Thursday, November 6, 2025
Home Blog Page 82

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-09-2025)

ನಿತ್ಯ ನೀತಿ : ಸತ್ಯ ಹೇಳಲು ಯಾವತ್ತೂ ಹಿಂಜರಿಯಬಾರದು. ಇಂತಹ ಶಕ್ತಿ ಇದ್ದರೆ ಮಾತ್ರ ಬರಹಗಾರ ಒಬ್ಬ ಕಲಾವಿದನಾಗುತ್ತಾನೆ! – ಎಸ್‌.ಎಲ್‌.ಭೈರಪ್ಪ

ಪಂಚಾಂಗ : ಶನಿವಾರ, 27-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಅನುರಾಧಾ / ಯೋಗ: ಪ್ರೀತಿ / ಕರಣ: ಕೌಲವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.12
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದಿರುವುದು ಒಳಿತು.
ವೃಷಭ: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ನಿರಾಸಕ್ತಿ ಉಂಟಾಗಲಿದೆ.
ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಮಹಿಳೆಯರಿಗೆ ಯಶಸ್ಸು ಸಿಗಲಿದೆ.

ಕಟಕ: ಆರ್ಥಿಕವಾಗಿ ಪ್ರಗತಿ ಸಾ ಸುವಿರಿ. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಲಿದೆ.
ಸಿಂಹ: ಸಿನಿಮಾ ಕ್ಷೇತ್ರದಲ್ಲಿ ರುವವರಿಗೆ ಉತ್ತಮ ಅವಕಾಶಗಳು ದೊರೆಯಲಿವೆ.
ಕನ್ಯಾ: ಸಣ್ಣ ಕೈಗಾರಿಕೆ ವ್ಯಾಪಾರಿ ಗಳಿಗೆ ಲಾಭ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ.

ತುಲಾ: ನಿದ್ರಾಹೀನತೆ ಕಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು.
ವೃಶ್ಚಿಕ: ಸಾರ್ವಜನಿಕ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದೆ.
ಧನುಸ್ಸು: ಹೂವಿನ ವ್ಯಾಪಾರಿಗಳಿಗೆ ಆದಾಯ ವೃದ್ಧಿ ಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.

ಮಕರ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉತ್ತಮ ದಿನ.
ಕುಂಭ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಿ. ದಿನಾಂತ್ಯದಲ್ಲಿ ಆಯಾಸವಾಗಬಹುದು.
ಮೀನ: ರಾಜಕೀಯ, ಸಿನಿಮಾ ಕ್ಷೇತ್ರದಲ್ಲಿರುವವರು ಉತ್ತಮ ಫಲ ನಿರೀಕ್ಷಿಸಬಹುದು.

ಸೌಜನ್ಯ ಪ್ರಕರಣ ಮರು ತನಿಖೆಗೆ ಸಿಬಿಐಗೆ ಸ್ನೇಹಮಯಿ ಕೃಷ್ಣ ಮನವಿ

ಬೆಂಗಳೂರು, ಸೆ.26– ಧರ್ಮಸ್ಥಳದಲ್ಲಿನ ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಸಿಬಿಐಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
ಅಂಚೆ ಮೂಲಕ ದೂರು ರವಾನಿಸಿರುವ ಅವರು, 7 ದಿನಗಳ ಒಳಗಾಗಿ ತಮ ಪತ್ರಕ್ಕೆ ಪ್ರತಿಕ್ರಿಯಿಸಬೇಕು. ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

ಈವರೆಗೂ ನಾನು ಅನೇಕ ಪ್ರಕರಣಗಳಲ್ಲಿ ತನಿಖೆಯ ಲೋಪಗಳ ಬಗ್ಗೆ ನ್ಯಾಯಾಲಯಗಳ ಅನುಮತಿ ಪಡೆದು, ಹಿರಿಯ ಅಧಿಕಾರಿಗಳ ಅವಗಾಹನೆಗೆ ತಂದಿದ್ದೇನೆ. ಅದರದ ಆಧಾರದ ಮೇಲೆ ಕೆಲವು ಪ್ರಕರಣಗಳು ತನಿಖೆಯಾಗಿದ್ದು ಸಂತ್ರಸ್ಥರಿಗೆ ನ್ಯಾಯ ಸಿಕ್ಕಿದೆ. ನೈಜ ಅಪರಾಧಿಗಳ ಬಂಧನವಾಗಿದೆ ಎಂದು ಸ್ನೇಹಮಯಿ ಕೃಷ್ಣ ವಿವರಿಸಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಆಕೆಯ ಮಾವ ವಿಠಲಗೌಡನೇ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಸಾಧ್ಯತೆಗಳಿವೆ. ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋಗಳು ಹಾಗೂ ಲಭ್ಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬಳಿಕ ತಮಗೆ ಈ ಅಭಿಪ್ರಾಯ ಬಂದಿದೆ ಎಂದಿದ್ದಾರೆ.

ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಭಾಸ್ಕರ್‌ ರೈ ಬಂಧಿತ ಆರೋಪಿ ಸಂತೋಷ್‌ರಾವ್‌ನಿಂದ ಹೇಳಿಕೆ ಪಡೆದಿರುವುದನ್ನು ಗಮನಿಸುವುದಾದರೆ, ಸೌಜನ್ಯ ಶವ ಸಿಗುವ ಮುನ್ನವೇ ಸಂತೋಷ್‌ರಾವ್‌ ನನ್ನು ಬಂಧಿಸಲಾಗಿತ್ತು ಎಂದು ಕಂಡು ಬಂದಿದೆ.
ಒಂದು ಕೊಲೆ ಪ್ರಕರಣವನ್ನು ಸಮರ್ಥವಾಗಿ ತನಿಖೆ ನಡೆಸಲು ಬೇಕಾದ ಪರಿಣಿತಿ, ತರಬೇತಿ ಸ್ಥಳೀಯ ಪೊಲೀಸರಿಗೆ, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳಿಲ್ಲವೇ ಎಂದು ಸ್ನೇಹಮಹಿ ಕೃಷ್ಣ ಪ್ರಶ್ನಿಸಿದ್ದಾರೆ.

ಸೌಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಧರ್ಮಸ್ಥಳದ ಗೌರವವನ್ನು ಹಾಗೂ ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಲಾಗುತ್ತಿದೆ. ನನಗೆ ಲಭ್ಯವಾದ ಸಾಕ್ಷ್ಯಾಧಾರಗಳನ್ನು ಆಧರಿಸಿ ದಕ್ಷಣ ಕನ್ನಡ ಜಿಲ್ಲೆಯ ಎಸ್‌‍ಪಿ ಅವರಿಗೆ ಸೆ.8 ರಂದು ದೂರು ಅರ್ಜಿ ನೀಡಿದ್ದೆ. ಅದಕ್ಕೆ ಹಿಂಬರಹ ನೀಡಿರುವ ಎಸ್‌‍ಪಿ ಅವರು ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ವರ್ಗಾಹಿಸಲಾಗಿದ್ದು, ಕಡತವು ಸಿಬಿಐ ಕಚೇರಿಯಲ್ಲಿಯೇ ಇದೆ. ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಯು ಖುಲಾಸೆಯಾಗಿದೆ. ಮರು ತನಿಖೆಯ ಬಗ್ಗೆ ನ್ಯಾಯಾಲಯದಲ್ಲೇ ವ್ಯವಹರಿಸಬೇಕೆಂದು ತಿಳಿಸಿದ್ದಾರೆ.

ತಮ ದೂರು ಅರ್ಜಿಯನ್ನು ಪರಿಗಣಿಸಿ ಪ್ರಕರಣವನ್ನು ಮರು ತನಿಖೆಗೊಳಪಡಿಸಬೇಕು. ತಪ್ಪಿತಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಸ್ನೇಹಮಹಿ ಕೃಷ್ಣ ಸಿಬಿಐಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಾದ್ಯಂತ ವಾರದಲ್ಲಿ 2 ದಿನ ಪೊಲೀಸರ ವಿಶೇಷ ಗಸ್ತು

ಬೆಂಗಳೂರು,ಸೆ.26– ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದ್ದು, ವಾರದಲ್ಲಿ ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಮಲ್ಲೇಶ್ವರಂನ 18ನೇ ಅಡ್ಡ ರಸ್ತೆಯಲ್ಲಿರುವ ಮೈದಾನದಲ್ಲಿ ಉತ್ತರ ವಿಭಾಗದ ಪೊಲೀಸರು ಹಮಿಕೊಂಡಿದ್ದ ರಾಣಿ ಚೆನ್ನಮ ಪಡೆ-ಮಹಿಳಾ ಜಾಗೃತಿ ಕಾರ್ಯಕ್ರಮಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸಾರ್ವಜನಿಕರಲ್ಲಿ ಸ್ಥೈರ್ಯ ಮೂಡಿಸಲು ನಗರದಾದ್ಯಂತ ಪೊಲೀಸರು ನಾಕಾ ಬಂದಿ ಹಾಕಿ ಪರಿಶೀಲಿಸುತ್ತಿದ್ದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ಅಲ್ಲದೇ ದಾಖಲೆ ಇಲ್ಲದ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಜನಸ್ನೇಹಿಯಾಗಿ ಪೊಲೀಸ್‌‍ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಲಾಗಿದೆ. ನಗರದಲ್ಲಿ ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಗಸ್ತು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್‌‍ ಠಾಣೆಯ ಎಲ್ಲಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.ಅಪರಾಧ ವಿಭಾಗದ ಪೊಲೀಸರಿಗೆ ನಗರದಲ್ಲಿ ಹೆಚ್ಚು ನಾಕಾ ಬಂಧಿ, ಗಸ್ತು ಹಾಗೂ ಏರಿಯಾ ಡೊಮಿನೇಷನ್‌ಗೆ ಮಾಡುವಂತೆ ಸೂಚಿಸಿರುವ ಆಯುಕ್ತರು, ರಾತ್ರಿ ಗಸ್ತು ಹೊರತುಪಡಿಸಿ ಹೆಚ್ಚುವರಿಯಾಗಿ ಗಸ್ತು ಮಾಡಲು ಸಲಹೆ ನೀಡಿದ್ದಾರೆ.

