Thursday, November 6, 2025
Home Blog Page 89

13 ದಲಿತ ಕ್ರೈಸ್ತ ಜಾತಿಗಳ ಬಹಿರಂಗಕ್ಕೆ ಬಿಜೆಪಿ ಆಗ್ರಹ

ಬೆಂಗಳೂರು,ಸೆ.23- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಸಂದರ್ಭದಲ್ಲಿ ಹೊರಗಿಟ್ಟಿರುವ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಮನವಿ ಮಾಡಿದೆ.

ಈ ಸಂಬಂಧ ಶಾಶ್ವತ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧುಸೂದನ್‌ ನಾಯಕ್‌ ಅವರಿಗೆ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಉಪಾಧ್ಯಕ್ಷ ಎನ್‌.ಮಹೇಶ್‌, ಕಾರ್ಯದರ್ಶಿ ಶರಣು ತಳಿಕೇರಿ, ಮಾಜಿ ಸಂಸದ ಎಸ್‌‍.ಮುನಿಸ್ವಾಮಿ, ವಿಧಾನಪರಿಷತ್‌ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ ಮತ್ತಿತರರ ನಿಯೋಗವು ಮನವಿಪತ್ರ ಸಲ್ಲಿಸಿ ಜನತೆಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಬೇಕೆಂದು ಕೋರಿದೆ. ಕ್ರಿಶ್ಚಿಯನ್‌ ಉಪಜಾತಿಗಳ ಸಮೀಕ್ಷೆಯ ಆಪ್‌ನಲ್ಲಿ ಬಹಿರಂಗಪಡಿಸದ ಅಧಿಕೃತ ಪ್ರಕಟಣೆಯನ್ನು ಆಯೋಗ ಕೊಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು, ಉಳಿದ 13 ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ, ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ ಎಂದು ಆಕ್ಷೇಪಿಸಿದೆ. ಎರಡು ತಿಂಗಳ ಹಿಂದೆಯಷ್ಟೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌‍ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ ಎಸ್‌‍ಸಿ ಜಾತಿಗಳು ಇರಲಿಲ್ಲ. ನ್ಯಾ.ನಾಗಮೋಹನ್‌ದಾಸ್‌‍ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿಯ ವರ್ಗೀಕರಣವಾಗಿದೆ.

ಈಗ ನಿಮ ಆಯೋಗದಿಂದ 15 ಹೊಸ ಕ್ರೈಸ್ತ ಎಸ್‌‍ಸಿ ಜಾತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗಿ ದತ್ತಾಂಶಗಳು ಏರುಪೇರಾಗುತ್ತದೆ.
ಹೀಗಾಗಿ ನೀವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದೆ.

ಆನ್‌ಲೈನ್‌ನಲ್ಲಿ ಲಭ್ಯವಿರುವ ತಮ ಆಯೋಗದ ಕೈಪಿಡಿಯಲ್ಲಿ ತಾವು ಈ ತಪ್ಪನ್ನು ಸರಿಪಡಿಸಿರುವುದು ನಿಜ. ಆದರೆ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿಯೂ ಈ 15 ಎಸ್‌‍ಸಿ ಜಾತಿಗಳನ್ನು ಬಹಿರಂಗಪಡಿಸಬೇಕು ಮತ್ತು ಅದನ್ನು ಸಾರ್ವಜನಿಕರ ಅವಗಾಹನೆಗೆ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಬೇಕು. ಈ ಬಗ್ಗೆ ಆಯೋಗದ ಅಧ್ಯಕ್ಷರು ತುರ್ತು ಗಮನ ಹರಿಸಬೇಕೆಂದು ಬಿಜೆಪಿ ವಿನಂತಿಸಿದೆ.

ಅಯೋಧ್ಯೆಯಲ್ಲಿ ಮಸೀದಿ ಯೋಜನೆ ತಿರಸ್ಕಾರ

ಅಯೋಧ್ಯೆ,ಸೆ.23- ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಗೆ ಬದಲಾಗಿ ಪ್ರಸ್ತಾಪಿಸಲಾದ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ. ವಿವಿಧ ಸರ್ಕಾರಿ ಇಲಾಖೆಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರಗಳ ಕೊರತೆಯಿಂದಾಗಿ ಮಸೀದಿಯ ವಿನ್ಯಾಸ ಯೋಜನೆಯನ್ನು ಅನುಮೋದಿಸಲಾಗಿಲ್ಲ ಎಂದು ಮಾಹಿತಿ ಹಕ್ಕು ಪ್ರತಿಕ್ರಿಯೆಯಿಂದ ತಿಳಿದುಬಂದಿದೆ.

ನವೆಂಬರ್‌ 9, 2019ರಂದು ಸುಪ್ರೀಂಕೋರ್ಟ್‌ನ ಹೆಗ್ಗುರುತು ಅಯೋಧ್ಯಾ ತೀರ್ಪಿನ ಪ್ರಕಾರ, ಉತ್ತರಪ್ರದೇಶ ಸರ್ಕಾರವು ಮಸೀದಿ ನಿರ್ಮಾಣ ಮತ್ತು ಇತರ ಸೌಲಭ್ಯಗಳಿಗಾಗಿ ಅಯೋಧ್ಯಾ ಸುನ್ನಿ ಕೇಂದ್ರ ವಕ್‌್ಫ ಮಂಡಳಿಗೆ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.

2020ರ ಆಗಸ್ಟ್‌ 3ರಂದು ಆಗಿನ ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅನುಜ್‌ಕುಮಾರ್‌ ಝಾ ಅವರು ಅಯೋಧ್ಯಾ ಬಳಿಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ವರ್ಗಾಯಿಸಿದ್ದರು. ಮಸೀದಿ ಟ್ರಸ್ಟ್‌ 2021ರ ಜೂನ್‌ 23ರಂದು ಈ ಭೂಮಿಯಲ್ಲಿ ನಿರ್ಮಾಣಕ್ಕಾಗಿ ವಿನ್ಯಾಸ ಯೋಜನೆಯನ್ನು ಅನುಮೋದಿಸಲು ಅರ್ಜಿ ಸಲ್ಲಿಸಿತ್ತು.

ಆದಾಗ್ಯೂ ಅಂದಿನಿಂದ ಯೋಜನಾ ಅನುಮೋದನೆ ಪ್ರಕ್ರಿಯೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿರಲಿಲ್ಲ. ವಿವಿಧ ಸರ್ಕಾರಿ ಇಲಾಖೆಗಳಿಂದ ಅಗತ್ಯ ಎನ್‌ಒಸಿಗಳ ಕೊರತೆಯಿಂದಾಗಿ ಮಸೀದಿಯ ವಿನ್ಯಾಸ ಯೋಜನೆಯನ್ನು ಅನುಮೋದಿಸಲಾಗಿಲ್ಲ ಎಂದು ಆರ್‌ಟಿಐ ಕಾರ್ಯಕರ್ತರನ್ನು ಉಲ್ಲೇಖಿಸಿ ಪತ್ರಿಕೆಯೊಂದು ವರದಿ ಮಾಡಿದೆ. ಈ ಪ್ರಮಾಣಪತ್ರಗಳಿಲ್ಲದೆ ಪ್ರಾಧಿಕಾರವು ಯೋಜನೆಯನ್ನು ಮುಂದುವರಿಸಲು ನಿರಾಕರಿಸಿತ್ತು.

