ಬೆಂಗಳೂರು,ಫೆ.9– ಬಸ್ ಪ್ರಯಾಣ ದರ ಬೆಲೆ ಏರಿಕೆ ಬೆನ್ನಲ್ಲೇ ಮೆಟ್ರೋ ಪ್ರಯಾಣದರ ಶೇ.46 ರಷ್ಟು ಏರಿಕೆಯಾಗಿರುವುದಕ್ಕೆ ಕಂಗಾಲಾಗಿರುವ ಪ್ರಯಾಣಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೊಂದು ಪ್ರಮಾಣದ ಪ್ರಯಾಣದರ ಏರಿಕೆ ಮಾಡಿರುವುದು ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಗಿದೆ.
ಈಗಾಗಲೇ ಹಾಲು, ವಿದ್ಯುತ್, ಬಸ್ಪ್ರಯಾಣದರ, ದಿನನಿತ್ಯದ ವಸ್ತುಗಳ ದರ, ಹಣ್ಣು-ತರಕಾರಿ ಬೆಲೆಗಳು ಗಗನ ಮುಟ್ಟುತ್ತಿವೆ. ಈಗ ಮತ್ತೆ ಮೆಟ್ರೋ ದರವನ್ನು ಶೇ.46 ರಷ್ಟು ಏರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
2017 ರಿಂದ ಮೆಟ್ರೋ ದರ ಏರಿಕೆ ಮಾಡಿರಲಿಲ್ಲ. ಈಗ ದರ ಏರಿಕೆ ಮಾಡಲಾಗಿದೆ. ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂದು ಜನ ತಮ ಅಸಹನೆಯನ್ನು ಹೊರಹಾಕಿದ್ದಾರೆ.
ಬೆಳ್ಳಂಬೆಳಿಗ್ಗೆ ಮೆಟ್ರೋ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಿದೆ. ಟಿನ್ ಫ್ಯಾಕ್ಟರಿಯಿಂದ ಅಂಬೇಡ್ಕರ್ ನಿಲ್ದಾಣಕ್ಕೆ ಪ್ರತಿ ದಿನ 30 ರೂ. ಕೊಟ್ಟು ಓಡಾಡುತ್ತಿದ್ದ ಪ್ರಯಾಣಿಕರು ಇಂದು ಏಕಾಏಕಿ 60 ರೂ.ಗಳನ್ನು ಕೊಡಬೇಕಾಗಿದೆ.
ದುಪ್ಪಟ್ಟು ಪ್ರಯಾಣದರ ಏರಿಕೆಯಾಗಿರುವುದು ಶಾಕ್ ನೀಡಿದೆ ಎಂದು ತಮ ಅಸಮಾಧಾನ ಹೊರಹಾಕಿದ್ದಾರೆ. ಶೇ.5ರಷ್ಟು ಪ್ರಯಾಣ ದರ ಏರಿಸಿದರೆ ಪರವಾಗಿಲ್ಲ. ಆದರೆ ಶೇ.45, 50 ರಷ್ಟು ಪ್ರಯಾಣ ದರ ಏರಿಸಿದರೆ ಹೇಗೆ ನಾವು ಪ್ರಯಾಣಿಸುವುದು ಎಂದು ಹಲವರು ಅಲವತ್ತುಗೊಂಡಿದ್ದಾರೆ.
ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು ಸೇರಿದಂತೆ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಪ್ರತಿದಿನದ ಪಾಸ್ ಪಡೆದು ಪ್ರಯಾಣಿಸುವವರು ಹಲವರಿದ್ದಾರೆ. ಮಾಸಿಕ ಪಾಸ್ ಪಡೆದು ಹಲವರು ಪ್ರಯಾಣಿಸುತ್ತಾರೆ. ಎಲ್ಲದರ ದರವೂ ಏರಿಕೆಯಾಗಿದೆ. ಇಷ್ಟು ಪ್ರಮಾಣದ ದರ ಏರಿಕೆ ಅಗತ್ಯವಿತ್ತೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮೆಟ್ರೋ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ. ಯಾವುದೇ ನಷ್ಟ ಏನೂ ಉಂಟಾಗಿಲ್ಲ. ಲಾಭದ ಹಾದಿಯಲ್ಲಿ ಮೆಟ್ರೋ ಓಡುತ್ತಿದೆ. ಹಾಗಿದ್ದರೂ ದರ ಏರಿಕೆಯನ್ನು ಏಕೆ ಮಾಡಬೇಕಾಗಿತ್ತು ಎಂದು ಹಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ.ಪ್ರತಿದಿನ ಮೆಟ್ರೋದಲ್ಲಿ ಸಂಚರಿಸುವ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ದರ ಏರಿಕೆಯಿಂದ ಬೇಸರಗೊಂಡು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.
ಯಾವ ಸರ್ಕಾರಗಳು ಬಂದರೂ ಯಾವ ದರವೂ ಇಳಿಕೆಯಾಗಿಲ್ಲ. ಎಲ್ಲಾ ದರಗಳು ನಿರಂತರವಾಗಿ ಏರಿಕೆಯಾಗುತ್ತಲೇ ಇರುತ್ತವೆ. ಹೀಗಿದ್ದರೆ ಜನಸಾಮಾನ್ಯರು ಜೀವನ ಮಾಡುವುದು ದುಸ್ತರವಾಗುತ್ತದೆ. ಆಳುವ ಸರ್ಕಾರಗಳು ಜನರ ಪರವಾಗಿ, ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಆದರೆ ಪ್ರತಿದಿನ ಜನರಿಗೆ ಒಂದೊಂದು ಕಷ್ಟಗಳನ್ನೇ ಕೊಡುತ್ತಾ ಬಂದರೆ ಏನು ಮಾಡುವುದು ಎಂದು ಜನರು ತಮ ಅಳಲು ತೋಡಿಕೊಂಡಿದ್ದಾರೆ.