Friday, November 7, 2025
Home Blog Page 74

ತಿಮರೋಡಿ ಗಡೀಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು. ಸೆ.30- ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಹಾಗೂ ನಿಗೂಢವಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟ ನಡೆಸುತ್ತಿದ್ದ ಮಹೇಶ್‌ ತಿಮರೋಡಿ ಗಡಿಪಾರಿಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ತಮನ್ನು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿರುವುದನ್ನು ಪ್ರಶ್ನಿಸಿ ತಿಮರೋಡಿ ಪರ ವಕೀಲರು ಹೈಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ರಜಾಕಾಲೀನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರು ಗಡಿಪಾರಿಗೆ ತಡೆಯಾಜ್ಞೆ ನೀಡಿ ಆರೋಪಿ ವಿರುದ್ದ ಯಾವುದೇ ರೀತಿಯ ಬಲವಂತದ ಕ್ರಮ ಬೇಡ ಎಂದು ನಿರ್ದೇಶನ ನೀಡಿತು.

ಮುಂದಿನ ಅ.8ರವರೆಗೆ ಗಡಿಪಾರು ಮಾಡದಂತೆ ಸೂಚನೆ ನೀಡಿದ ನ್ಯಾಯಾಧೀಶರು ರಾಜ್ಯ ಗೃಹ ಇಲಾಖೆ ಪುತ್ತೂರು ಸಹಾಯಕ ಆಯುಕ್ತರು, ಭಂಟ್ವಾಳ ಉಪವಿಭಾಗದ ಉಪಪೊಲೀಸ್‌‍ ವರಿಷ್ಠಾಧಿಕಾರಿ ಮತ್ತು ಬೆಳ್ತಂಗಡಿ ಪೊಲೀಸ್‌‍ ಸಬ್‌ ಇನ್‌ಸ್ಪೆಕ್ಟರ್‌ ಅವರಿಗೂ ನೋಟಿಸ್‌‍ ಜಾರಿ ಮಾಡಿದೆ.

ತಮ ವಿರುದ್ಧ ಹೊರಡಿಸಿರು ಗಡಿಪಾರು ಆದೇಶವನ್ನು ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಆದೇಶ ಜಾರಿಗೆ ತಡೆ ನೀಡುವಂತೆ ತಿಮರೋಡಿ ಪರ ವಕೀಲರು ಮನವಿ ಮಾಡಿಕೊಂಡಿದ್ದರು.

ಪ್ರಕರಣದ ಹಿನ್ನಲೆ:
ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್‌‍ ಆದೇಶ ಹೊರಡಿಸಿದ್ದರು.
ಮಹೇಶ್‌ ತಿಮರೋಡಿ ವಿರುದ್ಧ ಸುಮಾರು 32 ವಿವಿಧ ಪ್ರಕರಣಗಳು ದಾಖಲಾಗಿದ್ದವು. ಹೀಗಾಗಿ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡುವಂತೆ ಆಗ್ರಹಗಳು ವ್ಯಕ್ತವಾಗಿದ್ದವು. ಮಂಗಳೂರಿನಿಂದ ರಾಯಚೂರಿನ ಮಾನ್ವಿ ತಾಲೂಕಿಗೆ ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿತ್ತು.

ಪೊಲೀಸರು ಅಥವಾ ನ್ಯಾಯಾಲಯದ ಸೂಚನೆಗಳು ಅಗತ್ಯವಿದ್ದಾಗ ಮಾತ್ರ ತಿಮರೋಡಿ ಈ ಜಿಲ್ಲೆಯನ್ನು ಪ್ರವೇಶಿಸಬಹುದು. ಪೊಲೀಸರ ಪರವಾಗಿ ಬಂಟ್ವಾಳ ಉಪ ಪೊಲೀಸ್‌‍ ವರಿಷ್ಠಾಧಿಕಾರಿಮತ್ತು ತಿಮರೋಡಿ ಪರ ವಕೀಲರು ಈ ವಿಷಯಕ್ಕೆ ಕಾನೂನು ಪ್ರಾತಿನಿಧ್ಯವನ್ನು ಒದಗಿಸಿದ್ದು ಅಗತ್ಯವಿದ್ದರೆ ತಿಮರೋಡಿ ಸರ್ಕಾರ ಅಥವಾ ಹೈಕೋರ್ಟ್‌ನಲ್ಲಿ ವರ್ಗಾವಣೆ ಆದೇಶದ ಪುನರ್ವಿಮರ್ಶೆ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು.

ಕೆಲವು ದಿನಗಳ ಹಿಂದೆ, ಅವರ ಮನೆಯಲ್ಲಿ ಒಂದು ಚಾಕು ಮತ್ತು ಬಂದೂಕುಗಳು ಸಹ ಪತ್ತೆಯಾಗಿದ್ದವು. ಪೊಲೀಸರ ಪ್ರಕಾರ, ಬೆಳ್ತಂಗಡಿ ಪೊಲೀಸ್‌‍ ಠಾಣೆಯಲ್ಲಿ ತಿಮರೋಡಿ ವಿರುದ್ಧ
ನಾಲ್ಕು ಪ್ರಕರಣಗಳು ದಾಖಲಾಗಿತ್ತು. ಇವುಗಳ ಜೊತೆ ಬ್ರಹಾವರ ಪೊಲೀಸ್‌‍ ಠಾಣೆಯ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣವನ್ನು ಈಗಾಗಲೇ ಬೆಳ್ತಂಗಡಿಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಜಪ್ತಿ ಪ್ರಕ್ರಿಯೆಯ ಸಮಯದಲ್ಲಿ ತಿಮರೋಡಿ ಪೊಲೀಸರ ತಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಆರೋಪ ಎದುರಿಸುತ್ತಿದ್ದಾರೆ.

ಆಯುಧ ಪೂಜೆ ಹಾಗೂ ವಿಜಯದಶಮಿಗೆ ಖರೀದಿ ಭರಾಟೆ ಜೋರು

ಬೆಂಗಳೂರು,ಸೆ.30- ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂಭ್ರಮ ರಾಜ್ಯಾದ್ಯಂತ ಮನೆ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ.ಆಯುಧ ಪೂಜೆ ದಿನವಾದ ನಾಳೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಗುರುವಾರ ಸರ್ಕಾರಿ ರಜೆ ಇರುವುದರಿಂದ ಕೆಲವು ಕಚೇರಿಗಳು, ವ್ಯಾಪಾರ ಮಳಿಗೆಗಳು, ಗೋದಾಮು, ಕಾರ್ಖಾನೆಗಳಲ್ಲಿ ಇಂದೇ ಪೂಜೆ ನೆರವೇರಿಸಲಾಗಿದ್ದು, ಹೀಗಾಗಿ ಎರಡು ದಿನಗಳ ಮುಂಚಿತವಾಗಿಯೇ ಜನರು ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದ ದೃಶ್ಯಗಳು ಕಂಡುಬಂದವು.

