Thursday, November 6, 2025
Home Blog Page 67

ಕೆಮ್ಮಿನ ಸಿರಪ್‌ ದುರಂತ : 14 ಮಕ್ಕಳು ಸಾವಿನ ಬಗ್ಗೆ ತನಿಖೆ ವೇಳೆ ಸ್ಪೋಟಕ ಅಂಶ ಬಹಿರಂಗ

ಭೋಪಾಲ್‌‍,ಅ.5-ಮಧ್ಯಪ್ರದೇಶದಲ್ಲಿ 14 ಮಕ್ಕಳು ಸಾವಿನ ಬಗ್ಗೆ ತನಿಖೆ ವೇಳೆ ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ನಲ್ಲಿ ಹೆಚ್ಚು ವಿಷಕಾರಿ ವಸ್ತು ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌‍ಸಿಒ) ಸುಮಾರು 6 ರಾಜ್ಯಗಳಲ್ಲಿ ಸಿರಪ್‌ಗಳು,ಮಾತ್ರೆ ಸೇರಿದಂತೆ 19 ಔಷಧಿಗಳ ಉತ್ಪಾದನಾ ಘಟಕಗಳಲ್ಲಿ ಅಪಾಯ ಆಧಾರಿತ ತಪಾಸಣೆಗಳನ್ನು ಪ್ರಾರಂಭಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿಯನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ಘೋಷಿಸಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ.

ಈ ಸಿರಪ್‌ ಕುಡಿದು ಮೂತ್ರಪಿಂಡ ವೈಫಲ್ಯದಿಂದಾಗಿ ಚಿಂದ್ವಾರ ಜಿಲ್ಲೆಯಲ್ಲಿ 14 ಮಕ್ಕಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇನ್ನು ನಾಗ್ಪುರದಲ್ಲಿ ದಾಖಲಾಗಿರುವ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು.

ಮೃತ ಮಕ್ಕಳ ಪೋಷಕರಿಗೆ ತಲಾ 4 ಲಕ್ಷ ರೂ ತಾತ್ಕಾಲಿಕ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಈಗಾಗಲೆ ಕೋಲ್ಡ್ರಿಫ್‌ ಮತ್ತು ಇನ್ನೊಂದು ಕೆಮ್ಮಿನ ಸಿರಪ್‌ ನೆಕ್ಸಾ-ಡಿಎಸ್‌‍ಮಾರಾಟವನ್ನು ನಿಷೇಧಿಸಿದೆ ಎಂದು ಎಸ್‌‍ಡಿಎಂ ಯಾದವ್‌ ಹೇಳಿದರು. ಕೋಲ್ಡ್ರಿಫ್‌ನ ಪರೀಕ್ಷಾ ವರದಿ ಬಂದಿದ್ದು ಆದರೆ ನೆಕ್ಸಾ-ಡಿಎಸ್‌‍ನ ವರದಿಗಾಗಿ ಕಾಯಲಾಗಿದೆ.

ತಮಿಳುನಾಡು ಔಷಧ ನಿಯಂತ್ರಣ ಅಧಿಕಾರಿಗಳು, ಅ.2 ರಂದು ತಮ್ಮ ವರದಿಯಲ್ಲಿ, ಕಾಂಚೀಪುರಂನ ಸ್ರೆಸನ್‌ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಕೋಲ್ಡ್ರಿಫ್‌ ಸಿರಪ್‌ ಮಾದರಿಯನ್ನು (ಬ್ಯಾಚ್‌ ಸಂಖ್ಯೆ -13; : ಮೇ 2025; ಅವಧಿ: ಏಪ್ರಿಲ್‌ 2027) ಕಲಬೆರಕೆ ಮಾಡಲಾಗಿದೆ ಎಂದು ಘೋಷಿಸಿದರು

ಲಭ್ಯವಿರುವ ಯಾವುದೇ ಸ್ಟಾಕ್‌ ಅನ್ನು ತಕ್ಷಣವೇ ವಶಪಡಿಸಿಕೊಳ್ಳಲು ಸೂಚನೆಗಳನ್ನು ನೀಡಿತು. ಸ್ರೆಸನ್‌ ಫಾರ್ಮಾಸ್ಯುಟಿಕಲ್‌್ಸ ತಯಾರಿಸಿದ ಇತರ ಉತ್ಪನ್ನಗಳನ್ನು ಪರೀಕ್ಷೆಯ ಬಾಕಿ ಇರುವಾಗ ಮಾರಾಟದಿಂದ ತೆಗೆದುಹಾಕುವಂತೆಯೂ ಆದೇಶಿಸಿತು. ಮಧ್ಯಪ್ರದೇಶವಲ್ಲದೆ ಮತ್ತು ರಾಜಸ್ಥಾನದಲ್ಲಿ ಮೂರು ಮಕ್ಕಳುಇದೇ ರೀತಿಯ ಸಾವುಗಳು ವರದಿಯಾಗಿದೆ. ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ, ಆದರೆ ಸಿರಪ್‌ನ ಕಲಬೆರಕೆ ಮತ್ತು ಮಾಲಿನ್ಯದ ಕುರಿತು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿವೆ.

