Friday, November 7, 2025
Home Blog Page 83

ಪಂಚಭೂತಗಳಲ್ಲಿ ಎಸ್‌‍.ಎಲ್‌.ಭೈರಪ್ಪ ಲೀನ, ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆ

ಬೆಂಗಳೂರು, ಸೆ.26– ಆರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಓದುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಕನ್ನಡ ಭಾಷೆಗೆ ಹಿರಿಮೆ ತಂದುಕೊಟ್ಟಿದ್ದ ಪ್ರಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮಾನ್‌ ಪ್ರಶಸ್ತಿ ಪುರಸ್ಕೃತ ಡಾ.ಎಸ್‌‍.ಎಲ್‌.ಭೈರಪ್ಪ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿಂದು ಲೀನವಾಯಿತು.

ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಬ್ರಾಹಣ ಸಂಪ್ರದಾಯದಂತೆ ಎಸ್‌‍.ಎಲ್‌. ಭೈರಪ್ಪನವರ ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಮೃತರ ಗೌರವಾರ್ಥವಾಗಿ ಪೊಲೀಸರು ಮೂರು ಸುತ್ತು ಕುಶಾಲ ತೋಪುಗಳನ್ನು ಹಾರಿಸಿ ಅಂತಿಮ ಗೌರವ ಸಲ್ಲಿಸಿದರು. ಭೈರಪ್ಪನವರ ಪುತ್ರರಾದ ಎಸ್‌‍.ಬಿ.ರವಿಶಂಕರ್‌ ಮತ್ತು ಎಸ್‌‍.ಬಿ.ಉದಯ್‌ ಶಂಕರ್‌ ಅವರು ಅಂತ್ಯ ಸಂಸ್ಕಾರ ನೆರವೇರಿಸಿದರು.

ಭೈರಪ್ಪನವರ ಕುಟುಂಬದವರು,ಬಂಧುಗಳು, ಸ್ನೇಹಿತರು ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದು ಅಂತಿಮ ನಮನ ಸಲ್ಲಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅವರು ರಾಷ್ಟ್ರಧ್ವಜವನ್ನು ಭೈರಪ್ಪ ಅವರ ಪುತ್ರರಿಗೆ ಹಸ್ತಾಂತರಿಸಿದರು. ಭೈರಪ್ಪನವರು ತಮ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಸಾಹಿತಿ ಹಾಗೂ ಸಾಕು ಪುತ್ರಿ ಎಂದೇ ಗುರುತಿಸಿಕೊಂಡಿದ್ದ ಸಹನಾ ವಿಜಯ್‌ ಕುಮಾರ್‌ ನೆರವೇರಿಸುವಂತೆ ವಿಲ್‌ನಲ್ಲಿ ಬರೆದಿದ್ದರು ಎನ್ನಲಾಗಿದೆ.

ಹಲವಾರು ದಶಕಗಳ ಕಾಲ ಸಾರಸ್ವತ ಲೋಕದಲ್ಲಿ ಮಿನುಗುತಾರೆಯಂತೆ ಸದಾ ಕಂಗೊಳಿಸಿ, ಓದುಗರಿಗೆ ಯಾವಾಗಲೂ ಸದಭಿರುಚಿಯ ಕೃತಿಗಳನ್ನು ನೀಡುತ್ತಿದ್ದ ಅಕ್ಷರ ಮಾಂತ್ರಿಕ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು.ಅಂತ್ಯ ಸಂಸ್ಕಾರದ ವೇಳೆ ನೆರೆದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು,ಬರಹಗಾರರು, ಓದುಗರು, ಚಿಂತಕರು, ಜಿಲ್ಲಾಡಳಿತ ಮತ್ತಿತರರು ಭಾರವಾದ ಹೃದಯದಿಂದಲೇ ಅಂತಿಮ ವಿದಾಯ ಹೇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಭೈರಪ್ಪನವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಸರ್ಕಾರದ ಪರವಾಗಿ ಸಚಿವ ಪ್ರಹ್ಲಾದ್‌ಜೋಶಿ, ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌, ಸಚಿವರಾದ ಡಾ.ಹೆಚ್‌.ಸಿ.ಮಹದೇವಪ್ಪ, ವೆಂಕಟೇಶ್‌, ಮಾಜಿ ಸಂಸದ ಪ್ರತಾಪಸಿಂಹ, ಶಾಸಕರಾದ ಶ್ರೀವತ್ಸ, ಜಿ.ಟಿ.ದೇವೇಗೌಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌‍ ಎಸ್‌‍ಪಿ ಸೇರಿದಂತೆ ಜಿಲ್ಲಾಡಳಿತದ ಉನ್ನತಾಧಿಕಾರಿಗಳು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಭಾರತ-ಪಾಕ್‌ ನಡುವೆ ಮತ್ತೊಂದು ಹೈವೋಲ್ಟೆಜ್‌ ಪಂದ್ಯ

ದುಬೈ, ಸೆ.26– ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ಗಾಗಿ ಸೆಣಸಾಟ ನಡೆಸಲಿರುವುದರಿಂದ ಭಾನುವಾರ ನಡೆಯಲಿರುವ ಹೈವೋಲ್ಟೆಜ್‌ ಪಂದ್ಯ ತೀವ್ರ ಕೂತುಹಲ ಕೆರಳಿಸಿದೆ.

