Friday, November 7, 2025
Home Blog Page 97

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-09-2025)

ನಿತ್ಯ ನೀತಿ : ತಂದೆಯ ಕೋಪ ನಮಗೆ ದಾರಿ ತೋರಿಸುತ್ತದೆ, ತಾಯಿಯ ಕೋಪ ನಮ್ಮ ಹೊಟ್ಟೆ ತುಂಬಿಸುತ್ತದೆ, ಗುರುವಿನ ಕೋಪ ನಮಗೆ ವಿದ್ಯೆ ಕಲಿಸುತ್ತದೆ, ಶತ್ರುವಿನ ಕೋಪ ನಮಗೆ ಎಚ್ಚರಿಕೆಯನ್ನು ನೀಡುತ್ತದೆ. ನಮ್ಮ ಕೋಪ ನಮ್ಮನ್ನು ನಾಶ ಮಾಡುತ್ತದೆ.

ಪಂಚಾಂಗ : ಶನಿವಾರ, 20-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ಮಘಾ / ಯೋಗ: ಸಾಧ್ಯ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.17
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ: ರಿಯಲ್‌ ಎಸ್ಟೇಟ್‌ಗೆ ಸಂಬಂ ಸಿದ ಯಾವುದೇ ಗೊಂದಲಗಳು ಸೃಷ್ಟಿಯಾಗಬಹುದು.
ವೃಷಭ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ತಮ್ಮ ಹಣ ಕಳೆದುಕೊಳ್ಳಬಹುದು.
ಮಿಥುನ: ವೃತ್ತಿಜೀವನದಲ್ಲಿ ಯಶಸ್ಸು ಸಾ ಸುವುದ ರಿಂದ ನಿಮ್ಮ ಪ್ರತಿಷ್ಠೆ ಮತ್ತು ಗೌರವವನ್ನು ಹೆಚ್ಚಿಸುತ್ತದೆ.

ಕಟಕ: ದೈಹಿಕ ಒತ್ತಡ ಕಡಿಮೆಯಾಗುವುದರಿಂದ ಮಾನಸಿಕ ಶಕ್ತಿ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಮಾತುಗಳು ನಿಮ್ಮ ಆಪ್ತರಿಗೆ ಅರ್ಥ ವಾಗುವುದಿಲ್ಲವಾದ್ದರಿಂದ ತೊಂದರೆಗೆ ಸಿಲುಕುವಿರಿ
ಕನ್ಯಾ: ವ್ಯವಹಾರದ ವಿಷಯದಲ್ಲಿ ಸ್ನೇಹಿತರ ಸಹಕಾರ ಸಿಗಲಿದೆ.

ತುಲಾ: ಹಳೆಯ ಸ್ನೇಹಿತರ ಭೇಟಿಯಿಂದ ಗೊಂದಲಗಳಿಗೆ ಪರಿಹಾರ ದೊರೆಯಲಿವೆ.
ವೃಶ್ಚಿಕ: ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ.
ಧನುಸ್ಸು: ಖರ್ಚು ಕಡಿತ ಮಾಡುವುದು ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.

ಮಕರ: ಪ್ರೇಮ ಸಂಬಂಧಗಳು ಬಲವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕುಂಭ: ತಾಯಿ-ತಂದೆ ಮತ್ತು ಕುಟುಂಬದವರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.
ಮೀನ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ.

ಮಿತಿಮೀರಿದ ವಾಹನಕಳ್ಳರ ಹಾವಳಿ : ಬೆಂಗಳೂರಿಗರೇ ನಿಮ್ಮ ಬೈಕ್, ಸ್ಕೂಟರ್ ಹುಷಾರ್..!

-ವಿ.ರಾಮಸ್ವಾಮಿ ಕಣ್ವ
ಜೀವನಮಟ್ಟ ಸುಧಾರಿಸು ತ್ತಿದ್ದಂತೆ ಮನುಷ್ಯನ ಅವಶ್ಯಕತೆಗಳು ಬಹಳಷ್ಟು. ಈಗಿನ ಕಾಲದ ಜನರಿಗೆ ವಾಹನಗಳು ಅತ್ಯಾವಶ್ಯಕವಾಗಿವೆ. ಅಗತ್ಯವೂ ಹೌದು. ನಗರಗಳ ಒಂದು ತುದಿಯಿಂದ ಮತ್ತೊಂದು ತುದಿಗೆ ಉದ್ಯೋಗ, ಶಿಕ್ಷಣ , ವ್ಯಾಪಾರ ಮುಂತಾದ ವ್ಯವಹಾರಗಳಿಗೆ ಪ್ರತಿದಿನ ವಾಹನಗಳಲ್ಲಿ ಹೋಗಿ ಬರುತ್ತಾರೆ. ಗ್ರೇಟರ್‌ ಬೆಂಗಳೂರು ನಗರದಲ್ಲಿ ಇತರ ವಾಹನಗಳಿಗಿಂತ ಕಾರು, ಬೈಕ್‌, ಸ್ಕೂಟರ್‌ಗಳ ಸಂಖ್ಯೆ ಹೆಚ್ಚು. ಇವುಗಳ ಸಂಚಾರ ಸಹ ಅತಿ ಹೆಚ್ಚು. ಮೆಟ್ರೋ ರೈಲುಗಳು ಓಡಾಡುತ್ತಿದ್ದರೂ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಲ್ಲ.

ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಿ:
ಬೆಂಗಳೂರು ನಗರದ ಬಹುದೊಡ್ಡ ಸಮಸ್ಯೆ ಎಂದರೆ ಪಾರ್ಕಿಂಗ್‌ (ವಾಹನ ನಿಲುಗಡೆ) . ಹೀಗಾಗಿ ಮಾಲೀಕರು ತಮ್ಮ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಜಾಗ ಸಿಕ್ಕ ಕಡೆಗಳಲ್ಲಿ ನಿಲ್ಲಿಸಿ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೊಂಚು ಹಾಕಿಕೊಂಡು ಕಾಯುತ್ತಿರುವ ವಾಹನ ಚೋರರು ಅವುಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗುತ್ತಾರೆ.