ಕಾಂಗ್ರೆಸ್‌‍ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಅಹಿಂದ ಓಲೈಸಲು ಯತ್ನಿಸುತ್ತಿದೆ : ಬಿ.ವೈ.ರಾಘವೇಂದ್ರ

ಶಿವಮೊಗ್ಗ,ಅ.5-ರಾಜ್ಯದ ಕಾಂಗ್ರೆಸ್‌‍ ಸರ್ಕಾರ ಜಾತಿ ಗಣತಿ ಹೆಸರಿನಲ್ಲಿ ಅಹಿಂದವನ್ನು ಓಲೈಸಲು ಮುಂದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ,ಜಾತಿ ಸಮೀಕ್ಷೆ ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಕಾಂಗ್ರೆಸ್‌‍ ಸಚಿವರೇ ಈ ಸಮೀಕ್ಷೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು ಇನ್ನು . ರಾಜ್ಯ ಹೈಕೋರ್ಟ್‌ ಕೂಡ ಈ ಸಮೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೂ ಕಡ್ಡಾಯವಾಗಿ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ,ಜನರಿಗೂ ಇದರಲ್ಲಿ ಆಸಕ್ತಿ ಇಲ್ಲ ಎಂದು ಟೀಕಿಸಿದರು.

ಹೀಗಿದ್ದಾಗ ವಾಸ್ತವವಾಗಿ ಜಾತಿಗಣತಿ ಮಾಡಿ ಪ್ರಯೋಜನವೇನು ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನಿಸಿದ್ದರೆ.ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಅವರಿಗೇ ಚುನಾವಣೆಯಲ್ಲಿ ಟಿಕೇಟ್‌ ನೀಡದೆ ಸಂಸತ್‌ ಒಳಗೆ ಪ್ರವೇಶಿಸದಂತೆ ಕುತಂತ್ರ ಮಾಡಿದ್ದರು.

ಹಿಂದುಳಿದ ವರ್ಗಗಳ ಬಗ್ಗೆ ಕಾಕಾ ಕಾಲೇಕರ್‌ ವರದಿಯನ್ನು ಕಾಂಗ್ರೆಸ್‌‍ 40 ವರ್ಷಗಳ ಕಾಲ ಕತ್ತಲಲ್ಲಿಟ್ಟಿದ್ದು ಐತಿಹಾಸಿಕ ದ್ರೋಹ ಎಂದು ದೂರಿದರು.ಊಳುವವನೇ ಒಡೆಯ ಎಂಬ ಕಾನೂನನ್ನು ತಂದು ಹಿಂದುಳಿದವರ ಉನ್ನತಿಗೆ ಕಾರಣರಾದ ಡಿ.ದೇವರಾಜ್‌ ಅರಸು ಅವರನ್ನೇ ಪಕ್ಷದಿಂದ ಹೊರಗೆ ಹಾಕಿದ್ದು ಯಾರು,ಇತಿಹಾಸ ಮರೆತಿದ್ದಾರೆ ಎಂದು ಆರೋಪಿಸಿದರು.

ಬಿ.ಎಸ್‌‍.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಎಲ್ಲ ಜಾತಿಯವರಿಗೂ ಸಮಾನವಾಗಿ ಆರ್ಥಿಕ ಸೌಲಭ್ಯ ನೀಡಿದ್ದರು. ಅವರ ಬಗ್ಗೆ ಮಾತನಾಡುವ ಯೋಗ್ಯತೆ ಸಚಿವ ಮಧು ಬಂಗಾರಪ್ಪಗೆ ಇಲ್ಲ ಎಂದು ತಿರುಗೇಟು ನೀಡಿದರು.

ಮಡಿವಾಳ ಮಾಚೀದೇವ, ಉಪ್ಪಾರ, ಆರ್ಯವೈಶ್ಯ, ವಿಶ್ವಕರ್ಮ, ಅಂಬಿಗರ ಚೌಡಯ್ಯ, ಈಡಿಗ, ಸವಿತಾ ಸಮಾಜ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ ಅನುದಾನ ನೀಡಿದ ಬಿಎಸ್‌‍ವೈ ಸಂಗೋಳ್ಳಿ ರಾಯಣ್ಣ, ಕನಕದಾಸರ ಜನ್ಮಸ್ಥಳ ಬಾಡಾದ ಅಭಿವೃದ್ಧಿಗೆ ಅನುದಾನ ನೀಡಿದರೂ ಕಾಂಗ್ರೆಸ್‌‍ ಕೆಲಸ ಮಾಡಿರಲಿಲ್ಲ. ಇದಕ್ಕೆ ಬಿ.ಎಸ್‌‍. ಯಡಿಯೂರಪ್ಪನವರೇ ಬರಬೇಕಿತ್ತಾ ಎಂದು ತಿರುಗೇಟು ನೀಡಿದರು.

ಸರ್ವಸ್ಪರ್ಶಿ ಸರ್ವರಿಗೆ ಸಮಪಾಲು-ಸಮಬಾಳು ಆಡಳಿತ ನೀಡಿದ ಯಡಿಯೂರಪ್ಪನವರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಇನ್ನು ಟವರ್‌ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರ ಸುಮ್ಮನೆ ಕೂತಿಲ್ಲ. ಶಿವಮೊಗ್ಗ ಜಿಲ್ಲೆಗೆ ನೆಟ್‌ವರ್ಕ್‌ ಸಮಸ್ಯೆ ಇದ್ದಕಡೆ ನೂತನವಾಗಿ 90 ಟವರ್‌ಗಳನ್ನು ಈಗಾಗಲೇ ನೀಡಲಾಗಿದೆ ಮತ್ತು ಅವು ಕಾರ್ಯಾಚರಣೆ ಶುರುಮಾಡಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌‍.ಅರುಣ್‌‍, ಡಾ.ಧನಂಜಯ ಸರ್ಜಿ, ಪಕ್ಷದ ಜಿಲ್ಲಾಧ್ಯಕ್ಷ ಎನ್‌‍.ಕೆ.ಜಗದೀಶ್‌‍, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಚಂದ್ರಶೇಖರ ಇದ್ದರು.

