ಇಸ್ಲಾಮಾಬಾದ್, ಮೇ 9 – ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಪಾಕಿಸ್ತಾನ ತನ್ನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಬದಲಿಸಲು ನಿರ್ಧರಿಸಿದೆ ಹಾಗೂ ಅವರನ್ನು ಬಂಧನದಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಅಸಿಮ್ ಮುನೀರ್ ಕಾಶ್ಮೀರವು ಪಾಕ್‌ನ ಕಂಠನಾಳ ಎಂದಿದ್ದರು. ಅವರ ಈ ಹೇಳಿಕೆಯೇ ಪಾಕಿಸ್ತಾನಿ ಉಗ್ರರು ಪಹಲ್ಲಾಮ್ ಮೇಲೆ ದಾಳಿ ನಡೆಸಲು ಕಾರಣವಾಯಿತು ಎಂದು ಹೇಳಲಾಗಿತ್ತು.
ಭಾರತದ ಆಪರೇಶನ್ ಸಿಂಧೂರ್ ದಾಳಿಯನ್ನು ಹಿಮ್ಮೆಟ್ಟಿಸಲು ಅವರು ವಿಫಲರಾದರು ಎಂಬ ಆಕ್ರೋಶ ಪಾಕಿಸ್ತಾನದಲ್ಲಿ ನೆಲೆಸಿದೆ. ಹೀಗಾಗಿ ಅವರನ್ನು ಬಂಧಿಸಿ ಪದಚ್ಯುತಿ ಮಾಡಲಾಗಿದೆ ಎನ್ನಲಾಗಿದೆ. ಸಾಹಿರ್ ಶಂಶಾದ್ ಮಿರ್ಜಾ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ನೇಮಿಸುವ ಸಾಧ್ಯತೆಯಿದೆ.
ಗುರುವಾರ ರಾತ್ರಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬ್, ಜಮ್ಮು-ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ನೂರಾರು ಕ್ಷಿಪಣಿ, ಡೋನ್ ಹಾಗೂ ರಾಕೆಟ್ ಮೂಲಕ ದಾಳಿ ಮಾಡಿತ್ತು. ಪ್ರತಿ ದಾಳಿ ಮಾಡಿದ ಭಾರತ, ಲಾಹೋರ್ ಹಾಗೂ ಸಿಯಾಲ್‌ಕೋಟ್ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಜೊತೆಗೆ ಮೊದಲ ಬಾರಿಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಪಾಕಿಸ್ತಾನದ ಪಂಜಾಬ್ ವಾಯುನೆಲೆಗಳ ಮೇಲೆ ಸೇನೆ ದಾಳಿ ನಡೆಸಿದೆ. ಭಾರತದ ದಾಳಿ ಪಾಕ್ ಅಕ್ಷರಶಃ ತತ್ತರಿಸಿ ಹೋಗಿದೆ.
ಭಾರತದ 15 ನಗರಗಳನ್ನು ಗುರಿಯಾಗಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತದ ವಾಯುರಕ್ಷಣಾ ವ್ಯವಸ್ಥೆಯಾದ ಸುದರ್ಶನ ಚಕ್ರ ಗಡಿಯಲ್ಲೇ ತಡೆದು ಈ ಮೂಲಕ ಒಂದೇ ಒಂದು ಕ್ಷಿಪಣಿ ಭಾರತ ಪ್ರವೇಶಿಸದಂತೆ ಭದ್ರತೆ ಒದಗಿಸಿದೆ.
ಗಡಿಭಾಗದ ನಾಲ್ಕು ರಾಜ್ಯಗಳಲ್ಲಿ ರಾತ್ರಿಯಿಡೀ ಶೆಲ್ಲಿಂಗ್ ನಡೆಯುತ್ತಿದ್ದ ಕಾರಣ ಅಲ್ಲಿ ಬ್ಲ್ಯಾಕ್ ಔಟ್ ಮಾಡಲಾಗಿತ್ತು ಇಂದು ಬೆಳಗ್ಗೆ ವಿದ್ಯುತ್ ಪೂರೈಕೆಯನ್ನು ಪುನರ್‌ಸ್ಥಾಪಿಸಲಾಗಿದೆ. ಈ ರಾಜ್ಯಗಳಲ್ಲಿರುವ ಸೇನಾ ನೆಲೆಗಳು ಮತ್ತು ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ ಮತ್ತು ಭಾರತೀಯ ಸೇನೆ ತಕ್ಕ ಉತ್ತರವನ್ನು ನೀಡಿದೆ.