Friday, November 7, 2025
Home Blog Page 64

ವೀರಶೈವ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆದಿದೆ : ವಿಜಯೇಂದ್ರ ಕಿಡಿ

ಬೆಂಗಳೂರು,ಅ.6- ಕೆಲವರು ಹಿಂದೂ ಧರ್ಮ ಮತ್ತು ವೀರಶೈವ ಲಿಂಗಾಯತರನ್ನು ಒಡೆಯುವ ಷಡ್ಯಂತ್ರ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದರಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಕೆಲವರು ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ಮಾಡುವ ಮೂಲಕ ನಮ ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ಅವರು ಯಶಸ್ವಿಯಾಗಲಿಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯನವರ ಹೆಸರು ಹೇಳದೆ ಕಿಡಿಕಾರಿರು.

ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ವೀರಶೈವ ಲಿಂಗಾಯಿತ ಧರ್ಮ ರಚನೆಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. ಇದ್ದಕ್ಕಿದ್ದಂತೆ ಇದು ಮುನ್ನಲೆಗೆ ಬಂದಿದ್ದು, ಯಾವ ಕಾರಣಕ್ಕಾಗಿ ಎಂಬುದು ಯಾರಿಗೂ ಗೊತ್ತಿಲ್ಲ. ತೆರೆಯ ಹಿಂದೆ ಕುಳಿತವರೇ ಇದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೆಯೂ ವೀರಶೈವ ಲಿಂಗಾಯಿತ ಸಮುದಾಯವನ್ನು ಒಡೆದು ಧರ್ಮ ಮಾಡಲು ಹೊರಟ್ಟಿದ್ದರು. ಪರಿಣಾಮ ಏನಾಯಿತು ಎಂಬುದು ಗೊತ್ತು. ಯಾವುದೇ ಕಾರಣಕ್ಕೂ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ಮುಂದೆಯೂ ಆಗುವುದಿಲ್ಲ ಎಂದು ಎಚ್ಚರಿಸಿದ ಅವರು, ಇದಕ್ಕಾಗಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಮುಖ್ಯವಾಗಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ವಿಚಾರದಲ್ಲಿ ಸರ್ಕಾರಕ್ಕೆ ಯಾಕಿಷ್ಟು ಆತುರ? ಒಕ್ಕಲಿಗ ಸಮುದಾಯ, ವೀರಶೈವ ಲಿಂಗಾಯತ ಸಮುದಾಯ ಎಲ್ಲದರಲ್ಲೂ ಬಡವರಿದ್ದಾರೆ. ಮುಖ್ಯಮಂತ್ರಿಗಳು ಯಾಕೆ 15 ದಿನದಲ್ಲೇ ಸಮೀಕ್ಷೆ ಮುಗಿಸಬೇಕೆಂಬ ತರಾತರಿಯಲ್ಲಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು. ನಮ ಮೆಟ್ರೋಗೆ ಬಸವ ಮೆಟ್ರೋ ಎಂಬ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ಬಹಿರಂಗವಾಗಿ ಹೇಳುವುದು ಬೇರೆ.

ಆದರೆ ಅಂತರಂಗದಲ್ಲಿ ಏನು ಇದೆ ಅದನ್ನು ಮಾಡುವುದು ಬೇರೆ. ಹಿಂದೆ ಸಿಎಂ ಆಗಿದ್ದಾಗ ಬಸವೇಶ್ವರರ ಫೋಟೋ ಇಡಬೇಕೆಂದು ಹೇಳಿ ಆದೇಶ ಮಾಡಿಸಿದ್ದರು. ಬಳಿಕ ಪ್ರತ್ಯೇಕ ಧರ್ಮಮಾಡಲು ಹೊರಟರು ಎಂದು ಟೀಕಿಸಿದರು. ನಮ ಮೆಟ್ರೋಗೆ ಬಸವೇಶ್ವರರ ಹೆಸರಿಡುವುದಕ್ಕೆ ಸ್ವಾಗತವಿದೆ. ಆದರೆ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವುದು ಎಷ್ಟು ಸರಿ? ಎಂದು ವಿಜಯೇಂದ್ರ ಪ್ರಶ್ನಿಸಿದರು.

ಕಾಂಗ್ರೆಸ್‌ನೊಳಗೆ ಕಿತ್ತಾಟ : ಸಿಡಿದೆದ್ದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ

ಬೆಂಗಳೂರು, ಅ.6- ಕಾಂಗ್ರೆಸ್‌‍ನ ಒಳ ರಾಜ ಕೀಯದ ಬಗ್ಗೆ ಮತ್ತೊಬ್ಬ ಮಸ್ಲಿಂ ಮುಖಂಡ ಸಿಡಿದೆದ್ದು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದ ಮುಖಂಡರ ವಿರುದ್ಧ ಕೆಂಡ ಕಾರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದು, ಸುಮಾರು 2 ಸಾವಿರ ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜನರನ್ನು ಸೇರಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಗಂಗಾವತಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ರೊಚ್ಚಿಗೆದ್ದಿದ್ದು, ನಾನು ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದ್ದರೆ, ಸಚಿವನಾಗುತ್ತೇನೆ ಎಂಬ ಕಾರಣಕ್ಕಾಗಿ ಹುನ್ನಾರ ನಡೆಸಿ ಎಲ್ಲರೂ ಸೇರಿ ಗಣಿ ಮಾಲೀಕ ಜನಾರ್ದನರೆಡ್ಡಿ ಅವರನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ನನ್ನನ್ನು ಸೋಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಇಂದು ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ. ಮಾಜಿ ಸಚಿವನಾಗಿದ್ದರೂ, ಮುಸ್ಲಿಂ ಎಂಬ ಕಾರಣಕ್ಕಾಗಿ ನನ್ನನ್ನು ದೂರ ಇಟ್ಟಿದ್ದಾರೆ. ಪಕ್ಷದ ನಾಯಕರೂ ಕೂಡ ಕಡೆಗಣಿಸಿದ್ದಾರೆ ಎಂದು ಆಡಿಯೋ ಸಂದೇಶದಲ್ಲಿ ಇಕ್ಬಾಲ್‌ ಅನ್ಸಾರಿ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿಯವರ ಪರಮಾಪ್ತ ಬಳಗದಲ್ಲಿರುವ ಹಿಂದುಳಿದ ವರ್ಗಗಳ ಸಚಿವ ಶಿವರಾಜತಂಗಡಗಿ, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದ ರಾಜಶೇಖರ ಇಟ್ನಾಳ್‌, ಶಾಸಕ ರಾಘವೇಂದ್ರ ಇಟ್ನಾಳ್‌ ಸೇರಿದಂತೆ ಜಲ್ಲೆಯ ಕಾಂಗ್ರೆಸ್‌‍ ನಾಯಕರು ಹಾಗೂ ಮುಖಂಡರ ವಿರುದ್ಧ ಇಕ್ಬಾಲ್‌ ಅನ್ಸಾರಿ ಕಿಡಿಕಾರಿದ್ದಾರೆ.

