ಬೆಂಗಳೂರು, ಸೆ.20- ಕಂಡ ಕಂಡ ಖಾಲಿ ಜಾಗಗಳಿಗೆ ಬೇಲಿ ಹಾಕುತ್ತಿದ್ದ ಬಿಬಿಎಂಪಿ ಮಾಜಿ ಸದಸ್ಯ ಹನುಮಂತೇಗೌಡ ಒತ್ತುವರಿ ಮಾಡಿಕೊಂಡಿದ್ದ ಕೋಟಿ ಕೋಟಿ ಬೆಲೆಬಾಳುವ ಬಿಡಿಎಗೆ ಸೇರಿದ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಿಡಿಎ ಎಸ್‌ಪಿ ಲಕ್ಷ್ಮೀಗಣೇಶ್ ನೇತೃತ್ವದಲ್ಲಿ ಇಂದು ದಿಢೀರ್ ದಾಳಿ ನಡೆಸಿದ ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಅಂದಾಜು 150 ಕೋಟಿ ರೂ. ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಬಳಿಯ ವಳಗೆರೆಹಳ್ಳಿ ಸರ್ವೆ ನಂಬರ್‌ನಲ್ಲಿದ ಬಿಡಿಎಗೆ ಸೇರಿದ್ದ 1.22 ಎಕರೆ ಭೂಮಿಗೆ ಹನುಮಂತೆಗೌಡ ಬೇಲಿ ಹಾಕಿದ್ದರು. ಮಾತ್ರವಲ್ಲ ಆ ಜಮೀನನ್ನು ಪತ್ನಿ ಲತಾ ಹೆಸರಿಗೆ ಖಾತೆ ಮಾಡಿಸಿದ್ದರು.
ಬೇಲಿ ಹಾಕಿರುವ ಪ್ರದೇಶ ಬಿಡಿಎಗೆ ಸೇರಿದ್ದು ಜಾಗ ತೆರವು ಮಾಡುವಂತೆ ಬಿಡಿಎ ಅಧಿಕಾರಿಗಳು ಹಲವಾರು ಬಾರಿ ನೋಟೀಸ್ ನೀಡಿದ್ದರೂ ಹನುಮಂತೆಗೌಡ ಕ್ಯಾರೇ ಎಂದಿರಲಿಲ್ಲ. ಹೀಗಾಗಿ ಇಂದು ಮುಂಜಾನೆ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹನುಮಂತೇಗೌಡ ಅವರು ಈ ಹಿಂದೆ ಹೇರೋಹಳ್ಳಿ ವಾರ್ಡ್‌ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ಬೆಂಗಳೂರು,ಸೆ.20- ಮನೆಗಳಲ್ಲಿ ಬೆಚ್ಚಗೆ ಹೊದ್ದು ಮಲಗಿದ್ದ ಹಾಗೂ ಬಾರ್‌ಗಳಲ್ಲಿ ನಶೆ ಏರಿಸಿಕೊಳ್ಳುತ್ತಿದ್ದ ರೌಡಿಗಳಿಗೆ ನಗರ ಪೊಲೀಸರು ರಾತ್ರಿ ಚಳಿ ಬಿಡಿಸಿದ್ದಾರೆ. ನಗರದ ಎಲ್ಲಾ 11 ವಿಭಾಗಗಳ ಹಾಗೂ ಸಿಸಿಬಿ ಪೊಲೀಸರು ಏಕಕಾಲದಲ್ಲಿ ರೌಡಿಗಳ ಮನೆಗಳು ಹಾಗೂ ವೈನ್ಸ್ ಸ್ಟೋರ್, ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ರಾತ್ರಿ 11 ಗಂಟೆಯಿಂದ ನಗರದಾದ್ಯಂತ ರೌಡಿಗಳ ಮನೆಗಳ ಮೇಲೆ ದಿಢೀರ್ ದಾಳಿ ನಡೆಸಿ ಇಂದು ಬೆಳಗಿನ ಜಾವ 3 ಗಂಟೆಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಅಪರಾಧವನ್ನು ನಿಯಂತ್ರಿಸುವುದು ಮತ್ತು ಅಪರಾಧಿ ಅಂಶಗಳ ಜಾಲವನ್ನು ಧ್ವಂಸ ಮಾಡುವ ದೃಢ ಮತ್ತು ಮುಂಚೂಣಿ ಕ್ರಮವಾಗಿ ನಗರ ಪೊಲೀಸರು ಈ ದಾಳಿ ನಡೆಸಿದ್ದಾರೆ. ತಲೆ ಮರೆಸಿಕೊಂಡಿದ್ದ ರೌಡಿಗಳು,ವಾರಂಟುದಾರರು ಮತ್ತು ಪ್ರ್ಲೊಕೇಮ್ ಮಾಡಿದ ಅಪರಾಧಿಗಳನ್ನು ಪತ್ತೆಹಚ್ಚುವುದು, ಜವಬ್ದಾರಿತನವನ್ನು ಹೆಚ್ಚಿಸಿ ತಡೆಗಟ್ಟುವಿಕೆಗೆ, ಸಮುದಾಯದ ಭದ್ರತೆ ಮತ್ತು ಕಲ್ಯಾಣಕ್ಕೆ ಈ ದಾಳಿ ಸಹಕಾರಿಯಾಗಿದೆ.
ರಾತ್ರಿಯಿಂದ ಬೆಳಗಿನ ಜಾವದವರೆಗೂ ಒಟ್ಟು 1478 ರೌಡಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಈ ಪೈಕಿ 165 ಹಳೆ ಆರೋಪಿಗಳ ಮನೆಗಳು, ತಲೆಮರೆಸಿಕೊಂಡಿದ್ದ 3 ರೌಡಿಗಳು, ವಾರೆಂಟ್ ಜಾರಿಯಾದರೂ ಪತ್ತೆಯಾಗದ 7 ರೌಡಿಗಳು, ಪ್ರ್ಲೊಕೇಮ್ ಮಾಡಿದ ಮೂವರು ರೌಡಿಗಳು ಪತ್ತೆಯಾಗಿದ್ದಾರೆ.
ದಾಳಿಯ ಸಂದರ್ಭದಲ್ಲಿ ಒಟ್ಟು 124 ಪ್ರಕರಣಗಳು ಹಾಗೂ ಮಾದಕ ವಸ್ತು ಬಳಕೆದಾರರ ವಿರದ್ಧ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರ ಮಾರ್ಗದರ್ಶನದಲ್ಲಿ, ಮೂವರು ಹೆಚ್ಚುವರಿ ಪೊಲೀಸ್ ಆಯುಕ್ತರು, 13 ಮಂದಿ ಡಿಸಿಪಿಗಳು, ನಗರದ ಎಲ್ಲಾ ವಿಭಾಗಗಳ ಎಸಿಪಿಗಳು, ಇನ್‌್ಸಪೆಕ್ಟರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು.
