ಬೆಂಗಳೂರು, ಜೂ.21– ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಗೌಡ ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆಯಿಲ್ಲದೆ ಚಡಪಡಿಸಿದ್ದಾರೆ. ನಿನ್ನೆ ಪವಿತ್ರಗೌಡ ಸೇರಿದಂತೆ 9 ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿತ್ತು.
ಆರೋಪಿ ಪವಿತ್ರ ಗೌಡಗೆ ನಿನ್ನೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. 11 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದ ಅವರು, ಸರಿಯಾಗಿ ನಿದ್ದೆ ಬಾರದೆ ಪದೇ ಪದೇ ಎದ್ದು ಕುಳಿತಿದ್ದಾರೆ. ಐಷರಾಮಿ ಜೀವನ ನಡೆಸುತ್ತಿದ್ದ ಪವಿತ್ರ ಗೌಡ ಜೈಲಿನಲ್ಲಿ ರಾತ್ರಿ ಕಳೆಯಲು ಚಡಪಡಿಸಿದ್ದಾರೆ.
ಬೆಳಗ್ಗೆ 5 ಗಂಟೆಗೆ ಎದ್ದು ಜೈಲಿನ ಬ್ಯಾರೆಕ್ನಲ್ಲಿ ವಾಕಿಂಗ್ ಮಾಡಿ ಬಳಿಕ ಜೈಲಿನ ಸಿಬ್ಬಂದಿ ನೀಡಿದ ಕಾಫಿ ಕುಡಿದು ಪೇಪರ್ ಓದಿ, ಜೈಲಿನ ತಿಂಡಿ ತಿಂದಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯೇ ಈ ಪವಿತ್ರಗೌಡ. ಕೃತ್ಯಕ್ಕೆ ಪ್ರಮುಖ ಕಾರಣಕರ್ತೆಯಾಗಿದ್ದು, ಈಕೆಯು ಪ್ರಚೋದನೆ ನೀಡಿ ಇತರೆ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಒಳಸಂಚು ರೂಪಿಸಿರುವುದು ಮತ್ತು
ಕೃತ್ಯದಲ್ಲಿ ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
2ನೇ ಆರೋಪಿಯು ತನ್ನ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಭಾಗಿಯಾಗಿಸಿ ನೆಲದ ಕಾನೂನನ್ನು ದುರುಪಯೋಗಪಡಿಸಿಕೊಂಡಿರುವುದು ಸಾಕ್ಷಾಧಾರಗಳಿಂದ ಕಂಡುಬಂದಿರುತ್ತದೆ.