ನವದೆಹಲಿ, ಜ.8- ಪಾಕ್‌ಗೆ ಬರಲು ಒಪ್ಪದ ಭಾರತ ತಂಡಕ್ಕೆ ದುಬೈನ ಒಂದೇ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯವಾಡಲು ಅವಕಾಶ ಕಲ್ಪಿಸಿಕೊಟ್ಟಿರುವುದಕ್ಕೆ ಅಪಸ್ವರ ಕೇಳಿ ಬಂದಿದೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಬಹುತೇಕ ವ್ಯಾಚ್‌ಗಳು ಪಾಕಿಸ್ತಾನದಲ್ಲಿ ಜರುಗಿದರೆ, ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ಆಯೋಜನೆಗೊಳ್ಳಲಿದೆ. ಇತ್ತ ಭಾರತ ತಂಡದ ಪಂದ್ಯಗಳು ಒಂದೇ ಮೈದಾನದಲ್ಲಿ ನಡೆಯುತ್ತಿರುವುದರ ಬಗ್ಗೆ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಇತರ ತಂಡಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಲಿದೆ ಎಂದು ಡಾನ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ಮಾಜಿ ಬೌಲರ್ ಸಲೀಂ ಅಲ್ತಾಫ್ ಹೇಳಿದ್ದಾರೆ.
ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳಿದ್ದು, ಇಲ್ಲಿ ಟೀಮ್ ಇಂಡಿಯಾ ಮಾತ್ರ ಒಂದೇ ಮೈದಾನದಲ್ಲಿ ತನ್ನ ಪಂದ್ಯಗಳನ್ನಾಡಲಿದೆ. ಇದೇ ವೇಳೆ ಇತರೆ ತಂಡಗಳು ಪಾಕಿಸ್ತಾನದ ಮೂರು ಮೈದಾನದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಹೈಬ್ರಿಡ್ ಮಾದರಿಯು ಟೀಮ್ ಇಂಡಿಯಾ ಪಾಲಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಅಲ್ತಾಫ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡವು ಲೀಗ್ ಹಂತದಲ್ಲಿ ಪಾಕಿಸ್ತಾನ್, ನ್ಯೂಝಿಲೆಂಡ್ ಮತ್ತು ಬಾಂಗ್ಲಾದೇಶ್ ವಿರುದ್ಧ ಪಂದ್ಯಗಳನ್ನಾಡಲಿದೆ. ಇದಕ್ಕಾಗಿ ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳು ದುಬೈಗೆ ಹೋಗಬೇಕಾಗುತ್ತದೆ. ಆದರೆ ಟೀಮ್ ಇಂಡಿಯಾಗೆ ಯಾವುದೇ ಪ್ರಯಾಣದ ಚಿಂತೆಯಿಲ್ಲ ಎಂದಿದ್ದಾರೆ.
ಅದೇ ರೀತಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ನಾಯಕ ಇಂತಿಖಾಬ್ ಆಲಂ, ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ಎಲ್ಲಿ ಆಡಬೇಕೆಂದು ತಿಳಿದಿರುವ ಏಕೈಕ ತಂಡ ಭಾರತ. ಅದೇ ಉಳಿದ ತಂಡಗಳ ಸೆಮಿಫೈನಲ್ ನಿರ್ಧಾರವಾಗುವುದು ಗ್ರೂಪ್ ಹಂತದ ಪಂದ್ಯಗಳ ಬಳಿಕ. ಇದರಿಂದ ಟೀಮ್ ಇಂಡಿಯಾ ಒಂದೇ ಪಿಚ್‌ನಲ್ಲಿ ಹೊಂದಿಕೊಳ್ಳಲು ಕೂಡ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ತಿಂಗಳು ಮಾತ್ರ ಉಳಿದಿರುವಾಗ ಹೈಬ್ರಿಡ್ ಮಾದರಿ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಚಕಾರವೆತ್ತಿದ್ದು, ಇದರ ಬೆನ್ನಲ್ಲೇ ಟೂರ್ನಿಯಲ್ಲಿ ಟೀಮ್ ಇಂಡಿಯಾಗೆ ಆಗುವ ಅನುಕೂಲಗಳ ಬಗ್ಗೆ ಚರ್ಚೆಗಳು ಶುರುವಾಗಿದೆ.