Friday, November 7, 2025
Home Blog Page 84

ಕಾವೇರಿ ಆರತಿಗೆ ಕ್ಷಣಗಣನೆ, ಮಧುವಣಗಿತ್ತಿಯಂತೆ ಸಿಂಗಾರಗೊಂಡ ಕೆಆರ್‌ಎಸ್‌‍ ಜಲಾಶಯ

ಶ್ರೀರಂಗಪಟ್ಟಣ,ಸೆ.26– ಕಾವೇರಿ ಆರತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೆಆರ್‌ಎಸ್‌‍ ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಅದ್ಧೂರಿಯಾಗಿ ಕಾವೇರಿ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕೆ ಕೃಷ್ಣ ರಾಜಸಾಗರದ ಬೋಟಿಂಗ್‌ ಪಾಯಿಂಟ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 6 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಒಟ್ಟು 5 ದಿನಗಳ ಕಾಲ ನಡೆಯುವ ಕಾರ್ಯಕ್ರಮ ಒಂದು ರೀತಿ ಹಬ್ಬದಂತಿರಲಿದೆ. ಈಗಾಗಲೇ ಜಲಾಶಯಕ್ಕೆ ವರ್ಣರಂಜಿತ ವಿದ್ಯುತ್‌ ದ್ವೀಪಗಳಿಂದ ಅಲಂಕಾರ ಮಾಡಲಾಗಿದ್ದು, ಜಗಮಗಿಸುತ್ತಿದೆ. ಕಾವೇರಿ ಆರತಿಗೆ ಕರ್ನಾಟಕ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದ್ದು, ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ತರಬೇತಿ ಪಡೆದ 12 ರಿಂದ 13 ಸ್ಥಳೀಯ ಪುರೋಹಿತರು ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಆಚರಿಸಲಿದ್ದಾರೆ.

ಬೃಂದಾವನಕ್ಕೆ ಬರುವ ಪ್ರವಾಸಿಗರಿಗೆ ಉಚಿತ ಪ್ರವೇಶವಿದೆ. ಜೊತೆಗೆ 5 ದಿನಗಳ ಕಾಲ ಟೋಲ್‌ ಸಂಗ್ರಹದಲ್ಲೂ ಪ್ರವಾಸಿಗರಿಗೆ ವಿನಾಯಿತಿ ಇರಲಿದೆ.ಕಾವೇರಿ ಆರತಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಉಚಿತ ಲಾಡು ವಿತರಿಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಲಿರುವ ಗಣ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಆಸನ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮೈಸೂರು ದಸರಾಗೆ ಭೇಟಿ ನೀಡಿರುವ ಪ್ರವಾಸಿಗರು ಕಾವೇರಿ ಆರತಿಯಲ್ಲೂ ಪಾಲ್ಗೊಂಡು ಜಲಾಶಯದ ಸೌಂದರ್ಯವನ್ನು ಸವಿಯುವ ಸೌಭಾಗ್ಯವನ್ನು ಕಲ್ಪಿಸಲಾಗಿದೆ.

ಮೈಸೂರು ಮಾದರಿಯಲ್ಲೇ ತುಮಕೂರು ದಸರಾದಲ್ಲಿ ವಿದ್ಯಾರ್ಥಿಗಳಿಂದ ಪಂಜಿನ ಕವಾಯತು : ಗೃಹ ಸಚಿವ ಪರಮೇಶ್ವರ್

ತುಮಕೂರು,ಸೆ.26– ಮೈಸೂರು ಮಾದರಿಯಲ್ಲೇ 240 ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಸೆ.28 ರಂದು ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಪಂಜಿನ ಕವಾಯತಿನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್‌ ಹಾಗೂ ಗಾಗಲ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಪಂಜಿನ ಕವಾಯತು ಪ್ರದರ್ಶನವನ್ನು ನಗರದ ಮಹಾತ ಗಾಂಧಿ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ತುಮಕೂರು ದಸರಾ ಉತ್ಸವವು ಈಗಾಗಲೇ ರಾಜ್ಯದ ಗಮನ ಸೆಳೆದಿದ್ದು, ವಿದ್ಯಾರ್ಥಿಗಳ ಪಂಜಿನ ಕವಾಯತು ಪ್ರದರ್ಶನವು ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಲಿದೆ. ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಏರ್ಪಡಿಸುವ ಮೂಲಕ ಜಿಲ್ಲೆಯು ಮತ್ತೊಂದು ಇತಿಹಾಸ ಸೃಷ್ಟಿಸಲಿದ್ದು, ಈ ಪ್ರದರ್ಶನ ವಿದ್ಯಾರ್ಥಿಗಳ ಜೀವನದಲ್ಲೂ ನೆನಪಿನ ಕ್ಷಣವಾಗಲಿದೆ ಎಂದು ತಿಳಿಸಿದರು.