ಸುಪ್ರೀಂಕೋರ್ಟ್‌ನ ಅದೇ ತೀರ್ಪಿನಡಿ ಅನುಮೋದಿಸಲಾದ ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿರುವ ಸಮಯದಲ್ಲೇ ಇದು ಬಹಿರಂಗಗೊಂಡಿದೆ. ಸುನ್ನಿ ಕೇಂದ್ರ ವಕ್ಫ್ ಮಂಡಳಿ ಮತ್ತು ಮಸೀದಿ ಟ್ರಸ್ಟ್‌ ಈ ವಿಷಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಈ ವಿಷಯದಲ್ಲಿ ಮುಂದಿನ ಪ್ರಕ್ರಿಯೆ ಅಥವಾ ಸಮಯದ ಬಗ್ಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ರಾಮಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದೆ ಮತ್ತು ಮಸೀದಿ ಯೋಜನೆಯು ಇನ್ನೂ ಆರಂಭಿಕ ಹಂತಗಳಲ್ಲಿಯೇ ಸಿಲುಕಿಕೊಂಡಿದೆ ಎಂದು ಗಮನಿಸಿದಾಗ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಈ ಬಹಿರಂಗಪಡಿಸುವಿಕೆಯ ನಂತರ, ಸುನ್ನಿ ಕೇಂದ್ರ ವಕ್‌್ಫ ಮಂಡಳಿ ಮತ್ತು ಸಂಬಂಧಪಟ್ಟ ಪಕ್ಷಗಳು ಯೋಜನೆಯನ್ನು ತ್ವರಿತಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ನಿರೀಕ್ಷಿಸಲಾಗಿದೆ.

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿಯಿಟ್ಟ ಗ್ರಾಮಸ್ಥರು

ಬೆಳಗಾವಿ ಸೆ.23– ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವಾಹನಕ್ಕೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ರಾತ್ರಿ ನಡೆದಿದೆ.

ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದ್ರಾಬಾದ್‌ಗೆ ಸಾಗಿಸುತ್ತಿದ್ದ ಸುಮಾರು 7 ಕ್ವಿಂಟಲ್‌ ಗೋಮಾಂಸ ಮತ್ತು ವಾಹನ ಸುಟ್ಟು ಭಸವಾಗಿದೆ.ಗೋಮಾಂಸ ಸಾಗಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಗ್ರಾಮಸ್ಥರು ವಾಹನವನ್ನ ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ಈ ವೇಳೆ ವಾಹನ ಪರಿಶೀಲಿಸಿದಾಗ ಗೋಮಾಂಸ ಇರುವುದು ಕಂಡುಬಂದಿದೆ. ಇದರಿಂದ ಕೊಂಪಗೊಂಡ ಗ್ರಾಮಸ್ಥರು ಚಾಲಕನನ್ನು ಹೊರಗೆಳೆದು ಥಳಿಸಿ, ಬಳಿಕ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕಾಗವಾಡ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಐನಾಪುರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್‌‍ ಬಂದೋಬಸ್ತ ಏರ್ಪಡಿಸಲಾಗಿದ್ದು, ಇಬ್ಬರು ಡಿಎಸ್‌‍ಪಿ, ನಾಲ್ಕು ಸಿಪಿಐ, ಎಂಟು ಪಿಎಸ್‌‍ಐ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸ್‌‍ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡಿದ್ದಾರೆ.

ಜಾತಿ ಸಮೀಕ್ಷೆ ಅವ್ಯವಸ್ಥೆ : ಸಮೀಕ್ಷೆ ನಡೆಸುತ್ತಿರುವರ ಪರದಾಟ, ಜನರಲ್ಲಿ ಅಸಹನೆ, ಆಕ್ರೋಶ

ಬೆಂಗಳೂರು, ಸೆ.23– ನಾನಾ ರೀತಿಯ ಗೊಂದಲ, ತಾಂತ್ರಿಕ ಸಮಸ್ಯೆ, ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರ ನಿರುತ್ಸಾಹ ಮೊಬೈಲ್‌ ಆ್ಯಪ್‌ನ ಜಂಜಾಟಗಳ ನಡುವೆ ಎರಡನೇ ದಿನವೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುಂಟುತ್ತಾ ಸಾಗುತ್ತಿದೆ.

ನಿನ್ನೆಯಿಂದ ಆರಂಭವಾಗಿರುವ ಸಮೀಕ್ಷೆ ಅ.7ರ ವರೆಗೂ ನಡೆದು , ಒಟ್ಟು 2 ಕೋಟಿ ಮನೆಗಳ 7 ಕೋಟಿಗೂ ಅಧಿಕ ಜನರ ದತ್ತಾಂಶವನ್ನು ಸಂಗ್ರಹಿಸಬೇಕಿದೆ. ಆದರೆ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದೆ ಗೊಂದಲಮಯವಾಗಿದೆ ಹಾಗೂ ಜನ ಸಾಮಾನ್ಯರನ್ನು ರೇಜಿಗಿಡಿಸಿದೆ. ಹಲವು ಸಮುದಾಯಗಳ ವಿರೋಧದ ನಡುವೆ ಕೂಡ ಹಠಕ್ಕೆ ಬಿದ್ದಂತೆ ನಡೆಯುತ್ತಿರುವ ಸಮೀಕ್ಷೆ ಬಗ್ಗೆ ಜನರಲ್ಲಿ ಅಸಹನೆ, ಆಕ್ರೋಶಗಳು ಮಡುಗಟ್ಟಿವೆ.

ರಾಜ್ಯದ ಒಟ್ಟು ಜನ ಸಂಖ್ಯೆಯಲ್ಲಿ ಶೇ. 20ಕ್ಕೂ ಹೆಚ್ಚು ಪಾಲು ಹೊಂದಿರುವ ಬೆಂಗಳೂರಿನಲ್ಲಿ ಈವರೆಗೂ ಸಮೀಕ್ಷೆ ಆರಂಭಗೊಂಡಿಲ್ಲ, ಬಹುತೇಕ ಸಮೀಕ್ಷಾದಾರರಿಗೆ ತರಬೇತಿಯನ್ನು ನೀಡಿಲ್ಲ. ಈ ಹಿಂದೆ ನ್ಯಾ.ನಾಗಮೋಹನದಾಸ್‌‍ ಆಯೋಗದ ಸಮೀಕ್ಷೆಯಲ್ಲೂ ಇದೇ ರೀತಿಯ ಅನಾದಾರಣೆಗಳು ಕಂಡು ಬಂದಿತ್ತು. ಕೊನೆ ಕೊನೆಗೆ ಅಧೋಗತಿಯಲ್ಲಿ ಕಾಟಾಚಾರದ ಸಮೀಕ್ಷೆ ನಡೆಸಿ, ವರದಿ ನೀಡಿದ್ದು ಕಂಡು ಬಂತು.