ಪ್ರತಿದಿನ 14 ದ್ವಿಚಕ್ರ ವಾಹನಗಳ ಕಳವು:
ಅಂಕಿ ಅಂಶಗಳ ಪ್ರಕಾರ 2023ರಲ್ಲಿ 6185 ಮತ್ತು 2024ರಲ್ಲಿ 5574 ವಾಹನಗಳು ಬೆಂಗಳೂರು ನಗರದಲ್ಲಿ ಕಳ್ಳತನವಾಗಿವೆ. ವಾಹನ ಕಳ್ಳತನಗಳಲ್ಲಿ ದ್ವಿಚಕ್ರ ವಾಹನಗಳೇ ಅತಿ ಹೆಚ್ಚು. 2023ರಲ್ಲಿ 5827 ಹಾಗೂ 2024ರಲ್ಲಿ 5254 ದ್ವಿಚಕ್ರ ವಾಹನಗಳ ಕಳ್ಳನತನವಾಗಿವೆ. ಅಂದರೆ ಬೆಂಗಳೂರು ನಗರದಲ್ಲಿ ಪ್ರತಿದಿನ ಸರಾಸರಿ 14 ದ್ವಿಚಕ್ರ ವಾಹನಗಳು ಕಳುವಾಗುತ್ತಿವೆ.

ಮನೆ, ಕಚೇರಿ,ಮಾಲ್‌, ಬಸ್‌, ರೈಲ್ವೆ ನಿಲ್ದಾಣ ಮುಂಭಾಗ, ಮಾರ್ಕೆಟ್‌ಗಳ ಬಳಿ ನಿಲ್ಲಿಸಿದ ವಾಹನಗಳನ್ನು ಚೋರರು ಕ್ಷಣ ಮಾತ್ರದಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಬಹುತೇಕವಾಗಿ ವಾಹನ ಕಳ್ಳರು ನಕಲಿ ಕೀ ಬಳಸಿ ಇಲ್ಲವೆ ಹ್ಯಾಂಡ್‌ಲಾಕ್‌ಗಳನ್ನು ಕಾಲಿನಿಂದ ಒದ್ದು ಮುರಿದು ಕಳ್ಳತನ ಮಾಡುತ್ತಾರೆ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹೀಗೆ ಕಳ್ಳತನ ಮಾಡಿಕೊಂಡು ಹೋದ ದ್ವಿಚಕ್ರ ವಾಹನಗಳನ್ನು ಪಾಳು ಮನೆಗಳಲ್ಲಿ ಅಥವಾ ತಮ್ಮ ಮನೆಗಳ ಸಮೀಪದ ಖಾಲಿ ಜಾಗಗಳಲ್ಲಿ ಅಥವಾ ಊರ ಹೊರವಲಯದ ತೋಪುಗಳಲ್ಲಿ ನಿಲ್ಲಿಸಿಕೊಂಡು ಒಂದೊಂದಾಗಿ ಮಾರಾಟ ಮಾಡುತ್ತಾರೆ. ಇಲ್ಲವೇ ತಮ್ಮ ಸಹಚರರು, ಸ್ನೇಹಿತರು, ನೆಂಟರ ಮೂಲಕ ಮಾರಾಟ ಮಾಡಿಸುತ್ತಾರೆ.

ಬೆಂಗಳೂರು ನಗರದಲ್ಲಿ ಕದ್ದ ವಾಹನಗಳನ್ನು ನಮ್ಮ ರಾಜ್ಯದ ಹಳ್ಳಿಗಳಲ್ಲಿ ಅಥವಾ ನೆರೆ ರಾಜ್ಯಗಳ ಹಳ್ಳಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕಳವು ಮಾಡಿದ ವಾಹನಗಳನ್ನು ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಮಾರಾಟ ಮಾಡುತ್ತಾರೆ.

ಕಂಬಿ ಎಣಿಸಬೇಕಾಗುತ್ತದೆ ಜೋಕೆ.!
ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನ ಕೊಳ್ಳುವವರು ಬಹಳ ಜಾಗೃತರಾಗಿರಬೇಕು. ಕಳ್ಳಕಥೆ ಕಟ್ಟಿ ನಾನು ಕಷ್ಟದಲ್ಲಿದ್ದೇನೆ ಎಂದು ನಂಬಿಸಿ ವಾಹನ ಮಾರಾಟ ಮಾಡುತ್ತಾನೆ. ಕಡಿಮೆ ಬೆಲೆಗೆ ಸಿಕ್ಕಿತಲ್ಲ ಎಂದು ಖುಷಿಪಡಬೇಡಿ. ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಸೀದಾ ನಿಮ್ಮ ಮನೆ ತೋರಿಸುತ್ತಾನೆ. ಆಗ ಬಂದ ಪೊಲೀಸರು ವಾಹನ ತೆಗೆದುಕೊಂಡು ಹೋಗುತ್ತಾರೆ ಜೋಕೆ.
ಇತ್ತೀಚೆಗೆ ರಾಜ್ಯ ಪೊಲೀಸರು ಕಳವು ಮಾಲುಗಳನ್ನು ಸ್ವೀಕರಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿದ್ದಾರೆ ಹುಷಾರ್‌.!

ಮಾಲೀಕರೇ ಜಾಗರೂಕರಾಗಿ
ವಾಹನ ಮಾಲೀಕರು ಸಹ ಜಾಗೃತರಾಗಿ ರಬೇಕು, ಯಾವುದೇ ಸಂದರ್ಭದಲ್ಲೂ ನಿಮ್ಮ ವಾಹನಗಳಿಗೆ ಲಾಕ್‌ ಮಾಡುವುದನ್ನು ಮರೆಯಬಾರದು. ಕೆಲವರು ಲಾಕ್‌ ಮಾಡುವುದಿಲ್ಲ. ಬೈಕ್‌, ಸ್ಕೂಟರ್‌ಗಳಲ್ಲಿ ಕೀಯನ್ನು ಬಿಟ್ಟು ಹೋಗುತ್ತಾರೆ. ಈಗ ನಗರದ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂತಹ ಸ್ಥಳಗಳಲ್ಲಿ ನಿಲ್ಲಿಸಿ, ಪೇಯಿಂಗ್‌ ಪಾರ್ಕಿಂಗ್‌ಗಳನ್ನು ಉಪಯೋಗಿಸಿಕೊಳ್ಳಿ. ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿ ನಂತರ ಗೇಟಿಗೆ ಬೀಗ ಹಾಕಿ.
ವಾಹನಗಳಿಗೆ ಜಿಪಿಎಸ್‌, ವೀಲ್‌ ಲಾಕಿಂಗ್‌ ಸಿಸ್ಟಮ್‌, ಗಟ್ಟಿ ಹ್ಯಾಂಡ್‌ಲಾಕ್‌ಗಳನ್ನು ಅಳವಡಿಸಿ. ನಕಲಿ ಕೀ ಬಳಸಿ ಅಥವಾ ಸರ್ಕ್ಯೂಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನ ಪ್ರಯತ್ನಿಸಿದ್ದಲ್ಲಿ ಸೈರನ್‌ ಆಗುವ ರೀತಿ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳಿ.