ಮೈಸೂರು ದಸರಾ ಉತ್ಸವದಲ್ಲಿ ಪೊಲೀಸ್‌‍ ಪಡೆಯು ಶಿಸ್ತಿನಿಂದ ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತದೆ. ಅದೇ ರೀತಿ ನಮ ಜಿಲ್ಲೆಯಲ್ಲೂ ಪಂಜಿನ ಕವಾಯತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ಪಾಲ್ಗೊಳ್ಳಲು ಒಂದೇ ರೀತಿಯ ಟ್ರ್ಯಾಕ್‌ಸೂಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರಲ್ಲದೆ, ಪಂಜಿನ ಕವಾಯತು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಟ್ರೈನರ್‌ಗಳಿಂದ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪಂಜಿನ ಕವಾಯತು ವೀಕ್ಷಿಸಲು ಹೆಸರು ನೋಂದಣಿಗಾಗಿ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕರು https://smarttumakuru.karnatakasmartcity.in/OneCityOneApp/#/Dasara/bookingdashboard ಈ ಆ್ಯಪ್‌ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ದಸರಾ ಉತ್ಸವದ ಪ್ರಯುಕ್ತ ರಾಷ್ಟ್ರ ಮಟ್ಟದ ರೈಫಲ್‌ ಶೂಟಿಂಗ್‌ ಸ್ಪರ್ಧೆಗಳು ಇದೇ ತಿಂಗಳು 27 ಮತ್ತು 28ರಂದು ಮಹಾತ ಗಾಂಧಿ ಕ್ರೀಡಾಂಗಣದ ಒಳಾಂಗಣದಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡದ ಸುಮಾರು 500 ಕ್ರೀಡಾಪಟುಗಳು ಹಾಗೂ ಭಾರತದ ಯೋಧರ ಶೂಟಿಂಗ್‌ ತಂಡವೂ ಸಹ ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಇದರ ಜೊತೆಗೆ ಟೆನ್ನಿಸ್‌‍, ಜಿಮ್ನಾಸ್ಟಿಕ್‌, ಕಬ್ಬಡ್ಡಿ, ವಾಲಿಬಾಲ್‌, ಚೆಸ್‌‍, ಮ್ಯಾರಥಾನ್‌ ಹಾಗೂ ಖೋ-ಖೋ ಸೇರಿ ಒಟ್ಟು 9 ಕ್ರೀಡೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಚಿವರು :
ಇದಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಧಾರ್ಮಿಕ ಮಂಟಪದಲ್ಲಿ ರಾಜರಾಜೇಶ್ವರಿ ಅಲಂಕಾರದಲ್ಲಿದ್ದ ಶ್ರೀ ಚಾಮುಂಡೇಶ್ವರಿಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್‌ ದಂಪತಿ ಪೂಜೆ ಸಲ್ಲಿಸಿದರು. ನವರಾತ್ರಿ ಪ್ರಯುಕ್ತ ಜರುಗಿದ ಶ್ರೀ ಕನಕದುರ್ಗಾ ಹೋಮದಲ್ಲಿ ಪಾಲ್ಗೊಂಡ ಸಚಿವರು, ಪೂರ್ಣಾಹುತಿ ಸೇರಿದಂತೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್‌, ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಕೆ.ವಿ. ಅಶೋಕ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪ ವಿಭಾಗಾಧಿಕಾರಿ ನಾಹಿದಾ ಜ಼ಮ್‌ ಜ಼ಮ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌‍ ಉಪಾಧೀಕ್ಷಕ ಪರಮೇಶ್ವರ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ದಸರಾ ಪ್ರಯುಕ್ತ ಹೆಚ್ಚುವರಿ ಬಸ್‌‍ ಸೇವೆಗೆ ಚಾಲನೆ

