ಬೆಳಗಾವಿ,ಡಿ.12– ಪ್ರತಿಭಟನಾನಿರತರು ಕಾನೂನು ಕೈಗೆತ್ತಿಕೊಂಡಾಗ ಪರಿಸ್ಥಿತಿ ಯನ್ನು ನಿಯಂತ್ರಿಸಲು ಲಾಠಿಚಾರ್ಜ್ ಮಾಡುವುದು ಅನಿವಾರ್ಯ ವಾಗಿತ್ತು ಎಂದು ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅನ್ನು ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಪ್ರತಿಭಟನೆ ನಡೆಸಬಾರದು ಎಂದು ಸರ್ಕಾರ ಮತ್ತು ಜಿಲ್ಲಾಡಳಿತ ಸೂಚನೆ ಕೊಟ್ಟಿತ್ತು. ಪ್ರತಿಭಟನಾನಿರತರು ನಿರ್ಬಂಧದ ನಿಯಮ ಉಲ್ಲಂಘನೆ ಮಾಡಿದ್ದರಿಂದಲೇ ಲಾಠಿಚಾರ್ಜ್ ಮಾಡುವುದು ಅನಿವಾರ್ಯವಾಗಿತ್ತು. ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಸುಮನಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಂಚಮಸಾಲಿ ಸಮುದಾಯ ಪ್ರತಿಭಟನೆ ಮಾಡುತ್ತೇವೆ ಎಂದಾಗ ಅವರಿಗೆ ಕೆಲವು ನಿರ್ಬಂಧನೆಗಳನ್ನು ಹಾಕಿದ್ದೆವು. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದೆಂದು ಸ್ಪಷ್ಟವಾಗಿ ಸೂಚನೆ ಕೊಡಲಾಗಿತ್ತು. ಮೊದಲು ಒಪ್ಪಿಕೊಂಡವರು ನಂತರ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದರು. ಸಾರ್ವಜನಿಕರಿಗೆ ತೊಂದರೆಯಾದಾಗ ನಾವು ಸುಮನಿರಲು ಸಾಧ್ಯವೇ ಎಂದು ಮಾಧ್ಯಮದವರನ್ನೆ ಪರಮೇಶ್ವರ್ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ನಾವು ಶ್ರೀಗಳ ಮನವಿಗೆ ಸ್ಪಂದಿಸಿ ಸಚಿವರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದರೂ ಒಪ್ಪಲಿಲ್ಲ. ಹೋರಾಟಗಾರರು ತಾವೇ ಮೊದಲು ಚಪ್ಪಲಿ ಹಾಗೂ ಕಲ್ಲುಗಳನ್ನು ಎಸೆದರು. ಸ್ವತಃ ಸ್ವಾಮೀಜಿಯವರೂ ಕೂಡ ಕಾನೂನನ್ನು ಕೈಗೆತ್ತಿಕೊಂಡರು. ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗ ತಡೆಯುವುದು ಅನಿವಾರ್ಯವಾಗಿತ್ತು ಎಂದರು.
ಹೋರಾಟಗಾರರು ಹೀಗೆ ಮುತ್ತಿಗೆ ಹಾಕಲು ಅವಕಾಶ ನೀಡಿದರೆ ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ನ್ಯಾಯಾಲಯ ದತಡೆಯಾಜ್ಞೆ ಇದ್ದಾಗಲೂ ನಿರ್ಬಂಧದ ನಿಯಮಗಳನ್ನು ಸ್ವಾಮೀಜಿ ಸೇರಿದಂತೆ ಎಲ್ಲರೂ ಗಾಳಿಗೆ ತೂರಿದ್ದಾರೆ.ಇದಕ್ಕೆ ಸಂಬಂಧಿಸಿದ ವಿಡಿಯೋ, ಪೋಟೋ ದಾಖಲೆಗಳು ನಮ ಬಳಿಯೇ ಇವೆ.
ಸುಖಾಸುಮನೆ ಲಾಠಿಚಾರ್ಜ್ ಮಾಡಿಲ್ಲ ಎಂದು ಪೊಲೀಸರ ಕ್ರಮವನ್ನು ಮತ್ತೆ ಸಮರ್ಥಿಸಿದರು.
ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರ ಹಕ್ಕು. ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಮೊದಲು 5 ಸಾವಿರ ಟ್ರ್ಯಾಕ್ಟರ್ ತೆಗೆದುಕೊಂಡು ಬರುತ್ತೇವೆ ಎಂದು ಬೇಡಿಕೆ ಇಟ್ಟರು. ನಾವು ಇಷ್ಟು ಟ್ರ್ಯಾಕ್ಟರ್ ತಂದರೆ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬೇಡ ಎಂದು ಮನವಿ ಮಾಡಿದೆವು. ಟ್ರ್ಯಾಕ್ಟರ್ ಬದಲು ಟ್ಯಾಕ್ಸಿ ಬಳಸಲು ಅವಕಾಶ ನೀಡಿದೆವು. ಮುಖ್ಯಮಂತ್ರಿಗಳೇ ಹೋರಾಟದ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರೆ ನಾವು ಮೌನ ವಹಿಸಿಕೊಂಡು ಇರಬೇಕಿತ್ತೇ ಎಂದು ಸಿಡಿಮಿಡಿಗೊಂಡರು.
ನಾವು ಸಮಸ್ಯೆಯನ್ನು ಪರಿಹರಿಸಲು ಮುಂದಾದರೆ ಸ್ವಾಮೀಜಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಕರೆ ನೀಡುತ್ತಾರೆ. ಜಿಲ್ಲಾಡಳಿತ ಕೆಲವು ನಿಬಂಧನೆಗಳನ್ನು ಸಹ ಹಾಕಿತ್ತು. ಸುವರ್ಣ ಸೌಧ ಮುತ್ತಿಗೆ ಹಾಕಬಾರದೆಂದು ನಾವು ಮೊದಲೇ ಮನವಿ ಮಾಡಿಕೊಂಡಿದ್ದೆವು. ನ್ಯಾಯಾಲಯದ ತಡೆಯಾಜ್ಞೆ ಕೂಡಾ ಇತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇದನ್ನು ಮಾಡಬೇಕಾಗಿತ್ತೇ ಹೊರತು ಇದರಲ್ಲಿ ಕರ್ತವ್ಯ ಲೋಪ ಬರುವುದಿಲ್ಲ. ನಮದು ತಪ್ಪಿದ್ದರೆ ಕ್ಷಮೆ ಕೇಳೋಣ ಬಿಡಿ ಎಂದು ಪರಮೇಶ್ವರ್ ಮಾರ್ಮಿಕವಾಗಿ ಹೇಳಿದರು.