Home Blog Page 6

0% ಬಡ್ಡಿ ಚಿನ್ನದ ಸಾಲ ಹೆಸರಲ್ಲಿ ವಂಚಿಸಿದ್ದ ಇಬ್ಬರ ಬಂಧನ, 1.80 ಕೋಟಿ ಮೌಲ್ಯದ ಆಭರಣ ವಶ

ಬೆಂಗಳೂರು,ನ.4- ಸಾರ್ವಜನಿಕರಿಗೆ 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ವಂಚಿಸಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 1.80 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರದಲ್ಲಿರುವ ಚಿನ್ನದ ಅಂಗಡಿಯೊಂದನ್ನು ತೆರೆದಿರುವ ಆರೋಪಿ ಮತ್ತೊಬ್ಬನೊಂದಿಗೆ ಸೇರಿಕೊಂಡು 0% ಬಡ್ಡಿ ಚಿನ್ನದ ಸಾಲ ನೀಡುವುದಾಗಿ ಸುಳ್ಳು ಜಾಹೀರಾತು ನೀಡಿ ಸಾರ್ವಜನಿ ಕರನ್ನು ಆಕರ್ಷಿಸಿ ಅವರುಗಳಿಂದ ಚಿನ್ನ ಅಡಮಾನವಿಟ್ಟಿಸಿಕೊಂಡು ನಂತರ ಆ ಆಭರಣಗಳನ್ನು ಕರಗಿಸುತ್ತಿದ್ದುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಈತ ಆಮಿಷ ಒಡ್ಡುತ್ತಿದ್ದ ಜಾಹಿರಾತು ಪ್ರಚಾರವನ್ನು ನಂಬಿದ ಅನೇಕರು ತಮ ಚಿನ್ನವನ್ನು ಅಡಮಾನವಿಡಲು ಮುಂದೆ ಬಂದು ಸಾಲ ಪಡೆದರು. ಆದರೆ ಅವರಿಗೆ ಚಿನ್ನದ ನಿಜವಾದ ಮೌಲ್ಯದ ಕೇವಲ ಶೇ.50-60 ರಷ್ಟು ಮೊತ್ತ ಮಾತ್ರ ಸಾಲವಾಗಿ ನೀಡಲಾಗುತ್ತಿತ್ತು ಮತ್ತು ಕನಿಷ್ಠ 11 ತಿಂಗಳುಗಳ ಅವಧಿಯ ವರೆಗೆ ಚಿನ್ನವನ್ನು ಬಿಡಿಸಿಕೊಳ್ಳಬಾರದೆಂದು ಷರತ್‌ನ್ನು ಆರೋಪಿ ವಿಧಿಸಿದ್ದನು.

ತದ ನಂತರದಲ್ಲಿಆರೋಪಿ ಅಡಮಾನವಿಟ್ಟುಕೊಂಡಿದ್ದ ಚಿನ್ನವನ್ನು ಅಕ್ರಮವಾಗಿ ಎಚ್‌ಆರ್‌ಬಿಆರ್‌ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದಕ್ಕೆ ಮಾರಾಟ ಮಾಡಿ, ಸುಮಾರು ಶೇ.40ರಿಂದ 50 ರಷ್ಟು ಲಾಭ ಗಳಿಸುತ್ತಿದ್ದನು. ಒಟ್ಟಾರೆಯಾಗಿ ಈ ಯೋಜನೆಯಡಿ ಸುಮಾರು 4 ಕೆ.ಜಿ. ಚಿನ್ನ ವಂಚಿಸಲ್ಪಟ್ಟಿದೆ. 11 ತಿಂಗಳ ಬಳಿಕ ಆರೋಪಿಯು ಅಂಗಡಿಯನ್ನು ಮುಚ್ಚಿ ಪರಾರಿಯಾಗಿದ್ದು, ಜನರನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಚಿನ್ನ ಅಡವಿಟ್ಟವರು ಮೋಸ ಹೋಗಿರುವುದು ಅರಿತು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಯ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಪೀಣ್ಯಾದಲ್ಲಿ ಆತನ ಮನೆಯಿಂದ ವಶಕ್ಕೆ ಪಡೆದಿದ್ದಾರೆ.

ನಂತರ ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿ ಎಚ್‌ಆರ್‌ಬಿಆರ್‌ ಲೇಔಟ್‌ನ ಜ್ಯೂವೆಲರಿ ಅಂಗಡಿಯೊಂದರಲ್ಲಿ ಅಡಮಾನವಿಟ್ಟಿದ್ದ 1 ಕೆ.ಜಿ 478 ಗ್ರಾಂ ಚಿನ್ನಾಭರಣ ಮತ್ತು 5 ಕೆ.ಜಿ ಬೆಳ್ಳಿಯ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ ಸುಮಾರು ಒಂದು ಕೋಟಿ ಎಂಬತ್ತು ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ತನಿಖೆ ಮುಂದುವರೆಸಿದ ಪೊಲೀಸರು ಈತನಿಗೆ ಸಹಕರಿಸಿದ ಮತ್ತೊಬ್ಬನನ್ನು ಬಂಧಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಮಂಗಳೂರು ಹಾಗೂ ಕೇರಳ ರಾಜ್ಯದಲ್ಲಿಯೂ ಇದೇ ರೀತಿಯ ವಂಚನೆ ನಡೆಸಿರುವ ಬಗ್ಗೆ ಮಾಹಿತಿ ದೊರೆತ್ತಿದ್ದು ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಸಾರ್ವಜನಿಕ ಮನವಿ:ಚಿನ್ನವನ್ನು ಅಡಮಾನವಿಡುವ ಮೊದಲು ಸಂಸ್ಥೆಯ ಪರವಾನಗಿ ಮತ್ತು ನೈಜತೆಯನ್ನು ಸಾರ್ವಜನಿಕರು ಪರಿಶೀಲಿಸಬೇಕು. 0% ಬಡ್ಡಿ ಎಂಬಂತಹ ಅಸಾಧ್ಯ ಯೋಜನೆಗಳಿಗೆ ಬಲಿಯಾಗಬೇಡಿ. ಅನುಮಾನಾಸ್ಪದ ಯೋಜನೆಗಳು ಕಂಡುಬಂದರೆ ಸಮೀಪದ ಪೊಲೀಸ್‌‍ ಠಾಣೆ ಅಥವಾ ಸಿಸಿಬಿ ವಿಭಾಗಕ್ಕೆ ತಕ್ಷಣ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.

