ಶ್ರೀನಗರ, ಫೆ.13- ಪೂಂಚ್ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದ ಪಾಕ್ ಸೈನಿಕರಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಸೇನೆಯ ದಾಳಿ ಪರಿಣಾಮ ಹಲವು ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಭಾರತದ ಗಡಿಯಲ್ಲಿರುವ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ತನ್ನ ದುಷ್ಕೃತ್ಯಗಳನ್ನು ನಿಲ್ಲಿಸುತ್ತಿಲ್ಲ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಮೇಲೆ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದಾರೆ. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡಿದೆ.
ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಭದ್ರತಾ ಅಧಿಕಾರಿಗಳು ಈ ಮಾಹಿತಿಯನ್ನು ನೀಡಿದ್ದಾರೆ. ಪಾಕಿಸ್ತಾನದ ಕಡೆಯ ಸಾವುನೋವುಗಳ ಪ್ರಮಾಣ ತಕ್ಷಣಕ್ಕೆ ತಿಳಿದುಬಂದಿಲ್ಲ, ಆದರೆ ಶತ್ರು ಪಡೆಗಳು ಭಾರೀ ನಷ್ಟ ಅನುಭವಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ಸೇನೆಯು ಈ ಮಾಹಿತಿಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಜಮ್ಮು ಜಿಲ್ಲೆಯ ಅದ್ದೂರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಶಂಕಿತ ಉಗ್ರರು ನಡೆಸಿದ ಐಇಡಿ ಸ್ಫೋಟದಲ್ಲಿ ಕ್ಯಾಪ್ಟನ್ ಸೇರಿದಂತೆ ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ ಒಂದು ದಿನದ ನಂತರ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 25, 2021 ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದವನ್ನು ನವೀಕರಿಸಿದ ನಂತರ ಎಲ್‌ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆಯ ಘಟನೆಗಳು ಬಹಳ ಕಡಿಮೆ ದಾಖಲಾಗಿವೆ.