ಕೊನೆಯ ಹಂತದಲ್ಲಿ ಹೆಚ್ಚು ಮನೆಗಳನ್ನು ತಲುಪಬೇಕು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳು ಸಮೀಕ್ಷಾದಾರರ ಮೇಲೆ ಒತ್ತಡ ಹೇರಿದರು. ಇದು ಹೇಗೊ ಮುಗಿದರೆ ಸಾಕು ಎಂಬ ಅಸಡ್ಡೆಯಲ್ಲಿ ಸಮೀಕ್ಷಾದಾರರು ದೂರವಾಣಿಯಲ್ಲೇ ಮಾಹಿತಿ ಪಡೆದು ಕೈತೊಳೆದುಕೊಂಡ ಉದಾಹರಣೆಗಳಿವೆ. ಹೀಗಾಗಿ ನ್ಯಾ.ನಾಗಮೋಹನದಾಸ್‌‍ ಸಮೀಕ್ಷೆ ಗೊಂದಲದ ಗೂಡಾಗಿದ್ದು, ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಈಗ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಮಹತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್‌‍ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಳ್ಳುತ್ತಿದೆ. ತಾಂತ್ರಿಕ ಕಾರಣಗಳಿಂದಾಗಿ ಆಧಾರ ಸಂಖ್ಯೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ಗೆ ಓಟಿಪಿ ರವಾನೆಯಾಗುತ್ತಿಲ್ಲ. ಪ್ರತಿಯೊಬ್ಬ ಸಮೀಕ್ಷಾದಾರರಿಗೂ ಸುಮಾರು 50 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಸರಾಸರಿ ದಿನವೊಂದಕ್ಕೆ ಕನಿಷ್ಠ 10 ಮನೆಗಳನ್ನು ಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ. ಆದರೆ ಓಟಿಪಿ ರವಾನೆಯಾಗದೆ ವಿಳಂಬವಾಗುತ್ತಿರುವುದರಿಂದ ಹಾಗೂ ಮೊಬೈಲ್‌ ಆ್ಯಪ್‌ ಹ್ಯಾಂಗ್‌ ಆಗುತ್ತಿರುವುದರಿಂದಾಗಿ ನಿಗದಿತ ಸಮಯಕ್ಕೆ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಅಗತ್ಯವಾದರೆ ಒಂದೆರಡು ದಿನ ಸಮೀಕ್ಷಾ ಅವಧಿಯನ್ನು ವಿಸ್ತರಣೆ ಮಾಡುವುದಾಗಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ವರೆಗೂ ಸಮೀಕೆ್ಷಯೇ ಶುರುವಾಗಿಲ್ಲ. ಈಗಾಗಲೇ ದಸರಾ ರಜೆ ಆರಂಭಗೊಂಡಿದ್ದು ಬಹುತೇಕರು ಪ್ರವಾಸಕ್ಕೆ ತೆರಳಿದ್ದಾರೆ. ಇನ್ನೂ ಕೆಲವರು ಊರುಗಳಿಗೆ ಹೋಗಿ ಸಮಯ ಕಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮಾಹಿತಿ ಕಲೆ ಹಾಕುವುದು ದುಸ್ತರವಾದ ಕೆಲಸ ಆಗಿದ್ದರೂ ಆಯೋಗ ಎಚ್ಚೆತ್ತುಕೊಳ್ಳದೆ ಬೆಂಗಳೂರಿನಲ್ಲಿ ಸಮೀಕ್ಷೆ ಆರಂಭಿಸದೇ ವಿಳಂಬ ಮಾಡುತ್ತಿದೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸ್ವಕ್ಷೇತ್ರದಲ್ಲೂ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ಆಕ್ಷೇಪಗಳಿವೆ. ಬಹುತೇಕ ಕ್ಷೇತ್ರಗಳಲ್ಲಿ ಸಮೀಕ್ಷೆಯ ಗೊಂದಲಗಳು ತೀವ್ರವಾಗಿವೆ. ರಾಜ್ಯಸರ್ಕಾರ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳದೇ ಎಲ್ಲವೂ ಸುಖಾಂತ್ಯವಾಗಿ ನಡೆಯುತ್ತಿದೆ ಎಂಬ ಭ್ರಮೆಯಲ್ಲಿದೆ.

ಇತ್ತ ಓಟಿಪಿ ಬರದೆ ಗ್ರಾಮೀಣ ಭಾಗದಲ್ಲಿ ಸಮೀಕ್ಷೆ ನಡೆಸಲಾಗದೆ ಶಿಕ್ಷಕರು, ಆಶಾ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಸಮೀಕ್ಷಾದಾರರು ಭೇಟಿ ನೀಡುವ ಮೂರು ದಿನ ಮುಂಚಿತವಾಗಿಯೇ ಪ್ರಶ್ನಾವಳಿಗಳ ನಮೂನೆಗಳನ್ನು ಮನೆ ಮನೆಗಳಿಗೆ ತಲುಪಿಸಲಾಗುವುದೆಂದು ಆಯೋಗ ಹೇಳಿತ್ತು. ಆದರೆ ಎಲ್ಲಿಯೂ ಪ್ರಶ್ನಾವಳಿಗಳನ್ನು ತಲುಪಿಸಿದ ಉದಾಹರಣೆ ಇಲ್ಲ.

ಇನ್ನೂ ಮನೆಗಳಿಗೆ ಯುಎಚ್‌ಐಡಿ ಸ್ಟಿಕ್ಕರ್‌ ಅಂಟಿಸುವುದರಲ್ಲೂ ಪೂರ್ಣ ಪ್ರಮಾಣದ ಪ್ರಗತಿಯಾಗಿಲ್ಲ. ಅಸಂಬದ್ಧವಾದ ಸಮೀಕ್ಷೆ ನಡೆಸುವ ಬದಲಾಗಿ 3 ತಿಂಗಳ ಕಾಲ ಮುಂದೂಡುವಂತೆ ಜನ ಸಮುದಾಯ ಒತ್ತಡ ಹೇರಿದರೂ ಸರ್ಕಾರ ಅದನ್ನು ಪರಿಗಣಿಸದೆ ಸಮೀಕ್ಷೆ ಮಾಡಿಯೇ ತೀರುವುದಾಗಿ ಪಟ್ಟು ಹಿಡಿದಿದೆ.

ಈ ಮೊದಲು ಕಾಂತರಾಜು ಆಯೋಗದ ಸಮೀಕ್ಷೆಯ ವೇಳೆಯೂ ಇದೇ ರೀತಿಯ ಮೊಂಡು ಹಠ ಕಂಡು ಬಂದಿತ್ತು. ಕೊನೆಗೂ ಆ ವರದಿ 10 ವರ್ಷ ಆದರೂ ಅನುಷ್ಠಾನಗೊಳ್ಳದೆ ಮೂಲೆಗುಂಪಾಯಿತು. ಸುಮಾರು 175 ಕೋಟಿ ರೂ. ವ್ಯರ್ಥವಾಯಿತು. ಈಗ ಜನ ಸಮುದಾಯದ ಬೇಡಿಕೆಗಳನ್ನು ಕಡೆಗಣಿಸಿ, ಮತ್ತೆ ಸಮೀಕ್ಷೆಯನ್ನು ಮಾಡಿಯೇ ತೀರುವುದಾಗಿ ಸರ್ಕಾರ ಹಠಕ್ಕೆ ಬಿದ್ದಿದೆ. ಇದು ಯಾವ ಹಂತಕ್ಕೆ ಹೋಗಲಿದೆ ಎಂದು ಕಾದು ನೋಡಬೇಕಿದೆ.

