Friday, November 7, 2025
Home Blog Page 62

ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಜೈರಾಮ್‌ ರಮೇಶ್‌

ನವದೆಹಲಿ, ಅ. 7 (ಪಿಟಿಐ) ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಎಸ್‌‍ಐಆರ್‌ ಪ್ರಕ್ರಿಯೆಯ ಅಗತ್ಯವು ಹೆಚ್ಚಾಗಿದೆ ಎಂದು ಕಾಂಗ್ರೆಸ್‌‍ ಹೇಳಿದೆ ಆದರೆ ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಅರಿವು ಮೂಡಿಸುವ ಸಮಗ್ರತೆ ಅಥವಾ ಧೈರ್ಯ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ದೂರಿದೆ.

ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದ್ದರೆ, ಅದು ಈಗಾಗಲೇ ಇರುವುದಕ್ಕಿಂತ ಹೆಚ್ಚು ಬಹಿರಂಗವಾಗುತ್ತಿತ್ತು ಎಂದು ವಿರೋಧ ಪಕ್ಷ ಹೇಳಿದೆ.

ಬಿಹಾರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ ಎಂದು ಕಾಂಗ್ರೆಸ್‌‍ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆಗಳು ಸಾಮೂಹಿಕ ಮತದಾನದ ಅಭಾವದ ಭಯವನ್ನು ನಿವಾರಿಸಿದರೂ, ನಿಖರತೆ, ಸಮಾನತೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ದೃಷ್ಟಿಕೋನದಿಂದ ಈ ಪ್ರಕ್ರಿಯೆ ಅಪೇಕ್ಷಿತವಾಗಿರುವುದನ್ನು ಬಿಟ್ಟುಬಿಟ್ಟಿದೆ ಎಂದು ವಿಶ್ಲೇಷಣೆ ಹೇಳಿಕೊಂಡಿದೆ.ಈ ಉತ್ತಮ ವಿಶ್ಲೇಷಣೆಯು ಚುನಾವಣಾ ಆಯೋಗವು ನಡೆಸಿದ ಸಂಪೂರ್ಣ ಪ್ರಕ್ರಿಯೆ ಸಂಪೂರ್ಣತೆ, ಸಮಾನತೆ ಮತ್ತು ನಿಖರತೆಯ ಮೂರು ಅಂಶಗಳಲ್ಲಿ ವಿಫಲವಾಗಿದೆ ಎಂದು ತೋರಿಸುತ್ತದೆ ಎಂದು ರಮೇಶ್‌ ಎಕ್‌್ಸ ಮಾಡಿದ್ದಾರೆ.

ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಪ್ರಕ್ರಿಯೆಯ ಅಗತ್ಯದ ಬಗ್ಗೆ ಹೆಚ್ಚಿನದನ್ನು ಹೇಳಲಾಗಿದೆ. ಬಿಹಾರದಲ್ಲಿ ಅಂತಹ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಅರಿವು ಮೂಡಿಸುವ ಸಮಗ್ರತೆ ಅಥವಾ ಧೈರ್ಯ ಆಯೋಗಕ್ಕೆ ಇಲ್ಲ ಎಂದು ಅವರು ಹೇಳಿದರು.

ಅನನ್ಯಾ ಭಟ್‌ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದೇನೆ, ಕ್ಷಮೆ ಕೇಳುತ್ತೇನೆ : ಸುಜಾತಾ ಭಟ್‌ ಪಶ್ಚಾತಾಪ

ಬೆಂಗಳೂರು,ಅ.7- ವಿದ್ಯಾರ್ಥಿನಿ ಅನನ್ಯಾ ಭಟ್‌ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ನನ್ನ 60 ವರ್ಷದ ಜೀವನದಲ್ಲಿ ಇದೊಂದು ನನಗೆ ಕಪ್ಪು ಚುಕ್ಕಿ ಎಂದು ಸುಜಾತಾ ಭಟ್‌ ಪಶ್ಚಾತಾಪ ಹೊರಹಾಕಿದ್ದಾರೆ.

ಇನ್ನಾದರೂ ನನಗೆ ಉತ್ತಮ ಜೀವನ ನಡೆಸುವ ಆಸೆಯಿದೆ. ಧರ್ಮಸ್ಥಳಕ್ಕೆ ಹೋಗಿ ತಪ್ಪು ಕಾಣಿಕೆ ಹಾಕುತ್ತೇನೆ, ಧರ್ಮಸ್ಥಳಕ್ಕೆ ಹೋಗಿ ಕಲ್ಲು ಒಡೆಯುತ್ತೇನೆ ಎಂದು ಹೇಳಿದ್ದೇನೆ, ನನ್ನಿಂದ ತಪ್ಪಾಗಿದೆ. ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ನಟನ ಸೋದರನಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಟನ ಸೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆ ನನಗಿದೆ. ಅದನ್ನು ಎಸ್‌‍ಐಟಿ ತನಿಖೆ ವೇಳೆ ಹೇಳಿದ್ದೆ, ಅವರು ತನಿಖೆ ಮಾಡಬಹುದು. ನಾನು ತಪ್ಪು ಮಾಡುಬಿಟ್ಟೆ. ಕೆಲವರ ಮಾತು ಕೇಳಿ ಕೆಟ್ಟಿದ್ದೇನೆ. ನನ್ನ ಜೀವನವೇ ಹಾಳಾಗಿ ಹೋಯಿತು. ದೇವರ ಬಳಿ ಕ್ಷಮೆ ಕೇಳುವೆ.

