Friday, November 29, 2024
Homeರಾಷ್ಟ್ರೀಯ | Nationalಸಂಭಾಲ್-ಅದಾನಿ ಪ್ರಕರಣಗಳ ಪ್ರತಿಧ್ವನಿ : ಸಂಸತ್ ಕಲಾಪ ಮುಂದೂಡಿಕೆ

ಸಂಭಾಲ್-ಅದಾನಿ ಪ್ರಕರಣಗಳ ಪ್ರತಿಧ್ವನಿ : ಸಂಸತ್ ಕಲಾಪ ಮುಂದೂಡಿಕೆ

Parliament adjourned second day in a row over Opposition protest on Adani case, Sambhal violence

ನವದೆಹಲಿನ.29- ಉತ್ತರಪ್ರದೇಶದ ಸಂಭಾಲ್ನಲ್ಲಿ ನಡೆದ ಹಿಂಸಾಚಾರ ಘಟನೆ ಹಾಗೂ ಉದ್ಯಮಿ ಅದಾನಿ ಪ್ರಕರಣ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಇಂದೂ ಕೂಡ ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ, ಸಂಸತ್ನ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಎಂದಿನಂತೆ ಎರಡು ವಿಷಯಗಳು ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ ಉಂಟಾಗಿದ್ದರಿಂದ ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಲಾಯಿತು. ಬೆಳಗ್ಗೆ 11 ಗಂಟೆಗೆ ಸಂಸತ್ನ ಕೆಳಮನೆಯಾದ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಸದಸ್ಯರು ದಿನದ ಎಲ್ಲಾ ಕಲಾಪಗಳನ್ನು ಬದಿಗೊತ್ತಿ ಸಂಭಾಲ್ ಗಲಭೆ ಪ್ರಕರಣ ಹಾಗೂ ಉದ್ಯಮಿ ಅದಾನಿ ಪ್ರಕರಣವನ್ನು ಚರ್ಚೆಗೆ ತೆಗೆದುಕೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾಗೆ ಮನವಿ ಮಾಡಿದರು.

ಮೊದಲು ಪ್ರಶ್ನೋತ್ತರ ಕಲಾಪ ಮುಗಿಯಲಿ. ನೀವು ಕೊಟ್ಟಿರುವ ನೋಟೀಸ್ನ್ನು ಪರಿಗಣಿಸಲಾಗುವುದು. ಮೊದಲು ಸದನವು ನಿಯಮಗಳಂತೆ ನಡೆಯಲಿ ಎಂದು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು. ಇದನ್ನು ಒಪ್ಪದ ಪ್ರತಿಪಕ್ಷಗಳ ಸದಸ್ಯರು ಮೊದಲು ಈ ಎರಡು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಿ. ಇದು ಅತ್ಯಂತ ತುರ್ತಾದ ಪ್ರಕರಣವಾಗಿದೆ ಎಂದು ಒತ್ತಾಯಿಸಿ ಸದನದ ಬಾವಿಗಿಳಿದು, ಘೋಷಣೆಗಳನ್ನು ಕೂಗಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದನವು ಕೇವಲ ಎರಡು ಪ್ರಶ್ನೆಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ಪೀಕರ್ ಅವರು ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಸದನ ಮತ್ತೆ ಸೇರಿದಾಗಲೂ ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆಯಿತು. ಗದ್ದಲದ ಪ್ರತಿಭಟನೆಯ ನಡುವೆ ಕೆಲವು ಸಚಿವರು ಕಾಗದಪತ್ರಗಳನ್ನು ಮಾತ್ರ ಮಂಡಿಸಿದರು. ಈ ವೇಳೆ ಸಭಾಪತಿಗಳ ಪೀಠದಲ್ಲಿ ಆಸೀನರಾಗಿದ್ದ ದಿಲೀಪ್ ಸೈಕಿಯಾ, ಪ್ರತಿಪಕ್ಷಗಳು ರಚನಾತಕ ಪಾತ್ರ ವಹಿಸುವಂತೆ ಒತ್ತಾಯಿಸಿದರು. ಅವರ ಮನವಿಗಳು ವಿಫಲವಾದಾಗ ಮುಂದೂಡಬೇಕಾಯಿತು.

ಇತ್ತ ರಾಜ್ಯಸಭೆಯಲ್ಲೂ ಇದೇ ವಿಷಯಗಳು ಪ್ರತಿಧ್ವನಿಸಿ ಸದನವನ್ನು ಸೋಮವಾರಕ್ಕೆ ಮುಂದೂಡಿದರು. ಅದಾನಿ ಗ್ರೂಪ್ ವಿರುದ್ಧದ ಆರೋಪ ಮತ್ತು ಮಣಿಪುರ ಮತ್ತು ಸಂಭಾಲ್ನಲ್ಲಿನ ಹಿಂಸಾಚಾರದ ಚರ್ಚೆಯ ಮುಂದೂಡಿಕೆ ನೋಟಿಸ್ಗಳನ್ನು ತಿರಸ್ಕರಿಸಿದ ವಿರೋಧ ಪಕ್ಷದ ಸಂಸದರು ಪ್ರತಿಭಟಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಮುಂದೂಡಬೇಕಾಯಿತು.

ದಿನದ ಕಲಾಪ ಆರಂಭವಾಗುತ್ತಿದ್ದಂತೆ ರಾಜ್ಯಸಭೆಯ ಸಭಾಪತಿ ಜಗದೀಶ್ ಧನ್ಕರ್ ಅವರು ಪಟ್ಟಿ ಮಾಡಲಾದ ಕಲಾಪವನ್ನು ಕೈಗೆತ್ತಿಕೊಂಡರು. ಸದನದ ನಿಯಮ 267ರಡಿ ನಿಗದಿತ ವ್ಯವಹಾರವನ್ನು ಮುಂದೂಡಲು 17 ಸೂಚನೆಗಳನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು. ಎಲ್ಲಾ ನೋಟಿಸ್ಗಳನ್ನು ತಿರಸ್ಕರಿಸುತ್ತಿರುವುದಾಗಿ ಸಭಾಪತಿ ತಿಳಿಸಿದರು. ಇದು ಹಲವು ವಿರೋಧ ಪಕ್ಷದ ಸಂಸದರ ಪ್ರತಿಭಟನೆಗೆ ಕಾರಣವಾಯಿತು.

ನಾನು ನಿಮಲ್ಲಿ ಮನವಿ ಮಾಡುವುದೇನೆಂದರೆ ಮೊದಲು ಕಲಾಪ ನಡೆಯಲು ಅವಕಾಶ ಮಾಡಿಕೊಡಿ. ತೊಂದರೆ ಮಾಡಬೇಡಿ ಎಂದು ಧನ್ಕರ್ ಮನವಿ ಮಾಡಿಕೊಂಡರೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಕಲಾಪವನ್ನು ಮುಂದೂಡಲಾಯಿತು.

RELATED ARTICLES

Latest News