ನಗರದ ಕೆ.ಆರ್‌.ಮಾರುಕಟ್ಟೆ, ಮಲ್ಲೇಶ್ವರಂ, ಯಶವಂತಪುರ, ಗಾಂಧಿಬಜಾರ್‌, ವಿಜಯನಗರ, ಉಲ್ಲಾಳ ಮುಖ್ಯರಸ್ತೆ, ಮಹಾಲಕ್ಷ್ಮಿ ಲೇ ಔಟ್‌, ರಾಜಾಜಿನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಹೂ-ಹಣ್ಣು, ಬಾಳೆಕಂದು, ನಿಂಬೆಹಣ್ಣು, ಬೂದುಕುಂಬಳಕಾಯಿ, ಕಡ್ಲೆಪುರಿ, ಸಿಹಿ ಪದಾರ್ಥಗಳ ಮಾರಾಟ ದೃಶ್ಯಗಳು ಕಂಡುಬಂದವು.

ವಾಹನಗಳಿಗೆ ಹಾಗೂ ಕಾರ್ಖಾನೆಗಳ ಯಂತ್ರೋಪಕರಣಗಳಿಗೆ ಹೆಚ್ಚಾಗಿ ಬಳಕೆಯಾಗುವ ಬೂದುಕುಂಬಳಕಾಯಿ ಬೆಲೆ ಹೆಚ್ಚಾಗಿದ್ದು, ಸಗಟು ದರದಲ್ಲಿ ಕೆಜಿಗೆ 25 ರೂ.ಗಳಿಂದ 30 ರೂ.ಗೆ ಮಾರಾಟವಾಗುತ್ತಿದ್ದರೆ, ಚಿಲ್ಲರೆಯಾಗಿ ಕೆಜಿಗೆ 40 ರಿಂದ 60 ರೂ. ಮಾರಾಟ ಮಾಡಲಾಗುತ್ತಿದೆ. ಇನ್ನೂ ಹಲವೆಡೆ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಲಾಗಿದೆ.

ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜ್ಯದ ವಿವಿಧೆಡೆಯಿಂದ ಲೋಡ್‌ಗಟ್ಟಲೆ ಬೂದುಕುಂಬಳಕಾಯಿ ಬಂದಿದೆ. ಬೇಡಿಕೆ ಹೆಚ್ಚಾದ್ದರಿಂದ ಬೆಲೆಯೂ ಸಹ ಹೆಚ್ಚಳವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಹೂಗಳ ಬೆಲೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಸೇವಂತಿ ಮಾರು 150 ರೂ., ಕೆಜಿಗೆ 200 ರೂ. ಚೆಂಡು ಹೂವಿನ ಬೆಲೆಯೂ ಸಹ ತುಸು ಏರಿಕೆಯಾಗಿದ್ದು, ಕೆಜಿಗೆ 50 ರೂ.ಗಳಿಂದ 60 ರೂ. , ಮಲ್ಲಿಗೆ 400 ರೂ.ಗಳಿಂದ 800 ರೂ., ಗುಲಾಬಿ 300 ರೂ., ಕನಕಾಂಬರ 1000 ರೂ., ಸುಗಂಧರಾಜ 300 ರೂ.ಗಳಿಗೆ ಮಾರಾಟವಾಗುತ್ತಿದೆ.

ಹಣ್ಣುಗಳ ಬೆಲೆಯೂ ಏರಿಕೆಯಾಗಿದ್ದು, ದಾಳಿಂಬೆ 150 ರೂ., ಸೇಬು 150 ರೂ.ಗಳಿಂದ 200, ಮೂಸಂಬೆ 80 ರಿಂದ 100, ಏಲಕ್ಕಿ ಬಾಳೆ 120 ರೂ., ಪಚ್ಚಬಾಳೆ 50 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಜೋಡಿ ಬಾಳೆಕಂದು ಗಾತ್ರಕ್ಕೆ ತಕ್ಕಂತೆ 50 ರೂ.ಗಳಿಂದ 500 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿದೆ.

ಆಯುಧ ಪೂಜೆ, ವಿಜಯದಶಮಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಂದ ಊರಿನತ್ತ ಹೊರಟಜನ, ಟ್ರಾಫಿಕ್ ಜಾಮ್

ಬೆಂಗಳೂರು,ಸೆ.30– ಆಯುಧ ಪೂಜೆ ಹಾಗೂ ವಿಜಯದಶಮಿ ರಜೆ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಪ್ರಯಾಣ ಬೆಳೆಸಿದ್ದು, ಕೆಎಸ್‌‍ಆರ್‌ಟಿಸಿ ಬಸ್‌‍ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿತ್ತು.

ನಾಳೆ ವಿಜಯದಶಮಿ, ಗುರುವಾರ ಆಯುಧಪೂಜೆಯ ನಿಮಿತ್ತ ಕಚೇರಿಗಳಿಗೆ ರಜೆ ಹಾಗೂ ಶಾಲಾ-ಕಾಲೇಜುಗಳಿಗೆ ದಸರಾ ರಜೆ ಇರುವುದರಿಂದ ಜನರು ತಮತಮ ಊರುಗಳು, ಪ್ರವಾಸಿತಾಣದತ್ತ ತೆರಳುತ್ತಿದ್ದಾರೆ.

ಕೆಎಸ್‌‍ಆರ್‌ಟಿಸಿಯಿಂದ ಹಬ್ಬದ ಅಂಗವಾಗಿ ಹೆಚ್ಚುವರಿ ಬಸ್‌‍ ಸೇವೆ ಕಲ್ಪಿಸಿದ್ದು, ಕೆಂಪೇಗೌಡ ಬಸ್‌‍ ನಿಲ್ದಾಣ, ವಿಜಯನಗರ, ಶಾಂತಿನಗರ, ಸ್ಯಾಟಲೈಟ್‌ ಸುತ್ತಮುತ್ತ ಬಸ್‌‍ ನಿಲ್ದಾಣಗಳಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ಕಾರ್ಯಾಚರಣೆ ಮಾಡುತ್ತಿದ್ದು, ಜನರು ಬಸ್‌‍ಗಳಿಗಾಗಿ ಕಾದು ನಿಂತಿದ್ದ ದೃಶ್ಯಗಳು ಕಂಡುಬಂದವು.

ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಬಳ್ಳಾರಿ, ರಾಯಚೂರು, ಮಡಿಕೇರಿ, ಧರ್ಮಸ್ಥಳ, ಕುಕ್ಕೆಸುಬ್ರಹಣ್ಯ, ಹೊರನಾಡು, ಶೃಂಗೇರಿ ಮತ್ತಿತರ ಸ್ಥಳಗಳಿಗೆ ಕೆಲ ಪ್ರಯಾಣಿಕರು ಮುಂಗಡವಾಗಿ ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಬುಕ್ಕಿಂಗ್‌ ಮಾಡಿಕೊಂಡಿದ್ದರೆ, ಇನ್ನು ಕೆಲವರು ಟಿಕೆಟ್‌ ಪಡೆದು ಪ್ರಯಾಣ ಬೆಳೆಸಿದ್ದಾರೆ. ಇದರ ಜೊತೆಗೆ ಖಾಸಗಿ ಟ್ರಾವೆಲ್‌್ಸ, ರೈಲುಗಳ ಮುಖಾಂತರವೂ ಸಹ ಬುಕ್ಕಿಂಗ್‌ ಮಾಡಿಕೊಂಡು ತೆರಳುತ್ತಿದ್ದಾರೆ. ಇನ್ನೂ ಕೆಲವರು ಇಂದು ಕಚೇರಿಗಳ ಪೂಜೆ ಮುಗಿಸಿಕೊಂಡು ಸ್ವಂತ ವಾಹನಗಳು ಮತ್ತು ಸಾರಿಗೆ ಬಸ್‌‍ಗಳಲ್ಲಿ ಪ್ರಯಾಣ ಬೆಳೆಸಲಿದ್ದಾರೆ.

ರಾತ್ರಿ ಕೆಂಪೇಗೌಡ ಬಸ್‌‍ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದು, ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಜೊತೆಗೆ ಪ್ರಮುಖ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ತುಮಕೂರು ರಸ್ತೆಯ ಯಶವಂತಪುರ, ಗೊರಗುಂಟೆಪಾಳ್ಯ, 8ನೇ ಮೈಲಿ, ಜಾಲಹಳ್ಳಿ ಕ್ರಾಸ್‌‍, ನೆಲಮಂಗಲ ಟೋಲ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.

ಸಾಮಾನ್ಯವಾಗಿ ಶುಕ್ರವಾರ ಮತ್ತು ಶನಿವಾರ ರಜೆ ಹಾಕಿಕೊಂಡರೆ ಮತ್ತೆ ಭಾನುವಾರ ಮತ್ತೊಂದು ರಜೆ ಸಿಗಲಿದ್ದು, ಇನ್ನು ಸೋಮವಾರವೇ ಜನರು ಬೆಂಗಳೂರಿನತ್ತ ಬರಲಿದ್ದಾರೆ.

ಅಮೆರಿಕದ ಒತ್ತಡದಿಂದ ಮುಂಬೈ ದಾಳಿ ನಂತರ ಪಾಕ್‌ ವಿರುದ್ಧ ಯುದ್ಧ ಮಾಡಲಿಲ್ಲ ; ಚಿದು

ನವದೆಹಲಿ, ಸೆ. ಹಿಂದಿನ 26/11 ಮುಂಬೈ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಪ್ರತೀಕಾರದ ಬಗ್ಗೆ ಯೋಚಿಸಿತ್ತು. ಆದರೆ ಅಮೆರಿಕ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಒತ್ತಡ ಮತ್ತು ಹಿರಿಯ ರಾಜತಾಂತ್ರಿಕರ ಸಲಹೆಯ ಮೇರೆಗೆ ದಾಳಿ ನಡೆಸಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್‌‍ ನಾಯಕ ಪಿ. ಚಿದಂಬರಂ ಹೇಳಿದ್ದಾರೆ.

ಪಹಲ್ಗಾಮ್‌ ದಾಳಿ ನಂತರ ಭಾರತ ಆರಂಭಿಸಿದ ಅಪರೇಷನ್‌ ಸಿಂಧೂರ ಕಾರ್ಯಚರಣೆಯನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ದೆಹಲಿ ಮತ್ತು ಇಸ್ಲಾಮಾಬಾದ್‌ಗೆ ಮನವಿ ಮಾಡಿಕೊಂಡ ನಂತರ ಯುದ್ಧ ನಿಲ್ಲಿಸಲಾಯಿತು ಎಂಬ ಹೇಳಿಕೆಯನ್ನು ಮೋದಿ ಸರ್ಕಾರ ನಿರಾಕರಿಸಿರುವ ಬೆನ್ನಲ್ಲೆ ಚಿದು ಅವರ ಈ ಹೇಳಿಕೆ ಬಂದಿದೆ.

ಆಗಿನ ಆಡಳಿತಾರೂಢ ಕಾಂಗ್ರೆಸ್‌‍ ನೇತೃತ್ವದ ಯುಪಿಎ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಚಿದಂಬರಂ ಹಿಂದಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮುಂಬೈ ದಾಳಿ ನಂತರ ಇಡೀ ಜಗತ್ತು ಯುದ್ಧ ಪ್ರಾರಂಭಿಸಬೇಡಿ ಎಂದು ಹೇಳಿತು. ಇದರಲ್ಲಿ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಜಾ ರೈಸ್‌‍ ಅವರೊಂದಿಗಿನ ಸಂಭಾಷಣೆಯೂ ಸೇರಿತ್ತು ಮತ್ತು ಸರ್ಕಾರವು ಸಶಸ್ತ್ರ ಪ್ರತಿಕ್ರಿಯೆಯನ್ನು ಮರುಪರಿಶೀಲಿಸುವಂತೆ ಮನವೊಲಿಸಿತು ಎಂದು ಕಾಂಗ್ರೆಸ್‌‍ ನಾಯಕ ಹೇಳಿಕೊಂಡಿದ್ದಾರೆ.