ಈಶಾನ್ಯ ವಿಭಾಗದಲ್ಲಿ ನಗರ ಪೊಲೀಸರು 169 ರೌಡಿಗಳ ಮನೆಗಳ ಮೇಲೆ ದಾಳಿ ನಡೆದರೆ, ಉತ್ತರ -179, ಪೂರ್ವ-247, ಪಶ್ಚಿಮ-222, ಎಲೆಕ್ಟ್ರಾನಿಕ್ ಸಿಟಿ -100, ಆಗ್ನೇಯ-120,ಕೇಂದ್ರ ವಿಭಾಗ-20, ವಾಯುವ್ಯ-102, ವೈಟ್‌ಫೀಲ್‌್ಡ-140 ರೌಡಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ.
ಸಿಸಿಬಿ ಪೊಲೀಸರು 179 ರೌಡಿಗಳ ಮನೆಗಳ ಮೇಲೆ ಹಾಗೂ ಬಾರ್‌ಗಳ ಮೇಲೆ ದಾಳಿ ನಡೆಸಿ ರೌಡಿಗಳಿಗೆ ಚಳಿಯಲ್ಲೂ ಬೆವರಿಳಿಸಿದ್ದಾರೆ.ನಿರ್ಜನ (ಅಪಾಯದ)ಪ್ರದೇಶಗಳಲ್ಲಿ ನಿರಂತರ ನಿಗಾ ಮತ್ತು ಗುಪ್ತಚರ ಆಧಾರಿತ ಕಾರ್ಯಾಚರಣೆಗಳು ಮುಂದುವರೆಯುತ್ತವೆ. ಹಾಗೂ ದಾಳಿ ಸಂದರ್ಭದಲ್ಲಿ ಪತ್ತೆಯಾದ ರೌಡಿಗಳ ಪರಿಶೀಲನೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಾರ್ವಜನಿಕರ ಭದ್ರತೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗೆ ನಗರ ಪೊಲೀಸ್ ಆಯುಕ್ತರು ತಮ ಬದ್ದತೆಯನ್ನು ಪುನರುಚ್ಚರಿಸಿದ್ದಾರೆ, ಜೊತೆಗೆ ಕಾನೂನು ಪ್ರಕ್ರಿಯೆಯನ್ನು ಪಾಲಿಸುವುದನ್ನು ಖಚಿತಪಡಿಸಿದ್ದಾರೆ.
ಚಂದ್ರಾಪುರ, ಸೆ. 20 (ಪಿಟಿಐ)- ಮಹಾರಾಷ್ಟ್ರದ ರಾಜೂರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳ ತ್ವರಿತ ಕ್ರಮದಿಂದಾಗಿ ದೊಡ್ಡ ಪ್ರಮಾಣದ ನಕಲಿ ಮತದಾರರ ನೋಂದಣಿ ತಪ್ಪಿದೆ, 2024 ರ ವಿಧಾನಸಭಾ ಚುನಾವಣೆಗೆ ಮುನ್ನ ಪರಿಷ್ಕರಣೆ ಪ್ರಕ್ರಿಯೆಯಲ್ಲಿ 6,861 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸ್ವಯಂಚಾಲಿತ ಸಾಫ್ಟ್ ವೇರ್ ಬಳಸಿ ಪೂರ್ವ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ರಾಜೂರ ಕ್ಷೇತ್ರದಲ್ಲಿ 6,850 ಮತದಾರರನ್ನು ಮೋಸದ ರೀತಿಯಲ್ಲಿ ಸೇರಿಸಲಾಗಿದೆ ಎಂದು ನೀಡಿದ್ದ ಹೇಳಿಕೆಗೆ ಆಯೋಗ ಸ್ಪಷ್ಟನೆ ನೀಡಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕಡಿಮೆ ಅವಧಿಯಲ್ಲಿ ಅಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ರವೀಂದ್ರ ಮಾನೆ ಹೇಳಿದ್ದಾರೆ.
ಅಕ್ಟೋಬರ್ 1 ರಿಂದ 17, 2024 ರವರೆಗೆ ಸಲ್ಲಿಸಲಾದ 7,592 ಅರ್ಜಿಗಳಲ್ಲಿ, ಅರ್ಜಿದಾರರು ನೀಡಿರುವ ವಿಳಾಸಗಳಲ್ಲಿ ವಾಸಿಸುತ್ತಿಲ್ಲ, ಅಸ್ತಿತ್ವದಲ್ಲಿಲ್ಲ, ಅಥವಾ ಅಪೂರ್ಣ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿದ್ದಾರೆ ಎಂದು ಕಂಡುಬಂದ ನಂತರ 6,861 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜೂರದ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಮತ್ತು ತಹಶೀಲ್ದಾರ್ ಅವರು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೂಲಕ ಪರಿಶೀಲನೆ ನಡೆಸಿದರು. ವಿಚಾರಣೆಯ ನಂತರ, ನಿರಾಕರಣೆಗೆ ವಿವರವಾದ ಪ್ರಸ್ತಾವನೆಯನ್ನು ಅಕ್ಟೋಬರ್ 17, 2024 ರಂದು ಜಿಲ್ಲಾ ಕಚೇರಿಗೆ ಸಲ್ಲಿಸಲಾಯಿತು ಎಂದು ಹೇಳಿಕೆ ತಿಳಿಸಿದೆ.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ನವೆಂಬರ್ 20, 2024 ರಂದು ನಡೆಸಲಾಯಿತು ಮತ್ತು ಮೂರು ದಿನಗಳ ನಂತರ ಮತಗಳನ್ನು ಎಣಿಕೆ ಮಾಡಲಾಯಿತು.