ಶೀಘ್ರವೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವಸ್ಥಾನದ ಮುಂದೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ. ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ. ಅನನ್ಯ ಭಟ್‌ ನನ್ನ ಮಗಳು ಎಂದು ಸುಳ್ಳು ಹೇಳಿದೆ. ಸುಳ್ಳಿನ ಮೇಲೆ ಸುಳ್ಳನ್ನೇ ಸೃಷ್ಟಿಸಿದೆ. ಶಿವಶಂಕರ್‌ ಎಂಬುವರು ಹೇಳಿದರು. ನನ್ನದು ಸ್ವಲ್ಪ ಜಮೀನಿನ ವಿಚಾರವಿತ್ತು. ಹೀಗಾಗಿ ನಾನು ತಪ್ಪು ಮಾಡಿದ್ದೇನೆ. ಬುರುಡೆ ಗ್ಯಾಂಗ್‌ಗೂ, ನನಗೂ ಸಂಬಂಧವಿಲ್ಲ. ಅವರ ಮಾತು ಕೇಳಿಯೇ ನಾನು ಕೆಟ್ಟೆ. ಇನ್ನು ನನ್ನ ಮನೆ ಬಾಗಿಲಿಗೆ ಅವರು ಬಂದರೂ ನಾನು ಒಳಗೆ ಬಿಡೊಲ್ಲ ಎಂದು ಸುಜಾತಾ ಭಟ್‌ ಹೇಳಿದ್ದಾರೆ.

ಈಗ ನನಗೆ ಬದುಕಲು ಕಷ್ಣವಾಗುತ್ತಿದೆ. ಜೀವನ ನಡೆಸಲು ಹಣ ಇಲ್ಲ. ಎಸ್‌‍ಐಟಿ ಅವರೇ ನನಗೆ ಮೊಬೈಲ್‌ ಕೊಡಿಸಿದ್ದರು. ಅವರ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದೇನೆ. ಇದರಿಂದ ನನಗೆ ಮುಕ್ತಿ ಸಿಕ್ಕರೆ ಸಾಕು. ಅನನ್ಯಾ ಭಟ್‌ ಕಥೆ ಮುಗಿದ ಅಧ್ಯಾಯ. ಇನ್ನು ನನ್ನ ಹೊಸ ಜೀವನ ಧರ್ಮಸ್ಥಳಕ್ಕೆ ಹೋಗಿ ಬಂದೇಲೆ ಪ್ರಾರಂಭವಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.
ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಬ್ಬರಿಸಿದ್ದ ಸುಜಾತಾ ಭಟ್‌ ಇದೀಗ ಸತ್ಯ ಹೊರಗೆ ಬಂದ ಮೇಲೆ ಮೌನಕ್ಕೆ ಶರಣಾಗಿದ್ದಾರೆ. ಮಾಡಿದ ತಪ್ಪನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆಯ ನಡುವೆಯೇ ಅನನ್ಯಾ ಭಟ್‌ ಪ್ರಕರಣ ಕೂಡ ಸದ್ದು ಮಾಡಿತ್ತು. ಇಲ್ಲದ ಮಗಳ ಬಗ್ಗೆ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದ ಸುಜಾತಾ ಭಟ್‌ ತಾನೇ ಹೆಣೆದ ಬಲೆಯಲ್ಲಿ ಬಿದ್ದಿದ್ದರು.

ಎಸ್‌‍ಐಟಿ ತನಿಖೆಯ ಜಾಡು ಹಿಡಿದು ಆಳಕ್ಕೆ ಇಳಿದ ನಂತರ ಅಸಲಿ ಸತ್ಯಾಂಶ ಹೊರಬಿದ್ದಿತ್ತು. ಮಾಧ್ಯಮಗಳ ಮುಂದೆ ಬಂದ ಸುಜಾತಾ ನಾನು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ಕ್ಷಮೆ ಕೇಳುವ ಬಗ್ಗೆ ಮಾತನಾಡಿದ್ದಾರೆ.

ಅನನ್ಯಾ ಭಟ್‌ ಬಗ್ಗೆ ಕಟ್ಟುಕತೆ ಕಟ್ಟಿ ಸುಜಾತಾ ಭಟ್‌ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್‌ ಕೇಸ್‌‍ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌‍ಐಟಿ ಮುಂದುವರಿಸಿದೆ.

ಉತ್ತರ ಪ್ರದೇಶ : ಚಲಿಸುವ ವಾಹನದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಝಾನ್ಸಿ, ಆ. 7 (ಪಿಟಿಐ) ಉತ್ತರ ಪ್ರದೇಶದಲ್ಲಿ ಚಲಿಸುವ ವಾಹನದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಲಲಿತಪುರ ಜಿಲ್ಲೆಯಲ್ಲಿ ಚಲಿಸುವ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ, ನಿತಿನ್‌ ಠಾಕೂರ್‌ (22) ಮತ್ತು ಅವನ ಅಪರಿಚಿತ ಸಹಚರರು ತನ್ನ ವಾಹನಕ್ಕೆ ಬಲವಂತವಾಗಿ ಸೇರಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ ಎಂದು ಲಲಿತಪುರದ ಜಖೌರಾ ಪೊಲೀಸ್‌‍ ಠಾಣೆಯ ಸ್ಟೇಷನ್‌ ಹೌಸ್‌‍ ಆಫೀಸರ್‌ ಸುರೇಂದ್ರ ಸಿಂಗ್‌ ತಿಳಿಸಿದ್ದಾರೆ.

