Thursday, April 24, 2025
Homeರಾಷ್ಟ್ರೀಯ | Nationalಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಭಾರತ ತೊರೆಯುತ್ತಿರುವ ಪಾಕಿಗಳು

ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಭಾರತ ತೊರೆಯುತ್ತಿರುವ ಪಾಕಿಗಳು

Pakistanis leaving India after strict instructions

ನವದೆಹಲಿ,ಏ.24– ಜಮು ಮತ್ತು ಕಾಶೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ನರಮೇಧಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡ ಬೆನ್ನಲ್ಲೇ ದೇಶದಲ್ಲಿದ್ದ ಪಾಕಿಸ್ತಾನಿಗಳು ಜಾಗ ಖಾಲಿ ಮಾಡುತ್ತಿದ್ದಾರೆ.

48 ಗಂಟೆಯೊಳಗೆ ಭಾರತ ದಲ್ಲಿರುವ ಪಾಕ್‌ ಪ್ರಜೆ ಗಳು ತತ್‌ಕ್ಷಣವೇ ದೇಶದಿಂದ ಜಾಗ ಖಾಲಿ ಮಾಡಬೇಕೆಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಹಿನ್ನಲೆಯಲ್ಲೇ ಪಾಕಿಗಳು ಗಂಟುಮೂಟೆ ಕಟ್ಟುತ್ತಿದ್ದಾರೆ.

ಪಾಕಿಸ್ತಾನದೊಂದಿಗೆ ಭಾರತ ನೇರವಾಗಿ ವಿಮಾನಯಾನ ಸಂಪರ್ಕವನ್ನು ಹೊಂದಿಲ್ಲ. ಇಲ್ಲಿರುವ ಪಾಕ್‌ ಪ್ರಜೆಗಳು ದುಬೈಗೆ ತೆರಳಿ ಅಲ್ಲಿಂದ ಇಸ್ಲಾಮಾಬಾದ್‌, ಕರಾಚಿ, ಲಾಹೋರ್‌ ಸೇರಿದಂತೆ ಮತ್ತಿತರ ನಗರಗಳಿಗೆ ಪ್ರಯಾಣ ಬೆಳೆಸಬೇಕು. ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಅವಕಾಶ ಬೇಕಾಗುತ್ತದೆ.

ಹೀಗಾಗಿ ಪಾಕಿಸ್ತಾನದ ಪ್ರಜೆಗಳು ಪಂಜಾಬ್‌ನಲ್ಲಿರುವ ಭಾರತ ಮತ್ತು ಪಾಕಿಸ್ತಾನ ಗಡಿಯಾದ ಅಟ್ಟಾರಿ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಲು ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ.
ಕಳೆದ ರಾತ್ರಿಯೇ ಈ ಗಡಿಯನ್ನು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬಂದ್‌ ಮಾಡಲಾಗಿದ್ದು, ಇದೀಗ ಭಾರೀ ಪ್ರಮಾಣದಲ್ಲಿ ಪಾಕ್‌ ಪ್ರಜೆಗಳು ತವರಿನತ್ತ ತೆರಳಲು ಇಲ್ಲಿ ಜಮಾಯಿಸಿದ್ದಾರೆ. ಎಲ್ಲರನ್ನೂ ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತದೆ.

ಈ ಬೆಳವಣಿಗೆಯಿಂದ ಅಟ್ಟಾರಿ-ವಾಘಾ ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತದ ಗಡಿಯಲ್ಲೇ ಸಿಲುಕಿಕೊಂಡಿದ್ದಾರೆ. ಸರ್ಕಾರದ ಸೂಚನೆಯಂತೆ ಭಾರತ ತೊರೆಯಲು ಮುಂದಾಗಿರುವ ಪಾಕಿಸ್ತಾನಿ ಪ್ರಜೆಗಳು ಅಟ್ಟಾರಿ-ವಾಘಾ ಗಡಿಯನ್ನು ತಲುಪಿದ್ದಾರೆ. ಒಟ್ಟಾರೆ ಪಾಕಿಸ್ತಾನದೊಂದಿಗಿನ ಸಂಪೂರ್ಣ ಸಂಬಂಧವನ್ನು ಕಡಿತಗೊಳಿಸುವ ಕ್ರಮಗಳನ್ನು ಭಾರತ ಕೈಗೊಂಡಿದೆ.

ಪಹಲ್ಗಾಮ್‌ ದಾಳಿಯ ನಂತರ ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಸಿಸಿಎಸ್‌‍ ಸಭೆ ನಡೆಸಿ, ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಇದರ ಭಾಗವಾಗಿ ಭಾರತದಲ್ಲಿ ಸಾರ್ಕ್‌ ಅಡಿಯಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ತಕ್ಷಣವೇ ತೊರೆಯುವಂತೆ ಸೂಚಿಸಿರುವುದು ಪಾಕಿಸ್ತಾನದ ಮೇಲಿನ ಒತ್ತಡ ತಂತ್ರದ ಒಂದು ಭಾಗವಾಗಿದೆ.

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಅವರ ಪ್ರಕಾರ, ಭಾರತವು ಹಲವು ಪಾಕಿಸ್ತಾನಿ ಮಿಲಿಟರಿ ರಾಜತಾಂತ್ರಿಕರನ್ನು ಪರ್ಸೋನಾ ನಾನ್‌ಗ್ರಾಟ ಎಂದು ಘೋಷಿಸಿ ಗಡಿಪಾರು ಮಾಡಿದೆ. ಅಷ್ಟೇ ಅಲ್ಲದೆ, ಅಟ್ಟಾರಿಯಲ್ಲಿನ ಪ್ರಮುಖ ಗಡಿ ತಪಾಸಣಾ ಕೇಂದ್ರವನ್ನು ಮುಚ್ಚಲಾಗಿದೆ.

ಇದರಿಂದ ಸರಕು ಮತ್ತು ಜನರ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.ಮೇ 2025ರ ಮೊದಲು ವೀಸಾ ಹೊಂದಿರುವ ಪಾಕಿಸ್ತಾನಿಯರು ಅದೇ ಮಾರ್ಗದಲ್ಲಿ ಹಿಂತಿರುಗಬಹುದು ಎಂದು ಸೂಚಿಸಲಾಗಿದೆ. ಪಾಕಿಸ್ತಾನ ಪ್ರಜೆಗಳು ಮೇ 2025ರ ಮೊದಲು ವಾಪಸ್‌‍ ಬರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಟಾರಿ-ವಾಘಾ ಗಡಿ ಬಂದ್‌ ಮಾಡಿದ ಕೇಂದ್ರದ ಕ್ರಮದಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವ್ಯವಹಾರಕ್ಕೆ ತಡೆ ಬೀಳಲಿದೆ. ಅಂತಾರಾಷ್ಟ್ರೀಯ ಗಡಿ ಚೆಕ್‌ಪೋಸ್ಟ್‌ ಮುಚ್ಚುವುದರಿಂದ ದೇಶದ ಏಕೈಕ ಭೂ ಬಂದರು ಬಂದ್‌ ಆಗಲಿದೆ. ಇದರಿಂದ ಭಾರತ-ಪಾಕಿಸ್ತಾನ-ಅಫಘಾನಿಸ್ತಾನ ನಡುವಿನ ವ್ಯಾಪಾರ ಸ್ಥಗಿತಗೊಳ್ಳಲಿದೆ.

RELATED ARTICLES

Latest News