ಇಸ್ಲಾಮಾಬಾದ್, ಮೇ 9 – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ನರಬೇಧಕ್ಕೆ ಪ್ರತಿಯಾಗಿ ಭಾರತದ ದಾಳಿಗೆ ಕಂಗಲಾಗಿರುವ ಪಾಕಿಸ್ತಾನ ಇದೀಗ ಆರ್ಥಿಕತೆಯಲ್ಲೂ ಪಾತಾಳಕ್ಕೆ ಕುಸಿಯುತ್ತಿದೆ. ಮೊದಲೇ ಆರ್ಥಿಕವಾಗಿ ಬಸವಳಿದಿದ್ದ ಪಾಕ್ ಭಾರತದ ದಾಳಿಯಿಂದ ಭಾರೀ ಹೊಡೆತಕ್ಕೆ ಸಿಲುಕಿದ್ದು, ಇದೀಗ ಸಾವರ್ಜನಿಕ ವೇದಿಕೆಯಲ್ಲೇ ಹಣ ನೀಡುವಂತೆ ಗೋಗರೆದಿದೆ.
ಪಾಕಿಸ್ತಾನದ ಅಧಿಕೃತ ಖಾತೆಯಲ್ಲಿ ಇಂತಹುದೊಂದು ಟ್ವಿಟ್ ಅನ್ನು ಪಾಕಿಸ್ತಾನ ಸರ್ಕಾರ ಪೋಸ್ಟ್ ಮಾಡಿದೆ. (ಆರ್ಥಿಕ ವ್ಯವಹಾರಗಳ ವಿಭಾಗ, ಪಾಕಿಸ್ತಾನ ಸರ್ಕಾರ) ಎಂಬ ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿ, ಕುಸಿಯುತ್ತಿರುವ ನಮ್ಮ ಆರ್ಥಿಕತೆಗೆ ನಮ್ಮ ಅಂತಾರಾಷ್ಟ್ರೀಯ ಪಾಲುದಾರರು ಹಣಕಾಸಿನ ನೆರವು ನೀಡುವಂತೆ ಗೋಗರೆದಿದೆ.
ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗದ ಅಧಿಕೃತ ಖಾತೆಯ ತನ್ನ ಟ್ವಿಟ್‌ನಲ್ಲಿ, ನಮ್ಮ ಶತ್ರುಗಳಿಂದ ಉಂಟಾದ ಭಾರೀ ನಷ್ಟದ ನಂತರ ಹೆಚ್ಚಿನ ಸಾಲಕ್ಕಾಗಿ ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಪಾಲುದಾರರಿಗೆ ಮನವಿ ಮಾಡುತ್ತಿದೆ. ಯುದ್ಧದ ಉದ್ವೇಗ ಮತ್ತು ಷೇರುಪೇಟೆಯ ಕುಸಿತದ ನಡುವೆ, ನಾವು ಅಂತರರಾಷ್ಟ್ರೀಯ ಪಾಲುದಾರರು ಯುದ್ಧದ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಲು ವಿನಂತಿಸುತ್ತೇವೆ. ಜನತೆಗೆ ಧೈರ್ಯದಿಂದ ಸ್ಥಿರವಾಗಿರಲು ಕರೆ ನೀಡಲಾಗಿದೆ ಎಂದು ಬರೆಯಲಾಗಿದೆ. ಜೊತೆಗೆ ಈ ಟ್ವಿಟ್ ಅನ್ನು ವಿಶ್ವ ಬ್ಯಾಂಕ್‌ಗೆ ಟ್ಯಾಗ್ ಮಾಡಲಾಗಿದೆ.
ಪಹಲ್ಯಾಮ್ ಉಗ್ರ ದಾಳಿ ಮತ್ತು ಇದಕ್ಕೆ ಉತ್ತರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಏರ್ ಸ್ಟೈಕ್ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಭುಗಿಲೆದ್ದಿದ್ದು, ಯುದ್ಧದ ರೀತಿಯ ವಾತಾವರಣ ರೂಪುಗೊಂಡಿದೆ.
ಬುಧವಾರ ರಾತ್ರಿಯಿಂದ ಆರಂಭವಾದ ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪಾಕಿಸ್ತಾನದ ಬೊಕ್ಕಸ ಕೇವಲ ಯುದ್ಧ ಆರಂಭವಾದ 48 ಗಂಟೆಗಳಲ್ಲಿ ಖಾಲಿಯಾಗಿದ್ದು, ಪಾಕಿಸ್ತಾನ ಆರ್ಥಿಕ ನೆರವಿಗಾಗಿ ಮತ್ತೆ ಜಾಗತಿಕ ಸಮುದಾಯದ ಮುಂದೆ ಕೈಚಾಚಿದೆ.
ಈ ಬಗ್ಗೆ ಸ್ವತಃ ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮನವಿ ಮಾಡಿದ್ದು, ಟ್ವಿಟ್ ಮೂಲಕ ಆರ್ಥಿಕ ನೆರವು ನೀಡುವಂತೆ ತನ್ನ ಮಿತ್ರ ರಾಷ್ಟ್ರಗಳಿಗೆ ಕೇಳಿಕೊಂಡಿದೆ.