ಠಾಕೂರ್‌ ಮತ್ತು ಅಪರಿಚಿತ ಯುವಕನ ವಿರುದ್ಧ ಬಿಎನ್‌ಎಸ್‌‍ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಾಮುಕರ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.ಪೊಲೀಸರ ಪ್ರಕಾರ, ಬಾಲಕಿ ಕಳೆದ ಎರಡು ಮೂರು ತಿಂಗಳಿನಿಂದ ಠಾಕೂರ್‌ ಜೊತೆ ಸಂಪರ್ಕದಲ್ಲಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಆರೋಪಿಗಳ ಬಂಧನ ಮತ್ತು ತನಿಖೆಯ ನಂತರ ಇಡೀ ವಿಷಯ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಪ್ರೀಂ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಶೂ ಎಸೆದ ವಕೀಲನನ್ನು ಬಿಟ್ಟು ಕಳುಹಿಸಿರುವುದೇಕೆ.. ? : ಡಾ. ಜಿ.ಪರಮೇಶ್ವರ್‌

ಬೆಂಗಳೂರು, ಅ.7- ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆದ ವಕೀಲನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಆತನನ್ನು ಬಿಟ್ಟು ಕಳುಹಿಸಿರುವುದೇಕೆ? ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ಅದರಲ್ಲೂ ಮುಖ್ಯನ್ಯಾಯ ಮೂರ್ತಿಗಳ ಮೇಲೆಯೇ ಚಪ್ಪಲಿ ಎಸೆಯುತ್ತಾರೆ ಎಂದರೆ, ಅಲ್ಲಿ ಗಂಭೀರವಾದ ಭದ್ರತಾ ಲೋಪವಾಗಿದೆ. ಈ ಘಟನೆ ಅಕ್ಷಮ್ಯ ಎಂದರು.ಇಲ್ಲಿ ಗವಾಯಿ ಅವರ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಹುದ್ದೆಯ ಗೌರವದ ಪ್ರಶ್ನೆ ಇದೆ. ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದರು.

ಸುಪ್ರೀಂಕೋರ್ಟಿನಲ್ಲೇ ಈ ಘಟನೆ ನಡೆಯುತ್ತದೆ ಎಂದರೆ ಸದರಿ ವಕೀಲರನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಬಿಟ್ಟು ಕಳುಹಿಸಿದ್ದೇಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸನಾತನ ಧರ್ಮಕ್ಕೆ ಸಂಬಂಧಪಟ್ಟಂತೆ ಆತ ಆಡಿರುವ ಮಾತುಗಳು ಆಕ್ಷೇಪಾರ್ಹವಾಗಿದೆ. ಯಾವುದೇ ನ್ಯಾಯಮೂರ್ತಿಗಳು ಪ್ರಚಲಿತಲಿರುವ ಕಾನೂನುಗಳ ಆಧಾರದ ಮೇಲೆಯೇ ತೀರ್ಪು ನೀಡುತ್ತಾರೆ. ಅದನ್ನು ಮುಂದಿಟ್ಟುಕೊಂಡು ಚಪ್ಪಲಿ ಎಸೆಯುವುದು ಖಂಡನೀಯ ಎಂದರು.

ಮುಖ್ಯನ್ಯಾಯಮೂರ್ತಿಯವರು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆ ಸ್ಥಾನಕ್ಕೆ ಬರಬೇಕಾದರೆ ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಅದು ದೊಡ್ಡ ಸಾಧನೆಯೂ ಹೌದು. ಇಡೀ ಸಮುದಾಯದ ಪ್ರತೀಕವಾಗಿರುತ್ತಾರೆ. ಈ ಘಟನೆಯನ್ನು ದೇಶ ಖಂಡಿಸಬೇಕು, ತಕ್ಕ ಪ್ರತಿಕ್ರಿಯೆ ನೀಡಬೇಕು. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಸಂಬಂಧ ಪಟ್ಟ ವ್ಯವಸ್ಥೆಗೆ ತಾವು ಆಗ್ರಹಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ರಾಜಕೀಯ ಬದಲಾವಣೆ ಮಾಡುವುದಾದರೆ ಬಿಹಾರದ ವಿಧಾನಸಭಾ ಚುನಾವಣೆವರೆಗೂ ಕಾಯುವುದಿಲ್ಲ. ಹೈಕಮಾಂಡ್‌ ಬಯಸಿದರೆ, ತಕ್ಷಣವೇ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ನೆರೆಯ ಪರಿಸ್ಥಿತಿ ಇದೆ. ಅದಕ್ಕೆ ತಕ್ಷಣ ಸ್ಪಂದಿಸಬೇಕಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲೂ ಅನೇಕ ಸಮಸ್ಯೆಗಳಿವೆ. ಅದರತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜಕೀಯ ಬದಲಾವಣೆ ಚರ್ಚೆ ಬಗ್ಗೆ ಅನಗತ್ಯ ಎಂದು ಹೇಳಿದರು.
ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆಹರಿಸಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಸರಿಯಿದೆ. ಈ ಬಗ್ಗೆ ದಿನನಿತ್ಯ ಒಂದೊಂದು ರೀತಿಯ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್‌ ಮಧ್ಯೆ ಪ್ರವೇಶಿಸಿ ಬಗೆಹರಿಸಿದರೆ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.

ಲಿಂಗಾಯತ, ವೀರಶೈವ ಪ್ರತ್ಯೇಕ ಎಂದು ಆ ಸಮುದಾಯದ ನಾಯಕರೇ ಹೇಳುತ್ತಿದ್ದಾರೆ. ಮೊದಲು ಆ ಬಗ್ಗೆ ಚರ್ಚೆ ಮಾಡಿ, ಒಮತದ ಅಭಿಪ್ರಾಯ ರೂಢಿಗೊಳ್ಳಬೇಕು. ನಂತರ ಧರ್ಮದ ಪ್ರತ್ಯೇಕದ ಸ್ಥಾನಮಾನಗಳ ಬಗ್ಗೆ ನಿರ್ಧಾರಗಳಾಗಬಹುದು ಎಂದರು.

ಲಿಂಗಾಯತ ಸಮುದಾಯ ಬಸವ ಸಾಂಸ್ಕೃತಿಕ ಅಭಿಯಾನ ನಡೆಸಿ, ಸಮಾರೋಪ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಅಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನು ಸಿದ್ದರಾಮಯ್ಯ ನೀಡಿಲ್ಲ. ಆ ಸಮುದಾಯದವರೇ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮೆಟ್ರೋಗೆ ಬಸವಣ್ಣ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಅನಂತರ ಅಂತಿಮ ನಿರ್ಧಾರ ತೆಗೆದುಕೊಳುತ್ತೇವೆ ಎಂದರು.
ಪೊಲೀಸ್‌‍ ಇಲಾಖೆಯಲ್ಲಿ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡಲು ಉನ್ನತ ಅಧಿಕಾರಿಗಳ ಸಮಿತಿ ಇದೆ. ಇನ್‌್ಸಪೆಕ್ಟರ್‌ಗಳ ಮೇಲ್ಪಟ್ಟ ಹುದ್ದೆಗಳ ವರ್ಗಾವಣೆಯನ್ನು ಸದರಿ ಸಮಿತಿ ನಿರ್ವಹಿಸುತ್ತದೆ. ಕಾನ್‌್ಸಟೆಬಲ್‌ಗಳು, ಪಿಎಸ್‌‍ಐಗಳ ವರ್ಗಾವಣೆಗಳನ್ನು ಐಜಿ ಹಂತದಲ್ಲೇ ನಿಭಾಯಿಸಲಾಗುತ್ತದೆ. ಇಂತಹ ವಿಚಾರಗಳು ಹೈಕಮಾಂಡ್‌ ಗಮನಕ್ಕೆ ಹೋಗುವುದಿಲ್ಲ ಎಂದರು.

ನಿನ್ನೆ ನಾನೇ 130 ಇನ್‌್ಸಪೆಕ್ಟರ್ಸ್‌ ಹಾಗೂ 30ಕ್ಕೂ ಹೆಚ್ಚು ಡಿವೈಎಸ್‌‍ಪಿ ಗಳನ್ನುವರ್ಗಾವಣೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕೆಲವರು ಹೇಳಿದ ರೀತಿ ವರ್ಗಾವಣೆಗಳು ಸಾಧ್ಯವಾಗದೇ ಇರಬಹುದು, ಆದರೆ ಆಡಳಿತ ದೃಷ್ಟಿಯಿಂದ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ,7-ಅಪರಾಧ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚುತಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಅವರು ರೌಡಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರವೇ ಇಲ್ಲವಾಗಿದೆ ಮತ್ತು ಅಲ್ಲಿ ಒಂದು ಕುಟುಂಬದ ಆಡಳಿತ ನಡೆಯುತ್ತಿದೆ. ಅಲ್ಲಿನ ಎಲ್ಲ ನೀಚ ಕೆಲಸಗಳೂ ಅವರ ಅಂಕೆಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಜನರಿಗೆ ಬಂದಿದೆ ಎಂದು ದೂರಿದ್ದಾರೆ.

ಭದ್ರಾವತಿಯಲ್ಲಿ ಎಲ್ಲಿ ಇಸ್ಪೀಟ್‌ ಆಡಬೇಕು, ಎಲ್ಲಿ ಕ್ಲಬ್‌ ಇರಬೇಕು ಎಂದು ನಿರ್ಧಾರ ಆಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಬಾರ್‌ಗಳ ಮುಂದೆ ಕೊಲೆಗಳಾಗುತ್ತಿವೆ. ವಿಶ್ವೇಶ್ವರಯ್ಯರ ಕನಸಿನ ಉಕ್ಕಿನ ನಗರಿ ಇಂದು ಇಸ್ಪೀಟ್‌ ಇತ್ಯಾದಿ ದುಷ್ಕೃತ್ಯಗಳ ಕೇಂದ್ರವಾಗುತ್ತಿದೆ ಎಂದು ಕ್ರಮ ಕೈಗೊಳ್ಳದ ದೋರಣೆಯನ್ನು ಟೀಕಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಯಾವುದೇ ಸರ್ಕಾರವಾದರೂ ಬಸವಣ್ಣನವರ ತತ್ವ ಸಿದ್ದಾಂತದಂತೆ ಆಡಳಿತ ನಡೆಸಬೇಕು. ಆದರೆ, ನಮ ಮುಖ್ಯಮಂತ್ರಿ ಅವರು ಬರೀ ಭಾಷಣ ಮಾಡುತ್ತಾರೆಯೇ ವಿನಾ ಅದಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಹೀಗೆ ಮಾಡಿದ್ದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌‍ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.

ಧರ್ಮದ ವಿಚಾರದಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮತಗಳ್ಳತನ ಎಂದು ಕಾಂಗ್ರೆಸ್‌‍ನವರು ಹೇಳುತ್ತಿರುವುದು ಒಂದು ರಾಜಕಾರಣವಾಗಿದೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕಿದೆ. ಇಡೀ ದೇಶದಲ್ಲಿ ಈ ಪ್ರಕ್ರಿಯೆ ಆಗಲಿದೆ. ರಾಹುಲ್‌ ಗಾಂಧಿಯವರು ಬಿಹಾರದಲ್ಲಿ ನಡೆಸಿರುವ ಪಾದಯಾತ್ರೆ ಉಪಯೋಗಕ್ಕೆ ಬರುವುದಿಲ್ಲ ಫಲಿತಾಂಶ ಬಂದ ಮೇಲೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.

