Thursday, November 6, 2025
Home Blog Page 98

ಜಿಎಸ್‌‍ಟಿ ಪರಿಷ್ಕರಣೆ ಬೆನ್ನಲ್ಲೇ ನಂದಿನಿ ಉತ್ಪನ್ನಗಳ ದರ ಇಳಿಕೆ ಸಾಧ್ಯತೆ..?

ಬೆಂಗಳೂರು,ಸೆ.19- ಕೇಂದ್ರ ಸರ್ಕಾರವು ಸರಕು ಸೇವಾ ತೆರಿಗೆ (ಜಿಎಸ್‌‍ಟಿ) ಪರಿಷ್ಕರಣೆ ಮಾಡಿ ದೇಶದ ಜನತೆಗೆ ಬೆಲೆ ಏರಿಕೆ ಬಿಸಿ ತಗ್ಗಿಸಿದ ಬೆನ್ನಲ್ಲೇ ಸೋಮವಾರದಿಂದಲೇ (ಸೆ.22) ಅನ್ವಯವಾಗುವಂತೆ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಕೆಎಂಎಫ್‌ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ ಸಾಧ್ಯತೆಯಿದೆ. ದರ ಇಳಿಕೆ ಸಂಬಂಧ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ಕೂಡ ನಡೆಸಲಿದೆ.ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌‍ ಟಿಯನ್ನ ಶೇ.12ರಿಂದ 5ಕ್ಕೆ ಇಳಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಮೊಸರು, ತುಪ್ಪ, ಬೆಣ್ಣೆ, ಲಸ್ಸಿ ಸೇರಿದಂತೆ ನಂದಿನಿಯ ವಿವಿಧ ಉತ್ಪನ್ನಗಳ ದರ ಇಳಿಕೆಯಾಗಲಿದೆ ಎನ್ನಲಾಗಿದೆ.

ಬೆಣ್ಣೆ, ತುಪ್ಪ, ಚೀಸ್‌‍ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.
ಪನ್ನಿರ್‌ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್‌ ಲೈಫ್‌) ಮೊದಲು 5% ರಷ್ಟು ಜಿಎಸ್‌‍ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.

ಮೊಸರು ದರ ಇಳಿಕೆ ಸಾಧ್ಯತೆ: ಮೊಸರಿನ ದರ ಲೀಟರ್‌ಗೆ 4 ರೂಪಾಯಿ ವರೆಗೆ ಕಡಿಮೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧಿಕಾರಿಗಳ ಜೊತೆ ಸಭೆ ಬಳಿಕ ನಿರ್ಧಾರ ತೆಗೆದುಕೊಳ್ಳಲಿದ್ದು, ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೊಳಿಸುವಂತೆ ಮಾರಾಟಗಾರರಿಗೆ ಸೂಚನೆ ನೀಡುವ ಸಾಧ್ಯತೆ ಇದೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌‍ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌‍ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಗ್ರಾಹಕರಿಗೆ ಸ್ವಲ್ಪ ಮಟ್ಟಿಗೆ ಹೊರೆ ಕಡಿಮೆಯಾಗಿದೆ.

ಸೆ.22 ರಿಂದ ಇಳಿಕೆ ಯಾಕೆ?
ಸೆಪ್ಟೆಂಬರ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌‍ಟಿ ಕೌನ್ಸಿಲ್‌ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದವು.2017ರಲ್ಲಿ ಜಾರಿಯಾದ ಜಿಎಸ್‌‍ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್‌ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್‌್ಟ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.

ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌‍ಟಿ ಕೌನ್ಸಿಲ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99%ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಅಮೂಲ್‌ ಹಾಲಿನ ಬೆಲೆ ಇಳಿಯುತ್ತಾ?
ಸೆಪ್ಟೆಂಬರ್‌ 22 ರಿಂದ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌‍ಟಿ) ದರ ತರ್ಕಬದ್ಧಗೊಳಿಸುವಿಕೆ ಜಾರಿಗೆ ಬಂದ ನಂತರ ಹಾಲಿನ ಬೆಲೆಗಳು ಕಡಿಮೆಯಾಗುತ್ತವೆ ಎಂಬ ಊಹಾಪೋಹ ಹರಿದಾಡುತ್ತಿದೆ. . ಈ ವಿಷಯದ ಕುರಿತು ಮಾತನಾಡಿರುವ ಅಮುಲ್‌ ಉತ್ಪನ್ನಗಳನ್ನು ಮಾರಾಟ ಮಾಡುವ ಸಂಸ್ಥೆಯಾದ ಗುಜರಾತ್‌ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ (ಜಿಸಿಎಂಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಜಯೆನ್‌ ಮೆಹ್ತಾ, ಪೌಚ್‌ ಮತ್ತು ಪ್ಯಾಕ್‌ ಮಾಡಿದ ಹಾಲಿನ ಬೆಲೆಗಳು ಬದಲಾಗುವುದಿಲ್ಲ ಎಂದಿದ್ದಾರೆ.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್‌‍ಟಿ ಜಾರಿಗೊಳಿಸಲಾಗಿತ್ತು. ಇದಾದ ಬಳಿಕ 2022ರಲ್ಲಿ ಜಿಎಸ್‌‍ಟಿಯನ್ನು ಶೇ 12ಕ್ಕೆ ಹೆಚ್ಚಿಸಲಾಗಿತ್ತು. ಈಗ ತೆರಿಗೆ ದರ ಕಡಿಮೆ ಮಾಡಿರುವುದರಿಂದ ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಹೊರೆ ಕಡಿಮೆಯಾಗಲಿದೆ. ಈಗಾಗಲೇ ಜಿಎಸ್‌‍ಟಿ ಕಡಿಮೆಯಾಗಿರುವ ಉತ್ಪನ್ನಗಳ ದರ ನಿಗಧಿ ಸಂಬಂಧ ಕೆಎಂಎಫ್‌ ಕೆಲಸ ಶುರು ಮಾಡಿದ್ದು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ಅಳಂದ ಮತಗಳ್ಳತನದ ಕುರಿತು ಚುನಾವಣಾ ಆಯೋಗದಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ : ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಸೆ.19- ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರ ಮತಗಳ್ಳತನದ ಬಗ್ಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗದಿಂದ ಸಮರ್ಪಕ ಸ್ಪಷ್ಟನೆ ಸಿಕ್ಕಿಲ್ಲ ಎಂದು ಕಾಂಗ್ರೆಸ್‌‍ ಆಕ್ಷೇಪಿಸಿದ್ದು, ಸಿಐಡಿ ತನಿಖೆಗೆ ಅಗತ್ಯವಾದ ಮಾಹಿತಿ ನೀಡದೆ ಸುಳ್ಳು ಹೇಳಲಾಗುತ್ತಿದೆ ಎಂದು ಕಿಡಿಕಾರಿದೆ.

ಕಾಂಗ್ರೆಸ್‌‍ ಕಚೇರಿಯಲ್ಲಿಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ಖರ್ಗೆ, ಅಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌ ಜಂಟಿ ಸುದ್ದಿಗೋಷ್ಠಿಯಲ್ಲಿ ರಾಹುಲ್‌ಗಾಂಧಿ ಆರೋಪಕ್ಕೆ ಪೂರಕ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಆರಂಭದಲ್ಲಿ ಮಾತನಾಡಿದ ಬಿ.ಆರ್‌. ಪಾಟೀಲ್‌ ಅವರು, 2023ರ ವಿಧಾನಸಭೆ ಚುನಾವಣೆಗೂ ಮುನ್ನ ತಮ ಪಕ್ಷದ ಕಾರ್ಯಕರ್ತ ವಿಜಯ್‌ಕುಮಾರ್‌ ಕರೆ ಮಾಡಿ, ನನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಡಿಲಿಟ್‌ ಮಾಡಲಾಗಿದೆ ಎಂದು ಬಿಎಲ್‌ಓ ಹೇಳಿರುವುದಾಗಿ ತಿಳಿಸಿದರು. ಆತಂಕಗೊಂಡ ತಾವು ಪರಿಶೀಲಿಸಿದಾಗ 6018 ಹೆಸರುಗಳ ಡಿಲಿಟ್‌ಗೆ ಅರ್ಜಿ ಬಂದಿರುವುದು ಪತ್ತೆಯಾಯಿತು.

ಈ ಬಗ್ಗೆ ಕಲಬುರಗಿ ಜಿಲ್ಲಾಧಿಕಾರಿ, ಅಳಂದ ತಹಶೀಲ್ದಾರ್‌, ರಾಜ್ಯ ಮುಖ್ಯಚುನಾವಣಾಧಿಕಾರಿ, ಕೇಂದ್ರ ಮುಖ್ಯ ಚುನಾವಣಾಧಿಕಾರಿಗಳಿಗೆ ಹಂತಹಂತವಾಗಿ ದೂರು ನೀಡಲಾಯಿತು. ಆಗ ಹೆಸರು ಡಿಲಿಟ್‌ ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದರು. ಇಲ್ಲದೇ ಹೋದರೆ ಹೆಸರುಗಳು ಡಿಲಿಟ್‌ ಆಗಿ ನಾನು ಸೋಲುತ್ತಿದ್ದೆ ಎಂದು ಹೇಳಿದರು.

ನಿವೃತ ಶಿಕ್ಷಕ ಸೂರ್ಯಕಾಂತ್‌ ಗೋವಿಂದ್‌ ಮತ್ತು ಗೋದಬಾಯಿ ಎಂಬ ಅನಕ್ಷರಸ್ತ ಮಹಿಳೆ ಹೆರಿನಲ್ಲಿ ತಲಾ 12 ಜನರ ಹೆಸರು ಡಿಲಿಟ್‌ ಮಾಡಲು ಫಾರಂ ನಂ-7 ಸಲ್ಲಿಕೆಯಾಗಿವೆ. ಇದು ಅರ್ಜಿ ಸಲ್ಲಿಸಿದವರಿಗೂ ಗೊತ್ತಿಲ್ಲ, ಹೆಸರು ಡಿಲಿಟ್‌ ಆಗಬೇಕಾದವರಿಗೂ ಮಾಹಿತಿ ಇಲ್ಲ ಎಂದು ವಿವರಿಸಿದರು.

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಮತದಾರರ ಹೆಸರು ಡಿಲಿಟ್‌ ಮಾಡಿರುವುದನ್ನು ತಾನೇ ಪತ್ತೆ ಹಚ್ಚಿದ್ದಾಗಿ ಚುನಾವಣಾ ಆಯೋಗ ಹೇಳಿಕೊಳ್ಳುತ್ತಿದೆ, ಇದು ಸುಳ್ಳು. ಬಿ.ಆರ್‌. ಪಾಟೀಲ್‌ ಮತ್ತು ನಾವು ದೂರು ನೀಡಿದ್ದನ್ನು ಆಧರಿಸಿ ಅಳಂದ ಕ್ಷೇತ್ರದ ಚುನಾವಣಾ ಆಧಿಕಾರಿಯಾಗಿದ್ದ ಕಲಬುರಗಿ ಉಪವಿಭಾಗಾಧಿಕಾರಿ ಮಮತಾ ಅವರು ಪೊಲೀಸರಿಗೆ ದೂರು ನೀಡಿದ್ದರು.
ಎಫ್‌ಐಆರ್‌ನಲ್ಲಿ ಮಮತಾ ಅವರು ಬಿ.ಆರ್‌.ಪಾಟೀಲ್‌ ಅವರ ಮಾಹಿತಿ ಅನುಸಾರ ದೂರು ನೀಡಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಸಚಿವರು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಮತದಾರರ ಹೆಸರುಗಳನ್ನು ಡಿಲಿಟ್‌ ಮಾಡಲು 6118 ಸಲ್ಲಿಕೆಯಾಗಿದ್ದವು. ಅದರ ತನಿಖೆಗೆ ಆಯೋಗ ಸಹಕರಿಸಿಲ್ಲ. ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದಾಗ ಫಾರಂ ನಂ-7 ಜೊತೆಯಲ್ಲಿ ನೀಡಲಾಗಿರುವ ಮೊಬೈಲ್‌ ನಂಬರ್‌ಗಳು ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಸೇರಿದ್ದಾಗಿವೆ ಎಂದು ವಿವರಿಸಿದರು.

2023ರ ಫೆ. 21ರಂದೇ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ದಾಖಲೆಗಳ್ನು ಒದಗಿಸಿರುವುದಾಗಿ ಆಯೋಗ ನಿನ್ನೆ ಹೇಳಿಕೆ ನೀಡಿದೆ ಇದು ಸಂಪೂರ್ಣ ಸುಳ್ಳು. ಮಾಹಿತಿ ನೀಡಿದ್ದೇ ಆಗಿದ್ದರೆ ಇತ್ತೀಚೆಗೆ 2025ರ ಫೆ.4 ರಂದು ರಾಜ್ಯ ಚುನಾವಣಾ ಮುಖ್ಯಾಧಿಕಾರಿಗಳ ಕಚೇರಿಯ ಜಂಟಿ ಆಯುಕ್ತರು, ಕೇಂದ್ರ ಮುಖ್ಯಚುನಾವಣಾ ಆಯುಕ್ತರಿಗೆ ಪತ್ರ ಬರೆದು, ಅಳಂದ ಕ್ಷೇತ್ರದ ಪ್ರಕರಣದಲ್ಲಿ ತನಿಖಾಧಿಕಾರಿ ಕೇಳಿರುವ ಮಾಹಿತಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಅದರ ಜೊತೆಗೆ ಈವರೆಗೂ ನಡೆದಿರುವ ಎಲ್ಲಾ ಪತ್ರವ್ಯವಹಾರಗಳ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ ಎಂದು ಸಚಿವರು ತಿಳಿಸಿದ್ದು, ಈ ಪತ್ರವನ್ನು ಬಿಡುಗಡೆ ಮಾಡಿದರು.

ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಓಟಿಪಿ ಮೂಲ, ಬಳಕೆ ಮಾಡಲಾಗಿರುವ ಐಪಿ ವಿಳಾಸ ಮತ್ತು ಸಲಕರಣೆಗಳ ವಿಳಾಸ ಸೇರಿದಂತೆ 5 ಪ್ರಮುಖ ಅಂಶಗಳ ಮಾಹಿತಿಯನ್ನು ಕೇಳಿದ್ದಾರೆ. ಇದ್ಯಾವುದನ್ನು ಒದಗಿಸದೆ ಆಯೋಗ ತಪ್ಪು ಮಾಡಿದರವರನ್ನು ರಕ್ಷಿಸುವ ಯತ್ನ ನಡೆಸುತ್ತಿದೆ ಎಂದು ದೂರಿದರು.