ನಕಲಿ ದಾಖಲೆ ಸೃಷ್ಟಿ..
ತಾವು ಕದ್ದ ವಾಹನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಐನಾತಿ ಕಳ್ಳರು ಬಿಡಿ ಭಾಗಗಳನ್ನು ಬಿಚ್ಚಿ ಗುಜರಿಗೆ ಹಾಕಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಾರೆ , ಈ ಚೋರರು.
ಬೆಂಗಳೂರು ನಗರದಲ್ಲಿ ಸ್ಥಳೀಯ ವಾಹನ ಕಳ್ಳರಿಗಿಂತ ನೆರೆಯ ರಾಜ್ಯಗಳ ಕಳ್ಳರ ಹಾವಳಿಯೇ ಹೆಚ್ಚು. ಈ ಚೋರರು ಸಂಜೆಯಾಗುತ್ತಿದ್ದಂತೆ ಬಸ್‌ಗಳಲ್ಲಿ ನಗರಕ್ಕೆ ಬಂದು ರಾತ್ರಿ ಸುತ್ತಾಡಿ ಬೆಳಗಾಗುವಷ್ಟರಲ್ಲಿ ವಾಹನಗಳನ್ನು ಕಳವು ಮಾಡಿಕೊಂಡು ಅದೇ ವಾಹನಗಳಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಹೋಗುತ್ತಾರೆ. ಇವರುಗಳನ್ನು ಪತ್ತೆ ಹಚ್ಚಿ ಹಿಡಿಯುವುದು ಅಷ್ಟು ಸುಲಭ ಅಲ್ಲ.

ಬೆಂಗಳೂರಿನ ಹೊರ ವಲಯದಲ್ಲಿ 110 ಕಿ.ಮೀ ಉದ್ದದ ಎತ್ತರದ ಕಾರಿಡಾರ್‌ ನಿರ್ಮಾಣ

ಬೆಂಗಳೂರು, ಸೆ.19- ನಗರದ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಹಲವಾರು ಕಸರತ್ತುಗಳನ್ನು ಆರಂಭಿಸಿರುವ ಜಿಬಿಎ ಇದೀಗ 110 ಕಿ.ಮೀ ದೂರದ ಎತ್ತರದ ಕಾರಿಡಾರ್‌ ನಿರ್ಮಾಣ ಮಾಡಲು ಮುಂದಾಗಿದೆ.

ಬಿ ಸೈಲ್‌ ಸಂಸ್ಥೆಯಿಂದ 110 ಕಿ.ಮೀ ಎತ್ತರದ ಕಾರಿಡಾರ್‌ ಕಾಮಗಾರಿಯನ್ನು 18.000 ಸಾವಿರ ಕೋಟಿ ವೆಚ್ಚದ ನಿರ್ಮಿಸಲು ತೀರ್ಮಾನಿಸಲಾಗಿದೆ.ನಗರ ಬೆಳೆದಂತೆ ಹೊರ ಭಾಗದ ಪ್ರದೇಶಗಳಲ್ಲೂ ಸಂಚಾರ ದಟ್ಟಣೆ ಉಲ್ಬಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾರಿಡಾರ್‌ ರಸ್ತೆಯನ್ನು ನಗರದ ಹೊರ ಭಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಿ ಸೈಲ್‌ ನಿರ್ದೇಶಕ ಪ್ರಹ್ಲಾದ್‌ ಮಾಹಿತಿ ನೀಡಿದ್ದಾರೆ.

ಹೊಸ ಕಾರಿಡಾರ್‌ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಡಿಪಿಅರ್‌ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಕೂಡ ಅನುಮೋದನೆ ನೀಡಿದ್ದು, ಡಿಸೆಂಬರ್‌ ವೇಳೆಗೆ ಕಾಮಗಾರಿ ಶುರು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಾಮಗಾರಿಗೆ ನಿಗದಿಪಡಿಸಿರುವ 18 ಸಾವಿರ ಕೋಟಿ ರೂ.ಗಳಲ್ಲಿ 3 ಸಾವಿರ ಕೋಟಿ ಭೂಸ್ವಾಧೀನಕ್ಕೆ ಉಳಿದ 15000 ಕೋಟಿ ರೂ.ಗಳಲ್ಲಿ ಕಾರಿಡಾರ್‌ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಈ ಕಾರಿಡಾರ್‌ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ನೀವು ಟೋಲ್‌ ನೀಡಬೇಕಾಗುತ್ತದೆ.ಈ ಕಾರಿಡಾರ್‌ ರಸ್ತೆಯನ್ನು ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ನೂತನ ತಂತ್ರಜ್ಞಾನದಿಂದ ಹೈಟೆಕ್‌ ಕಾರಿಡಾರ್‌ ನಿರ್ಮಾಣ ಮಾಡಲಾಗುವುದು. ಇನ್ನೂ ಗುಂಡಿ ಬಿದ್ದ ರಸ್ತೆಗಳಿಗೆ ಮುಕ್ತಿ ನೀಡಲು ನಗರದ 500 ಕಿ.ಮೀ ರಸ್ತೆಗಳಿಗೆ ವೈಟ್‌ ಟ್ಯಾಪಿಂಗ್‌ ಮಾಡಲಾಗುತ್ತೆ ಎಂದು ಅವರು ಮಾಹಿತಿ ನೀಡಿದರು.

ಇನ್ನೂ 440 ಕಿ.ಮೀ ಮೆಟ್ರೋ ಹಳಿಗಳ ಸಮೀಪ 9 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಜೋಡಿ ರಸ್ತೆ ನಿರ್ಮಾಣ. 5500 ಕೋಟಿ ರೂ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ರಸ್ತೆ ನಿರ್ಮಿಸುತ್ತೇವೆ. ಕಾರಿಡಾರ್‌ ನಿರ್ಮಾಣಕ್ಕಾಗಿ ನಗರದ ಹೊರ ವಲಯಗಳಲ್ಲಿ 16 ಜಾಗಗಳನ್ನು ಗುರುತಿಸಲಾಗಿದೆ. ಒಟ್ಟಾರೆ ಮೂರ್ನಾಲ್ಕು ವರ್ಷಗಳಗಲ್ಲಿ ನಗರವನ್ನು ಸಂಚಾರ ದಟ್ಟಣೆ ಮುಕ್ತ ಪ್ರದೇಶವನ್ನಾಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಸಮೀಕ್ಷೆ ಕುರಿತು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧಾರ ಕೈಗೊಳ್ಳಲಿದೆ : ಸಿಎಂ

ಬೆಂಗಳೂರು : ಹಿಂದುಳಿದ ವರ್ಗಗಳ ಆಯೋಗ ಶಾಸನಬದ್ಧ ಸಂಸ್ಥೆಯಾಗಿದ್ದು, ಅವರಿಗೆ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಸಮೀಕ್ಷೆಯ ಬಗ್ಗೆ ಅಭಿಪ್ರಾಯಗಳನ್ನು ಆಯೋಗಕ್ಕೆ ವಿವರಿಸಲಾಗಿದ್ದು, ಅಂತಿಮ ನಿರ್ಧಾರ ಆಯೋಗವೇ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ವಾರ್ತಾಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಆರ್ಥಿಕ, ಸಾಮಾಜಿಕ ಸಮೀಕ್ಷೆಗೆ ಸಚಿವಸಂಪುಟದಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದನ್ನು ಎಲ್ಲ ಸಚಿವರೂ ಒಕ್ಕೊರಲಿನಿಂದ ಖಂಡಿಸಬೇಕು ಎಂದು ಎಲ್ಲ ಸಚಿವರಿಗೂ ಸೂಚಿಸಲಾಗಿದೆ. ಸಮೀಕ್ಷೆಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಸಮೀಕ್ಷೆಯನ್ನು ಮುಂದೂಡುವುದಿಲ್ಲ ಎಂದರು.

ಸಮೀಕ್ಷೆಯ ಹೆಸರಲ್ಲಿ ಹೊಸ ಜಾತಿಗಳನ್ನು ಸೃಷ್ಟಿಸುವ ಸಂಚು ನಡೆದಿದೆ : ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು,ಸೆ.19- ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ 331 ಹೊಸ ಜಾತಿಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಪಾದಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಜಾತಿಗಳು ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಆದರೂ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಹೊಸ ಜಾತಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.

ದನಿ ಇಲ್ಲದವರಿಗೆ ದನಿ ನೀಡಲು ಜಾತಿಗಣತಿ ಆಗಬೇಕೇ ಹೊರತು ರಾಜಕೀಯ ಭವಿಷ್ಯಕ್ಕಾಗಿ ಅಲ್ಲ ಎಂದು ಯಾರ ಹೆಸರನ್ನೂ ಹೇಳದೆ ಆರೋಪ ಮಾಡಿದರು.ಕೇಂದ್ರ ಸರ್ಕಾರವೇ ಜಾತಿಗಣತಿಯನ್ನು ಮಾಡುತ್ತಿದೆ. ಆದರೂ ರಾಜ್ಯಸರ್ಕಾರ 420 ಕೋಟಿ ರೂ. ಖರ್ಚು ಮಾಡಿ ಸೆ.22 ರಿಂದ 15 ದಿನದಲ್ಲಿ 2 ಕೋಟಿ ಮನೆಗಳ ಸಮೀಕ್ಷೆ ನಡೆಸಲಿದೆಯಂತೆ. 10 ವರ್ಷಗಳಲ್ಲಿ ಸಾಧಿಸಲಾಗದ್ದನ್ನು 15 ದಿನಗಳಲ್ಲಿ ಮಾಡಲಾಗುತ್ತದೆಯೇ?, ಇದು ವಾಸ್ತವಿಕವಾಗಿ ಸಾಧ್ಯವಿದೆಯೇ?, ಈ ಸಮೀಕ್ಷೆಯಿಂದ ನಿಮಗೆ ಲಾಭ ಆಗಬಹುದು?, ಜನರಿಗೆ ಏನು ಲಾಭವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಜನರ ತೆರಿಗೆ ಹಣವನ್ನು ಏಕೆ ವ್ಯಯ ಮಾಡಬೇಕು ಎಂದು ಪ್ರಶ್ನಿಸಿದ ಅವರು, 2015 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾಂತರಾಜು ನೇಮಕಗೊಂಡು ಅವರ ಅವಧಿಯಲ್ಲಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿತ್ತು. 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ಆಯೋಗದ ಸಹ ಕಾರ್ಯದರ್ಶಿಯವರ ಸಹಿ ಇಲ್ಲ ಎಂಬ ಕಾರಣಕ್ಕೆ ವರದಿಯನ್ನು ಸ್ವೀಕರಿಸಲಿಲ್ಲ. ಈ ವರದಿ ಸಿದ್ಧಪಡಿಸಲು 180 ಕೋಟಿ ರೂ. ಹಣವನ್ನು ವ್ಯಯ ಮಾಡಲಾಗಿತ್ತು. ಅಲ್ಲದೆ ಅದನ್ನು ವೈಜ್ಞಾನಿಕವಾಗಿ ಕೂಡ ಮಾಡಿರಲಿಲ್ಲ ಎಂದು ಆರೋಪಿಸಿದರು.