ಪ್ರತಿ ಮಂಗಳವಾರ ಹಾಗೂ ಗುರುವಾರ ಪೊಲೀಸ್‌‍ ಠಾಣಾ ವ್ಯಾಪ್ತಿಯ ಒಂದು ಏರಿಯಾವನ್ನು ಡೊಮಿನೇಷನ್‌ ಮಾಡಲು, ರಾತ್ರಿ 9 ಗಂಟೆಯಿಂದ 11 ಗಂಟೆಯ ಅಂತರದಲ್ಲಿ ತಪಾಸಣೆ ಮಾಡುವಂತೆ, ಪರಿಶೀಲನೆ ವೇಳೆ ಮಹಿಳೆಯರು ಮತ್ತು ಮಕ್ಕಳ ನಡುವೆ ಒಳ್ಳೆಯ ರೀತಿ ವರ್ತಿಸುವಂತೆ ಆಯುಕ್ತರು ಸೂಚಿಸಿದ್ದಾರೆ.

ಅದೇ ರೀತಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಕಾಲ್ನಡಿಗೆಯಲ್ಲಿ ಅತೀ ಸೂಕ ಹಾಗೂ ಜನಸಂದಣಿ ಏರಿಯಾದಲ್ಲಿ ಗಸ್ತು ತಿರುಗಲು ತಿಳಿಸಿದರು.ಈ ಎಲ್ಲಾ ಚಟುವಟಿಕೆಗಳಲ್ಲಿ ಇನ್‌್ಸಪೆಕ್ಟರ್‌ಗಳು,ಎಸಿಪಿಗಳು ಹಾಗೂ ಡಿಸಿಪಿಗಳು ಭಾಗವಹಿಸುವಂತೆ, ಈ ಬಗ್ಗೆ ಆಗಿಂದ್ದಾಗೆ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.ಕಾರ್ಯಕ್ರಮದಲ್ಲಿ ಜಂಟಿ ಪೊಲೀಸ್‌‍ ಆಯುಕ್ತ ವಂಶಿಕೃಷ್ಣ, ಉಪ ಪೊಲೀಸ್‌‍ ಆಯುಕ್ತ ನೇಮೆಗೌಡ ಉಪಸ್ಥಿತರಿದ್ದರು.

ಬೆಂಗಳೂರಲ್ಲಿ ಪುಂಡರ ಅಟ್ಟಹಾಸ : 22 ವಾಹನಗಳ ಗಾಜು ಪುಡಿಗಟ್ಟಿದ ದುಷ್ಕರ್ಮಿಗಳು

ಬೆಂಗಳೂರು,ಸೆ.26-ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ 22 ವಾಹನಗಳಿಗೆ ಹಾನಿ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಮುದ್ದಯ್ಯನ ಪಾಳ್ಯದಲ್ಲಿ ಮೊನ್ನೆ ರಾತ್ರಿ ಪುಂಡರು ದೊಣ್ಣೆ ಹಿಡಿದು ತಿರುಗಾಡುತ್ತಾ ರಸ್ತೆ ಬದಿ ನಿಲ್ಲಿಸಿದ್ದ 6 ಕಾರುಗಳು ಹಾಗೂ ಒಂದು ಆಟೋರಿಕ್ಷಾದ ಗಾಜನ್ನು ಒಡೆದು ಹಾನಿಗೊಳಿಸಿದ್ದಾರೆ.

ನಂತರ ಬ್ಯಾಡರ ಹಳ್ಳಿ ಕಡೆಗೆ ಹೋದ ಈ ಪುಂಡರು ವಾಲೀಕಿ ನಗರದ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡಿದ್ದ ವಾಹನಗಳ ಗಾಜುಗಳನ್ನು ಒಡೆದಿದ್ದಾರೆ. ದುಷ್ಕರ್ಮಿಗಳ ಪುಂಡಾಟದಿಂದಾಗಿ 15 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಹಾನಿಯಾಗಿವೆ. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಷ್ಟಕ್ಕೆ ಸುಮನಾಗದ ದುಷ್ಕರ್ಮಿಗಳು ಮಾಗಡಿ ರಸ್ತೆಗೆ ತೆರಳಿದ್ದು, ರಸ್ತೆ ಬದಿ ಹಾಲಿನ ಕ್ಯಾಂಟರ್‌ ಪಾರ್ಕಿಂಗ್‌ ಮಾಡಿ ವಾಹನದೊಳಗೆ ಮಲಗಿದ್ದ ಚಾಲಕನಿಗೆ ದೊಣ್ಣೆ ತೋರಿಸಿ ಬೆದರಿಸಿ ಹಲ್ಲೆ ನಡೆಸಿ ಮೊಬೈಲ್‌ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ್ದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ರೀತಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲೂ ಪುಂಡಾಟ ಮೆರೆದು ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಮೂವರು ಐಎಎಸ್‌‍ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು,ಸೆ.26- ರಾಜ್ಯ ಸರ್ಕಾರ ಮೂವರು ಐಎಎಸ್‌‍ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಡಾ.ಮಂಜುಳಾ ಎನ್‌ ಅವರನ್ನು ವರ್ಗಾವಣೆ ಮಾಡಲಾಗಿದೆ.

