Home Blog Page 7

ಮಾಜಿ ಸಚಿವ ಹಾಗೂ ಬಾಗಲಕೋಟೆ ಕಾಂಗ್ರೆಸ್‌‍ ಶಾಸಕ ಹೆಚ್‌.ವೈ.ಮೇಟಿ ನಿಧನ

ಬೆಂಗಳೂರು. ನ.4- ಮಾಜಿ ಸಚಿವ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಎಚ್‌.ವೈ. ಮೇಟಿ ಅವರು (79) ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. 1946 ಅಕ್ಟೋಬರ್‌ 9ರಂದು ಬಾಗಲಕೋಟೆ ಜಿಲ್ಲೆಯ ತಿಮಾಪುರದಲ್ಲಿ ಜನಿಸಿದ್ದ ಮೇಟಿ ಅವರು, ಬಾಗಲಕೋಟೆ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಚುನಾಯಿತರಾಗಿದ್ದರು. 1989, 1994 ಮತ್ತು 2004ರಲ್ಲಿ ಗುಳೇದಗುಡ್ಡ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅವರು 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಿಂದ ಗುಳೇದಗುಡ್ಡ ಕ್ಷೇತ್ರ ಇಲ್ಲವಾದ ಬಳಿಕ, ಬಾಗಲಕೋಟೆ ಕ್ಷೇತ್ರಕ್ಕೆ ಸ್ಥಳಾಂತರವಾದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಗೆದ್ದು ಆಯ್ಕೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

ಕುರುಬ ಸಮುದಾಯದ ಪ್ರಭಾವಿ ನಾಯಕರಾಗಿದ್ದ ಹುಲ್ಲಪ್ಪ ಯಮುನಪ್ಪ ಮೇಟಿ ಮಹಿಳೆಯೊಂದಿಗೆ ಲೈಂಗಿಕ ಹಗರಣದಲ್ಲಿ ಸಿಲುಕಿ ಇದಕ್ಕೆ ಸಂಬಂಧಪಟ್ಟಂತ ಸಿಡಿ ಬಹಿರಂಗವಾದ ಬಳಿಕ 2016ರ ಡಿಸೆಂಬರ್‌ನಲ್ಲಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ವಿವಾದ ಹೊರತು ಪಡಿಸಿದರೆ ಮೇಟಿ ರಾಜಕಾರಣದಲ್ಲಿ ಸಜ್ಜನ, ಸೌಮ್ಯ ಸ್ವಭಾವದ ಅಜಾತಶತೃ ಎಂದೇ ಗುರುತಿಸಿಕೊಂಡಿದ್ದಾರೆ.

2018ರ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. 2013ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಪುನರ್‌ ಆಯ್ಕೆಯಾಗಿದ್ದರು. 5 ಬಾರಿ ಶಾಸಕರಾಗಿದ್ದ ಮೇಟಿ ಮತ್ತೆ ಸಂಪುಟ ಸೇರಲು ಪ್ರಯತ್ನಿಸಿದ್ದರು. ಆದರೆ ರಾಜ್ಯ ರಾಜಕಾರಣದ ಒತ್ತಡದಲ್ಲಿ ಅದು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೇಟಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಮೇಟಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನಲ್ಲಿದ್ದ ಸಿದ್ದರಾಮಯ್ಯ ತಮ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ಆಗಮಿಸಿ, ಅಂತಿಮ ದರ್ಶನ ಪಡೆದಿದ್ದಾರೆ.

ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ದೆಹಲಿಗೆ ಬರದಂತೆ ಕಾಂಗ್ರೆಸ್‌‍ ‘ಕೈ’ಕಮಾಂಡ್‌ ಸ್ಪಷ್ಟ ಸಂದೇಶ

ಬೆಂಗಳೂರು. ನ.4- ಬಿಹಾರ ವಿಧಾನಸಭಾ ಚುನಾವಣೆ ಕಾರ್ಯಕ್ರಮದ ಒತ್ತಡದಲ್ಲಿರುವುದರಿಂದ ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ಯಾರೂ ದೆಹಲಿಗೆ ಬರಬೇಡಿ ಎಂದು ಕಾಂಗ್ರೆಸ್‌‍ ಹೈಕಮಾಂಡ್‌ ಸ್ಪಷ್ಟ ಸಂದೇಶ ರವಾನಿಸಿದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸೋಮವಾರ ದೆಹಲಿ ಭೇಟಿಗೆ ಮುಂದಾಗಿದ್ದರು. ಅಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರ ಭೇಟಿಗೆ ಸಮಯ ಕೇಳಿದರು. ಆದರೆ ಎಲ್ಲಾ ನಾಯಕರು ಬಿಹಾರ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದು ಭೇಟಿಗೆ ಸಮಯವಿಲ್ಲ ಎಂದು ಹೈಕಮಾಂಡ್‌ ಸಂದೇಶ ರವಾನಿಸಿದೆ.