ಸೆಪ್ಟೆಂಬರ್‌ನಲ್ಲಿ ಕುಸಿದ ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹ

ಬೆಂಗಳೂರು, ಅ.5-ರಾಜ್ಯದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ವಾಣಿಜ್ಯ ತೆರಿಗೆ ಸಂಗ್ರಹವು ಕಳೆದ ಆರು ತಿಂಗಳಲ್ಲಿ 53196.20 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ. ಆಗಸ್ಟ್‌ನಲ್ಲಿ ಗಣನೀಯ ಹೆಚ್ಚಳ ಕಂಡಿದ್ದ ಈ ತೆರಿಗೆ ಸಂಗ್ರಹವು ಸೆಪ್ಟೆಂಬರ್‌ ತಿಂಗಳಲ್ಲಿ ಇಳಿಕೆಯಾಗಿದೆ.

ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಸೆಪ್ಟೆಂಬರ್‌ ತಿಂಗಳಲ್ಲಿ 8891.63 ಕೋಟಿ ರೂ.ಗಳಷ್ಟು ಸಂಗ್ರಹವಾಗಿದೆ. ಇದು ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ 175.42 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಆದರೆ, ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಹೆಚ್ಚಳವಾಗಿದೆ.

ಸೆಪ್ಟೆಂಬರ್‌ನಲ್ಲಿ 6653.52 ಕೋಟಿ ರೂ. ಗಳಷ್ಟು ಸರಕು ಸೇವಾ ತೆರಿಗೆ, 2134.66 ಕೋಟಿ ರೂ. ಗಳಷ್ಟು ಕರ್ನಾಟಕ ಮಾರಾಟ ತೆರಿಗೆ ಹಾಗೂ 103.45 ಕೋಟಿ ರೂ.ಗಳಷ್ಟು ವೃತ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈ ಮೂರು ತೆರಿಗೆಗಳಲ್ಲಿ ಕಳೆದ ತಿಂಗಳಲ್ಲಿ ಇಳಿಕೆಯಾಗಿದೆ.
ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಿಎಸ್‌‍ಟಿ ಸ್ಲಾಬ್‌ಗಳನ್ನು ಪರಿಷ್ಕರಣೆ ಮಾಡಿ ಇಳಿಕೆ ಮಾಡಿದ ಪರಿಣಾಮ ತೆರಿಗೆ ಸಂಗ್ರಹದಲ್ಲಿ ಇಳಿಮುಖ ಆಗಿರಬಹುದು. ರಾಜ್ಯ ಸರ್ಕಾರವು ಸಹ ಜಿಎಸ್‌‍ಟಿ ಪರಿಷ್ಕರಣೆಯಿಂದ ರಾಜ್ಯಕ್ಕೆ ನಷ್ಟವಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.

ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 53196.20 ಕೋಟಿ ರೂ.ಗಳಷ್ಟು ಈ ಮೂರು ತೆರಿಗೆಗಳು ಸಂಗ್ರಹವಾಗಿವೆ. ಇದರಲ್ಲಿ 39132.12 ಕೋಟಿ ರೂ. ಸರಕು -ಸೇವಾ ತೆರಿಗೆ, 13275.18 ಕೋಟಿ ರೂ.ಗಳಷ್ಟು ಕರ್ನಾಟಕ ಮಾರಾಟ ತೆರಿಗೆ ಹಾಗೂ 788.90 ಕೋಟಿ ರೂ.ಗಳಷ್ಟು ವೃತ್ತಿ ತೆರಿಗೆ ಸೇರಿದೆ.ಕಳೆದ ಆರ್ಥಿಕ ಸಾಲಿನಲ್ಲಿ 102585.52 ಕೋಟಿ ರೂ.ಗಳಷ್ಟು ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ಸರ್ಕಾರ ಈ ವರ್ಷದಲ್ಲಿ ಇದಕ್ಕಿಂತಲ್ಲೂ ಅಧಿಕ ಪ್ರಮಾಣದ ತೆರಿಗೆ ಸಂಗ್ರಹದ ನಿರೀಕ್ಷೆಯನ್ನು ಹೊಂದಿದೆ.

ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್‌ ಸ್ಪರ್ಶ, ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ ಎಲ್ಲ ಸೌಲಭ್ಯ

ಹಾಸನ, ಅ.5- ವರ್ಷಕ್ಕೊಮೆ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಹಿಂದಿಗಿಂತಲೂ ಅದ್ಧೂರಿಯಾಗಿ ಆಯೋಜಿಸಲು ಜಿಲ್ಲಾಡಳಿತವು ಭರದ ಸಿದ್ಧತೆ ನಡೆಸುತ್ತಿದೆ.

ಅ.9ರಂದು ದೇವಾಲಯದ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23ರಂದು ಮುಚ್ಚಲಾಗುವುದು. ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಉಳಿದ ಎಲ್ಲಾ ದಿನಗಳಲ್ಲಿ ನೈವೇದ್ಯ ಸಮಯ ಹೊರತುಪಡಿಸಿ ಉಳಿದ ವೇಳೆಯಲ್ಲಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ತೊಂದರೆ ಆಗದಂತೆ ಫ್ಯಾನ್‌, ಗರ್ಭಗುಡಿ ಮುಂಭಾಗ ಎಸಿ, ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಮತ್ತು ಹೊರಗೆ ಹೂವಿನ ಅಲಂಕಾರ ಆಕರ್ಷಕವಾಗಿ ಮಾಡಲಾಗುತ್ತಿದೆ. ಭದ್ರತೆಗೆ ನೂರಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದ್ದು, ಬಿಗಿ ಪೊಲೀಸ್‌‍ ಬಂದೋಬ್ತ್‌‍ ಕೈಗೊಳ್ಳಲಾಗಿದೆ.
ಜಾತ್ರಾ ಅವಧಿಯಲ್ಲಿ ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಭಕ್ತರಿಗೆ ವಿಶೇಷ ಆಕರ್ಷಣೆಯಾಗಲಿವೆ.