ಡಾ. ಎಕರೂಪ್‌ ಕೌರ್‌ ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಐಟಿಬಿಟಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಹುದ್ದೆ ತೆರವಾಗಿತ್ತು.
ಮಂಜುಳಾ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಪೂವಿತ ಎಸ್‌‍. ಅವರನ್ನು ವರ್ಗಾಯಿಸಲಾಗಿದೆ. ಶರತ್‌ ಬಿ. ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.

ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು, ಜಲಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಗೋವಿಂದ ರೆಡ್ಡಿ ಅವರಿಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಸಮವರ್ತಿತ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ. ಈ ಹುದ್ದೆ ರವಿಕುಮಾರ್‌ ಎಂ.ಆರ್‌. ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.

ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವ ಪರಮೇಶ್ವರ್‌-ಪ್ರಣಬ್‌ ಮೊಹಾಂತಿ ಚರ್ಚೆ

ಬೆಂಗಳೂರು, ಸೆ.26- ಧರ್ಮಸ್ಥಳದ ಪ್ರಕರಣಗಳ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.ಧರ್ಮಸ್ಥಳದಲ್ಲಿನ ಪ್ರಕರಣಗಳ ತನಿಖೆಗೆ ಚಿನ್ನಯ್ಯ ಮತ್ತು ಸಂಗಡಿಗರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮೇ 5ರಂದೇ ವಜಾಗೊಳಿಸಿ, ಕಠಿಣ ಶಬ್ಧಗಳಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಚಿನ್ನಯ್ಯ ತಲೆ ಬುರುಡೆಯೊಂದನ್ನು ತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಸ್ವಯಂ ಪ್ರೇರಿತ ಹೇಳಿಕೆ ದಾಖಲಿಸಿದ್ದು, ಮಾಧ್ಯಮಗಳಲ್ಲೂ ಭಾರೀ ಸುದ್ದಿಯಾಗಿತ್ತು.

ಬಳಿಕ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು, ಮುಖ್ಯಮಂತ್ರಿಯವರಿಗೆ ಪತ್ರ ಬರೆದು, ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹೂತು ಹಾಕಿರುವ ಪ್ರಕರಣಗಳನ್ನು ತನಿಖೆ ನಡೆಸಲು ಎಸ್‌‍ಐಟಿ ರಚಿಸುವಂತೆ ಪತ್ರ ಬರೆದಿದ್ದರು. ಅದರ ಆಧಾರದ ಮೇಲೆ ಮುಖ್ಯಮಂತ್ರಿ ಅವರು ಪ್ರಣಬ್‌ ಮೊಹಾಂತಿ ನೇತೃತ್ವದಲ್ಲಿ ಎಸ್‌‍ಐಟಿ ರಚಿಸಿದ್ದರು.

ಎಸ್‌‍ಐಟಿ ಹಲವಾರು ಸ್ಥಳಗಳಲ್ಲಿ ಉತ್ಖನನ ಮಾಡಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧವೂ ತನಿಖೆ ನಡೆಸಿದೆ. ಈಗ ಮೇ 5ರಂದು ಸಾರ್ವಜನಿಕ ಹಿತಾಸಕ್ತಿ ವಜಾಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ದೇಶದ ಸರ್ವೋಚ್ಚ ನ್ಯಾಯಾಲಯವೇ ತನಿಖೆ ಅಗತ್ಯವಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿಯನ್ನು ವಜಾಗೊಳಿಸಿದ ಬಳಿಕ ರಚಿಸಲಾಗಿರುವ ಎಸ್‌‍ಐಟಿಯ ಔಚಿತ್ಯದ ಬಗ್ಗೆ ನಾನಾ ರೀತಿಯ ಪ್ರಶ್ನೆಗಳು ಉದ್ಭವಿಸಿವೆ. ಈ ಹಿನ್ನೆಲೆಯಲ್ಲಿ ಪ್ರಣಬ್‌ ಮೊಹಾಂತಿ ಅವರು ಗೃಹ ಸಚಿವರ ಮನೆಗೆ ಭೇಟಿ ನೀಡಿ ದಾಖಲೆಗಳ ಸಹಿತವಾಗಿ ವಿವರಣೆ ನೀಡಿದ್ದಾರೆ.

ಹಿರಿಯ ವಕೀಲರಾದ ಕೆ.ವಿ. ಧನಂಜಯ ಅವರು, ಚಿನ್ನಯ್ಯ ಹೆಸರಿನಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌)ಯಲ್ಲಿ 1995ರಿಂದ 98ರ ನಡುವೆ ಹಲವಾರು ಶವಗಳು ನೇತ್ರಾವತಿ ನದಿಯಲ್ಲಿ ತೇಲಿಕೊಂಡು ಬಂದಿವೆ. ಅವುಗಳನ್ನು ಧರ್ಮಸ್ಥಳದ ಮೇಲ್ವಿಚಾರಕ ನನ್ನಿಂದ ಬಲವಂತವಾಗಿ ಸಂಸ್ಕಾರ ಮಾಡಿಸಿದ್ದಾರೆ. ಈ ರೀತಿ ತೇಲಿ ಬಂದ ಶವಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಶವಗಳೂ ಇದ್ದವು ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿತ್ತು.