ರಾಹುಲ್‌ಗಾಂಧಿ ಆನ್‌ಲೈನ್‌ನಲ್ಲಿ ಹೆಸರುಗಳು ಡಿಲಿಟ್‌ ಆಗಿವೆ ಎಂದು ಎಲ್ಲಿಯೂ ಹೇಳಲಿಲ್ಲ. ಆಯೋಗ ಈ ರೀತಿ ದಾರಿ ತಪ್ಪಿಸುವುದನ್ನು ಏಕೆ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಆಯೋಗವನ್ನು ಪ್ರಶ್ನೆ ಮಾಡಿದರೆ ಬಿಜೆಪಿಯ ಕೇಂದ್ರ ಸಚಿವರು, ಸಂಸದರು ಏಕೆ ಉತ್ತರ ನೀಡುತ್ತಿದ್ದಾರೆ. ಇವರೆಲ್ಲಾ ಚುನಾವಣಾ ಆಯೋಗದ ವಕ್ತಾರಿಕೆಯ ಹೊರ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

ಅಕ್ರಮ ನಡೆದಾಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳಿದ್ದವು. ಆಯೋಗ ಮತ್ತು ಜಿಲ್ಲಾಡಳಿತದಲ್ಲಿ ಬಿಜೆಪಿ ಸರ್ಕಾರ ನಿಯೋಜಿಸಿದ್ದ ಅಧಿಕಾರಿಗಳೇ ಕೆಲಸಮಾಡುತ್ತಿದ್ದರು. ಅವರದೇ ಅಧಿಕಾರಿ ಪ್ರಾಥಮಿಕ ವಿಚಾರ ನಡೆಸಿ, ದೂರು ನೀಡಿದ್ದಾರೆ. ಎಫ್‌ಐಆರ್‌ ದಾಖಲಾಗಿದೆ. ಈ ಕನಿಷ್ಠ ಜ್ಞಾನವೂ ಇಲ್ಲದ್ದಂತೆ ಬಿಜೆಪಿಯವರು ರಾಹುಲ್‌ಗಾಂಧಿಯವರ ಸಾಮಾನ್ಯ ಪ್ರಜ್ಞೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಗದಗ : ಭೀಕರ ಅಪಘಾತದಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿ ಮೂವರ ದುರ್ಮರಣ

ಬೆಂಗಳೂರು,ಸೆ.19– ಗದಗ ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಕಾನ್‌ಸ್ಟೇಬಲ್‌ಗಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.ವೈರ್ಲೆಸ್‌‍ ವಿಭಾಗದ ಪೊಲೀಸ್‌‍ ಕಾನ್‌ಸ್ಟೇಬಲ್‌ಗಳಾದ ಅರ್ಜುನ್‌(29), ಈರಣ್ಣ (31) ಹಾಗೂ ಅರ್ಜುನ್‌ ಅವರ ಸಂಬಂಧಿ ರವಿ ನೆಲ್ಲೂರು (43) ಮೃತಪಟ್ಟವರು.

ಕಾನ್‌ಸ್ಟೇಬಲ್‌ ಅರ್ಜುನ್‌ ಅವರು ಹಾವೇರಿ ಕಂಟ್ರೋಲ್‌ ರೂಂ ನಲ್ಲಿ ಹಾಗೂ ಈರಣ್ಣ ಅವರು ಕೊಪ್ಪಳ ಕಂಟ್ರೋಲ್‌ ರೂಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಈ ಇಬ್ಬರು ಕಾನ್‌ಸ್ಟೇಬಲ್‌ಗಳು ಏಳು ವರ್ಷಗಳ ಹಿಂದೆ ಪೊಲೀಸ್‌‍ ಇಲಾಖೆಗೆ ಸೇರಿದ್ದರು.ಈ ಮೂವರು ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದರು. ಈರಣ್ಣ ಅವರು ಕಾರು ಚಾಲನೆ ಮಾಡುತ್ತಿದ್ದರು.

ಇವರ ಕಾರು ಗದಗ ತಾಲ್ಲೂಕಿನ ಹರ್ಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 67 ರಲ್ಲಿ ಹೋಗುತ್ತಿದ್ದಾಗ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕ ದಾಟಿ ಪಕ್ಕದ ರಸ್ತೆಗೆ ನುಗ್ಗಿ ಆ ಮಾರ್ಗದಲ್ಲಿ ಬರುತ್ತಿದ್ದ ಗೋವಾದ ಖಾಸಗಿ ಬಸ್‌‍ಗೆ ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಮೂವರೂ ಮೃತಪಟ್ಟಿದ್ದಾರೆ.

ಅಪಘಾತದ ತೀವ್ರತೆ ಎಷ್ಟಿತೆಂದರೆ ಕಾರಿನ ಬಿಡಿ ಭಾಗಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಗೋವಾ ಬಸ್‌‍ ಚಾಲಕ ದಿಲೀಪ್‌ ಹಾಗೂ ನಿರ್ವಾಹಕ ಹೀರೇಶ್‌ ಅವರು ಬಸ್‌‍ನಿಂದ ಇಳಿದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟಿರುವ ಈ ಇಬ್ಬರು ಕಾನ್‌ಸ್ಟೇಬಲ್‌ಗಳಿಗೂ ಮದುವೆ ನಿಶ್ಚಯವಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಬೇಕಾಗಿದ್ದ ಇವರಿಬ್ಬರು ದುರಂತ ಅಂತ್ಯಕಂಡಿರುವುದು ದುರ್ದೈವ.

ಕಾಂಗ್ರೆಸ್ ಸರ್ಕಾರದ ಜಾತಿ ರಾಜಕೀಯಕ್ಕೆ ‘ಕೈ’ಕಮಾಂಡ್ ಮಧ್ಯ ಪ್ರವೇಶ, ಹೆಚ್ಚಿದ ಕುತೂಹಲ

ಬೆಂಗಳೂರು, ಸೆ.19- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುವ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಗೊಂದಲ ನಿವಾರಣೆಗೆ ಸಮಾರೋಪಾದಿಯ ಚರ್ಚೆಗಳು ನಡೆಯುತ್ತಿದ್ದು ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಸಚಿವರ ಜೊತೆ ಖಾಸಗಿ ಸಮಾಲೋಚನೆ ನಡೆಸಿದರೆ, ಮತ್ತೊಂದೆಡೆ ಹೈಕಮಾಂಡ್‌ ಕೂಡ ಮಧ್ಯ ಪ್ರವೇಶಿಸಿರುವುದು ಕುತೂಹಲ ಕೆರಳಿಸಿದೆ.

ಸಮೀಕ್ಷೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ಇಂದು ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮತ್ತೊಂದು ಸುತ್ತಿನ ಜಟಾಪಟಿಯಾಗಿದೆ.ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ಕಾರ್ಮಿಕ ಸಚಿವ ಸಂತೋಷಲಾಡ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ದಯಾನಂದ್‌, ಹಿಂದುಳಿದ ವರ್ಗಗಳ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು, ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕ್ರಿಶ್ಚಿಯನ್‌ ಉಪಜಾತಿಗಳ ಗೊಂದಲ ನಿವಾರಣೆಗಾಗಿ ಸದರಿ ಕಾಲಂಗಳನ್ನು ತೆಗೆದು ಹಾಕಲು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಭೆಯಲ್ಲಿ ಆಯೋಗದ ಅಧ್ಯಕ್ಷ ಮಧುಸೂದನ್‌ ನಾಯಕ್‌ ಕ್ರಿಶ್ಚಿಯನ್‌ ಉಪಜಾತಿಯ ಕಾಲಂಗಳನ್ನು ತೆಗೆದು ಹಾಕಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ರೀತಿ ಗೊಂದಲಗಳಾದರೆ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು, ನೀವು ರಾಜೀನಾಮೆ ನೀಡುವುದಾದರೆ ನೀಡಬಹುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಧುಸೂದನ್‌ ನಾಯಕ್‌ ಅವರನ್ನು ಮುಖ್ಯಮಂತ್ರಿ ಹಾಗೂ ಸಚಿವ ಎಚ್‌.ಕೆ. ಪಾಟೀಲ್‌ ಸಮಾಧಾನ ಪಡಿದ್ದಾರೆ ಎಂದು ತಿಳಿದು ಬಂದಿದೆ. ಸಮೀಕ್ಷೆಯ ನಮೂನೆಯಲ್ಲಿ ಕ್ರಿಶ್ಚಿಯನ್‌ ಧರ್ಮದೊಂದಿಗೆ ಉಪ ಜಾತಿಗಳ ಕಾಲಂಗಳನ್ನು ತೆಗೆದು ಹಾಕಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿರುವುದಾಗಿ ಹಾಗೂ ನಿಗದಿತ ಸಮಯದಂತೆ ಸೆ.22 ರಿಂದಲೇ ಸಮೀಕ್ಷೆ ಆರಂಭಿಸುವಂತೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.
ಜೊತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಇಂದು ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಕೆ.ಜೆ. ಜಾರ್ಜ್‌ ಅವರ ಜೊತೆ ಚರ್ಚೆ ನಡೆಸಿ ಸಮೀಕ್ಷೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಈ ಹಿಂದೆ ಕಾಂತರಾಜು ಆಯೋಗ ನಡೆಸಿದ್ದ ಸಮೀಕ್ಷೆಯನ್ನು ಸ್ವೀಕರಿಸದಿರಲು ಕಾಂಗ್ರೆಸ್‌‍ ಹೈಕಮಾಂಡ್‌ ಮುಖ್ಯಮಂತ್ರಿಯವರಿಗೆ ಆದೇಶ ನೀಡಿತ್ತು. ಮರು ಸಮೀಕ್ಷೆಗೂ ಸಲಹೆ ನೀಡಿತ್ತು. ಅದರಂತೆ ಹೊಸ ಸಮೀಕ್ಷೆಗೆ ಪ್ರಕ್ರಿಯೆಗಳು ಶುರುವಾಗಬೇಕು ಎನ್ನುವ ಹಂತದಲ್ಲೇ ಮತ್ತಷ್ಟು ಗೊಂದಲಗಳು ಕಂಡು ಬರುತ್ತಿವೆ.ಈ ಹಿನ್ನೆಲೆಯಲ್ಲಿ ರಣದೀಪ್‌ಸಿಂಗ್‌ ಸುರ್ಜೇವಾಲ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಿ ಹೈಕಮಾಂಡ್‌ ಸದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮತ್ತು ಅರ್ಥಾತ್‌ ಜಾತಿಗಣತಿಯ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದವು. ಕೆಲವು ಸಚಿವರ ಏರಿದ ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರಿಶ್ಚಿಯನ್‌ ಉಪಜಾತಿಯ ಮಾಹಿತಿ ಸಂಗ್ರಹಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲ ಸಚಿವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಗತ್ಯವನ್ನೇ ಪ್ರಶ್ನಿಸಿದರು.ಸಮೀಕ್ಷೆಯ ನಮೂನೆಯಲ್ಲಿ ಹೆಚ್ಚುವರಿಯಾಗಿ 331 ಹೊಸ ಜಾತಿಗಳು ಸೇರ್ಪಡೆಯಾಗಿದ್ದು, ಅವುಗಳ ಸಿಂಧುತ್ವದ ಬಗ್ಗೆ ಸಭೆಯಲ್ಲಿ ಸಮಾಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸರ್ಕಾರ ಮೂಲೆಗುಂಪು ಮಾಡಿದೆ. ಮರು ಸಮೀಕ್ಷೆಗೆ ಮುಂದಾಗುತ್ತಿದ್ದಂತೆ ನಾನಾ ರೀತಿಯ ವಿವಾದಗಳು ತಲೆ ಎತ್ತಿವೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಸಚಿವರು ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆ ಬಿಸಿಯಾಗಿದೆ.ಸಮೀಕ್ಷೆಯಲ್ಲಿ ಲಿಂಗಾಯತ ವೀರಶೈವರು ಯಾವ ರೀತಿ ನಮೂದು ಮಾಡಬೇಕೆಂಬುದು ಸ್ಪಷ್ಟವಾಗದೆ ಗೊಂದಲದಲ್ಲಿದ್ದಾರೆ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ.

ಇನ್ನೂ ಕೆಲವರು ಹಿಂದೂ ಎಂದೇ ನಮೂದಿಸಿ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸುವಂತೆ ಚರ್ಚೆ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯಿತ ಎಂದು ನಮೂದಿಸಿದರೆ, ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುತ್ತದೆ.ಸಮುದಾಯದಲ್ಲಿ ಹಲವಾರು ಉಪಜಾತಿಗಳು ತಮ ಜಾತಿಯ ಹೆಸರಿನಲ್ಲಿ ಹಿಂದುಳಿ ವರ್ಗಗಳ ಪ್ರವರ್ಗ ಪ್ರಮಾಣ ಪತ್ರ ಪಡೆದಿದ್ದು ಮೀಸಲಾತಿಗೆ ಅರ್ಹವಾಗಿವೆ. ವೀರಶೈವ ಲಿಂಗಾಯಿತ ಎಂದು ನಮೂದಿಸಿದರೆ, ಮೀಸಲಾತಿ ಪಟ್ಟಿಯಿಂದ ಹೊರಗುಳಿಯಬೇಕಾದ ಸಂಕಷ್ಟ ಎದುರಾಗುತ್ತದೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಆಧಾರ್‌ ಮತ್ತು ಪಾನ್‌ಕಾರ್ಡ್‌ ಸಂಖ್ಯೆ ಜೋಡಣೆಯಾಗುವುದರಿಂದ ಮುಂದಿನ ದಿನಗಳಲ್ಲಿ ಪ್ರಮಾಣ ಪತ್ರಗಳನ್ನು ಪಡೆಯಲು ಸಮಸ್ಯೆಯಾಗಬಹುದು ಎಂಬ ಆತಂಕ ಅನೇಕರಲ್ಲಿದೆ. ಈಗಾಗಿ ಸಮೀಕ್ಷೆಯ ಅಗತ್ಯವೇ ಇಲ್ಲವೆಂಬ ವಾದಗಳು ಕೇಳಿ ಬರುತ್ತಿವೆ.