ಬೆಂಗಳೂರು,ಸೆ.26- ನಾಡ ಹಬ್ಬ ಮೈಸೂರು ದಸರಾ ಪ್ರಯುಕ್ತ ಪ್ರಯಾಣಿಕರ ಬೇಡಿಕೆಯಾನುಸಾರ ಸಾರಿಗೆ ಸೌಲಭ್ಯವನ್ನು ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ 280 ಹೆಚ್ಚುವರಿ ಬಸ್‌‍ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೈಸೂರು ಸ್ಯಾಟಲೈಟ್‌ ಬಸ್‌‍ ನಿಲ್ದಾಣದಲ್ಲಿ ದಸರಾ ವಿಶೇಷ ಕಾರ್ಯಾಚರಣೆ ಅಂಗವಾಗಿ ವಾಹನಗಳಿಗೆ ಪೂಜೆ ಸಲ್ಲಿಸುವ ಮುಖೇನ ದಸರಾ ವಿಶೇಷ ಬಸ್ಸುಗಳಿಗೆ ಚಾಲನೆ ನೀಡಲಾಯಿತು.

ಮುಂದಿನ 10 ದಿನಗಳವರೆಗೆ ಮೈಸೂರು ರಸ್ತೆ ಬಸ್‌‍ ನಿಲ್ದಾಣದಲ್ಲಿ ದಸರಾ ಕ್ಯಾಂಪ್‌ ಇರಲಿದ್ದು, ಬೆಂಗಳೂರು ಕೇಂದ್ರೀಯ ವಿಭಾಗ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗಗಳಿಂದ ಒಟ್ಟು 280 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ), ಮುಖ್ಯ ಭದ್ರತಾ ಮತ್ತು ಜಾಗ್ರತಾಧಿಕಾರಿ, ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕೆಂಪೇಗೌಡ ಬಸ್‌‍ ನಿಲ್ದಾಣ, ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ ಹಾಗೂ ಅಧಿಕಾರಿ ಸಿಬ್ಬಂದಿ ವರ್ಗದವರು ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಚಾಲಕ ನಿರ್ವಾಹಕರಿಗೆ ಹಾಗೂ ಪ್ರಯಾಣಿಕರಿಗೆ ಸಿಹಿ ವಿತರಿಸುವ ಮೂಲಕ ಶುಭ ಕೋರಲಾಯಿತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-09-2025)

ನಿತ್ಯ ನೀತಿ : ಅವರಿಂದ ಇವರಿಂದ ಮೂರ್ಖನಾದೆ ಎಂದು ದುಃಖ ಪಡಬೇಡ.ಸತ್ಯದ ಅರಿವಾಯಿತು ಅಂದುಕೊಂಡು ಸಂತೋಷವಾಗಿರು. ಕೆಲವು ಸತ್ಯದ ಮುಖಗಳು ಬೆಳಕಿಗೆ ಬರುವುದೇ ಅನುಭವದ ಮೇಲೆ..!!

ಪಂಚಾಂಗ : ಶುಕ್ರವಾರ, 26-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಚತುರ್ಥಿ / ನಕ್ಷತ್ರ: ವಿಶಾಖಾ / ಯೋಗ: ವಿಷ್ಕಂಭ / ಕರಣ: ಬವ

ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.13
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ವೃಷಭ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.

ಕಟಕ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.

ತುಲಾ: ಕೆಲಸಕ್ಕೆ ಸಂಬಂ ಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕವೆನಿಸಲಿದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ.

ಮಕರ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

ಸಮೀಕ್ಷಾ ಕರ್ತವ್ಯದಿಂದ ವಿಮುಕ್ತರಾಗುವ ನೌಕರರ ಮೇಲೆ ಶಿಸ್ತು ಕ್ರಮ : ಸರ್ಕಾರ ಎಚ್ಚರಿಕೆ

ಬೆಂಗಳೂರು, ಸೆ.25-ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಳ್ಳಲಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಹಾಜರಾಗದೇ ಮತ್ತು ಕರ್ತವ್ಯಗಳನ್ನು ನಿರ್ವಹಿಸದೇ ಇರುವಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ ಪಾಟೀಲ ತಿಳಿಸಿದರು.