ಈ ಎಲ್ಲರೂ ಸೇರಿ ತನ್ನ ವಿರುದ್ಧ ಮುಖ್ಯಮಂತ್ರಿಯವರಿಗೆ ನಕಾರಾತಕ ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಂದಿನ ಕಾರ್ಯಕ್ರಮಕ್ಕೆ ಇಕ್ಬಾಲ್‌ ಅನ್ಸಾರಿ ಜನರನ್ನು ಸೇರಿಸಿಲ್ಲ, ಸಂಸದ ರಾಘವೇಂದ್ರ ಇಟ್ನಾಳ್‌ ಅವರೇ ಗಂಗಾವತಿಗೆ ಹೋಗಿ ಜನರನ್ನು ಸಂಘಟಿಸಿದ್ದಾರೆ ಎಂಬ ತಪ್ಪು ಮಾಹಿತಿಯನ್ನು ಪಕ್ಷಕ್ಕೆ ಹಾಗೂ ಮುಖ್ಯಮಂತ್ರಿಯವರಿಗೆ ತಲುಪಿಸಿದ್ದಾರೆ.ನಾನು ತಮ ಕ್ಷೇತ್ರದಿಂದ 224 ಬಸ್‌‍ಗಳಲ್ಲಿ ಜನರು ಕಾರ್ಯಕ್ರಮಕ್ಕೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇನೆ. ಈ ಎಲ್ಲಾ ಕೆಲಸಗಳನ್ನು ನಾನೇ ಮಾಡಿದ್ದೇನೆಂದು ಸಂಸದ ಹೇಳಿಕೊಳ್ಳುತ್ತಿದ್ದಾನೆ ಎಂದು ಏಕವಚನದಲ್ಲೇ ಅನ್ಸಾರಿ ವಾಗ್ದಾಳಿ ನಡೆಸಿದ್ದಾರೆ.

ಗಂಗಾವತಿಯಲ್ಲಿ ಜನಾರ್ದನರೆಡ್ಡಿಯವರ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದೆ. ಆದರೂ ಕಾಂಗ್ರೆಸ್‌‍ ಪಕ್ಷದ ನಾಯಕರು ಪರೋಕ್ಷವಾಗಿ ಬೆಂಬಲ ನೀಡಿ ಗೆಲ್ಲಿಸಿದ್ದಾರೆ. ಒಳ್ಳೆಯ ಕೆಲಸಗಳನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುವ ಅವರು, ಪಕ್ಷಕ್ಕೆ ತೊಂದರೆಯಾದಾಗ ಬಚ್ಚಿಟ್ಟುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ವಿರುದ್ಧ ಗುಂಪು ಕಟ್ಟಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಈ ರೀತಿಯ ಹುನ್ನಾರಗಳ ಬಗ್ಗೆ ನಾನು ರಾಜ್ಯದಾದ್ಯಂತ ಮುಸ್ಲಿಂ ಸಮುದಾಯಕ್ಕೆ ವಿವರಿಸುತ್ತೇನೆ. ಕೊಪ್ಪಳ ಜಿಲ್ಲೆ ಕುರಿತಂಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೆ ಆ ಗುಂಪಿನವರ ಮಾತುಗಳನ್ನು ಕೇಳಿ, ಏಕಮುಖ ನಿರ್ಧಾರ ಮಾಡಬೇಡಿ, ನನ್ನ ಅಭಿಪ್ರಾಯಗಳನ್ನೂ ಕೇಳಿ ಎಂದು ಮುಖ್ಯಮಂತ್ರಿ ಅವರಿಗೆ ಅನ್ಸಾರಿ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‌‍ ಸರ್ಕಾರದಲ್ಲಿ 75% ಲಂಚ ಗ್ಯಾರಂಟಿ..!

ಬೆಂಗಳೂರು, ಅ.6- ಬಿಜೆಪಿ ಯನ್ನು ಪರ್ಸೆಂಟೇಜ್‌ ಸರ್ಕಾರ ಎಂದು ಬಿಂಬಿಸಿ ಯಶಸ್ವಿಯಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್‌‍ನಲ್ಲೂ ಭ್ರಷ್ಟಾಚಾರ ಮುಂದು ವರೆದಿದೆಯಾ..? ಉದ್ಯಮಿ ಮೋಹನ್‌ ದಾಸ್‌‍ ಪೈ ಅವರು ಮಾಡಿರುವ ಎಕ್ಸ್ ನಲ್ಲಿ ಕಾಂಗ್ರೆಸ್‌‍ ಸರ್ಕಾರದ ಭ್ರಷ್ಟಾಚಾರದ ಪುರಾಣ ಬಯಲು ಮಾಡುವುದರ ಜೊತೆಗೆ ಭಾರಿ ಸಂಚಲನ ಸೃಷ್ಟಿಸಿದೆ.

ಅದರಲ್ಲೂ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದ್ದ ಶೇ.40 ಕಮೀಷನ್‌ ಆರೋಪಕ್ಕೆ ಬದಲಿಗೆ ಕಾಂಗ್ರೆಸ್‌‍ ಸರ್ಕಾರದಲ್ಲಿ ಶೇ.75 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದು ಅವರ ಎಕ್ಸ್ ಪೋಸ್ಟ್‌ನಿಂದ ಗೊತ್ತಾಗಿದೆ. ಪೈ ಅವರು ಮಾಡಿರುವ ಎಕ್‌್ಸನ ಪೋಸ್ಟ್‌ ವಿಪಕ್ಷಗಳಿಗೆ ಬಾಯಿಗೆ ಆಹಾರವಾಗುವ ಸಾಧ್ಯತೆಗಳಿವೆ.

ಬಿಜೆಪಿ ವಿರುದ್ಧ ಶೇ. 40ರಷ್ಟು ಕಮೀಷನ್‌ ಆರೋಪ ಮಾಡಿದ್ದ ಕಾಂಗ್ರೆಸ್‌‍ನವರು ಭ್ರಷ್ಟಾಷಾರ ಮಾಡೋದಿಲ್ಲ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದರೂ ಇದೀಗ ಅವರ ಸರ್ಕಾರದಲ್ಲೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಂಗ್ರೆಸ್‌‍ ಸರ್ಕಾರ ಇರುವ ರಾಜ್ಯದ 12 ಇಲಾಖೆಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪೈ ಅವರು ಎಕ್ಸ್ ಮಾಡಿ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಪ್ರಮಾಣದ ಲಂಚವಾತಾರ ನಡೆತಿದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.

ಯಾವ್ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಭ್ರಷ್ಟಾಚಾರ; ಪೈ ಅವರ ಎಕ್ಸ್ ಖಾತೆ ಪ್ರಕಾರ ಅಬಕಾರಿ ಅಧಿಕಾರಿಗಳು ಶೇ. 38, ಇಂಧನ ಇಲಾಖೆ ಅಧಿಕಾರಿಗಳು ಶೇ. 41, ಸಾರಿಗೆ ಇಲಾಖೆಯಲ್ಲಿ ಶೇ. 42, ಪೊಲೀಸ್‌‍ ಇಲಾಖೆಯಲ್ಲಿ ಶೆ. 43, ಅಗ್ನಿ ಶಾಮಕ ದಳದಲ್ಲಿ ಶೇ. 45, ಆದಾಯ ತೆರಿಗೆ ಇಲಾಖೆಯಲ್ಲಿ ಶೇ. 47, ಮಹಾನಗರ ಪಾಲಿಕೆಗಳಲ್ಲಿ ಶೇ. 57, ಮಾಲಿನ್ಯ ನಿಯಂತ್ರಣ ಇಲಾಖೆಯಲ್ಲಿ ಶೇ. 59, ಜಿಎಸ್‌‍ಟಿ ಕಚೇರಿಗಳಲ್ಲಿ ಶೇ. ನೋಂದಣಿ ಇಲಾಖೆಗಳಲ್ಲಿ ಶೇ. 68, ಕಾರ್ಮಿಕ/ ಪಿಎಫ್‌ ಕಚೇರಿಗಳಲ್ಲಿ ಶೇ. 69 ಹಾಗೂ ಇತರ ಕೆಲ ಇಲಾಖೆಳಲ್ಲಿ ಶೇ.75 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಮೆಟ್ರೋ ಪ್ರಯಾಣ ದರ ಇಳಿಸುವಂತೆ ಗ್ಯಾರಂಟಿ ಸರ್ಕಾರಕ್ಕೆ ನೆಟ್ಟಿಗರಿಂದ ಛೀಮಾರಿ

ಬೆಂಗಳೂರು,ಅ.6- ರಾಜಧಾನಿ ಬೆಂಗಳೂರಿನ ನಮ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ನಾಮಕರಣ ಮಾಡುವ ಬದಲು ಹೆಚ್ಚಿಸಿರುವ ದರವನ್ನು ಇಳಿಕೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ವೀರಶೈವ ಲಿಂಗಾಯಿತ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯನವರು, ಸಮುದಾಯದ ಬೇಡಿಕೆಯಂತೆ ನಮ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರನ್ನು ನಾಮಕರಣ ಮಾಡುತ್ತೇವೆ. ಇದು ನಮ ಕೈಯಲ್ಲಿ ಇಲ್ಲ. ಒಂದು ವೇಳೆ ಇದ್ದಿದ್ದರೆ ಇಂದೇ ಘೋಷಣೆ ಮಾಡುತ್ತಿದೆ ಎಂದು ಹೇಳಿದ್ದರು.

ಆದರೂ ಸಮುದಾಯದ ಕೋರಿಕೆಯಂತೆ ಮೆಟ್ರೋ ರೈಲು ನಿಲ್ದಾಣಕ್ಕೆ ಬಸವಣ್ಣನವರ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದ್ದರು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ಸ್ವಾಗತಿಸಿದ್ದರೆ, ಇನ್ನು ಕೆಲವರು ದರ ಹೆಚ್ಚಳ ಮಾಡಿರುವುದಕ್ಕೆ ವಿರೋಧಿಸಿ ಅಸಮತಿ ಸೂಚಿಸಿದ್ದಾರೆ.