ಜಾತಿಗಣತಿಗೆ ಸಂಬಂಧಿಸಿದಂತೆ ಆಯಾ ಸಮುದಾಯದ ಮಠಾಧೀಶರು, ನಾಯಕರು ಚರ್ಚೆ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನಾಳೆ ಈ ಬಗ್ಗೆ ಸಭೆ ಕರೆದಿದ್ದು, ಮಾಜಿ ಪ್ರಧಾನಿ ಎಚ್‌.ದೇವೇಗೌಡರು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಸಮುದಾಯದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜಾತಿಗಣತಿ ವಿಚಾರದಲ್ಲಿ ರಾಜ್ಯಸರ್ಕಾರದ ನಡೆ ಆತಂಕಕ್ಕೆ ಎಡೆ ಮಾಡಿದೆ. ಸಂಶಯಾತಕ ನಡೆಗಳು ಕಂಡುಬರುತ್ತಿದ್ದು, ಈ ಬಗ್ಗೆ ಎಲ್ಲರೂ ಚರ್ಚಿಸಬೇಕಿದೆ ಎಂದರು.

ಮತ್ತೆ ಪ್ರಧಾನಿ ಮೋದಿ ಹೊಗಳಿದ ಟ್ರಂಪ್‌

ಲಂಡನ್‌,ಸೆ.19- ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಸುಧಾರಿಸುತ್ತಿ ರುವುದರ ನಡುವೆ, ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಪ್ರಧಾನಿ ನರೇಂದ್ರ ಮೋದಿ ಯವರನ್ನು ಹೊಗಳಿದ್ದಾರೆ. ಯುನೈಟೆಡ್‌ ಕಿಂಗ್ಡಮ್‌ ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರೊಂದಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಭಾರತ ಹಾಗೂ ಭಾರತದ ಪ್ರಧಾನಿ ಮೋದಿ ನನಗೆ ಬಹಳ ಆಪ್ತ. ಅವರ ಹುಟ್ಟುಹಬ್ಬಕ್ಕೆ ನಾನು ಕರೆ ಮಾಡಿ ವಿಷ್‌ ಮಾಡಿದ್ದೆ.

ನಿನ್ನೆಯಷ್ಟೇ ಅವರ ಜೊತೆ ಮಾತನಾಡಿದ್ದೆ. ನಾವು ಬಹಳ ಒಳ್ಳೆಯ ಒಡನಾಟ ಹೊಂದಿದ್ದೇವೆ. ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ, ನಾನು ಭಾರತೀಯ ಪ್ರಧಾನಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ನಿನ್ನೆ ಅವರೊಂದಿಗೆ ಮಾತನಾಡಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ನಮಗೆ ತುಂಬಾ ಉತ್ತಮ ಸಂಬಂಧವಿದೆ ಎಂದು ಹೇಳಿದರು.

ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರ, ನಗರಗಳ ನಾಶ ಮತ್ತು ನಾಗರಿಕರ ಸಾವಿನ ಕುರಿತು ಮಾತನಾಡಿದ ಟ್ರಂಪ್‌, ನೀವು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಮನವೊಲಿಸಿ ಗಾಜಾದ ಕ್ರಮಗಳನ್ನು ನಿಲ್ಲಿಸುವಂತೆ ಕೇಳುತ್ತೀರಾ? ಎಂದು ಪ್ರಶ್ನಿಸಲಾಯಿತು.

ಇದಕ್ಕೆ ಟ್ರಂಪ್‌ ಅಕ್ಟೋಬರ್‌ 7ರ ಘಟನೆಗಳು ಮಾನವ ಇತಿಹಾಸದ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕೊನೆಗೊಳಿಸಲು ನಾವು ಬಯಸುತ್ತೇವೆ, ಆದರೆ ಮೊದಲು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಯುರೋಪಿಯನ್‌ ರಾಷ್ಟ್ರಗಳು ಇನ್ನೂ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ಟೀಕಿಸುತ್ತಾ, ಇಂತಹ ಕ್ರಮಗಳು ಯುದ್ಧದಲ್ಲಿ ಮಾಸ್ಕೋವನ್ನು ಏಕಾಂಗಿಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ರಷ್ಯಾದ ತೈಲ ವ್ಯವಹಾರದ ಬಗ್ಗೆ ಹಿಂದೆ ಹಲವು ಬಾರಿ ಕಠಿಣ ಟೀಕೆ ಮಾಡಿದರೂ, ಈ ಬಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮಗೆ ಇರುವ ಆಪ್ತ ಸಂಬಂಧವನ್ನು ಒತ್ತಿ ಹೇಳಿದರು. ಜಾಗತಿಕ ತೈಲ ಬೆಲೆಗಳನ್ನು ನಿಯಂತ್ರಿಸುವುದೇ ರಷ್ಯಾವನ್ನು ನೆಲೆಗೊಳ್ಳುವಂತೆ ಮಾಡುವ ಪ್ರಮುಖ ಮಾರ್ಗವೆಂದು ಟ್ರಂಪ್‌ ಸೂಚಿಸಿದರು.

ಬೆಂಗಳೂರಿನ ರಸ್ತೆಗುಂಡಿಗಳಿಗೆ ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ಆರಂಭ

ಬೆಂಗಳೂರು, ಸೆ.19- ಪ್ರತಿಷ್ಠಿತ ಸಂಸ್ಥೆಗಳು ನಗರವನ್ನು ಖಾಲಿ ಮಾಡುವ ಎಚ್ಚರಿಕೆ ನೀಡಿದ ನಂತರ ಇಲ್ಲಿನ ಗಂಡಾಗುಂಡಿ ರಸ್ತೆಗಳನ್ನು ದುರಸ್ತಿ ಮಾಡುವ ಕಾರ್ಯ ಇಂದಿನಿಂದ ಆರಂಭವಾಗಲಿವೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರ ಆದೇಶದಂತೆ ಇಂದಿನಿಂದ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಗುಂಡಿ ಮುಚ್ಚುವ ಕಾರ್ಯ ಶುರುವಾಗಲಿದೆ.ನಗರದಲ್ಲಿ ಇದುವರೆಗೂ ಸಾವಿರಾರು ಗುಂಡಿಗಳು ಪತ್ತೆಯಾಗಿವೆ. ಹೀಗಾಗಿ ಪ್ರತಿ ನಗರ ಪಾಲಿಕೆಯ ಅಯುಕ್ತರ ನೇತೃತ್ವದಲ್ಲಿ ಗುಂಡಿ ಮುಚ್ಚುವ ಕಾರ್ಯ ಆರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.