ಹೀಗಾಗಿ ಸತೀಶ್‌ ಜಾರಕಿಹೊಳಿ ದೆಹಲಿಗೆ ತೆರಳದೆ ಬೆಳಗಾವಿಯಲ್ಲೇ ಉಳಿದಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡಿದೆ. 6 ದಿನಗಳ ಅಹೋರಾತ್ರಿ, ಧರಣಿ, ಹಿಂಸಾಸ್ವರೂಪ ಪಡೆದುಕೊಳ್ಳುತ್ತಿದ್ದು, ಕಾನೂನು ಸುವ್ಯಸ್ಥೆಯ ಸವಾಲನ್ನು ತಂದು ಒಡ್ಡಿದೆ. ಈ ಕಾರಣಕ್ಕಾಗಿ ಸತೀಶ್‌ ಜಾರಕಿಹೊಳಿ ದೆಹಲಿ ಭೇಟಿಯನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ಸಂಪುಟ ಪುನರ್‌ರಚನೆಯ ಕುರಿತು ನವೆಂಬರ್‌ 15ಕ್ಕೆ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲಿ ವರಿಷ್ಠರ ಜೊತೆಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಆಕಾಂಕ್ಷಿಗಳು ದೆಹಲಿ ಯಾತ್ರೆ ಆರಂಭಿಸಿದ್ದಾರೆ. ನಾ ಮುಂದು ತಾ ಮುಂದು ಎಂದು ವರಿಷ್ಠರ ಭೇಟಿಗೆ ಸಮಯ ಕೇಳುತ್ತಿದ್ದಾರೆ.

ರಾಹುಲ್‌ಗಾಂಧಿ, ಮಲ್ಲಿಕಾರ್ಜುನ್‌ ಖರ್ಗೆ, ಪ್ರಿಯಾಂಕಗಾಂಧಿ, ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಜೈರಾಮ ರಮೇಶ್‌ ಸೇರಿದಂತೆ ಬಹತೇಕ ನಾಯಕರು ಬಿಹಾರದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ಧಾರೆ. ಹೀಗಾಗಿ ದೆಹಲಿಗೆ ಬರಬೇಡಿ, ರಾಜಕಾರಣ ಚರ್ಚೆಗೆ ಸಮಯ ಕೇಳಬೇಡಿ ಎಂದು ರಾಜ್ಯದ ನಾಯಕರಿಗೆ ಹೈಕಮಾಂಡ್‌ ಸ್ಪಷ್ಟ ಸಂದೇಶ ನೀಡಿದೆೆ.

ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡದ ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ

ಬೆಳಗಾವಿ,ನ.4- ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ರಾಜ್ಯ ಸರ್ಕಾರ ಈವರೆಗೂ ಪರಿಹಾರವನ್ನೇ ನೀಡಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಕರ ಮಳೆಯಿಂದ ತೊಂದರೆಗೀಡಾದ ರೈತರು ಪರಿಹಾರ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖೆಯ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ; ಕಂದಾಯ, ಕೃಷಿ ಸಚಿವರು ಉತ್ತರ ಕರ್ನಾಟಕದ ಪ್ರವಾಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ, ಬಾಗಲಕೋಟೆ, ಬಿಜಾಪುರ ಜಿಲ್ಲೆ ಸೇರಿ ಈ ಭಾಗದ ಕಬ್ಬು ಬೆಳೆಗಾರರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು.

6 ಮಿಲಿಯನ್‌ ಟನ್‌ ಕಬ್ಬು ಅರೆಯುತ್ತಿದ್ದು, ಮೊಲಾಸೆಸ್‌‍, ಎಥೆನಾಲ್‌ ಮೊದಲಾದವುಗಳಿಂದ ರಾಜ್ಯ ಸರಕಾರಕ್ಕೆ ತೆರಿಗೆ ಮೂಲಕ ಸುಮಾರು 50-55 ಸಾವಿರ ಕೋಟಿ ಆದಾಯ ಬರುತ್ತದೆ. ಆದಾಗ್ಯೂ ಈ ಸರಕಾರ ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಆಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರವು ತನ್ನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ನಾಡಿಗೆ ಅನ್ನ ನೀಡುವ ರೈತರ ವಿಚಾರ ಬಂದಾಗ ಪಕ್ಷಾತೀತವಾಗಿ ನಾವು ರೈತರ ಪರವಾಗಿ ನಿಲ್ಲಬೇಕಾಗುತ್ತದೆ. ನಮ ಪಕ್ಷದ ಮುಖಂಡರ ಜೊತೆ ಚರ್ಚಿಸಿ ಅವರ ಪ್ರತಿಭಟನೆಗೆ ಬೆಂಬಲ ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

2014ರಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ರೈತ ವಿಠಲ ಅರಬಾವಿ ಅವರು ಕಬ್ಬಿನ ದರದ ವಿಚಾರದಲ್ಲಿ ಪ್ರಾಣ ಕಳಕೊಂಡರು. ಯಡಿಯೂರಪ್ಪ ಅವರೂ ಬೀದಿಗಿಳಿದು ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿಗಳಿಗೆ 150 ರೂ. ಹೆಚ್ಚುವರಿ ದರಕ್ಕೆ ಒತ್ತಾಯ ಮಾಡಿದ್ದರು. ಆಗ ಹೋರಾಟ ಯಶಸ್ವಿಯಾಗಿತ್ತು ಎಂದು ನೆನಪಿಸಿದರು.

ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಕುರ್ಚಿಗೆ ಕಳೆದ ಕೆಲವು ದಿನಗಳಿಂದ ಯುದ್ಧ ಪ್ರಾರಂಭವಾಗಿದೆ. ಅದು ಯಾವ ಮಟ್ಟಕ್ಕೆ ಹೋಗಲಿದೆ ಎಂಬುದು ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ ಎಂದು ಹೇಳಿದರು.

