Friday, November 7, 2025
Home Blog Page 92

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-09-2025)

ನಿತ್ಯ ನೀತಿ : ದುಡಿಯದೆ ಇದ್ದರೆ ಕೆಟ್ಟು ಹೋಗುವೆ, ದುಡಿದು ಇಟ್ಟರೆ ಕೊಟ್ಟು ಹೋಗುವೆ,ಆದ್ದರಿಂದ ಅವರಿವರ, ಅದರಿದರ,ಚಿಂತೆ ಬಿಟ್ಟು ಬದುಕು ಮನವೇ,ಇಲ್ಲಿ ಎಲ್ಲಾ ನಶ್ವರವೇ.ಆರೋಗ್ಯ,ನೆಮ್ಮದಿಯಿಂದ ಬದುಕುವುದೇ ಬದುಕು.

ಪಂಚಾಂಗ : ಸೋಮವಾರ, 22-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಪ್ರತಿಪದಾ / ನಕ್ಷತ್ರ: ಉತ್ತರಾ / ಯೋಗ: ಶುಕ್ಲ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.16
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಆಸೆ ಮತ್ತು ಭಾವನೆಗಳು ಈಡೇರುವುದರಿಂದ ಮನಸ್ಸಿಗೆ ನೆಮದಿ ಸಿಗಲಿದೆ.
ವೃಷಭ: ಮಕ್ಕಳು ಅವಿಧೇಯತೆಯಿಂದ ನಡೆದು ಕೊಳ್ಳುವುದರಿಂದ ಮನಸ್ಸಿಗೆ ನೋವುಂಟಾಗಲಿದೆ.
ಮಿಥುನ: ವೃತ್ತಿ ಬದುಕಿನಲ್ಲಿ ಜವಾಬ್ದಾರಿ ಕಡಿಮೆಯಾದ ಕಾರಣ ನಿಂದನೆಗೆ ಒಳಗಾಗುವಿರಿ.

ಕಟಕ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಸಿಂಹ: ಕೃಷಿಕರಿಗೆ ಆಗಾಗ ಎದುರಾಗುವ ಅಡೆತಡೆಗಳು ನಿವಾರಣೆಯಾಗಲಿವೆ.
ಕನ್ಯಾ: ಕುಟುಂಬದಲ್ಲಿ ಕಾಣಿಸಿ ಕೊಳ್ಳುವ ಸಮಸ್ಯೆ ಗಳಿಗೆ ಅಂತ್ಯ ಸಿಗಲಿದೆ.

ತುಲಾ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.
ವೃಶ್ಚಿಕ: ಕಚೇರಿಯಲ್ಲಿ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿಯುವ ನಿಮ ಮೇಲೆ ಮೇಲಾಧಿಕಾರಿಗಳಿಗೆ ಭರವಸೆ ಮೂಡಲಿದೆ.
ಧನುಸ್ಸು: ನಿಮ ಅತಿಯಾದ ಮಾತಿನಿಂದ ಮನೆ ಯಲ್ಲಿ ಮುಜುಗರದ ವಾತಾವರಣ ಉಂಟಾಗಲಿದೆ.

ಮಕರ: ಮಗನ ಆರೋಗ್ಯದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಜವಾಬ್ದಾರಿ ಹೆಚ್ಚಾಗಲಿದೆ.
ಕುಂಭ: ಸ್ವಂತ ಉದ್ಯೋಗದವರಿಗೆ ಉತ್ತಮ ದಿನ. ಧಾರ್ಮಿಕ ಚಿಂತನೆ ಮಾಡುವಿರಿ.
ಮೀನ: ಕೆಲವು ವ್ಯಾಪಾರ ಯೋಜನೆಗಳನ್ನು ತಡೆ ಹಿಡಿಯಬೇಕಾದ ಸಂದರ್ಭಗಳು ಬರಬಹುದು.

ದಸರಾ ಕ್ರೀಡಾಕೂಟಕ್ಕೆ ಕುಸ್ತಿಪಟು ವಿನೇಶ್‌ ಪೋಗಟ್‌ ಅತಿಥಿ

ಬೆಂಗಳೂರು, ಸೆ. 21- ಮೈಸೂರು ದಸರಾ ಪ್ರಯುಕ್ತ ನಾಳೆಯಿಂದ ದಸರಾ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆಯಲಿದ್ದು ವಿಶ್ವವಿಖ್ಯಾತ, ಒಲಿಂಪಿಯನ್‌ ಕುಸ್ತಿಪಟು ವಿನೇಶ್‌ ಪೋಗಟ್‌ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಒಲಿಂಪಿಕ್‌್ಸ ಕ್ರೀಡಾಕೂಟಗಳಲ್ಲಿ ಮೂರು ಬಾರಿ ಭಾರತ ತಂಡವನ್ನು ಪ್ರತಿನಿಧಿಸಿರುವ ವಿನೇಶ್‌ ಪೋಗಾಟ್‌ ಪ್ರಶಸ್ತಿ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.

ಪ್ಯಾರಿಸ್‌‍ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆಯನ್ನು ವಿನೇಶ್‌ ಪೋಗಾಟ್‌ ಮೂಡಿಸಿದ್ದರಾದರೂ, ತೂಕ ಹೆಚ್ಚಳದಿಂದ ಟೂರ್ನಿಯಿಂದ ಹೊರಬಿದ್ದ ನಂತರ ತಮ್ಮ ಕುಸ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು.

2024ರಲ್ಲಿ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಜುಲಾನ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ವಿನೇಶ್‌ ಪೋಗಾಟ್‌ ಆಯ್ಕೆಯಾಗಿದ್ದಾರೆ.

ಚುನಾವಣಾ ಆಯೋಗದಿಂದ ತನಿಖೆಗೆ ಅಸಹಕಾರ : ಪ್ರಿಯಾಂಕ್‌ ಖರ್ಗೆ ಕಿಡಿ

ಬೆಂಗಳೂರು, ಸೆ.21- ಅಳಂದ ಕ್ಷೇತ್ರದಲ್ಲಿನ ಮತಗಳ್ಳತನದ ಬಗ್ಗೆ ಚುನಾವಣಾ ಆಯೋಗದ ಜೊತೆ ಕಾಂಗ್ರೆಸ್‌‍ ನಾಯಕರ ವಾದ ಪ್ರತಿವಾದಗಳು ಮುಂದುವರೆದಿದ್ದು, ಸಿಐಡಿ ತನಿಖೆಗೆ ಅಗತ್ಯವಾದ ಮಾಹಿತಿಯನ್ನು ಒದಗಿಸದೆ ಚುನಾವಣಾ ಆಯೋಗ ಸುಳ್ಳು ಹೇಳುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಪುನರುಚ್ಚರಿಸಿದ್ದಾರೆ.

ಎರಡು ದಿನಗಳ ಹಿಂದೆ ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಬಿ.ಆರ್‌. ಪಾಟೀಲ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಆಯೋಗದ ಮುಂದೆ ಗಂಭೀರ ಪ್ರಶ್ನೆಗಳನ್ನು ಇಟ್ಟಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ ಕಲಬುರಗಿ ಜಿಲ್ಲೆಯ ಎಸ್‌‍ಪಿ ಅವರಿಗೆ 2023ರ ಸೆ. 6 ರಂದು ತನಿಖೆಗೆ ಅಗತ್ಯವಾಗಿರುವ ಮಾಹಿತಿಗಳನ್ನು ನೀಡಲಾಗಿದೆ ಎಂದು ತಿಳಿಸಿತ್ತು.

ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಸಲ್ಲಿಕೆಯಾಗಿದ್ದ ಅರ್ಜಿ ನಮೂನೆಗೆ ಆಕ್ಷೇಪಣೆ ಸಲ್ಲಿಸಿದವರ ವಿವರ, ಕ್ರಮಸಂಖ್ಯೆ, ಮತದಾರರ ಗುರುತಿನ ಚೀಟಿಯ ಸಂಖ್ಯೆ, ಲಾಗಿನ್‌ ಆಗಲು ಬಳಸಲಾದ ಮೊಬೈಲ್‌ ಸಂಖ್ಯೆ, ಪ್ರಕ್ರಿಯೆಗಳಿಗೆ ಒದಗಿಸಲಾದ ಮೊಬೈಲ್‌ ಸಂಖ್ಯೆ, ಐಪಿ ಅಡ್ರೆಸ್‌‍, ಅರ್ಜಿದಾರರ ಸ್ಥಳ, ಸಲ್ಲಿಕೆಯಾದ ದಿನಾಂಕ ಮತ್ತು ಸಮಯ ಬಳಕೆದಾರರ ಲಾಗಿನ್‌ ಸೃಷ್ಟಿಯಾದ ದಿನಾಂಕ ಎಲ್ಲವನ್ನೂ ಒದಗಿಸಲಾಗಿದೆ. ಜೊತೆಗೆ ತನಿಖೆಗೆ ಅಗತ್ಯವಾದ ಇತರ ಮಾಹಿತಿಗಳನ್ನು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಒದಗಿಸಿದ್ದಾರೆ ಎಂದು ಆಯೋಗ ಸ್ಪಷ್ಟನೆ ನೀಡಿತ್ತು.

ಇದನ್ನು ತಳ್ಳಿ ಹಾಕಿರುವ ಪ್ರಿಯಾಂಕ್‌ ಖರ್ಗೆ ಆಯೋಗ ಸ್ಪಷ್ಟವಾಗಿ ಸುಳ್ಳು ಹೇಳುತ್ತಿದೆ. ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಕಚೇರಿಯ ಅಧಿಕಾರಿ 2025ರ ಮಾರ್ಚ್‌ 14 ರಂದು ನೆನಪಿನ ಓಲೆಯನ್ನು ಬರೆದು ಅದರಲ್ಲಿ ಬಿ.ಆರ್‌. ಪಾಟೀಲ್‌ ಅವರ ದೂರು, ಎಡಿಜಿಪಿ ಕಾನೂನು ಸುವ್ಯವಸ್ಥೆ ಅವರ ಪತ್ರ ಸೇರಿದಂತೆ 17 ಪತ್ರ ವ್ಯವಹಾರಗಳ ಮಾಹಿತಿಯನ್ನು ನಮೂದಿಸಿದ್ದಾರೆ.
2023ರಲ್ಲಿ ಎಲ್ಲಾ ದಾಖಲೆಗಳನ್ನು ನೀಡಿದ್ದರೆ, 2025ರಲ್ಲಿ ರಾಜ್ಯ ಚುನಾವಣಾಧಿಕಾರಿ ನೆನಪಿನ ಓಲೆ ಬರೆದು ಮಾಹಿತಿ ನೀಡಲು ಅನುಮತಿ ಕೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಸಿಐಡಿಯ ಸೈಬರ್‌ ಕ್ರೈಂ ಅಧಿಕಾರಿಗಳು ಎನ್‌ವಿಎಸ್‌‍ಪಿ ಮತ್ತು ವಿಎಚ್‌ಎ ಅಪ್ಲಿಕೇಶನ್‌ಗಳ ವೇದಿಕೆಯಲ್ಲಿ ಓಟಿಪಿ ಅಥವಾ ಮಲ್ಟಿಫ್ಯಾಕ್ಟರ್ಸ್‌ ಸೌಲಭ್ಯಗಳನ್ನು ವಿಸ್ತರಿಸಲಾಗಿತ್ತೇ? ಓಟಿಪಿ ಹಾಗೂ ಅಧಿಕೃತ ಅರ್ಜಿದಾರರ ವಿವರಗಳು ಓಟಿಪಿ ರವಾನಿಸಲಾದ ಮೊಬೈಲ್‌ ಸಂಖ್ಯೆ ಅರ್ಜಿದಾರರು ನೀಡಿದ ಮೊಬೈಲ್‌ ಸಂಖ್ಯೆ ಸೇರಿದಂತೆ 5 ಪ್ರಮುಖ ಅಂಶಗಳನ್ನು ಒದಗಿಸುವಂತೆ ಆಗ್ರಹಿಸಿದ್ದರು,

1872ರ ಭಾರತೀಯ ಸಾಕ್ಷ್ಯ ಅಧಿನಿಯಮ 65ಬಿ ಅಡಿಯಲ್ಲಿ ಈ ಎಲ್ಲಾ ಸಾಕ್ಷ್ಯ ಪುರಾವೆಗಳನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯವಾಗಿತ್ತು. ಆದರೆ ಈವರೆಗೂ ತನಿಖೆಗೆ ಅಗತ್ಯವಾದ ಮಾಹಿತಿ ನೀಡಿಲ್ಲ, ಬದಲಾಗಿ ಸುಳ್ಳು ಹೇಳಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಬೆಂಗಳೂರಲ್ಲಿ ರಾತ್ರಿಯಿಡೀ ಪೊಲೀಸರ ವಿಶೇಷ ಗಸ್ತು

ಬೆಂಗಳೂರು,ಸೆ.21- ಮೊನ್ನೆ ರಾತ್ರಿ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ ನಗರ ಪೊಲೀಸರು ಕಳೆದ ರಾತ್ರಿ ವಿಶೇಷ ಗಸ್ತು ಮಾಡಿದ್ದಾರೆ.ಮಹಾಲಯ ಅಮಾವಾಸ್ಯೆಯ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿ 11 ಗಂಟೆಯಿಂದ ಇಂದು ಬೆಳಗಿನ ಜಾವ 5 ಗಂಟೆವರೆಗೂ ನಗರದಾದ್ಯಂತ ಕಾರ್ಯಾಚರಣೆ ಕೈಗೊಂಡಿದ್ದರು.

ಖುದ್ದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಫೀಲ್‌್ಡಗಿಳಿದು ಇಡೀ ರಾತ್ರಿ ನಗರದಾದ್ಯಂತ ಸಂಚರಿಸಿ ಕಿರಿಯ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ನಾಲ್ವರು ಹೆಚ್ಚುವರಿ ಪೊಲೀಸ್‌‍ ಆಯುಕ್ತರು, 20ಕ್ಕೂ ಹೆಚ್ಚು ಡಿಸಿಪಿಗಳು, ಎಲ್ಲಾ ವಿಭಾಗದ ಎಸಿಪಿಗಳು, ಇನ್ಸ್ ಪೆಕ್ಟರ್‌ಗಳು, ಸಬ್‌ ಇನ್‌್ಸಪೆಕ್ಟರ್‌ಗಳು ಹಾಗೂ ಸಿಬ್ಬಂದಿಗಳು ಈ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡಿದ್ದರು.

ಪೊಲೀಸರು ನಗರದಾದ್ಯಂತ ನಾಕಾಬಂದಿ ಕೈಗೊಂಡಿದ್ದು ವಾಹನಗಳ ಪರಿಶೀಲನೆ ಸಂದರ್ಭದಲ್ಲಿ ಹೆಲೆಟ್‌ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು, ತ್ರಿಬ್ಬಲ್‌ ರೈಡಿಂಗ್‌ ಹೋಗುವುದು, ಇನ್ನೂ ಮುಂತಾದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಕಂಡುಬಂದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕುಡಿದು ವಾಹನ ಚಾಲನೆ ಮಾಡುವವರು ಹಾಗೂ ಡ್ರಗ್ಸ್ ಸೇವಿಸಿರುವವರು ಈ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರುಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ಲಾಡ್ಜ್ , ಕ್ಲಬ್‌, ಹೋಟೆಲ್‌ಗಳು ಇನ್ನೂ ಮುಂತಾದ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ಕೊಟ್ಟ ಪೊಲೀಸರು ಪರಿಶೀಲಿಸಿದ್ದಾರೆ. ಅಲ್ಲಿ ಅಕ್ರಮಗಳು ಕಂಡಬಗ್ಗೆ ವಿಚಾರಣೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸ್‌‍, ರೈಲ್ವೆ ನಿಲ್ದಾಣ ಸೇರಿದಂತೆ ಸುತ್ತಮುತ್ತ ಪ್ರದೇಶಗಳಿಗೆ ರಾತ್ರಿ ಭೇಟಿ ನೀಡಿ ಅಲ್ಲಿದ್ದ ಸಾರ್ವಜನಿಕರನ್ನು ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದ್ದಾರೆ.ರಾತ್ರಿಯೂ ಸಹ ರೌಡಿಗಳ ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿ ಪರಿಶೀಲಿಸಿದ್ದಾರೆ.