ನಿರ್ಣಾಯಕ ಸೂಪರ್‌ 4 ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ 11 ರನ್‌ಗಳ ಸೋಲುಣಿಸಿದ ಪಾಕಿಸ್ತಾನ ತಂಡ ಏಷ್ಯಾಕಪ್‌ ಫೈನಲ್‌ ಪ್ರವೇಶಿಸಿದೆ. ಹೀಗಾಗಿ ಇದೇ ಮೊದಲಬಾರಿಗೆ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

1984ರಲ್ಲಿ ಏಷ್ಯಾ ಕಪ್‌ ಪ್ರಾರಂಭವಾದ ಬಳಿಕ ಈವರೆಗೆ ಒಟ್ಟು 16 ಬಾರಿ ಉಭಯ ತಂಡಗಳ ನಡುವೆ ಪಂದ್ಯಾವಳಿ ಜರುಗಿದೆ. ಆದ್ರೆ ಈವರೆಗೂ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ಭಾರತ ಫೈನಲ್‌ ತಲುಪಿದ್ದಿಲ್ಲ.

ಇದೀಗ ಭಾನುವಾರದಂದು ನಡೆಯಲಿರುವ ಪಂದ್ಯ ಅಕ್ಷರಶಃ ಹೈವೋಲ್ಟೇಜ್‌ ಪಂದ್ಯವಾಗಲಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೂಪರ್‌ ಫೋರ್‌ ಹಂತದ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿತ್ತು.

ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 124 ರನ್‌ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಪಾಕಿಸ್ತಾನದ ಬ್ಯಾಟರ್‌ಗಳು ಕೈಕೊಟ್ಟರೂ ಬೌಲರ್‌ ಗಳ ಸಾಹಸದಿಂದಾಗಿ ಪಂದ್ಯ ರೋಮಾಂಚಕ ಅಂತ್ಯ ಕಾಣುವಂತಾಯಿತು.ಬಾಂಗ್ಲಾದೇಶ ತಂಡದ ಬ್ಯಾಟರ್‌ ಗಳನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಶಾಹಿನ್‌ ಶಾ ಅಫ್ರಿದಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಲಡಾಖ್‌ ಹಿಂಸಾಚಾರ ಬೆನ್ನಲ್ಲೇ ವಾಂಗ್‌ಚುಕ್‌ ಒಡೆತನದ ಸರ್ಕಾರೇತರ ಸಂಸ್ಥೆ ಪರವಾನಿಗಿ ರದ್ದು

ನವದೆಹಲಿ, ಸೆ.26- ಲಡಾಖ್‌ನಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಸೋನಮ್‌ ವಾಂಗ್‌ಚುಕ್‌ ಅವರ ಸರ್ಕಾರೇತರ ಸಂಸ್ಥೆ ಲಡಾಖ್‌ ವಿದ್ಯಾರ್ಥಿಗಳ ಲಡಾಖ್‌ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿಯ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.

ನಾಲ್ವರು ಸಾವನ್ನಪ್ಪಿ ಇತರ ಅನೇಕರು ಗಾಯಗೊಂಡ ನಂತರ ಕೇಂದ್ರ ಸರ್ಕಾರವು ವಿದೇಶಿ ನಿಧಿಯ ನಿಯಮಗಳನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ ಪರವಾನಗಿ ರದ್ದು ಮಾಡಿದೆ. ವಾಂಗ್‌ಚುಕ್‌‍ ಅವರ ವೈಯಕ್ತಿಕ ಮತ್ತು ಜಂಟಿ ಖಾತೆಗಳಲ್ಲಿ ಹಣವನ್ನು ಸ್ವೀಕರಿಸಲಾಗಿದ್ದು ಇದು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ -2010 ಉಲ್ಲಂಘನೆಯಾಗಿದೆ. 2021 ಮತ್ತು 2024 ರ ನಡುವೆ ಅವರ ಎನ್‌ಜಿಒ ವಿದೇಶದಿಂದ ಕೋಟ್ಯಂತರ ರೂಪಾಯಿಗಳನ್ನು ಸ್ವೀಕರಿಸಿದೆ. ವಿದೇಶದಿಂದ ಬಂದ ಹಣವನ್ನು ಅಪರಿಚಿತ ಸಂಸ್ಥೆಗಳಿಗೆ ಕಳುಹಿಸಲಾಗಿದೆ ಎಂದು ಅದು ಹೇಳಿದೆ.

59 ವರ್ಷ ವಯಸ್ಸಿನ ಸೋನಮ್‌ ವಾಂಗ್‌ಚುಕ್‌ 9 ಖಾತೆಗಳನ್ನು ಹೊಂದಿದ್ದು ಅವುಗಳಲ್ಲಿ 8 ಖಾತೆಗಳನ್ನು ಘೋಷಣೆ ಮಾಡಿಲ್ಲ. ಈ ಎಂಟರ ಪೈಕಿ ಹಲವು ಖಾತೆಗಳಲ್ಲಿ ಭಾರಿ ಪ್ರಮಾಣದ ವಿದೇಶಿ ಹಣ ರವಾನೆಯಾಗಿದೆ. ವಾಂಗ್‌ಚುಕ್‌‍ 2021 ಮತ್ತು 2024 ರ ನಡುವೆ ತಮ್ಮ ವೈಯಕ್ತಿಕ ಖಾತೆಯಿಂದ ವಿದೇಶಗಳಿಗೆ ಸುಮಾರು 2.3 ಕೋಟಿ ರೂ.ಗಳನ್ನು ಕಳುಹಿಸಿದ್ದಾರೆ ಎಂದು ಉಲ್ಲೇಖಿಸಿದೆ.