ನೀರು, ಹಾಲು, ಮೆಟ್ರೋ, ಆಸ್ತಿ-ಕಸದ ತೆರಿಗೆ ಹೆಚ್ಚಿಸಿ ಬೆಂಗಳೂರಿಗೆ ಯಾವ ಸೌಕರ್ಯಗಳನ್ನು ಕಲ್ಪಿಸಿದ್ದೀರಿ..? : ನಿಖಿಲ್ ಪ್ರಶ್ನೆ

ಬೆಂಗಳೂರು,ಸೆ.19- ನೀರು, ಹಾಲು, ಮೆಟ್ರೋ ದರ ಹೆಚ್ಚಳವಲ್ಲದೆ ಆಸ್ತಿ ತೆರಿಗೆ, ಕಸದ ಸೆಸ್‌‍ ಹೊರೆಯನ್ನು ಬೆಂಗಳೂರಿನ ನಾಗರಿಕರಿಗೆ ಹೊರಿಸಿರುವ ರಾಜ್ಯ ಸರ್ಕಾರ ಯಾವ ಮೂಲ ಸೌಕರ್ಯಗಳನ್ನು ಕಲ್ಪಿಸಿದೆ? ಎಂದು ಜೆಡಿಎಸ್‌‍ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪ್ರಶ್ನಿಸಿದರು.

ನಗರದಲ್ಲಿ ರಸ್ತೆಗುಂಡಿಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ಪ್ರತಿ ವಾರ್ಡ್‌ನಲ್ಲೂ ಘನತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದೆ ಗಬ್ಬು ನಾರುತ್ತಿವೆ. ರಾಜ್ಯಕ್ಕೆ ಶೇ.30ರಷ್ಟು ತೆರಿಗೆಯನ್ನು ಬೆಂಗಳೂರು ನಾಗರಿಕರು ನೀಡುತ್ತಿದ್ದಾರೆ. ಆದರೂ ಅಗತ್ಯ ಮೂಲ ಸೌಕರ್ಯ ಏಕೆ ಕಲ್ಪಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹೊರ ವರ್ತುಲ ರಸ್ತೆಯ ಬ್ಲಾಕ್‌ಬಗ್‌ ಕಂಪನಿ ಸಿಇಒ ಅವರು ಮೂಲ ಸೌಕರ್ಯಗಳ ಬಗ್ಗೆ ಎಕ್‌್ಸನಲ್ಲಿ ಪ್ರಸ್ತಾಪಿಸಿದ್ದಾರೆ. ಮೂಲ ಸೌಕರ್ಯವಿಲ್ಲದ್ದರಿಂದ ರಾಜ್ಯದಿಂದ ಹೊರಹೋಗುವ ಮಾತನ್ನಾಡಿದ್ದಾರೆ. ಆದರೆ ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಮೂಲ ಸೌಕರ್ಯ ಒದಗಿಸಲು ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಆಗ್ರಹಿಸಿದರು.

ಬಂಡವಾಳ ಹೂಡಿಕೆಗೆ ಸರ್ಕಾರ ಯಾವ ಮೂಲ ಸೌಲಭ್ಯ ಕಲ್ಪಿಸಿದೆ. ನವೆಂಬರ್‌ ವೇಳೆಗೆ ಗುಂಡಿ ಮುಚ್ಚುವ ಗಡುವು ನೀಡಿ 1100 ಕೋಟಿ ರೂ. ಒದಗಿಸುವುದಾಗಿ ಹೇಳಿದ್ದಾರೆ. ಮೂಲ ಸೌಕರ್ಯವಿಲ್ಲದೆ ಉದ್ಯಮಗಳು ನೆರೆಹೊರೆಯ ರಾಜ್ಯಗಳಿಗೆ ಹೋದರೆ ತೆರಿಗೆ ನಷ್ಟ ಉಂಟಾಗಲಿದೆ. ಜಿಬಿಎ ವ್ಯಾಪ್ತಿಯಲ್ಲಿ ವಾರ್ಷಿಕ 850 ಕೋಟಿ ರೂ. ತೆರಿಗೆ ಪಾವತಿಯಾಗುತ್ತಿದೆ. ಇರುವ ಕಂಪನಿಗಳನ್ನು ಉಳಿಸಿಕೊಂಡು ಹೊಸ ಕಂಪನಿಗಳನ್ನು ಬೆಂಗಳೂರಿಗೆ ಕರೆತರುವ ಪ್ರಯತ್ನವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.

ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರಿನ ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಕೃತಕ ಬುದ್ಧಿಮತ್ತೆ ಯುಗದಲ್ಲಿ ಇದ್ದರೂ ಮೂಲಸೌಕರ್ಯ ಏಕೆ ಕಲ್ಪಿಸಲಾಗುತ್ತಿಲ್ಲ ಎಂಬುದನ್ನು ಸರ್ಕಾರ ಉತ್ತರಿಸಬೇಕು. ಉದ್ಯಮಿಗಳು ಸಾರ್ವಜನಿಕರಿಗಾಗುವ ತೊಂದರೆಗಳ ಬಗ್ಗೆ ದನಿಯೆತ್ತಿದ್ದಾರೆ ಎಂದರು.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು 4,500 ಇವಿ ಬಸ್‌‍ಗಳನ್ನು ಬೆಂಗಳೂರಿಗೆ ನೀಡಿದ್ದರು. ಸರ್ಕಾರದಿಂದ ಕೃತಜ್ಞತೆ ಸಲ್ಲಿಸುವ ಕೆಲಸವಾಗಲಿಲ್ಲ. ಜೆಡಿಎಸ್‌‍ ಆಡಳಿತದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ಪ್ರಶ್ನಿಸಿದ್ದಾರೆ. ಅದರ ಬಗ್ಗೆ ಶ್ವೇತಪತ್ರ ಹೊರಡಿಸಲು ಸಿದ್ಧ. ಉಪಮುಖ್ಯಮಂತ್ರಿ ಸಮಸ್ಯೆ ಬಗೆಹರಿಸುವ ಕಡೆ ಗಮನ ಹರಿಸಲಿ ಎಂದು ಅವರು ಟೀಕಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಐಟಿಬಿಟಿಗೆ 10 ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಿ ಭದ್ರ ಬುನಾದಿ ಹಾಕಿದರು. ಮೈಸೂರು ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಪ್ರಧಾನಿಯಾಗಿ ಬೆಂಗಳೂರಿಗೆ 9 ಟಿಎಂಸಿ ಕಾವೇರಿ ನೀರನ್ನು ಒದಗಿಸಿದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಬಿಬಿಎಂಪಿ ಮಾಡಿದ್ದರು. ಆದರೆ ಈ ಸರ್ಕಾರದ ಅವಧಿಯಲ್ಲಿ ರಾಜರಾಜೇಶ್ವರಿ ನಗರ, ಹೊಸಕೆರೆಹಳ್ಳಿ ಸೇರಿದಂತೆ ವಿವಿಧೆಡೆ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ ಎಂದು ಅವರು ವ್ಯಂಗ್ಯವಾಡಿದರು.

ಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ

ನವದೆಹಲಿ,ಸೆ.19– ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.ಇದರಿಂದ ಬಾನು ಮುಸ್ತಾಕ್‌ ಅವರು ದಸರಾ ಉದ್ಘಾಟನೆಗೆ ಅಡ್ಡಿಯಾಗಿದ್ದ ಕಾನೂನು ತೊಡಕು ಬಹುತೇಕ ನಿವಾರಣೆಯಾದಂತಾಗಿದೆ. ಈಗಾಗಲೇ ಹೈಕೋರ್ಟ್‌ನಲ್ಲೂ ಅರ್ಜಿ ವಜಾಗೊಂಡಿರುವುದು ಉಲ್ಲೇಖನೀಯ.

ಮೈಸೂರು-ಕೊಡುಗು ಮಾಜಿ ಸಂಸದ ಪ್ರತಾಪ್‌ ಸಿಂಹ ಪರವಾಗಿ ಬೆಂಗಳೂರಿನ ಗೌರವ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಆರಂಭದಲ್ಲೇ ವಜಾಗೊಳಿಸಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಒಂದು ಹಂತದಲ್ಲಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಸಂವಿಧಾನದ ಪ್ರಸ್ತಾವನೆ ಏನು ಹೇಳುತ್ತದೆ? ನಾವು ಜಾತ್ಯತೀತತೆ ಒಪ್ಪಿಕೊಂಡ ಮೇಲೆ ಈ ಅರ್ಜಿಯನ್ನು ಪರಿಗಣಿಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು. ಅರ್ಜಿ ವಿಚಾರಣೆಯನ್ನು ತುರ್ತು ವಿಚಾರಣಾ ಪಟ್ಟಿಗೆ ಸೇರಿಸಬೇಕೆಂಬ ಮನವಿಗೆ ಆಶ್ಚರ್ಯ ವ್ಯಕ್ತಪಡಿಸಿದ ಪೀಠ, ಅಷ್ಟೊಂದು ತುರ್ತಿನ ಅಗತ್ಯವಾದರೂ ಏನಿದೆ? ಇದು ಸಾರ್ವಜನಿಕ ಮಹತ್ವದ ಅರ್ಜಿಯೇ ಎಂದು ಪ್ರಶ್ನೆ ಮಾಡಿದರು.

ಇದು ರಿಬ್ಬನ್‌ ಕಟ್‌ ಮಾಡುವ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮವೂ ಅಲ್ಲ. ಸಂಪೂರ್ಣವಾಗಿ ಧಾರ್ಮಿಕ ಹಬ್ಬ. ಈವರೆಗೂ ದಸರಾವನ್ನು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳೇ ಉದ್ಘಾಟನೆ ಮಾಡಿದ್ದಾರೆ ಎಂದು ಅರ್ಜಿದಾರ ಪರ ವಕೀಲರು ಸಮರ್ಥನೆ ಮಾಡಿಕೊಳ್ಳಲು ಮುಂದಾದರು.

ಇದಕ್ಕೆ ಸಿಡಿಮಿಡಿಗೊಂಡ ನ್ಯಾಯಾಧೀಶರು ನೀವು ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದೀರೋ ಇಲ್ಲವೋ? ಅಲ್ಲದೆ ನಿಮಗೆ ಇದು ಅರ್ಥವಾದಂತೆ ಕಾಣುತ್ತಿಲ್ಲ. ನಾವು ಅದನ್ನು ಹೇಳಬೇಕೆ? ಈ ಅರ್ಜಿಯನ್ನು ಯಾವ ಆಧಾರದ ಮೇಲೆ ಸಲ್ಲಿಕೆ ಮಾಡಿದ್ದೀರಿ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.

ಆಗಲೂ ವಕೀಲರು ಸಮರ್ಥನೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಇದು ವಿಚಾರಣೆಗೆ ಯೋಗ್ಯವಲ್ಲ. ಹಾಗಾಗಿ ನಿಮ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಆದೇಶ ಮಾಡಿದರು.
ಇದೇ ದಸರಾ ಹಬ್ಬವನ್ನು ಈ ಹಿಂದೆ ಸಾಹಿತಿ ನಿಸಾರ್‌ ಅಹಮದ್‌ ಉದ್ಘಾಟನೆ ಮಾಡಿದ್ದಾರೆ. ಆಗ ಇಲ್ಲದ ವಿರೋಧ ಈಗೇಕೆ? ಧರ್ಮದ ಆಧಾರದ ಮೇಲೆ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶಿ ಅರ್ಜಿ ವಜಾ ಮಾಡಿದರು.

ಈ ಹಿಂದೆ ಹೈಕೋರ್ಟ್‌ನಲ್ಲಿ ಮೇಲನವಿಯಲ್ಲಿ ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್‌ ತಪ್ಪಾಗಿ ತೀರ್ಪು ನೀಡಿದೆ ಬಾನು ಮುಸ್ತಾಕ್‌ ಹಿಂದೂ ವಿರೋಧಿ ಹೇಳಿಕೆ ನೀಡಿರುವುದರಿಂದ ಅವರ ಭಾಗವಹಿಸುವಿಕೆಯು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ ಈ ಯಾವುದೇ ಅಂಶಗಳನ್ನು ಪರಿಗಣಿಸದೆ ವಜಾಗೊಳಿಸಿತು.

ಈ ವರ್ಷದ ದಸರಾ ಉದ್ಘಾಟನೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದ್ದು, ಬಾನು ಮುಷ್ತಾಕ್‌ ಅವರು ಅಗ್ರ ಪೂಜೆ ನೆರವೇರಿಸುವ ನಿರ್ಧಾರಕ್ಕೆ ವಿರೋಧವಾಗಿ ಬಿಜೆಪಿ ನಾಯಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ನಲ್ಲಿ ಇದು ರಾಷ್ಟ್ರೀಯ ಹಬ್ಬ ಎಂದು ಹೇಳಲಾಗಿದ್ದು, ಅರ್ಜಿ ವಜಾಗೊಂಡಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ನಲ್ಲಿ ಪ್ರತಾಪ್‌ ಸಿಂಹ ಅರ್ಜಿ ವಜಾ!
ಈ ವಿವಾದಕ್ಕೆ ಮೊದಲು ಪ್ರತಾಪ್‌ ಸಿಂಹ ಅವರು ಹೈಕೋಟ್ರ್ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯಲ್ಲಿ ಬಾನು ಮುಷ್ತಾಕ್‌ ಅವರು 2023ರಲ್ಲಿ ಒಂದು ಸಾಹಿತ್ಯ ಸಮೇಳನದಲ್ಲಿ ೞಹಿಂದೂ ವಿರೋಧಿೞ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಲ್ಲದೆ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯುವ ಉದ್ಘಾಟನೆಯಲ್ಲಿ ಹಿಂದೂಯೇತರ ವ್ಯಕ್ತಿಯು ಪೂಜೆ ನೆರವೇರಿಸುವುದು ಆಗಮ ಶಾಸ್ತ್ರದ ನಿಯಮಗಳ ವಿರುದ್ಧವಾಗಿದ್ದು, ಹಿಂದೂ ಭಾವನೆಗಳನ್ನು ದೌರ್ಜನ್ಯ ಮಾಡುತ್ತದೆ ಎಂದು ವಾದಿಸಲಾಗಿತ್ತು. ಮೈಸೂರು ರಾಜವಂಶದ ಪ್ರತಿನಿಧಿಗಳನ್ನು ಸಮಾಲೋಚಿಸದೆ ಆಹ್ವಾನ ನೀಡಿರುವುದು ಸಹ ತಪ್ಪು ಎಂದು ಹೇಳಲಾಗಿತ್ತು. ಅದರೆ ಈ ಅರ್ಜಿ ವಜಾಗೊಂಡಿತ್ತು.

ಹೈಕೋರ್ಟ್‌ ಮುಖ್ಯಪೀಠದಲ್ಲಿ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭೂ ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿ ಸೆಪ್ಟೆಂಬರ್‌ 15ರಂದು ಹೈಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿತ್ತು.

ನ್ಯಾಯಾಲಯವು ತೀರ್ಪಿನಲ್ಲಿ, ದಸರಾ ಉತ್ಸವವು ರಾಜ್ಯ ಸರ್ಕಾರದಿಂದ ಆಶ್ರಯಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಹಿಂದೂಯೇತರ ವ್ಯಕ್ತಿಯ ಭಾಗವಹಿಸುವುದರಿಂದ ಯಾವುದೇ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಬಾನು ಮುಷ್ತಾಕ್‌ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗೌರವಾನ್ವಿತರಾಗಿದ್ದು, ಆಹ್ವಾನ ನೀಡುವ ಸಮಿತಿಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆಂದು ಹೇಳಿ, ಇದು ಸಾಂಸ್ಕೃತಿಕ ಮೌಲ್ಯಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ದೃಢಪಡಿಸಿತ್ತು.

ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ರೋಬೋ ಶಂಕರ್‌ ನಿಧನ

ಬೆಂಗಳೂರು, ಸೆ.19- ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ರೋಬೋ ಶಂಕರ್‌ (46)ಅವರು ತಮ ಇಹಲೋಕದ ಯಾತ್ರೆ ಮುಗಿಸಿದ್ದು, ಇವರ ನಿಧನಕ್ಕೆ ಕಾಲಿವುಡ್‌ನ ಖ್ಯಾತ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

ಚಿತ್ರವೊಂದರ ಶೂಟಿಂಗ್‌ ವೇಳೆಯೇ ರೋಬೋ ಶಂಕರ್‌ ಅವರು ಕುಸಿದು ಬಿದ್ದು ನಿತ್ರಾಣಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.ಈ ಹಿಂದೆ ರೋಬೋ ಶಂಕರ್‌ ಅವರು ಜಾಂಡೀಸ್‌‍ನಿಂದ ಬಳಲಿದ್ದರು. ಆನಂತರ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು.

ಆದರೆ ಈಗ ಮತ್ತೆ ಚೇತರಿಸಿಕೊಂಡಿದ್ದ ಅವರು ಎಂದಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
ರೋಬೋ ಶಂಕರ್‌ ಅವರ ನಿಧನಕ್ಕೆ ಕಾಲಿವುಡ್‌ ನ ಖ್ಯಾತ ಕಲಾವಿದರಾದ ಕಮಲಹಾಸನ್‌, ರಜನಿಕಾಂತ್‌, ವಿಜಯ್‌, ಅಜಿತ್‌, ಕಾರ್ತಿ, ಸಿಂಬು ಖುಷ್ಬೂ, ಸಿಮ್ರಾನ್‌ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಕಂಬನಿ ಮಿಡಿದಿದ್ದಾರೆ.

ಇಂದು ರೋಬೋ ಶಂಕರ್‌ ಅವರ ಅಂತ್ಯಸಂಸ್ಕಾರವು ಇಂದು ನೆರವೇರಿದ್ದು, ಅಪಾರ ಅಭಿಮಾನಿಗಳು, ಕಲಾವಿದರು, ತಂತ್ರಜ್ಞರು ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.

1997ರಲ್ಲಿ ಧರ್ಮಚಕ್ರಂ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದ ರೋಬೋ ಶಂಕರ್‌, ಮಾರಿ, ಮಾರಿ 2, ವಿಶ್ವಾಸಂ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ ದಿ ಲಯನ್‌ ಕಿಂಗ್‌, ಮುಫಾಸಾ, ದಿ ಲಯನ್‌ ಕಿಂಗ್‌ ಎಂಬ ಅನಿಮೇಷನ್‌ ಸಿನಿಮಾಗಳಿಗೆ ಕಂಠದಾನ ಮಾಡಿದ್ದ ರೋಬೋ ಶಂಕರ್‌ ಕಿರುತೆರೆಯಲ್ಲೂ ತಮನ್ನು ಗುರುತಿಸಿಕೊಂಡಿದ್ದರು.

ವಿಚಾರಣೆಗೆ ಹಾಜರಾಗುವಂತೆ ಮಹೇಶ್‌ ತಿಮರೋಡಿ ಮನೆಗೆ ನೋಟೀಸ್‌‍ ಅಂಟಿಸಿದ ಪೊಲೀಸರು

ಬೆಳ್ತಂಗಡಿ,ಸೆ.19-ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಉಜಿರೆಯ ಅವರ ಮನೆಗೆ ಪೊಲೀಸರು ನೋಟೀಸ್‌‍ ಅಂಟಿಸಿದ್ದಾರೆ. ತಿಮರೋಡಿ ಅವರ ಮನೆಯಲ್ಲಿ ಎಸ್‌‍ಐಟಿ ಅಧಿಕಾರಿಗಳು ಶೋಧ ನಡೆಸಿದ ವೇಳೆ ಮಾರಕಾಸ್ತ್ರಗಳು ಹಾಗೂ ಬಂಧೂಕು ಪತ್ತೆಯಾಗಿದ್ದವು. ಹಾಗಾಗಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ನಿನ್ನೆ ತಿಮರೋಡಿ ಅವರ ಮನೆಗೆ ಮಹಜರು ನಡೆಸಲು ಹೋಗಿದ್ದರು.ಆದರೆ ಅವರು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಬೆಳ್ತಂಗಡಿ ಠಾಣೆ ಪೊಲೀಸರು ಮತ್ತೆ ಹೋದಾಗ ಅವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ, ಸೆ.21 ರಂದು ವಿಚಾರಣೆಗೆ ಹಾಜರಾಗಲು ತಿಮರೋಡಿ ಮನೆಯ ಗೋಡೆಗೆ ನೋಟೀಸ್‌‍ ಅಂಟಿಸಿ ತೆರಳಿದ್ದಾರೆ.

ಧರ್ಮಸ್ಥಳ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಸಿಬ್ಬಂದಿ ಹಾಗೂ ಸೋಕೋ ಅಧಿಕಾರಿಗಳು, ಎಸ್‌‍ಐಟಿ ತಂಡದ ಜೊತೆಗೆ ಉಜಿರೆ ಗ್ರಾಮದಲ್ಲಿರುವ ಮಹೇಶ್‌ಶೆಟ್ಟಿ ತಿಮರೋಡಿ ಮನೆಯಲ್ಲಿ ಆ. 26ರಂದು ಶೋಧ ನಡೆಸಿದ್ದರು.

ಆ ಸಂದರ್ಭದಲ್ಲಿ ತಿಮರೋಡಿ ಮನೆಯವರಿಗೆ ಸೇರಿದ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಹಾಗೂ 2 ತಲವಾರುಗಳು, 1 ಬಂದೂಕು ಸೇರಿ 44 ವಸ್ತುಗಳನ್ನು ಮಹಜರು ನಡೆಸಿ ಎಸ್‌‍ಐಟಿ ವಶಪಡಿಸಿಕೊಂಡಿದೆ.

ಈ ಬಗ್ಗೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಸಬಂಧ ಎಸ್‌‍ಐಟಿ ತನಿಖಾಧಿಕಾರಿ ಎಸ್‌‍ಪಿ ಸೈಮನ್‌ ಅವರು ಮುಂದಿನ ತನಿಖೆ ನಡೆಸಲು ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು, ಮಹೇಶ್‌ ತಿಮರೋಡಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗಾಗಿ ಸೆ.21 ರಂದು ಹಾಜರಾಗಲು ಇದೀಗ ಪೊಲೀಸರು ಅವರಿಗೆ ನೋಟೀಸ್‌‍ ನೀಡಿದ್ದಾರೆ.