2010ರಲ್ಲಿ ಬಾಲಕಿಯೊಬ್ಬಳ ಶವವನ್ನು ಸಂಸ್ಕಾರ ಮಾಡಲಾಗಿದೆ. ಆ ಶವದಲ್ಲಿ ಲೈಂಗಿಕ ದೌರ್ಜನ್ಯದ ಗುರುತುಗಳು ಇದ್ದವು ಎಂದು ದೂರಲಾಗಿದೆ. 2008ರಿಂದ 2014ರ ನಡುವೆ ಹಲವಾರು ಸಾವುಗಳಾಗಿದ್ದು, ಅವು ಕೊಲೆ ಮತ್ತು ಅತ್ಯಾಚಾರಕ್ಕೊಳಗಾಗಿದ್ದವು ಎಂದು ಉಲ್ಲೇಖಿಸಿಲಾಗಿತ್ತು. ಆದರೆ ಪಿಐಎಲ್‌ ಅನ್ನು ವಜಾಗೊಳಿಸಿದ ಸುಪ್ರೀಂಕೊರ್ಟ್‌ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲ, ಪಬ್ಲಿಸಿಟಿ ಇಂಟ್ರೆಸ್ಟ್‌ ಲಿಟಿಗೇಷನ್‌, ಪೈಸಾ ಇಂಟ್ರೆಸ್ಟ್‌ ಲಿಟಿಗೇಷನ್‌, ಪ್ರೈವೆಟ್‌ ಇಂಟ್ರೆಸ್ಟ್‌ ಲಿಟಿಗೇಷನ್‌, ಪೊಲಿಟಿಕಲ್‌ ಇಂಟ್ರೆಸ್ಟ್‌ ಲಿಟಿಗೇಷನ್‌ ಎಂದು ಕಟು ಶಬ್ಧಗಳಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಸತೀಶ್‌ ಚಂದ್ರಶರ್ಮ ಅವರ ವಿಭಾಗೀಯ ಪೀಠ ಆಕ್ಷೇಪಿಸಿ, ಪಿಐಎಲ್‌ಅನ್ನು ವಜಾಗೊಳಿಸಿತ್ತು.

ಈ ಮಾಹಿತಿಯನ್ನು ಬುರುಡೆ ಗ್ಯಾಂಗ್‌ ಮುಚ್ಚಿಟ್ಟು, ಸರ್ಕಾರವನ್ನು ದಿಕ್ಕು ತಪ್ಪಿಸಿ ಎಸ್‌‍ಐಟಿ ರಚಿಸುವಂತೆ ಮಾಡಿರುವ ಬಗ್ಗೆ ಚರ್ಚೆಗಳು ಈಗ ನಡೆದಿವೆ. ಎಸ್‌‍ಐಟಿಯನ್ನು ರದ್ದು ಮಾಡಿ, ಸ್ಥಳೀಯ ಪೊಲೀಸರಿಂದಲೇ ಪ್ರಕರಣಗಳ ತನಿಖೆಯನ್ನು ಮುಂದುವರೆಸುವ ಬಗ್ಗೆಯೂ ಪ್ರಸ್ತಾಪಗಳಿವೆ.

ಗೃಹ ಸಚಿವ ಪರಮೇಶ್ವರ್‌ ಅವರು ಇಂದು ಮುಖ್ಯಮಂತ್ರಿಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಪಿಐಎಲ್‌ ವಜಾ, ಎಸ್‌‍ಐಟಿ ಯೋಜನೆ ಹಾಗೂ ತನಿಖೆಯ ಪ್ರಗತಿಯ ಬಗ್ಗೆ ಸಮಗ್ರ ವಿವರಣೆ ನೀಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಗೃಹಸಚಿವರ ಭೇಟಿಗೂ ಮುನ್ನ ಪೂರ್ವಭಾವಿಯಾಗಿ ಪ್ರಣಬ್‌ ಮೊಹಾಂತಿ ಅವರು ದಾಖಲೆಗಳ ಸಹಿತ ಗೃಹ ಸಚಿವರಿಗೆ ವಿವರಣೆ ನೀಡಿದ್ದರು. ಈ ಸಂದರ್ಭದಲ್ಲಿ ತನಿಖೆಯ ಪ್ರಗತಿ ಬಗ್ಗೆಯೂ ಮಾಹಿತಿ ನೀಡಿದ್ದಾರೆ.ಅತ್ತ ಶಿವಮೊಗ್ಗ ಜೈಲಿನಲ್ಲಿರುವ ದೂರುದಾರ ಚಿನ್ನಯ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಹೊರ ಬರುವಾಗ ಕಣ್ಣೀರು ಹಾಕಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಚಿನ್ನಯ್ಯನ ಹೇಳಿಕೆಯನ್ನು ಕಳೆದ ನಾಲ್ಕು ದಿನಗಳಿಂದಲೂ ನಿರಂತರವಾಗಿ ದಾಖಲಿಸುತ್ತಿರುವ ನ್ಯಾಯಾಲಯ ನಾಳೆ ಕೂಡ ಹಾಜರಾಗಲು ಚಿನ್ನಯ್ಯನಿಗೆ ಸೂಚನೆ ನೀಡಿದೆ.