ಪ್ರತಿ ವರ್ಷ ಲಕ್ಷಾಂತರ ಭಕ್ತರನ್ನು ಸೆಳೆಯುವ ಹಾಸನಾಂಬ ಜಾತ್ರಾ ಮಹೋತ್ಸವವು ಈ ಬಾರಿ ಹೆಚ್ಚುವರಿ ಭಕ್ತ ಸಮಾಗಮದ ನಿರೀಕ್ಷೆಯಲ್ಲಿದೆ. ಸಿದ್ಧತೆ ಹಾಗೂ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಈ ಬಾರಿ ಜಾತ್ರಾ ಉತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಭಕ್ತರಿಗೆ ಸುಗಮ ಮತ್ತು ಶ್ರದ್ಧಾಭರಿತ ದರ್ಶನ ಅನುಭವ ಲಭ್ಯವಾಗಲಿದೆ.

ಜಾತ್ರೆಯ ಯಶಸ್ಸಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮತ್ತು ಜಿಲ್ಲಾಧಿಕಾರಿ ಕೆ.ಎಸ್‌‍. ಲತಾಕುಮಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಈ ನಡುವೆ ದೇವಸ್ಥಾನಕ್ಕೆ ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡಿದೆ. ಆಹ್ವಾನ ಪತ್ರಿಕೆ ಹಂಚಿಕೆ, ಸ್ವಾಗತ ಕಮಾನು ನಿರ್ಮಾಣ, ನಗರದಾದ್ಯಂತ ಲೈಟಿಂಗ್‌ ಹಾಗೂ ಎಲ್‌‍ಇಡಿ ಅಳವಡಿಕೆ ಕಾರ್ಯ ಜೋರಾಗಿದೆ.

ಗೋಲ್ಡ್ ಪಾಸ್‌‍ ಜಾರಿ: ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿ ಇನ್ನಷ್ಟು ಜನ ಸೇರುವ ನಿರೀಕ್ಷೆ ಇದೆ. ನೂಕುನುಗ್ಗಲು ತಪ್ಪಿಸಲು ಜಿಲ್ಲಾಡಳಿತ ಹಾಗೂ ಪೊಲೀಸ್‌‍ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ವಿಶೇಷ ದರ್ಶನಕ್ಕಾಗಿ 300ರೂ. ಮತ್ತು 1000ರೂ.ಗಳ ಪಾಸ್‌‍ ವ್ಯವಸ್ಥೆ. ವಿಐಪಿ ಮತ್ತು ವಿವಿಐಪಿ ಪಾಸ್‌‍ಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಪಡಿಸಿ, ಮೊದಲ ಬಾರಿಗೆ ಗೋಲ್ಡ್‌‍ ಪಾಸ್‌‍ ಜಾರಿಗೊಂಡಿದೆ. ಒಂದು ಪಾಸ್‌‍ಗೆ ಒಬ್ಬರಿಗೆ ಮಾತ್ರ ಅವಕಾಶ. ದಿನಕ್ಕೆ ಎರಡು ಗಂಟೆ ಮಾತ್ರ ವಿಶೇಷ ದರ್ಶನಕ್ಕೆ ಅವಕಾಶ. ವೃದ್ಧರು ಮತ್ತು ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಸ್ತ್ರೋಕ್ತ ವಿಧಿ-ವಿಧಾನ:
ಅಶ್ವೀಜ ಮಾಸದ ಮೊದಲ ಗುರುವಾರ, ಅ.9ರಂದು ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಗರ್ಭಗುಡಿ ಸ್ವಚ್ಛತಾ ಕಾರ್ಯದ ಬಳಿಕ ಮಾರನೇ ದಿನ ಬೆಳಗ್ಗೆ 5 ಗಂಟೆಯಿಂದ ಭಕ್ತರಿಗೆ ದರ್ಶನ ಭಾಗ್ಯ ಲಭಿಸುತ್ತದೆ.

ಹಾಸನಾಂಬೆ ದರ್ಶನೋತ್ಸವಕ್ಕೆ ಹೈಟೆಕ್‌ ಸ್ಪರ್ಶ:
ಈ ಬಾರಿ ದೇವಿ ದರ್ಶನಕ್ಕೆ ಹೈಟೆಕ್‌ ಸ್ಪರ್ಶ ದೊರೆತಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಭಕ್ತರಿಗೆ ಅತ್ಯಾಧುನಿಕ ಆನ್‌ಲೈನ್‌ ಸೇವೆ ನೀಡುವ ಪ್ರಯತ್ನವಾಗಿ ದೇವಾಲಯ ಆಡಳಿತ ಮಂಡಳಿ ವಾಟ್ಸಾಪ್‌ ಚಾಟ್‌ಬಾಟ್‌ ವ್ಯವಸ್ಥೆ ಆರಂಭಿಸಿದೆ. 6366105589 ನಂಬರ್‌ಗೆ ವಾಟ್ಸಾಪ್‌ನಲ್ಲಿ ಹಾಯ್‌ ಮೆಸೇಜ್‌ ಕಳುಹಿಸಿದರೆ, ಭಕ್ತರಿಗೆ ದರ್ಶನ ಸಂಬಂಧಿತ ಎಲ್ಲಾ ಮಾಹಿತಿಗಳು ತಕ್ಷಣವೇ ಲಭ್ಯವಾಗಲಿದೆ.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ತುಂಬಿತುಳುಕುತ್ತಿರುವ ಪ್ರವಾಸಿತಾಣಗಳು, ದೇವಾಲಯಗಳು

