ಶ್ರೀನಗರ, ಏ.27- ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ತನಿಖೆಯ ಹೊಣೆಯನ್ನು ಕೇಂದ್ರ ಗೃಹಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ ) ಹೆಗಲಿಗೆ ವಹಿಸಿದೆ. ಈ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ಎನ್‌ಐಎಗೆ ವಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಶುರುಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ತನಿಖೆಗೆ ನಿಯೋಜಿಲ್ಪಟ್ಟ ಎನ್‌ಐಎ ತಂಡ ಈಗಾಗಲೇ ಪಹಲ್ಯಾಮ್ ತಲುಪಿದೆ. ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿ-ವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್‌ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ದಿಗೆ ಪಡೆದುಕೊಳ್ಳಲು ಎನ್‌ಐಎ ಮುಂದಾಗಿದೆ.
ಬುಧವಾರದಿಂದ ಭಯೋತ್ಪಾದನಾ ದಾಳಿ ನಡೆದ ಸ್ಥಳದಲ್ಲಿ ಬೀಡು ಬಿಟ್ಟಿರುವ ಎನ್ಐಎ ತಂಡಗಳು ಸಾಕ್ಷ್ಯಾಧಾರಗಳ ಹುಡುಕಾಟವನ್ನು ತೀವ್ರಗೊಳಿಸಿವೆ. ಭಯೋತ್ಪಾದನಾ ನಿಗ್ರಹ ಏಜೆನ್ಸಿಯ ಹಿರಿಯ ಶ್ರೇಣಿಯ ಅಧಿಕಾರಿಗಳ ಮೇಲ್ವಿಚಾರಣೆಯ ತಂಡಗಳು, ಶಾಂತಿಯುತ ಮತ್ತು ಸುಂದರವಾದ ಬೈಸರನ್ ಕಣಿವೆಯಲ್ಲಿ ತಮ್ಮ ಕಣ್ಣಮುಂದೆ ನಡೆದ ಭಯಾನಕ ದಾಳಿಯನ್ನು ನೋಡಿದ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಪಡೆಯುತ್ತಿದ್ದಾರೆ.
ಕಾಶ್ಮೀರದಲ್ಲಿ ಭೀಕರ ಭಯೋತ್ಪಾದಕ ದಾಳಿಗೆ ಕಾರಣವಾದ ಘಟನೆಗಳ ಅನುಕ್ರಮವನ್ನು ಒಟ್ಟುಗೂಡಿಸಲು ಪ್ರತ್ಯಕ್ಷದರ್ಶಿಗಳನ್ನು ಸೂಕ್ಷ್ಮವಾಗಿ ವಿವರವಾಗಿ ಪ್ರಶ್ನಿಸಲಾಗುತ್ತಿದೆ. ಭಯೋತ್ಪಾದಕರ ಸುಳಿವುಗಳಿಗಾಗಿ ತನಿಖಾ ಎನ್‌ಐಎ ತಂಡಗಳು ಪ್ರವೇಶ ಮತ್ತು ನಿರ್ಗಮನ ಸ್ಥಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿವೆ.
ದೇಶವನ್ನು ಬೆಚ್ಚಿಬೀಳಿಸಿದ ಭೀಕರ ದಾಳಿಗೆ ಕಾರಣವಾದ ಭಯೋತ್ಪಾದಕ ಪಿತೂರಿಯನ್ನು ಬಹಿರಂಗಪಡಿಸಲು ಪುರಾವೆಗಳಿಗಾಗಿ ಫೋರೆನ್ಸಿಕ್ ಮತ್ತು ಇತರ ತಜ್ಞರ ಸಹಾಯದಿಂದ ತಂಡಗಳು ಇಡೀ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸುತ್ತಿವೆ.
ಜಮ್ಮು-ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಲಾಮ್‌ನಲ್ಲಿ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು, ವಿದೇಶಿಯರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಮಂದಿ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿನಡೆಸಿದ ಭೀಕರ ದಾಳಿ ಇದಾಗಿದೆ.