ಸಚಿವ ಸಂಪುಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಮೀಕ್ಷಾ ಕಾರ್ಯದಲ್ಲಿ ನಿಯೋಜಿಸಲ್ಪಡುವ ಅಧಿಕಾರಿ/ನೌಕರರು ಸಮೀಕ್ಷಾ ಕಾರ್ಯಕ್ಕೆ ಗೈರುಹಾಜರಾದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಬೆಂಗಳೂರು ವ್ಯಾಪ್ತಿಯಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕುರಿತು ಕೆಲವು ನಿರ್ದೇಶನಗಳನ್ನು ನೀಡಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಿಗ್ಗೆ 11.30 ಗಂಟೆಗೆ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿ‍ರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಿದ್ದಾರೆಂದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕಾಗಿ ಗಣತಿದಾರರಾಗಿ ನಿಯೋಜಿಸಲ್ಪಡುವ ಸರ್ಕಾರ, ನಿಗಮ/ಮಂಡಳಿಗಳ ಅಧಿಕಾರಿ/ ನೌಕರರುಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021ರಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರನ್ವಯ ಶಿಸ್ತುಕ್ರಮ ಮತ್ತು ದಂಡನೆ ವಿಧಿಸುವ ಅಧಿಕಾರವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಪ್ರತ್ಯಾಯೋಜಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ಅವರು ಹೇಳಿದರು.

ಮದುವೆಗೆಪೋಷಕರು ವಿರೋಧ, ರೈಲಿಗೆ ತಲೆಕೊಟ್ಟ ಪ್ರೇಮಿಗಳು

ಬೆಂಗಳೂರು,ಸೆ.25– ಮದುವೆಗೆ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರಿಂದ ನೊಂದ ಪ್ರೇಮಿಗಳು ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಾಲೂರು ತಾಲ್ಲೂಕಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಶೆಟ್ಟಹಳ್ಳಿ ನಿವಾಸಿಗಳಾದ ಸತೀಶ್‌ (19) ಹಾಗೂ ಶ್ವೇತಾ (18) ಆತಹತ್ಯೆಗೆ ಶರಣಾದ ಪ್ರೇಮಿಗಳು.

ಸತೀಶ್‌ ಐಟಿಐ ವ್ಯಾಸಂಗ ಮಾಡಿದ್ದು, ಶ್ವೇತಾ ಮೊದಲ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಮನೆಯವರ ಒಪ್ಪಿಗೆ ಪಡೆದೇ ಮದುವೆ ಆಗೋಣವೆಂದು ನಿರ್ಧರಿಸಿದ್ದರು.ಅದರಂತೆ ಪರಸ್ಪರ ಪ್ರೀತಿಯನ್ನು ಪೋಷಕರ ಬಳಿ ಇಬ್ಬರೂ ಹೇಳಿಕೊಂಡಿದ್ದಾರೆ. ಆದರೆ ಜಾತಿ ಕಾರಣವೊಡ್ಡಿ ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಪೋಷಕರು ಒಪ್ಪದ ಕಾರಣ ನೊಂದಿದ್ದ ಪ್ರೇಮಿಗಳು ಆತಹತ್ಯೆಗೆ ನಿರ್ಧರಿಸಿದ್ದಾರೆ. ನಿನ್ನೆ ಸತೀಶ್‌ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾನೆ. ಇಂದು ಬೆಳಗ್ಗೆ ಇಬ್ಬರು ಮನೆಯಿಂದ ಹೊರಬಂದಿದ್ದಾರೆ.ನಂತರ ಬೈಕ್‌ನಲ್ಲಿ ತನ್ನ ಪ್ರಿಯತಮೆ ಶ್ವೇತಾಳನ್ನು ಸತೀಶ್‌ ಕರೆದುಕೊಂಡು ಮಾಲೂರಿನ ಬ್ಯಾಟರಾಯನಹಳ್ಳಿ ರೈಲ್ವೆ ನಿಲ್ದಾಣದ ಬಳಿಹೋಗಿ ಬೈಕ್‌ ನಿಲ್ಲಿಸಿದ್ದಾನೆ.

ನಂತರ ಕೋಲಾರದಿಂದ ಬೆಂಗಳೂರಿಗೆ ಹೊರಡುವ ರೈಲು ಬರುವುದನ್ನೇ ಕಾದು ರೈಲು ಬರುತ್ತಿದ್ದಂತೆ 6.30 ರ ಸುಮಾರಿನಲ್ಲಿ ಇಬ್ಬರೂ ಕೈ-ಕೈ ಹಿಡಿದು ಹಳಿ ಮೇಲೆ ಹಾರಿ ರೈಲಿಗೆ ಸಿಕ್ಕಿ ಆತಹತ್ಯೆ ಮಾಡಿಕೊಂಡಿದ್ದಾರೆ.

