ಶ್ರೀನಗರ, ಏ.25- ದೇಶದ ಆಸ್ಥಿತೆಯನ್ನು ಬಡಿದೆಬ್ಬಿಸಿರುವ ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಪೈಶಾಚಿಕ ಕೃತ್ಯಕ್ಕೆ ಕೈಜೋಡಿಸಿದ ಹಿನ್ನಲೆಯಲ್ಲಿ ಲಷ್ಕರ್ -ಇ-ತೊಯ್ದಾದ ಇಬ್ಬರು ಉಗ್ರರ ಮನೆಗಳನ್ನು ನೆಲಸಮಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್‌ನ ಮಂಗಾಮ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ದ ಉಗ್ರಗಾಮಿ ಸಂಘಟನೆಯ ಕಮಾಂಡರ್ ಆದಿಮ್ ಹುಸೇನ್ ತೋಕರ್ ಮತ್ತು ಅಸೀಫ್ ಶೇಖ್ ಮನೆಗಳನ್ನು ಭಾರತೀಯ ಸೇನಾಪಡೆ ಮತ್ತು ಜಮ್ಮುಕಾಶ್ಮೀರ ಸರ್ಕಾರ ನೆಲಸಮಗೊಳಿಸುವ ಮೂಲಕ ಉಗ್ರರಿಗೆ ಕೈ ಜೋಡಿಸಿದರೆ ಇದೇ ಪರಿಸ್ಥಿತಿ ಬಂದೊದಗಲಿದೆ ಎಂಬ ಕಠಿಣ ಸಂದೇಶವನ್ನು ರವಾನಿಸಲಾಗಿದೆ.
ಅದಿಲ್ ಹುಸೇನ್ ತೋಕರ್ ಮನೆಯನ್ನು ಐಇಡಿ ಬಳಸಿ ಸ್ಪೋಟಗೊಳಿಸಿದರೆ, ಮತ್ತೊಬ್ಬ ಉಗ್ರ ಆಸೀಫ್ ಶೇಖ್ ಮನೆಯನ್ನು ಬುಲ್ಲೋಜರ್‌ನಿಂದ ನೆಲಸಮಗೊಳಿಸಲಾಗಿದೆ. ಭಯೋತ್ಪಾದಕರಿಗೆ ಕುಮ್ಮುಕ್ಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಇಬ್ಬರು ಉಗ್ರರ ಮನೆಗಳನ್ನು ನೆಲಸಮಗೊಳಿಸಿರುವುದು ಇತ್ತೀಚಿನ ದಶಕಗಳಲ್ಲೇ ಇದು ಮೊದಲ ಪ್ರಕರಣ ಎನ್ನಲಾಗುತ್ತಿದೆ.
ಒಂದು ಮೂಲದ ಪ್ರಕಾರ ಶಂಕಿತ ಉಗ್ರರ ಮನೆಗಳಲ್ಲಿ ಶೋಧ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆ ಮನೆ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.
ಮನೆಯೊಳಗಿದ್ದ ಸ್ಫೋಟಕ ವಸ್ತು ಏಕಾಏಕಿ ಅನುಮಾನಸ್ಪದವಾಗಿ ಸ್ಫೋಟಗೊಂಡ ಕಾರಣ ಈ ಘಟನೆ ಸಂಭವಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸೇನಾ ಮೂಲಗಳು ಹೇಳುವ ಪ್ರಕಾರ ಕಳೆದ ಮಂಗಳವಾರ ಪಹಲ್ಯಾಮ್‌ನಲ್ಲಿ ಸಂಭವಿಸಿದ ಭಯೋತ್ಪಾದಕರ ದಾಳಿಗೆ ಈ ಇಬ್ಬರು ಉಗ್ರರು ಕೈ ಜೋಡಿಸಿದ್ದರು ಎನ್ನಲಾಗಿದೆ.