BIG NEWS : ವಿದ್ಯಾರ್ಥಿಗಳು-ಪೋಷಕರಿಗೆ ಗ್ಯಾರಂಟಿ ಸರ್ಕಾರದಿಂದ ಶಾಕ್ : SSLC ಪರೀಕ್ಷಾ ಶುಲ್ಕ ಹೆಚ್ಚಳ

ಬೆಂಗಳೂರು,ಅ.7- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌‍ಎಸ್‌‍ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ, ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ನೀಡಿದೆ.
ಈ ಬದಲಾವಣೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಈ ಹೊಸ ಶುಲ್ಕ ವಿನ್ಯಾಸವು ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಬರುವ ನಿಯಮಿತ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹಳೆಯ 676 ರೂ.ಗಳಿಂದ 710 ರೂ.ಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕದಲ್ಲೂ ಏರಿಕೆ ಮಾಡಲಾಗಿದೆ.

ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ, ನೋಂದಣಿ ಮತ್ತು ಅರ್ಜಿ ಶುಲ್ಕವನ್ನು 236 ರೂ.ಗಳಿಂದ 248 ರೂ.ಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ಈಗಾಗಲೇ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69 ರೂ.ನಿಂದ 72 ರೂ.ಗೆ ಹೆಚ್ಚಾಗಿದೆ.

ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಕೂಡಾ ಪರಿಷ್ಕರಿಸಲಾಗಿದೆ. ಇನ್ನು ಒಂದೇ ವಿಷಯಕ್ಕೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು 427 ರೂ. ಬದಲಾಗಿ 448 ರೂ. ಪಾವತಿಸಬೇಕಾಗುತ್ತದೆ. ಎರಡು ವಿಷಯಗಳಿಗೆ ಪರೀಕ್ಷೆ ಬರೆಯುವವರು 532 ರೂ. ಬದಲಾಗಿ 559 ರೂ. ಪಾವತಿಸಬೇಕಾಗುತ್ತದೆ. ಮೂರು ಮತ್ತು ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕ 716 ರೂ. ಹೆಚ್ಚಿಸಿ 752 ರೂ. ಏರಿಕೆ ಮಾಡಲಾಗಿದೆ.

ಪೋಷಕರ ವಿರೋಧ
2025-26ನೇ ಸಾಲಿನ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದ್ದು, ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮಾಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ ಮತ್ತು ಇತರ ಸಂಬಂಧಿತ ಆಡಳಿತಾತಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದರೆ ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಪರೀಕ್ಷಾ ಶುಲ್ಕ
ಪ್ರಥಮ ಬಾರಿ – 676 ರೂ. ನಿಂದ 710 ರೂ.
ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236ರಿಂದ 248 ರೂ.
ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69ರಿಂದ ನಿಂದ 72 ರೂ.
ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ
ಒಂದು ವಿಷಯ- 427 ರೂ.ನಿಂದ 448 ರೂ.
ಎರಡು ವಿಷಯ -532 ರೂ.ನಿಂದ 559 ರೂ.
ಮೂರು ಮತ್ತು ಮೂರಕ್ಕಿಂತ ಹೆಚ್ಚಿದ್ದರೆ, 716 ರೂ.ನಿಂದ 752 ರೂಗಳು.

ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ್ದನ್ನು ಘಂಟಾಘೋಷವಾಗಿ ಸಮರ್ಥಿಸಿಕೊಡ ವಕೀಲ ರಾಕೇಶ್‌ ಕಿಶೋರ್‌

ನವದೆಹಲಿ, ಅ.7– ನಾನು ಯಾವ ತಪ್ಪು ಮಾಡಿಲ್ಲ, ನನ್ನ ನಿರ್ಧಾರ ಸರಿಯಿದೆ. ಹೀಗಾಗಿ ಯಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದ ವಕೀಲ ರಾಕೇಶ್‌ ಕಿಶೋರ್‌ ಹೇಳಿಕೊಂಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಜೈಲು ಶಿಕ್ಷೆ ಎದುರಿಸಲು ಸಿದ್ಧ. ಈ ಕೃತ್ಯಕ್ಕೆ ನಾನು ಕ್ಷಮೆಯಾಚಿಸಲ್ಲ. ಅಷ್ಟೇ ಅಲ್ಲದೇ ಯಾವುದೇ ರಾಜಕೀಯ ಪಕ್ಷದೊಂದಿಗೆ ನಾನು ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಶೂ ಎಸೆಯಲು ದೇವರೇ ಪ್ರಚೋದನೆ ನೀಡಿದ್ದಾನೆ. ಖಜುರಾಹೊ ಅರ್ಜಿ ವಿಚಾರಣೆ ವೇಳೆ ನ್ಯಾ. ಗವಾಯಿ ಹೇಳಿದ ಅಭಿಪ್ರಾಯದಿಂದ ನನಗೆ ರಾತ್ರಿ ನಿದ್ದೆಯೇ ಬರಲಿಲ್ಲ. ನಂತರ ಮಾರಿಷಸ್‌‍ನಲ್ಲಿ ಭಾರತೀಯ ಕಾನೂನು ವ್ಯವಸ್ಥೆಯು ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುತ್ತದೆಯೇ ಹೊರತು ಬುಲ್ಡೋಜರ್‌ ನಿಯಮದಿಂದ ಅಲ್ಲ ಎಂದು ಗವಾಯಿ ಹೇಳಿಕೆಯಿಂದ ನನಗೆ ಅಸಮಾಧಾನವಾಗಿತ್ತು ಎಂದು ಹೇಳಿದರು.

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾಗಿದ್ದ ವಕೀಲ ಬನಾರಸ್‌‍ ಹಿಂದೂ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕೀಟಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದು, ವಕೀಲ ವೃತ್ತಿ ಮಾಡುವ ಮೊದಲು ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ ನೀಡಿದ್ದೇನೆ. ಮಾನಸಿಕವಾಗಿಯೂ ನಾನು ಸ್ಥಿಮಿತದಲ್ಲಿದ್ದೇನೆ ಎಂದಿದ್ದಾರೆ.

