ನವದೆಹಲಿ, ಮೇ 11-ಭಾರತಿಯ ಕ್ರಿಕೆಟ್ ತಂಡದ ಸ್ಪೋಟಕ ಆಟಗಾರ ವೀರೇಂದ್ರ ಸೇಹ್ವಾಗ್ ಎಕ್ಸ್ ಮೂಲಕ ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ, ನಾಯಿಯ ಬಾಲ ಎಂದಿಗೂ ನೇರವಾಗಿರುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಈ ಒಂದು ಮಾತಿನ ಮೂಲಕ ಅವರು ಪಾಕಿಸ್ತಾನವನ್ನು ನಾಯಿ ಎಂದು ಕರೆದಿದ್ದಾರೆ.
ಇದಕ್ಕೂ ಮೊದಲು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಮೆರಿಕಾ ಮಧ್ಯಸ್ಥಿಕೆಯ ಮಾತುಕತೆಗಳ ನಂತರ ಭಾರತ ಮತ್ತು ಪಾಕಿಸ್ತಾನ ತಕ್ಷಣದ ಮತ್ತು ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ್ದರು. ಇದು ಅಮೆರಿಕ ಮಧ್ಯಸ್ಥಿಕೆಯ ಮಾತುಕತೆಗಳಿಂದಾಗಿ ಸಾಧ್ಯವಾಯಿತು ಎಂದು ಹೇಳಿಕೊಂಡಿತ್ತು.
ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ ಸೆಹ್ವಾಗ್ ಈ ಹಿಂದೆಯೂ ಸಹ ವಾಗ್ದಾಳಿ ನಡೆಸಿದ್ದರು. ಅವರು ಈ ಹಿಂದಿನ ತಮ್ಮ ಪೋಸ್ಟ್‌ನಲ್ಲಿ, ಪಾಕಿಸ್ತಾನಕ್ಕೆ ಭಯೋತ್ಪಾದಕರ ವಿರುದ್ಧದ ಕ್ರಮವನ್ನು ಸಹಿಸಿಕೊಳ್ಳಲು ಆಗಲ್ಲ. ಅವರು ತಮ್ಮ ಭಯೋತ್ಪಾದಕರನ್ನು ರಕ್ಷಿಸಲು ಯುದ್ಧ ಮಾಡಲು ಮುಂದಾಗಿದ್ದಾರೆ.
ಇದು ಪಾಕಿಸ್ತಾನದ ಮನಸ್ಥಿತಿಯನ್ನು ತಿಳಿಸುತ್ತದೆ. ನಮ್ಮ ಸೇನೆಯು ಅವರಿಗೆ ಸೂಕ್ತ ಉತ್ತರವನ್ನು ನೀಡುತ್ತದೆ. ಅದನ್ನು ಪಾಕಿಸ್ತಾನ ಎಂದಿಗೂ ಮರೆಯಬಾರದು ಎಂದು ಬರೆದಿದ್ದರು. ಭಾರತ-ಪಾಕಿಸ್ತಾನ ನಡುವಿನ ಶಾಂತಿಗಾಗಿ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವದಲ್ಲಿ ಮತ್ತು ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಹೇಳಿದ್ದರು.
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯ ಹಿತದೃಷ್ಟಿಯಿಂದ ನಾವು ಒಪ್ಪಿಕೊಂಡಿರುವ ಈ ಫಲಿತಾಂಶವನ್ನು ಸುಗಮಗೊಳಿಸಿದ್ದಕ್ಕಾಗಿ ಪಾಕಿಸ್ತಾನ ಅಮೆರಿಕಾವನ್ನು ಶ್ಲಾಘಿಸುತ್ತದೆ. ದಕ್ಷಿಣ ಏಷ್ಯಾದಲ್ಲಿ ಶಾಂತಿಗೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಪೋಸ್ಟ್ ಮಾಡಿದ್ದರು.