ಷೇರುಗಳು ಕುಸಿಯುತ್ತಿರುವುದರಿಂದ ಆರ್ಥಿಕ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ಅಂತರರಾಷ್ಟ್ರೀಯ ಪಾಲುದಾರರಿಗೆ ಅದು ಮನವಿ ಮಾಡಿದೆ.
ಭಾರತದ ಸೇನಾ ದಾಳಿಯಿಂದ ಪಾಕಿಸ್ತಾನಕ್ಕೆ ತೀವ್ರ ನಷ್ಟವಾಗಿದೆ. ಪಾಕಿಸ್ತಾನವು ಅಂತಾರಾಷ್ಟ್ರೀಯ ಪಾಲುದಾರರಿಗೆ ಹೆಚ್ಚಿನ ಸಾಲಕ್ಕಾಗಿ ಮನವಿ ಮಾಡಿದೆ. ಹೆಚ್ಚುತ್ತಿರುವ ಯುದ್ಧ ಮತ್ತು ಷೇರು ಮಾರು ಕಟ್ಟೆ ಕುಸಿತದ ಮಧ್ಯೆ, ಸೇನಾ ಉಲ್ಬಣವನ್ನು ಕಡಿಮೆ ಮಾಡಲು ಸಹಾಯ ಮಾಡುವಂತೆ ನಾವು ಅಂತರರಾಷ್ಟ್ರೀಯ ಪಾಲುದಾರರನ್ನು ಒತ್ತಾಯಿಸುತ್ತೇವೆ. ರಾಷ್ಟ್ರವು ದೃಢವಾಗಿರಲು ನೆರವು ನೀಡುವಂತೆ ಒತ್ತಾಯಿಸುತ್ತೇವೆ ಎಂದು ಟ್ವಿಟ್ ಮಾಡಿದೆ.
ವಿತ್ ಡ್ರಾಗೆ ಮಿತಿ
ಇನ್ನು ಅತ್ತ ಸೇನಾ ಸಂಘರ್ಷ ಮುಂದುವರೆದಿರುವಂತೆಯೇ ಇತ್ತ ಪಾಕಿಸ್ತಾನ ಆರ್ಥಿಕ ವ್ಯವಹಾರಗಳ ಸಚಿವಾಲಯ ತನ್ನದೇ ಪ್ರಜೆಗಳಿಗೆ ಶಾಕ್ ನೀಡಿದ್ದು, ಆರ್ಥಿಕ ಸಂಕಷ್ಟ ನಿರ್ವಹಣೆಗಾಗಿ ಪಾಕ್ ಪ್ರಜೆಗಳ ಬ್ಯಾಂಕ್ ಎಟಿಎಂ ವಿತ್ ಡ್ರಾಗೆ ಮಿತಿ ಹೇರಿದೆ. ದಿನವೊಂದಕ್ಕೆ ಕೇವಲ 3 ಸಾವಿರ ರೂ ಮಾತ್ರ ವಿತ್ ಡ್ರಾ ಮಾಡಲು ಪಾಕ್ ಪ್ರಜೆಗಳಿಗೆ ಮಿತಿ ಹೇರಿದೆ. ಅಲ್ಲದೆ ಪಾಕಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸುವ ವರೆಗೂ ಬ್ಯಾಂಕ್ ಗಳಿಂದ ಹಣ ವಿತ್ ಡ್ರಾ ಮಾಡದಂತೆ ಮನವಿ ಮಾಡುತ್ತಿದೆ.
ಪಾಕಿಸ್ತಾನ ಸರ್ಕಾರದ ಆರ್ಥಿಕ ವ್ಯವಹಾರಗಳ ವಿಭಾಗದ ಅಧಿಕೃತ ಖಾತೆಯಲ್ಲಿ ಈ ರೀತಿ ಟ್ವಿಟ್ ಮಾಡಿದ ಬಳಿಕ ಜನರು ಪಾಕಿಸ್ತಾನವನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡುತ್ತಿದ್ದಾರೆ. ನಿಮಗೆ ತಿನ್ನೋಕ ಅನ್ನವಿಲ್ಲ, ಭಾರತದ ವಿರುದ್ಧ ಯುದ್ಧಕ್ಕೆ ಹೋಗುತ್ತಿದ್ದೀರಿ. ನಿಮಗೆ ನಾಚಿಕೆ ಆಗಲ್ವೇ ಎಂದೆಲ್ಲ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದು ಪಾಕಿಸ್ತಾನದ ಅಧಿಕೃತ ಖಾತೆಯೇ? ಯಾಕೆಂದರೆ ದೇಶವೊಂದು ಸಾರ್ವಜನಿಕವಾಗಿ ಹೀಗೆ ಭಿಕ್ಷೆ ಕೇಳಲು ಸಾಧ್ಯವೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.