ರಾಜೂರದಲ್ಲಿ ಮತದಾರರ ಪಟ್ಟಿ ಅಕ್ರಮಗಳ ಆರೋಪಗಳನ್ನು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಹೊರಿಸಿದ ಹಿನ್ನೆಲೆಯಲ್ಲಿ ಮಾನೆ ಅವರ ಸ್ಪಷ್ಟೀಕರಣ ಬಂದಿದೆ.ವಿಷಯದ ಗಂಭೀರತೆಯನ್ನು ಪರಿಗಣಿಸಿ, ಜಿಲ್ಲಾ ಚುನಾವಣಾ ಅಧಿಕಾರಿ ಎಲ್ಲಾ ಅರ್ಜಿಗಳ ಆಳವಾದ ಪರಿಶೀಲನೆಗೆ ನಿರ್ದೇಶನ ನೀಡಿದರು. 1950 ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 2000 ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ನಿರ್ದೇಶನಗಳ ಆಧಾರದ ಮೇಲೆ, ಇಆರ್‌ಒ ಅರ್ಜಿಗಳನ್ನು ಔಪಚಾರಿಕವಾಗಿ ತಿರಸ್ಕರಿಸಿತು ಮತ್ತು ರಾಜೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 629/2024 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರಾಜೂರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಕಲಿ ಅರ್ಜಿದಾರರ ಹೆಸರುಗಳು ಸೇರ್ಪಡೆಯಾಗದಂತೆ ಸಕಾಲಿಕ ಜಾಗರೂಕತೆಯು ಖಚಿತಪಡಿಸಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದರು.ಕಳೆದ ವರ್ಷ ಬಿಜೆಪಿ ಅಭ್ಯರ್ಥಿ ದಿಯೋರಾವ್ ವಿಠೋಬ ಭೋಂಗ್ಲೆ ಅವರನ್ನು ಈ ಸ್ಥಾನದಿಂದ ಆಯ್ಕೆಯಾಗಿ ಘೋಷಿಸಲಾಯಿತು. ಅವರು 72,882 ಮತಗಳನ್ನು ಗಳಿಸಿದರು ಮತ್ತು 69,828 ಮತಗಳನ್ನು ಪಡೆದ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುಭಾಷ್ ರಾಮಚಂದ್ರರಾವ್ ಧೋಟೆ ಅವರನ್ನು 3,054 ಮತಗಳ ಅಂತರದಿಂದ ಸೋಲಿಸಿದರು.
ಬೆಂಗಳೂರು : ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದ ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರು ಜಾತಿಗಣತಿ ವಿಚಾರದಲ್ಲಿ ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದ ನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಇಂದು ನಡೆದ ಜಾತಿಗಣತಿ ಸಮಾಲೋಚನಾ ಸಭೆಯಲ್ಲಿ ಪಕ್ಷಬೇಧ ಮರೆತು ರಾಜಕೀಯ ಪಕ್ಷಗಳ ಮುಖಂಡರು ಒಗ್ಗೂಡಿದ್ದು ವಿಶೇಷವಾಗಿತ್ತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ನಾಯಕರುಗಳು ಒಂದೇ ವೇದಿಕೆಯಲ್ಲಿ ಒಗ್ಗೂಡಿದ್ದು ಕಂಡುಬಂದಿತು.
ರಾಜಕೀಯವಾಗಿ ಭಿನ್ನಾಭಿಪ್ರಾಯ, ಸಿದ್ಧಾಂತ ಏನೇ ಇದ್ದರೂ ಜನಾಂಗದ ವಿಚಾರದಲ್ಲಿ ಒಗ್ಗಟ್ಟಿನ ಸಂದೇಶವನ್ನು ಇಂದು ರವಾನಿಸಿದರು.ಪರಸ್ಪರ ರಾಜಕೀಯವಾಗಿ ಬದ್ಧ ದ್ವೇಷಿಗಳಂತೆ ಬಿಂಬಿಸಿಕೊಂಡಿದ್ದ ಕುಮಾರಸ್ವಾಮಿಯವರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಬಲಭಾಗದಲ್ಲಿ ಹಾಗೂ ಡಿ.ಕೆ.ಶಿವಕುಮಾರ್‌ಯವರ ಎಡಭಾಗದಲ್ಲಿ ವೇದಿಕೆ ಹಂಚಿಕೊಂಡಿದ್ದರು.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ಇಬ್ಬರೂ ನಾಯಕರು ಜೋಡೆತ್ತುಗಳಂತೆ ಜೊತೆಯಾಗಿದ್ದರು.ಆನಂತರ ರಾಜಕೀಯದಲ್ಲಾದ ಬದಲಾವಣೆಯಿಂದ ಪರಸ್ಪರ ಇಬ್ಬರೂ ನಾಯಕರು ದೂರವಾಗಿ ಆರೋಪ-ಪ್ರತ್ಯಾರೋಪವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
ಜಾತಿಗಣತಿ ಪ್ರಮುಖವಾಗಿರುವುದರಿಂದ ಜನಾಂಗಕ್ಕೆ ಅನ್ಯಾಯವಾಗಬಾರದು. ಜನಾಂಗ ಒಗ್ಗಟ್ಟಿನಿಂದ ಇರಬೇಕು. ಒಡಕು ಉಂಟಾಗಬಾರದು ಎಂಬ ಕಾರಣಕ್ಕೆ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಒಗ್ಗೂಡಿದ್ದರು. ಇವರಲ್ಲದೆ ಜನಾಂಗವನ್ನು ಪ್ರತಿನಿಧಿಸುವ ಸಂಸದರು, ಶಾಸಕರು, ಮಾಜಿ ಶಾಸಕರು, ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ಜನಾಂಗದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದು ಮತ್ತಷ್ಟು ಒಗ್ಗೂಡುವಿಕೆಗೆ ಇಂಬು ನೀಡುವಂತಾಗಿತ್ತು.
ಬೆಂಗಳೂರು,ಸೆ.20- ಸೋಮವಾರದಿಂದ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಆರಂಭವಾಗುವ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಒಕ್ಕಲಿಗ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳ ಮಹತ್ವದ ಸಮಾಲೋಚನಾ ಸಭೆ ನಡೆಸಲಾಯಿತು.
ಜಾತಿಗಣತಿ ವಿಚಾರದಲ್ಲಿ ಸಾಕಷ್ಟು ಸಂಘರ್ಷ, ವಿವಾದಗಳು ತಲೆದೋರಿರುವ ಬೆನ್ನಲ್ಲೇ ಒಕ್ಕಲಿಗರ ಸಮುದಾಯದ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು, ಸಂಘ ಸಂಸ್ಥೆಗಳು ಒಗ್ಗೂಡಿ ಸಮಾಲೋಚನೆ ನಡೆಸುವ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಲಾಯಿತು. ಜನಾಂಗದ ಹಿತ ಕಾಪಾಡಲು ಈ ಸಮೀಕ್ಷೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ವಿಜಯನಗರದ ಆದಿಚುಂಚನಗಿರಿ ಮಠದ ಸಮುದಾಯ ಭವನದಲ್ಲಿ ಇಂದು ನಡೆದ ಈ ಸಭೆಯಲ್ಲಿ ಪಟ್ಟನಾಯ್ಕನಹಳ್ಳಿಯ ಸ್ಫಟಿಕಪುರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಆದಿ ಚುಂಚನಗಿರಿ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಟಿ.ಬಿ.ಜಯಚಂದ್ರ, ಶರತ್ ಬಚ್ಚೇಗೌಡ, ಸತೀಶ್‌ರೆಡ್ಡಿ, ಜಿ.ಟಿ.ದೇವೇಗೌಡ, ಡಾ.ರಂಗನಾಥ್, ಸುರೇಶ್‌ಗೌಡ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ರವಿಕುಮಾರ್, ಗುಬ್ಬಿ ಶ್ರೀನಿವಾಸ್, ಎಚ್.ಸಿ.ಬಾಲಕೃಷ್ಣ, ರವಿ ಗಣಿಗ, ಉದಯ್, ಪುಟ್ಟಣ್ಣ, ಮಾಜಿ ಶಾಸಕರಾದ ರಾಮಚಂದ್ರಗೌಡ, ಡಿ.ಸಿ.ತಮಣ್ಣ, ಕೆ.ಜಿ.ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಸೇರಿದಂತೆ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜನಪ್ರತಿನಿಧಿಗಳು ಜಾತಿಗಣತಿ ಕುರಿತು ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಮಠಾಧೀಶರು ಜಾತಿಗಣತಿ ಸಂದರ್ಭದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಿದರು.
ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ಬರೆಸಿದರೆ ಸಣ್ಣಪುಟ್ಟ ಜಾತಿಗಳು, ಉಪಜಾತಿಗಳು, ಪಂಗಡಗಳು ಒಗ್ಗೂಡಲು ಸಹಕಾರಿಯಾಗುತ್ತದೆ. ಸಂಘಟಿತರಾದರೆ ಹಕ್ಕುಗಳ ರಕ್ಷಣೆ, ಹೋರಾಟ, ಪ್ರಾತಿನಿಧ್ಯಕ್ಕೆ ಅನುಕೂಲವಾಗಲಿದೆ. ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯ, ಸಿದ್ಧಾಂತ ಇದ್ದರೂ ಜನಾಂಗದ ವಿಚಾರದಲ್ಲಿ ಎಲ್ಲರೂ ಒಗ್ಗೂಡುವ ಅನಿವಾರ್ಯತೆ ಇದೆ. ಜನರ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಜನಾಂಗವನ್ನು ಜಾಗೃತಗೊಳಿಸಿ ಏನು ಮಾಡಬೇಕು, ಏನು ಮಾಡಬಾರದು ಎಂಬ ತಿಳಿವಳಿಕೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಅಂತಿಮವಾಗಿ ಆದಿಚುಂಚನಗಿರಿ ಮಠದ ಶ್ರೀಗಳು ನೀಡುವ ಸಲಹೆ ಸೂಚನೆಯನ್ನು ಪಾಲಿಸಲು ಬದ್ಧವಾಗಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಸಣ್ಣಪುಟ್ಟ ಜಾತಿಗಳನ್ನು ಬದಿಗಿರಿಸಿ ಒಕ್ಕಲಿಗ ಜಾತಿಯಲ್ಲೇ ನಮೂದಿಸಿದರೆ ಈಗ ಸರ್ಕಾರದಿಂದ ಸಿಗುತ್ತಿರುವ ಮೀಸಲಾತಿ, ವಿವಿಧ ಸೌಲಭ್ಯಗಳು ಕೈತಪ್ಪಬಹುದು. ಈಗಿರುವ ಜಾತಿ, ಉಪಜಾತಿಗಳನ್ನೇ ಮುಂದುವರೆಸಿದರೆ ಸಣ್ಣ ಸಣ್ಣ ಜಾತಿಗಳಾಗುವುದರಿಂದ ಸಂಘಟನಾತಕ ಹೋರಾಟಕ್ಕೆ ಹಿನ್ನಡೆಯಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಲಾಯಿತು. ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ಈಗಾಗಲೇ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಒಕ್ಕಲಿಗ ಜನಾಂಗದವರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿತ್ತು. ಸಮುದಾಯದವರು ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಂತೆ ಎಲ್ಲರೂ ವಾಸ್ತವ ಮಾಹಿತಿಗಳನ್ನು ನೀಡಬೇಕು ಎಂಬ ವಿಚಾರದಲ್ಲಿ ಸಮಾಲೋಚನೆ ನಡೆಸಲಾಯಿತು.
ಈ ಬಗ್ಗೆ ಜನಾಂಗದವರಲ್ಲಿ ಸೂಕ್ತ ತಿಳಿವಳಿಕೆ ನೀಡಿ ವಸ್ತುನಿಷ್ಠ ಮಾಹಿತಿಯನ್ನು ನೀಡುವಂತೆ ಕರೆ ನೀಡಲಾಯಿತು.ಈ ಸಮೀಕ್ಷೆಯಲ್ಲಿ ಸಂಗ್ರಹಿಸಲಾಗುವ ದತ್ತಾಂಶಗಳು ಸರ್ಕಾರದ ನೀತಿ ನಿರೂಪಣೆ, ಕಾರ್ಯಕ್ರಮ ಆಯೋಜನೆ, ಮೀಸಲಾತಿ ನಿರ್ಧಾರ ಮಾಡಲು ಪರಿಗಣಿತವಾಗುವ ಸಾಧ್ಯತೆ ಇರುವುದರಿಂದ ಜಾಗೃತರಾಗಿ ನೈಜ ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಲಾಯಿತು.
ಈ ಬಗ್ಗೆ ಜನಾಂಗದವರು, ಸಂಘ ಸಂಸ್ಥೆಗಳು ತಮ ತಮ ವ್ಯಾಪ್ತಿಯಲ್ಲಿ ಅರಿವು ಮೂಡಿಸಿ ಎಲ್ಲರೂ ಗಣತಿ ವ್ಯಾಪ್ತಿಗೆ ಒಳಪಡುವಂತೆ ಮಾಡಲು ನಿರ್ಧರಿಸಲಾಯಿತು.ಒಟ್ಟಾರೆ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸಲು ತೀರ್ಮಾನಿಸಲಾಗಿದ್ದು, ಉಪಜಾತಿ ಕಾಲಂನಲ್ಲಿ ಅವರವರ ಉಪಜಾತಿಯನ್ನು ಬರೆಸಿಕೊಳ್ಳಲು ಸಲಹೆ ನೀಡಲಾಗಿದೆ.ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸುವುದರಿಂದ ಸಮುದಾಯದಲ್ಲಿ ಒಗ್ಗಟ್ಟು ಮೂಡುತ್ತದೆ. ಅಲ್ಲದೆ, ಸಮುದಾಯದ ನಿರ್ದಿಷ್ಟ ಜನಸಂಖ್ಯೆಯೂ ತಿಳಿಯುತ್ತದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ನವದೆಹಲಿ,ಸೆ.20- ಕೇಂದ್ರ ಸರ್ಕಾರವು ಸರಕು ಸೇವಾ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆ ಮಾಡಿರುವ ಹಿನ್ನೆಲೆಯಲ್ಲಿ ಇದೇ 22 ರಿಂದ (ಸೋಮವಾರ) ಜಾರಿಗೆ ಬರಲಿದ್ದು, ಐಸ್ ಕ್ರೀಮ್‌ಗಳು ಮತ್ತು ಟಿವಿಗಳವರೆಗಿನ ಸಾಮಾನ್ಯ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ರೊಟ್ಟಿ/ಪರೋಠದಿಂದ ಹೇರ್ ಆಯಿಲ್ ವರೆಗೂ ಅಗ್ಗವಾಗಲಿವೆ.