ಈ ಕಾರ್ಯಾಚರಣೆಯನ್ನು ಸಿಸಿಬಿ ಅಪರಾಧ ವಿಭಾಗದ ಸಂಯುಕ್ತ ಪೊಲೀಸ್‌‍ ಆಯುಕ್ತ ಅಜಯ್‌ ಹಿಲೋರಿ ಮತ್ತು ಉಪ ಪೊಲೀಸ್‌‍ ಆಯುಕ್ತರಾಜಾ ಇಮಾಮ್‌ ಕಾಸಿಂ ಅವರ ಮಾರ್ಗದರ್ಶನದಲ್ಲಿ, ಎಸಿಪಿ ನಾಗರಾಜ್‌ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಕಿಲ್ಲರ್ ಕೆಮ್ಮು ಸಿರಪ್‌ ಪ್ರಕರಣದಲ್ಲಿ ಮತ್ತೊಬ್ಬನ ಬಂಧನ

ಚಿಂದ್ವಾರ, ನ. 4 (ಪಿಟಿಐ)- ಮಧ್ಯಪ್ರದೇಶದಲ್ಲಿ 24 ಮಕ್ಕಳ ಪ್ರಾಣವನ್ನು ಬಲಿ ಪಡೆದ ಕೆಮ್ಮಿನ ಸಿರಪ್‌ ದುರಂತದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿ ಡಾ. ಪ್ರವೀಣ್‌ ಸೋನಿ ಅವರ ಪತ್ನಿಯನ್ನು ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಅಸ್ವಸ್ಥ ಮಕ್ಕಳಿಗೆ ಕಲುಷಿತ ಕೆಮ್ಮಿನ ಸಿರಪ್‌ ಕೋಲ್ಡ್ರಿಫ್‌ ಅನ್ನು ಶಿಫಾರಸು ಮಾಡಿದ್ದ ಚಿಂದ್ವಾರ ಮೂಲದ ಡಾ. ಸೋನಿ ಅವರನ್ನು ಮೂತ್ರಪಿಂಡ ವೈಫಲ್ಯದಿಂದಾಗಿ ಮಕ್ಕಳ ಸಾವುಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಕಳೆದ ತಿಂಗಳು ಬಂಧಿಸಲಾಗಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ ಅವರ ಪತ್ನಿ ಜ್ಯೋತಿ ಸೋನಿ ಅವರನ್ನು ತಡರಾತ್ರಿ ಚಿಂದ್ವಾರ ಜಿಲ್ಲೆಯ ಪರಾಸಿಯಾ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿದೆ ಎಂದು ಪೊಲೀಸ್‌‍ ಉಪ ವಿಭಾಗೀಯ ಕಚೇರಿ ಮತ್ತು ವಿಶೇಷ ತನಿಖಾ ತಂಡದ (ಎಸ್‌‍ಐಟಿ) ಉಸ್ತುವಾರಿ ಜಿತೇಂದ್ರ ಜಾಟ್‌ ತಿಳಿಸಿದ್ದಾರೆ.

ಅವರು ಹಲವಾರು ಬಲಿಪಶುಗಳಿಗೆ ಕೆಮ್ಮಿನ ಸಿರಪ್‌ ಮಾರಾಟ ಮಾಡಿದ ವೈದ್ಯಕೀಯ ಅಂಗಡಿಯ ಮಾಲೀಕರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಕೆಮ್ಮು ಸಿರಪ್‌ ದುರಂತಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಏಳು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಮಕ್ಕಳ ಸಾವಿನ ನಂತರ, ತಮಿಳುನಾಡು ಸರ್ಕಾರವು ಕೆಮ್ಮಿನ ಸಿರಪ್‌ ತಯಾರಿಕಾ ಕಂಪನಿಯಾದ ಸ್ರೇಸನ್‌ ಫಾರ್ಮಾದ ಪರವಾನಗಿಯನ್ನು ರದ್ದುಗೊಳಿಸಿತು.ಬಂಧಿತರಲ್ಲಿ ಶ್ರೀಸನ್‌ ಫಾರ್ಮಾದ ಮಾಲೀಕ ಜಿ ರಂಗನಾಥನ್‌‍, ವೈದ್ಯಕೀಯ ಪ್ರತಿನಿಧಿ ಸತೀಶ್‌ ವರ್ಮಾ, ರಸಾಯನಶಾಸ್ತ್ರಜ್ಞ ಕೆ ಮಹೇಶ್ವರಿ, ಸಗಟು ವ್ಯಾಪಾರಿ ರಾಜೇಶ್‌ ಸೋನಿ ಮತ್ತು ವೈದ್ಯಕೀಯ ಅಂಗಡಿಯ ಔಷಧಿಕಾರ ಸೌರಭ್‌ ಜೈನ್‌ ಸೇರಿದ್ದಾರೆ.

ಮಧ್ಯಪ್ರದೇಶದ 24 ಮಕ್ಕಳು, ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ ನೀಡಿದ ನಂತರ ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ.
ನೆರೆಯ ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ ನಂತರ ಕನಿಷ್ಠ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ದುರಂತವು ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ಗುರುತಿಸಲಾದ ಮೂರು ಗುಣಮಟ್ಟದ ಮೌಖಿಕ ಕೆಮ್ಮಿನ ಸಿರಪ್‌ಗಳಾದ ಕೋಲ್ಡ್ರಿಫ್‌‍, ರೆಸ್ಪಿಫ್ರೆಶ್‌ ಟಿಆರ್‌ ಮತ್ತು ರೀಲೈಫ್‌ ವಿರುದ್ಧ ಎಚ್ಚರಿಕೆ ನೀಡಲು ಕಾರಣವಾಗಿದೆ.

ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರೊಚ್ಚಿಗೆದ್ದ ರೈತರು : ಹಲವೆಡೆ ಕಲ್ಲು ತೂರಾಟ, ಹೆದ್ದಾರಿ ಬಂದ್‌

ಬೆಂಗಳೂರು,ನ.4- ಕಬ್ಬು ಬೆಳೆಗೆ ರಾಜ್ಯ ಸರ್ಕಾರ ಬೆಲೆ ನಿಗದಿಪಡಿಸಬೇಕೆಂದು ಕಳೆದ ಐದು ದಿನಗಳಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ನಡೆಸುತ್ತಿದ್ದ ಹೋರಾಟ ವಿಕೋಪಕ್ಕೆ ತಿರುಗಿದ್ದು, ಕೆಲವು ಕಡೆ ಕಲ್ಲು ತೂರಾಟ ಹಾಗೂ ಹೆದ್ದಾರಿ ಬಂದ್‌ ಮಾಡುವ ಮೂಲಕ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ದರ ನಿಗದಿ ಹಾಗೂ ಬಾಕಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬಾಗಲಕೋಟೆ ಜಿಲ್ಲೆಯ ಮುದೋಳ ಮತ್ತು ಜಮಖಂಡಿ ತಾಲ್ಲೂಕಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮುಂದೆ ನಡೆಸುತ್ತಿದ್ದ ಪ್ರತಿಭಟನೆ ಏಕಾಏಕಿ ಹಿಂಸಾರೂಪಕ್ಕೆ ತಿರುಗಿದೆ.

