ಬೆಂಗಳೂರು,ಏ.6- ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಬಂದೂಕು ತೆಗೆದುಕೊಂಡು ಯುದ್ಧ ಮಾಡುತ್ತಾರೆಯೇ? ಎಂದು ಗೃಹಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರಿಗೆ ಕೇಂದ್ರದಲ್ಲಿ ಉತ್ತಮ ಸ್ಥಾನವಿದೆ. ದೊಡ್ಡ ಖಾತೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಅವರು ನೀಡುವ ಸಲಹೆ, ಸೂಚನೆಗಳನ್ನು ನಾವು ಸ್ವೀಕಾರ ಮಾಡುತ್ತೇವೆ ಎಂದರು.
ನೇರ ಯುದ್ಧ ಮಾಡುತ್ತೇನೆ ಎಂದರೆ ಬಂದೂಕು ಹಿಡಿದುಕೊಂಡು ಯುದ್ಧ ಮಾಡಲು ಸಾಧ್ಯವೇ?, ರಾಜಕೀಯದಲ್ಲಿ ಟೀಕೆಟಿಪ್ಪಣಿಯನ್ನೇ ಯುದ್ಧ ಎಂದು ಭಾವಿಸಲಾಗುತ್ತದೆ. ನನ್ನ ಬಳಿ ಅದಕ್ಕೆ ದಾಖಲೆಗಳಿವೆ. ಅವುಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ದಾಖಲೆಗಳನ್ನು ಬಿಡುಗಡೆ ಮಾಡಲಿ, ನಂತರ ನಾವು ಸೂಕ್ತ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಅನೇಕ ಯೋಜನೆಗಳಲ್ಲಿ ಕುಮಾರಸ್ವಾಮಿಯವರು ಸರ್ಕಾರಕ್ಕೆ ಸಹಾಯ ಮಾಡಬೇಕಿದೆ. ಅದನ್ನು ಬಿಟ್ಟು ಯುದ್ಧ ಮಾಡುತ್ತೇವೆ ಎಂದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರ ಬಗ್ಗೆ ಏನು ಹೇಳಲು ಸಾಧ್ಯ? ಎಂದರು.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತಹತ್ಯೆ ಪ್ರಕರಣದಲ್ಲಿ ರಾಜ್ಯದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯದ ಪೊಲೀಸರ ತನಿಖೆಯ ನಂತರ ಲೋಪಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಶಾಸಕರ ಕೈವಾಡ ಇರುವ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಕೋವಿಡ್ ಕಾಲದಲ್ಲಿ ನಡೆದ ಹಗರಣಗಳ ಬಗ್ಗೆ ನ್ಯಾಯಮೂರ್ತಿ ಮೈಕಲ್ ಕುನ್ನಾ ಅವರ ವಿಚಾರಣಾ ಆಯೋಗ ಸರ್ಕಾರಕ್ಕೆ ವರದಿ ನೀಡಿದೆ. ಈ ಹಿಂದೆ ನೀಡಿದ್ದ ವರದಿ ಆಧರಿಸಿ ಆರೋಗ್ಯ ಇಲಾಖೆ ದೂರು ನೀಡಿದೆ. ಅದನ್ನು ಆಧರಿಸಿ ಎಫ್‌ಐಆರ್‌ಗಳು ದಾಖಲಾಗಿವೆ. ಇನ್ನೂ ಕೆಲವು ದೂರುಗಳು ಪರಿಶೀಲನೆಯಲ್ಲಿವೆ. ಅದನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.
ಖಾತೆ ಬದಲಾವಣೆ ಬಗ್ಗೆ ತಾವು ಯಾವುದೇ ಬೇಡಿಕೆಯನ್ನಿಟ್ಟಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದು ಸಾಧ್ಯವಾದರೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.