ನಾಡಿನ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ನಾನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ಗುಲ್ಬರ್ಗ, ಯಾದಗಿರಿ, ರಾಯಚೂರು ಭಾಗದಲ್ಲಿ ನಮ ವಿಪಕ್ಷ ನಾಯಕರೂ ಪ್ರವಾಸ ಮಾಡಿದ್ದಾರೆ ಎಂದು ತಿಳಿಸಿದರು.

ಕಿರುತೆರೆ ನಟಿಗೆ ಗುಪ್ತಾಂಗದ ವಿಡಿಯೋ ಕಳಿಸಿ ಕಿರುಕುಳ ನೀಡಿದ ಕಾಮುಕ

ಬೆಂಗಳೂರು,ನ.4- ಸಾಮಾಜಿಕ ಮಾಧ್ಯಮದಲ್ಲಿ ಆಶ್ಲೀಲ ಪೋಟೋ ಕಳಿಸಿ ಕಿರುತೆರೆ ನಟಿಗೆ ಕಾಮುಕನೊಬ್ಬ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಕನ್ನಡ ತೆಲಗು ಸೇರಿದಂತೆ ಹಲವಾರು ಧಾರವಾಹಿಗಳಲ್ಲಿ ನಟಿಸಿರುವ ಆಕೆಯ ಫೇಸ್‌‍ಬುಕ್‌ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ನಟಿಗೆ ಕಿರುಕುಳ ನೀಡಲಾಗಿದೆ.

ಅಕೌಂಟ್‌ ಬ್ಲಾಕ್‌ ಮಾಡಿದ್ರೂ ಕಾಮುಕನ ಕಾಟ ತಪ್ಪಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ 3 ತಿಂಗಳಿನಿಂದ ನಟಿಯ ಹಿಂದೆ ಬಿದ್ದಿದ್ದಾನೆ ಎಂದು ತಿಳಿದುಬಂದಿದ್ದೆ ಸದ್ಯ ನಟಿಯ ಹೆಸರು ಬಹಿರಂಗಪಡಿಸಲಾಗಿಲ್ಲ.

ಆರೋಪಿ ಮೊದಲು ಫೇಸ್‌‍ಬುಕ್‌ನಲ್ಲಿ ನವೀನಜ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ್ದಾನೆ. ನಟಿ ರಿಕ್ವೆಸ್ಟ್‌ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್‌ನಲ್ಲಿ ಮೆಸೇಜ್‌ ಮಾಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

ನಟಿ ಮೆಸೇಜ್‌ ಮಾಡದಂತೆ ಆರೋಪಿಗೆ ಎಚ್ಚರಿಕೆ ನೀಡಿದ್ದರು. ಆದ್ರೂ ಕಿರುಕುಳ ಹೆಚ್ಚಾಗ್ತಿದ್ದ ಹಿನ್ನೆಲೆ ಆತನ ಅಕೌಂಟ್‌ ಬ್ಲಾಕ್‌ ಮಾಡಿದ್ದರು.ಬಳಿಕ ಬೇರೆ ಐಡಿಯಿಂದ ಅಶ್ಲೀಲ ಮೆಸೇಜ್‌ ಕಳಿಸಿದ್ದ, ಆಶ್ಲೀಲ ವಿಡಿಯೋ ಕಳಿಸಿ ವಿಕೃತಿ ಮೆರೆಯುತ್ತಿದ್ದ.

ಆದ್ರೂ ತಾಳ್ಮೆ ಕಳೆದುಕೊಳ್ಳದ ನಟಿ ಕಳೆದ ನವೆಂಬರ್‌ 1ರಂದು ನಾಗರಭಾವಿಯ ನಂದನ್‌ ಪ್ಯಾಲೆಸ್‌‍ ಬಳಿ ಆರೋಪಿಯನ್ನ ಭೇಟಿ ಮಾಡಿ ಬುದ್ಧಿ ಮಾತು ಹೇಳಿದ್ದರು.ಈ ರೀತಿ ಮೆಸೇಜ್‌ ಮಾಡಬಾರದು ಅಂತ ಕಿವಿಮಾತು ಹೇಳಿದ್ರು. ಆದರೂ ಚಾಳಿ ಬಿಡದೆ ಮತ್ತೆ ಅಶ್ಲೀಲ ಮೆಸೇಜ್‌ ಮಾಡೋದನ್ನ ಮುಂದುವರಿದ್ದ. ಲೈಂಗಿಕ ಕಿರುಕುಳ ಹೆಚ್ಚಾದ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌‍ ಠಾಣೆಗೆ ನಟಿ ದೂರು ನೀಡಿದ್ದರು.

ವಿಜಯಪುರ ಜಿಲ್ಲೆಯಲ್ಲಿ 2.9 ತೀವ್ರತೆಯ ಲಘು ಭೂಕಂಪ

ವಿಜಯಪುರ,ನ.4- ವಿಜಯಪುರ ಜಿಲ್ಲೆಯಲ್ಲಿ ಇಂದು ರಿಕ್ಟರ್‌ ಮಾಪಕದಲ್ಲಿ 2.9 ತೀವ್ರತೆಯ ಲಘು ಭೂಕಂಪ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌‍ಎನ್‌ಡಿಎಂಸಿ) ತಿಳಿಸಿದೆ.