ಮೊನ್ನೆ ರಾತ್ರಿ ಪೊಲೀಸರು 1474ಕ್ಕೂ ಹೆಚ್ಚು ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಸಿಕ್ಕಿದಂತಹ ರೌಡಿಗಳಿಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು. ನಿನ್ನೆ ದಾಳಿಯ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ಕೆಲ ರೌಡಿಗಳು ಇಂದು ಸಿಕ್ಕಿದ್ದು, ಅವರುಗಳಿಗೂ ಸಹ ಪೊಲೀಸರು ತಾಕೀತು ಮಾಡಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಪರ್ಯಾಯ ರಜೆ ವ್ಯವಸ್ಥೆ

ಬೆಂಗಳೂರು, ಸೆ.21– ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ರಜೆಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ, ಬೇರೆ ರೀತಿಯಲ್ಲಿ ಒದಗಿಸಲು ಚಿಂತನೆ ನಡೆಸುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳುವುದರಿಂದ ಮಕ್ಕಳ ಕಲಿಕೆಗೆಯಾವುದೇ ತೊಂದರೆಯಾಗುವುದಿಲ್ಲ. ದಸರಾ ರಜೆಯ ಸಂದರ್ಭದ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದರು.ಸಮೀಕ್ಷೆಯಲ್ಲಿ ಕ್ರಿಶ್ಚಿಯನ್‌ ಧರ್ಮದ ಜೊತೆ ಉಪಜಾತಿಗಳನ್ನು ಸೇರ್ಪಡೆ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿದ್ದೇವೆ. ಯಾರು ಟೇಬಲ್‌ ಕುಟ್ಟಿ ಮಾತನಾಡಿಲ್ಲ. ಅನಗತ್ಯವಾಗಿ ವದಂತಿಗಳನ್ನು ಹರಡಬಾರದು.
ಉಪಜಾತಿಗಳ ಸೇರ್ಪಡೆಯ ಬಗ್ಗೆ ನಾನು ಕೂಡ ಜನರ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಅದರಂತೆ ಮುಖ್ಯಮಂತ್ರಿಯವರು ಉಪ ಜಾತಿಗಳನ್ನು ಕೈಬಿಡಲು ನಿರ್ದೇಶನ ನೀಡಿದ್ದಾರೆ ಎಂದರು.

ಈ ಅವಧಿಯ ರಜೆಯನ್ನು ಶಿಕ್ಷಕರಿಗೆ ಬೇರೆ ರೀತಿ ಕಲ್ಪಿಸುವ ಬಗ್ಗೆ ಚಿಂತನೆಗಳಿವೆ. ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಸರ್ಕಾರ ಹೆಚ್ಚುವರಿ ಗೌರವ ಧನ ನೀಡಲಿದೆ. ಶಿಕ್ಷಕರ ಸಂಘದ ಮುಖಂಡರ ಜೊತೆಗೆ ಚರ್ಚೆ ನಡೆಸಲಾಗಿದೆ. ಸಮೀಕ್ಷೆಯನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಮನವಿ ಮಾಡಿದ್ದೇನೆ ಎಂದರು.

ಶಿಕ್ಷಕರನ್ನು ಸಮೀಕ್ಷೆಗೆ ಬಳಸಬಾರದು ಎಂಬ ಚರ್ಚೆಗಳಿವೆ. ಆದರೆ ಇದಕ್ಕೆ ಪರ್ಯಾಯವಾಗಿ ಬೇರೆ ವ್ಯವಸ್ಥೆಗಳು ಈವರೆಗೂ ಸೃಷ್ಟಿಯಾಗಿಲ್ಲ. ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಹಾಗೂ ಜನಗಣತಿಗೆ ಶಿಕ್ಷಕರನ್ನಲ್ಲದೇ ಬೇರೆ ಯಾರನ್ನು ಬಳಸಿಕೊಳ್ಳುತ್ತಾರೆ ಎಂದು ಮಧುಬಂಗಾರಪ್ಪ ಪ್ರಶ್ನಿಸಿದರು.

ಸಮಾಜದಲ್ಲಿ ಸಮಾನತೆ ಬರಬೇಕಾದರೆ ಪ್ರತಿಯೊಬ್ಬರ ಸ್ಥಿತಿಗತಿಯ ಮಾಹಿತಿಗಳು ದೊರೆಯಬೇಕು. ಅದಕ್ಕಾಗಿ ಸಮೀಕ್ಷೆ ಅನಿವಾರ್ಯ ಎಂದ ಅವರು, ಶಿಕ್ಷಣ ಇಲಾಖೆಯಲ್ಲಿ ತಾವು ಸಚಿವರಾದ ಮೇಲೆ ಮಹತ್ವದ ಸುಧಾರಣೆಗಳನ್ನು ತಂದಿದ್ದೇನೆ ಎಂದರು.ರಾಜ್ಯದ ಬಜೆಟ್‌ನಲ್ಲಿ ಈ ಮೊದಲು 33,500 ಕೋಟಿ ರೂ. ಅನುದಾನವಿತ್ತು. ನಮ ಸರ್ಕಾರ ಬಂದಾಗ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಅದನ್ನು 37 ಸಾವಿರ ಕೋಟಿ. ರೂ.ಗಳಿಗೆ ಹೆಚ್ಚಿಸಲಾಗಿದೆ. ಈಗ 44 ಸಾವಿರ ಕೋಟಿಯಷ್ಟು ಅನುದಾನ ಒದಗಿಸಲಾಗಿದೆ.

ಬಜೆಟ್‌ನಲ್ಲಿ ಘೋಷಿಸಿದ 500 ಕರ್ನಾಟಕ ಪಬ್ಲಿಕ್‌ ಶಾಲೆಗಳ ಸಂಖ್ಯೆಯನ್ನು 800ಕ್ಕೆ ಹೆಚ್ಚಿಸಿದ್ದೇವೆ. ಇದೆಲ್ಲಾ ನಮ ಸಾಧನೆಯಲ್ಲವೇ? ಬಿಜೆಪಿಯವರಿಗೆ ಕಾಣುವುದಿಲ್ಲವೇ ಎಂದರು.
ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಲ್ಲಿ ಶೈಕ್ಷಣಿಕ ವೆಚ್ಚವಾಗಿ ಪ್ರತಿ ಮಗುವಿಗೆ 8 ಸಾವಿರದಿಂದ 5800 ರೂ. ವರೆಗೂ ಅನುದಾನ ನೀಡುತ್ತಿದೆ. ಅದರೆ ಕರ್ನಾಟಕ ವಿದ್ಯಾರ್ಥಿಗಳಿಗೆ 2800 ರೂ.ಗಳು ಮಾತ್ರ ನೀಡುತ್ತದೆ. ಇದನ್ನು ಸರಿ ಪಡಿಸಲು ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದ್ದರು.