ಈ ವಿಷಯದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ನಡೆಸುವ ಸಾಧ್ಯತೆಯಿದೆ. ಪಾಕಿಸ್ತಾನಕ್ಕೆ ಹೋಗಿ ಬಂದಿರುವ ವಾಂಗ್‌ಚುಕ್‌‍ ವಿರುದ್ಧ ಸಿಬಿಐ ಸಹ ಪ್ರಾಥಮಿಕ ತನಿಖೆ ಆರಂಭಿಸಿದೆ.ಪ್ರತ್ಯೇಕ ರಾಜ್ಯಸ್ಥಾನಮಾನಕ್ಕೆ ಆಗ್ರಹಿಸಿ ಸೋನಮ್‌ ವಾಂಗ್‌ಚುಕ್‌‍ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ನಾಲ್ವರು ಮೃತಪಟ್ಟಿದ್ದರು. 40 ಪೊಲೀಸ್‌‍ ಸಿಬ್ಬಂದಿ ಸೇರಿದಂತೆ 80 ಜನರು ಗಾಯಗೊಂಡರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ವಾಂಗ್‌ಚುಕ್‌‍ ನೀಡಿದ ಹೇಳಿಕೆಯೇ ಕಾರಣ ಎಂದು ಕೇಂದ್ರ ಗೃಹಸಚಿವಾಲಯ ಹೇಳಿದೆ.

ಶಿಕ್ಷಕಿ ಮೇಲೆ ಆಸಿಡ್‌ ಎರಚಿದವನ ಕಾಲಿಗೆ ಪೊಲೀಸರಿಂದ ಗುಡೇಟು

ಸಂಭಾಲ್‌, ಸೆ. 26 (ಪಿಟಿಐ) ಉತ್ತರ ಪ್ರದೇಶದಲ್ಲಿ ಶಿಕ್ಷಕಿಯೊಬ್ಬರ ಮೇಲೆ ಆಸಿಡ್‌ ಎರಚಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.ಬಂಧಿತ ಆರೋಪಿಯನ್ನು ಅಮ್ರೋಹಾ ಜಿಲ್ಲೆಯ ಗಜ್ರೌಲಾ ಪೊಲೀಸ್‌‍ ಠಾಣೆ ಪ್ರದೇಶದ ಟಿಗ್ರಿ ಗ್ರಾಮದ ನಿವಾಸಿ ನಿಶು ತಿವಾರಿ (30) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್‌ 23 ರಂದು, ನಖಾಸಾ ಪೊಲೀಸ್‌‍ ಠಾಣೆ ಪ್ರದೇಶದಲ್ಲಿ, 22 ವರ್ಷದ ಶಿಕ್ಷಕಿಯೊಬ್ಬರು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ಆರೋಪಿಯು ಸ್ಕೂಟರ್‌ ಮೇಲೆ ಬಂದು ದೇಹಪಾ ಗ್ರಾಮದ ಬಳಿ ಆಕೆಯ ಮುಖದ ಮೇಲೆ ಆಸಿಡ್‌ ಎರಚಿದ್ದಾನೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ (ಎಸ್ಪಿ) ಕೃಷ್ಣ ಕುಮಾರ್‌ ತಿಳಿಸಿದ್ದಾರೆ.

ದಾಳಿಯಲ್ಲಿ ಶಿಕ್ಷಕಿಗೆ ಶೇ. 20 ರಿಂದ 30 ರಷ್ಟು ಸುಟ್ಟ ಗಾಯಗಳಾಗಿವೆ.ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ.

ತಡರಾತ್ರಿ ಕಲ್ಯಾಣಪುರ ಗ್ರಾಮದ ಬಳಿ ಸ್ಕೂಟರ್‌ ಸವಾರಿ ಮಾಡುತ್ತಿದ್ದ ಆರೋಪಿಯನ್ನು ನಖಾಸಾ ಪೊಲೀಸರು ತಡೆದಾಗ, ಅವರ ಮೇಲೆ ಗುಂಡು ಹಾರಿಸಿದರು ಎಂದು ಅವರು ಹೇಳಿದರು.
ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು, ಆರೋಪಿಯ ಎರಡೂ ಕಾಲುಗಳಿಗೆ ಗಾಯವಾಯಿತು.ತಿವಾರಿ ಅವರನ್ನು ಬಂಧಿಸಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.ಆರೋಪಿಯಿಂದ ಒಂದು ಪಿಸ್ತೂಲ್‌‍, ಎರಡು ಕಾರ್ಟ್ರಿಡ್‌್ಜಗಳು ಮತ್ತು ಸ್ಕೂಟರ್‌ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವ್ಯಾಟಿಕನ್‌ ಸಿಟಿ ಥೀಮ್‌ನಲ್ಲಿ ದುರ್ಗಾ ಪೂಜೆಗೆ ವಿಎಚ್‌ಪಿ ಆಕ್ರೋಶ

ರಾಂಚಿ, ಸೆ.26 (ಪಿಟಿಐ) ರಾಂಚಿಯಲ್ಲಿ ವ್ಯಾಟಿಕನ್‌ ನಗರ ಎಂಬ ಥೀಮ್‌ನೊಂದಿಗೆ ನಡೆದ ದುರ್ಗಾ ಪೂಜಾ ಪೆಂಡಾಲ್‌‍, ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಯನ್ನು ಕೆರಳಿಸಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಲು ಮತ್ತು ಮತಾಂತರವನ್ನು ಪ್ರೋತ್ಸಾಹಿಸಲು ಮಾಡಲಾಗಿದೆ ಎಂದು ಆರೋಪಿಸಿದೆ.

ಆದರೆ ಆಯೋಜಕರು ಇದನ್ನು ತಿರಸ್ಕರಿಸಿದ್ದಾರೆ.ಯುರೋಪ್‌ನಲ್ಲಿರುವ ವ್ಯಾಟಿಕನ್‌ ನಗರವು ವಿಶ್ವದ ಅತ್ಯಂತ ಚಿಕ್ಕ ಸಾರ್ವಭೌಮ ರಾಜ್ಯ ಮತ್ತು ರೋಮನ್‌ ಕ್ಯಾಥೋಲಿಕ್‌ ಚರ್ಚ್‌ನ ಕೇಂದ್ರವಾಗಿದೆ.

ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಾಲ್‌ ಅವರು ವ್ಯಾಟಿಕನ್‌ ನಗರ ಎಂಬ ಥೀಮ್‌ನಲ್ಲಿರುವ ದುರ್ಗಾ ಪೂಜೆ ಬಗ್ಗೆ ತಮ್ಮ ವಿರೋಧವನ್ನು ಎಕ್‌್ಸನಲ್ಲಿ ಹಂಚಿಕೊಂಡಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ಮತ್ತು ಧಾರ್ಮಿಕ ಮತಾಂತರವನ್ನು ಉತ್ತೇಜಿಸುವ ಗುರಿಯೊಂದಿಗೆ ಇದನ್ನು ಮಾಡಲಾಗಿದೆ.

ಈ ದುರ್ಗಾ ಪೂಜಾ ಪೆಂಡಾಲ್‌ನ ಆಯೋಜನಾ ಸಮಿತಿಯು ಜಾತ್ಯತೀತತೆಯಲ್ಲಿ ಅಷ್ಟೊಂದು ಆಸಕ್ತಿ ಹೊಂದಿದ್ದರೆ, ಚರ್ಚ್‌ ಅಥವಾ ರಾಂಚಿಯ ಮದರಸಾಗಳಲ್ಲಿ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಹಿಂದೂ ದೇವರು ಅಥವಾ ದೇವತೆಯ ಛಾಯಾಚಿತ್ರವನ್ನು ಪ್ರದರ್ಶಿಸಲು ನಾನು ಅವರನ್ನು ಕೇಳುತ್ತೇನೆ ಎಂದು ಬನ್ಸಾಲ್‌ಪಿಟಿಐಗೆ ತಿಳಿಸಿದರು.

ಪೂಜಾ ಮಂಟಪದ ಪ್ರವೇಶದ್ವಾರದಲ್ಲಿ ಕ್ರಿಶ್ಚಿಯನ್‌ ಧರ್ಮದ ಧಾರ್ಮಿಕ ಚಿಹ್ನೆಗಳನ್ನು ಇರಿಸಲಾಗಿದೆ ಮತ್ತು ಅದರೊಳಗೆ ಮೇರಿ ಮಾತೆ ಮತ್ತು ಇತರ ಕ್ರಿಶ್ಚಿಯನ್‌ ಪಾತ್ರಗಳ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಅವರು ಹೇಳಿದರು.ವಿಎಚ್‌ಪಿ ಜಾರ್ಖಂಡ್‌ ಘಟಕವು ಶೀಘ್ರದಲ್ಲೇ ಈ ಬಗ್ಗೆ ಬಲವಾದ ನಿರ್ಧಾರ ತೆಗೆದುಕೊಳ್ಳಲಿದೆ. ಧಾರ್ಮಿಕ ಭಾವನೆಗಳನ್ನು ಗೌರವಿಸುವಂತೆ ಮತ್ತು ಪಂಗಡದಿಂದ ಕ್ರಿಶ್ಚಿಯನ್‌ ಚಿಹ್ನೆಗಳು ಮತ್ತು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ನಾವು ಸಂಘಟಕರಿಗೆ ಮನವಿ ಮಾಡಲು ಬಯಸುತ್ತೇವೆ ಎಂದು ಬನ್ಸಾಲ್‌ ಹೇಳಿದರು.

ದುರ್ಗಾ ಪೂಜಾ ಮಂಟಪವನ್ನು ನಿರ್ಮಿಸಿದ ಆರ್‌ಆರ್‌ ಸ್ಪೋರ್ಟಿಂಗ್‌ ಕ್ಲಬ್‌ನ ಅಧ್ಯಕ್ಷ ವಿಕ್ಕಿ ಯಾದವ್‌ ವಿಎಚ್‌ಪಿಯ ಆರೋಪಗಳನ್ನು ತಿರಸ್ಕರಿಸಿದರು.ನಾವು ಕಳೆದ 50 ವರ್ಷಗಳಿಂದ ದುರ್ಗಾ ಪೂಜೆಯನ್ನು ಆಯೋಜಿಸುತ್ತಿದ್ದೇವೆ ಮತ್ತು ಪ್ರತಿ ವರ್ಷ ನಾವು ಕೆಲವು ವಿಷಯಗಳನ್ನು ಆಧರಿಸಿ ಪಂಗಡಗಳನ್ನು ತಯಾರಿಸುತ್ತೇವೆ. ಈ ವರ್ಷ ನಾವು 2022 ರಲ್ಲಿ ವ್ಯಾಟಿಕನ್‌ ನಗರದ ಥೀಮ್‌ನಲ್ಲಿ ಕೋಲ್ಕತ್ತಾದಲ್ಲಿ ಶ್ರೀಭೂಮಿ ಸ್ಪೋರ್ಟಿಂಗ್‌ ಕ್ಲಬ್‌ ಮಾಡಿದ ದುರ್ಗಾ ಪೂಜಾ ಪಂಗಡವನ್ನು ಪುನರಾವರ್ತಿಸಲು ನಿರ್ಧರಿಸಿದ್ದೇವೆ ಎಂದು ಯಾದವ್‌ ಹೇಳಿದರು.

ದುರ್ಗಾ ದೇವಿಯ ಹಿನ್ನೆಲೆಯಾಗಿ ರೋಮನ್‌ ವಾಸ್ತುಶಿಲ್ಪದ ತಾಣ, ಸೇಂಟ್‌ ಪೀಟರ್ಸ್‌ ಬೆಸಿಲಿಕಾ ಮತ್ತು ವ್ಯಾಟಿಕನ್‌ ವಸ್ತುಸಂಗ್ರಹಾಲಯವನ್ನು ಮರುಸೃಷ್ಟಿಸಲು ಕೋಲ್ಕತ್ತಾದ ಕುಶಲಕರ್ಮಿಗಳನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.ಕೋಲ್ಕತ್ತಾದಲ್ಲಿ ಈ ಪೆಂಡಾಲ್‌ಗೆ ಭಾರಿ ಜನಸಮೂಹ ಸೇರಿತ್ತು. ರಾಂಚಿ ನಿವಾಸಿಗಳಿಂದ ನಮಗೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಪೆಂಡಾಲ್‌ ವಿಷಯದ ಬಗ್ಗೆ ಯಾರಿಗೂ ನೋವಾಗಿಲ್ಲ ಎಂದು ಅವರು ಹೇಳಿದ್ದಾರೆ.

ರಾಂಚಿ ಜಿಲ್ಲಾ ದುರ್ಗಾ ಪೂಜಾ ಸಮಿತಿಯ ಅಧ್ಯಕ್ಷರೂ ಆಗಿರುವ ಯಾದವ್‌, ನಾವು ಜಾತ್ಯತೀತ ದೇಶದಲ್ಲಿ ವಾಸಿಸುತ್ತಿದ್ದೇವೆ ಮತ್ತು ಎಲ್ಲಾ ಸಮುದಾಯಗಳ ಜನರು ದುರ್ಗಾ ಪೂಜೆಯನ್ನು ಆನಂದಿಸುತ್ತೇವೆ. ನಾವು ವೈದಿಕ ಸಂಪ್ರದಾಯದ ಪ್ರಕಾರ ಪೂಜೆ ಮಾಡುತ್ತೇವೆ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಕೆಲಸವನ್ನು ಮಾಡಿಲ್ಲ ಎಂದು ಹೇಳಿದರು.

ಖಾಸಗಿ ಹೋಟೆಲ್‌ನಲ್ಲಿ ಸಭೆಗೆ ಅಡ್ಡಿ ಪಡಿಸಿದ ಪ್ರತಿಭಟನಾಕಾರರ ಬಂಧನ

ಬೆಂಗಳೂರು,ಸೆ.26-ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿ ದಾಂಧಲೆ ಉಂಟು ಮಾಡಿದ್ದ 41 ಮಂದಿ ಪ್ರತಿಭಟನಾಕಾರರನ್ನು ಹೈಗ್ರೌಂಡ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ರೇಸ್‌‍ ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಅಧಿಕೃತ ಭಾಷೆಯ ಕುರಿತು ಸಂಸದೀಯ ಸಮಿತಿ ವತಿಯಿಂದ ಸೆ.23 ರಿಂದ 25 ರ ವರೆಗೆ ಸಭೆಯನ್ನು ಅಯೋಜಿಸಲಾಗಿತ್ತು.

ಸಭೆಯ ಕೊನೆ ದಿನವಾದ ನಿನ್ನೆ ಬೆಳಗ್ಗೆ 9.30ಕ್ಕೆ ಸಭೆ ಆರಂಭವಾಗಿದ್ದು, 10.45ರ ಸುಮಾರಿಗೆ ಏಕಾಏಕಿ ಹೋಟೆಲ್‌ಗೆ ನುಗ್ಗಿದ 30ರಿಂದ 40 ಮಂದಿ ವಿವಿಧ ಸಂಘಟನೆಯ ಕಾರ್ಯಕರ್ತರು , ಸಭೆಯ ವಿಷಯ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿ, ಸ್ಥಳದಲ್ಲಿದ್ದ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿ ದಾಂಧಲೆ ಉಂಟು ಮಾಡಿರುತ್ತಾರೆ.

ಆ ಸಂದರ್ಭದಲ್ಲಿ ಸಭೆಗೆ ಅಡಚಣೆ ಉಂಟಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ನಿಯಂತ್ರಿಸಿರುತ್ತಾರೆ.
ಈ ಘಟನೆಯಿಂದಾಗಿ ಸಭೆಗೆ ಕೆಲ ಕಾಲ ಅಡಚಣೆ ಉಂಟಾಗಿದ್ದು, ನಂತರ ಪೊಲೀಸರು ಕೈಗೊಂಡ ಕ್ರಮದಿಂದ ಆಯೋಜಿಕರು ಪೂರ್ವ ನಿಯೋಜಿತ ವೇಳಾಪಟ್ಟಿಯಂತೆ ಸಭೆಯನ್ನು ಪೂರ್ಣಗೊಳಿಸಿರುತ್ತಾರೆ.

ಪ್ರತಿಭಟನಾಕಾರರ ವಿರುದ್ಧ ಕಾರ್ಯಕ್ರಮದ ಆಯೋಜಕರು ಹೈಗ್ರೌಂಡ್‌ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 41 ಮಂದಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅವರುಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.

ಸೀರೆ ಕದ್ದ ಮಹಿಳೆ ಮತ್ತು ಹಲ್ಲೆ ಮಾಡಿದ ಅಂಗಡಿ ಮಾಲೀಕ ಸೇರಿ ಮೂವರ ಬಂಧನ

ಬೆಂಗಳೂರು,ಸೆ.26– ಸೀರೆ ಬಂಡಲ್‌ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ಗಮನಿಸಿ ನಡು ರಸ್ತೆಯಲ್ಲೇ ಮನಬಂದಂತೆ ಹಲ್ಲೆ ಮಾಡಿದ ಅಂಗಡಿ ಮಾಲೀಕ ಹಾಗೂ ಆತನ ಸಹಾಯಕನನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಸಿದ್ದಾರೆ.