ಸಿದ್ದರಾಮಯ್ಯನವರೇ ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ. ಮೆಟ್ರೋಗೆ ಹೆಸರು ಇಡುವುದು ಮುಖ್ಯವಲ್ಲ. ದರ ಇಳಿಸುವುದು ಮುಖ್ಯ. ಭಾರತದ ಯಾವ ಮೆಟ್ರೋದಲ್ಲಿ ಏರಿಸದಷ್ಟು ದರವನ್ನು ಬೆಂಗಳೂರಿನಲ್ಲಿ ಏರಿಸಿದ್ದೀರಿ. ಮೊದಲು ಆ ದರವನ್ನು ಇಳಿಕೆ ಮಾಡಿ ಎಂದು ನೆಟ್ಟಿಗರಿಂದ ಅಭಿಪ್ರಾಯ ವ್ಯಕ್ತವಾಗಿದೆ.

ಇನ್ನು ಕೆಲವರು ನಮ ಮೆಟ್ರೋ ಈಗಾಗಲೇ ಜನಜನಿತವಾಗಿದೆ. ಹೊರರಾಜ್ಯದಿಂದ ಬಂದವರು ನಮ ಮೆಟ್ರೋ ಎಂದು ಕರೆಯುತ್ತಿದ್ದಾರೆ. ಬಸವಣ್ಣನ ಬಗ್ಗೆ ನಿಮಗೆ ಇಷ್ಟ ಇದ್ದರೆ ನಿಮ ಯಾವುದಾದರು ಯೋಜನೆ ಇಡಿ. ಬೇಕಿದ್ದರೆ ಇಂದಿರಾ ಕ್ಯಾಂಟೀನ್‌ ಬದಲು ಬಸವ ಕ್ಯಾಂಟೀನ್‌ ಎಂದು ಬದಲಾಯಿಸಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.ಇನ್ನು ಕೆಲವರು ಸಿದ್ದರಾಮಯ್ಯನವರ ನಿರ್ಧಾರ ಸರಿಯಾಗಿದೆ. ಕಾಯಕಯೋಗಿ ಬಸವಣ್ಣ ಎಲ್ಲರಿಗೂ ಆದರ್ಶ. ಬಸವ ಮೆಟ್ರೋ ಇಡುವ ನಿರ್ಧಾರ ಸರಿಯಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಅಪಾಯಕಾರಿ ಕಫ್‌ ಸಿರಪ್‌ ಜಪ್ತಿ ಮಾಡಲು ಕ್ರಮ

ಬೆಂಗಳೂರು, ಅ.6- ಅಪಾಯಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ ಅಂಶದ ಕಲಬೆರೆಕೆ ಇರುವ ಕಾಫ್‌ ಸಿರಪ್‌ಗಳನ್ನು ತಪಾಸಣೆಗೊಳಪಡಿಸಿ ಜಪ್ತಿ ಮಾಡಲು ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧಿ ಸಚಿವಾಲಯ ಕ್ರಮ ಕೈಗೊಂಡಿದೆ.

ತಮಿಳುನಾಡು, ಪುದುಚೇರಿ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಮಿನ ಔಷಧಿ ಪಡೆದ ಮಕ್ಕಳ ಸಾವಿನ ಬಳಿಕ ದೇಶಾದ್ಯಂತ ಜಾಗೃತಿ ಹೆಚ್ಚಾಗಿದೆ. ಮಕ್ಕಳ ಕೆಮಿನ ಔಷಧಿಯ ಕಲಬೆರೆಕೆ ಪತ್ತೆಗೆ ಕಾರ್ಯಾಚರಣೆಗಳು ನಡೆಯುತ್ತಿವೆ.

ತಮಿಳುನಾಡಿನ ಕಾಂಚಿಪುರಂ ಮೂಲದ ಸ್ರೆಸನ್‌ ಫಾರ್ಮಾಸ್ಯುಟಿಕಲ್‌ ಸಂಸ್ಥೆ ತಯಾರಿಸಿದ ಬ್ಯಾಚ್‌ ನಂಬರ್‌ ಎಸ್‌‍ಆರ್‌ 13ರ ಕಾಫ್‌ ಸಿರಪ್‌ನಲ್ಲಿ ಪ್ಯಾರಾಸಿಟಮಾಲ್‌, ಫಿನೈಲ್ಟ್ರಿನ್‌ ಹೈಡ್ರೋಕ್ಲೋರೈಡ್‌, ಕ್ಲೋರ್‌ ಫೆನಿರಮೈನ್‌ ಮಲೇಟ್‌ ಅಂಶಗಳ ಜೊತೆಗೆ ವಿಷಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ನ ಅಂಶಗಳು ಶೇ. 46.28ರಷ್ಟು ಪ್ರಮಾಣದಲ್ಲಿ ಸೇರ್ಪಡೆಯಾಗಿದ್ದು, ಔಷಧಿ ವಿಷಕಾರಿಯಾಗಿ ಪರಿವರ್ತನೆಯಾಗಿದೆ.

ಈ ಕಾರಣಕ್ಕೆ ಸ್ರೆಸನ್‌ಫಾರ್ಮ ಮತ್ತು ಜೈಪುರದ ಕೈಸನ್‌್ಸಫಾರ್ಮ ತಯಾರಿಸಿದ ಔಷಧಿಗಳು ಕಳಪೆಯಾಗಿದ್ದು, ಬಳಕೆ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರ ಜಂಟಿ ಅಧ್ಯಯನದ ಬಳಿಕ ಪತ್ತೆ ಹಚ್ಚಿದೆ.

ಈ ಔಷಧಿಗಳನ್ನು ದಾಸ್ತಾನು, ಮಾರಾಟ ಮಾಡುವುದು, ಬಳಕೆ ಅಥವಾ ಶಿಫಾರಸು ಮಾಡದಂತೆ ಈಗಾಗಲೇ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಸುತ್ತೋಲೆ ರವಾನಿಸಿದೆ. ಡೈಥಿಲೀನ್‌ ಗ್ಲೈಕೋಲ್‌ನ ಅಂಶಗಳನ್ನು ಬಳಕೆ ಮಾಡಿ ಇತರ ಕಂಪನಿಗಳು ತಯಾರಿಸಿರುವ ಔಷಧಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ವರದಿಯ ಬಳಿಕ ಔಷಧಿಯ ಗುಣಮಟ್ಟ ಆಧರಿಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್‌, ಈ ಎರಡು ಕಂಪನಿಗಳ ಔಷಧಿಗಳು ನಮ ರಾಜ್ಯದಲ್ಲಿ ಸರಬರಾಜಾಗಿಲ್ಲ. ಆದರೆ ಮಧ್ಯಪ್ರದೇಶ, ತಮಿಳುನಾಡು, ಪುದುಚೇರಿಯಲ್ಲಿ ಮಕ್ಕಳ ಸಾವಿಗೆ ಕಾರಣವಾಗಿವೆ. ಈ ಔಷಧಿಗಳು ನಮಲ್ಲಿ ಬರದಂತೆ ಎಚ್ಚರಿಕೆ ವಹಿಸಲಾಗುವುದು.

ಜೊತೆಗೆ ಅಪಾಯಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ನ ಮಿಶ್ರಿತ ಔಷಧಿಗಳನ್ನು ಬೇರೆ ಯಾವುದೇ ಕಂಪನಿಗಳು ತಯಾರಿಸಿದ್ದರೂ ಮಾದರಿ ಸಂಗ್ರಹಿಸಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ದೇಶದಲ್ಲೇ ಆಹಾರ ಮತ್ತು ಔಷಧಿ ಸುರಕ್ಷತೆಗೆ ಅತಿ ಹೆಚ್ಚು ಕಾಳಜಿ ವಹಿಸಿದ ರಾಜ್ಯವಾಗಿದೆ. ಬೇರೆಲ್ಲಾ ರಾಜ್ಯಗಳಿಗಿಂತಲೂ ನಮಲ್ಲಿ ಹೆಚ್ಚು ತಪಾಸಣೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಸೂಚನೆ ಪ್ರಕಾರ 5 ವರ್ಷದ ಮಕ್ಕಳಿಗೆ ಕೆಮಿನ ಔಷಧಿಗಳನ್ನು ಶಿಫಾರಸು ಮಾಡುವಂತಿಲ್ಲ. ಅದರಲ್ಲೂ ಅಪಾಯಕಾರಿ ಕಲಬೆರೆಕೆಯಾಗಿರುವ ಔಷಧಿಗಳನ್ನು ಬಳಸುವಂತೆಯೇ ಇಲ್ಲ ಎಂದು ಅವರು ಸಲಹೆ ನೀಡಿದರು.

ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆಯುವ ಮುನ್ನವೇ ಫ್ರೆಂಚ್‌ ಪ್ರಧಾನಿ ರಾಜೀನಾಮೆ

ಪ್ಯಾರಿಸ್‌‍, ಅ.6-ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆಯುವ ಮುನ್ನವೇ ಫ್ರಾನ್ಸ್ ನ ಪ್ರಧಾನಿ ಸೆಬಾಸ್ಟಿಯನ್‌ ಲೆಕೋರ್ನು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಪ್ರಧಾನಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.

ಲೆಕೋರ್ನು ಅವರು ತಮ ಸಂಪುಟದ ಮಂತ್ರಿಗಳ ಆಯ್ಕೆಯು ಟೀಕೆಗೆ ಗುರಿಯಾಗಿತ್ತು.ವಿಶೇಷವಾಗಿ ಮಾಜಿ ಹಣಕಾಸು ಸಚಿವ ಬ್ರೂನೋ ಲೆ ಮೈರ್‌ ಅವರನ್ನು ರಕ್ಷಣಾ ಸಚಿವ ಸ್ಥಾನ ನೀಡಲು ನಿರ್ಧಾರ ಮಾಡಿದ್ದರು.

ಹಿಂದಿನ ಸಂಪುಟದಿಂದ ಇತರ ಪ್ರಮುಖ ಹುದ್ದೆಗಳು ಹೆಚ್ಚಾಗಿ ಬದಲಾಗದೆ ಉಳಿದಿವೆ, ಸಂಪ್ರದಾಯವಾದಿ ಬ್ರೂನೋ ರಿಟೇಲ್ಲಿಯು ಆಂತರಿಕ ಸಚಿವರಾಗಿ, ಪೊಲೀಸ್‌‍ ಮತ್ತು ಆಂತರಿಕ ಭದ್ರತೆಯ ಉಸ್ತುವಾರಿಯಲ್ಲಿ, ಜೀನ್‌‍-ನೋಯೆಲ್‌ ಬ್ಯಾರಟ್‌ ವಿದೇಶಾಂಗ ಸಚಿವರಾಗಿ ಮತ್ತು ಜೆರಾಲ್ಡ್ ಡಾರ್ಮಾನಿನ್‌ ನ್ಯಾಯ ಸಚಿವಾಲಯವನ್ನು ಉಳಿಸಿಕೊಂಡಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಮತವನ್ನು ಬಯಸಿ,ಬಜೆಟ್‌ಗೆ ವಿಶೇಷ ಸಾಂವಿಧಾನಿಕ ಅಧಿಕಾರವನ್ನು ಬಳಸುವುದಿಲ್ಲ ಮತ್ತು ಬದಲಿಗೆ ಎಡ ಮತ್ತು ಬಲಪಂಥೀಯ ಶಾಸಕರೊಂದಿಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವುದಾಗಿ ಘೋಷಿಸಿದ್ದರು ಇದು ಆಡಳಿತ ಸಂಸದರ ಕೋಪಕ್ಕೆ ಕಾರಣವಾಗಿತ್ತು.

ಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ವಕೀಲ

ನವದೆಹಲಿ,ಅ.6- ಭಗವಾನ್‌ ವಿಷ್ಣುವಿನ ಕುರಿತು ಟೀಕೆಗೆ ಗುರಿಯಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಪ್ರಸಂಗ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರು ವಿಚಾರಣೆ ನಡೆಸುತ್ತಿದ್ದರು. ವಾದ, ಪ್ರತಿವಾದ ನಡೆಯುತ್ತಿದ್ದ ವೇಳೆ ನ್ಯಾಯಾಲಯದ ಹಾಲ್‌(ಕೊಠಡಿ)ನಲ್ಲೇ ಇದ್ದ ವಕೀಲರೊಬ್ಬರು ತಮ್ಮ ಶೂ ತೆಗೆದುಕೊಂಡು ನೇರವಾಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದತ್ತ ಎಸೆದರು.