ಸಾಮಾನ್ಯ ಜನರನ್ನು ಕೇಂದ್ರೀಕರಿಸಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ತೆರಿಗೆ ದರಗಳು ತೀವ್ರವಾಗಿ ಕಡಿಮೆಯಾಗಿವೆ.ಸುಮಾರು 400 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗಿದೆ. ಈಗ ಅವುಗಳ ಬೆಲೆ ಮಾರ್ಪಾಡಿಗಾಗಿ ಸರ್ಕಾರ ಸಮಗ್ರ ತಂತ್ರಗಳನ್ನು ರೂಪಿಸಿದೆ. ಹೊಸ ಜಿಎಸ್‌ಟಿ ರಚನೆ ಜಾರಿಗೆ ಬಂದ ನಂತರ ಪರೋಕ್ಷ ತೆರಿಗೆ ಅಧಿಕಾರಿಗಳು ಸರಕು ಮತ್ತು ಸೇವೆಗಳ ಪ್ರಸ್ತುತ ಬೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅವುಗಳನ್ನು ದರಗಳೊಂದಿಗೆ ಹೋಲಿಸುತ್ತಿದ್ದಾರೆ.
ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ತೆರಿಗೆ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಜನರು ತಮ ದಿನನಿತ್ಯದ ಜೀವನದಲ್ಲಿ ಬಳಸುವ ವಸ್ತುಗಳೆಲ್ಲ ಅಗ್ಗವಾಗಲಿವೆ. ಆಹಾರ ಪದಾರ್ಥಗಳಿಂದ ಹಿಡಿದು ಶಾಂಪೂಗಳ ವರೆಗೆ ಹಾಗೂ ಇತರ ಉಪಕರಣಗಳ ಬೆಲೆಯಲ್ಲಿ ಕಡಿತ ಆಗಲಿದೆ.ಹೆಚ್ಚಿನ ವಸ್ತುಗಳು ಶೇ.5 ಮತ್ತು ಶೇ.18ರಷ್ಟು ತೆರಿಗೆ ದರ ವರ್ಗಕ್ಕೆ ಬಂದಿವೆ. ಹಲವಾರು ಆಹಾರ ಪದಾರ್ಥಗಳು ಈಗ ಶೇ.0 ಅಥವಾ ಶೂನ್ಯ ಜಿಎಸ್ಟಿ ವ್ಯಾಪ್ತಿಗೆ ಸೇರಿವೆ. ಜೀವ ಮತ್ತು ಆರೋಗ್ಯ ವಿಮೆಗಳು ಸಹ ಶೂನ್ಯ ತೆರಿಗೆ ವರ್ಗಕ್ಕೆ ಬರುತ್ತವೆ.
ಸೆ.22 ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರುವ ಸ್ಲ್ಯಾಬ್‌ಗಳನ್ನು ಶೇ. 5 ಮತ್ತು ಶೇ. 18 ಕ್ಕೆ ಸೀಮಿತಗೊಳಿಸಲು ಜಿಎಸ್‌ಟಿ ಕೌನ್ಸಿಲ್ ಅನುಮೋದನೆ ನೀಡಿತ್ತು. ಸರ್ಕಾರವು ದೇಶೀಯ ವೆಚ್ಚವನ್ನು ಹೆಚ್ಚಿಸಲು ಮತ್ತು ಅಮೆರಿಕದ ಸುಂಕಗಳ ಆರ್ಥಿಕ ಹೊಡೆತವನ್ನು ತಗ್ಗಿಸಲು ಮಹತ್ವದ ತೀರ್ಮಾನ ಕೈಗೊಂಡಿತ್ತು. ಎಸಿ, ವಾಷಿಂಗ್ ಮೆಷೀನ್‌ಗಳಂತಹ ಮಧ್ಯಮ ವರ್ಗದ ಬಹುತೇಕ ಎಲ್ಲಾ ವೈಯಕ್ತಿಕ ಬಳಕೆಯ ವಸ್ತುಗಳು ಮತ್ತು ಮಹತ್ವಾಕಾಂಕ್ಷೆಯ ಸರಕುಗಳು ದರಗಳು ಇನ್ನು ಮುಂದೆ ಅಗ್ಗವಾಗಲಿವೆ.
ಜೀವವಿಮೆ, ಆರೋಗ್ಯ ವಿಮೆಗಳ ಮೇಲೆ ಇಲ್ಲ ಯಾವುದೇ ತೆರಿಗೆ: ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ (ಕುಟುಂಬ ಫ್ಲೋಟರ್ ಸೇರಿದಂತೆ)ಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಈ ಹಿಂದೆ, ಅಂತಹ ಪಾಲಿಸಿಗಳು ಶೇ. 18 ರಷ್ಟು ಜಿಎಸ್‌ಟಿಗೆ ಒಳಪಟ್ಟಿದ್ದವು. ಎಲ್ಲಾ ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಈಗ ಶೂನ್ಯ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಕೇಂದ್ರ ವಿತ್ತ ಮಂತ್ರಿಗಳು ಘೋಷಿಸಿದ್ದಾರೆ.
ಪಾನ್ ಮಸಾಲಾ, ಗುಟ್ಕಾ, ಸಿಗರೇಟ್, ಜರ್ದಾ, ತಯಾರಿಸದ ತಂಬಾಕು ಮತ್ತು ಬೀಡಿ ಮುಂತಾದ ಜಗಿಯುವ ತಂಬಾಕು ಉತ್ಪನ್ನಗಳನ್ನು ಹೊರತುಪಡಿಸಿ ಎಲ್ಲಾ ಉತ್ಪನ್ನಗಳಿಗೆ ಹೊಸ ದರಗಳು ಸೆ.22 ರಿಂದ ಜಾರಿಗೆ ಬರಲಿವೆ. ತಂಬಾಕು ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳು ಆರ್ಥಿಕ ವರ್ಷಗಳಲ್ಲಿ ರಾಜ್ಯಗಳಿಗೆ ಆದಾಯ ನಷ್ಟವನ್ನು ಸರಿದೂಗಿಸಲು ತೆಗೆದುಕೊಂಡ ಸಾಲಗಳನ್ನು ಮರುಪಾವತಿಸುವವರೆಗೆ ಶೇಕಡಾ 28 ರಷ್ಟು ಜಿಎಸ್‌ಟಿ ದರ ಮತ್ತು ಪರಿಹಾರ ಸೆಸ್‌ಗಳಿಗೆ ಒಳಪಟ್ಟಿರುತ್ತವೆ. ಕ್ಯಾಲೆಂಡರ್ ವರ್ಷದ ಅಂತ್ಯದ ವೇಳೆಗೆ ಸಾಲಗಳನ್ನು ಮರುಪಾವತಿಸುವ ನಿರೀಕ್ಷೆಯಿದೆ. ಅದು ಮುಗಿದ ನಂತರ, ತಂಬಾಕು ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳು ಶೇ. 40 ರಷ್ಟು ಜಿಎಸ್‌ಟಿ ದರಕ್ಕೆ ಒಳಪಟ್ಟಿರುತ್ತವೆ.