ಮಲ್ಲೇಶ್ವರಂನಲ್ಲಿ ಬೆಂಕಿ ಅವಘಡ : 5 ಕೋಟಿ ಮೌಲ್ಯದ ಫರ್ನಿಚರ್‌ ಭಸ್ಮ

ಬೆಂಗಳೂರು,ಸೆ.26– ಫರ್ನಿಚರ್‌ ಅಂಗಡಿವೊಂದರಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ. ಮಲ್ಲೇಶ್ವರಂ ಪೈಪ್‌ಲೈನ್‌ ರಸ್ತೆಯಲ್ಲಿ ಫರ್ನಿಚರ್‌ ಅಂಗಡಿ ಇದ್ದು, ಅಲ್ಲಿಯೇ ಪೀಠೋಪಕರಣಗಳನ್ನು ತಯಾರು ಮಾಡುತ್ತಾರೆ.

ಅಂಗಡಿಯ ನಾಲ್ಕೈದು ಮಂದಿ ಕಾರ್ಮಿಕರು ಮೊದಲ ಮಹಡಿಯಲ್ಲಿ ರಾತ್ರಿ ಮಲಗಿದ್ದಾರೆ. ಇಂದು ಮುಂಜಾನೆ 2.30 ರ ಸುಮಾರಿನಲ್ಲಿ ಅಂಗಡಿಯ ನೆಲ ಮಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಪೀಠೋಪಕರಣಗಳಿಗೆ ತಗುಲಿ ಹೊತ್ತಿ ಉರಿಯುತ್ತಿತ್ತು.ಈ ಬೆಂಕಿ ಮೊದಲ ಮಹಡಿಗೂ ಆವರಿಸಿದೆ. ಇದನ್ನು ಗಮನಿಸಿದ ಅಕ್ಕ ಪಕ್ಕದ ನಿವಾಸಿಗಳು ತಕ್ಷಣ ಕಾರ್ಮಿಕರನ್ನು ಎಬ್ಬಿಸಿದ್ದಾರೆ. ಕಾರ್ಮಿಕರು ಕಟ್ಟಡದಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುದ್ದಿ ತಿಳಿದು ತಕ್ಷಣ 13 ಅಗ್ನಿ ಶಾಮಕ ವಾಹನಗಳೊಂದಿಗೆ ಆಗಮಿಸಿದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಮುಂಜಾನೆ 5.30 ರ ಸುಮಾರಿಗೆ ಬೆಂಕಿ ತಹಬದಿಗೆ ಬಂದಿದೆ.

ಪೀಠೋಪಕರಣ ಅಂಗಡಿಯಾದ್ದರಿಂದ ಬೆಂಕಿ ಕೆಲವು ಪೀಠೋಪಕರಣಗಳಿಗೆ ತಾಗಿರುವುದರಿಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸತತ ಕಾರ್ಯಚರಣೆ ಮುಂದುವರೆಸಿದ್ದಾರೆ.
ಬೆಂಕಿಯಿಂದಾಗಿ ಅಕ್ಕ-ಪಕ್ಕದ ಮೂರು ಮನೆಗಳಿಗೆ ಹಾನಿಯಾಗಿದೆ.ಶಾರ್ಟ್‌ ಸಕ್ಯೂರ್ಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ವೈಯಾಲಿಕಾವಲ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಬೆಂಕಿ ಅವಘಡದಿಂದಾಗಿ ಸುಮಾರು 5 ಕೋಟಿಗೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಹೈಕೋರ್ಟ್‌ ನಿರ್ದೇಶನದಂತೆ ಸಮೀಕ್ಷೆ : ಸಚಿವ ಶಿವರಾಜ ತಂಗಡಗಿ

ಬೆಂಗಳೂರು, ಸೆ.26- ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಸಂದರ್ಭದಲ್ಲಿ ಹೈಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ತಪ್ಪದೇ ಪಾಲಿಸುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯವನ್ನು ನಾವು ಗೌರವಿಸುತ್ತೇವೆ. ಅಲ್ಲಿನ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದರು.ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡುವಂತೆ ಯಾರನ್ನೂ ಬಲವಂತ ಮಾಡಬಾರದೆಂದು ನ್ಯಾಯಾಲಯ ಆದೇಶಿಸಿದೆ.

ನಾವು ಮೊದಲಿನಿಂದಲೂ ಇದನ್ನೇ ಹೇಳುತ್ತಿದ್ದೇವೆ. ಇಚ್ಛೆ ಇರುವವರು ಮಾಹಿತಿ ನೀಡಬಹುದು, ನೀಡದೇ ಇದ್ದರೆ ಬಲವಂತ ಪಡಿಸುವುದಿಲ್ಲ. ಹೀಗೆ ಬರೆಸಬೇಕೆಂದು ನಾವು ಯಾರ ಮೇಲೂ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಸಮೀಕ್ಷೆಯಲ್ಲಿ ಎಲ್ಲಾ ಶಿಕ್ಷಕರೂ ಭಾಗವಹಿಸುತ್ತಿದ್ದಾರೆ. ಭಾಗವಹಿಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಿದರು.