ನನ್ನ ಕೃತ್ಯದಿಂದ ಕುಟುಂಬದವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಮುಂದೆ ಯಾವುದೇ ರೀತಿಯ ಪರಿಣಾಮ ಎದುರಿಸಲು ನಾನು ಸಿದ್ಧನಿದ್ದೇನೆ. ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆ ಎಂದು ಅವರು ಹೇಳಿದ್ದಾರೆ.

“ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದು ನಾನೇ” ಎಂದು ಇನ್ನೂ ಕನವರಿಸುತ್ತಿರುವ ಟ್ರಂಪ್

ನ್ಯೂಯಾರ್ಕ್‌, ಅ. 7 (ಪಿಟಿಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಯುದ್ಧಗಳನ್ನು ನಿಲ್ಲಿಸುವ ಕ್ರಮವಾಗಿ ಸುಂಕಗಳ ಬಳಕೆಯನ್ನು ವಿವರಿಸಿದ್ದಾರೆ ಮತ್ತು ಇತ್ತೀಚಿನ ಸಂಘರ್ಷದ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದೊಂದಿಗೆ ಅವರ ಸಂವಹನವು ಬಹಳ ಪರಿಣಾಮಕಾರಿ ಎಂದು ಹೇಳಿದರು, ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಯುದ್ಧವನ್ನು ವ್ಯಾಪಾರವನ್ನು ಬಳಸಿಕೊಂಡು ಕೊನೆಗೊಳಿಸುವ ಅವರ ಹೇಳಿಕೆಯನ್ನು ಪುನರಾವರ್ತಿಸಿದರು.

ಸುಂಕಗಳು ಅಮೆರಿಕಕ್ಕೆ ಬಹಳ ಮುಖ್ಯ. ಸುಂಕಗಳಿಂದಾಗಿ ನಾವು ಶಾಂತಿಪಾಲಕರು. ನಾವು ನೂರಾರು ಶತಕೋಟಿ ಡಾಲರ್‌ಗಳನ್ನು ಗಳಿಸುವುದಲ್ಲದೆ, ಸುಂಕಗಳಿಂದಾಗಿ ನಾವು ಶಾಂತಿಪಾಲಕರು ಎಂದು ಟ್ರಂಪ್‌ ಓವಲ್‌ ಕಚೇರಿಯಲ್ಲಿ ಹೇಳಿದರು.

ಸುಂಕಗಳ ಶಕ್ತಿಯನ್ನು ಬಳಸದಿದ್ದರೆ, ಇನ್ನೂ ನಾಲ್ಕು ಯುದ್ಧಗಳು ನಡೆಯುತ್ತವೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.ನಾನು ಯುದ್ಧಗಳನ್ನು ನಿಲ್ಲಿಸಲು ಸುಂಕಗಳನ್ನು ಬಳಸುತ್ತೇನೆ. ನೀವು ಭಾರತ ಮತ್ತು ಪಾಕಿಸ್ತಾನವನ್ನು ನೋಡಿದರೆ, ಅವರು ಅದನ್ನು ಮಾಡಲು ಸಿದ್ಧರಾಗಿದ್ದರು. ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು. ಅವರು ಅದನ್ನು ಮಾಡಲು ಸಿದ್ಧರಾಗಿದ್ದರು. ಮತ್ತು ಅವರು ಪರಮಾಣು ಶಕ್ತಿಗಳು.ಮತ್ತು ನಾನು ಹೇಳಿದ್ದನ್ನು ನಿಖರವಾಗಿ ಹೇಳಲು ಬಯಸುವುದಿಲ್ಲ, ಆದರೆ ನಾನು ಹೇಳಿದ್ದು ತುಂಬಾ ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಭಾರತವು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ನಿರಂತರವಾಗಿ ನಿರಾಕರಿಸಿದೆ. ಏಪ್ರಿಲ್‌ 22 ರಂದು ನಡೆದ ಪಹಲ್ಗಾಮ್‌ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿತು.ನಾಲ್ಕು ದಿನಗಳ ತೀವ್ರವಾದ ಗಡಿಯಾಚೆಗಿನ ಡ್ರೋನ್‌ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಒಪ್ಪಂದಕ್ಕೆ ಬಂದವು.

ಎರಡು ಮಿಲಿಟರಿಗಳ ಮಹಾನಿರ್ದೇಶಕರ ಮಿಲಿಟರಿ ಕಾರ್ಯಾಚರಣೆಗಳ (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಒಪ್ಪಂದವನ್ನು ತಲುಪಲಾಗಿದೆ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.ಯಾವುದೇ ದೇಶದ ಯಾವುದೇ ನಾಯಕರು ಭಾರತವನ್ನು ಆಪರೇಷನ್‌ ಸಿಂಧೂರ್‌ ನಿಲ್ಲಿಸುವಂತೆ ಕೇಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ, ಕಾಂಬೋಡಿಯಾ ಮತ್ತು ಥೈಲ್ಯಾಂಡ್‌‍, ಕೊಸೊವೊ ಮತ್ತು ಸೆರ್ಬಿಯಾ, ಕಾಂಗೋ ಮತ್ತು ರುವಾಂಡಾ, ಇಸ್ರೇಲ್‌ ಮತ್ತು ಇರಾನ್‌‍, ಈಜಿಪ್‌್ಟ ಮತ್ತು ಇಥಿಯೋಪಿಯಾ ಮತ್ತು ಅರ್ಮೇನಿಯಾ ಮತ್ತು ಅಜೆರ್ಬೈಜಾನ್‌ ಸೇರಿದಂತೆ ತಮ್ಮ ಆಡಳಿತದ ಎರಡನೇ ಅವಧಿಯಲ್ಲಿ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಟ್ರಂಪ್‌ ಹಲವಾರು ಬಾರಿ ಪುನರಾವರ್ತಿಸಿದ್ದಾರೆ.