ಎಚ್‌1-ಬಿ ವೀಸಾ ಶುಲ್ಕದಲ್ಲಿ ವೈದ್ಯರಿಗೆ ವಿನಾಯಿತಿ..?

ವಾಷಿಂಗ್ಟನ್‌,ಸೆ.23- ಅಮೇರಿಕಾದಲ್ಲಿರುವ ವೈದ್ಯರಿಗೆ ಹೊಸ ಹೆಚ್‌- 1ಬಿ ವೀಸಾ ಶುಲ್ಕದಿಂದ ವಿನಾಯಿತಿ ನೀಡುವ ಸಾಧ್ಯತೆಯಿದೆ.ವಿನಾಯಿತಿ ಪಡೆದವರಲ್ಲಿ ವೈದ್ಯರು ಕೂಡ ಇರಬಹುದು ಎಂದು ಬ್ಲೂಮ್‌ಬರ್ಗ್‌ ಸುದ್ದಿ ವರದಿಗಾರರೊಬ್ಬರು ಶ್ವೇತಭವನದ ವಕ್ತಾರ ಟೇಲರ್‌ ರೋಜರ್ಸ್‌ ಅವರನ್ನು ಉಲ್ಲೇಖಿಸಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೆಪ್ಟೆಂಬರ್‌ 21 ರಂದು ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಆಡಳಿತವು ಹೆಚ್‌- 1ಬಿ ವೀಸಾಗಳಿಗೆ ಹೊಸ ಯುಎಸ್‌‍ ಡಿ 100,000 ಶುಲ್ಕವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯವಾಗುವ ಒಂದು ಬಾರಿ ಪಾವತಿಯಾಗಿದೆ. ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದು. ಇದು ಭಾರತದಿಂದ ಬಂದವರು ಸೇರಿದಂತೆ ಯುಎಸ್‌‍ನಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ವೃತ್ತಿಪರರಿಗೆ ಭಾರೀ ಪರಿಹಾರವನ್ನು ನೀಡುತ್ತದೆ.
ಟ್ರಂಪ್‌ ಅವರ ಹೊಸ ವೀಸಾ ಅವಶ್ಯಕತೆಯು ಇನ್ನೂ ಸಲ್ಲಿಸದ ಹೊಸ, ಸಂಭಾವ್ಯ ಅರ್ಜಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ 21ರ ಜಾರಿಗೆ ಬರುವ ಘೋಷಣೆ ದಿನಾಂಕದ ಮೊದಲು ಸಲ್ಲಿಸಲಾದ ಹೆಚ್‌- 1ಬಿ ಅರ್ಜಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಸ್ತುತ ಯುಎಸ್‌‍ ಹೊರಗೆ ಇರುವ ವೀಸಾ ಹೊಂದಿರುವವರು ದೇಶಕ್ಕೆ ಮರುಪ್ರವೇಶಿಸಲು ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಟ್ರಂಪ್‌ ಶುಲ್ಕ ವಿಧಿಸುವ ಆದೇಶದ ನಂತರ ಅಮೆರಿಕದಲ್ಲಿರುವ ಭಾರತೀಯರಲ್ಲಿ ವ್ಯಾಪಕ ಭೀತಿ, ಗೊಂದಲ ಮತ್ತು ಕಳವಳ ಆವರಿಸಿತ್ತು, ಅನೇಕರು ತಾಯ್ನಾಡಿಗೆ ವಿಮಾನ ಹತ್ತಲು ಕಾಯುತ್ತಿರುವಾಗ ಕೊನೆಯ ಕ್ಷಣದಲ್ಲಿ ಪ್ರಯಾಣ ಯೋಜನೆಗಳನ್ನು ರದ್ದುಗೊಳಿಸಿದರು.

ಈಗಾಗಲೇ ಭಾರತದಲ್ಲಿರುವ ಇನ್ನೂ ಅನೇಕರು ಮರಳಲು ಪರದಾಡುತ್ತಿದ್ದರು. ವಲಸೆ ವಕೀಲರು ಮತ್ತು ಕಂಪನಿಗಳು ಎಚ್‌1-ಬಿ ವೀಸಾ ಹೊಂದಿರುವವರು ಅಥವಾ ಪ್ರಸ್ತುತ ಕೆಲಸ ಅಥವಾ ರಜೆಗಾಗಿ ಅಮೆರಿಕದ ಹೊರಗೆ ಇರುವ ಅವರ ಕುಟುಂಬ ಸದಸ್ಯರಿಗೆ ಎಚ್ಚರಿಕೆ ನೀಡಿ, ಸೆಪ್ಟೆಂಬರ್‌ 21ರಂದು ಘೋಷಣೆ ಪ್ರಾರಂಭವಾಗುವ ಮೊದಲು ಅಮೆರಿಕಕ್ಕೆ ಮರಳಲು ಕೇಳಿಕೊಂಡಿದ್ದರು.

ಹೆಚ್‌- 1ಬಿ ಎಂದರೇನು?
ಹೆಚ್‌1ಬಿ ವಲಸೆರಹಿತ ವೀಸಾವಾಗಿದ್ದು, ಇದು ಅಮೆರಿಕದ ಕಂಪನಿಗಳು ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತಾರು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಂತ್ರಜ್ಞಾನ ಕಂಪನಿಗಳು ಇದನ್ನು ಅವಲಂಬಿಸಿವೆ.

ಈ ವೀಸಾಗಳು ಭಾರತೀಯ ತಂತ್ರಜ್ಞಾನ ವೃತ್ತಿಪರರಲ್ಲಿ ಬಹಳ ಜನಪ್ರಿಯವಾಗಿದ್ದು, ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ ಮತ್ತು ಇನ್ನೂ ಮೂರು ವರ್ಷಗಳವರೆಗೆ ನವೀಕರಿಸಬಹುದು. ಕಾಂಗ್ರೆಸ್ಸಿನ ಕಡ್ಡಾಯ ಮಿತಿಯಡಿ, ಅಮೆರಿಕವು ಪ್ರತಿ ವರ್ಷ ಗರಿಷ್ಠ 65,000 ಎಚ್‌1ಬಿ ವೀಸಾಗಳನ್ನು ಮತ್ತು ಅಮೆರಿಕದಿಂದ ಸ್ನಾತಕೋತ್ತರ ಮತ್ತು ಉನ್ನತ ಪದವಿಗಳನ್ನು ಪಡೆದವರಿಗೆ ಇನ್ನೂ 20,000 ವೀಸಾಗಳನ್ನು ನೀಡಬಹುದು.
ಪ್ರಸ್ತುತ ಎಚ್‌1ಬಿ ವೀಸಾ ಶುಲ್ಕವು ಉದ್ಯೋಗದಾತರ ಗಾತ್ರ ಮತ್ತು ಇತರ ವೆಚ್ಚಗಳನ್ನು ಅವಲಂಬಿಸಿ ಸುಮಾರು ಯುಎಸ್‌‍ ಡಾಲರ್‌ 2,000ರಿಂದ 5,000ವರೆಗೆ ಇರುತ್ತದೆ.

ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಬಂದಿಳಿದ 2 ಅಗ್ನಿಶಾಮಕ ವಾಹನ

ವಿಜಯಪುರ, ಸೆ.23-ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ದೂರದ ಆಸ್ಟ್ರಿಯಾದಿಂದ ಬಂದಿವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಅಗ್ನಿಶಾಮಕ ವಾಹನಗಳು ಕಂಪ್ಯೂಟರೀಕೃತವಾಗಿದ್ದು, ಜಾಗತಿಕ ಟೆಂಡರ್ ಅಡಿಯಲ್ಲಿ ಆಸ್ಟ್ರಿಯಾದಿಂದ ಪೂರೈಕೆಯಾಗಿವೆ. ಇವುಗಳ ಬೆಲೆ ಅಂದಾಜು 24 ಕೋಟಿ ರೂಪಾಯಿ. ಇವು ತುರ್ತು ಸಂದರ್ಭಗಳಲ್ಲಿ 160 ಮೀಟರಿನವರೆಗೂ ನೀರನ್ನು ಹಾಯಿಸಿ, ಬೆಂಕಿಯನ್ನು ನಂದಿಸುವ ಸಾಮರ್ಥ್ಯ ಹೊಂದಿವೆ.

ಈ ಮೂಲಕ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದ್ದ ಮತ್ತೊಂದು ಅಗತ್ಯ ಪೂರೈಸಲಾಗಿದೆ ಎಂದಿದ್ದಾರೆ.
ಈ ಅಗ್ನಿಶಾಮಕ ವಾಹನಗಳು ನೆಲದ ಮೇಲಿನ ಬೆಂಕಿಯನ್ನು ನಂದಿಸಿಕೊಂಡು ವೇಗದಿಂದ ಮುನ್ನುಗ್ಗಬಲ್ಲವು. ವಿಜಯಪುರ ವಿಮಾನ ನಿಲ್ದಾಣದ ಮೂಲ ವಿನ್ಯಾಸದಲ್ಲಿ ಈ ಸೌಲಭ್ಯಗಳು ಇರಲಿಲ್ಲ. ಆಮೇಲೆ ಇದರ ಜತೆಗೆ ಇನ್ನೂ ಹಲವು ಅನುಕೂಲಗಳನ್ನು ಸೇರಿಸಲಾಯಿತು.

ಆಸ್ಟ್ರಿಯಾದಿಂದ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಈ ವಾಹನಗಳನ್ನು, ಅಲ್ಲಿಂದ ಟ್ರಕ್ ಮೂಲಕ ವಿಜಯಪುರಕ್ಕೆ ಸಾಗಿಸಿಕೊಂಡು ಬರಲಾಗಿದೆ ಎಂದು ಅವರು ವಿವರಿಸಿದ್ದಾರೆ.ಅಗ್ನಿಶಾಮಕ ವಾಹನಗಳು ಬಂದಿರುವುದರಿಂದ ವಿಮಾನ ನಿಲ್ದಾಣ ಉದ್ಘಾಟನೆಯತ್ತ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ. ಪರಿಸರ ಸಂಬಂಧಿ ಅನುಮತಿ ಮಾತ್ರ ಬಾಕಿ ಇದ್ದು, ಅದನ್ನು ಪಡೆದುಕೊಳ್ಳಲು ಕೂಡ ಪ್ರಯತ್ನಿಸಲಾಗುತ್ತಿದೆ ಎಂದು ಪಾಟೀಲ ನುಡಿದಿದ್ದಾರೆ.

ಹಗಲು ವೇಳೆ ಊಬರ್ ಓಡಿಸಿ, ರಾತ್ರಿ ವೇಳೆ ವಾಹನ ಕಳ್ಳತನ ಮಾಡುತ್ತಿದ್ದ ಖದೀಮ ಅರೆಸ್ಟ್

ಬೆಂಗಳೂರು, ಸೆ.23-ನಗರದಲ್ಲಿ ಹಗಲು ವೇಳೆ ಊಬರ್ ಚಾಲನಾ ವೃತ್ತಿ ಮಾಡಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನುವೈಟ್‌ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿ, ಊಬರ್ ವಾಹನ ಚಾಲಕ ಫೈರೋಜ್ ಬಂಧಿತ ಆರೋಪಿ.ನಗರದ ವಿವಿಧ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ತಾನು ಕೆಲಸ ಮಾಡುವ ವೇಳೆ ಗುರುತಿಸಿಕೊಂಡು ರಾತ್ರಿಯಾಗುತ್ತಿದ್ದಂತೆ ಅವುಗಳನ್ನು ಕಳ್ಳತನ ಮಾಡುತ್ತಿದ್ದನು.

ಐಟಿಪಿಎಲ್ ಹಿಂಭಾಗದ ಗೇಟ್‌ನಲ್ಲಿರುವ ಮಾಲ್‌ನ ಪುಟ್ ಪಾತ್ ಜಾಗದಲ್ಲಿ ವಿಜಯನಗರದ ನಿವಾಸಿಯೊಬ್ಬರು ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸದ ನಿಮಿತ್ತ ಹೋಗಿದ್ದು, ಮಧ್ಯಾಹ್ನ ಬರುವಷ್ಟರಲ್ಲಿ ಅವರ ವಾಹನ ಕಳವಾಗಿತ್ತು.ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆಹಾಕಿ ತನಿಖೆ ಮುಂದುವರೆಸಿದ್ದಾರೆ.
ಹೊಸಕೋಟೆಯ ಕೊಟುರುಗ್ರಾಮದಲ್ಲಿ ಹೊರ ರಾಜ್ಯದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ದ್ವಿಚಕ್ರ ವಾಹನಗಳ ಪೈಕಿ ಐದು ವಾಹನಗಳನ್ನು ಮದ್ದೂರು ತಾಲ್ಲೂಕಿನ ಹುರುಗುಲವಾಡಿ ಗ್ರಾಮದ ಪರಿಚಯಸ್ಥನಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ.

ಉಳಿದ ಒಂಬತ್ತು ವಾಹನಗಳನ್ನು ಆಂಧ್ರ ಪ್ರದೇಶದ ಕದರಿ ಮಂಡಲಂನಲ್ಲಿ ವಾಸವಿರುವ ಸಂಬಂಧಿಕರುಗಳಿಗೆ ನೀಡಿರುವುದಾಗಿ ಹಾಗೂ ಆರು ದ್ವಿಚಕ್ರ ವಾಹನಗಳನ್ನು ಶಿವಕುಂಟಮ್ಮ ದೇವಸ್ಥಾನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದಾನೆ.ಆರೋಪಿಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿ 20 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ ವೈಟ್‌ ಫೀಲ್ಡ್ ಪೊಲೀಸ್ ಠಾಣೆಯ 12 ದ್ವಿಚಕ್ರ ವಾಹನಪ್ರಕರಣಗಳು ಪತ್ತೆಯಾಗಿದ್ದು, ಉಳಿದ 8 ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಇನ್ಸ್‌ಪೆಕ್ಟರ್ ಗುರುಪ್ರಸಾದ್ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು |

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆಗೆ ಕಾಲಮಿತಿ ನಿಗದಿಪಡಿಸಿಲ್ಲ : ಪರಮೇಶ್ವರ್

ಬೆಂಗಳೂರು, ಸೆ.23- ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ಮುಂದುವರೆಯಲಿದೆ. ಕಾಲಮಿತಿ ನಿಗದಿ ಪಡಿಸಿ, ಮಧ್ಯಂತರ ವರದಿ ಪಡೆಯುವುದು ಅಥವಾ ತನಿಖೆಯನ್ನುಸಿಐಡಿಗೆ ವಹಿಸುವುದು ಸೇರಿದಂತೆ ಯಾವುದೇ ರೀತಿಯ ಚರ್ಚೆಯಾಗಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದೊಡ್ಡ ಪ್ರಕರಣ. ಸತ್ಯವನ್ನು ಹೊರ ತರುವ ಸಂದರ್ಭದಲ್ಲಿ ಯಾರಿಗಾದರೂ ತೊಂದರೆಗಳಿದ್ದರೆ, ಪ್ರಾಣ ಭಯ ಅಥವಾ ಇನ್ನಿತರ ಆತಂಕಗಳಿದ್ದರೆ, ಸರ್ಕಾರ ಅಗತ್ಯ ಭದ್ರತೆಯನ್ನು ಒದಗಿಸಲಿದೆ ಎಂದು ಹೇಳಿದರು. ಚಿನ್ನಯ್ಯ ಅವರ ಪತ್ನಿ ಪ್ರಾಣ ಭಯ ಇದೆ ಎಂದು ರಕ್ಷಣೆ ಕೋರಿದ್ದರೆ, ಪೊಲೀಸರು ಅಗತ್ಯ ಕ್ರಮಕೈಗೊಳ್ಳುತ್ತಾರೆ. ಪ್ರಕರಣವನ್ನು ಸಿಐಡಿಗೆ ಕೊಡುವ ಚರ್ಚೆ ನಡೆದಿಲ್ಲ, ಎಸ್‌ಐಟಿ ತನಿಖೆಯೇ ಮುಂದುವರೆಯುತ್ತದೆ ಎಂದರು.

ಮಧ್ಯಂತರ ವರದಿ ಅಥವಾ ಚಾರ್ಜ್‌ ಶೀಟ್ ಪಡೆಯುವ ಸಾಧ್ಯತೆಗಳಿಲ್ಲ. ತನಿಖೆಯನ್ನು ಶೀಘ್ರ ಮುಗಿಸುವಂತೆ ಹೇಳಿದ್ದೇವೆ. ಆದರೆ ಕಾಲಮಿತಿಯನ್ನು ವಿಧಿಸಿಲ್ಲ. ಲಭ್ಯವಿರುವ ಪುರಾವೆ ಹಾಗೂ ಸಾಕ್ಷ್ಯಗಳನ್ನು ಆಧರಿಸಿ ಶೀಘ್ರ ವರದಿ ನೀಡುವಂತೆ ಸೂಚಿಸಿದ್ದೇವೆ ಎಂದರು.

ದಸರಾ ಮಹೋತ್ಸವದ ವಿಷಯವಾಗಿ ಬಹಳ ದಿನಗಳಿಂದ ಇದ್ದ ಗೊಂದಲ ನಿನ್ನೆ ನಿವಾರಣೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ ಸಾಹಿತಿ ಬಾನು ಮುಷ್ಕಾಕ್ ವಿಧ್ಯುಕ್ತವಾಗಿ ದಸರಾವನ್ನು ಉದ್ಘಾಟಿಸಿದ್ದಾರೆ. ಇದು ನಾಡಿಗೆ ಮಾದರಿಯಾಗಿದೆ ಎಂದರು.

ರಾಜ್ಯಕ್ಕೆ ಒಳ್ಳೆಯದಾಗಲಿ, ಸರ್ವರಿಗೂ ಮಂಗಳವಾಗಲಿ ಎಂದು ಬಾನು ಮುಪ್ತಾಕ್ ಹಾಗೂ ಮುಖ್ಯಮಂತ್ರಿಯವರು ಪುಷ್ಪಾರ್ಚನೆ ಮಾಡಿ ಪ್ರಾರ್ಥಿಸಿದ್ದಾರೆ. ಯಾವುದೇ ಧರ್ಮವಾಗಿದ್ದರೂ ನೆಮ್ಮದಿ, ಮನಃಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡುವುದು ಸಹಜ. ಯಾವುದೇ ವ್ಯತ್ಯಾಸ ಹಾಗೂ ಗೊಂದಲಗಳಿಲ್ಲದೆ ದಸರಾ ಉದ್ಘಾಟನೆಯಾಗಿದೆ ಎಂದರು. ಹಿಂದೂ ಧರ್ಮದ ಮೂಲವೇ ಸರ್ವರನ್ನೂ ಒಳಗೊಳ್ಳುವುದಾಗಿದೆ. ಸಂವಿಧಾನಾತ್ಮಕವಾಗಿಯೂ ಇದೇ ಆಶಯವಿದೆ. ಧಾರ್ಮಿಕ ಸಾರಾಂಶವೂ ಭಾವೈಕ್ಯವಾಗಿದೆ. ಆದೇ ರೀತಿ ಮೈಸೂರಿನಲ್ಲಿ ನಡೆದಿದೆ ಎಂದರು.

ತುಮಕೂರಿನಲ್ಲಿ ನಡೆಯುತ್ತಿರುವ ನವರಾತ್ರಿ ಹಾಗೂ ದಸರಾ ಆಚರಣೆಯ ಎರಡನೇ ದಿನವಾದ ಇಂದು ಧಾರ್ಮಿಕ ಆಚರಣೆಗಳಲ್ಲಿ ತಾವು ಕುಟುಂಬ ಸಮೇತರಾಗಿ ಭಾಗವಹಿಸಿದ್ದು, ರಾಜ್ಯದಲ್ಲಿ ಮಳೆ ಬೆಳೆಯಾಗಿ ಸುಭಿಕ್ಷೆ ನೆಲೆಸಲಿ ಎಂದು ಪ್ರಾರ್ಥಿಸಿದ್ದೇನೆ. ನಾನು ಮನೆಯಲ್ಲಿ ಪೂಜೆ ಮಾಡುವುದಿಲ್ಲ. ನನ್ನ ಶ್ರೀಮತಿ ಅವರು ಪೂಜೆ ಮಾಡುತ್ತಾರೆ. ಇಲ್ಲಿ ಬ್ರಹ್ಮಚರ್ಯೆಯ ಆರಾಧ್ಯ ದೇವತೆಗೆ ಪೂಜೆ ಸಲ್ಲಿಸಲಾಗಿದೆ ಎಂದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪ್ರಶ್ನಿಸಿ, ಬಹಳಷ್ಟು ಮಂದಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಯಾವ ರೀತಿಯ ತೀರ್ಪು ಹೊರ ಬರಲಿದೆ ಎಂದು ಕಾದು ನೋಡುತ್ತೇವೆ ಎಂದರು. ಸಚಿವ ಸಂಪುಟಸಭೆ ಪುನರ್‌ರಚನೆಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಬ್ಬದ ಉಡುಗೊರೆ ನೆಪದಲ್ಲಿ ಸಾರ್ವಜನಿಕ ಹಣ ಖರ್ಚು ಮಾಡದಂತೆ ಸರ್ಕಾರಿ ಸಚಿವಾಲಯಗಳು, ಇಲಾಖೆಗಳಿಗೆ ಸೂಚನೆ

ನವದೆಹಲಿ, ಸೆ.23- ದೀಪಾವಳಿ ಅಥವಾ ಯಾವುದೇ ಇತರ ಹಬ್ಬದ ಸಮಯದಲ್ಲಿ ಉಡುಗೊರೆಗಳಿಗಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡದಂತೆ ಹಣಕಾಸು ಸಚಿವಾಲಯವು ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಈ ಕ್ರಮವು ಹಣಕಾಸಿನ ಶಿಸ್ತನ್ನು ಜಾರಿಗೊಳಿಸಲು ಮತ್ತು ಅನಿವಾರ್ಯವಲ್ಲದ ಖರ್ಚುಗಳನ್ನು ನಿರ್ಬಂಧಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿದೆ.ವೆಚ್ಚ ಇಲಾಖೆ ಹೊರಡಿಸಿದ ಕಚೇರಿ ಜ್ಞಾಪಕ ಪತ್ರದ ಪ್ರಕಾರ ನಿರ್ಬಂಧವು ತಕ್ಷಣದಿಂದ ಜಾರಿಗೆ ಬರುವಂತೆ ಅನ್ವಯಿಸುತ್ತದೆ.

ಹಿಂದಿನ ಸೂಚನೆಗಳನ್ನು ಇದೇ ರೀತಿಯ ಮಾರ್ಗಗಳಲ್ಲಿ ನೀಡಲಾಗಿದೆ ಮತ್ತು ಈ ನಿರ್ಧಾರವು ಸಾರ್ವಜನಿಕ ನಿಧಿಯ ಎಚ್ಚರಿಕೆಯ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ವಿಧಾನದ ಮುಂದುವರಿಕೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಹಣಕಾಸು ಸಚಿವಾಲಯ, ವೆಚ್ಚ ಇಲಾಖೆಯು ಹಣಕಾಸಿನ ಶಿಸ್ತನ್ನು ಉತ್ತೇಜಿಸುವ ಮತ್ತು ಅನಗತ್ಯ ವೆಚ್ಚಗಳನ್ನು ತಡೆಯುವ ಉದ್ದೇಶದಿಂದ ಕಾಲಕಾಲಕ್ಕೆ ಸೂಚನೆಗಳನ್ನು ನೀಡುತ್ತಿದೆ. ಈ ಪ್ರಯತ್ನಗಳ ಮುಂದುವರಿಕೆ ಮತ್ತು ಸಾರ್ವಜನಿಕ ಸಂಪನ್ಮೂಲಗಳ ವಿವೇಚನಾಯುಕ್ತ ಮತ್ತು ವಿವೇಚನಾಯುಕ್ತ ಬಳಕೆಯ ಹಿತದೃಷ್ಟಿಯಿಂದ, ದೀಪಾವಳಿ ಮತ್ತು ಇತರ ಹಬ್ಬಗಳಿಗೆ ಸಚಿವಾಲಯಗಳು, ಇಲಾಖೆಗಳು ಮತ್ತು ಭಾರತ ಸರ್ಕಾರದ ಇತರ ಅಂಗಗಳಿಂದ ಉಡುಗೊರೆಗಳು ಮತ್ತು ಸಂಬಂಧಿತ ವಸ್ತುಗಳ ಮೇಲೆ ಯಾವುದೇ ವೆಚ್ಚವನ್ನು ಮಾಡಲಾಗುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ಆದೇಶವನ್ನು ಕಾರ್ಯದರ್ಶಿ (ವೆಚ್ಚ) ಅನುಮೋದಿಸಿದ್ದಾರೆ ಮತ್ತು ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಪಿ.ಕೆ. ಸಿಂಗ್ ಅವರು ಸಹಿ ಮಾಡಿದ್ದಾರೆ. ಇದನ್ನು ಎಲ್ಲಾ ಕಾರ್ಯದರ್ಶಿಗಳು, ಸಚಿವಾಲಯಗಳು ಮತ್ತು ಇಲಾಖೆಗಳ ಹಣಕಾಸು ಸಲಹೆಗಾರರು ಹಾಗೂ ಸಾರ್ವಜನಿಕ ಉದ್ಯಮಗಳ ಇಲಾಖೆ ಮತ್ತು ಹಣಕಾಸು ಸೇವೆಗಳ ಇಲಾಖೆಗೆ ರವಾನಿಸಲಾಗಿದೆ. ಎಲ್ಲಾ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆಗಳನ್ನು ಪುನರುಚ್ಚರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಈ ಇಲಾಖೆಗಳನ್ನು ಕೇಳಲಾಗಿದೆ.

ಹಬ್ಬಕ್ಕೆ ಸಂಬಂಧಿಸಿದ ವೆಚ್ಚವನ್ನು ಕಡಿಮೆ ಮಾಡುವ ಮೂಲಕ, ಹಣಕಾಸು ಸಚಿವಾಲಯವು ಅನಗತ್ಯ ವೆಚ್ಚಗಳನ್ನು ತಪ್ಪಿಸುವ ಮತ್ತು ಸಂಪನ್ಮೂಲಗಳನ್ನು ಅಗತ್ಯ ಅಗತ್ಯಗಳಿಗೆ ಮರುನಿರ್ದೇಶಿಸುವ ಗುರಿಯನ್ನು ಹೊಂದಿದೆ.ಈ ನಿರ್ದೇಶನವು ಅನೇಕ ಇಲಾಖೆಗಳಲ್ಲಿ ಹಬ್ಬದ ಉಡುಗೊರೆಗಳನ್ನು ವಿತರಿಸುವ ದೀರ್ಘಕಾಲೀನ ಅಭ್ಯಾಸವನ್ನು ಕೊನೆಗೊಳಿಸುವ ಸಾಧ್ಯತೆಯಿದೆ. ಇದನ್ನು ಹೆಚ್ಚಾಗಿ ತಪ್ಪಿಸಬಹುದಾದ ವೆಚ್ಚವೆಂದು ನೋಡಲಾಗುತ್ತಿತ್ತು.

ಕೋಲ್ಕತ್ತಾದಲ್ಲಿ ಎಡಬಿಡದೆ ಸುರಿದ ಮಳೆಗೆ 5 ಮಂದಿ ಸಾವು

ಕೋಲ್ಕತ್ತಾ,ಸೆ.23- ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಮತ್ತು ಅದರ ಸುತ್ತಮತ್ತಲಿನ ಉಪನಗರಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಐದು ಜನರು ಸಾವನ್ನಪ್ಪಿ, ಹಲವಾರು ಮಂದಿ ಸಂಕಷ್ಟಕ್ಕೆ ಸಿಲಿಕಿದ್ದಾರೆ.ಕೋಲ್ಕತ್ತಾದ ಬೆನಿಯಾಪುಕುರ್, ಕಾಳಿಕಾಪುರ್, ನೇತಾಜಿನಗರ ಗರಿಯಾಹತ್ ಮತ್ತು ಎಕ್ಸಾಲ್ಟುರದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಾವುಗಳು ಸಂಭವಿಸಿವೆ.