ವಿಜಯಪುರ ತಾಲ್ಲೂಕಿನ ಭೂಟ್ನಾಳ ತಾಂಡಾದಿಂದ ವಾಯುವ್‌ಯಕ್ಕೆ ಸುಮಾರು 3.6 ಕಿಲೋಮೀಟರ್‌ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿದ್ದು, ಬೆಳಿಗ್ಗೆ 7.49 ಕ್ಕೆ ಭೂಕಂಪ ಸಂಭವಿಸಿದೆ.

ಭೂಕಂಪನವು ಅಲ್ಪ ಪ್ರಮಾಣದಲ್ಲಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರದ ವಿಶ್ಲೇಷಣೆಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಇಂಗನಾಲ್‌ ಗ್ರಾಮದಿಂದ ಪಶ್ಚಿಮ-ನೈಋತ್ಯಕ್ಕೆ 4.3 ಕಿ.ಮೀ, ಹಂಚಿನಾಲ್‌ ಗ್ರಾಮದಿಂದ ಈಶಾನ್ಯಕ್ಕೆ 4.6 ಕಿ.ಮೀ, ವಿಜಯಪುರ ನಗರದಿಂದ ಈಶಾನ್ಯಕ್ಕೆ 9.3 ಕಿ.ಮೀ ಮತ್ತು ಆಲಮಟ್ಟಿ ಅಣೆಕಟ್ಟು ಭೂಕಂಪ ವೀಕ್ಷಣಾಲಯದಿಂದ ಸುಮಾರು 65 ಕಿ.ಮೀ ಉತ್ತರದಲ್ಲಿದೆ.ಭೂಮಿಯಿಂದ 5 ಕಿ.ಕಿಮಿ ಕಳೆಗೆ ಕಂಪನವಾಗಿದೆ.

ತೀವ್ರತೆ ಕಡಿಮೆಯಾಗಿದ್ದು, ಭೂಕಂಪದ ಕೇಂದ್ರಬಿಂದುದಿಂದ 50-60 ಕಿ.ಮೀ ರೇಡಿಯಲ್‌ ದೂರದವರೆಗೆ ಅನುಭವಿಸಬಹುದು ಎಂದು ಕೆಎಸ್‌‍ಎನ್‌ಡಿಎಂಸಿ ಸ್ಪಷ್ಟಪಡಿಸಿದೆ.
ಅಂತಹ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಏಕೆಂದರೆ ಗಮನಿಸಿದ ತೀವ್ರತೆ ಕಡಿಮೆಯಾಗಿದೆ, ಆದರೂ ಸ್ಥಳೀಯ ಕಂಪನಗಳು ಅನುಭವಿಸಬಹುದು ಎಂದು ಅದು ಹೇಳಿದೆ.

ಜನರು ಮನೆಯಿಂದ ಹೊರಗೆ ಬಂದು ಆತಂಕ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.
ತಿಕೋಟ, ಕಳ್ಳಕವಟಗಿ, ತೊರವಿ, ಶಿವಗಿರಿ, ಹೊನ್ನೂಟಗಿ ಸೇರಿದಂತೆ ವಿಜಯಪುರ, ತಿಕೋಟ ತಾಲೂಕುಗಳಲ್ಲಿ ಭೂಕಂಪನದ ಅನುಭವ ಆಗಿದೆ. ಜಿಲ್ಲೆಯಲ್ಲಿ ಕಳೆದ 2 ತಿಂಗಳಲ್ಲಿ 13 ಬಾರಿ ಭೂಮಿ ಕಂಪಿಸಿದ ಅನುಭವ ಆಗಿದೆ ಸರಣಿ ಭೂಕಂಪನದಿಂದ ಜನರು ಭೀತಿಗೊಂಡಿದ್ದಾರೆ.

ಚಳಿಗಾಲ ಅಧಿವೇಶನ ವೇಳೆಗೆ ಹೊಸ ಸಿಎಂ ಬರ್ತಾರೆ : ಶ್ರೀರಾಮುಲು ಭವಿಷ್ಯ

ಗದಗ,ನ.4- ಮುಂದಿನ ಬೆಳಗಾವಿ ಚಳಿಗಾಲ ಅಧಿವೇಶನ ವೇಳೆಗೆ ಹೊಸ ಸಿಎಂ ಬರುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಹೊಸ ಸಿಎಂ ಇರುತ್ತಾರೆ ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಬಂದರೂ ಅಚ್ಚರಿ ಇಲ್ಲ ಎಂದಿದ್ದಾರೆ.

ಸಿದ್ದು-ಡಿಕೆಶಿ ಕುರ್ಚಿ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಕೊನೆಗಳಿಗೆಯಲ್ಲಿ ನಾನೇ ಸಿಎಂ ಆಗುತ್ತೇನೆ ಎಂದು ಖರ್ಗೆ ಬಂದರೂ ಬರಬಹುದು ಎಂದು ಹೇಳಿದ್ದಾರೆ.ಶಿವಕುಮಾರ್‌ ಮಾತು ಒಂದೊಂದು ರೀತಿ ಇವೆ. ಅವರ ಇವತ್ತಿನ ಮಾತು ಕೇಳಿದರೆ ಸನ್ಯಾಸಿ ಆಗ್ತಾರೇನೋ ಅನಿಸುತ್ತೆ. ಅವರು ಜಿಗುಪ್ಸೆಗೊಂಡಿದ್ದಾರೆ ಎಂದರು.