ಈವರೆಗೂ ಸಹನೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ರೈತರು ಇಂದು ಏಕಾಏಕಿ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ವಾಹನಗಳು ಮತ್ತು ಕಚೇರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 5 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 5 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಊಟ, ನಿದ್ದೆ ಮಾಡುತ್ತಾ ಹೋರಾಟ ಮುಂದುವರೆಸಿದ್ದಾರೆ.

ಹಸಿರು ಬಾವುಟಗಳನ್ನು ಹಿಡಿದಿರುವ ರೈತರು, ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸರ್ಕಾರ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಿನ ಕಳೆದಂತೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿಭಟನಾ ಸ್ಥಳದಲ್ಲಿಯೇ ರೈತರು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸಿದ್ದು, ಪ್ರತಿಭಟನಾಕಾರರಿಗೆ ಆಹಾರ ವಿತರಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಹಲವಾರು ರೈತ ಸಂಘಟನೆಗಳು ಆಯೋಜಿಸಿರುವ ಈ ಪ್ರತಿಭಟನೆಯಲ್ಲಿ ಬೆಳಗಾವಿ ಮತ್ತು ಹತ್ತಿರದ ಜಿಲ್ಲೆಗಳಾದ್ಯಂತ ರೈತರು ಬೃಹತ್‌ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ.ಮೂಡಲಗಿ, ರಾಯಬಾಗ್‌ ಮತ್ತು ಗೋಕಾಕ್‌ ವಕೀಲರ ಸಂಘದ ವಕೀಲರು, ವಿವಿಧ ಭಾಗಗಳ ಮಾಜಿ ಸೈನಿಕರು, ವಿವಿಧ ಸಂಸ್ಥೆಗಳ ಮಠಾಧೀಶರು ಕೂಡ ಪ್ರತಿಭಟನಾಕಾರರನ್ನು ಭೇಟಿ ಮಾಡಿ ತಮ ಬೆಂಬಲವನ್ನು ಘೋಷಿಸಿದ್ದಾರೆ.

ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಟನ್‌ಗೆ 3,600 ರೂ. ಪಾವತಿಸುತ್ತಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ನ್ಯಾಯಯುತ ಬೆಲೆ ನಿಗದಿಪಡಿಸುವಲ್ಲಿ ವಿಫಲವಾಗಿದೆ ಎಂದು ರೈತರು ಆರೋಪಿಸಿದ್ದಾರೆ.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೊಹಮದ್‌ ರೋಷನ್‌ ಮತ್ತು ಪೊಲೀಸ್‌‍ ವರಿಷ್ಠಾಧಿಕಾರಿ ಭೀಮಾಶಂಕರ್‌ ಗುಳೇದ್‌ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಜಿಲ್ಲಾಡಳಿತವು ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಾತುಕತೆಗಳು ತೃಪ್ತಿದಾಯಕ ನಿರ್ಧಾರವನ್ನು ಕೈಗೊಂಡಿದ್ದರೆ, ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ. ಹಗಲು ರಾತ್ರಿ ಪ್ರತಿಭಟನೆ ಮುಂದುವರೆಸುತ್ತಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಮತ್ತೊಂದೆಡೆ ಬೆಳಗಾವಿ ಜಿಲ್ಲೆ, ಹುಕ್ಕೇರಿ, ಅಥಣಿ, ಮೂಡಲಗಿ, ರಾಯಭಾಗ, ಬೈಲಹೊಂಗಲ ಸೇರಿದಂತೆ ಮತ್ತಿತರ ಕಡೆ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಎಷ್ಟೇ ಹರಸಾಹಸಪಟ್ಟು ರೈತರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ರೈತರು ತಮ ಪಟ್ಟು ಸಡಿಸಲಿಲ್ಲ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ಧಾಪೂರ ಗ್ರಾಮದಲ್ಲಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಮಾಲೀಕರಿಗೆ ಸೇರಿದ ಬೊಲೆರೋ ವಾಹನ ಸೇರಿ ಇತರೇ ವಾಹನಗಳ ಗಾಜು ಪುಡಿ ಪುಡಿಯಾಗಿವೆ.ಸ್ಥಳಕ್ಕೆ ಜಮಖಂಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕಾರ್ಖಾನೆ ಆವರಣದಲ್ಲಿ ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಂದಿದ್ದು, ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆ ಮುಂದುವರೆದಿದೆ.

ಇತ್ತ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್‌‍ ಬಳಿ ಸಾವಿರಾರು ರೈತರು ಕಳೆದ 5 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಜಿಲ್ಲೆಯಾದ್ಯಂತ ವ್ಯಾಪಿಸಿದ್ದು, ರೈತರ ಹೋರಾಟಕ್ಕೆ ಸರಕಾರ ಸ್ಪಂದಿಸದ ಕಾರಣ ಚಿಕ್ಕೋಡಿ ಪಟ್ಟಣ ಸೇರಿ ವಿವಿಧೆಡೆ ಹೆದ್ದಾರಿ ಬಂದ್‌ ಮಾಡಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.