ಸುದ್ದಿ ತಿಳಿದು ಕಂಟೋನೆಂಟ್‌ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿ ಅವರ ಪೋಷಕರುಗಳಿಗೆ ಮಾಹಿತಿ ರವಾನಿಸಿದ್ದಾರೆ.
ಈ ಬಗ್ಗೆ ಕಂಟೋನೆಂಟ್‌ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೊಡ್ಡಬಳ್ಳಾಪುರ : ನಡು ರಸ್ತೆಯಲ್ಲೇ ವ್ಯಕ್ತಿಯ ತಲೆಜಜ್ಜಿ ಕೊಲೆ

ದೊಡ್ಡಬಳ್ಳಾಪುರ,ಸೆ.25- ವ್ಯಕ್ತಿಯೊಬ್ಬನನ್ನು ನಡುರಸ್ತೆಯಲ್ಲಿ ದುಷ್ಕರ್ಮಿಗಳು ಸಿಮೆಂಟ್‌ ಇಟ್ಟಿಗೆಯಿಂದ ತಲೆ ಜಜ್ಜಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಬುಲೆಟ್‌ ರಘು (38) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳ ಗುಂಪು ರಘು ಮೇಲೆ ದಾಳಿ ಮಾಡಿ ಇಟ್ಟಿಗೆಯಿಂದ ತಲೆಜಜ್ಜಿ ಕೊಲೆಗೈದು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ರವಿ ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್‌ ಸಾಧಿಕ್‌ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ವಯಕ್ತಿಕ ಕಾರಣಕ್ಕಾಗಿ ಪರಿಚಯಸ್ಥರೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು, ಕೊಲೆಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಹಿಂದೂ ಕಾನೂನಿನಡಿಯಲ್ಲಿ ಮದುವೆ ನಂತರ ಮಹಿಳೆಯ ಗೋತ್ರವೂ ಬದಲಾಗುತ್ತದೆ : ಸುಪ್ರೀಂ

ನವದೆಹಲಿ,ಸೆ.25- ಹಿಂದೂ ಕಾನೂನಿನಡಿಯಲ್ಲಿ ಮಹಿಳೆ ಮದುವೆಯಾದಾಗ, ಆಕೆಯ ಗೋತ್ರವೂ ಸಹಾ ಬದಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.ಮಕ್ಕಳಿಲ್ಲದ ಹಿಂದೂ ವಿಧವೆಯ ಮರಣದ ನಂತರ,ಆಸ್ತಿಯು ಆಕೆಯ ಹೆತ್ತವರ ಬದಲು ಆಕೆಯ ಗಂಡನ ಕುಟುಂಬಕ್ಕೆ ಹೋಗುತ್ತದೆ ಎಂದು ಹೇಳುವ ಹಿಂದೂ ಉತ್ತರಾಧಿಕಾರ ಕಾಯ್ದೆ (ಎಚ್‌ಎಸ್‌‍ಎ)ಯ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಏಕೈಕ ಮಹಿಳಾ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಮಾಜವು ಕನ್ಯಾದಾನ ಎಂಬ ಪರಿಕಲ್ಪನೆಯನ್ನು ಹೊಂದಿದೆ, ಅದರ ಅಡಿಯಲ್ಲಿ ಒಬ್ಬ ಮಹಿಳೆ ಮದುವೆಯಾದಾಗ, ಅವಳ ಗೋತ್ರ ಅಂದರೆ ಒಂದು ಕುಲ ಅಥವಾ ಸಾಮಾನ್ಯ ಪೂರ್ವಜರಿಂದ ಬಂದ ವಂಶಸ್ಥರು ಸಹ ಬದಲಾಗುತ್ತದೆ. ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಒಂದು ವಿಷಯವು ತನ್ನ ನಿರ್ಧಾರದಿಂದ ಮುರಿಯಲ್ಪಡಬೇಕೆಂದು ನ್ಯಾಯಾಲಯ ಬಯಸುವುದಿಲ್ಲ ಎಂದು ಅವರು ಹೇಳಿದರು.