ನೀರಿನ ಹರಿವು ತೊಂದರೆ ಉಂಟು ಮಾಡಿದೆ. ಜೊತೆಗೆ ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡ್ಡಿಯಾಗಿದೆ. ನಗರದ ಹಲವಾರು ತಗ್ಗುಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹಲವಾರು ಶಾಲೆಗಳು ಮಕ್ಕಲಿಗೆ ರಜೆ ಘೋಷಿಸಿವೆ.

ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದೆ. ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್‌ ಮಾಹಿತಿಯ ಪ್ರಕಾರ, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿ.ಮೀ ಮಳೆಯಾಗಿದ್ದು, ಜೋಧಪುರ ಪಾರ್ಕ್‌ನಲ್ಲಿ 285 ಮಿಮೀ, ಕಾಳಿಘಾಟ್‌ನಲ್ಲಿ 280 ಮಿಮೀ, ಟಾಪ್ತಿಯಾದಲ್ಲಿ 275 ಮಿಮೀ ಮತ್ತು ಬ್ಯಾಲಿಗಂಗೆಯಲ್ಲಿ 264 ಮಿಮೀ ಮಳೆಯಾಗಿದೆ.

ನಿರಂತರ ಮತ್ತು ಭಾರೀ ಮಳೆಯಿಂದಾಗಿ ಕೋಲ್ಕತ್ತಾಗೆ ಹೋಗುವ ಮತ್ತು ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪರಿಸ್ಥಿತಿಯನ್ನು ಪರಿಶೀಲಿಸಿ ಎಂದು ಏರ್ ಇಂಡಿಯಾ ತಿಳಿಸಿದೆ.

ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿರುವುದರಿಂದ, ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ವಿಮಾನ ಸಂಚಾರ ವಿಳಂಬವಾಗುವ ಮತ್ತು ನಿಧಾನವಾಗುವ ಸಾಧ್ಯತೆಯಿದ್ದು, ಜನರ ಪ್ರಯಾಣವನ್ನು ಸ್ಥಿರವಾಗಿಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ ಎಂದು ಇಂಡಿಗೋ ತಿಳಿಸಿದೆ.

ಸೇವೆಗಳಲ್ಲಿ ವ್ಯತ್ಯಯ
ರೈಲು ಹಳಿಗಳು ನೀರಿನಿಂದ ತುಂಬಿರುವುದರಿಂದ ನಗರ ಮತ್ತು ಉಪನಗರಗಳಲ್ಲಿ ರೈಲು ಮತ್ತು ಮೆಟ್ರೋ ಸೇವೆಗಳು ವ್ಯತ್ಯಯಗೊಂಡಿವೆ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಶಾಹಿದ್ ಖುದಿರಾಮ್ ಮತ್ತು ಮೈದಾನ್ ನಿಲ್ದಾಣಗಳ ನಡುವೆ ಬೆಳಿಗ್ಗೆಯಿಂದ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲ್ವೆ ವಕ್ತಾರರು ತಿಳಿಸಿದ್ದಾರೆ.

ದಕ್ಷಿಣೇಶ್ವರ ಮತ್ತು ಮೈದಾನ ನಿಲ್ದಾಣಗಳ ನಡುವೆ ಮೊಟಕುಗೊಳಿಸಿದ ಸೇವೆಗಳನ್ನು ನಡೆಸಲಾಗುತ್ತಿದೆ. ಹಳಿಗಳಲ್ಲಿ ನೀರು ನಿಂತ ಕಾರಣ, ಸೀಲ್ದಾ ದಕ್ಷಿಣ ವಿಭಾಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ, ಆದರೆ ಸೀಲ್ವಾ ಉತ್ತರ ಮತ್ತು ಮುಖ್ಯ ವಿಭಾಗಗಳಲ್ಲಿ ಸೇವೆಗಳನ್ನು ನಡೆಸಲಾಗುತ್ತಿದೆ ಎಂದು ಪೂರ್ವ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೂರ್ವ ರೈಲ್ವೆಯ ಹೌರಾ ಮತ್ತು ಕೋಲ್ಕತ್ತಾ ಟರ್ಮಿನಲ್ ನಿಲ್ದಾಣಗಳಿಗೆ ರೈಲು ಸೇವೆಗಳು ಭಾಗಶಃ ವ್ಯತ್ಯಯಗೊಂಡಿವೆ. ಚಿತ್ಪುರ ಯಾರ್ಡ್‌ಲ್ಲಿ ನೀರು ನಿಂತ ಕಾರಣ ವೃತ್ತಾಕಾರದ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲಾಕಾಲೇಜುಗಳಿಗೆ ರಜೆ ಘೋಷಣೆ:
ಭಾರೀ ಮಳೆ ಮತ್ತು ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮತ್ತು ಸಂಚಾರ ದಟ್ಟಣೆಯಿಂದಾಗಿ ಕಚೇರಿಗೆ ಹೋಗುವವರು ತಮ್ಮ ಸ್ಥಳಗಳನ್ನು ತಲುಪಲು ಕಷ್ಟಪಡುತ್ತಿದ್ದಾರೆ. ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಗರಿಯಾ ಕಾಮದಹರಿಯಲ್ಲಿ ಕೆಲವೇ ಗಂಟೆಗಳಲ್ಲಿ 332 ಮಿಮೀ ಮಳೆಯಾಗಿದ್ದು, ಜೋಧಪುರ ಪಾರ್ಕ್‌ಲ್ಲಿ 285 ಮಿ.ಮೀ ಮಳೆಯಾಗಿದೆ ಎಂದು ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ತಿಳಿಸಿದೆ.

ಕಾಲಿಘಾಟ್‌ನಲ್ಲಿ 280 ಮಿ.ಮೀ.. ಟಾಪ್ತಿಯಾ 275 ಮಿ.ಮೀ., ಬ್ಯಾಲಿಗಂಜ್ 264 ಮಿ.ಮೀ., ಉತ್ತರ ಕೋಲ್ಕತ್ತಾದ ಥಂಟಾನಿಯಾದಲ್ಲಿ 195 ಮಿ.ಮೀ. ಮಳೆಯಾಗಿದೆ ಎಂದು ಅವರು ಹೇಳಿದರು.

ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ಕಡಿಮೆ ಒತ್ತಡದ ಪ್ರದೇಶವು ದಕ್ಷಿಣ ಬಂಗಾಳದ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿರುವುದರಿಂದ ನಗರವು ಹೆಚ್ಚಿನ ಮಳೆಗೆ ಸಿದ್ಧವಾಗಿದೆ. ದಕ್ಷಿಣ ಬಂಗಾಳದ ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ, ದಕ್ಷಿಣ 24 ಪರಗಣಗಳು, ಜಾಗ್ರಾಮ್ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಬುಧವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.