ಶ್ರೀನಗರ : ಕಳೆದ ಹಲವು ದಿನಗಳಿಂದ ಶಾಂತವಾಗಿದ್ದ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕ
ಮೂಲದಪ್ರವಾಸಿಗರೊಬ್ಬರು ಸಾವಿಗೀಡಾಗಿರುವ ಘಟನೆ ಮಂಗಳವಾರ ಸಂಭವಿಸಿದೆ. ಶಿವಮೊಗ್ಗದ ವಿಜಯನಗರ ನಿವಾಸಿ, ಮಂಜುನಾಥ್ ( 47)ಮೃತ ದುರ್ದೈವಿ. ಉದ್ಯಮಿ ಮಂಜುನಾಥ ಅವರ ಪತ್ನಿ ಪಲ್ಲವಿ ಮತ್ತು ಪುತ್ರ ಸುರಕ್ಷಿತವಾಗಿದ್ದಾರೆ.ದಾಳಿಯಲ್ಲಿ ಇತರ 26 ಜನ ಗಾಯಗೊಂಡಿದ್ದಾರೆ.
ಏತನ್ಮಧ್ಯೆ, ಗಾಯಗೊಂಡವರಲ್ಲಿ ಅಭಿಜಾವನ್ ರಾವ್ ಹಾಗೂ ಮಂಜುನಾಥ್ ಎಂಬ ಇಬ್ಬರು ಕನ್ನಡಿಗರಿದ್ದಾರೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಯಾವ ಧರ್ಮ ಎಂದು ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕುಕೃತ್ಯ ಎಸಗಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ.
ಮಂಜುನಾಥ್ ಅವರು ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಏ.19 ರಂದು ಶಿವಮೊಗ್ಗದಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ದಾಳಿಯಲ್ಲಿ ಸ್ಥಳದಲ್ಲೇ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ. ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನ ರಕ್ಷಿಸಿ ಸ್ಥಳೀಯರು ಬೇರೆಡೆ ಕರೆದುಕೊಂಡು ಬಂದಿದ್ದಾರೆ. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಮಾಡಲಾಗಿದೆ. ಗಾಯಗೊಂಡ ಪ್ರವಾಸಿಗರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಭಯೋತ್ಪಾದಕರು ಮೊದಲು ಪ್ರವಾಸಿಗರಿಂದ ಹೆಸರುಗಳನ್ನು ಕೇಳಿದರು. ಆಗ ಪ್ರವಾಸಿಗರು ತಮ್ಮ ಹಿಂದೂ ಹೆಸರುಗಳನ್ನು ಹೇಳಿದಾಗ ಪ್ರವಾಸಿಗರ ಮೇಲೆ ಅವರು ಗುಂಡು ಹಾರಿಸಿದ್ದಾರೆ . ಇದೇ ವೇಳೆ ಚುರುಕುಗೊಂಡ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 2-3 ಭಯೋತ್ಪಾದಕರು ಹತರಾಗಿದ್ದಾರೆ ಎನ್ನಲಾಗಿದೆ.
ಪ್ರವಾಸಕ್ಕೆಜನಪ್ರಿಯವಾಗಿರುವ ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬೇಸಿಗೆಯ ಸಮಯದಲ್ಲಿ, ಈ ಪ್ರದೇಶಕ್ಕೆ ಭೇಟಿ ನೀಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ.ಕಳೆದ ಕೆಲವು ವರ್ಷಗಳಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಪೊಲೀಸ್ ಸಮವಸ್ತ್ರದಲ್ಲಿ ಭಯೋತ್ಪಾದಕರು ಬಂದಿದ್ದರು . ಇನ್ನು ಈ ಪ್ರದೇಶದಲ್ಲಿ ಹಲವು ದಿನಗಳಿಂದ ಭಯೋತ್ಪಾದಕರು ಇರುವ ಬಗ್ಗೆ ವರದಿಗಳಿದ್ದವು. ಹಾಗಾಗಿ, ಭದ್ರತಾ ಪಡೆಗಳು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದವು. ಸುತ್ತಲೂ ಮುತ್ತಿಗೆ ಹಾಕಲಾಗಿತ್ತು. ನಂತರ ಭಯೋತ್ಪಾದಕರು ದಾಳಿ ಮಾಡಿದರು. ದಾಳಿಯ ನಂತರ ತ್ವರಿತ ಪ್ರತಿಕ್ರಿಯೆ ತಂಡವನ್ನು ನಿಯೋಜಿಸಲಾಗಿದೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಕಾರಣ ಸ್ಥಳೀಯ ಜನರು ಸಹ ಅವರನ್ನು ಭಯೋತ್ಪಾದಕರು ನಂಬಲಿಲ್ಲ ಎನ್ನಲಾಗಿದೆ.