ನನಗೆ ಬಂದಿರುವ ಮಾಹಿತಿ ಪ್ರಕಾರ ಖರ್ಗೆ ಅವರೇ ಬರಬಹುದು. ಬೆಳಗಾವಿ ಅಧಿವೇಶನದಲ್ಲಿ ಹೊಸ ಸಿಎಂ ಇರುತ್ತಾರೆ,ಇನ್ನು ಕಾಂಗ್ರೆಸ್‌‍ನಲ್ಲಿ ಸಚಿವರಾಗಬೇಕು ಅಂದ್ರೆ ಕಪ್ಪು ಹಣ ಕೊಡಬೇಕು ಎಂದು ಆರೋಪಿಸಿದ್ದಾರೆ.

ಮಂತ್ರಿಗಳು ಹಣಕೊಡಲು ಆಗಲ್ಲ ಅಂದ್ರೆ ಗೇಟ್‌ ಪಾಸ್‌‍ ಕೊಟ್ಟು ಕಳುಹಿಸುತ್ತಾರೆ, ಎಲ್‌ಐಸಿ ಏಜೆಂಟರಿಗೆ ಟಾರ್ಗೆಟ್‌ ನೀಡುವಂತೆ ಕಲೆಕ್ಷನ್‌ ಟಾರ್ಗೆಟ್‌ ಕೊಡುತ್ತಿದ್ದಾರೆ ಆರೋಪಿಸಿದರು.

ಬಿಕ್ಕಟ್ಟಿನಿಂದ ಬಳಲುತ್ತಿರುವ ಜಗತ್ತು ಭಾರತವನ್ನು ಭರವಸೆಯಿಂದ ನೋಡುತ್ತಿದೆ : ಭಾಗವತ್‌

ಜಬಲ್ಪುರ,ನ.4-ಇಡೀ ಜಗತ್ತು ಬಿಕ್ಕಟ್ಟಿನಲ್ಲಿದೆ ಮತ್ತು ಅದರ ಹಲವಾರು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಭರವಸೆಯೊಂದಿಗೆ ಭಾರತವನ್ನು ನೋಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಹೇಳಿದ್ದಾರೆ.

ಜಬಲ್ಪುರದಲ್ಲಿ ಪ್ರಸಿದ್ಧ ಧಾರ್ಮಿಕ ಸಂಘಟನೆಯೊಂದು ನಡೆಸಿದ ಜೀವನ ಉತ್ಕರ್ಷ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಧರ್ಮ ಮತ್ತು ಸಂಸ್ಕೃತಿಯ ಮಾರ್ಗವನ್ನು ಅನುಸರಿಸುವುದರಿಂದ ಜಗತ್ತು ಭಾರತದಿಂದ ನಿರೀಕ್ಷೆಗಳನ್ನು ಹೊಂದಿದೆ ಎಂದರು. ಸಾಮಾನ್ಯ ಭಾಷೆಯಲ್ಲಿ, ಸಂಸ್ಕೃತಿ ಎಂದರೆ ನೈತಿಕ, ಸದ್ಗುಣಶೀಲ ನಡವಳಿಕೆ,ಪರಸ್ಪರ ಸದ್ಭಾವನೆಯ ಭಾವನೆ ಮತ್ತು ಆಳವಾದ ಸಂಪರ್ಕ ಇದ್ದಾಗ ಮಾತ್ರ ಜನರು ಸಭ್ಯವಾಗಿ ವರ್ತಿಸುತ್ತಾರೆ ಎಂದು ಭಾಗವತ್‌ ಹೇಳಿದರು.

ಈ ಉದಾತ್ತ ಗುಣಲಕ್ಷಣಗಳ ಅನುಪಸ್ಥಿತಿಯಲ್ಲಿ, ಪ್ರತಿಕೂಲ ಸಂಬಂಧಗಳು ಬೆಳೆಯುತ್ತವೆ, ಇದು ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಭಾರತವು ಇಂದಿಗೂ ತನ್ನ ಶ್ರೀಮಂತ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಪರಂಪರೆಯನ್ನು ಸಂರಕ್ಷಿಸಿದೆ ಮತ್ತು ಅದು ಕಾಲಕಾಲಕ್ಕೆ ಜಗತ್ತಿಗೆ ಸರಿಯಾದ ಮಾರ್ಗವನ್ನು ತೋರಿಸಲು ಅನುವು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ವಾಸ್ತವದಲ್ಲಿ, ನಾವೆಲ್ಲರೂ ಒಂದೇ. ನಾವೆಲ್ಲರೂ ಸಂಪರ್ಕ ಹೊಂದಿದ್ದೇವೆ. ಭಾರತಕ್ಕೆ ಈ ಸಂಪರ್ಕವಿದೆ, ಆದರೆ ಜಗತ್ತು ಹಾಗೆ ಮಾಡುವುದಿಲ್ಲ. ಅದಕ್ಕಾಗಿಯೇ ಇಂದು ಜಗತ್ತು ಬಿಕ್ಕಟ್ಟಿನಲ್ಲಿದೆ ಮತ್ತು ಭಾರತದಿಂದ ನಿರೀಕ್ಷೆಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು. ಆಧ್ಯಾತ್ಮಿಕತೆ ಮತ್ತು ನೀತಿವಂತ ನಡವಳಿಕೆಯೊಂದಿಗೆ ಸಾಮರಸ್ಯದಿಂದ ಜೀವನವನ್ನು ಹೇಗೆ ನಡೆಸಬೇಕೆಂದು ಜಗತ್ತು ಈಗ ಭಾರತದಿಂದ ಕಲಿಯಲು ಬಯಸುತ್ತದೆ.ಸಂತರು ಸಮಾಜಕ್ಕೆ ಸರಿಯಾದ ನಿರ್ದೇಶನ ನೀಡುತ್ತಾರೆ ಮತ್ತು ಅದಕ್ಕಾಗಿಯೇ ಆರ್‌ಎಸ್‌‍ಎಸ್‌‍ ಅಂತಹ ಆಧ್ಯಾತಿಕ ವ್ಯಕ್ತಿಗಳೊಂದಿಗೆ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.