ಅಂಗಡಿ ಮಾಲೀಕ ಉಮೇದರಾಮ ಹಾಗೂ ಆತನ ಸಹಾಯಕ ಮಹೇಂದ್ರ ಸಿರ್ವಿ ಬಂಧಿತರು.
ಅಲ್ಲದೇ ಸೀರೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ ಮತ್ತು ಸ್ಯಾರೀಸ್‌‍ ಅಂಗಡಿಗೆ ಮೂಲತಃ ಆಂಧ್ರಪ್ರದೇಶದ ಗುಂತಕಲ್‌ನ ಮಹಿಳೆ ಹೋಗಿದ್ದು, ಸೆ.21 ರಂದು ಅಂಗಡಿ ಮುಂಭಾಗದಲ್ಲಿ ಇಟ್ಟಿದ್ದ ಸೀರೆಯ ಬಂಡಲ್‌ನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದನ್ನು ಅಂಗಡಿ ಮಾಲೀಕ ಉಮೇದುರಾಮ ಗಮನಿಸಿದ್ದಾರೆ.

ತಕ್ಷಣ ಮಾಲೀಕ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಸೀರೆ ಸಮೇತ ಆಕೆಯನ್ನು ಹಿಡಿದು 112ಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಮಹಿಳೆಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದಾರೆ.ಪೊಲೀಸರಿಗೆ ತಿಳಿಸುವುದಕ್ಕೂ ಮೊದಲು ಅಂಗಡಿ ಮಾಲೀಕ ಹಾಗೂ ಸಹಾಯಕ ಆ ಮಹಿಳೆ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ನೈತಿಕ ಪೊಲೀಸ್‌‍ಗಿರಿ ನಡೆಸಿರುತ್ತಾನೆ.

ಈ ದೃಶ್ಯವನ್ನು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ಚಿತ್ರಿಕರಣ ಮಾಡಿ, ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ದೃಶ್ಯಾವಳಿ ಆಧರಿಸಿ ಮಹಿಳೆ ಮೇಲೆ ಹಲ್ಲೆ ಮಾಡಿರುವ ಮಾಲೀಕ ಹಾಗೂ ಸಹಾಯಕನನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜನ್ಮದಿನ : ಗೌರವ ಸಲ್ಲಿಸಿದ ಪಿಎಂ ಮೋದಿ

ನವದೆಹಲಿ,ಸೆ.26- ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ದಿ.ಮನಮೋಹನ್‌ ಸಿಂಗ್‌ ಅವರ ಜನದಿನದಂದು ಅವರಿಗೆ ಗೌರವ ಸಲ್ಲಿಸಿ, ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಸರಿಸಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಜಿ ಅವರಿಗೆ ಅವರ ಜನ ವಾರ್ಷಿಕೋತ್ಸವದಂದು ನಮನಗಳು. ಅವರ ಸುದೀರ್ಘ ವರ್ಷಗಳ ಸಾರ್ವಜನಿಕ ಜೀವನದಲ್ಲಿ ಅವರು ನಮ ದೇಶಕ್ಕೆ ನೀಡಿದ ಕೊಡುಗೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಮೋದಿ ಎಕ್‌್ಸನಲ್ಲಿ ಬರೆದುಕೊಂಡಿದ್ದಾರೆ.

ಡಾ. ಮನಮೋಹನ್‌ ಸಿಂಗ್‌ ಅವರು 2004 ಮತ್ತು 2014 ರ ನಡುವೆ ಕಾಂಗ್ರೆಸ್‌‍ ನೇತೃತ್ವದ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದರು ಮತ್ತು 1991 ಮತ್ತು 1996 ರ ನಡುವೆ ಪಿ ವಿ ನರಸಿಂಹ ರಾವ್‌ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅವರ ಅಧಿಕಾರಾವಧಿಯನ್ನು ಭಾರತವು ಮಾರುಕಟ್ಟೆ ಸುಧಾರಣೆಗಳನ್ನು ಪ್ರಾರಂಭಿಸಿದ ಮತ್ತು ಆರ್ಥಿಕತೆಯ ರಾಜ್ಯ ನಿಯಂತ್ರಣವನ್ನು ಸಡಿಲಗೊಳಿಸಿದ ಕಾರಣ ಯುಗಕಾಲ ಎಂದು ಪರಿಗಣಿಸಲಾಗಿದೆ.

ಈಗ ಪಾಕಿಸ್ತಾನದಲ್ಲಿರುವ ಪಂಜಾಬ್‌‍ನ ಒಂದು ಭಾಗದಲ್ಲಿ 1932 ರಲ್ಲಿ ಜನಿಸಿದ ಸಿಂಗ್‌, ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರಾಗಿದ್ದರು. ನಂತರ ಸಾರ್ವಜನಿಕ ಜೀವನವನ್ನು ಪ್ರವೇಶ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು.

