಬಗ್ಗೆ ಇದು ನೀತಿ, ನಾವೀನ್ಯತೆ ಮತ್ತು ಉದ್ಯಮ ಸಹಯೋಗದ ಶಕ್ತಿಯನ್ನು ಒಟ್ಟಿಗೆ ಪ್ರದರ್ಶಿಸುತ್ತದೆ” ಎಂದು ಸಚಿವರು ಹೇಳಿದರು.

ಈ ಕಾರ್ಯಕ್ರಮವು ಸುಧಾರಿತ ವಿನಿಮಯ ಮಾಡಬಹುದಾದ ಬ್ಯಾಟರಿ-ಸಜ್ಜಿತ EIM ಟ್ರಾಕ್ಟರ್-ಟ್ರೇಲರ್‌ಗಳ ಫ್ಲ್ಯಾಗ್-ಆಫ್ ಮತ್ತು ಸಾಗಣೆದಾರರೊಂದಿಗೆ ಮೊದಲ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಒಪ್ಪಂದಗಳಿಗೆ ಸಹಿ ಹಾಕಿತು. ಮುಖ್ಯ ಅತಿಥಿಯಾಗಿ ಹಾಜರಿದ್ದ ನಿತಿನ್ ಗಡ್ಕರಿ ಅವರು, ಸಾಗಣೆ ವೆಚ್ಚಗಳನ್ನು ಕಡಿಮೆ ಮಾಡುವ, ದಕ್ಷತೆಯನ್ನು ಹೆಚ್ಚಿಸುವ ಮತ್ತು ಹಸಿರು ಸರಕು ವಲಯವನ್ನು ಬಲಪಡಿಸಿಕೊಳ್ಳುವ ಕಡೆಗೆ ಒಂದು ನಿರ್ಣಾಯಕ ಹೆಜ್ಜೆ ಇದಾಗಿದೆ ಎಂದು ಶ್ಲಾಘಿಸಿದರು.

ವಿದೇಶಿ ಅಂಚೆ ಕಚೇರಿ ಮೂಲಕ ಡ್ರಗ್ಸ್ ಸಾಗಾಟವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಬೆಂಗಳೂರು,ಅ.8- ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ನಿಷೇದಿತ ಮಾದಕ ವಸ್ತುಗಳ ಪಾರ್ಸೆಲ್‌ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದೇಶಿ ಅಂಚೆ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಜಾಲದಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಈ ವಿದೇಶಿ ಅಂಚೆ ಕಚೇರಿಗೆ ನಿರಂತರವಾಗಿ ನಿಷೇದಿತ ಮಾದಕ ವಸ್ತುಗಳು ವಿದೇಶಗಳಿಂದ ಪಾರ್ಸೆಲ್‌ ಮೂಲಕ ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಈ ವಿದೇಶಿ ಅಂಚೆ ಕಚೇರಿ ದಕ್ಷಿಣ ವಿಭಾಗದಲ್ಲಿರುವುದರಿಂದ ಆ ವಿಭಾಗದ ಡಿಸಿಪಿ ಯವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಡಿಸಿಪಿ ಅವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆಂದು ಆಯುಕ್ತರು ಹೇಳಿದರು.

ಮುಂದಿನ ದಿನಗಳಲ್ಲಿ ನಾವು ವಿದೇಶಿ ಅಂಚೆ ಕಚೇರಿಗೆ ಬರುವಂತಹ ಪಾರ್ಸೆಲ್‌ಗಳ ಮೇಲೆ ಇನ್ನೂ ಹೆಚ್ಚಿನ ನಿಗಾ ವಹಿಸುತ್ತೇವೆ. ನಿರಂತರವಾಗಿ ಡ್ರಗ್ಸ್ ಸಾಗಾಟ ಮತ್ತು ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ನಮಗೆ ಕೇಂದ್ರದ ಎಜೆನ್ಸಿಗಳು, ಹೊರ ರಾಜ್ಯಗಳ ಪೊಲೀಸ್‌‍ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.

ಒಟ್ಟಾರೆ ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆಂದು ಸೀಮಂತ್‌ಕುಮಾರ್‌ಸಿಂಗ್‌ ಹೇಳಿದರು.