ಮಹದೇವಪುರ, ಸರ್ಜಾಪುರ ಮತ್ತು ಬೆಳ್ಳಂದೂರು ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಅ ಪ್ರದೇಶಗಳಲ್ಲಿ ಸದ್ಯ ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗುವುದು. ಮೆಟ್ರೋ ಕಾಮಗಾರಿ ಮುಗಿದ ನಂತರ ಅಲ್ಲಿನ ರಸ್ತೆಗಳಿಗೆ ವೈಟ್‌ ಟ್ಯಾಪಿಂಗ್‌ ಮಾಡ್ತಿವಿ ಉಳಿದಂತೆ ನಗರದ ಅರ್ಧಭಾಗದ ರಸ್ತೆ ಗುಂಡಿಗಳನ್ನು ಮೂರು ದಿನಗಳಲ್ಲಿ ಮುಚ್ಚುತ್ತೇವೆ ಎಂದು ಮಹೇಶ್ವರ್‌ ರಾವ್‌ ಭರವಸೆ ನೀಡಿದ್ದಾರೆ.

ಅಲ್ಲಿಯವರೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.ಆಯಾ ಪ್ರದೇಶಗಳ ಪ್ರತಿ ರಸ್ತೆಗಳಿಗೆ ಸ್ಥಳೀಯ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಆ ಸಂದರ್ಭದಲ್ಲಿ ತಮಗೆ ಕಂಡು ಬರುವ ಗುಂಡಿಗಳನ್ನು 24 ಗಂಟೆಗಳ ಒಳಗೆ ಮುಚ್ಚಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಗುಂಡಿ ಮುಚ್ಚಿದ ನಂತರ ಅದರ ಛಾಯಾಚಿತ್ರಗಳನ್ನು ಅಯುಕ್ತರ Whatsapp ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್‌ ಮಾಡಬೇಕು..ಒಂದು ವೇಳೆ ಗುಂಡಿ ಮುಚ್ಚಿಲ್ಲ ಅಂದ್ರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮಹೇಶ್ವರ್‌ ರಾವ್‌ ಅವರ ಈ ಎಚ್ಚರಿಕೆ ನಂತರವಾದರೂ ಸ್ಥಳೀಯ ಅಧಿಕಾರಿಗಳು ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸುವೇ ಅಥವಾ ಅದೇ ಉದಾಸೀನ ಭಾವ ಮುಂದುವರೆಸುವರೇ ಎನ್ನುವುದಕ್ಕೆ ಒಂದೆರಡು ದಿನಗಳಲ್ಲಿ ಉತ್ತರ ಸಿಗಲಿದೆ.

ಡಿಸಿಎಂ ಡಿಕೆಶಿ ವಿರುದ್ಧ ಅಶ್ವತ್ಥನಾರಾಯಣ್‌ ಆಕ್ರೋಶ

ಬೆಂಗಳೂರು,ಸೆ.19- ಹಲವು ವರ್ಷಗಳಿಂದ ಅನಾನುಕೂಲಗಳನ್ನು ಎದುರಿಸಿದ ಕಂಪೆನಿಯು ಬೆಂಗಳೂರಿನ ಕುಂದುಕೊರತೆ, ವಿಫಲತೆಗಳ ಕುರಿತು ಮಾತನಾಡಿದರೆ ರಾಜ್ಯ ಸರಕಾರಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ್‌ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಕಂಪೆನಿಗೆ ಬೇಕಿದ್ದರೆ ಇರಿ, ಇಲ್ಲದಿದ್ದರೆ ಹೋಗಿ ಎನ್ನುವುದಾದರೆ, ಇದ್ಯಾವ ಸಂಸ್ಕೃತಿ? ಇದು ಜನಪರ ಸರಕಾರದ ಮಾತುಗಳೇ? ಎಂದು ಕೇಳಿದರು. ಈ ದುರಹಂಕಾರದ ಮಾತು ಬಿಟ್ಟು, ಜನಪರವಾಗಿ ಕೆಲಸ ಮಾಡಿ ವಿಶ್ವಾಸ ಮೂಡಿಸಬೇಕು ಎಂದು ಆಗ್ರಹಿಸಿದರು.

ಸರಕಾರ ಎಂಬುದು ಜನಪರವಾಗಿರಬೇಕು. ಆಡಳಿತದಲ್ಲಿ ಸೌಜನ್ಯ, ಜನಪರ ಕಾಳಜಿ ಇರಬೇಕು. ಆದರೆ, ಕಾಂಗ್ರೆಸ್ಸಿನ ರಾಜ್ಯ ಸರಕಾರಕ್ಕೆ ಅಧಿಕಾರ ತಲೆಗೆ ಹತ್ತಿದೆ. ದುರಹಂಕಾರದ ಮಾತು ಆಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನರು ಎತ್ತಿ ಹಿಡಿದಾಗ ಅದನ್ನು ಒಪ್ಪಿಕೊಳ್ಳುವ ಸೌಜನ್ಯ, ಸಂಸ್ಕೃತಿ ಅವರಲ್ಲಿಲ್ಲ ಎಂದು ದೂರಿದರು.

ಬೆಂಗಳೂರು ವಿಶ್ವದಲ್ಲೇ ಮಾನ್ಯತೆ ಪಡೆದ ಹೆಮೆಯ ನಗರ; ಉದ್ಯಮಶೀಲತೆ, ತಂತ್ರಜ್ಞಾನ, ಸ್ಟಾರ್ಟಪ್‌ಗೆ ಹೆಸರುವಾಸಿಯಾಗಿದೆ. ಎಲ್ಲ ಪ್ರಧಾನಮಂತ್ರಿಗಳು, ಮಾನ್ಯ ರಾಷ್ಟ್ರಪತಿಗಳು, ವಿಶ್ವ ನಾಯಕರು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಾರೆ. ಬೆಂಗಳೂರಿನ ವೈಫಲ್ಯವನ್ನು ತಿಳಿಸಿ, ಕುಂದುಕೊರತೆ ಹೇಳಿದಾಗ ಅದನ್ನು ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಅವರು ಆಕ್ಷೇಪಿಸಿದರು.