ಬೆಂಗಳೂರು, ಅ.5- ದಸರಾ ರಜೆ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸಿ ತಾಣಗಳು ಹಾಗೂ ದೇವಾಲಯಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ.ಆಯುಧಪೂಜೆ, ವಿಜಯದಶಮಿ, ಹಾಗೂ ವಾರಾಂತ್ಯದ ರಜೆ ಸೆರಿ ಸಾಲು ಸಾಲು ರಜೆ ಬಂದಿರುವುದರಿಂದ ಜನರು ಪುಣ್ಯಕ್ಷೇತ್ರ ಹಾಗೂ ನೆಚ್ಚಿನ ತಾಣಗಳತ್ತ ಪ್ರವಾಸಕ್ಕೆ ತೆರಳಿ ಎಂಜಾಯ್‌ ಮಾಡುತ್ತಿದ್ದಾರೆ. ಹಬ್ಬ ಮುಗಿಸಿಕೊಂಡು ಕೆಲವರು ತಮ ತಮ ಊರುಗಳತ್ತ ಹೊಗಿದ್ದರೆ ಇನ್ನೂ ಕೆಲವರು ಮಕ್ಕಳಿಗೂ ಶಾಲೆ ರಜೆ ಇದೆ ಎಂದು ಪುಣ್ಯಕ್ಷೇತ್ರ ಹಾಗೂ ರಮಣೀಯ ಸ್ಥಳಗಳತ್ತ ತೆರಳಿದ್ದಾರೆ.

ಕೆಲಸದ ಒತ್ತಡ, ಸಂಚಾರ ದಟ್ಟಣೆಯಿಂದ ಬೇಸರವಾಗಿರುವ ಜನರು ಮೈಂಡ್‌ ರಿಲ್ಯಾಕ್‌್ಸ ಮಾಡಿಕೊಳ್ಳಲು ತಮ ಕುಟುಂಬದೊಂದಿಗೆ ಕೆಲ ದಿನ ನಗರದ ಜಂಜಾಟ ಬೇಡ ಎಂದು ಪ್ರವಾಸಕ್ಕೆ ತೆರಳಿದ್ದಾರೆ.

ಬಡವರ ಊಟಿ ಎಂದೇ ಹೆಸರಾದ ಕಾಫಿನಾಡು ಚಿಕ್ಕಮಗಳೂರು, ಮಡಿಕೇರಿ, ಕೊಡಗು, ಮೈಸೂರು, ಧರ್ಮಸ್ಥಳ, ಹಾಸನ, ಶೃಂಗೇರಿ, ಹೊರನಾಡು. ಗೋಕರ್ಣ, ಮುರುಡೇಶ್ವರ, ಕುಕ್ಕೆಸುಬ್ರಹಣ್ಯ, ಕಟೀಲು, ಮಂಗಳೂರು, ಉಡುಪಿ, ಬೆಲೂರು, ಹಳೇಬೀಡು, ಹಂಪಿ, ಮಂಗಳೂರು. ಮಂತ್ರಾಲಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು ದೇವಾಯಯಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.

ಇನ್ನು ಬೆಂಗಳೂರು ಸಮೀಪದ ನಂದಿಬೆಟ್ಟ, ಮೇಕೆದಾಟು, ಶಿವಗಂಗೆ, ದೇವರಾಯನದುರ್ಗ, ಗೊರವನಹಳ್ಳಿ ಸೇರಿದಂತೆ ಮತ್ತಿತರ ಸ್ಥಳಗಳಿಗೆ ಒನ್‌ ಡೇ ಟ್ರಿಪ್‌ ಕೂಡ ಹೋಗಿದ್ದಾರೆ. ಸೂರ್ಯೋದಯದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಕ್ಕೆ ಮುಂಜಾನೆಯೇ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಬೈಕ್‌, ಕಾರುಗಳಲ್ಲಿ ಬೆಂಗಳೂರಿಗರು ತಂಡೋಪತಂಡವಾಗಿ ತೆರಳಿದ್ದ ದೃಶ್ಯಗಳು ಕಂಡುಬಂದವು. ನಂದಿ ಬೆಟ್ಟದಲ್ಲಿ ಪ್ರಕೃತಿಯ ಸೌಂದರ್ಯ ಸವಿದ ನಂತರ ಸಮೀಪದ ಇಶಾ ಫೌಂಡೇಶನ್‌ಗೂ ಕೂಡ ಭೇಟಿ ನೀಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಹೊಟೇಲ್‌ಗಳಿಗೆ ಭಾರೀ ವ್ಯಾಪಾರ:
ಪ್ರವಾಸಿ ತಾಣಗಳಲ್ಲಿ ಎಲ್ಲಾ ಹೋಟೆಲ್‌, ರೂಂ, ಹೋಮ್‌ ಸ್ಟೇ, ರೆಸಾರ್ಟ್‌ಗಳು ಭರ್ತಿಯಾಗಿದ್ದು, ವ್ಯಾಪಾರ ಜೋರಾಗಿಯೇ ನಡೆದಿದೆ. ಬೆಂಗಳೂರು, ಹಾಸನ ಹೆದ್ದಾರಿಯಲ್ಲಿ ಬರುವ ಹೊಟೆಲ್‌ , ಸೇರಿದಂತೆ ರಾಜ್ಯದ ಪ್ರಮಖ ಹೆದ್ದಾರಿಗಳ ಬದಿಯಲ್ಲಿರುವ ಹೋಟೆಲ್‌ಗಳು ಪ್ರವಾಸಿಗರಿಂದ ತುಂಬಿದ್ದವು.