ಬಿಜೆಪಿಯವರಿಗೆ ಸಮಾಜ ಹಾಗೂ ಅಭಿವೃದ್ಧಿಯ ಕಾಳಜಿ ಇರಲಿಲ್ಲ. ಗಣೇಶಹಬ್ಬ ಎಂದರೆ ಅವರಿಗೆ ಸುಗ್ಗಿ. ಗಲಾಟೆಯ ಹಬ್ಬವನ್ನಾಗಿ ಪರಿವರ್ತನೆ ಮಾಡುತ್ತಾರೆ. ಈ ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ತಮ ಆಚರಣೆಗಳನ್ನು ಮಾಡಲು ಅವಕಾಶಗಳಿವೆ. ಆದರೆ ಬಿಜೆಪಿಯವರು ಕೋಮು ಭಾವನೆಗಳನ್ನು ಪ್ರಚೋದಿಸಿ ಸಮಾಜವನ್ನು ಒಡೆದಾಳುವ ಪ್ರಯತ್ನ ಮಾಡುತ್ತಿದ್ದಾರೆ. ಹಿಂದೆ ಬ್ರಿಟಿಷರು ಇದೇ ರೀತಿಯ ಕುತಂತ್ರ ಮಾಡಿದ್ದರು. ಭಾರತೀಯ ಜನತಾಪಾರ್ಟಿ ಒಡೆದಾಳುವ ನೀತಿಗಾಗಿ ಬ್ರಿಟಿಷ್‌ ಜನತಾಪಾರ್ಟಿ ಎಂದು ಗುರುತಿಸಿಕೊಂಡಿದೆ ಎಂದು ಕಿಡಿ ಕಾರಿದರು.

ಬಿಜೆಪಿಯವರ ನಿಲುವುಗಳು ಜನಪರವಾಗಿಲ್ಲ, ರಾಜ್ಯದಲ್ಲಷ್ಟೇ ಅಲ್ಲ ವಿದೇಶಾಂಗ ವ್ಯವಹಾರದಲ್ಲೂ ಭಾರತೀಯರಿಗೆ ಮಾರಕವಾದ ವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅಮೆರಿಕಾ ಅಧ್ಯಕ್ಷರನ್ನು ತಬ್ಬಿಕೊಂಡು, ಶೇಕ್‌ ಹ್ಯಾಂಡ್‌ ಮಾಡಿ, ವಾಕಿಂಗ್‌ ಮೂಲಕ ಚಾಯ್‌ ಪಾರ್ಟಿ ಮಾಡಿದ್ದರು. ಆದರೆ ಈಗ ಅದೇ ಟ್ರಂಪ್‌ ಭಾರತೀಯರ ವೀಸಾ ಶುಲ್ಕವನ್ನು ಒಂದು ಲಕ್ಷ ಡಾಲರ್‌ ಹೆಚ್ಚಿಸಿದ್ದಾರೆ. ಟ್ರಂಪ್‌ ಉಲ್ಟಾ ಹೊಡೆದಾಕ್ಷಣ ಮೋದಿ ಚೀನಾ ಜೊತೆ ಸಂಬಂಧ ಬೆಳೆಸಲು ಹೋಗುತ್ತಾರೆ. ಆ ದೇಶದಿಂದ ಗಡಿಯಲ್ಲಿ ಗಲಾಟೆಯಾದರೆ ಟಿಕ್‌ಟಾಕ್‌ ನಿಷೇಧಿಸುತ್ತಾರೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಅಭಿವೃದ್ಧಿಗಿಂತಲೂ ಲೂಟಿ ಹೊಡೆಯುವುದಕ್ಕೆ ಹೆಚ್ಚು ಪ್ರಖ್ಯಾತಿ. ಅಧಿಕಾರ ಸಿಕ್ಕಾಗ ಶೇ.40 ರಷ್ಟು ಕಮಿಷನ್‌ ಎಂಬ ಸಗಣಿ ತಿಂದಿದ್ದಾರೆ ಎಂದು ಹರಿಹಾಯ್ದರು.

ಒಕ್ಕಲಿಗ ಸಮಾಜದ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲ್ಲ : ಡಿಕೆಶಿ

ಬೆಂಗಳೂರು, ಸೆ.21- ನಾನು ಸರ್ಕಾರದಲ್ಲಿದ್ದೇನೆ. ಸಮಾಜದವರ ಅಭಿಪ್ರಾಯಗಳ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರ ಅಭಿಪ್ರಾಯ. ಆನಂತರ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಹೇಳಿದರು.

ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ನಿನ್ನೆ ನಡೆದಿದ್ದ ಒಕ್ಕಲಿಗ ಮಠಾಧೀಶರ ಹಾಗೂ ಮುಖಂಡರ ಸಭೆಯಲ್ಲಿ ಜಾತಿಜನಗಣತಿ ಮುಂದೂಡುವ ನಿರ್ಣಯದ ಬಗ್ಗೆ ಕೇಳಿದಾಗ ಆ ಬಗ್ಗೆ ಈಗ ಪ್ರತಿಕ್ರಿಯಿಸುವುದಿಲ್ಲ ಎಂದರು.

ದೆಹಲಿ ಭೇಟಿಯ ಕುರಿತು ಕೇಳಿದಾಗ, ಕಾವೇರಿ ನೀರಿನ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ದಿನಾಂಕ ನಿಗದಿಯಾಗಿದ್ದು, ಈ ಬಗ್ಗೆ ವಕೀಲರುಗಳ ಬಳಿ ಚರ್ಚಿಸಲು ಹಾಗೂ ಒಂದಷ್ಟು ಕೆಲಸಗಳ ಕಾರಣಕ್ಕೆ ತೆರಳುತ್ತಿರುವೆ ಎಂದು ತಿಳಿಸಿದರು.

ಗಡಿಯಲ್ಲಿ ಗುಂಡಿನ ಚಕಮಕಿ, ಗುಂಡುಹಾರಿಸಿದ ಪಾಕಿಗಳಿಗೆ ಭಾರತೀಯ ಸೇನೆ ತಕ್ಕ ತಿರುಗೇಟು

ಶ್ರೀನಗರ,ಸೆ.21- ಆಪರೇಷನ್‌ ಸಿಂಧೂರದ ನಂತರ ಜಮು ಮತ್ತು ಕಾಶೀರದ ಕುಪ್ವಾರಾದ ನಿಯಂತ್ರಣ ರೇಖೆಯ (ಎಲ್‌‍ಒಸಿ) ನೌಗಮ್‌ ಸೆಕ್ಟರ್‌ನಲ್ಲಿ ಭಾರತ ಮತ್ತು ಪಾಕಿಸ್ತಾನಿ ಪಡೆಗಳ ನಡುವೆ ಗುಂಡಿನ ದಾಳಿ ನಡೆದಿದೆ. ಆದರೆ, ಈ ಘಟನೆಯು ಕದನ ವಿರಾಮ ಉಲ್ಲಂಘನೆಗೆ ಸಮನಾಗಿರುವುದಿಲ್ಲ. ಎಲ್‌‍ಒಸಿ ಉದ್ದಕ್ಕೂ ಎರಡೂ ಕಡೆಯಿಂದ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಚಕಮಕಿ ನಡೆದಿದ್ದು, ಇದು ಕದನ ವಿರಾಮ ಉಲ್ಲಂಘನೆಯಲ್ಲ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಸಂಜೆ 6.15 ರ ಸುಮಾರಿಗೆ ಗುಂಡಿನ ಚಕಮಕಿ ಪ್ರಾರಂಭವಾಗಿ ಸುಮಾರು ಒಂದು ಗಂಟೆ ಕಾಲ ನಿರಂತರವಾಗಿ ಮುಂದುವರೆಯಿತು. ನಂತರ ಗುಂಡಿನ ಚಕಮಕಿ ನಿಂತಿತು. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಇಲ್ಲಿಯವರೆಗೆ, ಸೇನೆಯು ಘಟನೆಯ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತ ಮೇ 7 ರಂದು ಆಪರೇಷನ್‌ ಸಿಂಧೂರ್‌ ಅನ್ನು ಪ್ರಾರಂಭಿಸಿದಾಗಿನಿಂದ ಮೇ ತಿಂಗಳಲ್ಲಿ ಉದ್ವಿಗ್ನತೆ ಭುಗಿಲೆದ್ದ ತಿಂಗಳುಗಳ ನಂತರ ಗುಂಡಿನ ಚಕಮಕಿ ನಡೆದಿದೆ. ನಾಲ್ಕು ದಿನಗಳ ಸಂಘರ್ಷವು ಎರಡೂ ಕಡೆಯವರು ಕದನ ವಿರಾಮ ಒಪ್ಪಂದಕ್ಕೆ ಬರುವುದರೊಂದಿಗೆ ಕೊನೆಗೊಂಡಿತ್ತು.

ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಲವಾರು ವಾಯುನೆಲೆಗಳು ಮತ್ತು ಒಂಬತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌‍ಗಳು ನಾಶವಾದರೂ, ಭಾರತಕ್ಕೆ ಯಾವುದೇ ಗಮನಾರ್ಹ ಹಾನಿಯಾಗಿಲ್ಲ. ಕೊನೆಯ ಬಾರಿಗೆ ಎರಡೂ ದೇಶಗಳ ನಡುವೆ ಮೇ 10, 2025 ರಂದು ಕದನ ವಿರಾಮ ಉಲ್ಲಂಘನೆ ಉಂಟಾಗಿತ್ತು.

ಆಗಸ್ಟ್‌ 5 ರಂದು, ಎರಡೂ ದೇಶಗಳ ನಡುವೆ ಕದನ ವಿರಾಮ ಉಲ್ಲಂಘನೆಯ ಕೆಲವು ವರದಿಗಳು ಹೊರಬಂದವು. ಆದಾಗ್ಯೂ, ಭಾರತೀಯ ಸೇನೆಯು ಪಾಕಿಸ್ತಾನದಿಂದ ಯಾವುದೇ ಕದನ ವಿರಾಮ ಉಲ್ಲಂಘನೆಯನ್ನು ನಿರಾಕರಿಸಿತು. ನೆರೆಯ ದೇಶದಿಂದ ಯಾವುದೇ ಅಪ್ರಚೋದಿತ ಗುಂಡಿನ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಸೇನೆಯು ಹೇಳಿಕೆಯಲ್ಲಿ, ಪೂಂಚ್‌ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘನೆಯ ಕುರಿತು ಕೆಲವು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವರದಿಗಳು ಬಂದಿವೆ. ನಿಯಂತ್ರಣ ರೇಖೆಯಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದಯವಿಟ್ಟು ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ತಪ್ಪಿಸಿ ಎಂದು ಮನವಿ ಮಾಡಿದೆ.

ವಾಯುಪಡೆಯ ಮಾಜಿ ಸೈನಿಕರಿಗೆ ವಾಯುಪಡೆಯ ಮುಖ್ಯಸ್ಥರಾದ ಏರ್‌ ಚೀಫ್‌ ಮಾರ್ಷಲ್‌ ಎ.ಪಿ.ಸಿಂಗ್‌, ಭಯೋತ್ಪಾದನಾ ವಿರೋಧಿ ಉದ್ದೇಶಗಳು ಸಾಧಿಸಿದ ತಕ್ಷಣ ಆಪರೇಷನ್‌ ಸಿಂಧೂರ್‌ ಕೊನೆಗೊಂಡಿತು ಎಂದು ಹೇಳಿದರು.

ಸಂಘರ್ಷವನ್ನು ದೀರ್ಘಗೊಳಿಸುವುದರಿಂದ ಘರ್ಷಣೆ ವೆಚ್ಚವಾಗುತ್ತದೆ. ನಾವು ಯುದ್ಧವನ್ನು ಬಹಳ ಬೇಗನೆ ನಿಲ್ಲಿಸಿದೆವು. ಹೌದು, ಅವರು ನಿಸ್ಸಂದೇಹವಾಗಿ ಹಿಂದೆ ಸರಿದರು, ಆದರೆ ನಮ ಉದ್ದೇಶಗಳೇನು? ನಮ ಉದ್ದೇಶ ಭಯೋತ್ಪಾದನಾ ವಿರೋಧಿಯಾಗಿತ್ತು. ನಾವು ಅವರ ಮೇಲೆ ದಾಳಿ ಮಾಡಬೇಕಾಗಿತ್ತು. ನಾವು ಹಾಗೆ ಮಾಡಿದ್ದೆವು. ಹಾಗಾದರೆ ನಮ ಉದ್ದೇಶಗಳು ಈಡೇರಿದ್ದರೆ, ನಾವು ಸಂಘರ್ಷವನ್ನು ಏಕೆ ಕೊನೆಗೊಳಿಸಬಾರದು? ನಾವು ಏಕೆ ಮುಂದುವರಿಯಬೇಕು? ಏಕೆಂದರೆ ಯಾವುದೇ ಸಂಘರ್ಷವು ದುಬಾರಿ ಬೆಲೆಯನ್ನು ಹೊಂದಿರುತ್ತದೆ ಅದನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿವಾದಿತ ಜಾತಿಗಳನ್ನು ಕೈಬಿಟ್ಟು ಸಮೀಕ್ಷೆ, ಬಿಜೆಪಿಗರ ಹೋರಾಟಕ್ಕೆ ಸಿಕ್ಕ ಜಯ

ಬೆಂಗಳೂರು : ಕ್ರಿಶ್ಚಿಯನ್ ಪದ ಜೋಡಿತ ಹಿಂದು ಉಪ ಜಾತಿಗಳ ಪಟ್ಟಿಯನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ಕೈ ಬಿಡುವುದಕ್ಕೆ ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದ್ದು, ಬಿಜೆಪಿ ಓಬಿಸಿ ನಾಯಕರ ಹೋರಾಟಕ್ಕೆ ಜಯ ದೊರೆತಂತಾಗಿದೆ.

46 ಇಂತ ಹೊಸ ಜಾತಿಯನ್ನು ಆಯೋಗ ಪಟ್ಟಿ ಮಾಡಿತ್ತು. ಇದು ಸಾಮಾಜಿಕ ಹಾಗೂ ಮೀಸಲಾತಿ ವ್ಯವಸ್ಥೆಯಲ್ಲಿ ಭಾರಿ ಮಟ್ಟದ ಏರುಪೇರು ಹಾಗೂ ವಿಪ್ಲವಕ್ಕೆ ಕಾರಣವಾಗಬಹುದೆಂದು ಬಿಜೆಪಿ ಗುರುತಿಸಿತ್ತು. ಸಾಮಾನ್ಯವಾಗಿ ಇಂಥ ವಿಚಾರಗಳಲ್ಲಿ ಒಂದು‌ ನರೇಟಿವ್ ಸೃಷ್ಟಿ ಮಾಡುವಲ್ಲಿ ವಿಫಲವಾಗುತ್ತಲೇ ಇದ್ದ ಬಿಜೆಪಿ ಈ ಬಾರಿ ಮಾತ್ರ ಜಾಗೃತಗೊಂಡಿತು.

ಸಾಮಾಜಿಕ ಹೋರಾಟಗಾರ ವಾದಿರಾಜ್ ಸಾಮರಸ್ಯ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ಸಂಸದ ಪಿ.ಸಿ.ಮೋಹನ್ ಮುಂಚೂಣಿಯಲ್ಲಿ ನಿಂತು ಹೋರಾಟಕ್ಕೆ ಅಣಿಯಾಗಿದ್ದರಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹಿಂದು ಜಾತಿ ಉಪನಾಮ ಬಳಕೆಯ ವಿರುದ್ಧ ಒಂದು ಜಾಗೃತಿ ಮೂಡಿತು. ಸುನೀಲ್ ಕುಮಾರ್ ಹಾಗೂ ಪಿ.ಸಿ.ಮೋಹನ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಭೇಟಿ ನೀಡಿ ಈ ಬಗ್ಗೆ ಮೊದಲು ಮನವಿ ಸಲ್ಲಿಸಲಾಯಿತು.