ಹುಕ್ಕೇರಿ ಜಿಲ್ಲೆಯ ಹಲವು ಕಡೆ ಬಂದ್‌ಗೆ ಕರೆ ಕೊಡಲಾಗಿತ್ತು. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌‍ನಲ್ಲಿ ಕಳೆದ ಒಂದು ವಾರದಿಂದ ನಡೆದಿರುವ ಪ್ರತಿಭಟನೆ ಜಿಲ್ಲಾಧಿಕಾರಿ ಮೊಹಮದ್‌ ರೋಷನ್‌ ಮಧ್ಯಸ್ಥಿಕೆ ನಂತರವೂ ನಿಲ್ಲದೇ ಹೆದ್ದಾರಿ ಬಂದ್‌ವರೆಗೂ ತಲುಪಿದೆ.
ಟನ್‌ ಕಬ್ಬಿಗೆ ಕನಿಷ್ಠ 3500 ಬೆಲೆ ಕೊಡಬೇಕು, ಕಾರ್ಖಾನೆಗಳೇ ಸ್ವತಃ ಕಬ್ಬು ಕಟಾವು ಮಾಡಿಕೊಳ್ಳಬೇಕು, ಡಿಜಿಟಲ್‌ ತೂಕದಲ್ಲಿ ಮೋಸ ಆಗಬಾರದು, ಕಬ್ಬು ನುರಿಸಿದ ನಂತರಬರುವ ಉಪ ಉತ್ಪನ್ನಗಳಲ್ಲೂ ರೈತರಿಗೆ ಸೂಕ್ತ ಹಣ ಪಾವತಿ ಆಗಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಲೇ ಬಂದಿದೆ.

ಜಿಲ್ಲಾಡಳಿತ ತನ್ನ ವ್ಯಾಪ್ತಿಯಲ್ಲಿ ಬೆಲೆ ಕೊಡಿಡಲು ಸಾಕಷ್ಟು ಪ್ರಯತ್ನಿಸಿ ಕೈ ಚೆಲ್ಲಿದೆ. ಕಬ್ಬಿಗೆ ಬೆಲೆ ಕೊಡಿಸಲು ಕಾರ್ಖಾನೆಗಳಿ ಮುಂದಾಗದ್ದರಿಂದ ಇಂದು ಹುಕ್ಕೇರಿ ಪಟ್ಟಣ ಬಂದ್‌ ಕರೆ ಕೊಡಲಾಗಿದ್ದು, ನಗರ ಸಂಪೂರ್ಣ ಸ್ತಬ್ದವಾಗಿದೆ.ಶಾಲಾಕಾಲೇಜುಗಳಿಗೆ ರಜೆ: ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಕೆಲವು ಕಡೆ ಹೆದ್ದಾರಿ ಬಂದ್‌ ಆಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬುಧವಾರ ಪರಿಸ್ಥಿತಿ ನೋಡಿಕೊಂಡು ತರಗತಿಗಳನ್ನು ಪ್ರಾರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.

ಆರ್‌ಬಿಐಗೇ ವಂಚಿಸಿದ್ದ ಖತರ್ನಾಕ್‌ ಗ್ಯಾಂಗ್‌ ಸೆರೆ

ಬೆಂಗಳೂರು,ನ.4- ನೋಟು ಮುದ್ರಿಸುವ ರಿಸರ್ವ್‌ ಬ್ಯಾಂಕ್‌ಗೆ ವಂಚಿಸಿದ್ದ 10 ಮಂದಿಯ ಖತರ್ನಾಕ್‌ ಗ್ಯಾಂಗನ್ನು ಖೆಡ್ಡಾಗೆ ಬೀಳಿಸುವಲ್ಲಿ ಹಲಸೂರು ಗೇಟ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಂಧ್ರ ಮೂಲದವರೇ ಹೆಚ್ಚಾಗಿರುವ ಈ ಗ್ಯಾಂಗ್‌ನ ಸದಸ್ಯರು ಸಾರ್ವಜನಿಕರಿಗೆ ಪೂಜೆ ನೆಪದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳ ಮಳೆ ಸುರಿಸುವುದಾಗಿ ಹೇಳಿ ಅವರಿಂದ 2 ಸಾವಿರ ಮುಖಬೆಲೆಯ ನೋಟನ್ನು ಪಡೆದುಕೊಂಡಿದ್ದಾರೆ.

ಈ ಗ್ಯಾಂಗ್‌ನ ಸದಸ್ಯರು ಈ ಅಸಲಿ ನೋಟುಗಳನ್ನು ಬಳಸಿಕೊಂಡು ನೋಟಿನ ಕ್ರಮ ಸಂಖ್ಯೆ, ಸಿರೀಸ್‌‍ ಮತ್ತು ಮುದ್ರಿತ ವರ್ಷವನ್ನು ತಿದ್ದುಪಡಿ ಮಾಡಿ ಅದೇ ನೋಟುಗಳನ್ನು ಆರ್‌ಬಿಐಗೆ ಕೊಟ್ಟು ಹಣವನ್ನು ಬದಲಾಯಿಸಿಕೊಂಡಿದ್ದಾರೆ.ತದ ನಂತರದಲ್ಲಿ ಈ ನೋಟುಗಳ ಕ್ರಮ ಸಂಖ್ಯೆ, ಸಿರೀಸ್‌‍ಗಳ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆಯಾಗಿರುವುದು ಗೊತ್ತಾಗಿದೆ.

ಈ ಬಗ್ಗೆ ಆರ್‌ಬಿಐ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದರು.ದೂರಿನಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2 ಸಾವಿರ ಮುಖಬೆಲೆಯ ನೋಟುಗಳ ಸಿರೀಸ್‌‍ ಹಾಗೂ ಕ್ರಮಸಂಖ್ಯೆಗಳನ್ನು ತಿದ್ದಿ, ಆರ್‌ಬಿಐಗೆ ಜಮಾ ಮಾಡಿ ವಂಚಿಸಿದ್ದಾರೆಂದು ತಿಳಿಸಲಾಗಿತ್ತು.
ದೂರಿನ ಆಧಾರದ ಮೇರೆಗೆ ಅಖಾಡಕ್ಕಿಳಿದ ಹಲಸೂರು ಗೇಟ್‌ ಪೊಲೀಸರು 10 ಮಂದಿಯ ಖತರ್ನಾಕ್‌ ಗ್ಯಾಂಗ್‌ ಅನ್ನು ಖೆಡ್ಡಾಗೆ ಬೀಳಿಸಿಕೊಂಡು ವಿಚಾರಣೆಗೆ ಒಳಪಡಿಸಿ 18 ಲಕ್ಷ ಮೌಲ್ಯದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ರಿಸರ್ವ್‌ ಬ್ಯಾಂಕ್‌ ಆ್‌‍ ಇಂಡಿಯಾಗೆ ಹಣ ಪಾವತಿ ಮಾಡಿದ್ದ ವ್ಯಕ್ತಿಯನ್ನು ಕಬ್ಬನ್‌ಪೇಟೆಯ ಆತನ ನಿವಾಸದಲ್ಲಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ 40 ಸಾವಿರ ಮೌಲ್ಯದ 2 ಸಾವಿರ ನೋಟುಗಳ ಕ್ರಮ ಸಂಖ್ಯೆ, ಸಿರೀಸ್‌‍ ಬದಲಿಸಿ ಆರ್‌ಬಿಐಗೆ ನೀಡಿರುವುದರ ಬಗ್ಗೆ ಬಾಯಿಬಿಟ್ಟಿದ್ದ.

