Thursday, January 9, 2025
Homeರಾಜಕೀಯ | Politics60% ಕಮಿಷನ್ ಆರೋಪ ಮಾಡಿದ ಎಚ್ಡಿಕೆಗೆ ಪರಮೇಶ್ವರ್ ತಿರುಗೇಟು

60% ಕಮಿಷನ್ ಆರೋಪ ಮಾಡಿದ ಎಚ್ಡಿಕೆಗೆ ಪರಮೇಶ್ವರ್ ತಿರುಗೇಟು

Parameshwara hits back at HDK for alleging 60% commission

ಬೆಂಗಳೂರು,ಜ.7- ರಾಜ್ಯದಲ್ಲಿ ಶೇ.60ರಷ್ಟು ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂಬ ಆರೋಪಕ್ಕೆ ಪುರಾವೆಗಳಿದ್ದು ಅದನ್ನು ಒದಗಿಸಿದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದವರು ಮತ್ತು ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಮಾತನಾಡಿದರೆ ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಶೇ.60ರಷ್ಟು ಕಮಿಷನ್ನ ಆರೋಪಕ್ಕೆ ಪುರಾವೆಗಳಿದ್ದರೆ ಒದಗಿಸಿ. ನಮ ಸರ್ಕಾರ ತನಿಖೆ ನಡೆಸಲಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡಬೇಡಿ ಎಂದರು.

ಈ ಹಿಂದೆ ನಾವು ಶೇ.40 ರಷ್ಟು ಕಮಿಷನ್ ಮಾಡುವ ಮೊದಲು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಅದರ ಬಳಿಕ ನಾವು ಸಾರ್ವಜನಿಕವಾಗಿ ಆರೋಪ ಮಾಡಲು ಆರಂಭಿಸಿದೆವು ಎಂದು ತಿಳಿಸಿದರು.

ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಕೈಗಾರಿಕೆ ಹಾಗೂ ಉಕ್ಕು ಸಚಿವರಾಗಿರುವ ಅವರು, ರಾಜ್ಯಕ್ಕೆ ಉಕ್ಕು ಕಾರ್ಖಾನೆ ಅಥವಾ ಬೃಹತ್ ಕೈಗಾರಿಕೆಗಳನ್ನು ಮಂಜೂರು ಮಾಡಿಸಲಿ. ಈ ಹಿಂದೆ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಮೈಸೂರಿನ ಮಹಾರಾಜರು ಸ್ಥಾಪಿಸಿದ ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚುವ ಸ್ಥಿತಿಯಿದೆ. ಬಹಳ ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಆ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಿ ಎಂದು ವೈಯಕ್ತಿಕವಾಗಿ ಸಲಹೆ ನೀಡುತ್ತೇನೆ.

ಮುಖ್ಯಮಂತ್ರಿಯಾಗಿ ಅವರ ಜೊತೆ ನಾನು ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿ, ತಮಗಿರುವ ಪ್ರಭಾವವನ್ನು ಪ್ರಧಾನಮಂತ್ರಿಯವರ ಬಳಸಿ ರಾಜ್ಯಕ್ಕೆ ಅನುಕೂಲ ಮಾಡಿ, ಅದರ ಹೊರತಾಗಿ ರಾಜಕೀಯಕ್ಕಾಗಿ ಆರೋಪ ಮಾಡುತ್ತಾ ಕಾಲ ಕಳೆಯಬೇಡಿ ಎಂದರು.

ಎಚ್ಎಂಪಿ ವೈರಸ್ ಅಪಾಯಕಾರಿಯಲ್ಲ ಎಂದು ವೈದ್ಯರು ಹಾಗೂ ತಜ್ಞರು ವಿಶ್ಲೇಷಿಸಿದ್ದಾರೆ. ಸೋಂಕನ್ನು ತಡೆಯಲು ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸಿದ್ದು ಅಗತ್ಯ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ನಾವು ಎಚ್ಚರಿಕೆಯಿಂದ ಇರುವುದು ಅಗತ್ಯ ಎಂದು ಹೇಳಿದರು.

ನಕ್ಸಲೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಶರಣಾಗತರಾಗುವ ಅಗತ್ಯವಿದೆ. ವಿಕ್ರಂಗೌಡ ಅವರ ಎನ್ಕೌಂಟರ್ ಬಳಿಕ ಉಳಿದವರ ಶರಣಾಗತಿಗೆ ಅವಕಾಶ ಮಾಡಿಕೊಡಲಾಗಿದೆ. ಮೊದಲು ಅವರು ಶರಣಾಗಲಿ. ಅನಂತರ ಉಳಿದ ಪ್ರಕ್ರಿಯೆಗಳನ್ನು ಮುಂದುವರೆಸಲಾಗುವುದು ಎಂದರು.

ರಾಜ್ಯದಲ್ಲಿರುವ ನಕ್ಸಲರು ಶರಣಾಗತರಾದರೆ, ಹೊರಗಿನಿಂದ ಯಾರೂ ಬರದೇ ಇದ್ದರೆ ರಾಜ್ಯ ನಕ್ಸಲ್ ಚಟುವಟಿಕೆಯಿಂದ ಮುಕ್ತವಾಗುತ್ತದೆ. ಚಿನ್ನದ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಐಶ್ವರ್ಯ ಅವರ ಪತಿಯ ಕಾರನ್ನು ಶಾಸಕ ವಿನಯ್ಕುಲಕರ್ಣಿ ಬಳಕೆ ಮಾಡುತ್ತಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

RELATED ARTICLES

Latest News