ಬೆಂಗಳೂರು, ಅ.13- ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ಪಾಕ್ ನಿವಾಸಿಗಳು ಪತ್ತೆಯಾಗುತ್ತಿದ್ದಂತೆ ಆತಂಕ ಹೆಚ್ಚಾಗಿದೆ. ವಿವಿಧ ಕೈಗಾರಿಕೆಗಳಲ್ಲಿ, ಹೋಟೆಲ್ ಉದ್ಯಮ, ರೆಸ್ಟೋರೆಂಟ್, ಸೆಲೂನ್, ಗಾರ್ಮೆಂಟ್ಸ್‌ಗಳಲ್ಲಿ ಮತ್ತಿತರ ಕಡೆಗಳಲ್ಲಿ ಬೇರೆಡೆಯಿಂದ ಬಂದು ಕೆಲಸಕ್ಕೆ ಸೇರಿಕೊಂಡವರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಕಡಿಮೆ ವೇತನಕ್ಕೆ ಉತ್ತರ ಭಾರತ ಮೂಲದವರೆಂದು ಕೆಲಸಕ್ಕೆ ಸೇರಿಕೊಂಡಿದ್ದಾರೆ. ಪಾಕ್ ಪ್ರಜೆಗಳು ಬಾಂಗ್ಲಾ ಮೂಲಕ ಆಕ್ರಮವಾಗಿ ಭಾರತಕ್ಕೆ ಒಳ ನುಸುಳಿ ನಕಲಿ ಆಧಾರ್‌ಕಾರ್ಡ್, ಪ್ಯಾನ್ ಕಾರ್ಡ್, ರೇಶನ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಮತ್ತಿತರ ಪತ್ರಗಳನ್ನು ಮಾಡಿಸಿಕೊಂಡು ಕೆಲಸಕ್ಕೆ ಸೇರ್ಪಡೆಯಾಗಿ ಒಳಗೊಳಗೇ ಧರ್ಮಪ್ರಚಾರ, ಮತಾಂತರ ಮಾಡುವುದಲ್ಲದೆ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಅನುಮಾನಿತರ ದಾಖಲೆಗಳನ್ನು ಪರಿಶೀಲನೆ ನಡೆಸುವುದು, ಅನುಮಾನ ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸುವುದು ಪ್ರತಿಯೊಬ್ಬರ ನಾಗರಿಕರ ಕರ್ತವ್ಯವಾಗಿದೆ. ಈಗಾಗಲೇ ದೇಶದಲ್ಲಿ ಹಲವಾರು ಭಯೋತ್ಪಾದನಾ ಚಟುವಟಿಕೆಗಳು ನಡೆದು ಹೋಗಿವೆ. ಸಾವಿರಾರು ಅಮಾಯಕ ನಾಗರಿಕರು ಬಲಿಯಾಗಿದ್ದಾರೆ.
ಅಪಾರ ಪ್ರಮಾಣದ ಆಸ್ತಿ/ಪಾಸ್ತಿ ನಷ್ಟವಾಗಿದೆ. ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು. ಹಾಗೆಂದ ಮಾತ್ರಕ್ಕೆ ಪ್ರತಿಯೊಬ್ಬರನ್ನೂ ಅನುಮಾನದ ದೃಷ್ಟಿಯಿಂದ ನೋಡಬೇಕೆಂದಿಲ್ಲ.
ಯಾವುದಕ್ಕೂ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಉಡಾಫೆ ಮಾಡದೇ ಅವರ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೇಮಕ ಮಾಡಿಕೊಳ್ಳುವುದು ಸೂಕ್ತ. ಈ ರೀತಿ ಮಾಡಿದರೆ ಅನಾಹುತಗಳನ್ನು ತಪ್ಪಿಸಬಹುದಾಗಿದೆ.