Friday, November 22, 2024
Homeರಾಜ್ಯಬರ ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗದ ಅನುಮತಿ ಕೇಳಲಾಗಿದೆ : ಜೈಶಂಕರ್

ಬರ ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗದ ಅನುಮತಿ ಕೇಳಲಾಗಿದೆ : ಜೈಶಂಕರ್

ಬೆಂಗಳೂರು,ಏ.15- ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ(NDRF) ಅಡಿ ಕೇಂದ್ರದಿಂದ ಬರಪರಿಹಾರ ಬಿಡುಗಡೆ ಮಾಡುವ ಬಗ್ಗೆ ಚುನಾವಣಾ ಆಯೋಗದ ಅನುಮತಿ ಕೇಳಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಎನ್ಡಿಆರ್ಎಫ್ನಡಿ ಪರಿಹಾರ ಬಿಡುಗಡೆ ಮಾಡಲು ಅದರದ್ದೇ ಆದ ನೀತಿನಿಯಮಗಳಿವೆ. ನಾವು ಚುನಾವಣಾ ಆಯೋಗಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದೇವೆ. ಚೆಂಡು ಆಯೋಗದ ಅಂಗಳದಲ್ಲಿದೆ ಎಂದರು. ಕರ್ನಾಟಕ ಮಾತ್ರವಲ್ಲದೇ ಅನೇಕ ರಾಜ್ಯಗಳು ಬರ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಯಾವ ರಾಜ್ಯಗಳಿಗೂ ನಾವು ತಾರತಮ್ಯ ಎಸಗದೆ ಕಾನೂನಿನಡಿ ಎಷ್ಟು ಬಿಡುಗಡೆ ಮಾಡಬೇಕೋ ಅಷ್ಟು ಹಣವನ್ನು ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲೇ ಬಿಜೆಪಿ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿದೆ.

ಈ ಬಾರಿ ದೇಶದ ಎಲ್ಲಿಯೂ ಆಡಳಿತ ವಿರೋಧಿ ಅಲೆ ಕಾಣುತ್ತಿಲ್ಲ. ಮೋದಿಯವರ ಆಡಳಿತಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಾಗಿ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

300 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಗೆ ಈ ಬಾರಿ 400 ಸ್ಥಾನಗಳನ್ನು ಗೆಲ್ಲುವುದು ದುಸ್ಸಾಹಸದ ಮಾತಲ್ಲ. ಏಕೆಂದರೆ ಆಡಳಿತ ಪಕ್ಷಕ್ಕೆ ವಿರೋಧಿ ಅಲೆ ಇದ್ದರೆ ನಮಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿತ್ತು. ಇಡೀ ಭಾರತೀಯರೇ ಮೋದಿ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದು, ಮತ್ತೆ ಅಧಿಕಾರ ಕೊಡಲು ಸಿದ್ದರಾಗಿದ್ದಾರೆ ಎಂದರು.

ನಾವೆಲ್ಲರೂ ಮತ್ತೊಮ್ಮೆ ಮೋದಿಯವರ ಕೈ ಬಲಪಡಿಸಬೇಕಾದ ಅಗತ್ಯವಿದೆ. ಬಿಜೆಪಿಯ ಸಂಕಲ್ಪ ಪತ್ರ ಬಿಡುಗಡೆಯಾಗಿದೆ. ನಮ್ಮ ಹತ್ತು ವರ್ಷಗಳ ಸಾಧನೆ ಜನರ ಮುಂದಿದೆ. ಮುಂದಿನ ಐದು ವರ್ಷಗಳ ಭರವಸೆಗಳು ಇದರಲ್ಲಿವೆ. ವಿಕಸಿತ ಭಾರತ ಬಗ್ಗೆ ಮೋದಿ ಗ್ಯಾರಂಟಿ ಬಗ್ಗೆ ಹೇಳಿದ್ದೇವೆ ಎಂದರು. ಹತ್ತು ವರ್ಷಗಳ ಹಿಂದೆ ಹದಗೆಟ್ಟ ಆರ್ಥಿಕತೆ ದೇಶದಲ್ಲಿ ಇತ್ತು.

ಇವತ್ತು ದೇಶದ ಆರ್ಥಿಕತೆ ಸೂಕ್ತವಾಗಿದೆ. ಎಲ್ಲ ವರ್ಗಗಳ ವಿಕಾಸಕ್ಕೆ ನಮ್ಮ ಸರ್ಕಾರ ಒತ್ತು ಕೊಟ್ಟಿದೆ. ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡರು. ನಮ್ಮ ದೇಶದಲ್ಲೇ ಮೊದಲು ಕೊರೋನಾ ಲಸಿಕೆ ಬಂತು. ಕೋವಿಡ್ ನಂತರ ಆರ್ಥಿಕತೆ ಚೇತರಿಕೆಗೆ ಹಲವು ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ.

ವರ್ಷಕ್ಕೆ ಸರಾಸರಿ 08 ವಿಮಾನ ನಿಲ್ದಾಣಗಳ ನಿರ್ಮಾಣ, ಮೂಲಭೂತ ಸೌಕರ್ಯಗಳ ವೃದ್ಧಿ, ಭಯೋತ್ಪಾದನೆ ಚಟುವಟಿಕೆಗಳ ನಿಗ್ರಹಕ್ಕೆ ಕಠಿಣ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ 80 ಕೋಟಿ ಜನ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ ಮುಂದಿನ ಐದು ವರ್ಷವೂ ಮುಂದುವರೆಯಲಿದೆ.