ನಾನು ಅಧಿಕಾರ ವಹಿಸಿಕೊಂಡ ಎರಡು ಅಥವಾ ಮೂರು ದಿನಗಳ ನಂತರ (ಕೊಂಡೋಲೀಜಾ ರೈಸ್‌‍ ಬಂದರು) ನನ್ನನ್ನು ಮತ್ತು ಪ್ರಧಾನಿಯನ್ನು (ಆಗ ಡಾ. ಮನಮೋಹನ್‌ ಸಿಂಗ್‌‍) ಭೇಟಿ ಮಾಡಿ. ದಯವಿಟ್ಟು ಪ್ರತಿಕ್ರಿಯಿಸಬೇಡಿ ಎಂದು ಹೇಳಿದರು. ಇದು ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಎಂದು ನಾನು ಹೇಳಿದೆ. (ಆದರೆ). ಅವರು ಪ್ರತೀಕಾರದ ಕ್ರಮ ಬೇಡ ಎಂದರು ಹೀಗಾಗಿ ಯುದ್ಧ ಕೈ ಬಿಡಲಾಯಿತು ಎಂದು ಹೇಳಿಕೊಂಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆ

ಬೆಂಗಳೂರು,ಸೆ.30- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಅ.5 ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ.ಬಂಗಾಳಕೊಲ್ಲಿಯಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವುದರ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಅಲ್ಲದೆ ಬಂಗಾಳಕೊಲ್ಲಿಯಲ್ಲಿ ನಾಳೆ ವೇಳೆಗೆ ವಾಯುಭಾರ ಕುಸಿತವೂ ಆಗಿರುವುದರಿಂದ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆಗಳಿವೆ.

ನಿನ್ನೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಹಗುರದಿಂದ ಸಾಧಾರಣ ಪ್ರಮಾಣದ ವ್ಯಾಪಕ ಮಳೆಯಾಗಿದೆ. ಪ್ರವಾಹ ಹಾಗೂ ಅತಿವೃಷ್ಟಿಗೆ ಒಳಗಾಗಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ.

ಬೀದರ್‌, ಕಲಬುರಗಿ ಜಿಲ್ಲೆಗಳಲ್ಲಿ ಮಳೆ ಬಿಡುವು ಕೊಟ್ಟಿದ್ದರೆ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಶಿವಮೊಗ್ಗ, ಯಾದಗಿರಿ, ಬಾಗಲಕೋಟೆ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಉಳಿದಂತೆ ಕೆಲವೆಡೆ ಮಾತ್ರ ಮಳೆಯಾಗಿದೆ.

ಬಂಗಾಳ ಉಪಸಾಗರದಲ್ಲಿ ನಾಳೆಯೊಳಗೆ ವಾಯುಭಾರ ಕುಸಿತವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮೇಲೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕ ಸಿ.ಎಸ್‌‍.ಪಾಟೀಲ್‌ ತಿಳಿಸಿದ್ದಾರೆ.

ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಇಂದು ಮತ್ತು ನಾಳೆ ಮಳೆಯಾಗಲಿದೆ. ಅ.2 ರಿಂದ 5 ರವರೆಗೆ ರಾಜ್ಯಾದ್ಯಂತ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಇಂದಿನಿಂದ ಅ.5 ರವರೆಗೆ ಕೆಲವೆಡೆ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ.

ಭೂತಾನ್‌ಗೆ ರೈಲು ಸಂಪರ್ಕ ಕಲ್ಪಿಸಲು 4 ಸಾವಿರ ಕೋಟಿ ವೆಚ್ಚದ ಯೋಜನೆ ಅನಾವರಗೊಳಿಸಿದ ಭಾರತ

ನವದೆಹಲಿ, ಸೆ. 30 : ಭಾರತವು 4,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಭೂತಾನ್‌ನೊಂದಿಗೆ ಎರಡು ಗಡಿಯಾಚೆಗಿನ ರೈಲು ಸಂಪರ್ಕಗಳನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿದೆ, ಇದು ಹಿಮಾಲಯ ರಾಷ್ಟ್ರದೊಂದಿಗೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ಹೆಚ್ಚಿಸಲು ಮೊದಲ ರೈಲ್ವೆ ಸಂಪರ್ಕ ಯೋಜನೆಗಳಲ್ಲಿ ಒಂದಾಗಿದೆ.

ಭೂತಾನ್‌ನ ಗೆಲೆಫು ಮತ್ತು ಸಮತ್ಸೆ ನಗರಗಳನ್ನು ಕ್ರಮವಾಗಿ ಅಸ್ಸಾಂನ ಕೊಕ್ರಝಾರ್‌ ಮತ್ತು ಪಶ್ಚಿಮ ಬಂಗಾಳದ ಬನಾರ್ಹತ್‌ನೊಂದಿಗೆ ಸಂಪರ್ಕಿಸುವ ಹೊಸ ರೈಲು ಯೋಜನೆಗಳ ವಿವರಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಶ್ರಿ ಬಹಿರಂಗಪಡಿಸಿದರು.

ಎರಡು ಯೋಜನೆಗಳ ಅಡಿಯಲ್ಲಿ, 89 ಕಿಮೀ ರೈಲು ಮಾರ್ಗಗಳನ್ನು ಹಾಕಲಾಗುವುದು ಮತ್ತು ಮುಂದಿನ ನಾಲ್ಕು ವರ್ಷಗಳಲ್ಲಿ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಭಾರತ ಮತ್ತು ಭೂತಾನ್‌ ಅಸಾಧಾರಣ ನಂಬಿಕೆ, ಪರಸ್ಪರ ಗೌರವ ಮತ್ತು ತಿಳುವಳಿಕೆಯ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ವೈಷ್ಣವ್‌ ಅವರ ಜಂಟಿ ಮಾಧ್ಯಮ ಸಭೆಯಲ್ಲಿ ಮಿಶ್ರಿ ಹೇಳಿದರು.
ಇದು ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳು, ವ್ಯಾಪಕವಾದ ಜನರಿಂದ ಜನರಿಗೆ ಸಂಬಂಧಗಳು ಮತ್ತು ನಮ್ಮ ಹಂಚಿಕೆಯ ಅಭಿವೃದ್ಧಿ ಮತ್ತು ಭದ್ರತಾ ಹಿತಾಸಕ್ತಿಗಳಲ್ಲಿ ಬೇರೂರಿರುವ ಸಂಬಂಧವಾಗಿದೆ ಎಂದು ಅವರು ಹೇಳಿದರು.

ಭೂತಾನ್‌ ಮೇಲೆ ಚೀನಾ ತನ್ನ ಕಾರ್ಯತಂತ್ರದ ಪ್ರಭಾವವನ್ನು ಹೆಚ್ಚಿಸುವ ಪ್ರಯತ್ನಗಳ ನಡುವೆ ಭಾರತದ ಯೋಜನೆಗಳ ಘೋಷಣೆ ಬಂದಿದೆ.ಬನಾರ್ಹತ್‌ ಮತ್ತು ಸಮತ್ಸೆ ಹಾಗೂ ಕೊಕ್ರಝಾರ್‌ ಮತ್ತು ಗೆಲೆಫು ನಡುವೆ ಎರಡು ಗಡಿಯಾಚೆಗಿನ ರೈಲು ಸಂಪರ್ಕಗಳನ್ನು ಸ್ಥಾಪಿಸಲು ಎರಡೂ ಸರ್ಕಾರಗಳು ಒಪ್ಪಿಕೊಂಡಿವೆ ಎಂದು ಮಿಶ್ರಿ ಹೇಳಿದರು.

