ಬೆಂಗಳೂರು, ಮಾ. 29-ಯುಗಾದಿ, ರಂಜಾನ್ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಗರು ತಮ್ಮ ತಮ್ಮ ಊರು, ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳತ್ತ ತೆರಳುತ್ತಿದ್ದು, ನಿನ್ನೆ ಸಂಜೆಯಿಂದಲೇ ನಗರದ ವಿವಿಧೆಡೆ ಸಂಚಾರದಟ್ಟಣೆ ಹೆಚ್ಚಾಗಿತ್ತು.
ಹಬ್ಬದ ರಜೆ ಹಿನ್ನೆಲೆಯಲ್ಲಿ ಬಹುತೇಕ ಜನರು ಊರುಗಳತ್ತ ತೆರಳುತ್ತಿದ್ದಾರೆ. ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಿದರೆ, ಮತ್ತೆ ಕೆಲವರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿದ್ದರಿಂದ ಮೆಜೆಸ್ಟಿಕ್, ಆನಂದರಾವ್ ವೃತ್ತ, ಯಶವಂತಪುರ, ಗೊರಗುಂಟೆಪಾಳ್ಯ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಂಡುಬಂತು.
ನೆಲಮಂಗಲ ಟೋಲ್, ಮೈಸೂರು ರಸ್ತೆ ಟೋಲ್, ದೇವನಹಳ್ಳಿ ರಸ್ತೆ ಟೋಲ್‌ಗಳಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ನಿನ್ನೆ ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್, ಶಾಂತಿನಗರ, ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು.