ಬೆಂಗಳೂರು, ಮೇ 14- ಮೂವರು ಪೇಂಟರ್‌ಗಳು ಸೇರಿಕೊಂಡು ಪಾರ್ಟಿಮಾಡುವಾಗ ಅವರುಗಳ ಮಧ್ಯಯೇ ಯಾವುದೋ ವಿಚಾರಕ್ಕೆ ಗಲಾಟೆ ನಡೆದು ಒಬ್ಬನನ್ನು ಕೊಲೆ ಮಾಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕನಕನಗರದ ನಿವಾಸಿ ಅಜೀಜ್ ಅಹಮದ್ (27) ಕೊಲೆಯಾದ ಪೇಂಟರ್.
ಪೇಂಟಿಂಗ್ ಕೆಲಸಕ್ಕೆ ಅಜೀಜ್ ಹಾಗೂ ಇನ್ನಿಬ್ಬರು ಒಟ್ಟಿಗೆ ಹೋಗುತ್ತಾರೆ. ಮೇ 8 ರಂದು ರಾತ್ರಿ ಈ ಮೂವರು ಕಾವೇರಿ ಲೇಔಟ್‌ನ ಮರಿಯಣ್ಣನಪಾಳ್ಯದ ಖಾಲಿ ನಿವೇಶನದಲ್ಲಿ ಪಾರ್ಟಿ ಮಾಡಿದ್ದಾರೆ. ಆ ವೇಳೆ ಇವರುಗಳು ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಪಾರ್ಟಿ ಮುಗಿದ ನಂತರ ರಸ್ತೆಯಲ್ಲಿ ನಡೆದು ಬರುವಾಗ ಮಾತಿಗೆ ಮಾತು ಬೆಳೆದಿದೆ. ಆ ವೇಳೆ ಇಬ್ಬರು ಸೇರಿಕೊಂಡು ದೊಣ್ಣೆಯಿಂದ ಅಜೀಜ್ ತಲೆಗೆ ಹೊಡೆದಿದ್ದಾರೆ.
ಅಜೀಜ್ ಕೆಳಗೆ ಬಿದ್ದಾಗ ಆರೋಪಿಗಳಿಬ್ಬರು ಸೇರಿಕೊಂಡು ಈತನನ್ನು ನಿಮಾನ್‌್ಸ ಆಸ್ಪತ್ರೆಗೆ ಕರೆದೊಯ್ದು ಅಪಘಾತವಾಗಿದೆ ಎಂದು ಬಿಂಬಿಸಿ ವೈದ್ಯರ ಬಳಿ ಸುಳ್ಳು ಹೇಳಿ ಚಿಕಿತ್ಸೆಗೆ ದಾಖಲಿಸಿ ಪರಾರಿಯಾಗಿದ್ದಾರೆ.ಅಂದಿನಿಂದ ಅಜೀಜ್ ಅಹಮದ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿನ್ನೆ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಈತನ ಮೇಲೆ ಹಲ್ಲೆಯಾಗಿರುವುದು ಗೊತ್ತಾಗಿದೆ. ತಕ್ಷಣ ವೈದ್ಯರು ಅಮೃತಹಳ್ಳಿ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.