ಮಕ್ಕಳಿಲ್ಲದ ಹಿಂದೂ ವಿಧವೆಯೊಬ್ಬಳು ವಿಲ್‌ ಇಲ್ಲದೆ ಸಾವನ್ನಪ್ಪಿದರೆ, ಆಕೆಯ ಆಸ್ತಿಯನ್ನು ಯಾರು ಪಡೆದುಕೊಳ್ಳುತ್ತಾರೆ ಎಂಬುದು ಹಲವಾರು ಅರ್ಜಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಬಂದ ಪ್ರಾಥಮಿಕ ಕಾನೂನಿನ ಪ್ರಶ್ನೆಯಾಗಿದೆ.ಪ್ರಸ್ತುತ ಕಾನೂನಿನಡಿಯಲ್ಲಿ, ಆಸ್ತಿಯನ್ನು ಆಕೆಯ ತಾಯಿಯ ಕುಟುಂಬಕ್ಕೆ ಅಲ್ಲ, ಅತ್ತೆ-ಮಾವಂದಿರಿಗೆ ವರ್ಗಾಯಿಸಲಾಗುತ್ತದೆ.

ಕೋವಿಡ್‌-19 ನಿಂದ ಯುವ ದಂಪತಿಗಳು ಸಾವನ್ನಪ್ಪಿದ ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ಇದರ ನಂತರ, ಪುರುಷ ಮತ್ತು ಮಹಿಳೆಯ ತಾಯಂದಿರು ಉಳಿದದ್ದನ್ನು ಆನುವಂಶಿಕವಾಗಿ ಪಡೆಯಲು ಕಾನೂನು ಹೋರಾಟ ನಡೆಸುತ್ತಿದ್ದಾರೆ. ಒಂದೆಡೆ, ಪುರುಷನ ತಾಯಿ ದಂಪತಿಗಳ ಸಂಪೂರ್ಣ ಆಸ್ತಿಯ ಹಕ್ಕು ತನಗೆ ಇದೆ ಎಂದು ಹೇಳಿಕೊಂಡರೆ, ಮಹಿಳೆಯ ತಾಯಿ ತನ್ನ ಮಗಳ ಸಂಗ್ರಹವಾದ ಸಂಪತ್ತು ಮತ್ತು ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಬಯಸುತ್ತಾರೆ.

ಅಂತಹ ಇನ್ನೊಂದು ಪ್ರಕರಣದಲ್ಲಿ, ಮಕ್ಕಳಿಲ್ಲದೆ ದಂಪತಿಗಳು ಸಾವನ್ನಪ್ಪಿದ ನಂತರ, ಆ ವ್ಯಕ್ತಿಯ ಸಹೋದರಿ ಅವರು ಬಿಟ್ಟುಹೋದ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿದ್ದು, ಉನ್ನತ ನ್ಯಾಯಾಲಯದ ಮಧ್ಯಸ್ಥಿಕೆಯ ಅಗತ್ಯವಿದೆ ಎಂದು ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಆದರೆ, ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಆರ್‌. ಮಹಾದೇವನ್‌ ಅವರನ್ನೊಳಗೊಂಡ ಪೀಠವು ವಕೀಲರಿಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದರು. ಕನ್ಯಾದಾನ ಮತ್ತು ಗೋತ್ರ-ದಾನ ಪರಿಕಲ್ಪನೆಯ ಬಗ್ಗೆ ವಕೀಲರಿಗೆ ಮನವರಿಕೆ ಮಾಡಿಕೊಡುತ್ತಾ ನ್ಯಾಯಮೂರ್ತಿ ನಾಗರತ್ನ ಅವರು, ಒಬ್ಬ ಮಹಿಳೆ ಮದುವೆಯಾದಾಗ, ಅವಳ ಪತಿ ಮತ್ತು ಅವನ ಕುಟುಂಬವು ಅವಳಿಗೆ ಜವಾಬ್ದಾರರಾಗಿರುತ್ತಾರೆ.

ವಿವಾಹಿತ ಮಹಿಳೆ ತನ್ನ ಸಹೋದರನ ವಿರುದ್ಧ ಜೀವನಾಂಶ ಅರ್ಜಿಯನ್ನು ಸಲ್ಲಿಸುವುದಿಲ್ಲ ಎಂದು ಅವರು ಹೇಳಿದರು.ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮದುವೆಯ ಆಚರಣೆಗಳು, ಅವರು ಒಂದು ಗೋತ್ರದಿಂದ ಇನ್ನೊಂದಕ್ಕೆ ಹೋಗುತ್ತಿದ್ದಾರೆ ಎಂದು ಘೋಷಿಸುತ್ತವೆ. ಒಬ್ಬ ಮಹಿಳೆ ಬಯಸಿದರೆ ಅವಳು ಮತ್ತೆ ಮದುವೆಯಾಗಬಹುದು. ಆದರೆ ಅವಳು ಇಚ್ಛೆಪಟ್ಟು ಆಸ್ತಿಯನ್ನು ದಾನ ಮಾಡಬಹುದು ಎಂದರು.