ಇದು ಭೂತಾನ್‌ನೊಂದಿಗೆ ರೈಲು ಸಂಪರ್ಕ ಯೋಜನೆಗಳ ಮೊದಲ ಸೆಟ್‌ ಆಗಿರುತ್ತದೆ ಎಂದು ಅವರು ಹೇಳಿದರು.ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಭೂತಾನ್‌ ಭೇಟಿಯ ಸಂದರ್ಭದಲ್ಲಿ ರೈಲು ಸಂಪರ್ಕಗಳನ್ನು ಸ್ಥಾಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಕೊಕ್ರಝಾರ್‌ ಮತ್ತು ಬನಾರ್ಹತ್‌ನಲ್ಲಿರುವ ಭಾರತೀಯ ರೈಲ್ವೆ ಜಾಲದಿಂದ ಯೋಜನೆಗಳು ಹೊರಹೊಮ್ಮುತ್ತವೆ ಮತ್ತು ಯೋಜಿಸಲಾದ ಹೂಡಿಕೆ ಸುಮಾರು 4,033 ಕೋಟಿ ರೂ.ಗಳಷ್ಟಿದೆ ಎಂದು ವೈಷ್ಣವ್‌ ಹೇಳಿದರು.ಭೂತಾನ್‌ನ ಹೆಚ್ಚಿನ ವ್ಯಾಪಾರವು ಭಾರತೀಯ ಬಂದರುಗಳ ಮೂಲಕ ನಡೆಯುವುದರಿಂದ, ಭೂತಾನ್‌ನ ಆರ್ಥಿಕತೆ ಬೆಳೆಯಲು ಮತ್ತು ಜನರು ಜಾಗತಿಕ ಜಾಲಕ್ಕೆ ಉತ್ತಮ ಪ್ರವೇಶ ಮಾರ್ಗಗಳನ್ನು ಹೊಂದಲು ಉತ್ತಮ ತಡೆರಹಿತ ರೈಲು ಸಂಪರ್ಕವನ್ನು ಹೊಂದಿರುವುದು ಬಹಳ ಮುಖ್ಯವಾಗುತ್ತದೆ ಎಂದು ಸಚಿವರು ಹೇಳಿದರು.ಆದ್ದರಿಂದ ಈ ಸಂಪೂರ್ಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮತ್ತು ಸಮತ್ಸೆ ಮತ್ತು ಗೆಲೆಫು, ಭೂತಾನ್‌ನ ಆರ್ಥಿಕ ಬೆಳವಣಿಗೆಯನ್ನು ಯೋಜಿಸುತ್ತಿರುವ ರೀತಿಯಲ್ಲಿ ಅವು ಬಹಳ ಮುಖ್ಯವಾದ ಮಹತ್ವವನ್ನು ಹೊಂದಿವೆ ಎಂದು ಅವರು ಹೇಳಿದರು.

ಗರ್ಭಪಾತಕ್ಕೆ ಒತ್ತಾಯಿಸಿದ ಸ್ನೇಹಿತನಕತ್ತು ಸೀಳಿ ಕೊಂದ ಅಪ್ರಾಪ್ತೆ

ರಾಯ್ಪುರ(ಛತ್ತೀಸ್‌‍ಗಢ),ಸೆ.30- ಮೂರು ತಿಂಗಳ ಗರ್ಭಿಣಿಯಾಗಿದ್ದ 16 ವರ್ಷದ ಅಪ್ರಾಪ ಬಾಲಕಿಗೆ ಗರ್ಭಪಾತ ಮಾಡಿಸುವಂತೆ ಚಾಕು ತೋರಿಸಿ ಬೆದರಿಕೆ ಹಾಕಿದ್ದ ಗೆಳಯನನ್ನು ಅದೇ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಗಂಜ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಲಾಡ್ಜ್ ವೊಂದರಲ್ಲಿ ನಡೆದಿದ್ದು, ಮೂಲತಃ ಬಿಹಾರದ ಮೊಹಮದ್‌ ಸದ್ದಾಂ ಕೊಲೆಯಾಗಿರುವ ಸ್ನೇಹಿತ.ಈತ ಅಭನ್‌ಪುರದಲ್ಲಿ ಎಂಎಸ್‌‍ ಎಂಜಿನಿಯರಿಂಗ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ.

ಅಪ್ರಾಪ್ತ ವಯಸ್ಕಳು ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಲು ನಿರಾಕರಿಸಿದ್ದಳು. ಸದ್ದಾಂ ಆಕೆಯನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿ ಗರ್ಭಪಾತ ಮಾಡುವಂತೆ ಒತ್ತಾಯಿಸಿದ್ದಾನೆ. ಇದು ಇಬ್ಬರ ನಡುವೆ ಪದೇ ಪದೇ ಜಗಳಕ್ಕೆ ಕಾರಣವಾಗಿ, ಮಾರಕ ಕೃತ್ಯಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬಿಲಾಸ್‌‍ಪುರದ ಕೋನಿ ಪೊಲೀಸ್‌‍ ಠಾಣೆ ಪ್ರದೇಶದ ನಿವಾಸಿಯಾಗಿರುವ ಅಪ್ರಾಪ್ತೆಯು ಸೆಪ್ಟೆಂಬರ್‌ 28ರಂದು ತನ್ನ ಗೆಳೆಯ ಮೊಹಮದ್‌ ಸದ್ದಾಂನನ್ನು ಭೇಟಿಯಾಗಲು ರಾಯ್‌ಪುರಕ್ಕೆ ಹೋಗಿದ್ದಳು. ಬಳಿಕ ರಾಯ್‌ಪುರದ ರಾಮನ್‌ಮಂದಿರ ವಾರ್ಡ್‌ನ ಸತ್ಕರ್‌ ಗಾಲಿಯಲ್ಲಿರುವ ಏವನ್‌ ಲಾಡ್ಜ್ ನಲ್ಲಿ ಇಬ್ಬರು ತಂಗಿದ್ದರು.