ಮೇ 10 ರಿಂದ, ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ರಾತ್ರಿಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದಾಗಿನಿಂದ. ವಾಷಿಂಗ್ಟನ್‌ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದೆ ಎಂದು ಅವರು ಈಗಾಗಲೆ ಹಲವು ಬಾರಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.

ನಾಳೆ ಭಾರತಕ್ಕೆ ಬರುತ್ತಿದ್ದಾರೆ ಯುಕೆ ಪ್ರಧಾನಿ ಸ್ಟಾರ್ಮರ್‌

ಲಂಡನ್‌, ಅ. 7 (ಪಿಟಿಐ) ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರ ಭಾರತ ಭೇಟಿಯು ಉದಯೋನ್ಮುಖ ತಂತ್ರಜ್ಞಾನಗಳಂತಹ ಹಂಚಿಕೆಯ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ ಎಂದು ಯುಕೆ ಕೃತಕ ಬುದ್ಧಿಮತ್ತೆ ಮತ್ತು ಆನ್‌ಲೈನ್‌‍ ಸುರಕ್ಷತೆ ಸಚಿವ ಕನಿಷ್ಕ ನಾರಾಯಣ್‌ ಹೇಳಿದ್ದಾರೆ.

ನಾಳೆ ನಿಗದಿಯಾಗಿರುವ ಸ್ಟಾರ್ಮರ್‌ ಅವರ ಮೊದಲ ಅಧಿಕೃತ ಭಾರತ ಪ್ರವಾಸಕ್ಕೂ ಮುನ್ನ ಪಿಟಿಐ ಜೊತೆ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯುಕೆ ಸಹಯೋಗಕ್ಕಾಗಿ ಈಗಾಗಲೇ ಅಸಾಧಾರಣ ಅಡಿಪಾಯ ಹಾಕಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಯುಕೆ ಪ್ರಧಾನಿಯವರ ಎರಡು ದಿನಗಳ ಭೇಟಿಯಲ್ಲಿ, ಮುಂಬೈನಲ್ಲಿ ನಡೆಯುವ ಆರನೇ ಆವೃತ್ತಿಯ ಗ್ಲೋಬಲ್‌ ಫಿನ್‌ಟೆಕ್‌‍ ಫೆಸ್ಟ್‌ನಲ್ಲಿ ಇಬ್ಬರೂ ನಾಯಕರು ಪ್ರಮುಖ ಭಾಷಣಗಳನ್ನು ನೀಡಲಿದ್ದಾರೆ ಮತ್ತು ಉದ್ಯಮ ತಜ್ಞರು, ನೀತಿ ನಿರೂಪಕರು ಮತ್ತು ನಾವೀನ್ಯಕಾರರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ.
ಪ್ರಧಾನಿಯವರ ಭಾರತ ಭೇಟಿಯು ಸಂಪರ್ಕ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನಮ್ಮ ಹಂಚಿಕೆಯ ಆಸಕ್ತಿಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತದೆ ಎಂದು ನಾರಾಯಣ್‌ ಹೇಳಿದರು.

ಭಾರತ ಮತ್ತು ಯುಕೆ ಸಂಶೋಧನೆಯ ಮೇಲೆ ಮತ್ತು ಮುಖ್ಯವಾಗಿ, ಈ ತಂತ್ರಜ್ಞಾನಗಳ ಪ್ರಜಾಪ್ರಭುತ್ವ ಅಳವಡಿಕೆಯ ಮೇಲೆ ಗಮನ ಹರಿಸುತ್ತವೆ. ಈ ಭೇಟಿಯು ಪ್ರಾಯೋಗಿಕ ಸಹಯೋಗದೊಂದಿಗೆ ಹಂಚಿಕೆಯ ಗಮನವನ್ನು ಇನ್ನಷ್ಟು ಆಳಗೊಳಿಸುವ ಬಗ್ಗೆ ಎಂದು ಅವರು ಹೇಳಿದರು.ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ವೇಲ್‌್ಸನಿಂದ ಸಂಸತ್ತಿನ ಮೊದಲ ಭಾರತೀಯ ಮೂಲದ ಸದಸ್ಯರಾಗಿ ಆಯ್ಕೆಯಾದಾಗ ಇತಿಹಾಸ ನಿರ್ಮಿಸಿದ ಬಿಹಾರ ಮೂಲದ ಲೇಬರ್‌ ಸಂಸದರು, ತಂತ್ರಜ್ಞಾನ ವಲಯವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಕೇಂದ್ರಬಿಂದುಗಳಲ್ಲಿ ಒಂದಾಗಿರುವುದು ಮತ್ತು ಕಾಯ್ದಿರಿಸಿದ ಸಂಬಂಧಗಳ ಅಪಾರ ಸಾಮರ್ಥ್ಯದ ಬಗ್ಗೆ ಉತ್ಸುಕರಾಗಿದ್ದಾರೆ.

ನಮ್ಮ ಎರಡೂ ದೇಶಗಳಲ್ಲಿ, ಸಹಯೋಗಕ್ಕಾಗಿ ನಾವು ಅಸಾಧಾರಣ ಅಡಿಪಾಯವನ್ನು ಹೊಂದಿದ್ದೇವೆ: ಸಂಶೋಧನಾ ಪಾಲುದಾರಿಕೆಗಳು, ಆಳವಾದ ಮತ್ತು ವೈಯಕ್ತಿಕ ಇತಿಹಾಸಗಳು ಮತ್ತು ಭವಿಷ್ಯದ ನಿರಂತರ ಅನ್ವೇಷಣೆ. ಅನ್ವಯಿಕ ಮತ್ತು ಆನ್‌ಲೈನ್‌‍ ಸುರಕ್ಷತಾ ಸಂಶೋಧನೆಗೆ, ನಮ್ಮ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಮತ್ತು ಮತ್ತು ಆನ್‌ಲೈನ್‌‍ ಅನುಭವಗಳು ಭಾರತ ಮತ್ತು ಯುಕೆ ಪ್ರೀತಿಸುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಾವು ಇವುಗಳನ್ನು ನಿರ್ದಿಷ್ಟ ಅವಕಾಶಗಳಾಗಿ ಹರಿಸಬಹುದು ಎಂದು ಅವರು ಹೇಳಿದರು.

