ಪಾಟ್ನಾ,ಆ.29- ಪ್ರಧಾನಿ ನರೇಂದ್ರಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ಆಕ್ಷೇಪಾರ್ಹ ಪದ ಬಳಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.ಬಿಹಾರದ ರಾಜಧಾನಿ ಪಾಟ್ನಾದಲ್ಲಿ ರಸ್ತೆ ಮಧ್ಯೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ದೊಣ್ಣೆಗಳನ್ನಿಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ರಸ್ತೆಯ ಅಕ್ಕಪಕ್ಕದ ವಾಹನಗಳಿಗೂ ಹಾನಿಯಾಗಿದೆ.
ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಎರಡು ಕಡೆಯ ಕಾರ್ಯಕರ್ತರನ್ನು ನಿಯಂತ್ರಣ ಮಾಡಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಿದ್ದಾರೆ. ಮೋದಿ ಹಾಗೂ ಅವರ ತಾಯಿ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ನಿಂದಿಸಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ದೂರು ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಎರಡು ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರು ಕೈಗೆ ಸಿಕ್ಕ ವಸ್ತುಗಳಿಂದಲೇ ಬಡಿದಾಡಿಕೊಂಡಿದ್ದಾರೆ.
ಮಾಹಿತಿ ಪ್ರಕಾರ, ಪ್ರಧಾನಿ ಮೋದಿಯವರ ಮೇಲೆ ನಿಂದನೀಯ ಪದಗಳ ಬಳಕೆಯನ್ನು ವಿರೋಧಿಸಿ ಬಿಜೆಪಿ ಪಾಟ್ನಾದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿತ್ತು.ಈ ಮೆರವಣಿಗೆ ಬಿಹಾರ ಕಾಂಗ್ರೆಸ್ ರಾಜ್ಯ ಕಚೇರಿ ಸದಾಕತ್ ಆಶ್ರಮದ ಮೂಲಕ ಹಾದುಹೋದ ಸಂದರ್ಭದಲ್ಲಿ ಬಿಜೆಪಿ-ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.
ಪ್ರಧಾನಿ ಮೋದಿಯವರನ್ನು ನಿಂದಿಸಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ಕುರ್ಜಿ ಆಸ್ಪತ್ರೆಯಿಂದ ಸದಾಕತ್ ಆಶ್ರಮದವರೆಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಸಚಿವ ನಿತಿನ್ ನವೀನ್ ಮತ್ತು ಶಾಸಕ ಸಂಜೀವ್ ಚೌರಾಸಿಯಾ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಲ್ಲು ತೂರಾಟ ನಡೆದಿದೆ. ಅಷ್ಟೇ ಅಲ್ಲದೇ ಪರಸ್ಪರ ಎರಡೂ ಪಕ್ಷಗಳ ಕಾರ್ಯಕರ್ತರು ಕೋಲಿನಿಂದ ಹೊಡೆದಾಡಿಕೊಂಡಿದ್ದಾರೆ. ಸದ್ಯ ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮಿತ್ ಶಾ ಖಂಡನೆ :
ಪ್ರಧಾನಿ ನರೇಂದ್ರಮೋದಿ ಹಾಗೂ ಅವರ ತಾಯಿಯ ವಿರುದ್ಧ ಅವಹೇಳನಕಾರಿ ಪದ ಬಳಸಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಖಂಡಿಸಿದ್ದು, ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಘುಸ್ಪೈಥಿಯಾ ಬಚಾವೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮೋದಿಯವರ ತಾಯಿಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ್ದಾರಲ್ಲದೆ ಆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಮೋದಿಯವರ ವಿರುದ್ಧ ಅವಹೇಳನಕಾರಿ ಪದಗಳನ್ನಾಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಎರಡು ದಿನಗಳ ಹಿಂದೆ ನಡೆದ ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಮೋದಿ ಅವರ ತಾಯಿ ಬಡ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು, ತಮ ಮಕ್ಕಳನ್ನು ಮೌಲ್ಯಗಳೊಂದಿಗೆ ಬೆಳೆಸಿದರು ಮತ್ತು ತಮ ಮಗ ನಂಬಿಕೆಯ ನಾಯಕನಾಗಲು ಅನುವು ಮಾಡಿಕೊಟ್ಟರು. ಅಂಥವರ ವಿರುದ್ದ ನಿಂದನೀಯ ಪದಗಳನ್ನು ಬಳಸುವುದನ್ನು ಜನ ಎಂದಿಗೂ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ರಾಜಕೀಯ ಜೀವನದಲ್ಲಿ ಇದಕ್ಕಿಂತ ದೊಡ್ಡ ಪತನ ಇನ್ನೊಂದಿಲ್ಲ, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಶಾ ಹೇಳಿದ್ದಾರೆ.ರಾಹುಲ್ ಗಾಂಧಿಯವರ ಬಳಿ ಸ್ವಲ್ಪವಾದರೂ ನಾಚಿಕೆ ಉಳಿದಿದ್ದರೆ, ಅವರು ಮೋದಿ.ಜಿ, ಅವರ ದಿವಂಗತ ತಾಯಿ ಮತ್ತು ಈ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸುತ್ತೇನೆ. ದೇವರು ಎಲ್ಲರಿಗೂ ಬುದ್ಧಿವಂತಿಕೆ ನೀಡಲಿ ಎಂದು ಅವರು ಹೇಳಿದರು.