ಈ ವಸ್ತುಗಳಿಗೆ ಇಲ್ಲ ಯಾವುದೇ ತೆರಿಗೆ : ದಿನನಿತ್ಯದ ಆಹಾರ ಪದಾರ್ಥಗಳು ಶೂನ್ಯ ತೆರಿಗೆ ದರವನ್ನು ಆಕರ್ಷಿಸುತ್ತಲೇ ಇರುತ್ತವೆ. ಆದರೆ, ಅತಿ ಹೆಚ್ಚಿನ ತಾಪಮಾನದ ಹಾಲು, ಚೆನ್ನಾ ಅಥವಾ ಪನ್ನೀರ್, ಪಿಜ್ಜಾ ಬ್ರೆಡ್, ಖಾಕ್ರಾ, ಸಾದಾ ಚಪಾತಿ ಅಥವಾ ರೊಟ್ಟಿ ಮೇಲಿನ ತೆರಿಗೆ ದರವನ್ನು ಶೇಕಡಾ 5 ರಿಂದ ಶೂನ್ಯಕ್ಕೆ ಇಳಿಸಲಾಗಿದೆ.
ಪರೋಠದ ಮೇಲಿನ ತೆರಿಗೆಯೂ ಶೂನ್ಯವಾಗಿರುತ್ತದೆ (ಪ್ರಸ್ತುತ ಶೇಕಡಾ 18 ರಷ್ಟು ವಿಧಿಸಲಾಗುತ್ತದೆ). ಎರೇಸರ್‌ಗಳು, ನಕ್ಷೆಗಳು, ಪೆನ್ಸಿಲ್ ಶಾರ್ಪನರ್‌ಗಳು ಮತ್ತು ವ್ಯಾಯಾಮ ಪುಸ್ತಕಗಳಿಗೆ ಶೇಕಡಾ 5 ರಿಂದ ಶೂನ್ಯ ಶುಲ್ಕ ವಿಧಿಸಲಾಗುತ್ತದೆ.ಬೆಣ್ಣೆ ಮತ್ತು ತುಪ್ಪದಿಂದ ಹಿಡಿದು ಒಣ ಬೀಜಗಳು, ಮಂದಗೊಳಿಸಿದ ಹಾಲು, ಚೀಸ್, ಅಂಜೂರ, ಖರ್ಜೂರ, ಆವಕಾಡೊ, ಸಿಟ್ರಸ್ ಹಣ್ಣುಗಳು, ಸಾಸೇಜ್‌ಗಳು ಮತ್ತು ಮಾಂಸ, ಸಕ್ಕರೆ ಬೇಯಿಸಿದ ಮಿಠಾಯಿ, ಜಾಮ್ ಮತ್ತು ಹಣ್ಣಿನ ಜೆಲ್ಲಿಗಳು, ಎಳನೀರು, ನಮ್ಕೀನ್, 20 ಲೀಟರ್ ಬಾಟಲಿಗಳಲ್ಲಿ ಪ್ಯಾಕ್ ಮಾಡಿದ ಕುಡಿಯುವ ನೀರು, ಹಣ್ಣಿನ ತಿರುಳು ಅಥವಾ ಹಣ್ಣಿನ ರಸ, ಹಾಲು, ಐಸ್ ಕ್ರೀಮ್, ಪೇಸ್ಟ್ರಿ ಮತ್ತು ಬಿಸ್ಕತ್ತುಗಳನ್ನು ಒಳಗೊಂಡಿರುವ ಪಾನೀಯಗಳು, ಕಾರ್ನ್‌ಫ್ಲೇಕ್‌್ಸ ಮತ್ತು ಧಾನ್ಯಗಳು ಮತ್ತು ಸಕ್ಕರೆ ಮಿಠಾಯಿಗಳವರೆಗೆ ಸಾಮಾನ್ಯ ಬಳಕೆಯ ಆಹಾರ ಮತ್ತು ಪಾನೀಯಗಳ ತೆರಿಗೆ ದರವನ್ನು ಪ್ರಸ್ತುತ ಶೇಕಡಾ 12 ಹಾಗೂ 18 ರಿಂದ ಶೇ 5ರ ಸ್ಲ್ಯಾಬ್‌ಗೆ ಇಳಿಕೆ ಮಾಡಲಾಗಿದೆ. ಹಲ್ಲಿನ ಪುಡಿ, ಫೀಡಿಂಗ್ ಬಾಟಲಿಗಳು, ಟೇಬಲ್‌ವೇರ್, ಅಡುಗೆಮನೆಯ ವಸ್ತುಗಳು, ಛತ್ರಿಗಳು, ಪಾತ್ರೆಗಳು, ಸೈಕಲ್‌ಗಳು, ಬಿದಿರಿನ ಪೀಠೋಪಕರಣಗಳು ಮತ್ತು ಬಾಚಣಿಗೆಗಳಂತಹ ಗ್ರಾಹಕ ಸರಕುಗಳ ದರವನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗುತ್ತದೆ. ಶಾಂಪೂ, ಟಾಲ್ಕಮ್ ಪೌಡರ್, ಟೂತ್‌ಪೇಸ್ಟ್, ಟೂತ್ ಬ್ರಷ್‌ಗಳು, ಫೇಸ್ ಪೌಡರ್, ಸೋಪು ಮತ್ತು ಕೂದಲಿನ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ.18 ರಿಂದ ಶೇ.5 ಕ್ಕೆ ಇಳಿಸಲಾಗಿದೆ.
ಸಾಂದ್ರೀಕರಿಸಿದ ಹಾಲು.
ಪನೀರ್ (ಮೊದಲೇ ಪ್ಯಾಕ್ ಮಾಡಿ ಲೇಬಲ್ ಮಾಡಿದ್ದು).
ಪಿಜ್ಜಾ ಬ್ರೆಡ್.
ಖಾಖ್ರಾ, ಚಪಾತಿ ಅಥವಾ ರೋಟಿ.
ಎರೇಸರ್‌ಗಳು (ಅಳಿಸುವ ರಬ್ಬರ್‌ಗಳು) ಶೇ.18 ರಿಂದ ಶೇ. 0 (ಶೂನ್ಯ) ಗೆ ಇಳಿಕೆ
ಪರೋಟಾ ಮತ್ತು ಚಪಾತಿ, ಬ್ರೆಡ್‌ಗಳು.
ಕಲಾಕೃತಿಗಳು ಮತ್ತು ಪ್ರಾಚೀನ ವಸ್ತುಗಳು.
ಫ್ಲೈಟ್ ಮೋಷನ್ ಸಿಮ್ಯುಲೇಟರ್ ಬಿಡಿಭಾಗಗಳು.
ಟಾರ್ಗೆಟ್ ಮೋಷನ್ ಸಿಮ್ಯುಲೇಟರ್ ಬಿಡಿಭಾಗಗಳು. ದರದಲ್ಲಿ ಯಾವುದೇ ಬದಲಾವಣೆ ಇಲ್ಲ
ಪ್ರತಿ ಪೀಸ್‌ಗೆ 2500 ರೂ. ಒಳಗಿನ ಹೆಣೆದ ಉಡುಪು ಮತ್ತು ಬಟ್ಟೆ ಪರಿಕರಗಳ ವಸ್ತುಗಳು.
ಪೀಸ್‌ಗೆ 2500 ರೂ. ಒಳಗಿನ ಹೆಣೆಯದ ಉಡುಪು ಮತ್ತು ಬಟ್ಟೆ ಪರಿಕರಗಳ ವಸ್ತುಗಳು.
2500 ರೂ. ಒಳಗಿನ ಇತರ ತಯಾರಿಸಿದ ಜವಳಿ ವಸ್ತುಗಳು.
ಪೀಸ್‌ಗೆ 2500 ರೂ. ಒಳಗಿನ ಹತ್ತಿ ಹೊದಿಕೆಗಳು.
ಪೀಸ್‌ಗೆ 2500 ರೂ. ಒಳಗಿನ ಹೆಣೆದ ಉಡುಪು ಮತ್ತು ಬಟ್ಟೆ ಪರಿಕರಗಳ ವಸ್ತುಗಳು.
ಪ್ರತಿ ಪೀಸ್‌ಗೆ 2500 ರೂ. ಒಳಗಿನ ಉಡುಪು ಮತ್ತು ಬಟ್ಟೆ ಪರಿಕರಗಳ ವಸ್ತುಗಳು.
ಇತರ ತಯಾರಿಸಿದ ಜವಳಿ ವಸ್ತುಗಳು ಪೀಸ್‌ಗೆ 2500 ರೂ. ಒಳಗಿನ ಹತ್ತಿ ಹೊದಿಕೆಗಳು. ಶೇ.28 ರಿಂದ ಶೇ. 40 ಕ್ಕೆ ಏರಿಕೆ
ಬೆಂಗಳೂರು, ಸೆ.20– ಕೇಂದ್ರ ಸರ್ಕಾರವು ಸಾರ್ವಜನಿಕರ ದೈನಂದಿನ ಬಳಕೆಯ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಇಳಿಕೆ ಮಾಡಿದ್ದು ಸೆ.22 ರಿಂದ ಕಡ್ಡಾಯವಾಗಿ ಎಲ್ಲಾ ಆಹಾರ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆಗಳು ಜಾರಿಗೊಳಿಸುವಂತೆ ತಿಳಿಸಲಾಗಿದೆ. ಅದರಂತೆ ಕೆಎಂಎಫ್ ಸಂಸ್ಥೆಯ ನಂದಿನಿ ಉತ್ಪನ್ನಗಳ ಮಾರಾಟ ದರ ಪರಿಷ್ಕರಣೆ ಮಾಡಲಾಗಿದೆ.
*ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ.12 ರಿಂದ 5ಕ್ಕೆ ಇಳಿಸಲಾಗಿದೆ. *ನಂದಿನಿ ಕುಕೀಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್ಸ್‌ಟೆಂಟ್ ಮಿಕ್ಸ್ ಮತ್ತು ಪ್ಯಾಕ್ಟ್ ನೀರಿನ ಮೇಲಿನ ಜಿಎಸ್‌ಟಿ ಶೇ.18 ರಿಂದ 5ಕ್ಕೆ, *ನಂದಿನಿ ಪನೀರ್ ಮತ್ತು ಯುಹೆಚ್ ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ.5 ರಿಂದ 0, ರಂತೆ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಸೆ.22 ರಿಂದ ಅನ್ವಯವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಶಿವಸ್ವಾಮಿ ಅವರು ತಿಳಿಸಿದ್ದಾರೆ.
ಹಾಸನ,ಸೆ.20- ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಕಾಡನೂರು ಗ್ರಾಮದ 29 ವರ್ಷದ ಮಹಿಳೆ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಒಂದು ಗಂಡು ಹಾಗೂ ಎರಡು ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದ ಅವರಿಗೆ ಅಲ್ಲಿನ ಸ್ತ್ರೀರೋಗ ತಜ್ಞೆ (ಅಸಿಸ್ಟೆಂಟ್ ಪ್ರೊಫೆಸರ್) ಡಾ.ನ್ಯಾನ್ಸಿ ಪೌಲ್ ಅವರ ಮಾರ್ಗದರ್ಶನದಲ್ಲಿ ವೈದ್ಯ ಸಿಬ್ಬಂದಿಗಳು ಹೆರಿಗೆ ಮಾಡಿಸಿದ್ದಾರೆ.
ಮೊದಲು ಜನಿಸಿದ ಗಂಡು ಮಗು 2.1 ಕೆಜಿ ತೂಕವಿದ್ದು 11.03 ಕ್ಕೆ, ಎರಡನೇ ಹೆಣ್ಣುಮಗು 1.9 ಕೆಜಿ ತೂಕವಿದ್ದು 11.04 ಮತ್ತೊಂದು ಹೆಣ್ಣು ಮಗು 1.8 ಕೆಜಿ ತೂಕವಿದ್ದು 11.05 ಸೆಕೆಂಡಿಗೆ ಜನಿಸಿದೆ. ಮೂರು ನವಜಾತ ಶಿಶುಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೂರೂ ಶಿಶುಗಳು ಆರೋಗ್ಯವಾಗಿವೆ ಈ ರೀತಿಯ ಪ್ರಕರಣ ಅಪರೂಪ ಎಂದು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ನ್ಯಾನ್ಸಿ ಪೌಲ್ ತಿಳಿಸಿದ್ದಾರೆ.ಇದೇ ಮೊದಲನೇ ಹೆರಿಗೆಯಾಗಿದ್ದು ಇವರ ಕುಟುಂಬದಲ್ಲಿ ತ್ರಿವಳಿ ಜನನವೂ ಇದೇ ಮೊದಲು ಹಾಗೂ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಎಲ್ಲಾ ಮಗು ಆರೋಗ್ಯವಾಗಿ ಯಾವುದೇ ಅಂಗವಿಕಲತೆ ಇಲ್ಲದೆ ಹುಟ್ಟಿರುವುದು ವಿಶೇಷ ಪ್ರಕರಣ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾನ್ಯವಾಗಿ 6 ರಿಂದ 6.30 ಕೆಜಿ ಯಷ್ಟು ಮಗು ಸೇರಿದಂತೆ ತೂಕವನ್ನು ಗರ್ಭಿಣಿಯರು ಹೊರುತ್ತಾರೆ. ಆದರೆ ಎಂಟು ಕೆ.ಜಿ.ಗೂ ಹೆಚ್ಚು ಪ್ರಮಾಣದ ಹೊರೆಯನ್ನು ಹೊತ್ತ ಬಳಿಕ ಯಾವುದೇ ತೊಂದರೆಯಾಗದೆ ಹೆರಿಗೆಯಾಗಿರುವುದು ವಿಶೇಷ ಎಂದು ವೈದ್ಯರಾದ ಡಾ.ನ್ಯಾನ್ಸಿ ಪೌಲ್ ತಿಳಿಸಿದ್ದಾರೆ.
