Sunday, June 30, 2024
Homeರಾಜ್ಯರೇಣುಕಾಸ್ವಾಮಿ ಪ್ರಕರಣದ ಆರೋಪಿಯೊಬ್ಬನ ಕರುಣಾಜನಕ ಕಥೆ

ರೇಣುಕಾಸ್ವಾಮಿ ಪ್ರಕರಣದ ಆರೋಪಿಯೊಬ್ಬನ ಕರುಣಾಜನಕ ಕಥೆ

ಬೆಂಗಳೂರು,ಜೂ.22- ಹುಚ್ಚು ಅಭಿಮಾನ ಒಂದೊಂದು ಬಾರಿ ಎಂತಹ ಪ್ರಾಣ ಸಂಕಟ ತಂದೊಡ್ಡುತ್ತದೆ ಎಂಬುದಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಯೊಬ್ಬನ ಕರುಣಾಜನಕ ಕಥೆ ಇದೆ.ಕನ್ನಡ ಚಿತ್ರರಂಗವನ್ನೇ ದಿಗ್ಬ್ರಮೆಗೊಳಿಸಿದ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರನಟ ದರ್ಶನ್‌ಗೆ ಸಹಕಾರ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳನ್ನು ನೋಡುವವರೂ ಇಲ್ಲ ಕೇಳುವವರು ಇಲ್ಲ.

ಈ ಪ್ರಕರಣದಲ್ಲಿ ಬಂಧಿತರಾಗಿರುವ ಕೆಲವರು ಆರ್ಥಿಕವಾಗಿ ಸದೃಢರಾಗಿದ್ದು, ನ್ಯಾಯಾಲಯದಲ್ಲಿ ವಾದ ಮಂಡಿಸಲು ತನಗೆ ಬೇಕಾದ ವಕೀಲರನ್ನು ನೇಮಿಸಿಕೊಂಡಿದ್ದಾರೆ.ಪ್ರಕರಣದ ಪ್ರಮುಖ ಆರೋಪಿ ಸದ್ಯ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಪವಿತ್ರಗೌಡ, 2ನೇ ಆರೋಪಿ ದರ್ಶನ್‌ ಸೇರಿದಂತೆ ಕೆಲವರ ಪರವಾಗಿ ಖ್ಯಾತ ವಕೀಲರು ವಾದ ಮಾಡಲು ಮುಂದೆ ಬಂದಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಶಾಮೀಲಾಗಿರುವ ಆರೋಪದ ಮೇಲೆ ಬಂಧಿತರಾಗಿರುವ ಇನ್ನು ಕೆಲವು ಆರೋಪಿಗಳಿಗೆ ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕ ಮುಗ್ಗಟ್ಟು ಎದುರಾಗಿದೆ.

ಒಂದು ಕಡೆ ವಯಸ್ಸಾದ ತಂದೆತಾಯಿಗಳು, ಕುಟುಂಬ ನಿರ್ವಹಣೆ, ಮನೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾದ ಮಗ, ಎಲ್ಲಿ ಜೈಲು ಪಾಲಾಗುತ್ತಾನೇನೋ ಎಂಬ ಆತಂಕದಲ್ಲಿ ಅನೇಕ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ.

ಆರ್ಥಿಕವಾಗಿ ಸದೃಢವಾಗಿರುವವರು ಇಲ್ಲವೇ ಅವರಿಗೆ ಬೇಕಾದವರು ಹೆಚ್ಚಿನ ಹಣ ನೀಡಿ ವಾದ ಮಾಡಲು ಹೆಸರಾಂತ ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ದೈನಂದಿನ ಜೀವನ ನಿರ್ವಹಣೆ ಮಾಡಲೂ ಏಗುತ್ತಿರುವ ನಮಗೆ ಲಕ್ಷ ಗಟ್ಟಲೇ ಹಣ ಹೊಂದಿಸಿ ವಕೀಲರನ್ನು ಎಲ್ಲಿಂದ ನೇಮಿಸಿಕೊಳ್ಳುವುದು? ಎಂಬ ಮೂಲಭೂತ ಪ್ರಶ್ನೆಯನ್ನು ಅಸಹಾಯಕ ತಂದೆತಾಯಿಗಳು ಮುಂದಿಟ್ಟಿದ್ದಾರೆ.

ದರ್ಶನ್‌ ಮೇಲಿನ ಅಭಿಮಾನವೋ ತಾವು ಅಂಥವರ ಪರ ಜೈಕಾರ ಹಾಕಿದರೆ ಸಣ್ಣಪುಟ್ಟ ಅನುಕೂಲವಾಗಬಹುದೆಂಬ ಕಾರಣಕ್ಕಾಗಿ ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪಿಗಾಗಿ ಪೋಷಕರು ಆಕ್ರಂದನ ದೇವರಿಗೆ ಪ್ರೀತಿ ಎಂಬಂತಾಗಿದೆ.