ನಾಳೆ ಭಾರತಕ್ಕೆ ತೆರಳಲಿರುವ ಸ್ಟಾಮರ್‌ ಅವರು, ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ಧ್ಯೇಯದೊಂದಿಗೆ ಸಿಇಒಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಸಾಂಸ್ಕೃತಿಕ ಮುಖ್ಯಸ್ಥರ 100 ಕ್ಕೂ ಹೆಚ್ಚು ಸದಸ್ಯರ ನಿಯೋಗದೊಂದಿಗೆ ಬರಲಿದೆ.ಜುಲೈನಲ್ಲಿ ಮೋದಿ ಅವರ ಯುಕೆ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಮತ್ತು ಕಳೆದ ವರ್ಷ ನಡೆದ ದ್ವಿಪಕ್ಷೀಯ ತಂತ್ರಜ್ಞಾನ ಭದ್ರತಾ ಉಪಕ್ರಮದಿಂದ ಉಂಟಾಗುವ ಅವಕಾಶಗಳು ಸ್ಟಾಮರ್ರ್‌- ಮೋದಿ ಮಾತುಕತೆಗಳ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ.

ಭೇಟಿಯ ಬಗ್ಗೆ ಪರಿಚಿತವಾಗಿರುವ ಯುಕೆ ಸರ್ಕಾರಿ ಅಧಿಕಾರಿಗಳ ಪ್ರಕಾರ, ಎರಡೂ ನಾಯಕರು ಭಾರತೀಯ ಮತ್ತು ಬ್ರಿಟಿಷ್‌ ವ್ಯಾಪಾರ ನಾಯಕರೊಂದಿಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಟರ್ಬೋಚಾರ್ಜ್‌ ಮಾಡಲು, ದ್ವಿಮುಖ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧದ ವಿಸ್ತಾರವನ್ನು ಎತ್ತಿ ತೋರಿಸುತ್ತಾರೆ.

ಕಳೆದ ತಿಂಗಳು ಬಿಡುಗಡೆಯಾದ ಯುಕೆ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯ ಇತ್ತೀಚಿನ ಅಂಕಿಅಂಶಗಳು ಭಾರತ ಮತ್ತು ಯುಕೆ ನಡುವಿನ ಸರಕು ಮತ್ತು ಸೇವೆಗಳಲ್ಲಿನ ಒಟ್ಟು ವ್ಯಾಪಾರವನ್ನು ಮಾರ್ಚ್‌ 2025 ರವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ 44.1 ಶತಕೋಟಿ ಪೌಂಡ್‌ಗಳಿಗೆ ತಲುಪಿದೆ, ಇದು ಹಿಂದಿನ ಅವಧಿಗಿಂತ ಶೇ 10.1 ರಷ್ಟು ಹೆಚ್ಚಳವಾಗಿದೆ.

ಅಧಿಕೃತವಾಗಿ ಸಿಇಟಿಎ ಎಂದು ಕರೆಯಲ್ಪಡುವ ಮುಕ್ತ ವ್ಯಾಪಾರ ಒಪ್ಪಂದ ಯುಕೆ ಸರಕುಗಳ ಶೇಕಡಾ 90 ಕ್ಕಿಂತ ಹೆಚ್ಚು ಸುಂಕಗಳನ್ನು ತೆಗೆದುಹಾಕುವ ಮೂಲಕ ಈ ಅಂಕಿಅಂಶಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದ ವೇಳೆಗೆ ವ್ಯಾಪಾರ ಒಪ್ಪಂದದ ಯುಕೆ ಸಂಸದೀಯ ಅನುಮೋದನೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ 2030 ರ ವೇಳೆಗೆ ಕನಿಷ್ಠ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದವರ ಮೇಲೆ ಬಸ್‌‍ ಹರಿದು ಮೂವರ ಭಕ್ತರ ದುರ್ಮರಣ

ಕೊಪ್ಪಳ,ಅ.7-ಪವಿತ್ರ ಪುಣ್ಯ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್‌‍ ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೂಕನಪಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.

ಮೃತರನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿಗಳಾದ ಅನ್ನಪೂರ್ಣ(40), ಪ್ರಕಾಶ್‌(25), ಶರಣಪ್ಪ(19) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಳ್ಳಿಹಾಳ ಗ್ರಾಮದಿಂದ ಹಲವರು ಕಾಲ್ನಡಿಗೆಯಲ್ಲಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆ ಆರಂಭಿಸಿದ್ದರು. ರಾತ್ರಿ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌‍ ಈ ಪಾದಯಾತ್ರಿಗಳ ಮೇಲೆ ಹರಿದಿದ್ದರಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ಕೇವಲ ಕೇವಲ 3 ಗಂಟೆ ಕಳೆದಿದ್ದರೆ ಇವರು ದೇವಸ್ಥಾನ ತಲುಪುತ್ತಿದ್ದರು. ಆದರೆ ವಿಧಿಯಾಟದಲ್ಲಿ ಮೂವರು ಜೀವ ಕಳೆದುಕೊಂಡಿರುವುದು ದುರ್ದೈವ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್‌ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಿರಾಬಾದ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.