ಆವಾಸ್ ಯೋಜನೆಯಲ್ಲಿ ಮುಂದಿನ ಐದು ವರ್ಷ ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಹಿರಿಯರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆ, ವಿಪುಲ ಉದ್ಯೋಗಾವಕಾಶ, ಮುದ್ರಾ ಯೋಜನೆಯನ್ನು ಸ್ಟಾರ್ಟಪ್ಗಳಿಗೂ ವಿಸ್ತರಣೆ, ಸುರಕ್ಷಿತ್ ಭಾರತ, ಭಯೋತ್ಪಾದನೆಗೆ ತಡೆ, ಗಡಿಗಳ ರಕ್ಷಣೆಗೆ ಬದ್ದವಾಗಿದ್ದು, ಮುಂದಿನ ವರ್ಷಗಳಲ್ಲಿ ಭಾರತವನ್ನು ಮೂರನೇ ಆರ್ಥಿಕ ದೇಶವಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ನಮ್ಮ ಮುಂದೆ ಸೈಬರ್ ಅಪರಾಧಗಳ ಸವಾಲಿದೆ, ದಿಟ್ಟವಾಗಿ ಎದುರಿಸುತ್ತಿದ್ದೇವೆ. ಬೆಂಗಳೂರಿಗೆ ಸಬರ್ಬನ್ ರೈಲು ಯೋಜನೆ, ಏರ್ಪೊೀರ್ಟ್ ಎರಡನೇ ಟರ್ಮಿನಲ್ ನಿರ್ಮಾಣ, ಐಟಿಬಿಟಿ ಕಂಪೆನಿಗಳಿಗೆ ಬಲ ತುಂಬುವ ಕೆಲಸವಾಗಿದೆ ಎಂದು ಹೇಳಿದರು. ಹೆಚ್ಎಎಲ್ ಮತ್ತು ಅದರ ಷೇರುಗಳು ಹತ್ತು ವರ್ಷದ ಹಿಂದೆ ಅಪಾಯದಲ್ಲಿದ್ದವು. ಈಗ ಅದರ ಷೇರು ಬೆಲೆ 3 ಸಾವಿರ ರೂ. ದಾಟಿದೆ. ಹೆಚ್ಎಎಲ್ ಹಲವು ಮೈಲುಗಲ್ಲು ಸಾಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯರಿದ್ದ ಹಡಗು ಇರಾನ್ ವಶದಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದೊಳಗಷ್ಟೇ ಅಲ್ಲ ಹೊರದೇಶದಲ್ಲೂ ಮೋದಿಯವರೇ ಗ್ಯಾರಂಟಿ. ಇರಾನ್ ಸರ್ಕಾರದ ಜತೆ ನಮ್ಮ ಭಾರತೀಯರ ಬಿಡುಗಡೆ ಬಗ್ಗೆ ಮಾತಾಡಿದ್ದೇನೆ. ನಿನ್ನೆ ಈ ನಿಟ್ಟಿನಲ್ಲಿ ಸಕಾರಾತ್ಮಕ ಮಾತುಕತೆ ನಡೆದಿದೆ. ನಮ್ಮ ವಿದೇಶಾಂಗ ಇಲಾಖೆ ಅಧಿಕಾರಿಗಳು ಇರಾನ್ ವಶದಲ್ಲಿರುವ ಭಾರತೀಯರ ಭೇಟಿ ಮಾಡಿದ್ದಾರೆ. ಇದು ನಮಗೆ ಸಮಾಧಾನ ತಂದಿರುವ ವಿಚಾರ. ಆದಷ್ಟು ಬೇಗ ಇರಾನ್ ಭಾರತೀಯರನ್ನ ಬಿಡುಗಡೆ ಮಾಡುವ ಭರವಸೆ ಇದೆ ಎಂದರು.

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸರಣಿ ಸಾವು ಪ್ರಕರಣ ಕುರಿತು ಮಾತನಾಡಿದ ಅವರು, ಇದು ನಮಗೆ ಹೆಚ್ಚಿನ ಆತಂಕ ಹುಟ್ಟಿಸಿದೆ, ಆ ವಿದ್ಯಾರ್ಥಿಗಳ ಕುಟುಂಬಳಿಗೆ ದುರಂತ ಈ ರೂಪದಲ್ಲಿ ಎದುರಾಗಿದೆ. ಮೃತರ ಬಗ್ಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ, ಅವರ ಕುಟುಂಬಗಳಿಗೂ ಸಾಂತ್ವನ ಹೇಳಲು ಬಯಸುತ್ತೇನೆ ಎಂದರು.

ಹಲವು ಕಾರಣಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪುತ್ತಿದ್ದಾರೆ. ಹೊಸ ವಿದ್ಯಾರ್ಥಿಗಳು ಅಲ್ಲಿಗೆ ಹೋದಾಗ ರಾಯಭಾರ ಕಚೇರಿ ಅಧಿಕಾರಿಗಳಿಗೆ ನಿಗಾ ಇಡಲು ಸೂಚಿಸಲಾಗಿದೆ. ಅಮೆರಿಕಾದಲ್ಲಿ ವಿದ್ಯಾರ್ಥಿಗಳ ಜೀವ ರಕ್ಷಣೆ, ಭದ್ರತೆ ನಮ್ಮ ಆದ್ಯತೆಗಳಲ್ಲೊಂದಾಗಿದೆ. ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಮತ್ತು ಕೆಲಸ ಮಾಡುತ್ತಿರುವವರ ಮಾಹಿತಿ ಕಲೆ ಹಾಕುತ್ತಿದ್ದೇವೆ. ರಕ್ಷಣೆ ಇಲ್ಲದ ಜಾಗಕ್ಕೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದೇವೆ. ಜೊತೆಗೆ ಇಲ್ಲಿಂದಲೂ ಎಲ್ಲ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜೈಶಂಕರ್ ತಿಳಿಸಿದರು.

RELATED ARTICLES

Latest News