ಬಿಎಪಿಎಸ್‌‍ ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ನಾಯಕ ಈಶ್ವರಚರಣ್‌ ಸ್ವಾಮಿ ಕೂಡ ಐದು ದಿನಗಳ ಜೀವನ ಉತ್ಕರ್ಷ ಮಹೋತ್ಸವದ ಉದ್ಘಾಟನಾ ಅಧಿವೇಶನದಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮವು ವಿಶ್ವಪ್ರಸಿದ್ಧ ಬಿಎಪಿಎಸ್‌‍ ಸ್ವಾಮಿನಾರಾಯಣ ಸಂಸ್ಥೆಯ ಆಧ್ಯಾತ್ಮಿಕ ಮುಖ್ಯಸ್ಥ ಜಬಲ್ಪುರದಲ್ಲಿ ಜನಿಸಿದ ಮಹಾಂತ ಸ್ವಾಮಿ ಮಹಾರಾಜ್‌ ಅವರ ಜೀವನ, ಬೋಧನೆಗಳು ಮತ್ತು ಸೇವೆಗೆ ಸಮರ್ಪಿತವಾಗಿದೆ. ಈ ಸಂದರ್ಭದಲ್ಲಿ, ಭಾಗವತ್‌ ಅವರು ಸ್ವಾಮಿ ಭದ್ರೇಶ್‌ದಾಸ್‌‍ ಅವರ ಪುಸ್ತಕವನ್ನು ಬಿಡುಗಡೆ ಮಾಡಿದರು.

ಸಾವು ತಂದ ಹೊಸ ಕಾರು, ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಡ್ಯಾನ್ಸರ್‌ ಸುಧೀಂದ್ರ

ನೆಲಮಂಗಲ,ನ.4- ನಿನ್ನೆಯಷ್ಟೇ ಖರೀದಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಡ್ಯಾನ್ಸರ್‌ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಪೆಮನಹಳ್ಳಿ ಬಳಿ ನಡೆದಿದೆ.

ತ್ಯಾಮಗೊಂಡ್ಲು ನಿವಾಸಿ ಸುಧೀಂದ್ರ ಮೃತಪಟ್ಟ ಡ್ಯಾನ್ಸರ್‌. ಇವರು ನಿನ್ನೆಯಷ್ಟೇ ಹೊಸ ಕಾರನ್ನು ಖರೀದಿಸಿ ತ್ಯಾಮಗೊಂಡ್ಲುಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಏಕಾಏಕಿ ಕಾರಿನ ಇಂಜಿನ್‌ ಆಫ್‌ ಆಗಿದೆ.

ಕೂಡಲೇ ಕೆಳಗಿಳಿದು ಪರೀಕ್ಷಿಸುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಧೀಂದ್ರ ವಿವಿಧ ಖಾಸಗಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

ಹೊಸ ಕಾರನ್ನು ಖರೀದಿಸಿ ಸಂಭ್ರಮದಲ್ಲಿದ್ದರು. ಆದರೆ ಲಾರಿ ರೂಪದಲ್ಲಿ ಜವರಾಯ ಬಲಿ ತೆಗೆದುಕೊಂಡಿದೆ. ಘಟನೆ ಸಂಬಂಧ ದಾಬಸ್‌‍ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರ್ಷಗಳ ಬಳಿಕ ಎಳನೀರಿನ ಬೆಲೆಯಲ್ಲಿ ತುಸು ಇಳಿಕೆ

ಬೆಂಗಳೂರು, ನ.4- ಕಳೆದೆರಡು ವರ್ಷಗಳ ಹಿಂದಿನ ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತವಾಗಿ ಗಗನಕ್ಕೇರಿದ್ದ ಎಳನೀರು ಬೆಲೆ ಸದ್ಯಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಸಾಮಾನ್ಯವಾಗಿ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಎಳನೀರು ಬೆಲೆ ಏರುತ್ತದೆ. ಆದರೆ, ಈ ವರ್ಷ ಪೂರ್ತಿ ಏರಿಕೆಯಾಗಿರುವುದು ಇದೇ ಮೊದಲು. ಹಣ ಕೊಟ್ಟರೂ ಎಳನೀರು ಸಿಗದಷ್ಟು ಬರ ಬಂದಿತ್ತು. ಕೇವಲ ಎಳನೀರು ಮಾತ್ರವಲ್ಲ ತೆಂಗಿನಕಾಯಿ, ಕೊಬ್ಬರಿ, ಚಿಪ್ಪು ಬೆಲೆ ಏರಿಕೆಯಾಗಿ ದಾಖಲೆ ನಿರ್ಮಾಣ ಮಾಡಿತ್ತು.