ನಾಳೆ ಸೋಮವಾರ ಕೆಲಸಕ್ಕೆ ಹೋಗಬೇಕೆಂದು ಕೆಲವರು ಲಗೇಜ್‌ಗಳನ್ನು ಪ್ಯಾಕ್‌ ಮಾಡಿಕೊಂಡು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಇನ್ನು ಊರಿಗೆ ತೆರಳಿದ್ದವರು ಸಂಜೆ ಮಳೆ ಹಾಗೂ ಟ್ರಾಫಿಕ್‌ ಜಾಮ್‌ ಆಗಲಿದೆ ಎಂದು ಇಂದು ಬೆಳಗ್ಗಯೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಸಂಜೆ ಏಕಕಾಲಕ್ಕೆ ಜನರು ಬರುವುದರಿಂದ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ. ಗೊರಗುಂಟೆಪಾಳ್ಯ ಹಾಗೂ ನೆಲಮಂಗಲದ ಕುಣಿಗಲ್‌ ಬೈಪಾಸ್‌‍ನಲ್ಲಿ ಇಂದು ಸಂಜೆ ಟ್ರಾಫಿಕ್‌ ಜಾಮ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಜನರು ಬದಲಿ ಮಾರ್ಗ ಅಥವಾ ಬೇಗ ಬಂದು ಬೆಂಗಳೂರು ಸೇರಿದರೆ ಒಳಿತು.ಸದಾ ವಾಹನಗಳಿಂದ ತುಂಬಿ ತುಳುಕುತ್ತಿದ್ದ ನಗರದ ರಸ್ತೆಗಳು ಕಳೆದ ನಾಲ್ಕು ದಿನಗಳಿಂದ ವಾಹನಗಳ ಸಂಚಾರ ವಿರಳವಾಗಿತ್ತು. ಇಂದು ಸಂಜೆ ಮತ್ತು ನಾಳೆ ಎಲ್ಲೆಲ್ಲೂ ಜಾಮ್‌ ಆಗಲಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-10-2025)

ನಿತ್ಯ ನೀತಿ : ಹಿಂದೆ ಜನರ ಬಟ್ಟೆಗಳು ಕೊಳೆಯಾಗಿರುತ್ತಿದ್ದವು. ಆದರೆ, ಮನಸ್ಸು ಸ್ವಚ್ಛವಾಗಿರುತ್ತಿತ್ತು. ಈಗ ಜನರ ಬಟ್ಟೆಗಳು ಸ್ವಚ್ಛವಾಗಿವೆ. ಆದರೆ, ಮನಸ್ಸು ಕೊಳೆಯಾಗಿವೆ.

ಪಂಚಾಂಗ : ಭಾನುವಾರ, 05-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು: ಸೌರ ಶರದ / ಮಾಸ: ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ತ್ರಯೋದಶಿ / ನಕ್ಷತ್ರ: ಶತಭಿಷಾ / ಯೋಗ: ಗಂಡ / ಕರಣ: ಗರಜೆ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.09
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾವನೆ ಬರಲಿದೆ. ಮನೆಯನ್ನು ಸಹ ಖರೀದಿಸಬಹುದು.
ವೃಷಭ: ಕಳೆದ ಕೆಲವು ದಿನಗಳಿಂದ ಎದುರಿಸುತ್ತಿದ್ದ ತೊಂದರೆಗಳು ಇಂದು ದೂರವಾಗಲಿವೆ.
ಮಿಥುನ: ಉದ್ಯಮ, ವೃತ್ತಿ, ಹಣಕಾಸು ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಯಶಸ್ಸು ಸಿಗಲಿದೆ.
ಕಟಕ: ಬೆನ್ನು ನೋವು ಮತ್ತು ಹಲ್ಲುಗಳ ಸಮಸ್ಯೆ ಇದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ.

ಸಿಂಹ: ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ವಿದ್ಯಾರ್ಥಿ ಗಳಿಗೆ ಉತ್ತಮವಾಗಿದೆ.
ಕನ್ಯಾ: ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಆದರೂ ವರ್ಗಾವಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ತುಲಾ: ಕೆಲಸದ ನಿಮಿತ್ತ ವಿವಿಧ ಸ್ಥಳಗಳಿಗೆ ಪ್ರಯಾಣಿ ಸಬೇಕಾಗಬಹುದು.
ವೃಶ್ಚಿಕ: ಸ್ಥಿರ ಸ್ವತ್ತುಗಳನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನವಾಗಿದೆ. ಹೊಸ ವಾಹನ ಖರೀದಿಸುವ ಅವಕಾಶವಿದೆ.

ಧನುಸ್ಸು: ವೈದ್ಯಕೀಯ ಕ್ಷೇತ್ರದಲ್ಲಿರುವವರು ಗುರಿ ಸಾ ಸಲು ಹೆಚ್ಚು ಪರಿಶ್ರಮ ಪಡುವುದರಿಂದ ಅವರಿಗೆ ಉತ್ತಮ ಫಲಿತಾಂಶ ಸಿಗಲಿದೆ.
ಮಕರ: ಧಾರ್ಮಿಕ ಕಾರ್ಯ ಮಾಡುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ದೊರೆಯಲಿದೆ.
ಕುಂಭ: ಸಂಗಾತಿಯೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮೀನ: ಬ್ಯಾಂಕಿಂಗ್‌ ಮತ್ತು ನಿರ್ವಹಣೆಗೆ ಸಂಬಂ ಸಿದವರು ಹೆಚ್ಚು ಶ್ರಮಿಸಬೇಕಾಗುತ್ತದೆ.

ಇಟಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ದಂಪತಿ ಸಾವು

ನವದೆಹಲಿ, ಅ.4- ಇಟಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಭಾರತೀಯ ಕುಟುಂಬ ಬಲಿಯಾಗಿದೆ. ಯುರೋಪಿಯನ್‌ ಪ್ರವಾಸದಲ್ಲಿ ಭೀಕರ ಅಪಘಾತಕ್ಕೆ ಬಲಿಯಾ ದಂಪತಿಯನ್ನು ನಾಗ್ಪುರ ಮೂಲದ ಹೋಟೆಲ್‌ ಉದ್ಯಮಿ ಜಾವೇದ್‌ ಅಖ್ತರ್‌ ಮತ್ತು ಅವರ ಪತ್ನಿ ನಾದಿರಾ ಗುಲ್ಶನ್‌ ಎಂದು ಗುರುತಿಸಲಾಗಿದೆ.

ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾವುಗಳನ್ನು ದೃಢಪಡಿಸಿದೆ ಮತ್ತು ಅವರು ತಮ್ಮ ಕುಟುಂಬ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದೆ.

55 ವರ್ಷದ ಅಖ್ತರ್‌ ಮಹಾರಾಷ್ಟ್ರದ ನಾಗ್ಪುರದ ಪ್ರಸಿದ್ಧ ಹೋಟೆಲ್‌ ಉದ್ಯಮಿ. ಅವರು ಮತ್ತು ಅವರ ಪತ್ನಿ ಗುಲ್ಶನ್‌ ತಮ್ಮ ಮೂವರು ಮಕ್ಕಳಾದ ಅಜೂರ್‌ ಅಖ್ತರ್‌ ಮತ್ತು 21 ವರ್ಷದ ಶಿಫಾ ಅಖ್ತರ್‌ ಮತ್ತು ಮಗ ಜಾಜೆಲ್‌ ಅಖ್ತರ್‌ ಅವರೊಂದಿಗೆ ಮಿನಿ ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದಾಗ ಇಟಲಿಯ ಗ್ರೊಸೆಟೊ ಬಳಿಯ ಔರೇಲಿಯಾ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಯಿತು.

ಅವರು ಒಂಬತ್ತು ಆಸನಗಳ ಮಿನಿಬಸ್‌‍ನಲ್ಲಿ ದೃಶ್ಯವೀಕ್ಷಣೆಯ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಏಷ್ಯನ್‌ ಮೂಲದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ ಮತ್ತು ಮಿನಿಬಸ್‌‍ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಗ್ಪುರ ದಂಪತಿಗಳು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಮಿನಿಬಸ್‌‍ ಚಾಲಕ ಮತ್ತು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದರು. ಅಪಘಾತದಲ್ಲಿ ಅವರ ಮಗಳು ಅಜೂರ್‌ ಅವರ ತಲೆಗೆ ತೀವ್ರ ಗಾಯಗಳಾಗಿವೆ. ಅವರನ್ನು ಸಿಯೆನಾದ ಲೀ ಸ್ಕಾಟ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ, ಆದರೆ ಶಿಫಾ ಮತ್ತು ಜಾಜೆಲ್‌ ಫ್ಲಾರೆನ್‌್ಸ ಮತ್ತು ಗ್ರೊಸೆಟೊ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಅಪಘಾತದ ನಂತರ ಪ್ರಜ್ಞೆ ಮರಳಿದ ಜಾಜೆಲ್‌ ಸ್ಥಳೀಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಹಾಯ ಕೋರಿದರು. ಅಗ್ನಿಶಾಮಕ ದಳದ ಎರಡು ತಂಡಗಳು ಗಾಯಾಳುಗಳನ್ನು ಅಂತಿಮವಾಗಿ ಅವರ ಧ್ವಂಸಗೊಂಡ ವಾಹನಗಳಿಂದ ಹೊರತೆಗೆದವು. ಗಾಯಗಳ ತೀವ್ರತೆಯನ್ನು ಪರಿಗಣಿಸಿ, ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ನಾಗ್ಪುರ ದಂಪತಿಗಳ ಸಾವಿಗೆ ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿತು ಮತ್ತು ಅವರ ಕುಟುಂಬಕ್ಕೆ ಸಹಾಯ ನೀಡುತ್ತಿದೆ ಎಂದು ಹೇಳಿದೆ.

ಬೆಂಗಳೂರಲ್ಲಿ ನಕಲಿ ನಂಬರ್‌ಪ್ಲೇಟ್‌ ವಾಹನಗಳ ಹಾವಳಿ

ಬೆಂಗಳೂರು,ಅ.4- ಕಳೆದ ರಾತ್ರಿ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.ನಗರದ 11 ವಿಭಾಗಗಳ ಎಲ್ಲಾ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವುದು ಹಾಗೂ ಕೆಲವು ವಾಹನಗಳಲ್ಲಿ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿರುವುದು ಕಂಡು ಬಂದಿದೆ.

ಈ ಕಾರ್ಯಾಚರಣೆಯಲ್ಲಿ ಮೂವರು ಹೆಚ್ಚುವರಿ ಪೊಲೀಸ್‌‍ ಆಯುಕ್ತರು, ಇಬ್ಬರು ಜಂಟಿ ಆಯುಕ್ತರು, 11 ವಿಭಾಗದ ಎಲ್ಲಾ ಡಿಸಿಪಿಗಳು ಪಾಲ್ಗೊಂಡಿದ್ದರು.ಮಹಾಲಯ ಅಮಾವಾಸ್ಯೆ ಹಿಂದಿನ ದಿನ ಇದೇ ರೀತಿ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು.