ಇದನ್ನು ನಿರೀಕ್ಷೆ ಮಾಡದೆ ಗವಾಯಿ ಅವರು ಶೂ ತಮತ್ತ ಬರುತ್ತಿದ್ದನ್ನು ಕಂಡು ತಕ್ಷಣವೇ ಪೀಠದ ಪಕ್ಕಕ್ಕೆ ವಾಲಿದ್ದರಿಂದ ಶೂ ಅವರಿಗೆ ತಾಗದೆ ಮುಂದೆ ಹೋಗಿ ಬಿದ್ದಿತು.
ಈ ಘಟನೆಯಿಂದಾಗಿ ಹಾಲ್‌ನಲ್ಲಿ ಒಂದು ಕ್ಷಣ ಗಲಿಬಿಲಿ ವಾತಾವರಣ ನಿರ್ಮಾಣವಾಯಿತು. ಶೂ ಎಸೆದ ವಕೀಲನನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದು ಹಾಲ್‌ನಿಂದ ಹೊರಗೆ ಎಳೆದೊಯ್ದರು.

ಇದರಿಂದ ವಿಚಲಿತಗೊಳ್ಳದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು, ನಾನು ಇಂತಹ ಘಟನೆಯಿಂದ ವಿಚಲಿತನಾಗುವುದಿಲ್ಲ. ನನ್ನನ್ನು ಅವಮಾನಿಸಿದರೆ ನಾನು ಹೆದರಿ ಕೂರುವುದಿಲ್ಲ. ಸಂವಿಧಾನಬದ್ಧವಾಗಿ ಕಾನೂನು ಎತ್ತಿ ಹಿಡಿಯುತ್ತೇನೆ ಎಂದು ವಿಚಾರಣೆ ಸಂದರ್ಭದಲ್ಲೇ ಹೇಳಿದರು.

ಇದರಿಂದ ವಿಚಲಿತರಾಗಬೇಡಿ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ವಿಚಾರಣೆಯನ್ನು ಮುಂದುವರೆಸಿ ಎಂದು ತಮ ಸಹೋದ್ಯೋಗಿ ನ್ಯಾಯಾಧೀಶರಿಗೆ ಸೂಚಿಸಿದರು. ಹಾಲ್‌ನಿಂದ ವಕೀಲನನ್ನು ಎಳೆದೊಯ್ಯುತ್ತಿದ್ದಾಗ, ಸನಾತನ ಧರ್ಮವನ್ನು ಅವಮಾನಿಸಿದರೆ ಸಹಿಸುವುದಿಲ್ಲ ಎಂದು ಕೂಗಾಡುತ್ತಿದ್ದ ಆತನ ಬಾಯಿಯನ್ನು ಬಲವಂತವಾಗಿ ಮುಚ್ಚಿ ಹೊರಗೆ ಕರೆದೊಯ್ದರು. ಇದೀಗ ವಕೀಲನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಶೂ ಎಸೆದ ವಕೀಲನನ್ನು ರೋಹಿತ್‌ ಪಾಂಡೆ ಎಂದು ಗುರುತಿಸಲಾಗಿದೆ. ಈತ 2011ರಿಂದ ಬಾರ್‌ ಅಸೋಸಿಯೇಷನ್‌ನ ಸದಸ್ಯ ಎನ್ನಲಾಗಿದೆ. ಸನಾತನ ಧರ್ಮದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಅಗೌರವವಾಗಿ ಮಾತನಾಡಿದ್ದಾರೆ. ಇದನ್ನು ನಾನು ಸಹಿಸುವುದಿಲ್ಲ. ಅವರ ಮೇಲೆ ಇದ್ದ ನಂಬಿಕೆ ಹೋಗಿದೆ. ನ್ಯಾಯಪೀಠದಲ್ಲಿ ಕುಳಿತು ಒಂದು ಧರ್ಮದ ಬಗ್ಗೆ ಮಾತನಾಡುವುದು ಸರಿಯೇ ಎಂದು ಆತ ಹಾಲ್‌ನಲ್ಲೇ ಕೂಗಾಡಿದ.

ಏನಿದು ವಿವಾದ?: ಮಧ್ಯಪ್ರದೇಶದ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣು ದೇವಸ್ಥಾನವನ್ನು ಪುನರ್‌ ನಿರ್ಮಾಣ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠ ವಜಾಗೊಳಿಸಿ, ಇದು ಸಂಪೂರ್ಣವಾಗಿ ಪ್ರಚಾರ ಪಡೆಯುವ ಹಿತಾಸಕ್ತಿಯ ಅರ್ಜಿಯಾಗಿದೆ. ನಿಮಗೆ ಏನಾದರೂ ಬೇಕಾದರೆ ದೇವರನ್ನೇ ಈಗ ಏನಾದರೂ ಕೇಳಿ. ನೀವು ವಿಷ್ಣುವಿನ ಕಟ್ಟಾ ಭಕ್ತರು ಎಂದು ಹೇಳುತ್ತೀರಿ. ಈಗಲೇ ಅಲ್ಲಿಗೆ ಹೋಗಿ ಪ್ರಾರ್ಥಿಸಿರಿ ಎಂದು ಗವಾಯಿ ಹೇಳಿದ್ದರು.