ಗರ್ಭಿಣಿಯಾಗಿರುವ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ್ದ ಸದ್ದಾಂ ಚಾಕು ತೋರಿಸಿ ಬೆದರಿಕೆ ಹಾಕಿದ್ದ. ಅದೇ ದಿನ ರಾತ್ರಿ ಸದ್ದಾಂ ಲಾಡ್‌್ಜ ಕೋಣೆಯೊಳಗೆ ಮಲಗಿದ್ದಾಗ, ಬಾಲಕಿ ಅದೇ ಆಯುಧದಿಂದ ಆತನ ಕೊಯ್ದಿದ್ದಾಳೆ. ಕೋಣೆಯನ್ನು ಹೊರಗಿನಿಂದ ಲಾಕ್‌ ಮಾಡಿ, ಸದ್ದಾಂನ ಮೊಬೈಲ್‌ ಫೋನ್‌ ತೆಗೆದುಕೊಂಡು ಓಡಿಹೋದ ಆಕೆ ಲಾಡ್‌್ಜ ಕೋಣೆಯ ಕೀಲಿಯನ್ನು ಹತ್ತಿರದ ರೈಲ್ವೆ ಹಳಿಗಳಿಗೆ ಎಸೆದು ಮರುದಿನ ಬೆಳಿಗ್ಗೆ ಹದಿಹರೆಯದ ಹುಡುಗಿ ಬಿಲಾಸ್ಪುರಕ್ಕೆ ಹಿಂತಿರುಗಿದ್ದಾಳೆ.

ಬಾಲಕಿ ದಣಿದಿರುವುದನ್ನು ಕಂಡ ತಾಯಿ ವಿಚಾರಿಸಿದಾಗ ಕೊಲೆ ಮಾಡಿದ್ದಾಗಿ ತಿಳಿಸಿದ್ದಾಳೆ. ಆಘಾತಕ್ಕೊಳಗಾದ ಆಕೆ ತಕ್ಷಣ ಬಾಲಕಿಯೊಂದಿಗೆ ಕೋನಿ ಪೊಲೀಸ್‌‍ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಬಾಲಕಿ ನೀಡಿದ ಮಾಹಿತಿ ಮೇರೆಗೆ ರಾಯ್ಪುರ ಪೊಲೀಸರು ಏವನ್‌ ಲಾಡ್‌್ಜಗೆ ತೆರಳಿ ರಕ್ತದ ಮಡುನಲ್ಲಿ ಸತ್ತು ಬಿದಿದ್ದ ಸದ್ದಾಂನ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಬಿಹಾರದಲ್ಲಿರುವ ಸದ್ದಾಂನ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ. ಆತನ ಮೊಬೈಲ್‌ ನಮ ವಶದಲ್ಲಿದೆ, ಮತ್ತು ನಾವು ಆ ಸಂಖ್ಯೆಯ ಮೂಲಕ ಅವನ ಕುಟುಂಬ ಸದಸ್ಯರನ್ನು ಪತ್ತೆಹಚ್ಚುತ್ತಿದ್ದೇವೆ ಎಂದು ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಅಪ್ರಾಪ್ತ ಬಾಲಕಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದು ಉತ್ಸಾಹ ಮತ್ತು ಹತಾಶೆಯ ಅಪರಾಧವೆಂದು ತೋರುತ್ತಿದೆ. ತನಿಖೆಯಿಂದ ಇದು ಪೂರ್ವಯೋಜಿತ ಕೃತ್ಯವೇ ಅಥವಾ ಕ್ಷಣಿಕ ಕೃತ್ಯವೇ ಎಂಬುದನ್ನು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್‌1ಬಿ ವೀಸಾ ನಿಯಮ ಬದಲಾಗುವ ಸುಳಿವು ನೀಡಿದ ಲುಟ್ನಿಕ್‌

ವಾಷಿಂಗ್ಟನ್‌, ಸೆ. 30– ಮುಂದಿನ ಫೆಬ್ರವರಿ 2026 ರಿಂದ 100,000 ಡಾಲರ್‌ ಪಾವತಿಸಿ ಹೆಚ್‌-1ಬಿ ವೀಸಾ ಪಡೆಯುವ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳಾಗಲಿವೆ ಎಂದು ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್‌ ಲುಟ್ನಿಕ್‌ ಭವಿಷ್ಯ ನುಡಿದಿದ್ದಾರೆ.

ಕಡಿಮೆ ವೆಚ್ಚದ ತಂತ್ರಜ್ಞಾನ ಸಲಹೆಗಾರರನ್ನು ಅಮೆರಿಕಾಗೆ ಪ್ರವೇಶಿಸಲು ಮತ್ತು ಅವರ ಕುಟುಂಬಗಳನ್ನು ಕರೆತರಲು ಅನುಮತಿಸಲಾಗಿದೆ ಎಂಬುದು ಪ್ರಸ್ತುತ ವೀಸಾ ಪ್ರಕ್ರಿಯೆಯನ್ನು ಕೇವಲ ತಪ್ಪು ಎಂದು ಅವರು ಕರೆದಿದ್ದಾರೆ.

ಈ ಕಾರ್ಯವಿಧಾನ ಮತ್ತು ಪ್ರಕ್ರಿಯೆಯು 2026 ರ ಫೆಬ್ರವರಿಯಲ್ಲಿ ಜಾರಿಗೆ ಬರುತ್ತದೆ, ಆದ್ದರಿಂದ ನನ್ನ ಊಹೆಯಂತೆ, ಈಗಿನಿಂದ 2026 ರ ನಡುವೆ ಗಮನಾರ್ಹ ಸಂಖ್ಯೆಯ ಬದಲಾವಣೆಗಳು ಇರುತ್ತವೆ ಎಂದು ಲುಟ್ನಿಕ್‌ ನ್ಯೂಸ್‌‍ನೇಷನ್‌ಗೆ ತಿಳಿಸಿದ್ದಾರೆ.

ಡೊನಾಲ್‌್ಡ ಟ್ರಂಪ್‌ ನೇತೃತ್ವದ ಯುಎಸ್‌‍ ಆಡಳಿತವು ಇತ್ತೀಚೆಗೆ ನವೀಕರಣಗಳು ಸೇರಿದಂತೆ ಹೊಸ ಹೆಚ್‌-1ಬಿ ವೀಸಾ ಅರ್ಜಿಗಳ ಮೇಲೆ 100,000 ಡಾಲರ್‌ ಶುಲ್ಕವನ್ನು ವಿಧಿಸಿದೆ. ಅಸ್ತಿತ್ವದಲ್ಲಿರುವ ವೀಸಾ ಹೊಂದಿರುವವರು ಹೊಸ ವ್ಯವಸ್ಥೆಯ ಅಡಿಯಲ್ಲಿ ಬರುವುದಿಲ್ಲ ಮತ್ತು ಯಾವುದೇ ಶುಲ್ಕವಿಲ್ಲದೆ ಯುಎಸ್‌‍ ಒಳಗೆ ಮತ್ತು ಹೊರಗೆ ಚಲಿಸಬಹುದು ಎಂದು ಶ್ವೇತಭವನ ನಂತರ ಸ್ಪಷ್ಟಪಡಿಸಿತ್ತು.