ಅದರಲ್ಲಿ ಪ್ರಮುಖ್ಯವಾಗಿ 5ನೇ ಆರೋಪಿಯಾಗಿರುವ ನಂದೀಶ್‌ ಮಂಡ್ಯ ತಾಲೂಕಿನ ಚಾಮಲಪುರ ಗ್ರಾಮದವನು. ಜೈಲಲ್ಲಿರುವ ಮಗನನ್ನು ನೋಡಲು ಬೆಂಗಳೂರಿಗೆ ಬರಲಾಗದೆ ಈತನ ಹೆತ್ತವರು ಒದ್ದಾಡುತ್ತಿದ್ದಾರೆ.ಸ್ನೇಹಿತರೊಬ್ಬರು ವಾಹನ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಡಿಸೇಲ್‌‍ಗೆ ಹಣ ಹೊಂದಿಸಲಾಗಿಲ್ಲ.

ನಂದೀಶ್‌ ತಾಯಿ ಭಾಗ್ಯಮ ಅಸ್ತಮ ಖಾಯಿಲೆಯಿಂದ ಬಳಲುತ್ತಿದ್ದಾರೆ. ಮಾಧ್ಯಮದವರನ್ನು ಹೊರತುಪಡಿಸಿ ಮನೆ ಬಳಿಗೆ ಸೌಜನ್ಯಕ್ಕೂ ದರ್ಶನ್‌ ಅಭಿಮಾನಿಗಳು, ಆಪ್ತರು ಭೇಟಿ ನೀಡಿಲ್ಲ. ನಂದೀಶ್‌ ಬಿಡುಗಡೆಗೆ ಪ್ರಯತ್ನಿಸೋಣ ಎಂದರೆ ಅದು ಕನಸಿನ ಮಾತು ಎಂಬಂತಾಗಿದೆ.

ಬೆಂಗಳೂರಿಗೆ ಬರಲು ಹಣವಿಲ್ಲ. ಹೀಗಿರುವಾಗ ವಕೀಲರನ್ನು ನೇಮಿಸಿಕೊಳ್ಳೋದು ಹೇಗೆ? ಅವರಿಗೆ ಹಣ ನೀಡೋದು ಹೇಗೆ? ದರ್ಶನ್‌ ಅಭಿಮಾನಿ ಎನಿಸಿಕೊಂಡ ಯಾರೊಬ್ಬರೂ ನಮ ಕಷ್ಟ ಕೇಳಲಿಲ್ಲ ಎಂದು ಮಾಧ್ಯಮಗಳ ಮುಂದೆ ನಂದೀಶ್‌ನ ಅಕ್ಕ ನಂದಿನಿ ಕಣ್ಣೀರು ಹಾಕಿದ್ದಾರೆ.

ದರ್ಶನ್‌ ಜೊತೆ ಬಂಧನಕ್ಕೆ ಒಳಗಾದ ಎಲ್ಲಾ ಅಭಿಮಾನಿಗಳದ್ದು ಒಂದೊಂದು ರೀತಿಯ ಕಥೆ ಇದೆ. ಬಹುತೇಕರ ಕುಟುಂಬ ಕಷ್ಟದಲ್ಲಿಯೇ ಇದೆ. ದರ್ಶನ್‌ ಸೇರಿ ಕೆಲವೇ ಕೆಲವು ಮಂದಿ ವಕೀಲರ ನೇಮಿಸಿಕೊಂಡಿದ್ದಾರೆ. ಆದರೆ ನಂದೀಶ್‌ ಹಾಗೂ ಕೆಲವರ ಪರ ವಕಾಲತ್ತು ವಹಿಸಲು ವಕೀಲರೇ ಇಲ್ಲವಾಗಿದ್ದಾರೆ.

ಇದೀಗ ನಂದೀಶ್‌‍ಗೆ ಜಾಮೀನು ನೀಡಲು ಲಕ್ಷಾಂತರ ರೂ. ಬೇಕು, ನಮ ಬಳಿ ಹಣವಿಲ್ಲ. ಜೊತೆಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಮಗನ ಮುಖ ನೋಡಲು ನಮ ಬಳಿ ಹಣವಿಲ್ಲ ಎಂದು ಕುಟುಂಬಸ್ಥರು ಚಿಂತಾಕ್ರಾಂತರಾಗಿದ್ದಾರೆ.

RELATED ARTICLES

Latest News