ಬೆಂಗಳೂರು,ಅ.20- ದೀಪಾವಳಿ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರಯಾಣಿಕರಿಂದ ತುಂಬಿತುಳುಕುತ್ತಿದ್ದ ಕೆಂಪೇಗೌಡ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಶುಕ್ರವಾರ, ಶನಿವಾರ, ಭಾನುವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ ತಮ ಊರುಗಳು, ಪ್ರವಾಸಿತಾಣ ಹಾಗೂ ದೇವಾಲಯಗಳಿಗೆ ತೆರಳಿದ್ದು, ಕಳೆದ ನಾಲ್ಕು ದಿನಗಳಿಂದ ಬಹುತೇಕ ಬಸ್‌ಗಳು ರಶ್ ಆಗಿದ್ದವು.
ಆದರೆ ಇಂದು ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ಅದರಲ್ಲೂ ಬೆಂಗಳೂರಿನಿಂದ ಹಾಸನಾಂಬ ದರ್ಶನಕ್ಕೆ ತೆರಳುವವರ ಸಂಖ್ಯೆಯು ಸಹ ಜೋರಾಗಿತ್ತು. ಇಂದು ಅವರು ಕೂಡ ಇಲ್ಲದಂತಾಗಿತ್ತು.
ಈ ಬಾರಿ ಬುಧವಾರ ದೀಪಾವಳಿ ಹಬ್ಬ ಬಂದಿದ್ದು, ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಊರುಗಳಿಗೆ ತೆರಳಿದ್ದಾರೆ. ಇನ್ನು ಕೆಲವರು ಇಂದು ಚರಕಚತುರ್ದಶಿ ಹಬ್ಬವನ್ನು ಮುಗಿಸಿಕೊಂಡು ಅವರು ಕೂಡ ಊರುಗಳಿಗೆ ತೆರಳಿದ್ದು , ರಸ್ತೆಗಳು ಖಾಲಿಖಾಲಿಯಾಗಿದ್ದವು. ಸದಾ ಜನರಿಂದ ಗಿಜಿಗುಡುತ್ತಿದ್ದ ಮೆಜೆಸ್ಟಿಕ್, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ತುಮಕೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಇಂದು ವಾಹನಗಳ ಸಂಚಾರ ವಿರಳವಾಗಿತ್ತು.
ಸಾಲು ಸಾಲು ರಜೆ ಹಿನ್ನಲೆಯಲ್ಲಿ ಇಡೀ ಅರ್ಧ ಬೆಂಗಳೂರು ಖಾಲಿಯಾಗಿದ್ದು, ಭಾನುವಾರ ಸಂಜೆವರೆಗೂ ಸಂಚಾರ ದಟ್ಟಣೆ ಕಡಿಮೆ ಇದೆ. ಸೋಮವಾರ ಯಥಾಪ್ರಕಾರ ಸಂಚಾರ ದಟ್ಟಣೆ ಹೆಚ್ಚಾಗಲಿದೆ.