ಟ್ರಂಪ್‌ ಹೆಚ್‌-1ಬಿ ಘೋಷಣೆಗೆ ಸಹಿ ಹಾಕಿದಾಗ ಓವಲ್‌ ಕಚೇರಿಯಲ್ಲಿ ಅವರ ಹಿಂದೆ ನಿಂತು ಲುಟ್ನಿಕ್‌, ನವೀಕರಣಗಳು ಮತ್ತು ಮೊದಲ ಬಾರಿಗೆ ಅರ್ಜಿದಾರರು ಸೇರಿದಂತೆ ಎಲ್ಲಾ ಹೆಚ್‌-1ಬಿ ವೀಸಾಗಳಿಗೆ 100,000 ವಾರ್ಷಿಕ ಶುಲ್ಕವಾಗಿರುತ್ತದೆ ಎಂದು ಹೇಳಿದ್ದರು.ಅರ್ಜಿಗಳ ಮೇಲೆ 100,000 ಶುಲ್ಕದೊಂದಿಗೆ, ಕನಿಷ್ಠ ಪಕ್ಷ ಈ ಜನರಿಂದ ತುಂಬಿ ತುಳುಕಬಾರದು ಎಂದು ಲುಟ್ನಿಕ್‌ ಹೇಳಿದರು.

ಆದರೆ ಮುಂದೆ ನೀವು ನಿಜವಾದ ಚಿಂತನಶೀಲ ಬದಲಾವಣೆಯನ್ನು ನೋಡಲಿದ್ದೀರಿ ಎಂದು ನಾನು ಭಾವಿಸುತ್ತೇನೆ. ಮತ್ತು ಅದು ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಹೆಚ್‌ಒನ್‌ಬಿ ವೀಸಾಗಳಿಗೆ ಲಾಟರಿ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಪ್ರಶ್ನೆಗಳಿದ್ದರೂ, ಫೆಬ್ರವರಿ 2026 ರ ವೇಳೆಗೆ ಅದೆಲ್ಲವೂ ಬಗೆಹರಿಯುತ್ತದೆ ಎಂದು ಅವರು ಹೇಳಿದರು.

ಮೊದಲು ಖರ್ಗೆ ಕುಟುಂಬಕ್ಕೆ ಪರಿಹಾರ ಕೊಡಿ : ವಿಜಯೇಂದ್ರ ವ್ಯಂಗ್ಯ

ಕಲಬುರ್ಗಿ,ಸೆ.30- ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಟ್ಟು ನಂತರ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಬಳಿ ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಸರ್ಕಾರ ಮೊದಲು ಅವರ ಕುಟುಂಬಕ್ಕೆ ಪರಿಹಾರ ಕೊಟ್ಟು ನಂತರ ಸಂತ್ರಸ್ಥರಿಗೆ ಕೊಡಲಿ ಎಂದು ಕುಹಕವಾಡಿದರು.

ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕು. ಒಣಭೂಮಿಗೆ ಎನ್‌ಡಿಆರೆಫ್‌ ನಿಯಮದಡಿ ಹೆಕ್ಟೇರ್‌ಗೆ 6 ಸಾವಿರ ರೂ. ಪರಿಹಾರ ಇತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್‌‍ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹ ಪೀಡಿತರಿಗೆ ರಾಜ್ಯದಿಂದ ಎನ್‌ಡಿಆರ್‌ಎಫ್‌ ಮಾದರಿಯ ನೆರವು ನೀಡಿದ್ದರು. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ. ಆ ಕಾಳಜಿಯನ್ನು ತೋರಿಸಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು.

ಹಿಂದೂ ಸಮಾಜ ವಿಭಜನೆ
ಜಾತಿ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ ಅವರು, ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಂದ್ರ ಸರಕಾರದ ಜಾತಿ ಸಮೀಕ್ಷೆಯನ್ನೂ ವಿರೋಧಿಸುತ್ತೀರಾ ಎಂದು ಕೇಳಿದ್ದಾರೆ. ಕಾಂತರಾಜು ವರದಿಗೆ 180 ಕೋಟಿ ಖರ್ಚು ಮಾಡಿದ್ದೀರಲ್ಲವೇ? ನೀವೇ ಮುಖ್ಯಮಂತ್ರಿ ಇದ್ದರೂ ಅದನ್ನು ಅನುಷ್ಠಾನ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದರು.

ಇವತ್ತು 500- 600 ಕೋಟಿ ಖರ್ಚು ಮಾಡಿ ಸಮೀಕ್ಷೆ ಮಾಡುವುದನ್ನು ಬಿಜೆಪಿ ವಿರೋಧಿಸಲು ಹೊರಟಿಲ್ಲ. ಸ್ವಾತಂತ್ರ್ಯಾ ನಂತರದಲ್ಲಿ ಹಿಂದಿನ ಕಾಂಗ್ರೆಸ್‌‍, ಯುಪಿಎ ಸರಕಾರವು ಜಾತಿ ಗಣತಿ ಕುರಿತು ಇಂಥ ದಿಟ್ಟ ನಿರ್ಧಾರ ಮಾಡಿರಲಿಲ್ಲ. ಮನಮೋಹನ್‌ ಸಿಂಗ್‌ ಅವರ ಸರಕಾರ ತೀರ್ಮಾನ ಮಾಡಿದರೂ ರಾಹುಲ್‌ ಗಾಂಧಿ ಅದನ್ನು ವಿರೋಧಿಸಿದ್ದರು ಎಂದು ದೂರಿದರು.

ರಾಜ್ಯ ಸರಕಾರವು ಜಾತಿ ಜನಗಣತಿ ನೆಪದಲ್ಲಿ ಪಗಡೆಯಾಟ ಮಾಡಲು ಹೊರಟಿದೆ. ಹಿಂದೂ ಸಮಾಜ ಒಡೆಯಲು ಹೊರಟಿದ್ದಾರೆ. ರಾಜ್ಯ ಸರಕಾರಕ್ಕೆ ಅಧಿಕಾರ ಇದೆಯೋ ಇಲ್ಲವೋ; ನಾವು ಜಾತಿ ಜನಗಣತಿಯನ್ನು ವಿರೋಧಿಸುತ್ತಿಲ್ಲ. ಸಿಎಂ ಇಚ್ಛಾಶಕ್ತಿ ಬಗ್ಗೆ ಗೊಂದಲ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಜನಗಣತಿ ಮಾಡಲು ಹೊರಟಿದ್ದಾರಾ ಅಥವಾ ಪ್ರಾಮಾಣಿಕವಾಗಿ ಹಿಂದುಳಿದ, ಶೋಷಿತ ಸಮುದಾಯಗಳಿಗೆ ನ್ಯಾಯ ಕೊಡಲೆಂದು ಇದನ್ನು ಮಾಡುತ್ತಿದ್ದಾರಾ? ಅವರಲ್ಲಿ ಪ್ರಾಮಾಣಿಕ ಕಳಕಳಿ ಕಾಣುತ್ತಿಲ್ಲ; ಜನರಲ್ಲೂ ಅನುಮಾನ ಹುಟ್ಟುಹಾಕಿದ್ದಾರೆ ಎಂದು ಆಕ್ಷೇಪಿಸಿದರು.

ಶೋಷಿತ- ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ನ್ಯಾಯ ಕೊಡಬೇಕೆಂಬ ಬದ್ಧತೆ ಬಿಜೆಪಿಗೆ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಮನಸ್ಥಿತಿಗೆ ನಮ ವಿರೋಧ ಇದೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.ಹೈಕೋರ್ಟ್‌ ಏನು ಆದೇಶ ಮಾಡಿದೆ? ಯಾಕೆ ಕೆಲಸಕ್ಕೆ ಬಾರದ ಪ್ರಶ್ನೆಗಳನ್ನು ಇಟ್ಟುಕೊಂಡಿದ್ದಾರೆ? 60ಕ್ಕೂ ಹೆಚ್ಚು ಪ್ರಶ್ನೆಗಳಿದ್ದು, ಇದರಲ್ಲಿ ಎಲ್ಲವೂ ಕಡ್ಡಾಯವಲ್ಲ ಎಂದು ರಾಜ್ಯ ಹೈಕೋರ್ಟ್‌ ತಿಳಿಸಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್‌‍.ಪಾಟೀಲ್‌ ನಡಹಳ್ಳಿ, ಮಾಜಿ ಸಂಸದ ಉಮೇಶ್‌ ಜಾಧವ್‌, ಶಾಸಕ ಬಸವರಾಜ ಮತ್ತಿಮೂಡ್‌, ವಿಧಾನಪರಿಷತ್‌ ಸದಸ್ಯರಾದ ಬಿ.ಜಿ.ಪಾಟೀಲ್‌, ಶಶಿಲ್‌ ನಮೋಶಿ, ಮಾಜಿ ಶಾಸಕರಾದ ಅಮರನಾಥ ಪಾಟೀಲ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಬಿಜೆಪಿ ಕಲಬುರಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್‌ ಬಿ. ಪಾಟೀಲ್‌, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್‌ ಬಗಲಿ ಹಾಗೂ ಮುಖಂಡರು ಇದ್ದರು.

ಜಾತಿ ಗಣತಿ ವಿಷಯದಲ್ಲಿ ಸರ್ಕಾರ ಮತ್ತು ‘ಕೈ’ಕಮಾಂಡ್‌ ಗೊಂದಲ ಮೂಡಿಸುತ್ತಿದೆ : ಕಾರಜೋಳ

ಕಲಬುರಗಿ,ಸೆ.30– ಜಾತಿ ಗಣತಿ ವಿಷಯದಲ್ಲಿ ನಾವು ಗೊಂದಲ ಸೃಷ್ಟಿಸುತ್ತಿಲ್ಲ.ಕಾಂಗ್ರೆಸ್‌‍ ಸರಕಾರ ಮತ್ತು ಅವರ ಹೈಕಮಾಂಡ್‌ ಗೊಂದಲ ಮೂಡಿಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್ಥಿಕ, ಶೈಕ್ಷಣಿಕ ಕಾಳಜಿ ಇದ್ದರೆ 2013ರಿಂದ 2018ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿದ್ದರು. ಕಾಂತರಾಜುರವರನ್ನು ನೇಮಿಸಿ ವರದಿ ತೆಗೆದುಕೊಂಡರು. 180 ಕೋಟಿ ಖರ್ಚು ಮಾಡಿದ ಆ ವರದಿ ಏನಾಗಿದೆ? ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ನಾವು ದಾರಿ ತಪ್ಪಿಸುತ್ತಿಲ್ಲ. ಸಿದ್ದರಾಮಯ್ಯನವರು- ಕಾಂಗ್ರೆಸ್‌‍ ಪಕ್ಷ ದಾರಿ ತಪ್ಪಿಸುತ್ತಿವೆ. ಆವತ್ತು ಜಾತಿಗಳ ಅಂಕಿ ಸಂಖ್ಯೆ ಬಿಡುಗಡೆ ಮಾಡಿದ್ದರು. ಗೌಪ್ಯವಾಗಿ ಇಡಬೇಕಾದ ಅಂಕಿ ಅಂಶವನ್ನು ಯಾಕೆ ಗೌಪ್ಯವಾಗಿಡಲಿಲ್ಲ? ಎಂದು ಪ್ರಶ್ನೆ ಮಾಡಿದರು.

ಕ್ರಿಶ್ಚಿಯನ್‌ ಲಿಂಗಾಯತರು ಇದ್ದಾರಾ? ಜೈನ ಪಂಚಮಸಾಲಿ ಇದ್ದಾರಾ? ಕ್ರಿಶ್ಚಿಯನ್‌ ದಲಿತರು ಇದ್ದಾರಾ? ಕ್ರಿಶ್ಚಿಯನ್‌ ದಲಿತರು ಎನ್ನಬೇಡಿ; ಯಾವುದೇ ವ್ಯಕ್ತಿ ಧರ್ಮಾಂತರ ಆದರೆ ಧರ್ಮಾಂತರ ಆದ ದಿನದಿಂದ ಅವನ ಪೂರ್ವಾಶ್ರಮದ ಹಂಗು ಇರುವುದಿಲ್ಲ; ಪೂರ್ವಾಶ್ರಮದ ಸಂಬಂಧ ಕಡಿದು ಹೋಗುತ್ತದೆ. ಧರ್ಮಾಂತರ ವಾದರೆ ಕ್ರಿಶ್ಚಿಯನ್‌ ಆದರೆ ಕ್ರಿಶ್ಚಿಯನ್‌, ಇಸ್ಲಾಂ ಆಗಿದ್ದರೆ ಇಸ್ಲಾಂ ಧರ್ಮ ಇರುತ್ತದೆ ಎಂದು ತಿಳಿಸಿದರು.