ಆ ಹಣವನ್ನು ಕಮಿಷನ್‌ ಆಸೆಗಾಗಿ ಪರಿಚಯವಿದ್ದ ಇಬ್ಬರು ವ್ಯಕ್ತಿಗಳಿಂದ ಹಣವನ್ನು ಪಡೆದಿರುವುದಾಗಿ ತಿಳಿಸಿದ್ದ. ಆತನ ಮಾಹಿತಿ ಮೇರೆಗೆ ಇಬ್ಬರು ವ್ಯಕ್ತಿಗಳನ್ನು ಅದೇ ದಿನ ಮೈಸೂರು ಬ್ಯಾಂಕ್‌ ಸರ್ಕಲ್‌ ಬಳಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಈ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 6 ದಿನಗಳ ಪೊಲೀಸ್‌‍ ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರೆಸಿದ ಪೊಲೀಸರು ಆರೋಪಿಗಳಿಗೆ ಪರಿಚಯವಿದ್ದು ಅವರಿಗೆ ಎರಡು ಸಾವಿರ ಮುಖಬೆಲೆಯ 8 ಲಕ್ಷ ರೂ.ಗಳನ್ನು ನೀಡಿದ್ದ ಮೂವರು ವ್ಯಕ್ತಿಗಳನ್ನು ಮೆಜೆಸ್ಟಿಕ್‌ ಬಸ್‌‍ ನಿಲ್ದಾಣದ ಬಳಿ ಬಂಧಿಸಲಾಗಿತ್ತು.

ಅವರನ್ನು ವಿಚಾರಣೆಗೊಳಪಡಿಸಿದಾಗ ಅವರು ಸಾರ್ವಜನಿಕರಿಗೆ ಪೂಜೆ ಮಾಡಿಸುವ ನೆಪದಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ ನಿರಂತರ ಕ್ರಮಸಂಖ್ಯೆಯ 2018 ರಲ್ಲಿ ಮುದ್ರಿತವಾಗಿರುವ ವಿವಿಧ ಸಿರೀಸ್‌‍ಗಳನ್ನು ಹೊರತು ಪಡಿಸಿ, ಇತರ 2ಸಾವಿರ ಮುಖ ಬೆಲೆಯ ನೋಟುಗಳನ್ನು ನೀಡಿದ್ದಲ್ಲಿ ಅವುಗಳಿಗೆ ನೂರು ಪಟ್ಟು ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಅವರಿಂದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು.

ಈ ಮೂವರು ಆರೊಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 9 ದಿನಗಳ ಕಾಲ ಪೊಲೀಸ್‌‍ ಅಭಿರಕ್ಷೆಗೆ ಪಡೆದುಕೊಳ್ಳಲಾಗಿದೆ. ಇದೇ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಇತರೆ ಮೂವರು ವ್ಯಕ್ತಿಗಳನ್ನು ಆಂಧ್ರಪ್ರದೇಶದ ವಿವಿಧ ಸ್ಥಳಗಳಿಂದ ವಶಕ್ಕೆ ಪಡೆದುಕೊಂಡು ಅವರಿಂದ 6 ಲಕ್ಷ ಮೌಲ್ಯದ 2 ಸಾವಿರ ಮುಖ ಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬಂಧಿತ ಆರೋಪಿಗಳು ನೋಟಿನ ಮೇಲಿರುವ ಕ್ರಮ ಸಂಖ್ಯೆ, ಸಿರೀಸ್‌‍ ಮತ್ತು ಮುದ್ರಿತ ವರ್ಷವನ್ನು ಇವರುಗಳ ಬೇಡಿಕೆಯಂತೆ ತಿದ್ದುಪಡಿ ಪಡಿಸುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದು ಆತನನ್ನು ಯಶವಂತಪುರದಲ್ಲಿ ಬಂಧಿಸಿ ಆತನಿಂದಲೂ 6 ಲಕ್ಷ ಮೌಲ್ಯದ ನೋಟುಗಳು ಹಾಗೂ ನೋಟಿನ ಕ್ರಮ ಸಂಖ್ಯೆ, ಸಿರೀಸ್‌‍ ಮತ್ತು ಮುದ್ರಿತ ವರ್ಷವನ್ನು ತಿದ್ದಲು ಉಪಯೋಗಿಸಿದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಟ್ಟಾರೆ ಈ ಪ್ರಕರಣದಲ್ಲಿ ಎರಡು ಸಾವಿರ ಮುಖ ಬೆಲೆಯ 18 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.10 ಮಂದಿ ಆರೋಪಿಗಳನ್ನು ನ್ಯಾಯಾಲಯ ಬಂಧನಕ್ಕೆ ಒಳಪಡಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಗ್ಯಾಂಗ್‌ನ ಕಿಂಗ್‌ಪಿನ್‌ ಮಹಿಳೆಯ ಬಂಧನಕ್ಕೆ ಜಾಲ ಬೀಸಲಾಗಿದೆ.

ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಎಂ.ಹಾಕೆ ಮಾರ್ಗದರ್ಶನದಲ್ಲಿ ಹಲಸೂರುಗೇಟ್‌ ಎಸಿಪಿ ಶಿವಾನಂದ ಚಲವಾದಿ ನೇತೃತ್ವದ ಪೊಲೀಸ್‌‍ ತಂಡ ಆರ್‌ಬಿಐಗೆ ವಂಚಿಸಿದ್ದ ಖತರ್ನಾಕ್‌ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹಲಸೂರುಗೇಟ್‌ ಪೊಲೀಸ್‌‍ ಠಾಣೆಯ ಇನ್‌್ಸಪೆಕ್ಟರ್‌ ಅಶ್ವಥನಾರಾಯಣಸ್ವಾಮಿ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರ ಕಾರ್ಯವನ್ನು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಶ್ಲಾಘಿಸಿದ್ದಾರೆ.

ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಭತ್ತ, ಗೋಧಿಗೆ ಬೊನಸ್‌‍ ; ತೇಜಸ್ವಿ

ಪಾಟ್ನಾ, ನ. 4 (ಪಿಟಿಐ) ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ರೈತರಿಗೆ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ ಎಂಎಸ್‌‍ಪಿ ದರದ ಮೇಲೆ 300 ರೂ. ಮತ್ತು ಗೋಧಿಗೆ 400 ರೂ. ಬೋನಸ್‌‍ ನೀಡಲಾಗುವುದು ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಘೋಷಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾದವ್‌ ಅವರು, ಎಲ್ಲಾ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್‌‍) ಮತ್ತು ಪ್ರಾಥಮಿಕ ಮಾರುಕಟ್ಟೆ ಸಹಕಾರ ಸಂಘಗಳ (ವ್ಯಾಪಾರ ಮಂಡಲಗಳು) ಮುಖ್ಯಸ್ಥರಿಗೂ ರಾಜ್ಯದಲ್ಲಿ ಜನಪ್ರತಿನಿಧಿಗಳ ಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.

ನವೆಂಬರ್‌ 6 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡು ದಿನಗಳ ಮೊದಲು ಈ ಪ್ರಕಟಣೆಗಳು ಬಂದಿವೆ.ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ಎಲ್ಲಾ ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌‍ಪಿ) ಗಿಂತ ಬೋನಸ್‌‍ ಆಗಿ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 300 ರೂ. ಮತ್ತು ಗೋಧಿಗೆ 400 ರೂ. ನೀಡಲಾಗುವುದು ಎಂದು ಯಾದವ್‌ ಹೇಳಿದರು.

ಇದಲ್ಲದೆ, ನಾವು ಸರ್ಕಾರ ರಚಿಸಿದರೆ, ರಾಜ್ಯದಲ್ಲಿ ನೋಂದಾಯಿತ 8,400 ವ್ಯಾಪಾರ ಮಂಡಲಗಳು ಮತ್ತು ಪಿಎಸಿಎಸ್‌‍ಗಳ ವ್ಯವಸ್ಥಾಪಕರಿಗೆ ಗೌರವಧನ ನೀಡಲು ನಾವು ಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು.

243 ಸದಸ್ಯರ ಬಿಹಾರ ವಿಧಾನಸಭೆಗೆ ನವೆಂಬರ್‌ 6 ಮತ್ತು ನವೆಂಬರ್‌ 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್‌ 14 ರಂದು ಫಲಿತಾಂಶಗಳು ಪ್ರಕಟವಾಗಲಿವೆ.

ಮಾಜಿ ಸಚಿವ ಹಾಗೂ ಬಾಗಲಕೋಟೆ ಕಾಂಗ್ರೆಸ್‌‍ ಶಾಸಕ ಹೆಚ್‌.ವೈ.ಮೇಟಿ ನಿಧನ

ಬೆಂಗಳೂರು. ನ.4- ಮಾಜಿ ಸಚಿವ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಎಚ್‌.ವೈ. ಮೇಟಿ ಅವರು (79) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. 1946 ಅಕ್ಟೋಬರ್‌ 9ರಂದು ಬಾಗಲಕೋಟೆ ಜಿಲ್ಲೆಯ ತಿಮಾಪುರದಲ್ಲಿ ಜನಿಸಿದ್ದ ಮೇಟಿ ಅವರು, ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಚುನಾಯಿತರಾಗಿದ್ದರು. 1989, 1994 ಮತ್ತು 2004ರಲ್ಲಿ ಗುಳೇದಗುಡ್ಡ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಿಂದ ಗುಳೇದಗುಡ್ಡ ಕ್ಷೇತ್ರ ಇಲ್ಲವಾದ ಬಳಿಕ, ಬಾಗಲಕೋಟೆ ಕ್ಷೇತ್ರಕ್ಕೆ ಸ್ಥಳಾಂತರವಾದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಹುಲ್ಲಪ್ಪ ಯಮುನಪ್ಪ ಮೇಟಿ ಮಹಿಳೆಯೊಂದಿಗೆ ಲೈಂಗಿಕ ಹಗರಣದಲ್ಲಿ ಸಿಲುಕಿ ಇದಕ್ಕೆ ಸಂಬಂಧಪಟ್ಟಂತ ಸಿಡಿ ಬಹಿರಂಗವಾದ ಬಳಿಕ 2016ರ ಡಿಸೆಂಬರ್‌ನಲ್ಲಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ವಿವಾದ ಹೊರತು ಪಡಿಸಿದರೆ ಮೇಟಿ ರಾಜಕಾರಣದಲ್ಲಿ ಸಜ್ಜನ, ಸೌಮ್ಯ ಸ್ವಭಾವದ ಅಜಾತಶತೃ ಎಂದೇ ಗುರುತಿಸಿಕೊಂಡಿದ್ದಾರೆ.

2018ರ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಪುನರ್‌ ಆಯ್ಕೆಯಾಗಿದ್ದರು. 5 ಬಾರಿ ಶಾಸಕರಾಗಿದ್ದ ಮೇಟಿ ಮತ್ತೆ ಸಂಪುಟ ಸೇರಲು ಪ್ರಯತ್ನಿಸಿದ್ದರು. ಆದರೆ ರಾಜ್ಯ ರಾಜಕಾರಣದ ಒತ್ತಡದಲ್ಲಿ ಅದು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಮೇಟಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿದ್ದ ಸಿದ್ದರಾಮಯ್ಯ ತಮ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.

ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ದೆಹಲಿಗೆ ಬರದಂತೆ ಕಾಂಗ್ರೆಸ್‌‍ ‘ಕೈ’ಕಮಾಂಡ್‌ ಸ್ಪಷ್ಟ ಸಂದೇಶ

ಬೆಂಗಳೂರು. ನ.4- ಬಿಹಾರ ವಿಧಾನಸಭಾ ಚುನಾವಣೆ ಕಾರ್ಯಕ್ರಮದ ಒತ್ತಡದಲ್ಲಿರುವುದರಿಂದ ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ಯಾರೂ ದೆಹಲಿಗೆ ಬರಬೇಡಿ ಎಂದು ಕಾಂಗ್ರೆಸ್‌‍ ಹೈಕಮಾಂಡ್‌ ಸ್ಪಷ್ಟ ಸಂದೇಶ ರವಾನಿಸಿದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೋಮವಾರ ದೆಹಲಿ ಭೇಟಿಗೆ ಮುಂದಾಗಿದ್ದರು. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಭೇಟಿಗೆ ಸಮಯ ಕೇಳಿದರು. ಆದರೆ ಎಲ್ಲಾ ನಾಯಕರು ಬಿಹಾರ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು ಭೇಟಿಗೆ ಸಮಯವಿಲ್ಲ ಎಂದು ಹೈಕಮಾಂಡ್‌ ಸಂದೇಶ ರವಾನಿಸಿದೆ.

ಹೀಗಾಗಿ ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳದೆ ಬೆಳಗಾವಿಯಲ್ಲೇ ಉಳಿದಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. 6 ದಿನಗಳ ಅಹೋರಾತ್ರಿ, ಧರಣಿ, ಹಿಂಸಾಸ್ವರೂಪ ಪಡೆದುಕೊಳ್ಳುತ್ತಿದ್ದು, ಕಾನೂನು ಸುವ್ಯಸ್ಥೆಯ ಸವಾಲನ್ನು ತಂದು ಒಡ್ಡಿದೆ. ಈ ಕಾರಣಕ್ಕಾಗಿ ಸತೀಶ್‌ ಜಾರಕಿಹೊಳಿ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ಸಂಪುಟ ಪುನರ್‌ರಚನೆಯ ಕುರಿತು ನವೆಂಬರ್‌ 15ಕ್ಕೆ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲಿ ವರಿಷ್ಠರ ಜೊತೆಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಆಕಾಂಕ್ಷಿಗಳು ದೆಹಲಿ ಯಾತ್ರೆ ಆರಂಭಿಸಿದ್ದಾರೆ. ನಾ ಮುಂದು ತಾ ಮುಂದು ಎಂದು ವರಿಷ್ಠರ ಭೇಟಿಗೆ ಸಮಯ ಕೇಳುತ್ತಿದ್ದಾರೆ.

ರಾಹುಲ್‌ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ, ಪ್ರಿಯಾಂಕಗಾಂಧಿ, ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಜೈರಾಮ ರಮೇಶ್‌ ಸೇರಿದಂತೆ ಬಹತೇಕ ನಾಯಕರು ಬಿಹಾರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ಧಾರೆ. ಹೀಗಾಗಿ ದೆಹಲಿಗೆ ಬರಬೇಡಿ, ರಾಜಕಾರಣ ಚರ್ಚೆಗೆ ಸಮಯ ಕೇಳಬೇಡಿ ಎಂದು ರಾಜ್ಯದ ನಾಯಕರಿಗೆ ಹೈಕಮಾಂಡ್‌ ಸ್ಪಷ್ಟ ಸಂದೇಶ ನೀಡಿದೆೆ.

ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ

ಬೆಳಗಾವಿ,ನ.4- ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ರಾಜ್ಯ ಸರ್ಕಾರ ಈವರೆಗೂ ಪರಿಹಾರವನ್ನೇ ನೀಡಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಕರ ಮಳೆಯಿಂದ ತೊಂದರೆಗೀಡಾದ ರೈತರು ಪರಿಹಾರ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖೆಯ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ; ಕಂದಾಯ, ಕೃಷಿ ಸಚಿವರು ಉತ್ತರ ಕರ್ನಾಟಕದ ಪ್ರವಾಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆ ಸೇರಿ ಈ ಭಾಗದ ಕಬ್ಬು ಬೆಳೆಗಾರರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು.

6 ಮಿಲಿಯನ್‌ ಟನ್‌ ಕಬ್ಬು ಅರೆಯುತ್ತಿದ್ದು, ಮೊಲಾಸೆಸ್‌‍, ಎಥೆನಾಲ್‌ ಮೊದಲಾದವುಗಳಿಂದ ರಾಜ್ಯ ಸರಕಾರಕ್ಕೆ ತೆರಿಗೆ ಮೂಲಕ ಸುಮಾರು 50-55 ಸಾವಿರ ಕೋಟಿ ಆದಾಯ ಬರುತ್ತದೆ. ಆದಾಗ್ಯೂ ಈ ಸರಕಾರ ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರವು ತನ್ನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ನಾಡಿಗೆ ಅನ್ನ ನೀಡುವ ರೈತರ ವಿಚಾರ ಬಂದಾಗ ಪಕ್ಷಾತೀತವಾಗಿ ನಾವು ರೈತರ ಪರವಾಗಿ ನಿಲ್ಲಬೇಕಾಗುತ್ತದೆ. ನಮ ಪಕ್ಷದ ಮುಖಂಡರ ಜೊತೆ ಚರ್ಚಿಸಿ ಅವರ ಪ್ರತಿಭಟನೆಗೆ ಬೆಂಬಲ ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

2014ರಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ರೈತ ವಿಠಲ ಅರಬಾವಿ ಅವರು ಕಬ್ಬಿನ ದರದ ವಿಚಾರದಲ್ಲಿ ಪ್ರಾಣ ಕಳಕೊಂಡರು. ಯಡಿಯೂರಪ್ಪ ಅವರೂ ಬೀದಿಗಿಳಿದು ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿಗಳಿಗೆ 150 ರೂ. ಹೆಚ್ಚುವರಿ ದರಕ್ಕೆ ಒತ್ತಾಯ ಮಾಡಿದ್ದರು. ಆಗ ಹೋರಾಟ ಯಶಸ್ವಿಯಾಗಿತ್ತು ಎಂದು ನೆನಪಿಸಿದರು.

ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಕುರ್ಚಿಗೆ ಕಳೆದ ಕೆಲವು ದಿನಗಳಿಂದ ಯುದ್ಧ ಪ್ರಾರಂಭವಾಗಿದೆ. ಅದು ಯಾವ ಮಟ್ಟಕ್ಕೆ ಹೋಗಲಿದೆ ಎಂಬುದು ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ ಎಂದು ಹೇಳಿದರು.

ನಾಡಿನ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ಗುಲ್ಬರ್ಗ, ಯಾದಗಿರಿ, ರಾಯಚೂರು ಭಾಗದಲ್ಲಿ ನಮ ವಿಪಕ್ಷ ನಾಯಕರೂ ಪ್ರವಾಸ ಮಾಡಿದ್ದಾರೆ ಎಂದು ತಿಳಿಸಿದರು.

ಕಿರುತೆರೆ ನಟಿಗೆ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ ನೀಡಿದ ಕಾಮುಕ

ಬೆಂಗಳೂರು,ನ.4- ಸಾಮಾಜಿಕ ಮಾಧ್ಯಮದಲ್ಲಿ ಆಶ್ಲೀಲ ಪೋಟೋ ಕಳಿಸಿ ಕಿರುತೆರೆ ನಟಿಗೆ ಕಾಮುಕನೊಬ್ಬ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಕನ್ನಡ ತೆಲಗು ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ನಟಿಸಿರುವ ಆಕೆಯ ಫೇಸ್‌‍ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ನಟಿಗೆ ಕಿರುಕುಳ ನೀಡಲಾಗಿದೆ.