ಮಧ್ಯರಾತ್ರಿಯೇ ಆಪರೇಷನ್‌ ಸಿಂಧೂರ್‌ ನಡೆದದ್ದೇಕೆ..? ಗುಟ್ಟು ಬಿಟ್ಟುಕೊಟ್ಟ ಸಿಡಿಎಸ್ ಅನಿಲ್‌ ಚೌಹಾನ್‌

ರಾಂಚಿ,ಸೆ.19- ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ಪ್ರತಿಕಾರವಾಗಿ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಿಒಕೆ ಮೇಲೆ ನಡೆಸಿದ ಅಪರೇಷನ್‌ ಸಿಂಧೂರ ಕಾರ್ಯಾಚಾರಣೆಯನ್ನು ಮಧ್ಯರಾತ್ರಿಯೇ ಏಕೆ ನಡೆಸಲಾಯಿತು ಎಂಬ ಗುಟ್ಟು ಕೊನೆಗೂ ರಟ್ಟಾಗಿದೆ.

ಭಾರತದ ರಕ್ಷಣಾ ಸೇನಾ ಸಿಬ್ಬಂದಿ ಜನರಲ್‌ ಅನಿಲ್‌ ಚೌಹಾನ್‌ ಅವರು ರಾಂಚಿಯಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಆಪರೇಷನ್‌ ಸಿಂದೂರದ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಮೇ 7 ರಾತ್ರಿ ಪಾಕಿಸ್ತಾನದ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ಭಾರತ ಏಕಾಏಕಿ ದಾಳಿ ಮಾಡಿ 9 ಉಗ್ರನೆಲೆಗಳನ್ನು ಸುಟ್ಟುಬೂದಿ ಮಾಡುತ್ತೆ. ಆದರೆ ಈ ದಾಳಿ ಮಧ್ಯರಾತ್ರಿ ನಂತರ (ರಾತ್ರಿ 1 ಗಂಟೆಯಿಂದ 1:30 ಗಂಟೆಯೊಳಗೆ) ಏಕೆ ಮಾಡಿದೆ ಎಂಬುದನ್ನು ವಿವರಿಸಿದರು.

ರಾತ್ರೋರಾತ್ರಿ ವೈಮಾನಿಕ ದಾಳಿ ನಡೆಸುವುದಕ್ಕೆ ಮುಖ್ಯವಾಗಿ ಎರಡು ಪ್ರಮುಖ ಕಾರಣಗಳಿವೆ ಎಂದು ಹೇಳಿದ ಚೌಹಾಣ್‌ ಮೊದಲನೆಯದಾಗಿ, ರಾತ್ರಿಯ ವೇಳೆಯೂ ಸಹ ನಮ ತಂತ್ರಜ್ಞಾನದ ಮೂಲಕ ಸ್ಪಷ್ಟ ಚಿತ್ರಣವನ್ನು ಪಡೆಯುವ ವಿಶ್ವಾಸ ನಮಗಿತ್ತು. ಎರಡನೇಯದಾಗಿ, ಅಲ್ಲಿನ ಸಾಮಾನ್ಯ ಜನರಿಗೆ ಯಾವುದೇ ಹಾನಿಯಾಗದಂತೆ, ಸಾವುಗಳು ಸಂಭವಿಸದಂತೆ ತಡೆಯುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು.

ಪಾಕಿಸ್ತಾನದ ಮೇಲೆ ದಾಳಿ ಮಾಡುವುದಕ್ಕೆ ಉತ್ತಮ ಸಮಯ ಬೆಳಿಗ್ಗೆ 5:30 ರಿಂದ 6:00 ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಹೇಳುತ್ತಾರೆ. ಆದರೆ ಬೆಳಗಿನ ಪ್ರಾರ್ಥನೆಯಿಂದಾಗಿ ಸಾಕಷ್ಟು ನಾಗರಿಕರು ಇದೇ ವೇಳೆಯಲ್ಲಿ ಸಂಚಾರ ಮಾಡುತ್ತಿದ್ದರು.

ಬಹವಾಲ್ಪುರ್‌ ಮತ್ತು ಮುರಿಡ್ಕೆಯ ಆ ಸಮಯದಲ್ಲಿ, ಮೊದಲ ಅಜಾನ್‌ ಅಥವಾ ಮೊದಲ ಪ್ರಾರ್ಥನೆ ನಡೆಯುತ್ತದೆ, ಆ ಸಮಯದಲ್ಲಿ ಸಾಕಷ್ಟು ನಾಗರಿಕರ ಸಂಚಾರ ಇರುತ್ತೆ, ಒಂದು ವೇಳೆ ಈ ಸಂದರ್ಭದಲ್ಲಿ ದಾಳಿ ಮಾಡಿದ್ದರೆ ಅನೇಕ ಜನರು ಸಾವುನೋವುಗಳನ್ನು ಎದುರಿಸಬೇಕಿತ್ತು. ಆದರೆ ನಮ ಗುರಿ ಭಯೋತ್ಪಾದಕರು ಮತ್ತು ಅವರ ನೆಲೆಗಳಾಗಿತ್ತು. ಅದಕ್ಕಾಗಿಯೇ ನಾವು ಮಧ್ಯರಾತ್ರಿ ನಂತರ ಅಂದರೆ 1:00 ರಿಂದ 1:30 ರ ನಡುವಿನ ಸಮಯವನ್ನು ಆರಿಸಿಕೊಂಡಿದ್ದೇವೆ ಎಂದು ಬಹಿರಂಗಪಡಿಸಿದರು.

2025 ಮೇ 7ರ ರಾತ್ರೋರಾತ್ರಿ, ಏಪ್ರಿಲ್‌ 22 ರಂದು ಜಮುಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಆಪರೇಷನ್‌ ಸಿಂದೂರ್‌ ಮೂಲಕ ಪಾಕಿಸ್ತಾನವನ್ನು ಗಢಗಢ ನಡುಗಿಸಿತ್ತು.

