ಬೆಳಗಾವಿ,ಡಿ.12- ಅಧಿಕಾರ ಯಾರಿಗೂ ಶಾಶ್ವತವಲ್ಲ. ಕೆಲವರು ದರ್ಪದಿಂದ ಮೆರೆಯುತ್ತಿದ್ದಾರೆ. ಈ ದುರಹಂಕಾರದ ನಡುವೆ ರಾಜ್ಯದ ಜನತೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯ ಸುವರ್ಣಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿಜಾತಿಗಳ ನಡುವೆ ಸಿದ್ದರಾಮಯ್ಯನವರು ಬೆಂಕಿ ಹಚ್ಚಲು ಮುಂದಾಗಿದ್ದಾರೆ. ಇವರೇನೂ ಅಧಿಕಾರದಲ್ಲಿ ಶಾಶ್ವತವಾಗಿ ಗೂಟ ಹೊಡೆದುಕೊಂಡು ಇಲ್ಲೇ ಇರುವುದಿಲ್ಲ. ಎಷ್ಟು ದಿನ ಇರುತ್ತೀರಿ? ಬರುವ ದಿನಗಳಲ್ಲೇ ನಿಮಗೆ ಜನತೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.
ಹಿಂದುಳಿದ ವರ್ಗಗಳಲ್ಲಿ ಒಡೆದಾಳುವ ನೀತಿಯನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಜಾತಿಜಾತಿಗಳ ನಡುವೆ ಕಂದಕ ಸೃಷ್ಟಿಸಿ ಅಧಿಕಾರದಲ್ಲಿ ಮುಂದುವರೆಯಬಹುದು ಎಂಬ ಭ್ರಮೆ ಅವರದ್ದಾಗಿದೆ. ಪಂಚಮಸಾಲಿ ಸಮುದಾಯದ ಹೋರಾಟವನ್ನು ಸರಿಯಾಗಿ ನಿಭಾಯಿಸದೇ ಪ್ರತಿಭಟನಾ ನಿರತ ಸ್ವಾಮೀಜಿಗಳನ್ನೇ ಬಂಧಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಷ್ಟಕ್ಕೂ ಪಂಚಮಸಾಲಿ ಸಮುದಾಯ ನ್ಯಾಯಬದ್ಧವಾದ ಬೇಡಿಕೆಯನ್ನು ಕೇಳಿದ್ದಾರೆ. ಕಾನೂನಿನ ವ್ಯಾಪ್ತಿಯಲ್ಲಿ ಪರಿಹರಿಸುವುದು ಸರ್ಕಾರದ ಕರ್ತವ್ಯ. ಲಾಠಿಚಾರ್ಜ್ ಮಾಡಲು ಅನುಮತಿ ನೀಡಿದವರು ಯಾರು?, ಅವರೇನು ಉಗ್ರರೇ? ಅಥವಾ ಕಾನೂನನ್ನು ಕೈಗೆತ್ತಿಕೊಂಡಿದ್ದರೇ? ಎಂದು ಪ್ರಶ್ನಿಸಿದರು. ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿ ಹತ್ತಿಕ್ಕುವ ಪ್ರಯತ್ನ ಮಾಡಿದೆ. ಪಂಚಮಸಾಲಿ ಸಮುದಾಯ ತಿರುಗಿ ಬಿದ್ದರೆ ಸರ್ಕಾರ ಉಳಿಯುವುದಿಲ್ಲ ಎಂದು ಗುಡುಗಿದರು.
ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ಮಾಡಿ ದರ್ಪದಿಂದ ನಡೆದುಕೊಂಡಿದೆ. ಅಧಿಕಾರವು ಯಾರಿಗೂ ಶಾಶ್ವತ ಅಲ್ಲ ಎಂಬುದನ್ನು ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ದರ್ಪ, ದುರಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.