ದಾವಣಗೆರೆಯಲ್ಲಿ ಕೋಮುವಾದಿಗಳಿಂದ ಕಲ್ಲುತೂರಾಟ : ಪೊಲೀಸರಿಗೆ ಬಿ.ವೈ.ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು,ಸೆ.26- ದಾವಣಗೆರೆಯ ಕಾರ್ಲ್‌ ಮಾರ್ಕ್ಸ್ ನಗರದಲ್ಲಿ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿರುವ ದುಷ್ಟರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಹೋದರೆ ಪರಿಸ್ಥಿತಿ ಗಂಭೀರ ತಿರುವು ಪಡೆಯಲು ಪೊಲೀಸರೇ ಕಾರಣರಾಗುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಹಿಂದೂ ಸಮುದಾಯದ ಮೇಲಿನ ಕೋಮುವಾದಿ ದುಷ್ಟರ ದಾಳಿ ಸರಣೀ ರೂಪದಲ್ಲಿ ಮುಂದುವರೆಯುತ್ತಲೇ ಇದೆ. ದಾವಣಗೆರೆಯಲ್ಲಿ ಕೋಮು ಉದ್ವಿಗ್ನತೆ ಪ್ರಚೋದಿಸುವ ಬ್ಯಾನರ್‌ ಅಳವಡಿಸಿ ಹಿಂದೂ ಸಮುದಾಯದ ಮನೆಗಳನ್ನು ಟಾರ್ಗೆಟ್‌ ಮಾಡಿ ಕಲ್ಲು ತೂರಾಟ ನಡೆಸಿ ಆತಂಕಮಯ ವಾತಾವರಣ ಸೃಷ್ಟಿಸಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಅತ್ಯಂತ ಖಂಡನೀಯ ಎಂದು ತೀವ್ರ ವಾಗ್ದಳಿ ನಡೆಸಿದ್ದಾರೆ.

ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿ ಭಯಗ್ರಸ್ತ ವಾತಾವರಣ ಉಂಟುಮಾಡಿದ ಮುಸ್ಲಿಂ ಕೋಮುವಾದಿ ದುಷ್ಕರ್ಮಿಗಳನ್ನು ಪೊಲೀಸರು ಈ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಲಿ. ದೇಶದ ಹಲವೆಡೆಗಳಲ್ಲಿ ಐ ಲವ್‌ ಮೊಹಮದ್‌ ಎಂಬ ಬ್ಯಾನರ್‌ ಅಳವಡಿಸಿ ಹಿಂದೂಗಳನ್ನು ಪ್ರಚೋದಿಸಲೆಂದೇ ವಿವಾದ ಹುಟ್ಟುಹಾಕಲಾಗಿದ್ದು, ಇದು ದಾವಣಗೆರೆ ಮೂಲಕ ರಾಜ್ಯವನ್ನೂ ಪ್ರವೇಶಿಸಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಲಿಸ್‌‍ ಇಲಾಖೆ ಅತ್ಯಂತ ಗಂಭೀರವಾಗಿ ಈ ಘಟನೆಯನ್ನು ಪರಿಗಣಿಸಿ ಕೋಮುವಾದಿ ದುಷ್ಟರ ಅಟ್ಟಹಾಸ ರಾಜ್ಯದ ಇತರೆಡೆಗಳಲ್ಲೂ ಪಸರಿಸದಂತೆ ಈ ಕೂಡಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಅಕ್ಟೋಬರ್‌ನಿಂದ ಜಾರಿಗೆ ಬರಲಿವೆ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುವ ಹೊಸ ನಿಯಮಗಳು

ನವದೆಹಲಿ,ಸೆ.26- ಮುಂದಿನ ಅಕ್ಟೋಬರ್‌ ತಿಂಗಳ ಆರಂಭದಿಂದಲೇ ಸಾಮಾನ್ಯ ಜನರ ಜೀವನ ಖರ್ಚಿನ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವಾರು ಹೊಸ ನಿಯಮಗಳು ಜಾರಿಯಾಗುತ್ತಿವೆ.

ರೈಲು ಟಿಕೆಟ್‌ನಿಂದ ಹಿಡಿದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ವರೆಗೆ ಬದಲಾವಣೆಗಳು ನಡೆಯಲಿವೆ. ಇದಲ್ಲದೆ ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು, ಆನ್ಲೈನ್‌ ಗೇಮಿಂಗ್‌ ಕಾನೂನುಗಳು ಮತ್ತು ಇಪಿಎಫ್‌ ಹಣ ಹಿಂಪಡೆಯುವ ಸೌಲಭ್ಯಗಳಲ್ಲಿಯೂ ಮಹತ್ವದ ಪರಿಷ್ಕರಣೆಗಳು ಆಗಲಿವೆ.

ರೈಲು ಟಿಕೆಟ್‌ ಬುಕ್ಕಿಂಗ್‌ನಲ್ಲಿ ಆಧಾರ್‌ ಕಡ್ಡಾಯ :
ಅಕ್ಟೋಬರ್‌ 1, 2025ರಿಂದ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರಲಿದೆ. ಇದರ ಪ್ರಕಾರ, IRCTC ವೆಬ್ಸೈಟ್‌ ಅಥವಾ ಮೊಬೈಲ್‌ ಆ್ಯಪ್‌ ಮೂಲಕ ಬುಕಿಂಗ್‌ ಪ್ರಾರಂಭವಾದ ಮೊದಲ 15 ನಿಮಿಷಗಳಲ್ಲಿ ಸಾಮಾನ್ಯ ಟಿಕೆಟ್‌ ಬುಕ್‌ ಮಾಡುವಾಗ ಆಧಾರ್‌ ಆಧಾರಿತ ದೃಢೀಕರಣ ಕಡ್ಡಾಯವಾಗಲಿದೆ. ಈ ಕ್ರಮದಿಂದ ನಕಲಿ ಬುಕ್ಕಿಂಗ್‌ಗಳನ್ನು ತಡೆದು, ನಿಜವಾದ ಪ್ರಯಾಣಿಕರಿಗೆ ಟಿಕೆಟ್‌ ಸಿಗುವಂತೆ ಮಾಡಲು ರೈಲ್ವೆ ಸಚಿವಾಲಯ ಕ್ರಮ ಕೈಗೊಂಡಿದೆ. ಇದರ ಪರಿಣಾಮವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಪಾರದರ್ಶಕತೆ ಲಭ್ಯವಾಗಲಿದೆ.

ಹೊಸ ಬದಲಾವಣೆ :
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಅ. 1ರಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಬಹು ಯೋಜನೆ ಚೌಕಟ್ಟು (Multiple Scheme Framework & MSF) ಎಂಬ ನಿಯಮ ಜಾರಿಯಾಗಲಿದೆ. ಇದರ ಮೂಲಕ ಸರ್ಕಾರೇತರ ವಲಯದ ಚಂದದಾರರು ಈಗ ಒಂದೇ PAN ಅಥವಾ PRAN ಅಡಿಯಲ್ಲಿ ಹಲವು ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ಈ ಬದಲಾವಣೆಯಿಂದ ಹೂಡಿಕೆದಾರರಿಗೆ ಹೆಚ್ಚು ಆಯ್ಕೆಗಳು ದೊರೆಯಲಿದ್ದು, ನಿವೃತ್ತಿ ನಿಧಿ ರೂಪಿಸುವಲ್ಲಿ ಹೆಚ್ಚು ಸ್ವಾತಂತ್ರ್ಯ ಸಿಗಲಿದೆ.

ಎಲ್‌ಪಿಜಿ ಸಿಲಿಂಡರ್‌ ಬೆಲೆಗಳಲ್ಲಿ ಬದಲಾವಣೆ :
ಪ್ರತಿ ತಿಂಗಳಂತೆ, ಅ.1ರಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಗಳು ಬದಲಾಗುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ತಿಂಗಳು ಬೆಲೆಗಳಲ್ಲಿ ಪರಿಷ್ಕರಣೆ ಕೂಡ ಮಾಡಲಾಗಿತ್ತು. ಈ ಬಾರಿ ಕೂಡ ಅಕ್ಟೋಬರ್‌ ಆರಂಭದಲ್ಲಿ ಸಿಲಿಂಡರ್‌ ದರದಲ್ಲಿ ಬದಲಾವಣೆ ಕಾಣಬಹುದಾದ್ದರಿಂದ, ಗೃಹಿಣಿಯರ ಪಾಕೆಟ್‌ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.

ಹೊಸ ಕಾನೂನು :
ಅ.1ರಿಂದ ಆನ್ಲೈನ್‌ ಗೇಮಿಂಗ್‌ ಕ್ಷೇತ್ರದಲ್ಲಿ ಹೊಸ ಕಾನೂನು ಜಾರಿಗೆ ಬರಲಿದೆ. ಇದರ ಪ್ರಕಾರ, ದೇಶದಲ್ಲಿ ಯಾವುದೇ ರೀತಿಯ ಆನ್ಲೈನ್‌ ಜೂಜಾಟ, ಬೆಟ್ಟಿಂಗ್‌ ಅಥವಾ ನೈಜ ಹಣದ ಆಟಗಳಿಗೆ ಅವಕಾಶವಿರುವುದಿಲ್ಲ. ಸರ್ಕಾರವು ಸ್ಪಷ್ಟವಾಗಿ ಕಾನೂನಿನಲ್ಲಿ ಈ ಬಗ್ಗೆ ಹೇಳಿದ್ದು, ಕೇವಲ ಕಾನೂನಾತಕ ಮತ್ತು ಸುರಕ್ಷಿತ ಆನ್ಲೈನ್‌ ಗೇಮ್ಸೌ ಮಾತ್ರ ಪ್ರೋತ್ಸಾಹಿಸಲಾಗುತ್ತದೆ. ಈ ಕ್ರಮವು ಯುವಕರನ್ನು ಆರ್ಥಿಕ ನಷ್ಟ ಮತ್ತು ವ್ಯಸನದಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.

ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ :
ದೀಪಾವಳಿ ಹಬ್ಬಕ್ಕೂ ಮುನ್ನ ಇಪಿಎಫ್‌ ಖಾತೆದಾರರಿಗೆ ಸಂತೋಷದ ಸುದ್ದಿ ಬರಬಹುದಾಗಿದೆ. ಅಕ್ಟೋಬರ್‌ 10-11ರಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಭೆಯಲ್ಲಿ, 3.0 ಅಡಿಯಲ್ಲಿ ಎಟಿಎಂಗಳ ಮೂಲಕ ನೇರವಾಗಿ ಪಿಎಫ್‌ ಹಣ ಹಿಂಪಡೆಯುವ ಅವಕಾಶ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಈ ಕ್ರಮ ಜಾರಿಯಾದರೆ, ಇಪಿಎಫ್‌ ಹಣವನ್ನು ಎಟಿಎಂಗಳಿಂದಲೇ ಸುಲಭವಾಗಿ ಪಡೆಯಬಹುದಾಗಿದೆ. ಇದರಿಂದ ನೌಕರರಿಗೆ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ.

ಅಕ್ಟೋಬರ್‌ ಆರಂಭದಿಂದ ಜಾರಿಯಾಗುವ ಈ ಐದು ನಿಯಮ ಬದಲಾವಣೆಗಳು ಸಾಮಾನ್ಯ ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವಂತಿವೆ. ರೈಲು ಟಿಕೆಟ್‌ ಬುಕ್ಕಿಂಗ್‌ ನಿಯಮ, ಎನ್‌ಪಿಎಸ್‌‍ ಹೂಡಿಕೆ ಆಯ್ಕೆಗಳು, ಎಲ್‌ಪಿಜಿ ಸಿಲಿಂಡರ್‌ ಬೆಲೆ ಬದಲಾವಣೆ, ಆನ್ಲೈನ್‌ ಗೇಮಿಂಗ್‌ ನಿಯಂತ್ರಣ ಹಾಗೂ ಇಪಿಎಫ್‌ ಹಣ ಹಿಂಪಡೆಯುವ ಹೊಸ ಸೌಲಭ್ಯ ಜಾರಿಗೆ ಬರಲಿದೆ.