ಕಸದ ಲಾರಿ ಚಾಲಕರ ಪ್ರತಿಭಟನೆ, ಗಬ್ಬೆದ್ದು ನಾರಲಿದೆ ಸಿಲಿಕಾನ್‌ ಸಿಟಿ ಬೆಂಗಳೂರು

ಬೆಂಗಳೂರು,ಸೆ.19- ಪೌರ ಕಾರ್ಮಿಕರಂತೆ ನಮನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಕಸದ ವಾಹನಗಳ ಚಾಲಕರು ಮುಷ್ಕರ ಆರಂಭಿಸಿರುವುದರಿಂದ ಸಿಲಿಕಾನ್‌ ಸಿಟಿ ಬೆಂಗಳೂರು ಇಂದಿನಿಂದ ಗಬ್ಬೆದ್ದು ಹೋಗುವ ಸಾಧ್ಯತೆಗಳಿವೆ.

ಇಂದಿನಿಂದ ಮನೆ..ಮನೆ ಕಸ ಸಂಗ್ರಹ ಮಾಡದಿರಲು ಕಸದ ಲಾರಿ ಮತ್ತು ಆಟೋ ಚಾಲಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಸಂಪೂರ್ಣ ಬಂದ್‌ ಆಗಲಿದೆ.ತಮ ಬಹುದಿನಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಸದ ಲಾರಿ.ಅಟೋ ಚಾಲಕರು ನಗರದ ಫ್ರೀಡಂ ಪಾರ್ಕಿನಲ್ಲಿ ಜಿಬಿಎ ಅಸ್ಥಿತ್ವಕ್ಕೆ ಬಂದ ನಂತರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್‌‍ ಸರ್ಕಾರ ಚಾಲಕರನ್ನು ಹಾಗೂ ಸಹಾಯಕರನ್ನು ಖಾಯಂ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌‍ ಸರ್ಕಾರ ಇದೀಗ ಮಾತು ತಪ್ಪಿರುವುದರಿಂದ ಚಾಲಕರು ಸರ್ಕಾರದ ವಿರುದ್ಧ ನೇರಾನೇರ ತೊಡೆ ತಟ್ಟಿದ್ದಾರೆ.

ನಮನ್ನು ಖಾಯಂ ಮಾಡುವವರೆಗೆ ನಾವು ಯಾವುದೇ ಕಾರಣಕ್ಕೂ ಕಸದ ವಾಹನಗಳನ್ನು ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮನೆ ಬಾಗಿಲಿಗೆ ವಾಹನ ಬಂದರೂ ಕಸ ಹಾಕಲು ಮೀನಾಮೇಷ ಎಣಿಸುವ ನಮ ಸಿಲಿಕಾನ್‌ ಸಿಟಿ ಜನ ವಾಹನ ಬರಲಿಲ್ಲ ಅಂದರೆ ಸುಮನಿರುತ್ತಾರಾ.. ಉದ್ಯಾನವನ, ಕೆರೆಗಳು ಹಾಗೂ ರಸ್ತೆ ಬದಿಗಳಲ್ಲಿ ಎಲ್ಲೇಂದರಲ್ಲಿ ಕಸ ಎಸೆದು ಏನು ತಿಳಿಯದವರಂತೆ ಮನೆಗೆ ಹೋಗುತ್ತಾರೆ. ಹೀಗಾಗಿ ಇಡಿ ನಗರ ಒಂದೇರಡು ದಿನಗಳಲ್ಲಿ ಗಬ್ಬೆದುಹೋಗುವ ಸಾಧ್ಯತೆಗಳಿವೆ.

ನೇರ ವೇತನ ಕೊಡ್ತಿವಿ ಅಂತ ಭರವಸೆ ನೀಡಿದ್ದ ಸರ್ಕಾರ ಈಗ ಮಾತು ತಪ್ಪಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಗರದಲ್ಲಿ ಕಸದ ಲಾರಿಗಳ ಸಂಚಾರ ಬಂದ್‌ ಮಾಡಲು ತೀರ್ಮಾನಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ನೇರ ನೇಮಕಾತಿ ಬೇಡ. ನೇರವಾಗಿ ವೇತನ ನೀಡಿ ಅನ್ನೋ ಸಾಧಾರಣ ಬೇಡಿಕೆಯನ್ನು ಈಡೇರಿಸದ ಕಾಂಗ್ರೆಸ್‌‍ ಸರ್ಕಾರ ಇದೀಗ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ.ನಗರದಲ್ಲಿ ಸುಮಾರು 10 ಸಾವಿರ ಲಾರಿ ಹಾಗೂ ಟೆಪ್ಪರ್‌ ಡ್ರೈವರ್‌ಗಳು, ಸಹಾಯಕರು ಕೆಲಸ ಮಾಡುತ್ತಿದ್ದಾರೆ. 750 ಕಸದ ಲಾರಿಗಳು ಹಾಗೂ 3500 ಕಸದ ಅಟೋಗಳ ಸಂಚಾರ ಬಂದ್‌ ಆಗಲಿದೆ.

ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ರಸ್ತೆ ಗುಂಡಿ ಮುಚ್ಚದಿದ್ದರೆ ನಗರ ಖಾಲಿ ಮಾಡುತ್ತೇವೆ ಎನ್ನುತ್ತಿರುವ ಕಾರ್ಪೋರೇಟ್‌ ಸಂಸ್ಥೆಗಳು ಇನ್ನು ಕಸದ ಸಮಸ್ಯೆ ಎದುರಾದರೆ ಏನು ಮಾಡುತ್ತಾರೋ ಕಾದು ನೋಡಬೇಕು.

ರಾಜ್ಯದಲ್ಲಿ ಸೆ.24ರವರೆಗೆ ಮುಂದುವರೆಯಲಿದೆ ಮಳೆ

ಬೆಂಗಳೂರು,ಸೆ.19-ನಿನ್ನೆ ಮಧ್ಯಾಹ್ನದಿಂದ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಜನರ ದೈನಂದಿನ ಕೆಲಸಕಾರ್ಯಗಳಿಗೆ ತೊಂದರೆಯಾಗಿತ್ತು. ಇಂದು ಬೆಳಗ್ಗೆ ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಹಗುರ ಮಳೆ ಮುಂದುವರೆದಿತ್ತು. ಬಂಗಾಳಕೊಲ್ಲಿ ಹಾಗೂ ಒಳನಾಡಿನಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಸೆ.27ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕರಾವಳಿ, ಮಲೆನಾಡು, ಕಲ್ಯಾಣ ಕರ್ನಾಟಕ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆ.24ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆನಂತರ ಮಳೆ ದುರ್ಬಲಗೊಳ್ಳಲಿದ್ದು ಮತ್ತೆ ಸೆ.26ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

ನಿನ್ನೆ ಬೆಂಗಳೂರು, ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ತುಮಕೂರು, ಗದಗ, ಕೊಪ್ಪಳ, ಕಲಬುರಗಿ ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಬಾಗೇಪಲ್ಲಿ ತಾಲ್ಲೂಕಿನ ಕನಗಮಕಲಪಲ್ಲಿಯಲ್ಲಿ 130.5 ಮಿ.ಮೀನಷ್ಟು ಅತಿಹೆಚ್ಚು ಮಳೆಯಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, 3 ಜಿಲ್ಲೆಗಳಲ್ಲಿ ಸಾಧಾರಣ ಹಾಗೂ 9 ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಣಹವೆ ಕಂಡುಬಂದಿದ್ದು, 10 ಜಿಲ್ಲೆಗಳಲ್ಲಿ ಅತ್ಯಲ್ಪ ಮಳೆಯಾಗಿದೆ.