ಕಳೆದೆರಡು ವರ್ಷಗಳ ಹಿಂದೆ ಮಳೆ ಪ್ರಮಾಣ ಕಡಿಮೆಯಾಗಿ ಕಪ್ಪುತಲೆ ಹುಳುಬಾಧೆ ಹಾಗೂ ನುಸಿಪೀಡೆಯಿಂದ ಈ ವರ್ಷ ತೆಂಗಿನ ಇಳುವರಿ ಸಂಪೂರ್ಣವಾಗಿ ಕುಸಿದಿದ್ದು, ಎಳನೀರು ಶತಕದ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ತೆಂಗಿನ ಕಾಯಿಯೂ ಸಹ 60 ರಿಂದ 80ರೂ., ಕೊಬ್ಬರಿ ಕ್ವಿಂಟಾಲ್‌ಗೆ 35 ಸಾವಿರ ರೂ. ಹಾಗೂ ಚಿಪ್ಪು ಟನ್‌ಗೆ 25 ಸಾವಿರಕ್ಕೆ ಮಾರಾಟವಾಗಿ ಇತಿಹಾಸ ಸೃಷ್ಟಿಸಿತ್ತು.

ಏಷ್ಯಾದಲ್ಲೇ ಅತಿದೊಡ್ಡ ಎಳನೀರು ಮಾರುಕಟ್ಟೆಯಾದ ಮದ್ದೂರು ಎಪಿಎಂಸಿಯಲ್ಲಿ ಈ ವರ್ಷ ಹಣ ಕೊಟ್ಟರೂ ಎಳನೀರು ಸಿಗದಷ್ಟು ಕೊರತೆ ಎದುರಾಗಿತ್ತು. ಮದ್ದೂರು ಮಾರುಕಟ್ಟೆಗೆ ರಾಮನಗರ, ಮಂಡ್ಯ, ಮೈಸೂರು, ಕೊಳ್ಳೆಗಾಲ, ಟಿ.ನರಸೀಪುರ, ತುಮಕೂರು ಸೇರಿದಂತೆ ಮತ್ತಿತರ ಕಡೆಗಳಿಂದ ಬಹಳ ಹಿಂದಿನ ಕಾಲದಿಂದಲೂ ಎಳನೀರು ಪೂರೈಕೆಯಾಗುತ್ತದೆ. ಇಲ್ಲಿಂದ ರಾಜಧಾನಿ ಬೆಂಗಳೂರು, ನೆರೆಯ ತುಳುನಾಡು, ಆಂಧ್ರ ಪ್ರದೇಶಕ್ಕೂ ಸರಬರಾಜಾಗುತ್ತದೆ. ಆದರೆ, ಕಳೆದ ಒಂದು ವರ್ಷದಿಂದ ನಿರೀಕ್ಷಿತ ಪ್ರಮಾಣದಲ್ಲಿ ಎಳನೀರು ಬಾರದೆ ಇದ್ದುದರಿಂದ ಬೆಲೆ ಹೆಚ್ಚಳವಾಗಿ ಸರಬರಾಜು ಸಂಪೂರ್ಣವಾಗಿ ಇಳಿಮುಖವಾಗಿತ್ತು.

ಬೆಂಗಳೂರಿನಲ್ಲಿ ರಸ್ತೆಯುದ್ದಕ್ಕೂ ಕಾಣಸಿಗುತ್ತಿದ್ದ ಎಳನೀರು ಅಂಗಡಿಗಳು ಕಣರೆಯಾಗಿದ್ದವು .ಎಲ್ಲೋ ಒಂದೊಂದು ಕಡೆ ಮಾತ್ರ ಎಳನೀರು ಮರಾಟವಾಗುತ್ತಿದ್ದು, ಅಲ್ಲಿ ಬೆಲೆ ನೋಡಿದರೆ ತಲೆ ತಿರುಗುತ್ತಿತ್ತು. 60 ರಿಂದ 80 ರೂ. ವರೆಗೂ ಮಾರಾಟವಾಗಿತ್ತು. ಕೆಲ ವ್ಯಾಪಾರಿಗಳು ಎಳನೀರು ಸಿಗದೆ ವ್ಯಾಪಾರಬಿಟ್ಟು ತರಕಾರಿ, ಹೂ, ಹಣ್ಣು ಮರಾಟಕ್ಕಿಳಿದಿದ್ದರು. ಮದ್ದೂರು ಮಾರುಕಟ್ಟೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದ ವರ್ತಕರು, ಹಮಾಲಿಗಳು, ಕಾರ್ಮಿಕರು ತೀವ್ರಸಂಕಷ್ಟಕ್ಕೆ ಸಿಲುಕಿದ್ದರು.