ಬೆಂಗಳೂರು, ಸೆ.20- ನಗರದಲ್ಲಿ ಭಾರೀ ಪ್ರಮಾಣದ ಸಂಚಾರ ದಟ್ಟಣೆ ಹಾಗೂ ವ್ಯಾಪಕ ಮಳೆಯಿಂದಾಗಿ ರಸ್ತೆ ಗುಂಡಿಗಳು ಸೃಷ್ಟಿಯಾಗುತ್ತಿವೆ. ಈಗಾಗಲೇ 7 ಸಾವಿರ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 5 ಸಾವಿರ ಗುಂಡಿಗಳು ಬಾಕಿ ಇವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಸೃಷ್ಟಿಯಾಗಬೇಕೆಂದು ಯಾರೂ ಬಯಸುವುದಿಲ್ಲ, ಹೆಚ್ಚಿನ ವಾಹನಗಳ ಸಂಚಾರ ಹಾಗೂ ನಿಸರ್ಗದತ್ತವಾಗಿ ನಿರಂತರ ಮಳೆಯಿಂದ ಗುಂಡಿಗಳಾಗುತ್ತಿವೆ. ಸರ್ಕಾರ ಸಮಸ್ಯೆಯನ್ನು ಸರಿಪಡಿಸುವ ಸಲುವಾಗಿಯೇ ಶ್ರಮಿಸುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ಸಂಜೆ ಕೂಡ ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಭೆ ನಡೆಸುತ್ತಿದ್ದಾರೆ. ರಸ್ತೆ ಗುಂಡಿಗಳನ್ನು ಗುರುತಿಸಲು ಪೊಲೀಸ್ ಆಯುಕ್ತರಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರೂ ಕೂಡ ರಸ್ತೆ ಗುಂಡಿಗಳ ಬಗ್ಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿಯವರಿಗೆ ರಾಜಕೀಯ ಮಾಡುವುದೇ ಪ್ರಮುಖ ಉದ್ದೇಶವಾಗಿದೆ. ಅದನ್ನು ಬಿಟ್ಟು ಅವರಿಗೆ ಬೇರೇನೂ ಗೊತ್ತಿಲ್ಲ. ಅವರು ಏನೂ ಬೇಕಾದರೂ ಮಾಡಿಕೊಳ್ಳಲಿ, ನಾವಂತೂ ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲಾ ಶಾಸಕರಿಗೂ ಸಮಾನವಾಗಿ ಅನುದಾನ ಹಂಚುತ್ತಿದ್ದೇವೆ.
ನನ್ನ ವಿವೇಚನಾಧಿಕಾರಿಯಲ್ಲಿರುವ ಅನುದಾನವನ್ನು ಸಮನಾಂತರವಾಗಿಯೇ ನೀಡುತ್ತಿದ್ದೇನೆ. ಅದನ್ನು ಬಳಸಿಕೊಂಡು ಕೆಲಸ ಮಾಡಲಿ, ಹಣ ಇಲ್ಲವೆಂಬ ಅಭಿಪ್ರಾಯವನ್ನು ಏಕೆ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರಿಗೆ 25 ಕೋಟಿ ರೂ.ಗೂ ಹೆಚ್ಚಿನ ಹಣ ನೀಡಲಾಗಿದೆ ಎಂದರು. ಜಾತಿ ಜನಗಣತಿಯ ಸಂಬಂಧಪಟ್ಟಂತೆ ಸಭೆಯ ಬಳಿಕ ಪ್ರತಿಕ್ರಿಯಿಸುವುದಾಗಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮೈಸೂರು, ಸೆ.20- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಸಿದ್ದತೆಗಳು ಭರದಿಂದ ಸಾಗಿದ್ದು, ಈ ಬಾರಿ ದಸರಾಗೆ ಭಾರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, 11 ದಿನದ ಮೈಸೂರು ದಸರಾಗೆ 75000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಂಬೂ ಸವಾರಿಯಲ್ಲಿ ಅಂದಾಜು 15 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಅರಮನೆಯಲ್ಲಿ 48 ಸಾವಿರ, ಬನ್ನಿಮಂಟಪದಲ್ಲಿ 32 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ, ಪಾಸ್ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಅಹಿತಕರ ಘಟನೆ ನಡೆಯದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತದೆ, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, 30,614 ಸಿಸಿ ಕ್ಯಾಮೆರಾಗಳ ಕಣ್ಣಾವಲು ಇರಲಿದೆ ಎಂದು ಹೇಳಿದರು.
ಪ್ರವಾಸಿಗರ ಅನುಕೂಲಕ್ಕಾಗಿ 43 ಕಡೆ ಸಹಾಯ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಮಾರ್ಗಗಳ ಬದಲಾವಣೆ, ಅರಮನೆ ಸುತ್ತ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ, ಉತ್ತನಹಳ್ಳಿ ಬಳಿ ಯುವ ದಸರಾಗೆ ತಯಾರಿ ನಡೆಯುತ್ತಿದೆ ಎಂದು ಸೀಮಾ ಲಾಟ್ಕರ್ ವಿವರಿಸಿದರು.
ಮೈಸೂರು ನಗರ ಘಟಕ ವ್ಯಾಪ್ತಿಯಲ್ಲಿ ಕಳೆದ ವರ್ಷಗಳ ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕೆಲ ಯುವಕರು ತುತ್ತೂರಿ(ವುವುಜೆಲಾ)ಗಳಿಂದ ಊದಿ ಕಿರಿಕಿರಿ ಉಂಟು ಮಾಡಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವುವುಜೆಲಾ(ತುತ್ತೂರಿ) ಮಾರಾಟ ಮಾಡುವುದನ್ನು ಮತ್ತು ಬಳಸುವುದನ್ನು ನಿಷೇಧಿಸಿದ್ದೇವೆ ಎಂದು ಸೀಮಾ ಲಾಟ್ಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಸುಂದರ್ ರಾಜ್, ಬಿಂದು ಮಣಿ ಉಪಸ್ಥಿತರಿದ್ದರು.