ಒಬ್ಬ ಹಿಂದೂ ವಿಧವೆಯು ಮರಣ ಹೊಂದುತ್ತಿರುವಾಗ ಆಕೆಯ ಆಸ್ತಿಯು ಪತಿಯ ಉತ್ತರಾಧಿಕಾರಿಗಳಿಗೆ ಹೋಗುತ್ತದೆ ಎಂದು ಹೇಳುತ್ತದೆ. ಒಂದು ವೇಳೆ ಆಕೆಗೆ ಗಂಡು ಮತ್ತು ಹೆಣ್ಣು ಮಕ್ಕಳು (ಯಾವುದೇ ಪೂರ್ವ ಮೃತ ಮಗ ಅಥವಾ ಮಗಳ ಮಕ್ಕಳು ಸೇರಿದಂತೆ) ಇಲ್ಲದಿದ್ದರೆ ಮತ್ತು ಆಕೆಯ ಪತಿಯ ಬಳಿ ಇದ್ದರೆ, ಮರು ಮದುವೆಯಾಗದ ಹಿಂದೂ ವಿಧವೆ ಬಿಟ್ಟುಹೋದ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಯಾವುದೇ ಮಗು ಅಥವಾ ಮೊಮಕ್ಕಳು ಇಲ್ಲದಿದ್ದರೆ, ಸೆಕ್ಷನ್‌ 15 (1)(ಬಿ) ಅತ್ತೆ-ಮಾವಂದಿರನ್ನು ಉತ್ತರಾಧಿಕಾರದ ಸಾಲಿನಲ್ಲಿ ಮೊದಲ ಸ್ಥಾನದಲ್ಲಿರಿಸುತ್ತದೆ. ಉತ್ತರಾಧಿಕಾರ ವಿವಾದದ ವಿಷಯವನ್ನು ಮಧ್ಯಸ್ಥಿಕೆಗೆ ಉಲ್ಲೇಖಿಸುವಾಗ, ಸುಪ್ರೀಂ ಕೋರ್ಟ್‌ ಈ ವಿಭಾಗದ ಕಾನೂನುಬದ್ಧತೆಯ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡಿತು.

ಮೈಸೂರಿನಲ್ಲಿ ಬೈರಪ್ಪನವರ ಸ್ಮಾರಕ ನಿರ್ಮಾಣ : ಸಿಎಂ ಘೋಷಣೆ

ಬೆಂಗಳೂರು, ಸೆ.25- ಸಾಹಿತಿ ಎಸ್‌‍.ಎಲ್‌. ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲಾಗು ವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭೈರಪ್ಪ ಅವರ ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇರು ಸಾಹಿತಿಯ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶೋಕಿಸಿದರು.

ಭೈರಪ್ಪ 25ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಇವರ ಸಾಹಿತ್ಯ 40 ಭಾಷೆಗಳಿಗೆ ಭಾಷಾಂತರಗೊಂಡಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೇರೆ ಸಾಹಿತಿಗಳ ಪುಸ್ತಕಗಳು ತುರ್ಜುಮೆಗೊಂಡಿರುವ ಉದಾಹರಣೆಗಳಿಲ್ಲ ಎಂದರು.

ಪ್ರೌಢಶಾಲೆಯಿಂದ ಸ್ನಾತಕೋತ್ತರವರೆಗೂ ಮೈಸೂರಿನಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಕಷ್ಟಪಟ್ಟು ಮೇಲೆ ಬಂದವರು. ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ಬೋಧನೆ ಹಾಗೂ ಬರೆವಣಿಗೆ ಎರಡನ್ನೂ ಏಕಕಾಲಕ್ಕೆ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.

