ನವದೆಹಲಿ, ಜೂ.24-ದೇಶದ ಜನತೆ ನನ್ನ ಮೇಲೆ ನಂಬಿಕೆ ಇಟ್ಟು ಲೋಕಸಭೆಗೆ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುವುದು ಪ್ರತಿಯೊಬ್ಬರ ಕರ್ತವ್ಯ. ನಾಟಕ ಮಾಡುವುದು, ಕಲಾಪಕ್ಕೆ ಅಡ್ಡಿಪಡಿಸುವುದನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಮೊದಲ ದಿನವೇ ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಛಾಟಿ ಬೀಸಿದ್ದಾರೆ.
ಸೋಮವಾರದಿಂದ ಆರಂಭವಾದ 18ನೇ ಲೋಕಸಭೆ ಪ್ರಾರಂಭಕ್ಕೂ ಮುನ್ನ ಸಂಸತ್ ಮುಂಭಾಗ ಮಾತನಾಡಿದ ಅವರು, ಕಲಾಪ ಆರಂಭಕ್ಕೂ ಮುನ್ನವೇ ಪ್ರತಿಪಕ್ಷಗಳಿಗೆ ಸ್ಪಷ್ಟವಾದ ಕಠಿಣ ಸಂದೇಶವನ್ನು ರವಾನಿಸಿದರು. ಇದು ಭಾರತೀಯ ಪ್ರಜಾಪ್ರಭುತ್ವದ ಮೈಲಿಗಲ್ಲು. 18ನೇ ಲೋಕಸಭೆ ಕಲಾಪವು ಸಂಸತ್ನ ಹೊಸ ಭವನದಲ್ಲಿ ನಡೆಯುತ್ತಿದೆ. ದೇಶದ 1.4 ಶತಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಜವಾಬ್ದಾರಿ ನಮ ಮೇಲಿದೆ. ಜನರ ಹಿತಾಸಕ್ತಿಗಳಿಗೆ ಅನುಗುಣವಾಗಿ ಆಡಳಿತ ನಡೆಸುತ್ತೇವೆ ಎಂದು ವಾಗ್ದಾನ ಮಾಡಿದರು.
ಸಾಮೂಹಿಕ ಸಹಭಾಗಿತ್ವದಲ್ಲೇ ನೀತಿ, ನಿರೂಪಣೆಗಳನ್ನು ಅನುಷ್ಠಾನಗೊಳಿಸುವಾಗ ಸಾಂವಿಧಾನಿಕ ಸಮಗ್ರತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಶಪಥ ಮಾಡಿದರು.ದೇಶದ ಜನರು ಪ್ರತಿಪಕ್ಷಗಳಿಂದ ಹಲವಾರು ನಿರೀಕ್ಷೆಗಳನ್ನು ಎದುರು ನೋಡುತ್ತಾರೆ.
ಪ್ರಜಾಪ್ರಭುತ್ವದ ಘನತೆ ಕಾಪಾಡಲು ಪ್ರತಿಪಕ್ಷಗಳು ದೇಶದ ಸಾಮಾನ್ಯ ನಾಗರಿಕರ ನಿರೀಕ್ಷೆಗಳನ್ನು ಈಡೇರಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಜನರಿಗೆ ನಾಟಕ ಮಾಡುವುದು, ಅವಾಂತರ ಮಾಡುವುದು ಬೇಡ. ಅವರಿಗೆ ಸತ್ಯ ಬೇಕು. ಅದರಲ್ಲಿ ಸತ್ವವೂ ಇರಬೇಕು. ಬರೀ ಘೋಷಣೆಗಳನ್ನು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ವಿರೋಧ ಪಕ್ಷಗಳಿಗೆ ಬಿಸಿ ಮುಟ್ಟಿಸಿದರು.
ದೇಶಕ್ಕೆ ಉತ್ತಮ ಹಾಗೂ ಜವಾಬ್ದಾರಿಯುತ ಪ್ರತಿಪಕ್ಷದ ಅಗತ್ಯವಿದೆ. 18ನೇ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಸಂಸದರು ಸಾಮಾನ್ಯ ಜನರ ನಿರೀಕ್ಷೆಗಳನ್ನು ಈಡೇರಿಸಲು ಬದ್ದರಾಗಿರುತ್ತಾರೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.
ಕಳೆದ 10 ವರ್ಷಗಳಲ್ಲಿ ನಾವು ಯಾವಾಗಲೂ ಸಂಪ್ರದಾಯವನ್ನು ಜಾರಿಗೆ ತರಲು ಪ್ರಯತ್ನಿಸಿದ್ದೇವೆ. ಏಕೆಂದರೆ ಸರ್ಕಾರವನ್ನು ನಡೆಸಲು ಬಹುಮತ ಎಷ್ಟು ಮುಖ್ಯವೋ ಅದೇ ರೀತಿ ದೇಶ ಮುನ್ನಡೆಸಲು ಒಮತವೂ ಅಷ್ಟೇ ಮುಖ್ಯ ಎಂದು ಕಿವಿಮಾತು ಹೇಳಿದರು.
140 ಕೋಟಿ ಜನರ ಆಕಾಂಕ್ಷೆಗಳು ಮತ್ತು ಮಹಾತ್ವಾಕಾಂಕ್ಷೆಗಳನ್ನು ಪೂರೈಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ. ಎಲ್ಲರ ಒಪ್ಪಿಗೆ ಜೊತೆಗೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಸಂವಿಧಾನದ ಪಾವಿತ್ರತೆಯನ್ನು ಕಾಪಾಡುವ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ನಿರ್ಧಾರಗಳನ್ನು ವೇಗಗೊಳಿಸಲು ನಾವು ಬಯಸುತ್ತೇವೆ ಎಂದರು.
ಸತತ ಮೂರನೇ ಅವಧಿಗೆ ಜನರು ತಮ್ಮ ಸರ್ಕಾರದ ಆದೇಶವನ್ನು ನೀಡಿದ್ದಾರೆ ಮತ್ತು ಅದರ ನೀತಿಗಳು ಮತ್ತು ಉದ್ದೇಶಗಳಿಗೆ ಅನುಮೋದನೆಯ ಮುದ್ರೆ ಹಾಕಿದ್ದಾರೆ. ಶ್ರೇಷ್ಠ ಭಾರತ ಮತ್ತು ವೀಕ್ಷಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ 18ನೇ ಲೋಕಸಭೆ ಸೋಮವಾರ ಆರಂಭವಾಗಲಿದೆ ಎಂದು ಅವರು ಹೇಳಿದರು.
ಜೂನ್ 25ರಂದು ತುರ್ತು ಪರಿಸ್ಥಿತಿಯ 50ನೇ ವಾರ್ಷಿಕೋತ್ಸವ ಸಂದರ್ಭವಾಗಿದೆ. ಸಂವಿಧಾನವನ್ನು ತಿರಸ್ಕರಿಸಿದಾಗ ಅದು ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ವಿಷಾದಿಸಿದರು. ನೂತನ ಸಂಸದರನ್ನು ಸ್ವಾಗತಿಸಿದ ಅವರು, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಕನಸಿನೊಂದಿಗೆ 18ನೇ ಲೋಕಸಭೆ ಆರಂಭವಾಗುತ್ತದೆ ಎಂದರು.