ಆ ಬಳಿಕ ಕ್ರಿಶ್ಚಿಯನ್ನರನ್ನು ಹಿಂದು ಜಾತಿಗಳೊಳಗೆ ತುರುಕುವುದನ್ನು ಖಂಡಿಸಿ ಸಾಮಾಜಿಕ ಜಾಗೃತಿ ವೇದಿಕೆ ಅಡಿಯಲ್ಲಿ ವಾದಿರಾಜ್ ಹಾಗೂ ಸುನೀಲ್ ಕುಮಾರ್ ಸಂಘಟಿಸಿದ ದುಂಡು ಮೇಜಿನ ಸಭೆಗಳು ಇತರೆ ಜಾತಿಯವರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಿತು. ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡಿ ಕ್ರಿಶ್ಚಿಯನ್ ಧರ್ಮ ಜೋಡಿತ ಹಿಂದು ಜಾತಿಗಳ ಪ್ರತ್ಯೇಕ ಸೃಷ್ಟಿಯಿಂದ ಆಗುವ ಅನಾಹುತದ ಬಗ್ಗೆ ಮನವರಿಕೆ ಮಾಡಲಾಯಿತು.

ಇದು ಸಮಾಜದ ಎಲ್ಲ ವರ್ಗದಲ್ಲೂ ಎಚ್ಚರಿಕೆಯ ಗಂಟೆ ಮೊಳಗಿಸುವ ಜತೆಗೆ ಸಮೀಕ್ಷೆ ಸಂದರ್ಭದಲ್ಲಿ ಎಲ್ಲರೂ ಧರ್ಮದ ಕಾಲಮ್ಮಿನಲ್ಲಿ ಹಿಂದು ಎಂದೇ ನಮೂದಿಸಬೇಕೆಂದು ಪಕ್ಷವಾಗಿ ಬಿಜೆಪಿ ಅಧಿಕೃತ ನಿರ್ಣಯ ತೆಗೆದುಕೊಳ್ಳುವುದಕ್ಕೆ ಕಾರಣವಾಗಿದೆ. ಒಕ್ಕಲಿಗ, ಲಿಂಗಾಯತ ಸೇರಿದಂತೆ ಪ್ರಬಲ ಸಮುದಾಯಗಳು ಕೂಡಾ ಇದಕ್ಕೆ ಕೈ‌ಜೋಡಿಸಿವೆ. ಸಾಮಾನ್ಯವಾಗಿ ಹಿಂದುತ್ವದ ವಿಚಾರದಲ್ಲಿ ಮಾತ್ರ ನರೇಟಿವ್ ಕಟ್ಟುತ್ತಿದ್ದ ಬಿಜೆಪಿ ಈ ಬಾರಿ ಸಾಮಾಜಿಕ – ಶೈಕ್ಷಣಿಕ ವಿಚಾರದಲ್ಲೂ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದು ಶ್ಲಾಘನೀಯ.

ಹಿಂದೂ -ಕ್ರಿಶ್ಚಿಯನ್‌ ಪದ ತೆಗೆಯಲು ಬಿಜೆಪಿ ಆಗ್ರಹ
ರಾಜ್ಯ ಸರ್ಕಾರ ನಾಳೆಯಿಂದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ(ಜಾತಿ ಗಣತಿ) ಸಮೀಕ್ಷೆಯಲ್ಲಿ ಹಿಂದು-ಕ್ರಿಶ್ಚಿಯನ್‌ ಕಾಲಂ ಅನ್ನು ತಕ್ಷಣವೇ ತೆಗೆದು ಹಾಕ ಬೇಕೆಂದು ಬಿಜೆಪಿ ಒತ್ತಾಯಿಸಿದೆ. ಉಪಜಾತಿಗಳ ಕಾಲಂನಲ್ಲಿ ಹಿಂದು-ಕ್ರಿಶ್ಚಿಯನ್‌ ಪದ ಸೇರಿಸಿರುವುದು ಮತಾಂತರಕ್ಕೆ ಪರೋಕ್ಷವಾಗಿ ಸರ್ಕಾರವೇ ಕುಮಕು ನೀಡಿದಂತಿದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗವು ಈ ಪದವನ್ನು ತೆಗೆದು ಹಾಕಲು ಸರ್ಕಾರ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಎಚ್ಚರಿಕೆ ಕೊಟ್ಟಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ ಕಾಂಗ್ರೆಸ್‌‍ ಸರ್ಕಾರ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಜಾತಿ ಸಮೀಕ್ಷೆ ಹೆಸರಲ್ಲಿ ಹಿಂದೂ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದೆ. ಜಾತಿ ಸಮೀಕ್ಷೆ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.ಪಕ್ಷಾತೀತವಾಗಿ ಹೊಸ ಜಾತಿಗಳ ಪಟ್ಟಿಗೆ ವಿರೋಧಿಸಲಾಗುತ್ತಿದೆ. ಕ್ರಿಶ್ಚಿಯನ್‌ ಜತೆ 48 ಜಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಸೃಷ್ಟಿಸಲಾಗಿದೆ. ಇನ್ನೂ ಅಧಿಕೃತವಾಗಿ ಈ 48 ಜಾತಿಗಳ ಪಟ್ಟಿ ಹಿಂದಕ್ಕೆ ಪಡೆಯುವ ಘೋಷಣೆ ಮಾಡಿಲ್ಲ.

