ದಾವಣಗೆರೆ,ಅ.3- ಬೆಂಗಳೂರಿನಲ್ಲಿ ಪಾಕ್ ಪ್ರಜೆ ಸೇರಿ ಇಬ್ಬರ ಬಂಧನದ ಬೆನ್ನಲ್ಲೇ ಪಾಕಿಸ್ತಾನಿ ಮಹಿಳೆಯೊಬ್ಬರು ರಾಜ್ಯದ ದಾವಣಗೆರೆಯ ವ್ಯಕ್ತಿಯನ್ನು ಮದುವೆ ಆಗಿರುವುದು ಬೆಳಕಿಗೆ ಬಂದಿದ್ದು ಚೆನ್ನೈನಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ಎಂಬಾತನನ್ನು ಕಳೆದ 4 ವರ್ಷಗಳ ಹಿಂದೆ ವಿವಾಹವಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ನಗರದ ಶಿವಕುಮಾರ ಸ್ವಾಮಿ ಬಡಾವಣೆ 1ನೇ ಹಂತದಲ್ಲಿ ವಾಸವಾಗಿರುವ ಆರೋಗ್ಯ ಇಲಾಖೆ ನಿವೃತ್ತ ನೌಕರ ಖಲಂದರ್ ಎಂಬವರ ಮೊದಲ ಮಗ ಅಲ್ತಾಫ್‌ನನ್ನು ಫಾತಿಮಾ ಮದುವೆಯಾಗಿದ್ದಾಳೆ.
ಖಲಂದರ್ ನಿವೃತ್ತಿ ನಂತರ ಬೆಂಗಳೂರಿಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದರು. ಅಲ್ಲಿಯೇ ಅಲ್ತಾಫ್ ಮತ್ತು ಫಾತಿಮಾ ನಿಖಾ (ಮದುವೆ) ನಡೆದಿತ್ತು ಎಂದು ತಿಳಿದುಬಂದಿದ್ದು ಪ್ರಸ್ತುತ ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯ ಮನೆಯನ್ನು ಖಲಂದರ್ ಬಾಡಿಗೆ ನೀಡಿದ್ದಾರೆ.
ಅಲ್ತಾಫ್‌ನನ್ನು ವಿವಾಹವಾಗಿದ್ದ ಫಾತಿಮಾ ಆಗಾಗ ದಾವಣಗೆರೆಗೆ ಬಂದು, ಹೋಗುತ್ತಿದ್ದಳು. ಕಳೆದ ವರ್ಷ ಖಲಂದರ್ ಪತ್ನಿ ಮೃತಪಟ್ಟಿದ್ದಾಗ ಕೂಡ ಫಾತಿಮಾ ದಾವಣಗೆರೆಗೆ ಬಂದಿದ್ದಳು ಎನ್ನಲಾಗಿದೆ.
ಅಲ್ತಾಫ್ ಹಾಗೂ ಫಾತಿಮಾ ದಂಪತಿ ಇಸ್ಲಾಂ ಧರ್ಮದ ಬಗ್ಗೆ ಪ್ರಚಾರ ಮಾಡುವ ಮೆಹದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದುದ್ದಲ್ಲದೆ ತಮ ಸಮಾಜದವರಿಗೆ ಮುಸ್ಲಿಂ ಪ್ರಚಾರ ಕಾರ್ಯಗಳನ್ನು ನೋಡುವಂತೆ ಪ್ರೇರೇಪಿಸುತ್ತಿದ್ದರು. ಅದಕ್ಕಾಗಿ ಅವರಿಗೆ ಹಣ ಸಂದಾಯವಾಗುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.ಪಾಕ್ ಮೂಲದ ಮಹಿಳೆಗೆ ದಾವಣಗೆರೆ ನಿವಾಸದ ವಿಳಾಸದಲ್ಲೇ ಪಾರ್ಸ್‌ಪೋರ್ಟ್ ಹಾಗೂ ಇನ್ನಿತರ ಅಗತ್ಯ ದಾಖಲೆಗಳನ್ನು ಮಾಡಿಸಿಕೊಡಲಾಗಿದೆ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರಸ್ತುತ ಅಲ್ತಾಫ್ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ದಾವಣಗೆರೆ ಪೊಲೀಸರು ಸಹ ತನಿಖೆಗೆ ಸಹಕರಿಸಿದ್ದು, ಪಾಸ್‌ಪೋರ್ಟ್ ಮೇಲೆ ನಿಗಾ ಇಟ್ಟಿದ್ದಾರೆ. ಫಾತಿಮಾಳನ್ನು ಮದುವೆಯಾದ ಬಳಿಕ ಆಕೆಯ ಕುಟುಂಬದವರನ್ನು ಪಾಕ್ ಮತ್ತು ಬಾಂಗ್ಲಾದಿಂದ ಮೊದಲು ದೆಹಲಿಗೆ ಕರೆಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ತನಿಖಾ ಅಧಿಕಾರಿಗಳು ಕಲೆ ಹಾಕಿದ್ದಾರೆ.
ಇತ್ತೀಚೆಗೆ ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಪಾಕ್ ಕುಟುಂಬ ಆರು ವರ್ಷಗಳಿಂದ ಹಿಂದು ಹೆಸರಿಟ್ಟುಕೊಂಡು ಬೆಂಗಳೂರಿನಲ್ಲೇ ವಾಸವಿದ್ದರೂ ಯಾರಿಗೂ ತಿಳಿದಿರಲಿಲ್ಲ ಎಂಬುದು ಅಚ್ಚರಿ ಮೂಡಿಸಿದೆ.
ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಗಣಿ ಪೊಲೀಸರು ಪಾಕಿಸ್ತಾನಿ, ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಬಂಧಿಸಿದ್ದರು ಇದೀಗ ದಾವಣಗೆರೆಯಲ್ಲೂ ಪಾಕಿಸ್ತಾನ ಮೂಲದ ಮಹಿಳೆ ಮದುವೆಯಾಗಿರುವ ಬಗ್ಗೆ ಬೆಳಕಿಗೆ ಬಂದಿರುವುದು ಸ್ಥಳೀಯರನ್ನು ಬೆಚ್ಚಿಬಿಳಿಸಿದೆ.