ಸಮೀಕ್ಷೆ ನಿರ್ಲಕ್ಷ ಮಾಡಿದರೆ ಕಠಿಣ ಕ್ರಮ : ಸಿಎಂ ಎಚ್ಚರಿಕೆ

ಬೆಂಗಳೂರು, ಸೆ.26– ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸದೇ ಕರ್ತವ್ಯ ಲೋಪ ಎಸಗುವವರು ಹಾಗೂ ದತ್ತಾಂಶ ಸಂಗ್ರಹದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಿದ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿರಲಿಲ್ಲ.

ಆಯೋಗ ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿತ್ತು. ಕೊನೆಗೆ ಆ ವರದಿ ಅಂಗೀಕರಿಸಲು ಆಗದೆ, ಬಿಡಲೂ ಆಗದೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯನ್ನು ಕರಾರುವಾಕ್ಕಾಗಿ ಹಾಗೂ ಕಾನೂನಾತಕವಾಗಿ ನಡೆಸಬೇಕು. ಪ್ರತಿಹಂತದಲ್ಲೂ ಸಮೀಕ್ಷಾದಾರರು ಮಾಹಿತಿ ಸಂಗ್ರಹದ ದಸ್ತಾವೇಜುಗಳಿಗೆ ಸಹಿ ಹಾಕಿ, ಅಧಿಕೃತಗೊಳಿಸಬೇಕು. ಯಾವುದು ಅನಧಿಕೃತ ಹಾಗೂ ಆಧಾರರಹಿತ ಎಂಬ ಸನ್ನಿವೇಶ ಸೃಷ್ಟಿಯಾಗಬಾರದು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.
ಕೆಲವು ಅಧಿಕಾರಿಗಳು ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊಬೈಲ್‌ ಬಳಕೆಗೆ ತಾಂತ್ರಿಕವಾದ ಸಾಮರ್ಥ್ಯವಿಲ್ಲವೆಂಬ ನೆಪ ಒಡ್ಡುತ್ತಿದ್ದು ಅಂಥವರ ಪಟ್ಟಿಯನ್ನು ಪಡೆದು ಸೂಕ್ತ ಪರಿಶೀಲನೆ ನಡೆಸಿ ನಂತರ ವಿನಾಯಿತಿ ನೀಡಿ ಪರ್ಯಾಯ ಸಮೀಕ್ಷಾದಾರರನ್ನು ನಿಯೋಜಿಸಬೇಕೆಂದು ತಾಕೀತು ಮಾಡಿದ್ದಾರೆ.

ಸಮೀಕ್ಷೆಗೆ ಆರಂಭಿಕ ಹಂತದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಇದೇ ವೇಗದಲ್ಲಿ ಗಣತಿ ನಡೆದರೆ ಒಂದು ತಿಂಗಳಾದರೂ ಪೂರ್ಣಗೊಳ್ಳುವುದಿಲ್ಲ. ಪ್ರತಿ ದಿನ ಸರಾಸರಿ 10 ಲಕ್ಷ ಮನೆಗಳಂತೆ ಸಮೀಕ್ಷೆ ನಡೆಯಬೇಕಿತ್ತು. ಅದರ ಅಂದಾಜಿನ ಪ್ರಕಾರ ಸರಿಸುಮಾರು ಕನಿಷ್ಠ 50 ಲಕ್ಷ ಮನೆಗಳ ಸಮೀಕ್ಷೆಯಾಗಬೇಕಿತ್ತು. ಆದರೆ 5 ಲಕ್ಷ ಮನೆಗಳ ಸಮೀಕ್ಷೆಯೂ ಪೂರ್ಣವಾಗಿಲ್ಲ ಎಂದು ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ನೆಪ ಹೇಳುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ . ಸಮೀಕ್ಷೆ ನಡೆಯುವುದು ಎರಡು ತಿಂಗಳ ಮೊದಲೇ ನಿಗದಿಯಾಗಿತ್ತು. ಅಂದಿನಿಂದಲೂ ಪೂರ್ವ ತಯಾರಿ ಮಾಡಿಕೊಳ್ಳದೆ ಕಾಲಹರಣ ಮಾಡಿದ್ದೇಕೆ ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಮೀಕ್ಷೆಯನ್ನು ವಿಫಲಗೊಳಿಸಬೇಕು ಎಂಬ ಕಾರಣಕ್ಕಾಗಿಯೇ ವ್ಯವಸ್ಥಿತವಾದ ಅಪಪ್ರಚಾರಗಳು ನಡೆಯುತ್ತಿವೆ. ಇದಕ್ಕೆ ಕಿವಿಗೊಡಬಾರದು, ಸಮೀಕ್ಷಾದಾರರು ತಮ ಜವಾಬ್ದಾರಿಯನ್ನು ನಿಭಾಯಿಸಬೇಕು. ತಾಂತ್ರಿಕ ತೊಂದರೆ ಸೇರಿದಂತೆ ಯಾವುದೇ ಅಡಚಣೆಗಳಿದ್ದರೂ ಅದನ್ನು ಹಿರಿಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಬಗೆ ಹರಿಸಬೇಕು. ಯಾವುದೇ ಹಂತದಲ್ಲಿ ಲೋಪಗಳಾಗಿದ್ದರೂ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರ ನೀಡಲಾಗಿದೆ.