ಹಿಂದೂಗಳ ಮೀಸಲಾತಿ ಕಸಿದು ಧರ್ಮಾಂತರವಾದವರಿಗೆ ಕೊಡುವ ದುರುದ್ದೇಶದಿಂದ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಜತೆಗೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಕುಮಕ್ಕು, ಹಿಂದೂ ಧರ್ಮ ಒಡೆಯುವ ಪಿತೂರಿ ಇದು ಎಂದು ಆರೋಪಿಸಿದರು.ಈ ಕೂಡಲೇ 48 ಅನಧಿಕೃತ ಜಾತಿಗಳ ಪಟ್ಟಿಯನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಈ ಹೊಸ ಜಾತಿಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಇಷ್ಟೆಲ್ಲ ವಿರೋಧ ಮಾಡುತ್ತಿದ್ದರೂ ಸರ್ಕಾರ ಭಂಡತನ ತೋರುತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರಕ್ಕೆ ಜಾತಿ ಜನಗಣತಿ ಮಾಡಲು ಅವಕಾಶ ಇಲ್ಲ. ಆದರೂ ಮಾಡಲು ಹೊರಟಿದ್ದಾರೆ. ಯಾವುದೇ ಸಿದ್ಧತೆ ಇಲ್ಲದೇ ಯಾರ ಸಲಹೆಯೂ ಪಡೆಯದೇ ತರಾತುರಿಯಲ್ಲಿ ಸಮೀಕ್ಷೆಗೆ ಮುಂದಾಗಿದ್ದಾರೆ. ಇದು ಬೇಜವಾಬ್ದಾರಿತನದ ನಡೆ, ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿಗೂ ತರಬೇತಿ ಕೊಟ್ಟಿಲ್ಲ ಎಂದು ಆರೋಪಿಸಿದರು.ಸಮೀಕ್ಷೆ ಮಾಡಲು ಯಾರ ವಿರೋಧವೂ ಇಲ್ಲ. ಸಮೀಕ್ಷೆ ಬಗ್ಗೆ ಬಿಜೆಪಿಯ ನಿಲುವೂ, ಆದಿಚುಂಚನಗಿರಿ ಮಠದ ನಿಲುವೂ ಸ್ಪಷ್ಟವಾಗಿದೆ. ಸಮೀಕ್ಷೆ ಗೊಂದಲಗಳಿಲ್ಲದೇ ವೈಜ್ಞಾನಿಕವಾಗಿ ಜಿಯೋ ಟ್ಯಾಗಿಂಗ್‌ ಮಾಡಿ ಸಮೀಕ್ಷೆ ಮಾಡಬೇಕು ಎಂಬುದು ನಮ ಒತ್ತಾಯ ಎಂದರು.
ತೆಲಂಗಾಣ ಮಾದರಿ ಎಂದು ಹೇಳುತ್ತಿದ್ದಾರ. ಅಲ್ಲಿ ಸಮೀಕ್ಷೆಗೆ ಮೂರು ತಿಂಗಳು ತಗೊಂಡರು. ಆದರೆ ನಮ ರಾಜ್ಯದ ಮಾದರಿ ಬೇರೆ ಇದೆ. ಇವರು ಮತಾಂತರಕ್ಕೆ ಪ್ರೋತ್ಸಾಹ ಕೊಟ್ಟು ತರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದ ಸಮೀಕ್ಷೆಗೆ ಸಂವಿಧಾನದ ಮಾನ್ಯತೆ ಇಲ್ಲ. ಸಮೀಕ್ಷೆಯ ಕಾಲಂನಲ್ಲಿ ಗುಪ್ತರೋಗದ ಬಗ್ಗೆಯೂ ಮಾಹಿತಿ ಕೇಳುವ ಪ್ರಶ್ನೆ ಇದೆ. ಇವರು ಎಡಬಿಡಂಗಿಯಾಗಿ ಸಮೀಕ್ಷೆ ಮಾಡುತ್ತಿದ್ದಾರೆ. ಗುಪ್ತ ರೋಗದ ಬಗ್ಗೆ ಯಾಕೆ ಮಾಹಿತಿ ಕೇಳುತ್ತಾರೆ. ಈ ಬಗ್ಗೆ ಮಾಹಿತಿ ಕೇಳುತ್ತಾರೆ ಎಂದರೆ ಅಲ್ಲಿಗೆ ಸಮೀಕ್ಷೆ ಬಿದ್ದುಹೋಯಿತು ಎಂದೇ ಅರ್ಥ. ಗುಪ್ತರೋಗದ ಬಗ್ಗೆ ಕೇಳುವ ವಿಚಾರ ಕಾನೂನಾತಕವಲ್ಲ ಎಂದು ತಿಳಿಸಿದರು.
ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ ಸರಕಾರ 47 ಕ್ರಿಶ್ಚಿಯನ್‌ ಜೋಡಿತ ಜಾತಿಗಳ ಪಟ್ಟಿ ತೆಗೆಯದೇ 33 ಹೊಸ ಜಾತಿಗಳನ್ನಷ್ಟೇ ಮಾತ್ರ ತೆಗೆದಿದೆ ಎಂಬ ಮಾಹಿತಿ ಇದೆ. 47 ಹೊಸ ಜಾತಿಗಳ ಹೆಸರು ತೆಗೆದಿರುವ ಬಗ್ಗೆ ಸರ್ಕಾರ ಪ್ರಕಟಣೆ, ಜಾಹೀರಾತು ಹೊರಡಿಸಲಿ ಎಂದರು.

33 ರದ್ದು ಮಾಡಿ 13 ಹೊಸ ಜಾತಿಗಳ ಹೆಸರು ಉಳಿಸಿದ್ದೇಕೆ? ಮಾದಾರ, ಕುರುಬ, ಬ್ರಾಹಣ, ಮಡಿವಾಳ, ಬಂಜಾರ, ನೇಕಾರ, ಒಕ್ಕಲಿಗ, ಲಿಂಗಾಯತ ಕ್ರಿಸ್ಚಿಯನ್‌ ಹೆಸರುಗಳನ್ನು ಉಳಿಸಿದ್ದಾರೆ ಎಂಬ ಸುದ್ದಿ ಇದೆ. ಈ ಹೊಸ ಜಾತಿಗಳ ಹೆಸರು ಒತ್ತಾಯಪೂರ್ವಕವಾಗಿ ಯಾಕೆ ಉಳಿಸಿದ್ದೀರಿ? ಎಂದು ಪ್ರಶ್ನಿಸಿದರು.ಇದು ದುರುದ್ದೇಶಪೂರ್ವಕವಾಗಿ ಮಾಡುತ್ತಿರುವ ಸಮೀಕ್ಷೆ ಕ್ರಿಶ್ಚಿಯನ್‌ ಜೋಡಿತ ಎಸ್ಸಿ ಸಮುದಾಯಗಳನ್ನು ಯಾಕೆ ಉಳಿಸಿದ್ದೀರಿ? ಎಸ್ಸಿ ಸಮುದಾಯ ಕ್ರಿಶ್ಚಿಯನ್‌ಗೆ ಮತಾಂತರವಾಗಲಿ ಎಂಬ ಉದ್ದೇಶವಿದೆಯೇ? ಎಂದು ಪ್ರಶ್ನೆ ಮಾಡಿದರು.

ಎಲ್ಲ ಹೊಸ ಜಾತಿಗಳ ಪಟ್ಟಿಯಿಂದ ತೆಗೆಯಬೇಕು. ಇಲ್ಲದಿದ್ದರೆ ನಾವು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಸರ್ವೆ ಮಾಡುವವರಿಗೆ ಇನ್ನು ತರಬೇತಿ ನೀಡಿಲ್ಲ. ನಾಗಮೋಹನ ದಾಸ್‌‍ ಸರ್ವೆ ಮಾಡಿ ಇನ್ನೂ ಎರಡು ತಿಂಗಳು ಆಗಿಲ್ಲ. ಈಗ ಮತ್ತೆ ಎಸ್ಸಿ, ಎಸ್ಟಿ ಅವರ ಮನೆಗೆ ಸರ್ವೆ ಹೋದರೆ ಅವರು ಏನು ಅಂದುಕೊಳ್ಳುತ್ತಾರೆ? ಎಂದು ತರಾಟೆಗೆ ತೆಗೆದುಕೊಂಡರು.ಮೂರು ತಿಂಗಳ ಅಂತರದಲ್ಲಿ ಯಾಕೆ ಮತ್ತೆ ಸರ್ವೆ. ಅಷ್ಟು ಆತುರದ ಸರ್ವೆ ಯಾಕೆ? ಆಯೋಗದ ಬುಕ್‌ಲೆಟ್‌ನಲ್ಲಿ ಅನೇಕ ತಪ್ಪುಗಳಿವೆ. ಎರಡು ಸಲ ಬುಕ್‌ಲೆಟ್‌ ಮುದ್ರಣ ಮಾಡಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ ಸಿಎಂ ಕಡೆಯಿಂದ ಒತ್ತಡ ಇದೆ ಎನ್ನುತ್ತಾರೆ. ಸಿಎಂಗೆ ಏನೋ ಒಂದು ಹಿಡನ್‌ ಅಜೆಂಡಾ ಇದೆ ಎಂದು ವ್ಯಂಗ್ಯವಾಡಿದರು.