ಈ ಬಾರಿ ಮಳೆ ಉತ್ತಮವಾಗಿದ್ದು, ಮತ್ತೆ ಇಳುವರಿ ಚೇತರಿಸಿಕೊಂಡಿದ್ದು, ಮಾರುಕಟ್ಟೆಗೆ ಎಳನೀರು ಬರುತ್ತಿರುವುದರಿಂದ ಮತ್ತೆ ಎಳನೀರು ಅಂಗಡಿಗಳ ವೈಭವ ಮರುಕಳಿಸಿದ್ದು, ಬೆಂಗಳೂರಿನಲ್ಲಿ ಪ್ರಸ್ತುತ 40 ರಿಂದ 50 ರೂ.ಗೆ ಮಾರಾಟವಾಗುತ್ತಿದೆ.

ಕಳೆದ 15 ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದು, ಬಿರು ಬೇಸಿಗೆಯಲ್ಲೂ ಸಹ 50ರೂ. ದಾಟುತ್ತಿರಲಿಲ್ಲ . ಆದರೆ ಈ ವರ್ಷ ಬೇಸಿಗೆ, ಮಳೆ ಹಾಗೂ ಚಳಿಗಾಲದಲ್ಲೂ ಸಹ 60 ರಿಂದ 80 ರೂ.ಗೆ ಎಳನೀರು ಮಾರಾಟ ಮಾಡಿದ್ದೇವೆ. ನಾವು ಮದ್ದೂರಿನಿಂದ ಎಳನೀರು ತರಿಸುತ್ತೇವೆ ಅಲ್ಲೆ ಮಾಲು ಇಲ್ಲದ್ದರಿಂದ ನಮಗೆ ಪೂರೈಕೆ ಮಾಡುತ್ತಿರಲಿಲ್ಲ ಹಾಗಾಗಿ ಬೆಲೆ ಏರಿಕೆಯಾಗಿತ್ತು. ಸ್ಪಲ್ಪ ದಿನ ಎಳನೀರು ಸಿಗದೆ ತರಕಾರಿ ವ್ಯಾಪಾರ ಮಾಡುವ ಪರಿಸ್ಥಿತಿ ಬಂದಿತ್ತು.

ಈಗ ಮಾಮೂಲಿಯಂತೆ ಎಳನೀರು ಸರಬರಾಜಾಗುತ್ತಿದ್ದು, ಮದ್ದೂರಿನಲ್ಲಿ 30 ರಿಂದ 40 ರೂ.ಗೆ ಸಿಗುತ್ತದೆ. ಸಾಗಾಣಿಕೆ ವೆಚ್ಚ, ಕೂಲಿ, ಜಾಗದ ಬಾಡಿಗೆ ಸೇರಿ 50 ರಿಂದ 60ರೂ.ಗೆ ಮಾರಾಟ ಮಾಡುತ್ತಿದ್ದೇವೆ. ಮುಂದಿನ ಕೆಲ ದಿನಗಳಲ್ಲಿ ಇನ್ನೂ ಸ್ವಲ್ಪ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ನಾಗರಬಾವಿಯ ಎಳನೀರು ವ್ಯಾಪಾರಿ ರಾಜಣ್ಣ ಅವರು ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಿಹಾರ ಚುನಾವಣೆ : ಕಾರ್ಮಿಕರಿಗೆ 3 ದಿನ ವೇತನ ಸಹಿತ ರಜೆ ನೀಡುವಂತೆ ಉದ್ಯಮಿದಾರರಲ್ಲಿ ಡಿಕೆಶಿ ಮನವಿ

ಬೆಂಗಳೂರು. ನ.4- ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಕಾರ್ಮಿಕರಿಗೆ ಮೂರು ದಿನಗಳ ವೇತನ ಸಹಿತ ರಜೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉದ್ಯಮಿದಾರರಿಗೆ ಮನವಿ ಮಾಡಿದ್ದಾರೆ.ಈ ಕುರಿತು ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್‌ ಬಿಹಾರ ರಾಜ್ಯದ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನವೆಂಬರ್‌ 6 ಮತ್ತು 11ರಂದು ಮತದಾನವಾಗಲಿದೆ.

ಬೆಂಗಳೂರು ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಬಿಹಾರದ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲಾ ಕಂಪನಿಗಳು, ವಾಣಿಜ್ಯ ಉದ್ಯಮಿಗಳು, ಹೋಟೆಲ್‌ಗಳು, ಗುತ್ತಿಗೆದಾರರು, ಬಿಲ್ಡರ್‌ರ‍ಸಗಳು, ಅಂಗಡಿ ಮುಂಗಟ್ಟುಗಳು ಹಾಗೂ ಇತರ ಉದ್ದಿಮೆದಾರರು ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ರಾಜ್ಯದಲ್ಲಿ ನೆಲೆಸಿರುವವರಿಗೆ ಕನಿಷ್ಠ ಮೂರು ದಿನಗಳ ವೇತನ ಸಹಿತ ರಜೆ ನೀಡಬೇಕು. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಡಿ.ಕೆ.ಶಿವಕುಮಾರ್‌ ಬಿಹಾರಿಗಳ ಜೊತೆ ಸಂವಾದ ನಡೆಸಿದರು. ತವರೂರಿಗೆ ತೆರಳಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಅದಕ್ಕೆ ಪೂರಕವಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು. ಅದರಂತೆ ಉದ್ಯಮಿದಾರರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.