ಕರೀಂನಗರ,ಮೇ.20– ಮಾನಸಿಕ ಅಸ್ವಸ್ಥ ಮಗಳನ್ನು ಹೆತ್ತವರೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ. ಕರೀಂನಗರ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಣ್ಣ ಸಿರ್ಸಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಖಿಲ ಮಹಾಜನ್ ಪ್ರಕಾರ, ನೆರೆಲ್ಲದ ಚೇಪ್ಯಾಳ ನರಸಯ್ಯ (49) ಮತ್ತು ಅವರ ಪತ್ನಿ ಯಲ್ಲವ್ವ (43) ಅವರೇ ಹೆತ್ತ ಮಗಳನ್ನು ಕೊಂದ ಪೋಷಕರು ಎಂದು ತಿಳಿಸಿದ್ದಾರೆ. ದಂಪತಿ ತಮ್ಮ ಮಗಳು ಪ್ರಿಯಾಂಕಾ (24) ಅವರನ್ನು ಕೊಂದು ಇದು ಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದರು ಎನ್ನಲಾಗಿದೆ.
ಮಹಿಳೆ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಪೋಷಕರು ಆಕೆಗೆ ಚಿಕಿತ್ಸೆ ಕೊಡಿಸಿ ಮದುವೆ ಮಾಡಿದ್ದು ಆಕೆಗೆ 13 ತಿಂಗಳ ಮಗುವಿತ್ತು ಎನ್ನಲಾಗಿದೆ. ಮದುವೆ ನಂತರವೂ ಆಕೆಗೆ ಮಾನಸಿಕ ಅಸ್ವಸ್ಥೆ ಮರುಕಳಿಸಿದ್ದರಿಂದ ಮಹಿಳೆಗೆ ಮತ್ತೆ ಚಿಕಿತ್ಸೆ ನೀಡಿ ಪೂಜಾ ಸ್ಥಳಕ್ಕೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.
ಇದರಿಂದ ಬೇಸರಗೊಂಡ ಪೋಷಕರು ಆಕೆಯ ಜೀವನವನ್ನು ಅಂತ್ಯಗೊಳಿಸಲು ಯೋಜಿಸಿದ್ದರು. ಮೇ 14 ರಂದು ಅವರು ತಮ ಮಗಳು ಮನೆಯಲ್ಲಿ ಮಲಗಿದ್ದಾಗ ಅವರು ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಅವರು ಸಾವಿನ ಬಗ್ಗೆ ತಮ ಅಳಿಯನಿಗೆ ತಿಳಿಸಿ ಮರುದಿನ ಅಂತ್ಯಕ್ರಿಯೆ ನಡೆಸಿದರು.
ಮಹಿಳೆಯ ಸಾವಿನ ಬಗ್ಗೆ ಗ್ರಾಮಸ್ಥರು ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ದಂಪತಿಯ ಈ ಕೃತ್ಯ ಬಯಲಾಗಿದೆ.