ಕಾಡಿನಿಂದ ಬಂದರು :
ಕಾಡಿನಿಂದ ಬಂದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ನಂತರ ಅಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಪ್ರವಾಸಿಗರು ತಮ್ಮ ಪ್ರಾಣ ಉಳಿಸಿಕೊಳ್ಳಲು ಎಲ್ಲಂದರಲ್ಲಿ ಓಡಲು ಪ್ರಾರಂಭಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಕ್ಷಣ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ಆರಂಭಿಸಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಮರನಾಥ ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಪವಿತ್ರ ಪ್ರಯಾಣದಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಪ್ರಯಾಣ ಜುಲೈ 3 ರಿಂದ ಪ್ರಾರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾಸಿಗರ ಮೇಲಿನ ಈ ದಾಳಿ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ.
ಈ ವರ್ಷದ ಅಮರನಾಥ ಯಾತ್ರೆಗೆ ದೇಶಾದ್ಯಂತ ನೋಂದಣಿ ನಡೆಯುತ್ತಿರುವ ಸಮಯದಲ್ಲಿ ಈ ದಾಳಿ ನಡೆದಿದೆ. 38 ದಿನಗಳ ತೀರ್ಥಯಾತ್ರೆ ಜುಲೈ 3ರಿಂದ ಎರಡು ಮಾರ್ಗಗಳಿಂದ ಪ್ರಾರಂಭವಾಗಲಿದೆ. ಒಂದು ಅನಂತನಾಗ್ ಜಿಲ್ಲೆಯ 48 ಕಿಮೀ ಪಹಲ್ಗಾಮ್ ಮಾರ್ಗ ಮತ್ತು ಎರೆಡು ಗಂಡೇರ್ಬಲ್ ಜಿಲ್ಲೆಯ ಇನ್ನೊಂದು 14 ಕಿಮೀ ಬಾಲ್ಟಾಲ್ ಮಾರ್ಗ, ಇದು ಕಡಿಮೆ ಆದರೆ ಕಡಿದಾದ ಮಾರ್ಗವಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಅವರು ಜಮ್ಮು ವಿಭಾಗದ ಮೇಲೆ ವಿಶೇಷ ಗಮನ ಹರಿಸಿ ಭಯೋತ್ಪಾದನೆಯ ಸಂಪೂರ್ಣ ನಿರ್ಮೂಲನೆಗೆ ಆದೇಶಗಳನ್ನು ನೀಡಿದ್ದರು.
ಮಾಹಿತಿ ಪಡೆದ ಪಿ.ಎಂ :
ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಂಭಾಷಣೆ ನಡೆಸಿದರು. ಗೃಹ ಸಚಿವರಿಂದ ಮಾಹಿತಿ ಪಡೆದುಕೊಂಡಿರುವ ಪ್ರಧಾನಿ, ತುರ್ತಾಗಿ ಪರಿಸ್ಥಿತಿ ನಿಭಾಯಿಸಲು ಸೂಕ್ರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ತುರ್ತಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಶಾ ಅವರಿಗೆ ತಿಳಿಸಿದ್ದಾರೆ. ಪ್ರಧಾನಿ ಸೂಚನೆ ಮೇರೆಗೆ ಅಮಿತ್ ಷಾ ಶ್ರೀ ನಗರಕ್ಕೆ ತೆರಳಿದ್ದಾರೆ.
ಪ್ರಧಾನಿ ಪ್ರತಿಕ್ರಿಯೆ :
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸಲಾಗುತ್ತದೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ.ಈ ಹೇಯ ಕೃತ್ಯದ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು.ಯಾವುದೇ ಕಾರಣಕ್ಕೂ ಅವರನ್ನು ಬಿಡಲಾಗುವುದಿಲ್ಲ! ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ.