ಪಾಕಿಸ್ತಾನದ ಅಹಂಕಾರವನ್ನೂ ಆ ಒಂದು ರಾತ್ರಿ ಭಾರತೀಯ ಸೇನೆ ಸುಟ್ಟು ಭಸ ಮಾಡಿತ್ತು. ಪಾಕಿಸ್ತಾನ ತನ್ನ ಭೂಮಿಯಲ್ಲಿ ಜಾಗ ಕೊಟ್ಟು, ಸಾಕಿ ಸಲುಹಿದ್ದ ಉಗ್ರರ ನೆಲೆಯನ್ನು ಭಾರತ ಕೆಲವೇ ಕ್ಷಣಗಳಲ್ಲಿ ಧ್ವಂಸ ಮಾಡಿತ್ತು. ಅದೇ ಪಾಕಿಸ್ತಾನದ ವಿರುದ್ಧ ಭಾರತದ ಮಹತ್ವದ ಕಾರ್ಯಾಚರಣೆ ಆಪರೇಷನ್‌ ಸಿಂದೂರ್‌. ಭಾರತದ ಪರಾಕ್ರಮವನ್ನು ನೋಡಿ ಇಡೀ ದೇಶವೇ ನಿಬ್ಬೆರಗಾಗಿತ್ತು. ಭಾರತ ಕೊಟ್ಟ ಉತ್ತರಕ್ಕೆ ಪಾಕಿಸ್ತಾನ ಕೊನೆಗೂ ಅಂಗಲಾಚಿ ಕದನ ವಿರಾಮಕ್ಕೆ ಬೇಡಿಕೊಳ್ಳಬೇಕಾಯಿತು.

ಕುತೂಹಲ ಕೆರಳಿಸಿದ ಸುರ್ಜೇವಾಲ, ಸಿಎಂ, ಡಿಸಿಎಂ ಚರ್ಚೆ

ಬೆಂಗಳೂರು, ಸೆ.19- ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ಚರ್ಚೆ ನಡೆಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ, ಜಾತಿ ಸಮೀಕ್ಷೆ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಸಚಿವ ಸಂಪುಟ ಪುನರ್‌ರಚನೆಯಂತಹ ಸೂಕ್ಷ್ಮ ಸನ್ನೀವೇಶದಲ್ಲಿ ಸುರ್ಜೇವಾಲ ಅವರ ಮಧ್ಯಪ್ರವೇೕಶ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಮತಗಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌‍ ಹೈಕಮಾಂಡ್‌ ಮುಂದಿನ ದಿನಗಳಲ್ಲಿ ಕೆಂದ್ರ ಚುನಾವಣಾ ಆಯೋಗದಿಂದ ರಾಜ್ಯದಲ್ಲಿ ನಡೆಯಬಹುದಾದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಮೇಲೆ ನಿಗಾ ವಹಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರಾಜ್ಯ ನಾಯಕರ ಜೊತೆ ಸಮಾಲೋಚನೆ ನಡೆಸಿದೆ.

ಪ್ರತಿಯೊಂದು ಬೂತ್‌ ಮಟ್ಟಕ್ಕೂ ಪಕ್ಷದಿಂದ ಏಜೆಂಟ್‌ರನ್ನು ನಿಯೋಜಿಸಬೇಕು. ಸ್ಥಳೀಯವಾಗಿ ಯಾರ ಹೆಸರನ್ನು ಸೇರಿಸಲಾಗುತ್ತಿದೆ ಹಾಗೂ ಕೈಬಿಡುತ್ತಿರುವವರ ಹೆಸರು ಯಾರವು? ಎಂಬ ಬಗ್ಗೆ ಜಾಗೃತರಾಗಿರಬೇಕು. ಉಳಿದಂತೆ ಬಿಜೆಪಿಯವರು ಆಯೋಗದ ಮೇಲೆ ಪ್ರಭಾವ ಬೀರಿ ಬೇರೆ ರೀತಿಯ ತಂತ್ರಗಾರಿಕೆಗಳನ್ನು ಅನುಸರಿಸಬಹುದು ಎಂಬ ಅನುಮಾನಗಳಿದ್ದು, ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಬೇಕು ಎಂದು ಸುರ್ಜೇವಾಲ ಸೂಚನೆ ನೀಡಿದ್ದಾರೆ.

ನಗರ ಹಾಗೂ ಗ್ರಾಮೀಣಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ರಾಜ್ಯ ಚುನಾವಣಾ ಆಯೋಗ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಇದರ ಜೊತೆಗೆ ಕೇಂದ್ರ ಚುನಾವಣಾ ಆಯೋಗ ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮತದಾರರ ಪಟ್ಟಿ ಪರಿಷ್ಕರಿಸಲು ಮುಂದಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲಗಳಾಗಬಾರದು ಮತ್ತು ಲೋಪಗಳಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಚರ್ಚೆಗಳಾಗಿವೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಕರ್ನಾಟಕದ ಮಹದೇವಪುರ ಹಾಗೂ ಅಳಂದ ವಿಧಾನಸಭಾ ಕ್ಷೇತ್ರದ ಮತಗಳ್ಳತನ ಬಗ್ಗೆ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ. ಈ ವಿಚಾರವನ್ನು ರಾಜ್ಯ ನಾಯಕರು ಮತ್ತಷ್ಟು ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕು. ಹೋರಾಟದ ಮೂಲಕ ಚುನಾವಣಾ ಆಯೋಗದ ಮೇಲೆ ಒತ್ತಡ ತಂದು ತನಿಖೆಗೆ ಅಗತ್ಯ ಸಹಕಾರ ನೀಡಲು ಪ್ರೇರೇಪಿಸಬೇಕೆಂದು ಸುರ್ಜೇವಾಲ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತರಿಗೆ ಆಧ್ಯತೆ ನೀಡುವಂತೆ ತಾಕೀತು ಮಾಡಲಾಗಿದೆ.

ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಸಕಾಲಿಕ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಆ ಸಂದರ್ಭದಲ್ಲಿ ಹೈಕಮಾಂಡ್‌ ಜೊತೆ ಸಮಾಲೋಚಿಸ ಬೇಕೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.ನಿಗಮ ಮಂಡಳಿಯ ನೇಮಕಾತಿಗೆ ಶೀಘ್ರ ಕ್ರಮ ತೆಗೆದುಕೊಳ್ಳಬೇಕೆಂದು ಸುರ್ಜೇವಾಲ ಹೇಳಿದ್ದು ಈ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.