ಚಂಡೀಗಢ, ಏ.27– ಇದೇ ಏ.22ರಂದು ಪಹಲ್ಲಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಘೋಷಣೆ ಮಾಡಿದ್ದಾರೆ.
ಹರಿಯಾಣದ ಕರ್ನಾಲ್ ನಿವಾಸಿಯಾಗಿದ್ದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯೊಂದಿಗೆ ಜಮ್ಮು-ಕಾಶ್ಮೀರಕ್ಕೆ ಹೋದಾಗ ಈ ಹತ್ಯೆ ನಡೆದಿದೆ. ನರ್ವಾಲ್ ಅವರ ಪೋಷಕರ ಆಶಯದಂತೆ ಕುಟುಂಬದ ಯಾವುದೇ ಸದಸ್ಯರಿಗೆ ಈ ಕೆಲಸವನ್ನು ನೀಡಲಾಗುವುದು ಎಂದು ಸಿಎಂ ಸೈನಿ ಭರವಸೆ ನೀಡಿದ್ದಾರೆ.
ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಯಾಮ್ ದಾಳಿಯಲ್ಲಿ ಸುಮಾರು 26 ಜನ ಅಮಾಯಕರು ಬಲಿಯಾಗಿದ್ದರು. ಅದರಲ್ಲಿ ಬಹುಪಾಲು ಭಾರತದವರೇ ಇದ್ದರು, ಅವರನ್ನು ಕಳೆದುಕೊಂಡು ಇದೀಗ ಇಡೀ ಕುಟುಂಬ ದುಖಃದ ಕಡಲಲ್ಲಿ ಮುಳುಗಿದೆ.
ದಾಳಿಗೂ ಆರು ದಿನಗಳ ಹಿಂದೆ ಮದುವೆಯಾಗಿದ್ದ ಲೆಫ್ಟಿನೆಂಟ್ ಅಧಿಕಾರಿ ವಿನಯ್ ನರ್ವಾಲ್ ತಮ್ಮ ಪತ್ನಿಯೊಂದಿಗೆ ಹನಿಮೂನೆಂದು ಹೋಗಿದ್ದರು. 26 ವರ್ಷದ ವಿನಯ್ ನರ್ವಾಲ್ ಆರು ದಿನಗಳ ಹಿಂದೆ ಗುರುಗ್ರಾಮದ ಹಿಮಾಂಶಿ ಎಂಬ ಹುಡುಗಿಯನ್ನು ಏಪ್ರಿಲ್ 16 ರಂದು ವಿವಾಹವಾದರು. ಮುಖ್ಯವಾಗಿ, ಏ.19ರಂದು ನಡೆದ ವಿವಾಹ ಆರತಕ್ಷತೆಯ ನಂತರ, ವಿನಯ್ ಏ.21ರಂದು ಹಿಮಾಂಶಿ ಜೊತೆ ಕಾಶ್ಮೀರಕ್ಕೆ ಹೋಗಿದ್ದರು. ಅದಾಗ್ಯೂ, ಅವರನ್ನು ಏ.22ರಂದು ಗುಂಡು ಹಾರಿಸಿ ಕೊಲ್ಲಲಾಯಿತು.
ಮುಖ್ಯವಾದ ವಿಷಯವೆಂದರೆ ಯೂರೋಪ್ಗೆ ಹೋಗಲು ಪ್ಲಾನ್ ಮಾಡಿದ್ದ ಇವರು ಯುರೋಪಿಯನ್ ವೀಸಾ ಸಿಗದ ಕಾರಣ, ವಿನಯ್ ಪಹಲ್ಯಾಮ್‌ಗೆ ಹೋದರು. ಆದರೆ ಅಲ್ಲಿಂದ ಬಂದಿದ್ದು ಮಾತ್ರ ಅವರ ಸಾವಿನ ಸುದ್ದಿ. ಈಗಾಗಲೇ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವಿನಯ್ ನರ್ವಾಲ್ ಅವರ ಮೃತದೇಹದ ಅಂತ್ಯಕ್ರಿಯೆ ನಡೆದಿದ್ದು, ಇದರಲ್ಲಿ ಸಿಎಂ ಕೂಡ ಭಾಗಿಯಾಗಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸೈನಿ, ವಿನಯ್ ನರ್ವಾಲ್ ಅವರಿಗೆ ಗೌರವ ಸಲ್ಲಿಸಲು ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಹೇಡಿತನದ ದಾಳಿ ನಡೆಸಿದವರನ್ನು ಬಿಡಲಾಗುವುದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿನಯ್ ನರ್ವಾಲ್ ಒಬ್ಬ ಧೈರ್ಯಶಾಲಿ ಸೈನಿಕ. ಹರಿಯಾಣ ಸರ್ಕಾರ ವಿನಯ್ ನರ್ವಾಲ್ ಅವರ ಕುಟುಂಬದೊಂದಿಗೆ ನಿಂತಿದೆ ಎಂದು ಹೇಳಿದರು.
ಅಂತ್ಯಕ್ರಿಯೆಯಲ್ಲಿ ಕಣ್ಣೀರು ಸುರಿಸುತ್ತಾ ನಿಂತಿದ್ದ ಪತ್ನಿ ತನ್ನ ಪತಿಗೆ ಭಾವನಾತ್ಮಕ ವಿದಾಯ ಹೇಳಿದರು. ವಿನಯ್ ಸಾವಿನ ನಂತರ ಗುರುಗ್ರಾಮ್ ಮತ್ತು ಕರ್ನಾಲ್ ಎರಡೂ ಕುಟುಂಬಗಳಲ್ಲಿ ಶೋಕ ಮಡುಗಟ್ಟಿದೆ.