ಹೀಗಾಗಿ ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ವತಃ ಜಮ್ಮುಕಾಶ್ಮೀರದ ನಿವಾಸಿಗಳೇ ಬೀದಿಗಿಳಿದು ಹೋರಾಟ ನಡೆಸಿದರು. ಈ ಘಟನೆಯಲ್ಲಿ ಇಬ್ಬರು ಭಾಗಿಯಾಗಿರುವುದನ್ನು ಸೇನಾಪಡೆ ತಮ್ಮದೇ ಆದ ಮೂಲಗಳಿಂದ ಖಚಿತಪಡಿಸಿತ್ತು. ಅಸೀಫ್ ಶೇಖ್ ಕಾಶ್ಮೀರದ ಲಷ್ಕರ್-ಇ-ತೊಯ್ದಾ ಸಂಘಟನೆಯ ಕಮಾಂಡರ್ ಆಗಿದ್ದ.
ಅನೇಕ ಬಾರಿ ಪಾಕಿಸ್ತಾನಕ್ಕೆ ಹೋಗಿ ಉಗ್ರ ಚಟುವಟಿಕೆಗಳ ಕುರಿತು ತರಬೇತಿ ಪಡೆದುಕೊಂಡಿದ್ದ. ಕಣಿವೆ ರಾಜ್ಯದಲ್ಲಿ ಕೆಲವು ವಿದ್ಯಾವಂತ ಯುವಕರನ್ನು ಭಯೋತ್ಪಾದಕ ಸಂಘಟನೆಗೆ ಸೇರಲು ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡುತ್ತಿದ್ದ. ದಾಳಿಯನ್ನು ರೆಸಿಸ್ಟೆನ್ಸ್ ಫ್ರಂಟ್ (ಟಿಆಎಫ್) ಎಂಬ ಗುಂಪು ತಾನೇ ಮಾಡಿರುವುದಾಗಿ ಹೇಳಿಕೊಂಡಿದೆ.
ಈ ಗುಂಪು ಲಷ್ಕರ್-ಎ-ತೊಯ್ದಾದ ಒಂದು ಭಾಗ ಎಂದು ಭಾರತ ಸರ್ಕಾರ ಹೇಳಿದೆ. ಕೆಲವು ವರದಿಗಳು ಸೈಫುಲ್ಲಾ ಕಸೂರಿ ಎಂಬ ಲಷ್ಕರ್ ಕಮಾಂಡರ್ ಈ ದಾಳಿಯನ್ನು ಯೋಜಿಸಿದ ಎಂದು ಹೇಳುತ್ತವೆ. ಆದರೆ ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲ.
ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಆಸಿಫ್ ಫೌಜಿ (ಆಸಿಫ್ ಶೇಖ್), ಸುಲೇಮಾನ್ ಶಾ, ಮತ್ತು ಅಬು ತಲ್ಪಾ ಶಂಕಿತರಾಗಿದ್ದು ಇವರು ಮೂಸಾ, ಯೂನಸ್ ಮತ್ತು ಆಸಿಫ್ ಎಂಬ ಕೋಡ್ ಹೆಸರುಗಳನ್ನು ಬಳಸುತ್ತಿದ್ದರು. ಈ ಮೂವರೂ ಈ ಹಿಂದೆ ಪೂಂಚ್ ನಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ದಾಳಿ ನಡೆದಾಗ ಆಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಲ್ಲಿದ್ದರು. ದಾಳಿಯ ಸುದ್ದಿ ಕೇಳಿ ಮೋದಿ ದೆಹಲಿಗೆ ಮರಳಿದರು. ಈ ದಾಳಿಯ ಒಂದು ವಾರ ಮೊದಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್, ಕಾಶ್ಮೀರ ನಮ್ಮ ಕಂಠನಾಳ ಎಂದು ಹೇಳಿದ್ದರು. ಈ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಭಾರತದ ವಿದೇಶಾಂಗ ಸಚಿವಾಲಯ, ಕಾಶ್ಮೀರ ಭಾರತದ ಕೇಂದ್ರಾಡಳಿತ ಪ್ರದೇಶ ಪಾಕಿಸ್ತಾನದೊಂದಿಗಿನ ಏಕೈಕ ಸಂಬಂಧವೆಂದರೆ ಅವರು ಆಕ್ರಮಿಸಿರುವ ಪ್ರದೇಶವನ್ನು ಬಿಡುಗಡೆಗೊಳಿಸುವುದು ಎಂದು ಹೇಳಿತ್ತು.