ನರೇಂದ್ರ ಮೋದಿ.
ಪ್ರಧಾನ ಮಂತ್ರಿ
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಪ್ರತಿಕ್ರಿಯೆ :
ನನಗೆ ನಂಬಲಾಗದಷ್ಟು ಆಘಾತವಾಗಿದೆ. ನಮ್ಮ ಪ್ರವಾಸಿಗರ ಮೇಲಿನ ಈ ದಾಳಿಯು ಅಸಹ್ಯಕರವಾಗಿದೆ. ಈ ದಾಳಿಯ ದುಷ್ಕರ್ಮಿಗಳು ಪ್ರಾಣಿಗಳು, ಅಮಾನವೀಯರು ಮತ್ತು ತಿರಸ್ಕಾರಕ್ಕೆ ಅರ್ಹರು. ಖಂಡನೆಗೆ ಯಾವುದೇ ಪದಗಳು ಸಾಕಾಗುವುದಿಲ್ಲ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ನಾನು ನನ್ನ ಸಹೋದ್ಯೋಗಿಗಳ ಅವರೊಂದಿಗೆ ಮಾತನಾಡಿದ್ದೇನೆ ಗಾಯಾಳುಗಳಿಗೆ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಅವರು ಆಸ್ಪತ್ರೆಗೆ ತೆರಳಿದ್ದಾರೆ. ನಾನು ತಕ್ಷಣ ಶ್ರೀನಗರಕ್ಕೆ ಹಿಂತಿರುಗುತ್ತೇನೆ.
ಓಮರ್ ಅಬ್ದುಲ್ಲಾ
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ
ಕಣ್ಣೆದುರಿಗೆ ನನ್ನ ಪತಿ ಮೃತಪಟ್ಟಿದ್ದಾರೆ :
ಏಪ್ರಿಲ್ 19ರಂದು ಪ್ರವಾಸಕ್ಕೆ ಬಂದಿದ್ದೇವು ನನ್ನ ಕಣ್ಣೆದುರಿಗೆ ನನ್ನ ಪತಿ ಮೃತಪಟ್ಟಿದ್ದಾರೆ. ನನ್ನ ಗಂಡನನ್ನ ಸಾಯಿಸಿ ನನ್ನ ಮಗನಿಗೆ ಬೈದು ಹಲ್ಲೆ ಮಾಡಿದ್ದಾರೆ. ನನ್ನ, ನನ್ನ ಮಗನನ್ನೂ ಕೊಂದು ಬಿಡು ಎಂದು ಹೇಳಿದ್ವಿ. ನಿನ್ನ ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಎಂದು ಹೇಳಿದರು. ನನ್ನ ಪತಿ ಕೊಂದು ಉಗ್ರರು ಅಲ್ಲೇ ಓಡಾಡುತ್ತಿದ್ದರು.
ಮೃತ ಮಂಜುನಾಥ್ ಪತ್ನಿ ಪಲ್ಲವಿ,
ಅಧಿಕಾರಿಗಳ ಜೊತೆ ಸಿಎಂ ಸಭೆ :
ಬೆಂಗಳೂರು-ಕಾಶ್ಮೀರದಲ್ಲಿ ಕನ್ನಡಿಗರು ಉಗ್ರರ ದಾಳಿಗೆ ಗುರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಯವರು ತಕ್ಷಣ ಕಾರ್ಯಪ್ರವತ್ತರಾಗುವಂತೆ ಸೂಚನೆ ನೀಡಿದರು. ಸಿಎಂ ಅವರ ಸೂಚನೆ ಮೇರೆಗೆ ಅಧಿಕಾರಿಗಳ ಒಂದು ತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದೆ. ಪೊಲೀಸ್ ಅಧಿಕಾರಿಗಳೂ ತೆರಳಿದ್ದಾರೆ. ಮುಂದಿನ ಕ್ರಮಗಳ ಉಸ್ತುವಾರಿ ನೋಡಿಕೊಳ್ಳುವಂರೆ ದೆಹಲಿಯ ನಿವಾಸಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ.