Monday, November 25, 2024
Homeರಾಜ್ಯಎಸ್‌‍ಐಟಿ ಅಧಿಕಾರಿಗಳು ಪ್ರಜ್ವಲ್‌ ಹೇಳಿಕೆ ಪಡೆಯುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್‌

ಎಸ್‌‍ಐಟಿ ಅಧಿಕಾರಿಗಳು ಪ್ರಜ್ವಲ್‌ ಹೇಳಿಕೆ ಪಡೆಯುತ್ತಿದ್ದಾರೆ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಮೇ 31– ವಿದೇಶದಿಂದ ಸ್ವದೇಶಕ್ಕೆ ಮರಳಿದ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌‍ಐಟಿ ಅಧಿಕಾರಿಗಳು ಬಂಧಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ನಿನ್ನೆ ತಡರಾತ್ರಿ 12.40 ಕ್ಕೆ ಬೆಂಗಳೂರಿನ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರನ್ನು ಬಂಧಿಸಿ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ಎಸ್‌‍ಐಟಿ ಅಧಿಕಾರಿಗಳು ಹೇಳಿಕೆ ಪಡೆಯುವುದು ಸೇರಿದಂತೆ ವಿವಿಧ ಕ್ರಮಗಳನ್ನು ಮುಂದುವರೆಸಿದ್ದಾರೆ ಎಂದರು.

ಆತಹತ್ಯೆ ಮಾಡಿಕೊಂಡ ವಾಲೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್‌ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಲು ನಿನ್ನೆ ತಾವು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ತಡವಾಗಿ ಬಂದಿದ್ದೇನೆ, ಅಧಿಕಾರಿಗಳ ಜೊತೆ ಇನ್ನೂ ಚರ್ಚೆ ನಡೆದಿಲ್ಲ. ಸದ್ಯದ ಮಾಹಿತಿ ಪ್ರಕಾರ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಮೊಬೈಲ್‌ ನಾಶವಾಗಿರುವ ಬಗ್ಗೆ ಬೇರೆ ಮೂಲಗಳಿಂದ ಬರುವ ಮಾಹಿತಿಯನ್ನು ನಂಬಲಾಗುವುದಿಲ್ಲ. ಎಸ್‌‍ಐಟಿ ಅಧಿಕಾರಿಗಳು ಹೇಳಿದರೆ ಅದು ಅಧಿಕೃತ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಪ್ರಕರಣದ ಬಗ್ಗೆ ಸಂತ್ರಸ್ತರು ದೂರು ನೀಡುವಂತೆ ಈಗಾಗಲೇ ಕರೆ ನೀಡಲಾಗಿತ್ತು. ಯಾರೇ ದೂರು ನೀಡಿದರೂ ಅವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಬೆಳವಣಿಗೆಯಾಗುತ್ತದೆ ಎಂದು ಕಾದುನೋಡಬೇಕಿದೆ ಎಂದರು.

ಪ್ರಜ್ವಲ್‌ ರೇವಣ್ಣ ಅವರಿಗೆ ಈಗಾಗಲೇ ಬ್ಲೂ ಕಾರ್ನರ್‌ ನೋಟೀಸ್‌‍ ನೀಡಲಾಗಿತ್ತು. ಸಿಬಿಐ ಮೂಲಕ ಇಂಟರ್‌ಪೂಲ್‌ ಅನ್ನು ಸಂಪರ್ಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಲೋಕಸಭಾ ಚುನಾವಣಾ ಫಲಿತಾಂಶ ಜೂನ್‌ 4 ರಂದು ಪ್ರಕಟವಾಗಲಿದ್ದು, ಹೆಚ್ಚೂ ಕಡಿಮೆಯಾದರೆ ಪ್ರಜ್ವಲ್‌ ರೇವಣ್ಣ ಅವರಿಗಿದ್ದ ರಾಜತಾಂತ್ರಿಕ ಪಾಸ್‌‍ಪೋರ್ಟ್‌ ರದ್ದುಗೊಳ್ಳುತ್ತಿತ್ತು.

ಇವೆಲ್ಲವನ್ನೂ ಅರಿತುಕೊಂಡು ಪ್ರಜ್ವಲ್‌ ರೇವಣ್ಣ ಭಾರತಕ್ಕೆ ವಾಪಸ್‌‍ ಬಂದಿದ್ದಾರೆ. ಅವರು ದೇಶದಲ್ಲೇ ಇದ್ದರೆ, ನಾಲ್ಕು ಜನ ಇನ್‌್ಸಪೆಕ್ಟರ್‌ಗಳನ್ನು ಅಥವಾ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಬಂಧಿಸಿ ಕರೆತರಬಹುದಿತ್ತು. ವಿದೇಶದಲ್ಲಿದ್ದಾಗ ಅಂತಾರಾಷ್ಟ್ರೀಯ ನಿಯಮಗಳಿರುತ್ತವೆ, ಅವುಗಳನ್ನು ಪಾಲನೆ ಮಾಡುವುದು ಅನಿವಾರ್ಯ ಎಂದು ಹೇಳಿದರು.
ಕೆ.ಆರ್‌.ಪೇಟೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್‌‍ನ ಮಾಜಿ ಸಚಿವ ಸಾ.ರಾ.ಮಹೇಶ್‌ ಅವರ ಹೆಸರು ಕೇಳಿಬಂದಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ವಿವರ ತಿಳಿದುಕೊಂಡ ನಂತರ ಪ್ರತಿಕ್ರಿಯಿಸುತ್ತೇನೆ.

ಸ್ವಯಂ ಪ್ರೇರಿತ ಸಿಬಿಐ ತನಿಖೆ ಇಲ್ಲ:
ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ನೂರು ಕೋಟಿ ರೂ.ಗಳಿಗೂ ಮೇಲ್ಪಟ್ಟ ವಹಿವಾಟುಗಳಿದ್ದರೆ ಅದು ಸಹಜವಾಗಿಯೇ ಸಿಬಿಐ ತನಿಖೆಗೊಳಪಡುತ್ತದೆ ಎಂಬ ಚರ್ಚೆಗಳಿವೆ. ಇನ್ನು ಮುಂದೆ ಯಾವ ರೀತಿ ತಿರುವು ಪಡೆಯುತ್ತದೆ ಎಂದು ನೋಡಬೇಕಿದೆ ಎಂದರು.

ಆತಹತ್ಯೆ ಮಾಡಿಕೊಂಡ ಚಂದ್ರಶೇಖರನ್‌ ಅವರ ಮರಣಪತ್ರದಲ್ಲಿರುವ ಮಾಹಿತಿಗಳು ಹಾಗೂ ಹಣ ವರ್ಗಾವಣೆ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸಿಬಿಐ ಮಧ್ಯಪ್ರವೇಶ ಮಾಡಿದರೆ ಸಿಐಡಿಯಿಂದ ಪ್ರಕರಣ ವರ್ಗಾವಣೆಗೊಳ್ಳುತ್ತದೆ. ನಾವಾಗಿಯೇ ಸಿಬಿಐ ತನಿಖೆ ಕೇಳುವುದಿಲ್ಲ. ಎರಡೆರಡೂ ತನಿಖೆಯೂ ನಡೆಯುವುದಿಲ್ಲ ಎಂದರು.

ಸಚಿವರ ರಾಜೀನಾಮೆಗೆ ಬಿಜೆಪಿ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ವಿರೋಧಪಕ್ಷವಾಗಿ ಅವರು ಗಡುವು ನೀಡುವುದು, ರಾಜೀನಾಮೆಗೆ ಒತ್ತಾಯಿಸುವುದು, ಪ್ರತಿಭಟಿಸುವುದು ಸಾಮಾನ್ಯ. ಆದರೆ ಸರ್ಕಾರಕ್ಕೂ ಜವಾಬ್ದಾರಿಯಿದೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.

187 ಕೋಟಿ ಸಾರ್ವಜನಿಕರ ಹಣ ಆಗಿರುವುದರಿಂದ ಮುಖ್ಯಮಂತ್ರಿಯವರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ನಿನ್ನೆ ನಾನು ಶಿವಮೊಗ್ಗದಲ್ಲಿದ್ದಾಗ ಕರೆ ಮಾಡಿ ಸಭೆ ನಡೆಸೋಣ ಎಂದು ಹೇಳಿದ್ದರು. ನಾನು ದೂರ ಇದ್ದಿದ್ದರಿಂದಾಗಿ ಅವರೇ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಯಾಗದಿಂದ ಸರ್ಕಾರ ಬೀಳಿಸಲಾಗುವುದಿಲ್ಲ:
ರಾಜ್ಯಸರ್ಕಾರವನ್ನು ಪತನಗೊಳಿಸಲು ಕೇರಳದಲ್ಲಿ ಯಾಗ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರಿಗೆ ಮಾಹಿತಿ ಇದೆ. ನನಗೆ ವಿವರಗಳು ಗೊತ್ತಿಲ್ಲ. ಅವರ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ ಯಾಗ ಮಾಡುವುದರಿಂದ ಸರ್ಕಾರ ಬೀಳಿಸಬಹುದು ಅಥವಾ ರಚಿಸಬಹುದು ಎಂದಾಗಿದ್ದರೆ ಎಲ್ಲರೂ ಯಾಗ ಮಾಡುತ್ತಲೇ ಇರುತ್ತಿದ್ದರು ಎಂದರು.

RELATED ARTICLES

Latest News