ಜೈಲಿನಲ್ಲಿ ದರ್ಶನ್‌ ಸ್ಥಿತಿ ಕಂಡು ಕಣ್ಣೀರಿಟ್ಟ ಪತ್ನಿ ವಿಜಯಲಕ್ಷ್ಮಿ

ಬೆಂಗಳೂರು,ಅ.4- ಜೈಲಿನಲ್ಲಿರುವ ಪತಿ ದರ್ಶನ್‌ ಪರಿಸ್ಥಿತಿ ಕಂಡು ಪತ್ನಿ ವಿಜಯಲಕ್ಷಿ ಕಣ್ಣೀರಿಟ್ಟಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರೀ ಜೈಲು ಸೇರಿರುವ ನಟ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ.

ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷಿ ಭೇಟಿ ನೀಡಿದ ಸಂದರ್ಭದಲ್ಲಿ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಕೂರಲು ಖುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ವ್ಯಾಯಾಮ, ನಡಿಗೆಗೆ ಅವಕಾಶ ಇಲ್ಲದೆ ಕಷ್ಟವಾಗುತ್ತಿದೆ ಎಂದು ದರ್ಶನ್‌ ಸಂಕಷ್ಟ ತೋಡಿಕೊಂಡಿದ್ದಾರೆ.

ಜೈಲಿಗೆ ಬಂದು ಗಂಟೆಗಟ್ಟಲೇ ಕಾಯ್ದು ಬಳಿಕ ದರ್ಶನ್‌ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್‌ ನಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನುಂದೆ ಜೈಲಿಗೆ ಬರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಜೈಲಿನಲ್ಲಿ ದರ್ಶನ್‌ ಜೊತೆ ಮಾತನಾಡಿ ಹೊರಬರುವಾಗ ಕಣ್ಣಿರು ಹಾಕಿದ್ದಾರೆ. ನಂತರ ಮಾಧ್ಯಮದವರನ್ನು ಮಾತನಾಡಿಸಲು ಹೋದಾಗಲು ಕೈಮುಗಿದು ಅಳುತ್ತಾ ಕಾರಿನಲ್ಲಿ ತೆರಳಿದ್ದಾರೆ.

11 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳು-ಕಾರು ಜಪ್ತಿ, ನಾಲ್ವರ ಬಂಧನ

ಬೆಂಗಳೂರು,ಅ.4- ನಗರದ ಪರಪ್ಪನ ಅಗ್ರಹಾರ ಹಾಗೂ ಕುಂಬಳಗೂಡು ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ, 11 .67 ಲಕ್ಷ ಮೌಲ್ಯದ 18 ದ್ವಿಚಕ್ರ ವಾಹನಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ:ಮನೆಗಳ ಮುಂದೆ ಹಾಗೂ ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಇಬ್ಬರನ್ನು ಬಂಧಿಸಿರುವ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು 6.50 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಕೃಷ್ಣಾರೆಡ್ಡಿ ಲೇಔಟ್‌ನ ನಿವಾಸಿಯೊಬ್ಬರು ತಮ್ಮ ಮನೆಯ ಮುಂಭಾಗ ರಾತ್ರಿ ದ್ವಿಚಕ್ರ ವಾಹನ ನಿಲ್ಲಿಸಿದ್ದು, ಬೆಳಗಾಗುವಷ್ಟರಲ್ಲಿ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಹುಸ್ಕೂರು ಹಣ್ಣಿನ ಮಾರ್ಕೆಟ್‌ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರನ್ನು ದ್ವಿಚಕ್ರ ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ ನಗರದ ವಿವಿಧ ಕಡೆಗಳಲ್ಲಿ ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಹಣ್ಣಿನ ಮಾರ್ಕೆಟ್‌ ಹಿಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪೊಲೀಸರು 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು 6.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಆರೋಪಿಗಳ ಬಂಧನದಿಂದ ಪರಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಕೋರಮಂಗಲ, ಸೂರ್ಯಸಿಟಿ, ಹೆಬ್ಬಗೋಡಿ ಠಾಣೆಯ ತಲಾ 1 ದ್ವಿಚಕ್ರ ವಾಹನ ಕಳವು ಪ್ರಕರಣ ಹಾಗೂ ಆವಲಹಳ್ಳಿಯ 2 ಪ್ರಕರಣಗಳು ಪತ್ತೆಹಚ್ಚುವಲ್ಲಿ ಇನ್‌್ಸಪೆಕ್ಟರ್‌ ಸತೀಶ್‌ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಕುಂಬಳಗೂಡು:ದ್ವಿಚಕ್ರ ವಾಹನ ಹಾಗೂ ಕಾರನ್ನು ಕಳ್ಳತನ ಮಾಡಿ ಓಡಾಡಿಕೊಂಡಿದ್ದ ಇಬ್ಬರನ್ನು ಕುಂಬಳಗೂಡು ಠಾಣೆ ಪೊಲೀಸರು ಬಂಧಿಸಿ, 5.17 ಲಕ್ಷ ರೂ. ಮೌಲ್ಯದ 7 ದ್ವಿಚಕ್ರ ವಾಹನ ಹಾಗೂ 1 ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಕುಂಬಳಗೂಡು, ತಲಘಟ್ಟಪುರ,ಕೊಡಿಗೆಹಳ್ಳಿ ಪೊಲೀಸ್‌‍ ಠಾಣೆಯ ಒಟ್ಟು 5 ದ್ವಿಚಕ್ರ ವಾಹನಗ ಕಳವು ಪ್ರಕರಣಗಳು ಪತ್ತೆ ಹಚ್ಚುವಲ್ಲಿ ಇನ್‌್ಸಪೆಕ್ಟರ್‌ ಮಂಜುನಾಥ ಜಿ ಹೂಗರ್‌ ನೇತೃತ್ವದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.