ನೆಲಮಂಗಲ, ಅ.29– ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಗೋವೇನಹಳ್ಳಿ ಗ್ರಾಮದ ಗ್ರಂಥಾಲಯದ ಅರೆಕಾಲಿಕ ನೌಕರ ವಿಷ ಸೇವಿಸಿ ಆತಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಗೋವೇನಹಳ್ಳಿಯ ಗ್ರಂಥಾಲಯದ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರಯ್ಯ ಆತಹತ್ಯೆಗೆ ಶರಣಾದ ವ್ಯಕ್ತಿ.ಕಳೆದ 25 ವರ್ಷಗಳಿಂದ ಅರೆಕಾಲಿಕ ಗ್ರಂಥಾಲಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಳಲುಘಟ್ಟ ಪಿಡಿಒ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೂರು ತಿಂಗಳಿನಿಂದ ಸಂಬಳ ಕೂಡ ನೀಡದೆ ಬಯೋಮೆಟ್ರಿಕ್ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳದೆ ಇಲ್ಲಸಲ್ಲದ ಕಾರಣ ಹೇಳಿ ತೊಂದರೆ ನೀಡುತ್ತಿದ್ದರು ಎಂಬ ದೂರುಗಳು ಕೇಳಿಬಂದಿದ್ದವು.
ಇದರಿಂದ ಖಿನ್ನತೆಗೆ ಒಳಗಾಗಿದ್ದ ಗ್ರಂಥಾಲಯ ನೌಕರ ಗ್ರಾಮದ ರಾಮಚಂದ್ರಯ್ಯ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದರು. ದಾರಿಹೋಕರು ಗಮನಿಸಿ ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