ಮುಖ್ಯ ನ್ಯಾಯಮೂರ್ತಿಗಳ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೆಲವರು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದರು. ಆ ಅರ್ಜಿ ವಿಚಾರಣೆ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ. ಇನ್ನು ಪ್ರಕರಣದ ಕುರಿತು ಭದ್ರತಾ ಅಧಿಕಾರಿಗಳು, ಸುಪ್ರೀಂ ಕೋರ್ಟ್‌ ಉಪ ಪೊಲೀಸ್‌‍ ಆಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿ ವಕೀಲನನ್ನು ವಿಚಾರಣೆಗೆ ಒಳಪಡಿಸಲು ಮುಖ್ಯ ಆಯುಕ್ತರಿಗೆ ಮನವಿ ಮಾಡಲಿದ್ದಾರೆ.

ಬೆಂಗಳೂರು : ಕಾರು ರಿವರ್ಸ್‌ ಪಡೆಯುವಾಗ ಚಕ್ರಕ್ಕೆ ಸಿಲುಕಿ 11 ತಿಂಗಳ ಮಗು ಸಾವು

ಬೆಂಗಳೂರು,ಅ.6-ಮಗು ಇರುವುದು ಗಮನಿಸದೆ ಕಾರನ್ನು ಮನೆ ಮಾಲೀಕ ರಿವರ್ಸ್‌ ಪಡೆಯುವಾಗ ಕಾರು ಹರಿದು 11 ತಿಂಗಳ ಮಗು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ರಸ್ತೆಯ ನೈಸ್‌‍ ರೋಡ್‌ ಜಂಕ್ಷನ್‌ ಬಳಿ ಇರುವ ಸ್ವಾಮಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇರುವ ಕುಣಿಗಲ್‌ ಮೂಲದ ಕುಟುಂಬದ ಅಜಾನ್‌ (11 ತಿಂಗಳು) ಎಂಬ ಮಗು ಮೃತಪಟ್ಟಿದೆ.ಸ್ವಾಮಿ ಎಂಬುವವರು ನಾಲ್ಕೈದು ಮನೆಗಳನ್ನು ಬಾಡಿಗೆಗೆ ನೀಡಿದ್ದು, ಒಂದು ಮನೆಯಲ್ಲಿ ಅವರು ವಾಸವಿದ್ದಾರೆ.

ಕಳೆದ ವಾರವಷ್ಟೆ ಕುಣಿಗಲ್‌ನಿಂದ ಇವರ ಮನೆಗೆ ಕುಟುಂಬವೊಂದು ಬಾಡಿಗೆಗೆ ಬಂದಿದ್ದಾರೆ. ಈ ಕುಟುಂಬದ ಮಗುವೇ ಅಜಾನ್‌.ಇಂದು ಬೆಳಗ್ಗೆ 9.45 ರ ಸುಮಾರಿನಲ್ಲಿ ಕಾಪೌಂಡ್‌ನಿಂದ ಸ್ವಾಮಿ ಕಾರು ಹೊರ ತೆಗೆಯುತ್ತಿದ್ದಾಗ ಬಾಡಿಗೆಗೆ ಇದ್ದ ಕುಟುಂಬದ ಈ ಮಗು ಮನೆ ಹೊರಗೆ ಬಂದಿದೆ. ಇದು ಸ್ವಾಮಿಯವರ ಗಮನಕ್ಕೆ ಬಂದಿಲ್ಲ.

ಕಾರು ರಿವರ್ಸ್‌ ಪಡೆಯುತ್ತಿದ್ದಾಗ ಮಗುವಿನ ಮೇಲೆ ಕಾರು ಹರಿದಿದೆ. ತಕ್ಷಣ ಸ್ಥಳೀಯರು ಗಮನಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೂವರು ಐಎಎಸ್‌‍ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು,ಅ.6- ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ.ತ್ರಿಲೋಕ್‌ಚಂದ್ರ ಕೆ.ವಿ ಸೇರಿದಂತೆ ಮೂವರು ಐಎಎಸ್‌‍ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸಲಾ ಕೆ. ಫಾತೀಂ ಅವರ ವರ್ಗಾವನೆಯಿಂದ ತೆರವಾಗಿದ್ದ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಹುದ್ದೆಗೆ ತ್ರಿಲೋಕಚಂದ್ರ ಅವರನ್ನು ವರ್ಗಾಯಿಸಲಾಗಿದೆ.

ಸುರಲ್ಕರ್‌ ವಿಕಾಸ್‌‍ ಕಿಶೋರ್‌ ಅವರನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ ಹುದ್ದೆಯಿಂದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿದೆ.
ಜೊತೆಗೆ ರಾಮಚಂದ್ರನ್‌ ಆರ್‌. ಅವರ ವರ್ಗಾವಣೆಯಿಂದ ತೆರವಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೊಣೆಗಾರಿಕೆಯನ್ನು ಸುರಲ್ಕರ್‌ ಅವರಿಗೆ ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.

ಅಲ್ಲದೆ ಸುರಲ್ಕರ್‌ ಅವರಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆರೋಗ್ಯ ಮತ್ತು ಶಿಕ್ಷಣ) ಹುದ್ದೆಯ ಹೊಣೆಗಾರಿಕೆಯನ್ನೂ ನೀಡಲಾಗಿದೆ. ಇವರಿಗೆ ಒಟ್ಟು ಮೂರು ಪ್ರಮುಖ ಹುದ್ದೆಗಳ ಜವಬ್ದಾರಿ ವಹಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಶೇ.80 ರಷ್ಟು ಸಮೀಕ್ಷೆ ಮುಕ್ತಾಯ, ಅವಧಿ ವಿಸ್ತರಣೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ : ಸಚಿವ ಪರಮೇಶ್ವರ್‌

ಬೆಂಗಳೂರು, ಅ.6- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ. 80 ರಷ್ಟು ಮುಗಿದಿದ್ದು ಬಾಕಿ ಸಮೀಕ್ಷೆಗಾಗಿ ಇನ್ನೂ ಮೂರ್ನಾಲ್ಕು ದಿನ ಅವಧಿ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಬೇಕು. ಅನಗತ್ಯವಾಗಿ ಗೊಂದಲ ಮೂಡಿಸಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರಿಗೆ ಸಲಹೆ ನೀಡಿದರು.ಸಮೀಕ್ಷೆ ಹಲವಾರು ಜಿಲ್ಲೆಗಳಲ್ಲಿ ನಾನಾ ರೀತಿಯಲ್ಲಿ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 70ರಷ್ಟು, 50 ರಷ್ಟು, 60 ರಷ್ಟು ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಹುತೇಕ ಮುಗಿಯುವ ಹಂತದಲ್ಲಿದೆ.