ಅಕೌಂಟ್‌ ಬ್ಲಾಕ್‌ ಮಾಡಿದ್ರೂ ಕಾಮುಕನ ಕಾಟ ತಪ್ಪಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ 3 ತಿಂಗಳಿನಿಂದ ನಟಿಯ ಹಿಂದೆ ಬಿದ್ದಿದ್ದಾನೆ ಎಂದು ತಿಳಿದುಬಂದಿದ್ದೆ ಸದ್ಯ ನಟಿಯ ಹೆಸರು ಬಹಿರಂಗಪಡಿಸಲಾಗಿಲ್ಲ.

ಆರೋಪಿ ಮೊದಲು ಫೇಸ್‌‍ಬುಕ್‌ನಲ್ಲಿ ನವೀನಜ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್‌ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್‌ನಲ್ಲಿ ಮೆಸೇಜ್‌ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ನಟಿ ಮೆಸೇಜ್‌ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕಿರುಕುಳ ಹೆಚ್ಚಾಗ್ತಿದ್ದ ಹಿನ್ನೆಲೆ ಆತನ ಅಕೌಂಟ್‌ ಬ್ಲಾಕ್‌ ಮಾಡಿದ್ದರು.ಬಳಿಕ ಬೇರೆ ಐಡಿಯಿಂದ ಅಶ್ಲೀಲ ಮೆಸೇಜ್‌ ಕಳಿಸಿದ್ದ, ಆಶ್ಲೀಲ ವಿಡಿಯೋ ಕಳಿಸಿ ವಿಕೃತಿ ಮೆರೆಯುತ್ತಿದ್ದ.

ಆದ್ರೂ ತಾಳ್ಮೆ ಕಳೆದುಕೊಳ್ಳದ ನಟಿ ಕಳೆದ ನವೆಂಬರ್‌ 1ರಂದು ನಾಗರಭಾವಿಯ ನಂದನ್‌ ಪ್ಯಾಲೆಸ್‌‍ ಬಳಿ ಆರೋಪಿಯನ್ನ ಭೇಟಿ ಮಾಡಿ ಬುದ್ಧಿ ಮಾತು ಹೇಳಿದ್ದರು.ಈ ರೀತಿ ಮೆಸೇಜ್‌ ಮಾಡಬಾರದು ಅಂತ ಕಿವಿಮಾತು ಹೇಳಿದ್ರು. ಆದರೂ ಚಾಳಿ ಬಿಡದೆ ಮತ್ತೆ ಅಶ್ಲೀಲ ಮೆಸೇಜ್‌ ಮಾಡೋದನ್ನ ಮುಂದುವರಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌‍ ಠಾಣೆಗೆ ನಟಿ ದೂರು ನೀಡಿದ್ದರು.

ವಿಜಯಪುರ ಜಿಲ್ಲೆಯಲ್ಲಿ 2.9 ತೀವ್ರತೆಯ ಲಘು ಭೂಕಂಪ

ವಿಜಯಪುರ,ನ.4- ವಿಜಯಪುರ ಜಿಲ್ಲೆಯಲ್ಲಿ ಇಂದು ರಿಕ್ಟರ್‌ ಮಾಪಕದಲ್ಲಿ 2.9 ತೀವ್ರತೆಯ ಲಘು ಭೂಕಂಪ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌‍ಎನ್‌ಡಿಎಂಸಿ) ತಿಳಿಸಿದೆ.

ವಿಜಯಪುರ ತಾಲ್ಲೂಕಿನ ಭೂಟ್ನಾಳ ತಾಂಡಾದಿಂದ ವಾಯುವ್‌ಯಕ್ಕೆ ಸುಮಾರು 3.6 ಕಿಲೋಮೀಟರ್‌ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ಬೆಳಿಗ್ಗೆ 7.49 ಕ್ಕೆ ಭೂಕಂಪ ಸಂಭವಿಸಿದೆ.

ಭೂಕಂಪನವು ಅಲ್ಪ ಪ್ರಮಾಣದಲ್ಲಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರದ ವಿಶ್ಲೇಷಣೆಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಇಂಗನಾಲ್‌ ಗ್ರಾಮದಿಂದ ಪಶ್ಚಿಮ-ನೈಋತ್ಯಕ್ಕೆ 4.3 ಕಿ.ಮೀ, ಹಂಚಿನಾಲ್‌ ಗ್ರಾಮದಿಂದ ಈಶಾನ್ಯಕ್ಕೆ 4.6 ಕಿ.ಮೀ, ವಿಜಯಪುರ ನಗರದಿಂದ ಈಶಾನ್ಯಕ್ಕೆ 9.3 ಕಿ.ಮೀ ಮತ್ತು ಆಲಮಟ್ಟಿ ಅಣೆಕಟ್ಟು ಭೂಕಂಪ ವೀಕ್ಷಣಾಲಯದಿಂದ ಸುಮಾರು 65 ಕಿ.ಮೀ ಉತ್ತರದಲ್ಲಿದೆ.ಭೂಮಿಯಿಂದ 5 ಕಿ.ಕಿಮಿ ಕಳೆಗೆ ಕಂಪನವಾಗಿದೆ.

ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರಬಿಂದುದಿಂದ 50-60 ಕಿ.ಮೀ ರೇಡಿಯಲ್‌ ದೂರದವರೆಗೆ ಅನುಭವಿಸಬಹುದು ಎಂದು ಕೆಎಸ್‌‍ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.
ಅಂತಹ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಏಕೆಂದರೆ ಗಮನಿಸಿದ ತೀವ್ರತೆ ಕಡಿಮೆಯಾಗಿದೆ, ಆದರೂ ಸ್ಥಳೀಯ ಕಂಪನಗಳು ಅನುಭವಿಸಬಹುದು ಎಂದು ಅದು ಹೇಳಿದೆ.

ಜನರು ಮನೆಯಿಂದ ಹೊರಗೆ ಬಂದು ಆತಂಕ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ, ಹೊನ್ನೂಟಗಿ ಸೇರಿದಂತೆ ವಿಜಯಪುರ, ತಿಕೋಟ ತಾಲೂಕುಗಳಲ್ಲಿ ಭೂಕಂಪನದ ಅನುಭವ ಆಗಿದೆ. ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ 13 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ ಸರಣಿ ಭೂಕಂಪನದಿಂದ ಜನರು ಭೀತಿಗೊಂಡಿದ್ದಾರೆ.