ಪದಶ್ರೀ, ಸರಸ್ವತಿ ಸನಾನ್‌, ನಾಡೋಜ, ರಾಜ್ಯೋತ್ಸವ, ಪಂಪಾ ಸೇರಿದಂತೆ ಅನೇಕ ಪ್ರಶಸ್ತಿಗಳು ಆವರಿಗೆ ಲಭಿಸಿದ್ದವು. ಎಲ್ಲದಕ್ಕೂ ಅವರು ಅರ್ಹರಿದ್ದರು. ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ ಎಂಬ ನೋವು ಉಳಿದಿತ್ತು, ನನ್ನ ಪ್ರಕಾರ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು ಎಂದರು.

ಭೈರಪ್ಪ ಹಾಗೂ ನನ್ನ ವಿಚಾರಗಳ ನಡುವೆ ವ್ಯತ್ಯಾಸವಿದ್ದರೂ ಸ್ನೇಹಕ್ಕೆ ಕುಂದಾಗಿರಲಿಲ್ಲ. ಸಾಹಿತ್ಯ ಹಾಗೂ ದೃಷ್ಟಿಕೋನಗಳು ಬೇರೆ ಬೇರೆಯಾಗಿರಬಹುದು, ಒಂದೇ ಆಗಿರಬೇಕೆಂಬ ನಿಯಮಗಳೂ ಇಲ್ಲ. ಅಭಿಪ್ರಾಯ ಬೇರೆ ಇದೆ ಎಂಬ ಕಾರಣಕ್ಕೆ ಅಭಿಮಾನಿಯಾಗಿರಬಾರದು ಎಂದೇನಿಲ್ಲ ಎಂದರು.

ಸಚಿವರಾದ ಮಧುಬಂಗಾರಪ್ಪ, ಶಿವರಾಜ ತಂಗಡಗಿ ಶಾಸಕರಾದ ರಾಘವೇಂದ್ರ ಹಿಟ್ನಾಳ್‌, ಅಲ್ಲಮಪ್ರಭು ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಭೈರಪ್ಪ ಅವರ ಕುಟುಂಬದ ಸದಸ್ಯರನ್ನು ಸಿದ್ದರಾಮಯ್ಯ ಭೇಟಿ ಮಾಡಿ, ಸಾಂತ್ವಾನ ಹೇಳಿದರು.

ಬೈಕ್‌ಗೆ ವಾಟರ್‌ಟ್ಯಾಂಕರ್‌ ಡಿಕ್ಕಿಯಾಗಿ ಅಪ್ಪ ಸಾವು, ಮಗ ಪಾರು

ಬೆಂಗಳೂರು,ಸೆ.25- ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ಹೋಗುತ್ತಿದ್ದಾಗ ವಾಟರ್‌ಟ್ಯಾಂಕರ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟಿರುವ ಘಟನೆ ವೈಟ್‌ಫೀಲ್‌್ಡ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೂಲತಃ ಕೋಲಾರದ ಮುನಿರಾಜು (52) ಮೃತಪಟ್ಟವರು. ಇವರ ಮಗ ಧನಂಜಯಗೌಡ (16) ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ನಿನ್ನೆ ಬೆಳಗ್ಗೆ 7.45 ರ ಸುಮಾರಿನಲ್ಲಿ ಮುನಿರಾಜು ಅವರು ಬೈಕ್‌ನಲ್ಲಿ ಮಗನನ್ನು ಕರೆದುಕೊಂಡು ನಾಗಗೊಂಡನಹಳ್ಳಿ ಕಡೆಯಿಂದ ಇಮಡಿಹಳ್ಳಿ ಕಡೆಗೆ ಹೋಗುತ್ತಿದ್ದರು. ಇಮಡಿಹಳ್ಳಿ ಮುಖ್ಯ ರಸ್ತೆಯ ಸಾಯಿ ಸನ್‌ಶೈನ್‌ ಅಪಾರ್ಟ್‌ಮೆಂಟ್‌ ಮುಂಭಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮುನ್ನುಗ್ಗಿ ಬಂದ ವಾಟರ್‌ಟ್ಯಾಂಕ್‌ ವಾಹನ ಇವರ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪ-ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.

ಮುನಿರಾಜು ಅವರ ತಲೆ ಹಾಗೂ ಕಾಲಿಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಸ್ಥಳೀಯರು ಅವರನ್ನು ವೈದೇಹಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಬೆಳಗ್ಗೆ 9.40 ರ ಸುಮಾರಿಗೆ ಮೃತಪಟ್ಟಿದ್ದಾರೆ.ಸುದ್ದಿ ತಿಳಿದು ವೈಟ್‌ಫೀಲ್ಡ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.