ಇದು ಐತಿಹಾಸಿಕ ಮಹತ್ವ ಪೂರ್ಣವಾದ ಸಮೀಕ್ಷೆಯೆಂಬುದನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಪ್ರತಿ ಸಂದರ್ಭದಲ್ಲೂ ತಮ ಮನೆಯ ಕೆಲಸ ಮಾಡುತ್ತಿದ್ದೇವೆ ಎಂಬ ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕಂದಾಯ, ಹಿಂದುಳಿದ ವರ್ಗಗಳ ಕಲ್ಯಾಣ, ಶಾಲಾ ಶಿಕ್ಷಣ ಸಾಕ್ಷರತೆ, ಪೌರಾಡಳಿತ, ನಗರಾಭಿವೃದ್ಧಿ, ಜಿಬಿಎಗೆ ಸೇರಿದಂತೆ ಹಲವು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಿಡಿಯೋ ಸಂವಾದದಲ್ಲಿದ್ದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಎಚ್‌.ಕೆ.ಪಾಟೀಲ್‌, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್‌, ಭೈರತಿ ಬಸವರಾಜ್‌, ಮಧು ಬಂಗಾರಪ್ಪ, ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್‌್ಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹದ್‌, ಕಾನೂನು ಸಲಹೆಗಾರ ಪೊನ್ನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪಂಚಭೂತಗಳಲ್ಲಿ ಎಸ್‌‍.ಎಲ್‌.ಭೈರಪ್ಪ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆ

ಬೆಂಗಳೂರು, ಸೆ.26– ಆರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಕನ್ನಡ ಭಾಷೆಗೆ ಹಿರಿಮೆ ತಂದುಕೊಟ್ಟಿದ್ದ ಪ್ರಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮಾನ್‌ ಪ್ರಶಸ್ತಿ ಪುರಸ್ಕೃತ ಡಾ.ಎಸ್‌‍.ಎಲ್‌.ಭೈರಪ್ಪ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿಂದು ಲೀನವಾಯಿತು.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬ್ರಾಹಣ ಸಂಪ್ರದಾಯದಂತೆ ಎಸ್‌‍.ಎಲ್‌. ಭೈರಪ್ಪನವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಮೃತರ ಗೌರವಾರ್ಥವಾಗಿ ಪೊಲೀಸರು ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು. ಭೈರಪ್ಪನವರ ಪುತ್ರರಾದ ಎಸ್‌‍.ಬಿ.ರವಿಶಂಕರ್‌ ಮತ್ತು ಎಸ್‌‍.ಬಿ.ಉದಯ್‌ ಶಂಕರ್‌ ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಭೈರಪ್ಪನವರ ಕುಟುಂಬದವರು,ಬಂಧುಗಳು, ಸ್ನೇಹಿತರು ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರು ರಾಷ್ಟ್ರಧ್ವಜವನ್ನು ಭೈರಪ್ಪ ಅವರ ಪುತ್ರರಿಗೆ ಹಸ್ತಾಂತರಿಸಿದರು. ಭೈರಪ್ಪನವರು ತಮ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಸಾಹಿತಿ ಹಾಗೂ ಸಾಕು ಪುತ್ರಿ ಎಂದೇ ಗುರುತಿಸಿಕೊಂಡಿದ್ದ ಸಹನಾ ವಿಜಯ್‌ ಕುಮಾರ್‌ ನೆರವೇರಿಸುವಂತೆ ವಿಲ್‌ನಲ್ಲಿ ಬರೆದಿದ್ದರು ಎನ್ನಲಾಗಿದೆ.

ಹಲವಾರು ದಶಕಗಳ ಕಾಲ ಸಾರಸ್ವತ ಲೋಕದಲ್ಲಿ ಮಿನುಗುತಾರೆಯಂತೆ ಸದಾ ಕಂಗೊಳಿಸಿ, ಓದುಗರಿಗೆ ಯಾವಾಗಲೂ ಸದಭಿರುಚಿಯ ಕೃತಿಗಳನ್ನು ನೀಡುತ್ತಿದ್ದ ಅಕ್ಷರ ಮಾಂತ್ರಿಕ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು.ಅಂತ್ಯ ಸಂಸ್ಕಾರದ ವೇಳೆ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು,ಬರಹಗಾರರು, ಓದುಗರು, ಚಿಂತಕರು, ಜಿಲ್ಲಾಡಳಿತ ಮತ್ತಿತರರು ಭಾರವಾದ ಹೃದಯದಿಂದಲೇ ಅಂತಿಮ ವಿದಾಯ ಹೇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಭೈರಪ್ಪನವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸರ್ಕಾರದ ಪರವಾಗಿ ಸಚಿವ ಪ್ರಹ್ಲಾದ್‌ಜೋಶಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಚಿವರಾದ ಡಾ.ಹೆಚ್‌.ಸಿ.ಮಹದೇವಪ್ಪ, ವೆಂಕಟೇಶ್‌, ಮಾಜಿ ಸಂಸದ ಪ್ರತಾಪಸಿಂಹ, ಶಾಸಕರಾದ ಶ್ರೀವತ್ಸ, ಜಿ.ಟಿ.ದೇವೇಗೌಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌‍ ಎಸ್‌‍ಪಿ ಸೇರಿದಂತೆ ಜಿಲ್ಲಾಡಳಿತದ ಉನ್ನತಾಧಿಕಾರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.