ವಿವಾದಿತ 33 ಜಾತಿಗಳನ್ನು ನಿಷ್ಕ್ರಿಯಗೊಳಿಸಿ ನಾಳೆಯಿಂದ ರಾಜ್ಯದಲ್ಲಿ ಜಾತಿ ಸಮೀಕ್ಷೆ

ಬೆಂಗಳೂರು,ಸೆ.21-ರಾಜ್ಯದ ಎಲ್ಲಾ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಸಕಲ ಸಿದ್ದತೆ ಮಾಡಿಕೊಳ್ಳ ಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಜಾತಿ ಗಣತಿ ಅಥವಾ ಜಾತಿ ಸಮೀಕ್ಷೆಯಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ರಾಜ್ಯದ ಎರಡು ಕೋಟಿ ಮನೆಗಳ ಜಿಯೋಟ್ಯಾಗಿಂಗ್‌ ಹಾಗೂ ಗಣತಿ ಬ್ಲಾಕ್‌ನ ನಕ್ಷೆ ಕಾರ್ಯ ಪೂರ್ಣಗೊಂಡಿದೆ. ಬ್ಲಾಕ್‌ ನಕ್ಷೆಯಲ್ಲಿ ಮನೆಗಳನ್ನು ಗುರುತಿಸುವ ಜೊತೆಗೆ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಲಾಗಿದ್ದು, ಗಣತಿದಾರರು ಸಮೀಕ್ಷೆಗಾಗಿ ಮನೆ ಮನೆಗಳಿಗೆ ತಲುಪಲು ಅನುಕೂಲವಾಗಲಿದೆ. ಒಬ್ಬ ಸಮೀಕ್ಷಕರಿಗೆ 140ರಿಂದ 150 ಮನೆಗಳ ಬ್ಲಾಕ್‌ಗಳನ್ನು ಹಂಚಿಕೆ ಮಾಡಿ ಸಮೀಕ್ಷೆ ಕಾರ್ಯವನ್ನು ವಹಿಸಲಾಗಿದೆ. ಒಟ್ಟು 1.61 ಲಕ್ಷ ಬ್ಲಾಕ್‌ಗಳನ್ನು ಮಾಡಲಾಗಿದೆ ಎಂದರು.

ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದಾರೆ. ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ಮಾಡುತ್ತಾರೆ ಎಂದರು.
ಒಬ್ಬ ಸಮೀಕ್ಷಕರು ದಿನವೊಂದಕ್ಕೆ 7ರಿಂದ 8 ಮನೆ ಸಮೀಕ್ಷೆ ಮಾಡಿದರೂ 2 ಕೋಟಿ ಕುಟುಂಬಗಳನ್ನು 16 ದಿನಗಳಲ್ಲಿ ಮೊಬೈಲ್‌ ಆ್ಯಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶವುಳ್ಳ ಮೊಬೈಲ್‌ ಆ್ಯಪ್‌ನಲ್ಲಿ ಸಂಗ್ರಹಿಸಲಾಗುತ್ತದೆ ಎಂದರು.

ಸಮೀಕ್ಷಾದಾರರಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳಿದ್ದು, ಅದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಗಾಗುವುದನ್ನು ತಪ್ಪಿಸಲು 6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಆಧಾರ ಸಂಖ್ಯೆಯನ್ನು ಒದಗಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಪಡಿತರಚೀಟಿ ನಮೂದಿಸಿದರೆ ಅದರಲ್ಲಿರುವ ಮಾಹಿತಿಯೂ ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ ಎಂದು ವಿವರಿಸಿದರು.

ಮನೆಯಿಂದ ಹೊರಗಿರುವವರ ಮಾಹಿತಿಯನ್ನು ಪಡೆಯಲು ಆಧಾರ್‌ ಪರಿಶೀಲನೆ ಆನ್‌ಲೈನ್‌ ಸಮೀಕ್ಷೆ ನಡೆಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅನಗತ್ಯ ವಿವಾದಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಜಾತಿಗಳನ್ನು ಸೃಷ್ಟಿಸುವ ಕೆಲಸ ಆಯೋಗ ಮಾಡಿಲ್ಲ. ಅಸ್ತಿತ್ವದಲ್ಲಿವೆ ಎಂದು ಹೇಳಲಾದ ಜಾತಿಗಳನ್ನು ಸಮೀಕ್ಷಾದಾರರ ಅನುಕೂಲಕ್ಕಾಗಿ ಮೊಬೈಲ್‌ ಆ್ಯಪ್‌ನಲ್ಲಿ ಡ್ರಾಪ್‌ಡೌನ್‌ನಲ್ಲಿ ಪಟ್ಟಿ ಮಾಡಿ ಒದಗಿಸಲಾಗಿದೆ. ಇದು ಸಮೀಕ್ಷಾದಾರರ ಆಂತರಿಕ ಬಳಕೆಗೆ ಮಾತ್ರ. ಇದು ಸಾರ್ವಜನಿಕ ದಾಖಲೆಯಲ್ಲ. ಇದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಯಲ್ಲಿ ಸಂಗ್ರಹಿಸಲಾದ ಮಾಹಿತಿಗಳನ್ನು ಆಯೋಗವು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ ಬಳಿಕ ವಿವಿಧ ಜಾತಿ ಜನಾಂಗಗಳಿಗೆ ಒದಗಿಸಬಹುದಾದ ಅನುಕೂಲತೆಗಳ ಬಗ್ಗೆ ಶಿಫಾರಸಿನೊಂದಿಗೆ ಸಮೀಕ್ಷೆ ವರದಿ ಮಾಡಲಿದೆ ಎಂದರು.

ಸಮೀಕ್ಷೆ ಸಮಯದಲ್ಲಿ ಕೆವೈಸಿ ನಡೆಸುವಲ್ಲಿ ಎದುರಾಗುತ್ತಿದ್ದ ಅಡಚಣೆಗಳನ್ನು ಪರಿಹರಿಸಲು ಫೇಸ್‌‍ ರೆಕಗ್ನೇಷನ್‌ ಕಲ್ಪಿಸಲಾಗಿದೆ. ತಪ್ಪು ಗೊಂದಲಕ್ಕೆ ಒಳಗಾಗಿದ್ದ 33 ಜಾತಿಗಳ ಹೆಸರನ್ನು ಪಟ್ಟಿಯಿಂದ ನಿಷ್ಕ್ರಿಯಗೊಳಿಸಲಾಗಿದೆ. ಆದರೂ ಯಾವುದೇ ಜಾತಿಯ ಹೆಸರನ್ನು ಸ್ವಯಂ ಇಚ್ಛೆಯಿಂದ ನಮೂದಿಸಲು ಅವಕಾಶವಿದೆ. 148 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟು 1561(ಎಸ್ಸಿ-ಎಸ್ಟಿ ಹೊರತುಪಡಿಸಿ) ಜಾತಿಗಳಿವೆ.

ನಾವು ಯಾವುದೇ ಜಾತಿಯನ್ನು ಸೃಷ್ಟಿ ಮಾಡಿಲ್ಲ. ಮಾಹಿತಿಗಾಗಿ ಕುಟುಂಬದ ಧರ್ಮ, ಜಾತಿ, ಉಪಜಾತಿಗಳ ಮಾಹಿತಿ ಪಡೆಯಲಾಗುತ್ತಿದೆ. ಅಸ್ತಿತ್ವದಲ್ಲಿರುವ ಜಾತಿ, ಧರ್ಮಗಳಲ್ಲದೆ ತರ ಅಂಶಗಳನ್ನು ನಮೂದಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ದಯಾನಂದ್‌ ಉಪಸ್ಥಿತರಿದ್ದರು.

ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದುವೆಯಾದ ಯೂಟ್ಯೂಬರ್‌ ಖ್ವಾಜಾ ಶಿರಹಟ್ಟಿ ವಿರುದ್ಧ ಕೇಸ್

ಹುಬ್ಬಳ್ಳಿ.ಸೆ.21-ಹಿಂದೂ ಯುವತಿಯನ್ನು ನಕಲಿ ದಾಖಲೆ ತೋರಿಸಿ ಮದುವೆಯಾದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳಪ್ಪ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೀಗ ಯುವತಿಯ ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳಿಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ರೀಲ್ಸ್ ಮಾಡುವ ಆರೋಪಿ ಮದುವೆ ಸಮಾರಂಭದ ವೇದಿಕೆ ಸಿದ್ದಪಡಿಸಿ ಕಳೆದ ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.

ಅದು ರೀಲ್ಸ್ ಎಂದಿದ್ದ ಮುಕುಳಿಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಧಮ್ಮಿ ಹಾಕುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.

ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ರಿಜಿಸ್ಟರ್ ಮದುವೆಯಾಗಿದ್ದು ಇದು ಲವ್ ಜಿಹಾದ್ ಎಂದು ಹಿಂದು ಸಂಘಟನೆಗಳು ಆರೋಪಿಸಿದೆ.