ರಾಜ್ಯದ ಸರಾಸರಿ ಪರಿಗಣಿಸುವುದಾದರೆ ಶೇ.20 ರಿಂದ 25ರಷ್ಟು ಬಾಕಿಯಿರುವ ಸಾಧ್ಯತೆ ಇದೆ. ನಾಳೆ ಅ. 7ಕ್ಕೆ ಸಮೀಕ್ಷೆ ಪೂರ್ಣಗೊಳಿಸಲು ಗಡುವು ನಿಗದಿ ಪಡಿಸಲಾಗಿದ್ದು, ಅದು ನಾಳೆಗೆ ಮುಗಿಯುತ್ತಿದೆ. ಇನ್ನೂ ನಾಲ್ಕು ದಿನ ಅವಧಿ ವಿಸ್ತರಣೆ ಮಾಡಿದರೆ, ಸಮೀಕ್ಷೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಸಂಜೆ ವೇಳೆಗೆ ವಾಪಸ್‌‍ ಬರಲಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಜಿಲ್ಲಾವಾರು ಮಾಹಿತಿ ಪಡೆದು ಅವಧಿ ವಿಸ್ತರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿರುವುದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ಷೇಪ ವ್ಯಕ್ತ ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಬ್ಬರಷ್ಟೇ ಅಲ್ಲ, ನಮಗೂ ಕೆಲವು ವಿಚಾರಗಳ ಬಗ್ಗೆ ಅಸಮಾಧಾನಗಳಿವೆ.ಸಮೀಕ್ಷೆ ನಡೆಸುವಾಗ ಸಣ್ಣ ಪುಟ್ಟ ಗೊಂದಲಗಳಾಗುತ್ತವೆ. ಅದರ ಹೊರತಾಗಿಯೂ ಎಲ್ಲರೂ ಸಹಕಾರ ನೀಡಬೇಕು. ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಕಾಂತರಾಜು ಆಯೋಗದ ಸಮೀಕ್ಷೆ ನಡೆಸುವಾಗಿನ ಅನುಭವಗಳನ್ನು ಆಧರಿಸಿ, ಈ ಬಾರಿ ಕ್ರಮ ಕೈಗೊಂಡಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದಿಲ್ಲ ಎಂದು ಹೇಳಿದರು.ಗ್ರೇಟರ್‌ ಬೆಂಗಳೂರನ್ನು ತುಮಕೂರಿಗೆ ವಿಸ್ತರಣೆ ಮಾಡುವ ಬದಲಾಗಿ ತುಮಕೂರನ್ನೇ ಗ್ರೇಟರ್‌ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

5 ವರ್ಷ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳಲ್ಲಿನ ಚರ್ಚೆಯಿಂದಾಗಿ ಈ ವಿಚಾರ ಪ್ರಚಲಿತಕ್ಕೆ ಬರುತ್ತಿದೆ ಎಂದರು.

ತನಿಖೆ ಪ್ರಗತಿಯಲ್ಲಿ:
ಧರ್ಮಸ್ಥಳದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆ ಪ್ರಗತಿಯಲ್ಲಿದೆ. ಇಂತಿಷ್ಟೇ ಕಾಲಾವಧಿಯಲ್ಲಿ ವಿಚಾರಣೆ ಮುಗಿಸಿ ವರದಿ ಕೊಡಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಹಲವಾರು ಮಾದರಿಗಳನ್ನು ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದೆ. ಕೆಮಿಕಲ್‌ ಅನಾಲಿಸಿಸ್‌‍, ಡಿಎನ್‌ಎ ಪರೀಕ್ಷೆ ಸೇರಿದಂತೆ ನಾನಾ ರೀತಿಯ ಪ್ರಕ್ರಿಯೆಗಳಿವೆ. ಡಿಎನ್‌ಎ ಪರೀಕ್ಷೆಯಲ್ಲಿ ತರಾತುರಿ ವರದಿ ಪಡೆಯಲು ಕಷ್ಟಸಾಧ್ಯ. ಆದರೆ ಆದ್ಯತೆ ಮೇರೆಗೆ ವರದಿ ನೀಡಲು ಎಸ್‌‍ಎಫ್‌ಎಲ್‌ಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪೊಲೀಸ್‌‍ ಇಲಾಖೆಯ ಕಾನ್‌್ಸಟೆಬಲ್‌ ಮತ್ತು ಪಿಎಸ್‌‍ಐ ಹುದ್ದೆಗಳ ನೇಮಕಾತಿಯ ವೇಳೆ ಶಾಶ್ವತವಾಗಿ ವಯೋಮಿತಿಯನ್ನು ಸಡಿಲಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರ ಅದನ್ನು ಪರಿಶೀಲಿಸುತ್ತಿದೆ. ವಿವಿಧ ರಾಜ್ಯಗಳ ವರದಿ ಪಡೆದಿದ್ದು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ವಾರ ಅಥವಾ 10 ದಿನಗಳ ಒಳಗಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.ಈಗಾಗಲೇ ಮುಖ್ಯಮಂತ್ರಿ ಅವರು 3 ವರ್ಷಗಳಿಗೆ ಸೀಮಿತವಾಗಿ ವಯೋಮಿತಿ ಸಡಿಲಿಕೆ ಮಾಡಿದ್ದಾರೆ. ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.